- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ನಮ್ಮ ಮಾಧ್ಯಮಗಳ ಪ್ರಚಾರಪ್ರಿಯತೆ ತೆಗೆದುಕೊಳ್ಳುವ ಆಯಾಮಗಳೇ ವಿಚಿತ್ರ.ಸಿನೆಮಾ ಮತ್ತು ಪತ್ರಿಕೋದ್ಯಮದ ಮೂಲಕ ಅಸ್ಮಿತೆಗಾಗಿ ಹೊಡೆದಾಡುತ್ತಿರುವ ಇಂದ್ರಜಿತ್ ಲಂಕೇಶ್ ಬಿಟ್ಟ ಹೊಸ ಬಾಣ ತುಂಬಾ ಮೈಲೇಜ್ ಗಿಟ್ಟಿಸಿಕೊಂಡಿದೆ.
ಮಾದಕ ದ್ರವ್ಯ ವ್ಯಸನ ಮನುಷ್ಯನ ವೈಯಕ್ತಿಕ ತೆವಲು, ಅದು ಐಷಾರಾಮಿ ವ್ಯಕ್ತಿಗಳ ಬದುಕಿನ ಅವಿಭಾಜ್ಯ ಅಂಗ.ಅತೀ ಶ್ರೀಮಂತರು ಮತ್ತು ಸೆಲೆಬ್ರಿಟಿಗಳು ಎಲ್ಲಾ ಹೆಚ್ಚಾದ ಮೇಲೆ ಕಾಮ ಮತ್ತು ಮಾದಕ ದ್ರವ್ಯಗಳ ದಾಸರಾಗುತ್ತಾರೆ.
ಅದಕ್ಕೆ ಪೂರಕವಾಗಿ ಅವುಗಳನ್ನು ಒದಗಿಸುವ ಮಧ್ಯವರ್ತಿಗಳ ದಂಡೇ ಇದೆ.ಹಳ್ಳಿಯಿಂದ ದಿಲ್ಲಿಯತನಕ, ಅಷ್ಟೇ ಅಲ್ಲ ದೇಶ ವಿದೇಶಗಳವರೆಗೆ ಅದರ ಜಾಲ ಹರಡಿದೆ.
ಹಳ್ಳಿಗಳಲ್ಲಿ ಗಾಂಜಾ ತಪ್ಪಲು ತಿನ್ನುವ, ಕಳ್ಳ ಬಟ್ಟಿ ಕುಡಿಯುವ ಮತ್ತು ಕುಡಿಸುವ ಮೂಲಕ ಈ ಜಾಲ ಅವರವರ ಯೋಗ್ಯತೆಗೆ ತಕ್ಕಂತೆ ತನ್ನ ಸ್ವರೂಪ ಬದಲಿಸುತ್ತ ಹೋಗುತ್ತದೆ.
ಅದರಲ್ಲೂ ಈ ರಂಗಿನ ದುನಿಯಾ ಸಿನೆಮಾ ರಂಗದಲ್ಲಿ ಇದರ ಪ್ರಮಾಣ ಕೊಂಚ ಹೆಚ್ಚು.ಏಕೆಂದರೆ ಸಿನೆಮಾ ರಂಗವೇ ಬಹುದೊಡ್ಡ ನಶೆ, ಕನಸಿನ ಸಾಮ್ರಾಜ್ಯ.ಮೈ ಮಾಟದ ಸೆಳೆತ, ಜನಪ್ರಿಯತೆ, ಹಣ, ಅಭಿಮಾನಿಗಳು, ದೊಡ್ಡವರ ನಂಟು, ಅಧಿಕಾರ ಶಾಹಿಗಳ ದರ್ಪವೂ ಸೇರಿಕೊಳ್ಳುತ್ತದೆ.
ಸಿನೆಮಾ ಮತ್ತು ರಾಜಕಾರಣದ ನಂಟು ವಿದೇಶಗಳಲ್ಲಿ ಇದೆ.ಆದರೆ ಭಾರತೀಯ ಬಾಲಿವುಡ್ ಸಿನಿಮಾ ನಂಟು ಅದರಾಚೆಗೆ ಅಂಡರ್ ವರ್ಲ್ಡ್ ಮಾಫಿಯಾ ಸೇರಿಕೊಂಡು ತನ್ನ ಹಣದ ಮೌಲ್ಯ ಹೆಚ್ಚಿಸಿಕೊಂಡಿತು.
ಆದರೆ ಚಿತ್ರರಂಗದ ಮೂಲ ಸಾಂಸ್ಕೃತಿಕ ಉದ್ದೇಶ ವಿಫಲವಾಯಿತು. ಭೂಗತ ಪಾತಕಿಗಳ ಪಾಪದ ಹಣದ ಜೊತೆಗೆ ನಟಿಯರ ದೇಹ ದಾಹದ ಹುಚ್ಚು ಮೂಲ ಸಿನೆಮಾ ಸಂಸ್ಕೃತಿಯ ವಿನಾಶಕ್ಕೆ ಕಾರಣವಾಯಿತು.
ರಾತ್ರೋ ರಾತ್ರಿ ಬೇನಾಮಿ ಹಣ ಗಳಿಸುವ ಮಾಧ್ಯಮವಾಯಿತು. ಕಳೆದ ಎರಡು ದಶಕಗಳಿಂದ ರಾಜಕಾರಣಿಗಳಿಗೆ ಸಿನೆಮಾ ನಟರ ಸಹವಾಸ ಹವ್ಯಾಸವಾಗಿ ಮಾರ್ಪಾಟಾಗಿ ಕೊಡು ಕೊಳ್ಳುವಿಕೆಯ ಒಪ್ಪಂದ ಆರಂಭವಾಯಿತು.
ಲಕ್ಷಗಟ್ಟಲೆ ಇದ್ದ ಬಜೆಟ್ ಕೋಟಿಯಾಯಿತು, ನೂರಾರು ಕೋಟಿಗೂ ತಲುಪಿತು.ಪ್ರೇಕ್ಷಕರ ವೀಕ್ಷಣೆ ಇಳಿಮುಖಗೊಂಡರೂ ಉದ್ಯಮ ಬೆಳೆಯಲು ಭೂಗತ ಪಾತಕಿಗಳು ಕಾರಣರಾದರು.
ಅವರ ಇತರ ವ್ಯವಹಾರಗಳಿಗೆ ನಟಿಯರು ಮಧ್ಯವರ್ತಿಗಳಾಗುವಷ್ಟು ಬೋಲ್ಡ್ ಆಗಿ ಬಿಟ್ಟರು.ರಾತ್ರಿ ಪಾರ್ಟಿಗಳು ಕೇವಲ ನಟರಿಗಷ್ಟೇ ಎಂಬುದು ಈಗ ಔಟ್ ಡೇಟೇಡ್.ಈಗ ನಟಿಯರು ಬಿಂದಾಸಾಗಿ ಭಾಗವಹಿಸಿ, ಲಿಂಗ ಭೇದ ಮರೆತು ಕುಡಿದು ಕುಣಿದು ಕುಪ್ಪಳಿಸುತ್ತಾರೆ.
ಐರೋಪ್ಯ ಸಂಸ್ಕೃತಿ ನೆಪದಲ್ಲಿ, ಸೋಷಿಯಲ್ ಜೀವನಶೈಲಿ ತನ್ನ ಹದ್ದು ಮೀರಿದ ಪರಿಣಾಮದಿಂದ ಕಾಮವೂ ಹೇರಳವಾಗಿ ಬಿಕರಿಯಾಗಿದೆ.
ಐದು ದಶಕಗಳ ಹಿಂದೆ ಮಡಿವಂತಿಕೆ ಮತ್ತು ನಾಜೂಕಿನಿಂದ ನಡೆಯುತ್ತಿದ್ದ ಸರಸ ಸಲ್ಲಾಪಗಳು ಈಗ ಹಾಡು ಹಗಲೇ ಬೆತ್ತಲಾಗಲು ಮಾಧ್ಯಮದ ಪಾತ್ರವೂ ಇದೆ.ಅಂದಿನ ಪತ್ರಿಕೆಗಳಲ್ಲಿ ತುಂಬಾ ಸೂಕ್ಷ್ಮವಾಗಿ ಬರೆಯಲ್ಪಡುತ್ತಿದ್ದ ಗಾಸಿಪ್ ಕಾಲಂಗಳನ್ನು ಓದಲು ಪುಳಕವೆನಿಸುತ್ತಿತ್ತು.ಈಗ ಎಲ್ಲಾ ಬಟಾ ಬಯಲು ಬೆತ್ತಲೆ: ದೈಹಿಕ ಮತ್ತು ಮಾನಸಿಕವಾಗಿ.
ಕಲೆ ಮತ್ತು ಕ್ರಿಯಾಶೀಲ ಕ್ಷೇತ್ರವಾಗಿದ್ದ ಸಿನೆಮಾ ವಿಷಮಯವಾಗಿ ಹೋಯಿತು. ಕಾನೂನು ಬಾಹಿರ ಕೆಲಸಗಳಿಗೆ ರಾಜಕಾರಣ ಮತ್ತು ಅಧಿಕಾರ ಶಾಮೀಲಾಯಿತು.
ಈಗ ಇಂದ್ರಜಿತ್ ಎತ್ತಿರುವ ಪ್ರಶ್ನೆ ಹೊಸದೇನಲ್ಲ.ಅದು ಇದೆ, ಇರುತ್ತದೆ ಮುಂದೆಯೂ.
ಕೊರೋನಾ ಮತ್ತು ಜಲ ಪ್ರಳಯದ ಸುದ್ದಿಯಲ್ಲಿ ಬಿಜಿ ಇದ್ದ ಸುದ್ದಿ ವಾಹಿನಿಗಳಿಗೆ ಕೊಂಚ ಹೊಸ ವಿಷಯ ಬೇಕಾಗಿತ್ತು.
ಮಾತು ಮಾತಿಗೂ ಕೂಗಾಡುವ ರಾಷ್ಟ್ರೀಯ ಚಾನೆಲ್ ಗಳು ಒಬ್ಬ ನಟನ ಸಾವಿನ ತನಿಖೆ ಕುರಿತು ಅರಚುತ್ತಿರುವಾಗ, ಇಲ್ಲಿ ಚಂದನವನದಲ್ಲಿ ಡ್ರಗ್ ಮಾಫಿಯಾ ಮತ್ತು ನಟರ ಕುರಿತು ಕೂಗಾಟ ಶುರುವಾಗಿದೆ.ಪರ, ವಿರೋಧ ಚರ್ಚೆಯ ಜೊತೆಗೆ ಪರಸ್ಪರರ ಹುಳುಕು ಮುಚ್ಚಿಕೊಳ್ಳುವ ಭೀತಿಯೂ ಇದೆ. ಇದು ಕೂಡ ತಾತ್ಕಾಲಿಕ ಚರ್ಚೆ.
ದೊಡ್ಡವರ ಮಕ್ಕಳು ಮತ್ತು ಸಿನೆಮಾದವರು ಒಗ್ಗಟ್ಟಾಗಿ ಪ್ರಕರಣಕ್ಕೆ ತಿಪ್ಪೇ ಸಾರಿಸುತ್ತಾರೆ.ಇದು ಇಷ್ಟೊಂದು ಗಂಭೀರವಾಗಿ ಚರ್ಚಿಸುವ ಸಂಗತಿಯೇ ಅಲ್ಲ.
ಉಳ್ಳವರ ಐಷಾರಾಮಿ ವಿಷಯಗಳನ್ನು ಬಿಟ್ಟು ಚರ್ಚಿಸಲು ಅನೇಕ ಗಂಭೀರ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ.ಕೋವಿಡ್ ಕಾಲದ ನಂತರ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸಂಬಂಧಿಸಿದ ಅನೇಕ ಮಹತ್ವದ ಸವಾಲುಗಳನ್ನು ದೇಶ, ಜಗತ್ತು ಎದುರಿಸಬೇಕಾಗಿದೆ.
ಹಣ ಹೆಚ್ಚಾದವರು ಮಾಡುವ ಚಟಗಳಿಂದಾಗಿ ಅವರು ನಾಶವಾಗುತ್ತಾರೆ. ಇದಕ್ಕೆ ಸಿನೆಮಾರಂಗ ಮಾತ್ರ ಕಾರಣ ಎಂಬ ಆರೋಪ ಅಸಮಂಜಸ. ಈ ಚಟಗಳಿಗೆ ಬಲಿಯಾದವರು ಇರುವವರು ಇರುತ್ತಾರೆ, ಹೋಗುವವರು ಹೋಗುತ್ತಾರೆ ಹೋಗಿದ್ದಾರೆ ಕೂಡ.
ಜನ ಅವರು ನಟಿಸಿದ ಸಿನೆಮಾ ನೋಡುತ್ತಾರೆ ಅವರ ವೈಯಕ್ತಿಕ ನಿಗೂಢ ಸಂಗತಿಗಳನ್ನಲ್ಲ. ವೈಯಕ್ತಿಕ ಬದುಕಿನಲ್ಲಿ ತಪ್ಪು ಮಾಡಿ ಹತ್ತು ವರ್ಷ ಜೈಲು ಸೇರಿದ್ದ ಸಂಜಯ್ ದತ್ ಮತ್ತೆ ಸೂಪರ್ ಸ್ಟಾರ್ ಆಗಿ ಮೆರೆದರು.
ಕನ್ನಡ ಸಿನೆಮಾ ನಟರ ಅನೇಕ ವೈಯಕ್ತಿಕ ಬದುಕಿನ ಖಾಸಗಿ ಸಂಗತಿಗಳ ಕುರಿತು ಮಾಧ್ಯಮದಲ್ಲಿ ಚರ್ಚೆ ಆದರೂ ಅಂತಹ ನಟರ ಸಿನೆಮಾಗಳನ್ನು ಪ್ರೇಕ್ಷಕರು ನಿಷೇಧ ಮಾಡಲಿಲ್ಲ.
ಈಗಲೂ ಅಷ್ಟೇ ಕಾನೂನು ತನ್ನ ಕೆಲಸ ತಾನು ಮಾಡುತ್ತದೆ. ಆ ವಿಶ್ವಾಸ ನಾಡಿನ ಜನರಿಗೆ ಇದೆ.ಅದರ ಜೊತೆಗೆ ತಪ್ಪು ಮಾಡಿದವರು ತಪ್ಪಿಸಿಕೊಳ್ಳುವ ವಾತಾವರಣವೂ ಇದೆ.ವಿಷಯದ ಸಂಪೂರ್ಣ ತನಿಖೆ ನಡೆದು ಶಿಕ್ಷೆ ಆಗುತ್ತದೆ ಎಂದು ಕನಸು ಕಾಣುವಷ್ಟು ಜನ ದಡ್ಡರಿಲ್ಲ.
ರಾಜಕೀಯ ಪ್ರಭಾವ ಮತ್ತು ಹಣ ಎಲ್ಲಾ ಅಪರಾಧಗಳನ್ನು ಮುಚ್ಚಿ ಹಾಕುವುದಷ್ಟೇ ಅಲ್ಲ, ಅವುಗಳ ಸುಳಿವನ್ನು ಕೂಡ ಉಳಿಸುವುದಿಲ್ಲ.
ಪ್ರತಿಯೊಂದು ವಿವಾದಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತವೆ. ಆ ಕೈಗಳು ಆಡಿಸುವ ಆಟ ನಿಂತ ಮೇಲೆ ಎಲ್ಲವೂ ತಣ್ಣಗಾಗುತ್ತದೆ.
ಅಧಿಕಾರ ಮತ್ತು ಹಣದ ಬಲದಿಂದ ಸೆಲೆಬ್ರಿಟಿಗಳು ಸೆಲಿಬ್ರಿಟಿಗಳಾಗಿ ಉಳಿಯುತ್ತಾರೆ. ಜನ ಒಂದಿಷ್ಟು ಪುಕ್ಕಟೆ ಮನೋರಂಜನೆ ತೆಗೆದುಕೊಂಡು ಸುಮ್ಮನಾಗುತ್ತಾರೆ.
ಕೆಲವರು ಮೈಲೇಜ್ ತೆಗೆದುಕೊಳ್ಳಲು ಅದೇ ಹಣಗಳಿಕೆ ಕಾರಣವಾಗುತ್ತದೆ. ಹೆಸರು, ಹಣ ಮತ್ತು ಬಿಟ್ಟಿ ಪ್ರಚಾರ ದಕ್ಕಿಸಿಕೊಂಡವರು ಕಾಲನ ಪ್ರವಾಹದಲ್ಲಿ ತೇಲಿ ಹೋಗುತ್ತಾರೆ.ಅಷ್ಟೇ ಬೇಗ ಇನ್ನೊಂದು ವಿಷಯ ಸಿಕ್ಕ ಕೂಡಲೇ ಜನ ಮರೆತು ಬಿಡುತ್ತಾರೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್