- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
‘ಕೈ ಮುಗಿದು ಒಳಗೆ ಬಾ ಜ್ಞಾನ ಮಂದಿರದೊಳು’ ಎಂಬ ಮಾತು ತುಂಬಾ ಅರ್ಥಗರ್ಭಿತ. ಎಸ್.ಆರ್. ರಂಗನಾಥನ್ ಭಾರತ ದೇಶದ ಗ್ರಂಥಾಲಯ ವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸವಿನೆನಪಿಗಾಗಿ ಅಗಸ್ಟ್ ೧೨ ನ್ನು ಗ್ರಂಥಾಲಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಅಕ್ಷರ ಸಂಸ್ಕೃತಿ ನಮಗೆ ಅನಾದಿ ಕಾಲದಿಂದಲೂ ಇದೆ. ಆದರೆ ಅನಾದಿ ಕಾಲದಲ್ಲಿ ಶೂದ್ರರು ಶಿಕ್ಷಣದಿಂದ ವಂಚಿತರಾಗಿದ್ದರು ಎಂಬ ವಿಷಾದವಿದೆ. ಆದರೆ ಆಧುನಿಕ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಬ್ರಿಟಿಷರು ಭಾರತವನ್ನು ಆಳಲು ಪ್ರಾರಂಭಿಸಿದ ಮೇಲೆ ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೆ ಮುಕ್ತವಾಗಿ ಲಭಿಸಲಾರಂಭಿಸಿತು. ವಿದ್ಯಾರ್ಥಿಗಳ ಪಾಲಿಗೆ ಗ್ರಂಥಾಲಯವೇ ದೇವಾಲಯ ಎಂಬ ಮಾತು ಚಾಲ್ತಿಗೆ ಬಂತು.
ವಿದ್ಯಾರ್ಥಿಗಳು ಓದಲೇಬೇಕಾದ ಎಲ್ಲ ಪುಸ್ತಕಗಳನ್ನು ಕೊಂಡು ಓದಲಾಗುವುದಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು. ಗ್ರಂಥಾಲಯಕ್ಕೆ ಒಂದು ವೈಜ್ಞಾನಿಕ ಸ್ವರೂಪ ನೀಡಿದವರು ಗ್ರಂಥ ವಿಜ್ಞಾನಿ ಎಸ್.ಆರ್.ರಂಗನಾಥನ್ ಅವರು.
ಕೇವಲ ಆಧ್ಯಯನ ಕಾರಣವಲ್ಲದೆ ವ್ಯಕ್ತಿಯ ಒಂಟಿತನವನ್ನು ದೂರ ಮಾಡಿ ಏಕಾಂತ ಸೃಷ್ಟಿ ಮಾಡುವ ತಾಕತ್ತು ಮತ್ತು ಚೈತನ್ಯ ಪುಸ್ತಕಕ್ಕೆ ಇದೆ ಎಂಬ ಅರಿವು ವಿಸ್ತಾರವಾಯಿತು. ಅನೇಕ ಸಾಧಕ ಮಹನೀಯರ ಬದುಕು ಬದಲಾದದ್ದು ಕೇವಲ ಪುಸ್ತಕದ ಓದಿನಿಂದ ಮಾತ್ರ. ಮಹಾತ್ಮ ಗಾಂಧಿಯವರು ಓದಿದ ಸತ್ಯ ಹರಿಶ್ಚಂದ್ರ ಕಥೆ ಅವರ ಬದುಕಿನ ಆಲೋಚನೆಯ ದಿಕ್ಕನ್ನೇ ಬದಲಿಸಿತು. ದಾಸ್ ಕ್ಯಾಪಿಟಲ್ ಕೃತಿ ಅವರ ಸಾಮಾಜಿಕ ಹೋರಾಟಕ್ಕೆ ಹೊಸ ಪರಿಕಲ್ಪನೆ ಒದಗಿಸಿತು.
ಜಗತ್ತಿನಲ್ಲಿ ಅತೀ ಹೆಚ್ಚು ಗ್ರಂಥಗಳನ್ನು ಓದಿದ ಕೀರ್ತಿಗೆ ಭಾಜನರಾದವರು ಡಾ.ಬಿ.ಆರ್.ಅಂಬೇಡ್ಕರ್ ಎಂಬುದು ಭಾರತೀಯರ ಹೆಮ್ಮೆ. ಅಮೇರಿಕಾದ ಗ್ರಂಥಾಲಯದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಓದಿದ ದಾಖಲೆ ಅಸಾಮಾನ್ಯ. ಅತಿ ಹೆಚ್ಚು ಪದವಿಗಳನ್ನು ಗಳಿಸಲು ಅಂಬೇಡ್ಕರ್ ಬೆಳೆಸಿಕೊಂಡ ಪುಸ್ತಕ ಸಂಸ್ಕೃತಿಯೇ ಕಾರಣ.
ಉನ್ನತ ವ್ಯಾಸಂಗ ಮತ್ತು ಗ್ರಂಥಾಲಯ ಸದ್ಬಳಕೆಗೆ ಭಾರತ ಇಂದಿಗೂ ತನ್ನ ದಾಖಲೆ ಉಳಿಸಿಕೊಂಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಎಂದರೆ ಓದು,ಅಧ್ಯಯನ ಮತ್ತು ಅತೀ ಹೆಚ್ಚು ಪದವಿಗಳು.
ಓದಿನ ಹಸಿವು ವ್ಯಕ್ತಿಯ ಜ್ಞಾನದ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಜ್ಞಾನವೆಂಬುದು ಯಾರೂ ಕದಿಯಲಾರದ ಅಮೂಲ್ಯ ಸಂಪತ್ತು. ಮಹಾ ಜ್ಞಾನಿಯಾದವನು ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ. ಇಡೀ ಜಗತ್ತು ನಿಂತಿರುವುದೇ ಪುಸ್ತಕ ಮಾಹಿತಿ ಮೇಲೆಯೇ ಎಂಬುದು ಗಮನಾರ್ಹ. ಜಗತ್ತನ್ನು ಆಳಿದ ಅನೇಕ ಮಹನೀಯರು ಇಂದಿಗೂ ಅಜರಾಮರವಾಗಿರಲು ಗ್ರಂಥಗಳೇ ಕಾರಣ. ಸಾಧು,ಸಂತರು, ಇತಿಹಾಸ ಪುರುಷರು ಇಂದಿಗೂ ನಮ್ಮೊಂದಿಗೆ ಜೀವಂತವಾಗಿರಲು ಇತಿಹಾಸದ ದಾಖಲೆಗಳು ಪೂರಕವಾಗುತ್ತವೆ.
ಮನುಷ್ಯ ಹುಟ್ಟುತ್ತಾನೆ,ಸಾಯುತ್ತಾನೆ ಆದರೆ ಕೃತಿಗಳನ್ನು ರಚಿಸಿದ ವ್ಯಕ್ತಿಗೆ ಸಾವೆಂಬುದೇ ಇಲ್ಲ. ಸಾವಿರಾರು ವರ್ಷಗಳ ಹಿಂದೆ ಮಹತ್ವದ ಸಂಗತಿಗಳನ್ನು ತಮ್ಮ ಕೃತಿಗಳ ಮೂಲಕ ದಾಖಲಿಸಿದ ಮಹನೀಯರು ಇಂದಿಗೂ ನಮ್ಮ ಮನಸಿನ ಮೂಲೆಯಲ್ಲಿ ಜಾಗ್ರತವಾಗಿ ನೆಲೆ ಗೊಂಡಿದ್ದಾರೆ.
ಮತ್ತೆ,ಮತ್ತೆ ಮೆಲುಕು ಹಾಕುವ ದಾರ್ಶನಿಕರ, ಶರಣರ ಸಾಲುಗಳು, ದೇಶ ಆಳಲು ಸಹಕಾರಿಯಾಗಿರುವ ಸಂವಿಧಾನಗಳು ನಮ್ಮ ಪಾಲಿನ ಗೀತೆಯಾಗಿವೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ವೈಯಕ್ತಿಕ ವ್ಯವಸ್ಥೆ ನಿರ್ಮಾಣವಾಗುವುದೇ ಈ ಗ್ರಂಥಗಳ ಆಧಾರದಿಂದ. ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಅನುತ್ಪಾದಕ ಎಂದು ಕರೆಯುವುದು ಅತ್ಯಂತ ಅವೈಜ್ಞಾನಿಕ. ಇತರ ಉತ್ಪಾದಕ ಕ್ಷೇತ್ರಗಳಿಗೆ ಜ್ಞಾನ ಲಭ್ಯವಾಗುವುದೇ ಶಿಕ್ಷಣದಿಂದ.
ಜ್ಞಾನಿಗಳು ಪ್ರತಿಯೊಂದು ಮಾಹಿತಿಯನ್ನು ಪಡೆಯಲು ಗ್ರಂಥಾಲಯಕ್ಕೆ ಮೊರೆ ಹೋಗುವ ಸಂಪ್ರದಾಯವಿತ್ತು, ಈಗಲೂ ಇದೆ ಆದರೆ ಸ್ವರೂಪ ಬದಲಾಗಿದೆ. ಡಿಜಿಟಲ್ ಲೈಬ್ರರಿ, ಗೂಗಲ್ ಸರ್ಚ್ ಎಂಜಿನ್ ಸಂಚರಿಸುವ ಗ್ರಂಥಾಲಯಗಳಾಗಿ ಮಾರ್ಪಟ್ಟಿವೆ. ಗ್ರಂಥಾಲಯ ಮತ್ತು ಅಕ್ಷರ ಸಂಸ್ಕಾರ ನಮ್ಮ ಬದುಕಿನ ದೊಡ್ಡ ಸಂಗಾತಿ. ಪುಸ್ತಕ ನೀಡುವ ಖುಷಿಯನ್ನು ವ್ಯಕ್ತಿಗಳು ಕೊಡಲಾರರು. ಯಾವುದೇ ಕರಾರು ಹಾಕದೇ ಪುಸ್ತಕಗಳು ಖುಷಿ ಕೊಟ್ಟರೆ, ವ್ಯಕ್ತಿಗಳು ಹಲವಾರು ಕಂಡೀಷನ್ ಹಾಕಿಯೂ ಖುಷಿ ಕೊಡಲು ವಿಫಲರಾಗುತ್ತಾರೆ. ದುಃಖ ಮರೆಸುವ, ಸುಖ ಹಂಚುವ ಧ್ಯಾನ ಕೇಂದ್ರವೇ ಗ್ರಂಥಾಲಯ. ಗ್ರಂಥಾಲಯದ ದಿವ್ಯ ಮೌನದ ಕಂಪನ ವ್ಯಕ್ತಿಯ ಮನಸನ್ನು ವಿಕಸನಗೊಳಿಸುತ್ತದೆ.
ಕರ್ನಾಟಕ ಸರಕಾರದ ಮಂತ್ರಿಯೋರ್ವರು ‘ಹಾರ ತುರಾಯಿಗಳ ಬದಲು ಪುಸ್ತಕ ನೀಡಿ’ ಎಂಬ ಹೇಳಿಕೆ ನಿಜಕ್ಕೂ ಪುಳಕವನ್ನುಂಟು ಮಾಡಿದೆ. ನಮ್ಮ ರಾಜ್ಯ ಸರ್ಕಾರ ಕೂಡ ಅದನ್ನು ಅನುಮೋದಿಸುವಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾರಗಳ ಬದಲು ಪುಸ್ತಕ ನೀಡಬೇಕು ಎಂದು ಆದೇಶ ಹೊರಡಿಸಿರುವುದು ಅಭಿನಂದನೀಯ.
ನಮ್ಮನ್ನು ಆಳುವ ಅನೇಕ ಜನ ಪ್ರತಿನಿಧಿಗಳಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಕುರಿತು ಸಮರ್ಪಕ ತಿಳುವಳಿಕೆ ಇಲ್ಲ. ಅನೇಕರು ಅಧ್ಯಯನ ಮಾಡದೇ ಸಂಸತ್ತುಗಳ ಕಲಾಪದಲ್ಲಿ ಭಾಗವಹಿಸುತ್ತಾರೆ. ಯಾವುದೇ ವಿಷಯಗಳನ್ನು ಗಾಢವಾಗಿ ಓದಿಕೊಳ್ಳದೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇನ್ನೂ ಕೆಲವು ರಾಜಕಾರಣಿಗಳು ಪತ್ರಿಕೆಗಳ ಮೇಲೂ ಕಣ್ಣಾಡಿಸುವುದಿಲ್ಲ. ತಮಗೆ ಸಂಬಂಧಿಸಿದ ಜಾಹಿರಾತು, ಸುದ್ದಿ ಮತ್ತು ಫ್ಲೆಕ್ಸ್ ಗಳನ್ನು ನೋಡಿ ಸಂಭ್ರಮ ಪಡುತ್ತಾರೆ. ತಮ್ಮ ಅಧಿಕಾರಾವಧಿಯಲ್ಲಿ ಒಮ್ಮೆಯೂ ಅಲ್ಲಿರುವ ಗ್ರಂಥಾಲಯಕ್ಕೆ ಭೇಟಿ ಮಾಡಿ ಪುಸ್ತಕಗಳ ಮೇಲೆ ಕೈ ಆಡಿಸಿರುವುದಿಲ್ಲ.
ಕಲಾಪಗಳ ಸಭೆಗೆ ಕಡ್ಡಾಯವಾಗಿ ಹಾಜರಾಗಲು ವಿಪ್ ನೀಡುವಂತೆ, ಕಡ್ಡಾಯವಾಗಿ ಗ್ರಂಥಾಲಯಕ್ಕೆ ಭೇಟಿ ಕೊಡುವ ಆದೇಶವನ್ನು ಎರಡು ಮನೆಯ ಸಭಾಪತಿಗಳು ನೀಡಬೇಕು. ತಮ್ಮ ಅಧಿಕಾರಾವಧಿಯಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡದ ಜನಪ್ರತಿನಿಧಿಗಳಿಗೆ ನಿವೃತ್ತಿ ವೇತನ ನೀಡಬಾರದು. ವಿದ್ಯಾರ್ಹತೆ ಇಲ್ಲದೆ ಜವಾನನಾಗಲು ಸಾಧ್ಯವಿಲ್ಲ ಆದರೆ ಮಂತ್ರಿಯಾಗಿ ದೇಶ ಆಳಬಹುದು ಎಂಬ ವ್ಯವಸ್ಥೆ ಪ್ರಜಾಪ್ರಭುತ್ವದ ಅಣಕವೇ ಸರಿ.
ನ್ಯಾಯಾಂಗ ಮತ್ತು ಕಾರ್ಯಾಂಗಗಳಲ್ಲಿ ಕೆಲಸ ಮಾಡುವವರು ಓದದೇ ಆಡಳಿತ ನಡೆಸುವುದು ಅಸಾಧ್ಯ ಆದರೆ ಶಾಸಕಾಂಗದ ನಾಯಕರು ಓದದಿದ್ದರೂ ನಡೆಯುತ್ತದೆ. ಶಾಸಕಾಂಗದ ಮೂಲಕ ತಾವೇ ಪಾಸು ಮಾಡಿದ ಮಸೂದೆ ಮತ್ತು ಕಾನೂನುಗಳನ್ನು ಓದಿ, ಅರಿಯದ ನೂರಾರು ಜನ ಪ್ರತಿನಿಧಿಗಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪುಸ್ತಕ ಓದುವ ಸಂಸ್ಕೃತಿ ಮರು ಹುಟ್ಟು ಪಡೆಯಬೇಕಿದೆ. ರಾಜ್ಯ ಸರ್ಕಾರದ ಭರವಸೆ ಮೂಡಿಸುವ ಹೊಸ ಪುಸ್ತಕ ಗೌರವ ಮತ್ತು ಗ್ರಂಥಾಲಯ ದಿನಾಚರಣೆ ದಿನದ ನೆಪವಾಗಿ ಇಷ್ಟೊಂದು ಹೇಳಬೇಕಾಯಿತು.
ಪುಸ್ತಕ ಮತ್ತು ಗ್ರಂಥಾಲಯಗಳೆಂದರೆ ಬೆಳಕಿನ ಸಂಕೇತ. ‘ಜ್ಞಾನದ ಬಲದಿಂದ ಅಜ್ಞಾನದ ಕೇಡು,ಜ್ಯೋತಿಯ ಬಲದಿಂದ ತಮಂಧದ ಕೇಡು’ ಎಂಬ ಬಸವಣ್ಣನ ಸಾಲುಗಳು ಮನದ ಕತ್ತಲೆಯನ್ನು ಕಳೆಯುತ್ತವೆ. ಸಾವಿರಾರು ಕೃತಿಗಳ ಮೂಲಕ ನಮ್ಮ ಕಣ್ಣು ತೆರೆಸಿದ ಮಹಾನ್ ಸಾಹಿತಿಗಳಿಗೆ ಸಾವಿರದ ಶರಣು.
ಮತ್ತೊಮ್ಮೆ ಎಲ್ಲರಿಗೂ ಗ್ರಂಥಾಲಯ ದಿನಾಚರಣೆಯ ಶುಭಾಶಯಗಳು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್