ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಾತಕ

ನಾಗರತ್ನ ಎಂ ಜಿ.
ಇತ್ತೀಚಿನ ಬರಹಗಳು: ನಾಗರತ್ನ ಎಂ ಜಿ. (ಎಲ್ಲವನ್ನು ಓದಿ)

ಹೇಗಿದ್ದೀಯ ವೈಷು…? ತೀರ ಹತ್ತಿರದಂದ ಬಂದ ದನಿ..ತೀರ ಪರಿಚಿತ..ಆತ್ಮೀಯ ಎನಿಸುವ ಕಂಠ.. ತಟ್ಟನೆ ತಿರುಗಿದಳು ವೈಷ್ಣವಿ. ದನಿಯ ಒಡೆಯ ಪಕ್ಕದಲ್ಲೇ ಇದ್ದ…ತನ್ನನ್ನೇ ದಿಟ್ಟಿಸುತ್ತಿದ್ದ…ಆ ನೋಟ..!! ಮರೆಯಲು ಸಾಧ್ಯವೇ..? ಹೃದಯದಲ್ಲಿನ ಪ್ರೀತಿಯನ್ನೆಲ್ಲಾ ಮೊಗೆ ಮೊಗೆದು ಕಣ್ಣಲ್ಲಿ ತುಂಬಿದಂತೆ..ಅತಿ ತಂಪಾದ ಭಾವವೊಂದು ಮೈಯೆಲ್ಲಾ ಆವರಿಸದಂತೆ ಒಮ್ಮೆ ಸಣ್ಣಗೆ ನಡುಗಿದಳು ವೈಷ್ಣವಿ. ಅವನ ಕಣ್ಣಿಂದ ದೃಷ್ಟಿ ಸರಿಸಿ ಒಮ್ಮೆ ಅವನನ್ನು ಪೂರ್ತಿಯಾಗಿ ನೋಡುತ್ತಾ…ವಿಕ್ಕಿ…!! ಎಂದು ಉದ್ಗರಿಸಿದಳು.

ಹಾ..ವಿಕ್ಕಿ..ನೇ..ಸಾಕ್ಷಾತ್..ಎನ್ನುತ್ತಾ ಎಂದಿನ ನಗೆ ಬೀರಿದ ವಿಕ್ರಮ. ಯಾಕೆ ಎಲ್ಲಾ ಮರೆತುಬಿಟ್ಯಾ..ನಾನು ನಿನ್ನ ಕಸಿನ್..ನಾವು ಬಂದಿರೋದು ನಮ್ಮ ಕ್ಲೋಸ್ ರಿಲೇಟಿವ್ ಮದುವೆಗೆ…ನಿಂಗೆ..ನಂಗೆ..ಇಬ್ಬರಿಗೂ..ಕ್ಲೋಸ್.. ಛೇಡಿಸುವಂತೆ ಮತ್ತೆ ನಕ್ಕ. ಅಯ್ಯೋ ಹೌದಲ್ವಾ…? ನನ್ ಬುದ್ದಿಗಷ್ಟು..ಎನ್ನುತ್ತಾ ತನ್ನ ತಲೆಯ ಮೇಲೆ ತಾನೇ ಮೊಟಕಿಕೊಳ್ಳುತ್ತಾ.. ಮತ್ತೆ ಹೇಗಿದ್ದೀಯ..? “ನೋಡು..ಹೀಗೇ..ಹೆಚ್ಚು ಕಡಿಮೆ..ನಿನ್ನ ಅಪ್ಪ ಅಂದರೆ ಯಾರಾದ್ರೂ ನಂಬೋ ಹಾಗೆ..ನೀನಂತೂ ಇದ್ದ ಹಾಗೇ ಇದ್ದೀಯ..ಏನು ಸೀಕ್ರೆಟ್..?”

ಗಹಗಹಿಸಿ ನಕ್ಕ ವಿಕ್ರಂ..ಅಬ್ಬಬ್ಬಾ ಅಂದರೆ 35 ಇರಬಹುದು ಎಂದರೆ ನಂಬುವ ಹಾಗಿದ್ದ ಅವಳನ್ನು ಕಣ್ ತುಂಬಿಕೊಳ್ಳುತ್ತಾ… 47ಕ್ಕೆ 60ರಂತೆ ಕಾಣುತ್ತಿದ್ದ ಅವನನ್ನು ಕನಿಕರದಿಂದ ನೋಡುತ್ತಾ ಸ್ವಲ್ಪ ನಾಚಿ…ನೀನೂ ಸರಿ..ಬಾ..ಇಲ್ಲಿ ನಾದ ಸ್ವರದ ಶಬ್ದ ತುಂಬಾ ಇದೆ..ಅಲ್ಲಿ ಕೂರೋಣ..ಎನ್ನುತ್ತಾ ಆಸನಗಳನ್ನು ಹಾಕಿದ್ದ ಕಡೆ ನಡೆದಳು. ವಿಕ್ರಂ ಹಿಂಬಾಲಿಸಿದ. ಸಮೀಪದ ಬಂಧುವೊಬ್ಬರ ಮದುವೆಗೆ ದೆಹಲಿಯಿಂದ ಬಂದಿದ್ದ ವೈಷ್ಣವಿ ಮತ್ತು ಅದೇ ಊರಿನಲ್ಲಿದ್ದ ವಿಕ್ರಂ 18 ವರ್ಷಗಳ ನಂತರ ಭೇಟಿಯಾಗಿದ್ದರು.

ಎಷ್ಟು ಮಾತನಾಡಿದರೂ ಮುಗಿಯದಷ್ಟು ವಿಷಯ ಇದ್ದರೂ ಒಂದು ನಿಮಿಷ ಇಬ್ಬರೂ ಮೌನವಾಗಿ ಕೂತರು. “ಅರ್ಜುನ್ ವಿಷ್ಯ ಕೇಳಿ ಬೇಜಾರಾಯ್ತು…” ವಿಕ್ರಂ ಮಾತಿಗೆ ಮೊದಲು ಮಾಡಿದ. “ಹುಂ..” ಎಂದಷ್ಟೇ ಅಂದವಳ ಕಣ್ಣು ತೇವವಾದದ್ದು ಕಂಡು ಅವಳ ಕೈ ಹಿಡಿದು… “ಐ ಯಾಮ್ ಸಾರಿ…” ಎಂದ. ಅರ್ಜುನ್ ಪತಿಯಷ್ಟೇ ಅಲ್ಲ..ಸ್ನೇಹಿತನೂ ಆಗಿದ್ದ.. ತನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದ. ದೆಹಲಿಯ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವನನ್ನು ಹಿರಿಯರ ಇಚ್ಛೆಗೆ ತಲೆ ಬಾಗಿ ಮದುವೆಯಾಗಿದ್ದರೂ ಅವನನ್ನು ಪ್ರೀತಿಸದೇ ಇರಲು ಸಾಧ್ಯವಾಗಲಿಲ್ಲ ವೈಷ್ಣವಿಗೆ. ಚೈತನ್ಯದ ಚಿಲುಮೆಯಾಗಿದ್ದ ಅರ್ಜುನ್ ಒಂದು ವರ್ಷದ ಹಿಂದೆ ವಿಮಾನ ಅಪಘಾತದಲ್ಲಿ ತನ್ನನ್ನೂ ಅಕ್ಕರೆಯ ಮಗಳನ್ನೂ ಒಂಟಿ ಮಾಡಿ ಹೋಗಿದ್ದ.

ಸಾವರಿಸಿಕೊಂಡು ವೈಷ್ಣವಿಯೇ “ಪುಟ್ಟು ಕನ್ನಿಕಾ ಬಾ ಇಲ್ಲಿ”.. ಎಂದು ಜಿಂಕೆಯಂತೆ ಜಿಗಿಯುತ್ತಾ ಓಡಾಡುತ್ತಿದ್ದ ಮಗಳನ್ನು ಕರೆದಳು. “ಕ್ಯಾ ಹೈ ಮಮ್ಮಿ” ಎಂದು ದೆಹಲಿಯ ಶೈಲಿಯಲ್ಲಿ ಹತ್ತಿರ ಬಂದು ಕೇಳಿದಳು ವೈನ್ ಕಲರ್ ಲೆಹೆಂಗಾದಲ್ಲಿ ದೃಷ್ಟಿ ತಾಕುವಂತಿದ್ದ ಕನ್ನಿಕಾ. “ನೋಡು ಇವರು ವಿಕ್ರಂ ಅಂಕಲ್ ನಿನ್ನ ನೋಡಬೇಕು ಅಂದ್ರು..” “ಹಾಯ್ ಅಂಕಲ್” ಎಂದು ಶೇಕ್ ಹ್ಯಾಂಡ್ ನೀಡಿದಳು. “ಹಾಯ್ ಮಗು..ಸೋ ಸ್ವೀಟ್.. ಗಾಡ್ ಬ್ಲೆಸ್..” ಕೈ ಕುಲುಕುತ್ತಾ ಮತ್ತೊಂದು ಕೈಯಿಂದ ಅವಳ ತಲೆ ತಡವಿದ. “ಥ್ಯಾಂಕ್ಸ್ ಅಂಕಲ್” ಎನ್ನುತ್ತಾ ಮತ್ತೆ ಮಂಟಪದ ಕಡೆ ಓಡಿದಳು ಮಗು. ಒಂದು ಕ್ಷಣ ಅವಳು ಹೋದ ಕಡೆಯೇ ನೋಡುತ್ತಾ… “ಹುಂ ಸರಿ ನೀನ್ ಹೇಳು ಏನ್ ಸಮಾಚಾರ..? ಅತ್ತೆ ಹೇಗಿದ್ದಾರೆ..ಮತ್ತೆ ಮಾವ….?” ವೈಷ್ಣವಿ ಅನುಮಾನದಲ್ಲಿ ನಿಲ್ಲಿಸಿದಳು.

“ಅಮ್ಮ ಚೆನ್ನಾಗಿದ್ದಾರೆ..ಆದ್ರೆ ಮಂಡಿ ನೋವು..ಛತ್ರದಲ್ಲಿ ಹತ್ತಿ ಇಳಿಯಕ್ಕೆ ಆಗಲ್ಲ ನೀನಾದ್ರೂ ಹೋಗ್ಬಾ ಅಂತ ನನ್ನನ್ನ ಸಾಗ ಹಾಕಿದ್ರು..ಅಪ್ಪಾ…..” ಎಂದು ರಾಗ ಎಳೆಯುತ್ತಾ “ನಿಂಗೆ ಗೊತ್ತಲ್ಲಾ.. ಇರೋವರೆಗೂ ಶಾಸ್ತ್ರ ಸಂಪ್ರದಾಯ, ಪೂಜೆ, ಜಾತಕ ಅಂತಾನೇ ಬದುಕಿದ್ರು.. ಚೆನ್ನಾಗೇ ಇದ್ರು.. ಈಗ ಎರಡು ವರ್ಷದ ಹಿಂದೆ ಇದ್ದಕ್ಕಿದ್ದ ಹಾಗೆ ಹಾರ್ಟ್ ಫೆಯಿಲ್ ಆಗಿ ಹೋಗಿದ್ರು.” “ನಾನು ಕೇಳಿದ ವಿಷ್ಯ ನಿಜ ಹೌದೋ ಅಲ್ವೋ ಅಂತ ಕೇಳೋಕೆ.. ನಿಂಗೊತ್ತಿದ್ಯೋ ಇಲ್ಲೋ ನಿಮ್ಮನೆ ವಿಚಾರ ಏನೂ ಹೇಳಲ್ಲ ಅಮ್ಮ ನನ್ ಹತ್ರ..” ಸೋದರ ಮಾವನನ್ನು ನೆನೆದು ಬೇಸರದಲ್ಲಿ ಹೇಳಿದಳು… “ಎಷ್ಟೆಲ್ಲಾ ಪ್ರೀತಿಯಿಂದ ಮಾತಾಡ್ತಿದ್ರು..ನೀನೇ ನಮಗೆ ಮಗಳು ಸೊಸೆ ಎಲ್ಲ ಅಂತ ಉಬ್ಬಿಸುತ್ತಿದ್ದರು..ಛೇ” ಅಂದುಕೊಂಡಳು.

“ಈಗ ಹೇಳಿ ಏನ್ ಪ್ರಯೋಜನ ಬಿಡು..ಹೇಳೋದಕ್ಕೆ ಅಪ್ಪ ಏನೂ ಉಳಿಸಿಲ್ಲ..” ಹಳೆಯದೆಲ್ಲವೂ ನೆನಪಾಗಿ ವಿಷಾದದ ನಗೆ ಸುಳಿಯಿತು ವಿಕ್ರಮನ ತುಟಿಯಂಚಿನಲ್ಲಿ. ಎಷ್ಟು ಸುಂದರವಾದ ದಿನಗಳು ಅವು..ಉಲ್ಲಾಸ ಉತ್ಸಾಹ..ಒಮ್ಮೆಗೇ ಬರ ಸಿಡಿಲು ಬಡಿದಂತೆ 22 ವರ್ಷಗಳ, ಎರಡು ಮನೆಗಳ ಮನಸ್ಸುಗಳ ಕನಸುಗಳೆಲ್ಲ ಕಮರಿ ಹೋಗಬಹುದೆನ್ನುವ ಕಲ್ಪನೆಯಾದರೂ ಇತ್ತೇ ಪರಸ್ಪರರಲ್ಲಿ ಜೀವವನ್ನೇ ಇಟ್ಟಿದ್ದ ತಮ್ಮಿಬ್ಬರಿಗೆ?? ತೆರೆಯ ಮೇಲಿನ ಚಿತ್ರದಂತೆ ವೈಷ್ಣವಿಯ ಕಣ್ಣ ಮುಂದೆ ಹಳೆಯ ನೆನಪುಗಳೆಲ್ಲ ಹಾದುಹೋದವು.


“ಇಗೋ ನಿನ್ ಸೊಸೆ ಬಂದಿದ್ದಾಳೆ ನೋಡು ಅತ್ತೆ” ಎನ್ನುತ್ತಾ ಆಗ ತಾನೇ ಹುಟ್ಟಿದ ಮುದ್ದಾದ ಎಳೆಯ ಮಗುವನ್ನು ಅಣ್ಣ ಆನಂದ ಕೈಲಿಟ್ಟಾಗ ಸುಮಿತ್ರ ಮಗುವನ್ನು ಎದೆಗವುಚಿಕೊಂಡಳು. ಗಂಡನ ಆನಂದಕ್ಕೆ ಪಾರವೇ ಇಲ್ಲ ಎಂದುಕೊಂಡಳು ಆಸ್ಪತ್ರೆಯಲ್ಲಿ ಸುಸ್ತಾಗಿ ಮಲಗಿದ್ದ ಶಾಂಭವಿ. “ನೋಡೋ ವಿಕ್ಕಿ ನಿನ್ ಹೆಂಡತಿ” ಎಂದು ಸುಮಿತ್ರ ಮೂರು ವರ್ಷದ ಮಗ ವಿಕ್ರಮನಿಗೆ ಮಗುವನ್ನು ತೋರಿಸಿದಾಗ ಏನೂ ಅರ್ಥವಾಗದ ವಿಕ್ರಮ ಅದರ ಮೃದುವಾದ ಕೈ ಹಿಡಿದು ಅಲ್ಲಾಡಿಸಿದ. ಅಲ್ಲಿಂದಲೇ ಪ್ರಾರಂಭವಾಗಿತ್ತು ಅವರಿಬ್ಬರ ಒಡನಾಟ. ಒಟ್ಟಿಗೆ ಆಡುತ್ತಾ, ಬೆಳೆಯುತ್ತಾ, ಒಟ್ಟಿಗೆ ಓದುತ್ತಾ ತಾವಿಬ್ಬರೂ ಗಂಡ ಹೆಂಡತಿ ಎಂದು ಏನೂ ತಿಳಿಯದ ವಯಸ್ಸಿನಿಂದ ಹೇಳಿಕೊಳ್ಳುತ್ತ ಬಂದ ಅವರು ಹರೆಯಕ್ಕೆ ಕಾಲಿಟ್ಟ ಮೇಲೆ ಹೆಮ್ಮರವಾದ ಪ್ರೀತಿಯನ್ನು ಇಪ್ಪತ್ತು ವರ್ಷಗಳ ಕಾಲ ಪೋಷಿಸುತ್ತ ಬಂದರು ಎರಡೂ ಮನೆಯವರು.

ವಿಕ್ರಮನ ನಂತರ ಮತ್ತೆ ಮಗುವಾಗಲಿಲ್ಲ ಸುಮಿತ್ರಳಿಗೆ. ವಿಪರೀತ ಶಾಸ್ತ್ರ ಸಂಪ್ರದಾಯದ ಜಗದೀಶನ ಮನೆಗೆ ಸೊಸೆಯಾಗಿ ಬಂದವಳಿಗೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಪ್ರತಿಯೊಂದಕ್ಕೂ ವೈಜ್ಞಾನಿಕ ವಿವರಣೆ ಹೇಳಿ “ಹಿರಿಯರ ಆಚರಣೆಯಲ್ಲಿ ತಪ್ಪಿಲ್ಲ ಸಂಪ್ರದಾಯ ಏನಾದರೂ ಅದು ಒಳ್ಳೆಯದಕ್ಕೆ ಕುರುಡು ಕುರುಡಾಗಿ ಫಾಲೋ ಮಾಡ್ತಾರೆ ಅಷ್ಟೇ” ಎಂದು ಮಗುವಿಗೆ ತಿಳಿ ಹೇಳುವಂತೆ ಹೇಳುತ್ತಿದ್ದ ಜಗದೀಶನ ಮಾತುಗಳಿಗೆ ಸೋಲುತ್ತಿದ್ದಳು ಸುಮಿತ್ರ. ನಿಧಾನವಾಗಿ ಆ ಜೀವನಕ್ಕೆ ಹೊಂದಿಕೊಂಡಳು. ವಿಕ್ರಮನಿಗೆ ಹತ್ತು ತುಂಬುವಷ್ಟರಲ್ಲಿ ಹಳ್ಳಿಯಲ್ಲಿ ಜಮೀನು ನೋಡಿಕೊಳ್ಳುತ್ತಿದ್ದ ರಂಗಜ್ಜ ಇನ್ನಿಲ್ಲವಾದಾಗ ಮನೆ ಜಮೀನು ನೋಡುವವರಿಲ್ಲ ಎಂದು ಅತ್ತೆ ಮಾವ ಹಳ್ಳಿಗೆ ವಾಸ್ತವ್ಯ ಬದಲಿಸಿದಾಗ ಮೂರೇ ಜನರ ಚಿಕ್ಕ ಸಂಸಾರವಾಗಿತ್ತು.

ಜಗದೀಶ ಮಾತ್ರ ಅಪ್ಪನ ಹಾಗೆಯೇ ಶಾಸ್ತ್ರ, ಸಂಪ್ರದಾಯ ಆಚರಣೆ ವಿಷಯ ಬಂದರೆ ಯಾರ ಮಾತೂ ಕೇಳುವನಲ್ಲ. ಅಷ್ಟು ಕಟ್ಟು ನಿಟ್ಟು. ಎರಡು ಬೀದಿಯಾಚೆ ಅಷ್ಟೆ ಇದ್ದ ಅಣ್ಣನ ಮನೆಗೆ ಆಗಾಗ ಹೋಗಿ ಬರುವುದು ಮಾತ್ರ ಸುಮಿತ್ರಳ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ವಿಕ್ರಮ ಹುಟ್ಟಿದಾಗ ಅವಳಿಗಿಂತ ಹೆಚ್ಚಿಗೆ ಸಂಭ್ರಮಿಸಿದ್ದು ಅಣ್ಣ ಆನಂದ. “ಅಳಿಯ ಹುಟ್ಟಿದ್ದಾನೆ ನೋಡು ನೀನು ಮಾತ್ರ ಹೆಣ್ಣೇ ಹೆರಬೇಕು ಅವಳೇ ಸುಮಿತ್ರನ ಸೊಸೆ ಆಗಬೇಕು” ಎಂದು ಹೆಂಡತಿಯನ್ನು ಛೇಡಿಸುತ್ತಿದ್ದ. “ಅಪ್ಪಿ ತಪ್ಪಿ ಗಂಡಾದರೆ ಇನ್ನೊಂದು ಹೆಣ್ಣು ಹೆರುತ್ತಾಳೆ ಬಿಡಿ ಸುಮಿತ್ರ” ಎಂದು ಪ್ರತಿಯಾಗಿ ರೇಗಿಸುತ್ತಿದ್ದಳು ಶಾಂಭವಿ ಗಂಡನನ್ನು. “ಅದೂ ಸರಿ.. ಅಲ್ವ ಸುಮಿ?” ಎಂದು ಅಕ್ಕರೆಯಿಂದ ಅವಳ ತಲೆ ತಡವುತ್ತಿದ್ದ ಆನಂದ.

“ಮತ್ತೆ ನೀವಿಬ್ಬರೂ ಅತ್ತೆ, ಮಾವ ಆಗ್ತೀನಿ ಅಂದ್ರೆ ಎಷ್ಟು ಬೇಕಾದ್ರೂ ಹೆರಿತೀನಿ” ಎನ್ನುತ್ತಾ ಎದೆ ಉಬ್ಬಿಸುತ್ತಿದ್ದಳು ಸುಮಿತ್ರ. ಮೂರು ವರ್ಷಗಳ ನಂತರ ಶಾಂಭವಿಗೆ ಮಗುವಾದಾಗ ಹಿರಿ ಹಿರಿ ಹಿಗ್ಗಿದಳು ಸುಮಿತ್ರ.. ಎರಡೂ ಮನೆಗಳಲ್ಲಿ ಸಂತಸ ಇಮ್ಮಡಿಯಾಗಿತ್ತು. ಹಬ್ಬ ಹರಿದಿನ ಯಾವುದೇ ಸಂಭ್ರಮವಾಗಲಿ ಎರಡೂ ಮನೆಯವರೂ ಸೇರಿಯೇ ಆಚರಣೆ. ವಿಕ್ರಮ, ವೈಷ್ಣವಿಗೆ ಯಾರ ಅಂಕೆ ಶಂಕೆಯೂ ಇಲ್ಲ. ನಾಳೆ ಮದುವೆಯಾಗುವವರು, ಎಲ್ಲೆ ಮೀರಿ ಹೋಗುವಂತಹ ಸಂಸ್ಕಾರ ಅವರಿಗೆ ನಾವು ಕೊಟ್ಟಿಲ್ಲ ಎಂಬ ನಂಬಿಕೆಯಲ್ಲಿ ಅವರಿಬ್ಬರ ಒಡನಾಟಕ್ಕೆ ಯಾರೂ ಅಡ್ಡಿ ಮಾಡುತ್ತಲೇ ಇರಲಿಲ್ಲ.

“ಕಣ್ಣು ಕಣ್ಣು ಕಲೆತಾಗ…….” ರಾಜ್‌ ಕುಮಾರ್ ಕಂಠದಲ್ಲಿ ಕಾರಿನ ಸ್ಟೀರಿಯೋದಲ್ಲಿ ತೇಲಿ ಬರುತ್ತಿದ್ದ ಇಂಪಾದ ಗೀತೆ ಇಬ್ಬರಿಗೂ ಹೇಳಿ ಮಾಡಿಸಿದಂತಿತ್ತು. ಎರಡು ದಿನದ ಪ್ರವಾಸಕ್ಕಾಗಿ ಅಂದು ಮಡಿಕೇರಿಗೆ ಹೊರಟಿತ್ತು ಅಣ್ಣ ತಂಗಿಯರ ಸಂಸಾರ. ಕಾರಿನಲ್ಲಿ ನಗು, ಹಾಸ್ಯ, ಸಂತಸದ ಬುಗ್ಗೆ ಹರಡಿತ್ತು. ಒಬ್ಬರ ಪಕ್ಕ ಒಬ್ಬರು ಕುಳಿತಿದ್ದ ವಿಕ್ರಮ ವೈಷ್ಣವಿಗೆ ಯಾರ ಮಾತೂ ಕೇಳುತ್ತಿಲ್ಲ. ಹಾಡಿನ ಗುಂಗಿನಲ್ಲಿ ಒಬ್ಬರನೊಬ್ಬರು ನೋಡುತ್ತ ಮೈ ಮರೆತಿದ್ದರು. ವಿಕ್ರಮನಿಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕ ಖುಷಿಯಲ್ಲಿ ಪ್ರವಾಸ ಹೊರಟಿದ್ದರು ಎಲ್ಲರೂ. ಮಡಿಕೇರಿಯ ಸುಂದರ ಪರಿಸರದಲ್ಲಿ, ತಂಪಾದ ವಾತಾವರಣದಲ್ಲಿ ಎಲ್ಲರೂ ಎರಡು ದಿನ ನಕ್ಕು ನಲಿದರು.

ಎರಡನೇ ದಿನ ಓಂಕಾರೇಶ್ವರನ ದೇವಸ್ಥಾನ, ರಾಜ ಸೀಟ್, ನೋಡಿಕೊಂಡು ಅಬ್ಬಿ ಜಲಪಾತಕ್ಕೆ ಬಂದರು. ಜಲಪಾತದ ರಮಣೀಯತೆ ನೋಡಿ ವೈಷ್ಣವಿ ಮೈ ಮರೆತಿದ್ದಳು. ಜಲಪಾತದಿಂದ ಸಿಡಿಯುತ್ತಿದ್ದ ನೀರ ಹನಿಗಳು ಅವಳ ಮುಖದ ಮೇಲೆ ಬೆವರ ಹನಿಯಂತೆ ಮುತ್ತಾಗಿ ಕುಳಿತಿದ್ದವು. ತಂಗಾಳಿಗೆ ಹಾರುತ್ತಿದ್ದ ಮುಂಗುರುಳು, ಆನಂದ, ಅಚ್ಚರಿಯಿಂದ ಅರಳಿದ ಕಂಗಳು…ಅವಳನ್ನ ನೋಡುತ್ತಿದ್ದ ವಿಕ್ರಂ ಮೆಲ್ಲಗೆ ಅವಳ ಕಿವಿಯಲ್ಲಿ “ವೈಷು..ನಾವು ಹನಿಮೂನ್ ಇಲ್ಲಿಗೇ ಬರೋಣವಾ..” ಎಂದು ಉಸುರಿದಾಗ ಬೆಚ್ಚಿದ ವೈಷ್ಣವಿ.. ತಿರುಗಿ ಅವನನ್ನು ನೋಡಿ ಸಾವರಿಸಿಕೊಂಡು.. “ಏ..ಹೋಗೋ.. ಹನಿಮೂನ್‌ಗೆ ಸ್ವಿಟ್ಸರ್ ಲ್ಯಾಂಡ್‌ಗೋ, ಕಾಶ್ಮೀರಕ್ಕೋ ಕರ್ಕೊಂಡು ಹೋಗ್ತೀಯ ಅನ್ಕೊಂಡ್ರೆ ಮಡಿಕೇರಿಗೆ ಬರಬೇಕಂತೆ..ಕಂಜೂಸ್..” ಎಂದು ಹೆಬ್ಬೆರಳಾಡಿಸುತ್ತಾ ಅವನನ್ನ ಅಣಕಿಸಿ ಓಡಿದಳು.

“ಏ ಏ ವೈಷು…ಸಿಲ್ಲಿ ಗರ್ಲ್” ಎಂದು ನಗುತ್ತಾ, ಎಲ್ಲರೂ ಇರುವಲ್ಲಿಗೆ ಬಂದು ಅವರ ಹರಟೆಗೆ ಬ್ರೇಕ್ ಹಾಕಿ “ಮುಗೀತಾ ನಿಮ್ ಮಾತು ಕಥೆ ಎಲ್ಲಾ.. ಹೊರಡೋಣ ಬನ್ನಿ ಗಂಟೆ ಐದಾಯ್ತು ರೂಮಿಗೆ ಹೋಗಿ ಪ್ಯಾಕ್ ಮಾಡಿ ಹೊರಡಕ್ಕೆ ಇನ್ನೂ ಒಂದು ಗಂಟೆ ಆಗುತ್ತೆ ರಾತ್ರಿ ಆದ್ರೆ ಡ್ರೈವಿಂಗ್ ಕಷ್ಟ” ಎಂದು ಎಬ್ಬಿಸಿದ. ಹೇಳಿದಂತೆ ಹೊರಡುವಷ್ಟರಲ್ಲಿ ಏಳರ ಹತ್ತಿರವಾಗಿತ್ತು. ಹೆಚ್ಚು ಕಡಿಮೆ ಐದು ಗಂಟೆ ಪ್ರಯಾಣ ದಾರಿಯಲ್ಲಿ ಎಲ್ಲಾದರೂ ಊಟ ಮಾಡೋಣ ಎಂದುಕೊಳ್ಳುತ್ತಾ ಹೊರಟರು.

ಅರ್ಧ ದಾರಿಯಲ್ಲಿ ಒಂಭತ್ತಾಗುತ್ತಾ ಬಂದಾಗ ಎರಡು ದಿನದಿಂದ ಅಲೆದು ಸುಸ್ತಾಗಿದ್ದ ಎಲ್ಲರಿಗೂ ತೂಕಡಿಕೆ ಆರಂಭವಾಯಿತು. ವಿಕ್ರಮ ವೈಷ್ಣವಿ ಮಾತ್ರ ಪಿಸುಮಾತಿನಲ್ಲಿ ಹರಟೆ ಮುಂದುವರೆಸಿದ್ದರು. ಇದ್ದಕ್ಕಿದ್ದಂತೆ ‘ಕ್ರೀಂಚ್….’ ಎಂಬ ದೊಡ್ಡ ಶಬ್ದದೊಂದಿಗೆ ಬ್ರೇಕ್ ಹಾಕಿ ಕಾರು ನಿಲ್ಲಿಸಿದ ಡ್ರೈವರ್.. ಹಿಂದೆ ಕುಳಿತವರು ಮುಂದಕ್ಕೆ ವಾಲಿ ಸೀಟ್ ಹಿಡಿದು ಸಾವರಿಸಿಕೊಂಡರೆ ಮುಂದೆ ಕುಳಿತ ವೈಷ್ಣವಿಯನ್ನು ಗಟ್ಟಿಯಾಗಿ ಹಿಡಿದುಕೊಂಡ ವಿಕ್ರಮ ತಾನು ಮಾತ್ರ ಮುಂದಕ್ಕೆ ಮುಗ್ಗರಿಸಿ ಗಾಜಿಗೆ ತಲೆ ಒಡೆಸಿಕೊಂಡ. ಗಾಭರಿಯಿಂದ ಎಲ್ಲರೂ “ಅಯ್ಯೋ ವಿಕ್ಕಿ..” ಎಂದು ಕೂಗಿದರು. ಏನಾಯ್ತು ಯಾಕೆ ಎನ್ನುತ್ತಾ ಹೊರಗೆ ನೋಡಿದಾಗ ಬೃಹದಾಕಾರದ ಲಾರಿಯೊಂದು ಇದ್ದಕ್ಕಿದ್ದಂತೆ ಬಲಗಡೆಗೆ ತಿರುಗಿ ತೀರ ಒಂದು ಅಡಿ ಅಂತರದಲ್ಲಿ ಮುಖಾಮುಖಿಯಾಗಿ ನಿಂತಿತ್ತು. ಇನ್ನೊಂದು ಕ್ಷಣವಾಗಿದ್ದರೆ ಕಾರಿಗೆ ಡಿಕ್ಕಿ ಹೊಡೆದು ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿತ್ತು. ಆ ಕಲ್ಪನೆಯಿಂದಲೇ ಎಲ್ಲರ ಮೈ ನಡುಗಿತು.

ಅತೀವ ಆಘಾತಕ್ಕೆ ಒಳಗಾದಂತೆ ಡ್ರೈವರ್ ಸ್ಟೀರೀಂಗ್ ಮೇಲೆ ತಲೆ ಇಟ್ಟು ಒಂದು ನಿಮಿಷ ಎರಡೂ ಕೈಯಿಂದ ಕಣ್ಣು ಮುಚ್ಚಿದ. ವಿಕ್ರಮ ಹೊರಗೆ ಇಳಿದು “ಹೇ..ಕಣ್ ಕಾಣಲ್ವೇನೋ ರಾಸ್ಕಲ್” ಎಂದು ರಭಸದಿಂದ ಲಾರಿ ಡ್ರೈವರ ಕತ್ತಿನ ಪಟ್ಟಿ ಹಿಡಿದ… ಇತ್ತ ಕಡೆಯಿಂದ ಇಳಿದ ಕಾರ್ ಚಾಲಕ ಅವನನ್ನು ಹೊಡೆಯಲು ಕೈ ಎತ್ತಿದ. ಅವನಿಂದ ತಪ್ಪಿಸಿಕೊಂಡ ಲಾರಿ ಡ್ರೈವರ್ ಕೈ ಮುಗಿಯುತ್ತ “ಮಾಫ್ ಕರೋ ಸಾಬ್ ಟೈರ್ ಬರ್ಸ್ಟ್ ಆಗಿ ಸಡನ್ ಆಗಿ ಗಾಡಿ ಎಡಗಡೆಗೆ ನುಗ್ಗಿತು.. ಕಂಟ್ರೋಲ್ ಸಿಗಲಿಲ್ಲ.. ಅಲ್ಲಾಹ ಕಾ ಶುಕರ್ ಹೈ..ಯಾರಿಗೂ ಏನೂ ಆಗಿಲ್ಲ” ಎಂದ. ವಿಕ್ರಮ ಗಮನಿಸಿ ನೋಡಿದ..ಅವನು ಹೇಳಿದ್ದು ನಿಜ.. ಲಾರಿಯ ಬಲಗಡೆ ಮುಂದಿನ ಚಕ್ರ ಒಡೆದು ಹೋಗಿತ್ತು.

ಅವನದೇನೂ ತಪ್ಪಿಲ್ಲವೆಂದರಿತ ವಿಕ್ರಮ ಮತ್ತೆ ಒಳಗೆ ಬಂದು ಕುಳಿತ.. ಎಲ್ಲರನ್ನೂ ಬನ್ನಿ ಕೂತ್ಕೊಳ್ಳಿ ಎನ್ನುತ್ತಾ ಕರೆದ. “ಅಯ್ಯೋ ದೇವ್ರೇ ಬಲಗೈ ಎದ್ದಿರಬೇಕು ಇವತ್ತು ಯಾರ ಪುಣ್ಯಾನೋ” ಎನ್ನುತ್ತಾ ಇನ್ನೂ ಶಾಕಿನಿಂದ ಚೇತರಿಸಿಕೊಳ್ಳುತ್ತಿದ್ದ ಎಲ್ಲರೂ ಕಾಣದ ದೇವರಿಗೆ ಕೈ ಮುಗಿದರು. “ಎಲ್ಲಿ ಏನು ತಪ್ಪಾಯ್ತು..ಸರಿಯಾಗಿ ರಾಹುಕಾಲ ಎಲ್ಲಾ ನೋಡಿ ದೇವರಿಗೆ ಕೈ ಮುಗಿದೇ ಹೊರಟಿದ್ದೆವಲ್ಲ..” ಎನ್ನುತ್ತಾ ಜಗದೀಶ ಕೈ ಹಿಸುಕಿಕೊಂಡ. “ಅದಕ್ಕೆ ದೊಡ್ಡ ಅನಾಹುತ ತಪ್ಪಿತಲ್ಲ ಅಪ್ಪ” ಎನ್ನುತ್ತಾ ಸಮಾಧಾನ ಮಾಡಿದ ವಿಕ್ರಮ. ಮುಂದಾಗಬಹುದಾಗಿದ್ದ ಅನಾಹುತವನ್ನು ನೆನೆದು ಅಳುತ್ತಿದ್ದ ವೈಷ್ಣವಿಯ ಕೈ ಹಿಡಿದು ಮೌನವಾಗಿ ಅವಳ ತಲೆಯನ್ನು ಎದೆಗೊರಗಿಸಿಕೊಂಡ.

ಕೈ ಗಡಿಯಾರ ಒಂಭತ್ತು ತೋರಿಸುತ್ತಿತ್ತು. “ಆಯ್ತು ಈಗ ಎಲ್ಲಾದರೂ ಊಟ ಮಾಡೋಣ ತಾನೇ” ಎನ್ನುತ್ತಾ ವಿಕ್ರಮ ಪ್ರಶ್ನಾರ್ಥಕವಾಗಿ ಎಲ್ಲರ ಕಡೆ ನೋಡಿದ. “ಬೇಡ ಮೊದಲು ಮನೆಗೆ ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚೋಣ” ಎಂದಳು ಸುಮಿತ್ರ… “ಹೌದು..ಮನೆಗೇ ಹೋಗೋಣ.. ಈಗ ಯಾರಿಗೂ ಹಸಿವಿಲ್ಲ” ಎನ್ನುತ್ತಾ ಎಲ್ಲರೂ ಸಮ್ಮತಿ ಸೂಚಿಸಿದರು. ಆ ಘಟನೆಯ ಆಘಾತದಿಂದ ಹೊರಗೆ ಬರಲು ಎಲ್ಲರಿಗೂ ಸುಮಾರು ದಿನಗಳು ಹಿಡಿದವು.

ವಿಕ್ರಮ ಹೊಸ ಕೆಲಸ ರೂಢಿಸಿಕೊಂಡ. ವೈಷ್ಣವಿಗೆ ಸರ್ಕಾರಿ ನೌಕರಿ ಸಿಕ್ಕಾಗ ಕುಣಿ ಕುಣಿಯುತ್ತಾ ಸೇರಿಕೊಂಡಳು. ಪ್ರತಿದಿನ ಬೆಳಿಗ್ಗೆ ವಿಕ್ರಮ ಅವಳನ್ನು ಕಛೇರಿಗೆ ಬಿಟ್ಟು ಬರುತ್ತಿದ್ದ. ಹೀಗೆ ಒಂದು ಹಬ್ಬದ ದಿನ ಎಲ್ಲ ಸೇರಿದಾಗ ಸುಮಿತ್ರ “ಇನ್ನೇನು ವಿಕ್ರಮ್ ವೈಷ್ಣವಿ ಸೆಟಲ್ ಆದ್ರಲ್ಲ ಮದುವೆ ಮಾಡಿ ಮುಗಿಸಿಬಿಡೋಣ ಮತ್ಯಾಕೆ ತಡ..” ಎಂದಳು. “ಅಯ್ಯೋ ಹೋಗಿ ಅತ್ತೆ” ಎನ್ನುತ್ತಾ ವೈಷ್ಣವಿ ನಾಚಿಕೊಂಡಳು. ಜಗದೀಶ, ಆನಂದರೂ “ಹೌದಲ್ಲ.. ಇದು ಸರಿಯಾದ ಸಮಯ..ವಾಲಗ ಊದಿಸಿಬಿಡೋಣ” ಎಂದು ಸಮ್ಮತಿಸಿದರು. ಪ್ರೇಮಿಗಳಿಬ್ಬರೂ ಆಗಲೇ ವಿವಾಹದ ಕನಸು ಕಾಣತೊಡಗಿದರು. “ಸರಿ ಶುಭಸ್ಯ ಶೀಘ್ರಂ ವೈಷ್ಣವಿ ಜಾತಕ ಇದ್ರೆ ಕೊಡಿ ನಾಳೆಯೇ ಜೋಯಿಸರಿಗೆ ತೋರಿಸಿಬಿಡೋಣ” ಎಂದ ಜಗದೀಶ.

“ಜಾತಕ ತೋರಿಸಬೇಕಾ? ಅವರಿಬ್ಬರೂ ಗಂಡ ಹೆಂಡತಿ ಅಂತ ಯಾವಾಗ್ಲೋ ತೀರ್ಮಾನ ಆಗಿದೆ ಈಗ ಜಾತಕ ಯಾಕೆ..?” ಎಂದಳು ಸುಮಿತ್ರ. “ಅಯ್ಯೋ ಹಾಗಂದ್ರೆ ಹೇಗೆ..? ಜಾತಕ ತೋರಿಸದೆ ಮದುವೆ ಮಾಡಿದರೆ ನಾಳೆ ಅವರಿಬ್ಬರಿಗೇ ತೊಂದರೆ.. ತೋರಿಸಿಬಿಡೋಣ” ಎಂದ ಸಂಪ್ರದಾಯವಾದಿ ಜಗದೀಶ. ಶಾಂಭವಿ ವೈಷ್ಣವಿಯ ಜಾತಕ ತಂದು ಜಗದೀಶನ ಕೈಲಿಟ್ಟಳು. ಮುಂದೆ ನಡೆದದ್ದು ಯಾರೂ ಕನಸಿನಲ್ಲೂ ಊಹಿಸದ ಪ್ರಸಂಗ. ಜಗದೀಶ ಜೋಯಿಸರ ಬಳಿ ಜಾತಕ ತೋರಿಸಿದಾಗ ಅವರು, “ಈ ಜಾತಕಗಳು ಹೊಂದುವುದಿಲ್ಲ..ಬಹಳ ತೊಂದರೆ ಆಗುತ್ತೆ.. ಇತ್ತೀಚೆಗೆ ಏನಾದರೂ ದುರ್ಘಟನೆ ನಡೆಯಿತೇ ನಿಮ್ಮ ಮನೇಲಿ?” ಎಂದು ಕೇಳಿದರು.

ನಂಬಲಸಾಧ್ಯವಾದಂತೆ ಜಗದೀಶ ಬೆಚ್ಚಿ ಬಿದ್ದ. ಜೋಯಿಸರು ಹೇಳಿದ್ದು ಸತ್ಯವಾಗಿತ್ತು – ಅಂದು ಕೂದಲೆಳೆಯಲ್ಲಿ ತಪ್ಪಿದ ಅಪಘಾತದ ನೆನಪಾಯಿತು. ಜೋಯಿಸರು ಹೇಳಿದರು, “ಅದು ಭಗವಂತನ ಸೂಚನೆ.. ನೀವೇ ನಿರ್ಧರಿಸಿ, ಇವರಿಬ್ಬರೂ ಒಟ್ಟಿಗೆ ಬಾಳುವುದು ಬರೆದಿಲ್ಲ.” ಚೈತನ್ಯವೆಲ್ಲ ಸೋರಿ ಹೋದಂತೆ ಜಗದೀಶ ಮನೆಗೆ ಬಂದ. ಯಾರಿಗೆ ಏನು ಹೇಳುವುದು ಎಂದು ಕಂಗೆಟ್ಟ. ಜಗದೀಶ ತನ್ನ ತತ್ವಕ್ಕೆ ಕಟ್ಟುಬಿದ್ದು “ಈ ಮದುವೆ ಸಾಧ್ಯವಿಲ್ಲ ಸುಮಿತ್ರ” ಎಂದು ಖಡಾಖಂಡಿತವಾಗಿ ಹೇಳಿದ. ಸುಮಿತ್ರ ಅಂಗಲಾಚಿದರೂ ಅವನು ಒಪ್ಪಲಿಲ್ಲ. “ಗೊತ್ತಿದ್ದೂ ಗೊತ್ತಿದ್ದೂ ಮಕ್ಕಳನ್ನು ಹಳ್ಳಕ್ಕೆ ತಳ್ಳೋಕಾ?” ಎಂದು ಪ್ರಶ್ನಿಸಿದ.

ಸುಮಿತ್ರ ಅಣ್ಣನಿಗಾಗಲಿ ವೈಷ್ಣವಿಗಾಗಲಿ ಮುಖತಃ ಹೇಳುವ ಧೈರ್ಯ ಸಾಲದೆ ಒಂದು ಪತ್ರ ಬರೆದು ಅಣ್ಣ ಆನಂದನಿಗೆ ನೀಡಿದಳು. ಪತ್ರ ಓದಿದ ಆನಂದ ಕುಸಿದು ಕುಳಿತ. ಹೃದಯ ಒಡೆದ ವೈಷ್ಣವಿ ಮತ್ತು ವಿಕ್ರಮ ಮೌನವಾಗಿ ಎಲ್ಲವನ್ನೂ ಸಹಿಸಿದರು. ಪರಿಸ್ಥಿತಿ ಸುಧಾರಿಸಲು ಜಗದೀಶ ಮಗನಿಗೆ ಬೇರೆ ಮದುವೆ ಮಾಡಲು ನಿರ್ಧರಿಸಿದ. ವೈರಾಗ್ಯದಲ್ಲಿದ್ದ ವಿಕ್ರಮ “ನಿಮ್ಮಿಷ್ಟ ಅಪ್ಪ” ಎಂದುಬಿಟ್ಟ. ತಿಂಗಳೊಳಗೆ ವೀಣಾ ಎಂಬಾಕೆ ಅವನ ಮಡದಿಯಾಗಿ ಮನೆ ಪ್ರವೇಶಿಸಿದಳು.

ವೈಷ್ಣವಿಗೆ ಸತ್ತು ಹೋಗಲೇ ಅನ್ನಿಸುತ್ತಿತ್ತು. ಆದರೆ ಆನಂದ ಮಗಳಿಗೆ ಆ ವಾತಾವರಣದಿಂದ ಮುಕ್ತಿ ನೀಡಲು ಪ್ರಯತ್ನಿಸಿ ದೆಹಲಿಯಲ್ಲಿ ಅರ್ಜುನನೊಂದಿಗೆ ಸಂಬಂಧ ಕುದುರಿಸಿದ. ವಿಕ್ರಮನ ನೆನಪಿನಿಂದ ದೂರ ಹೋಗುವುದಕ್ಕಾಗಿ ವೈಷ್ಣವಿ ಅರ್ಜುನನನ್ನು ಮದುವೆಯಾದಳು. ಅರ್ಜುನ ತುಂಬಾ ಒಳ್ಳೆಯವನಾಗಿದ್ದ, ಅವಳನ್ನು ಚೆನ್ನಾಗಿ ನೋಡಿಕೊಂಡ. ಅವರಿಗೊಂದು ಮಗಳು ಹುಟ್ಟಿದಳು – ಕನ್ನಿಕಾ. ಆದರೆ ಅರ್ಜುನ ಮಗಳಿಗೆ 5 ವರ್ಷವಿದ್ದಾಗಲೇ ತನ್ನ ಅಕಾಲಿಕ ಸಾವಿನ ಮುನ್ಸೂಚನೆಯೋ ಎಂಬಂತೆ ವಿಮೆ ಮಾಡಿಸಿದ್ದ. ಒಂದು ವರ್ಷದ ಹಿಂದೆ ವಿಮಾನ ಅಪಘಾತದಲ್ಲಿ ಅವನು ಸಾವನ್ನಪ್ಪಿದ.

ಇತ್ತ ವಿಕ್ರಮನ ಜೀವನದಲ್ಲೂ ದುರಂತ ನಡೆದಿತ್ತು. ಅವನ ಹೆಂಡತಿ ವೀಣಾ ಬಸ್ ಹತ್ತುವಾಗ ಆಯತಪ್ಪಿ ಬಿದ್ದು ಚಕ್ರದ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಳು. ವಿಕ್ರಮ ಮರುಮದುವೆಯಾಗದೆ ಒಂಟಿಯಾಗಿದ್ದ. 18 ವರ್ಷಗಳ ನಂತರ ಮದುವೆಯೊಂದರಲ್ಲಿ ಭೇಟಿಯಾದಾಗ ಇವೆಲ್ಲ ವಿಷಯಗಳು ವೈಷ್ಣವಿಗೆ ತಿಳಿಯಿತು. “ನಿನ್ನ ಜಾತಕ ನನಗೆ ಹೊಂದಲಿಲ್ಲ ಅಂದ ಜೋಯಿಸರಿಗೆ ವೀಣಾಳ ಬಲಿಯಾಗುವ ಸತ್ಯ ತಿಳಿಯಲಿಲ್ಲವೇ?” ಎಂದು ವಿಕ್ರಮ ವಿಷಾದದಿಂದ ಕೇಳಿದ.

ವೈಷ್ಣವಿ ಸುಮಿತ್ರ ಅತ್ತೆಯ ಮನೆಗೆ ಹೋದಾಗ, ಅತ್ತೆ ಅವಳನ್ನು ತಬ್ಬಿ ಅತ್ತರು. ಸುಮಿತ್ರಾ ವೈಷ್ಣವಿಗೆ ಮರುಮದುವೆಯ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದರು. ವೈಷ್ಣವಿಗೆ ವಿಕ್ರಮನ ಮೇಲಿರುವ ಪ್ರೀತಿ ಇನ್ನೂ ಜೀವಂತವಾಗಿತ್ತು. ಆದರೆ 16 ವರ್ಷದ ಮಗಳನ್ನು ಇಟ್ಟುಕೊಂಡು ಮರುಮದುವೆಯಾಗುವುದು ಸರಿಯೇ ಎಂಬ ಗೊಂದಲ ಅವಳಲ್ಲಿತ್ತು. ಅದೇ ಸಮಯದಲ್ಲಿ ಕನ್ನಿಕಾ ತನ್ನ ಗೆಳತಿಯ ತಂದೆ ಮರುಮದುವೆಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದಳು. “ಇಷ್ಟು ದೊಡ್ಡವರಾದ ಮೇಲೆ ಯಾರಾದರೂ ಮದುವೆ ಮಾಡಿಕೊಳ್ತಾರಾ ಮಮ್ಮಿ? ಸೋ ಬ್ಯಾಡ್ ಅಲ್ವಾ?” ಎಂದು ಮಗಳು ಕೇಳಿದ ಮಾತು ವೈಷ್ಣವಿಗೆ ಚಾಟಿಯಲ್ಲಿ ಹೊಡೆದಂತಾಯಿತು.

ವೈಷ್ಣವಿ ತನ್ನ ಆಸೆ ಅಸಾಧು ಎಂದು ಭಾವಿಸಿ, ತಕ್ಷಣವೇ ದೆಹಲಿಗೆ ಮರಳಲು ನಿರ್ಧರಿಸಿದಳು. ವಿಕ್ರಮ ಹೊಸ ಭರವಸೆಯೊಂದಿಗೆ ಅವಳನ್ನು ಕಾಣಲು ಬಂದಾಗ, ವೈಷ್ಣವಿ ಅಪರಿಚಿತಳಂತೆ “ನೆಕ್ಸ್ಟ್ ಟೈಮ್ ಸಿಗೋಣ” ಎಂದು ಹೇಳಿ ಮಗಳೊಂದಿಗೆ ಟ್ಯಾಕ್ಸಿ ಹತ್ತಿ ಹೊರಟುಹೋದಳು. ವಿಕ್ರಮ ಏನೂ ಅರ್ಥವಾಗದೆ ಸ್ತಬ್ದನಾಗಿ ನಿಂತಿದ್ದ.