ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತತ್ವಜ್ಞಾನಿ ವಿಲಿಯಂ ಶೇಕ್ಸ್‌ಪಿಯರ್

ಪ್ರೊ.ಸಿದ್ದು ಯಾಪಲಪರವಿ

ಮನುಷ್ಯನಿಗೆ ಪ್ರಾಣ,ಸ್ವಾತಂತ್ರ್ಯ ಹಾಗೂ ದೃಷ್ಟಿ ಕನಿಷ್ಠ ಅಗತ್ಯಗಳು ಎಂದು ಹೇಳಿದ ವಿಲಿಯಂ ಶೇಕ್ಸ್‌ಪಿಯರ್ ಹುಟ್ಟು ಮತ್ತು ಸಾವಿನ ದಿನ. ಪುಸ್ತಕ ದಿನವೂ ಹೌದು.

ಮನುಷ್ಯನಿಗೆ ಹಸಿವು, ನಿದ್ರೆ ಮತ್ತು ಮೈಥುನ ದೈಹಿಕ ಬೇಕುಗಳು.
ಜ್ಞಾನಿಗಳು, ಸಂತರು ಇವುಗಳನ್ನು ನಿಗ್ರಹಿಸುತ್ತ ಅರ್ಥಪೂರ್ಣವಾಗಿ ಬದುಕಬಲ್ಲರು.

ನಾವು ಮನುಷ್ಯರು ನಮ್ಮ ಮನಸಿನ ವಿಕಾರಗಳಲಿ ಒದ್ದಾಡುತ್ತ ನರಳುತ್ತ ಕಾಲ ಕಳೆಯುತ್ತ ಕಾಲನ ಕರೆ ಬಂದಾಗ ಹೇಳದೇ ಕೇಳದೇ ಹೋಗಿಬಿಡುತ್ತೇವೆ, ಒಂದು ಸಣ್ಣ ಗುರುತನ್ನು ಬಿಡದೇ.

ಆದರೆ ಶೇಕ್ಸ್‌ಪಿಯರ್ ತನ್ನ ಮೂವತ್ತೇಳು ನಾಟಕಗಳ ಪಾತ್ರಗಳ ಮೂಲಕ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾನೆ. ಸಾಹಿತ್ಯದ ವಿದ್ಯಾರ್ಥಿಗಳು ಅವನ ಕುರಿತು ಹೇಳದೇ ಇರಲಾಗದು.

ನಾವೆಲ್ಲ ಉಪನ್ಯಾಸಕರಾದ ಹೊಸತರಲ್ಲಿ ಶೇಕ್ಸ್‌ಪಿಯರ್ ಬಿಟ್ಟು ಬೇರೇನೂ ಕಲಿಸಲಾಗುದಿಲ್ಲ ಎಂಬ ಸ್ಥಿತಿ ಇತ್ತು. ಹತ್ತಾರು ವರ್ಷಗಳ ಪಯಣದ ನಂತರ ಶೇಕ್ಸ್‌ಪಿಯರ್ ಮೋಹದಿಂದ ಹೊರಬರಲು ಒದ್ದಾಡಬೇಕಾಯ್ತು.

ಬದುಕಿನ ಪಾಠ ನೆನಪಿಸುವ ಅವನ ದುರಂತ ನಾಟಕಗಳು.
ಅಸಾಮಾನ್ಯ ಪಾತ್ರಗಳು ಮಾತ್ರ ನಮಗೆ ಆದರ್ಶವಾಗಬಲ್ಲವು ಎಂಬ ಸಿದ್ಧಾಂತ ಇಟ್ಟುಕೊಂಡು ದುರಂತ ನಾಯಕರುಗಳನ್ನು ಸೃಷ್ಟಿಸುತ್ತಾನೆ.‌

‘ಒಥೆಲೋ, ಕಿಂಗ್ ಲಿಯರ್, ಹ್ಯಾಮ್ಲೆಟ್ ಹಾಗೂ ಮ್ಯಾಕ್ ಬೆತ್ ಪಾತ್ರಗಳ‌‌ tragic flaw ಹೇಗೆ ವ್ಯಕ್ತಿ ಹಾಗೂ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ರಸವತ್ತಾಗಿ ನಿರೂಪಿಸಿದ್ದಾನೆ.’

ಓದುತ್ತ,ಕಲಿಯುತ್ತ,ಕಲಿಸುತ್ತ ಕಾಲ ಕಳೆಯುವ ನಮಗೆ ಅವನು ಈಗಲೂ ದಂತಕಥೆ.
ಹತ್ತು ವರ್ಷಗಳ ಹಿಂದೆ ಇಂಗ್ಲೆಂಡಿನ ಪ್ರವಾಸದಲ್ಲಿ ನಾನು ತುಂಬ ಇಷ್ಟಪಟ್ಟು ನೋಡಿದ ಅವನ ಊರು, ಮನೆ ಎಂದಿಗೂ ಮರೆಯಲಾಗದು. ಅವನೊಬ್ಬ ಅದ್ಭುತ ಸಂತ. ಮನುಷ್ಯನ ಮನಸ್ಥಿತಿ ಅರ್ಥಮಾಡಿಕೊಳ್ಳುವ ಹತ್ತಾರು ಪಾತ್ರಗಳ‌ ಮೂಲಕ ಜೀವನ ಸಾರ ತಿಳಿಸುತ್ತಾನೆ.

ಒಥೆಲೋನ ದುಡುಕು ಮತ್ತು ಸಂಶಯದಿಂದ ಪ್ರಾಣ ಕಳೆದುಕೊಳ್ಳುವ ಡೆಸ್ಡಿಮೋನಾ, ತನ್ನ ಮಂದಗತಿಯ ತೀರ್ಮಾನಗಳಿಂದ ಅಂತ್ಯ ಕಾಣುವ ಹ್ಯಾಮ್ಲೆಟ್, ಭ್ರಮೆ ಮತ್ತು ಅವಾಸ್ತವ ಪ್ರೀತಿಯ ನಿರೀಕ್ಷೆಗಳಿಂದ ಹುಚ್ಚನಾಗುವ ದೊರೆ ಲಿಯರ್ ಹಾಗೆ ಅತಿಯಾದ ಮಹತ್ವಾಕಾಂಕ್ಷೆ‌ ಇಟ್ಟುಕೊಂಡು ನಂಬಿದ ರಾಜನನ್ನೇ ಕೊಲ್ಲುವ ಮ್ಯಾಕ್ಬೆತ್ ಪಾತ್ರಗಳು ನಮ್ಮ ಒಳಗೆ ನಮಗರಿವಿಲ್ಲದಂತೆ ಜೀವಂತವಾಗಿರುವ ಗುಣಗಳಾಗಿವೆ. ನಾವು ಕೂಡ ನಾಲ್ಕು ಪಾತ್ರಗಳ ಸಮೀಕರಣದಂತಿದ್ದೇವೆ.‌

ಸಾಮಾನ್ಯ ಕುರಿ ಕಾಯುವ ಹಳ್ಳಿ ಹುಡುಗ, ತನ್ನ ಜೀವನಾನುಭವದ ಮೂಟೆ ಹೊತ್ತುಕೊಂಡು ಲಂಡನ್ ಸೇರುತ್ತಾನೆ. ತಲೆ ತುಂಬಾ ಬರೀ ಕನಸುಗಳು, ಕೈಯಲ್ಲಿ ಕಸುವಿರದಿದ್ದರೂ ನನಸು ಮಾಡುವ ಹುಮ್ಮಸ್ಸಿಗೇನೂ ಕೊರತೆ ಇರಲಿಲ್ಲ. ಥಿಯೇಟರ್ ಹೊರಗೆ ಕುದುರೆ ಕಾಯುತ್ತ ನಾಟಕಗಳಲಿ ತನ್ಮಯನಾಗಿ ಮುಂದೆ ನಟನಾಗಿ, ನಾಟಕ ರಚಿಸಿ, ನಿರ್ದೇಶಿಸಿ ಕೊನೆಗೆ ಬಹು ದೊಡ್ಡ ಗ್ಲೋಬ್ ಥಿಯೇಟರ್ ಮಾಲೀಕನೂ ಆಗುವದೆಂದರೆ ಪವಾಡವೇ!

ಇಂಗ್ಲೆಂಡ್ ಎಂದರೆ ಶೇಕ್ಸ್‌ಪಿಯರ್ ನಾಟಕಗಳು ಎಂಬ ಪ್ರಸಿದ್ಧಿ ಅರಿತ ಎಲಿಜಾಬೆತ್ ರಾಣಿ ಅವನ ಪ್ರತಿಭೆಗೆ ಬೆರಗಾದದ್ದೀಗ ಮರೆಯಾಗದ, ಮರೆಯಲಾಗದ ಇತಿಹಾಸ.

ಅವನ ನಾಟಕಗಳ ಸೊಕ್ಕಡಗಿಸಲು ತಿಣುಕಾಡುವ university wits ಗಳು ಅವನೇರಿದ ಎತ್ತರಕೇರಲೇ ಇಲ್ಲ. ವಿಶ್ವವಿದ್ಯಾಲಯ ಪ್ರಾಧ್ಯಾಪಕರುಗಳಿಗೆ ಸೈದ್ಧಾಂತಿಕ ಸವಾಲೊಡ್ಡಿದರೂ ಆ ಅಹಮಿಕೆ ತಟ್ಟಿಸಿಕೊಳ್ಳದಿರಲು ಕಾರಣ ಅವನ ಆಧ್ಯಾತ್ಮಿಕ ಆಲೊಚನಾ ಕ್ರಮ.

ಅಲ್ಪರಿಗೆ ಅಹಮಿಕೆಯ ಸೋಂಕು ತಗುಲಿ ವಿನಾಶವಾಗುತ್ತಾರೆ ಎಂಬ ಸತ್ಯ ಅವನಿಗೆ ಗೊತ್ತಿದ್ದರಿಂದ ಅವನಿಗೆ ಅವನೇ ಸಾಟಿ. ತಾವು ತುಂಬಾ ತಿಳಿದವರು ಎಂಬ ಅಹಮಿಕೆಯಲಿದ್ದ university wits ಗಳ ಯೋಗ್ಯತೆಯನ್ನು ಅರಿವು ಮಾಡಿಕೊಟ್ಟ ಧೀಮಂತ.

ಶೇಕ್ಸ್‌ಪಿಯರ್ ನಾಟಕದ ಜೀವಾಳವೆಂದರೆ‌ ಸಂಭಾಷಣೆ. ಕಾವ್ಯಮಯ ಹರಿತ ಮಾತುಗಳು ಮನುಷ್ಯನ ಎದೆ ಗೂಡು ಹೊಕ್ಕು ಬಿಡುತ್ತವೆ. ಮನುಷ್ಯನ ಇತಿಮಿತಿಗಳನ್ನು, ಮನದಾಳದ ಸ್ವಾರ್ಥ, ತಿಕ್ಕಲುತನ, ಅಸೂಯೆ, ಕಾಮ, ದ್ವೇಷ, ಭ್ರಮೆ ಹಾಗೂ ಅವನನ್ನು ನುಂಗಿ ಹಾಕುವ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ.

ಇಡೀ ಜಗತ್ತು ಬೆಚ್ಚಿ ಬೀಳುವಂತೆ ನಿರಂತರವಾಗಿ ಬರೆದು ಸಿರಿವಂತಿಕೆಯ ಉತ್ತುಂಗ ತಲುಪಿ ಬದುಕಿನ ಸಂತೃಪ್ತಿಯನ್ನು ತನ್ನ ಜೀವನದಲ್ಲಿ ಅನುಭವಿಸುತ್ತಾನೆ.‌

Way back to roots ಎಂಬಂತೆ ತನ್ನ ಕೊನೆ ದಿನಗಳನ್ನು ತಾನು ಹುಟ್ಟಿದ Stratford upon Avon ನಲ್ಲಿ ಕಳೆಯುತ್ತಾನೆ. ಜಗತ್ತಿನ ಎಲ್ಲ ಭಾಷೆಗಳ ಮೂಲಕ ಅವನ ನಾಟಕಗಳು ಕೋಟ್ಯಂತರ ಪ್ರೇಕ್ಷಕರ ಮನಸು ಗೆದ್ದಿವೆ.

ಶೇಕ್ಸ್‌ಪಿಯರ್ ಜನ್ಮಸ್ಥಳ​

ಲಕ್ಷಾಂತರ ಸಾಹಿತ್ಯ ವಿದ್ಯಾರ್ಥಿಗಳು ಅವನ ನಾಟಕಗಳ ಮೇಲೆ ಇಂದಿಗೂ ಸಂಶೋಧನೆ ಮಾಡುತ್ತಲೇ ಇದ್ದಾರೆ.

ಪ್ರತಿ ಓದಿನಲ್ಲಿ ಅವನ ಪಾತ್ರಗಳು ಭಿನ್ನವಾಗಿ ಮೈದೆರೆಯುತ್ತವೆ.
ರೋಮಿಯೋ ಜೂಲಿಯೆಟ್‌, ಮರ್ಚೆಂಟ್ ಆಫ್ ವೆನಿಸ್, ಜೂಲಿಯಸ್ ಸೀಸರ್, ಮಿಡ್ ಸಮರ್ ನೈಟ್ ಡ್ರೀಮ್, ಕಾಮೆಡಿ ಆಫ್ ಎರರ್ಸ್ ಹೀಗೆ ಎಲ್ಲಾ ಜನಪ್ರಿಯ ಮತ್ತು ಜನಪ್ರಿಯವಲ್ಲದ ನಾಟಕಗಳಲ್ಲಿ ನಾವೆಲ್ಲ ಅಡಗಿ ಇಣುಕಿ ನೋಡುತ್ತಲಿದ್ದೇವೆ.

ಬದುಕಿನ ವಿವಿಧ ಘಟನೆಗಳು, ಪಾಠ ಕಲಿಸುವ ಭಿನ್ನ ವ್ಯಕ್ತಿಗಳು ಅವನ ನಾಟಕಗಳಲಿ ಕಣ್ಣಿಗೆ ಕಟ್ಟುವಂತೆ ಕುಣಿಯುತ್ತಾರೆ. ನಾವು ಅಲ್ಪಮತಿಗಳು ಏನೇ ಓದಿದರು, ನೋಡಿದರು, ಕೇಳಿದರು ನಾವೇ ಕಟ್ಟಿಕೊಂಡ ಬಲೆಯಲ್ಲಿ ಸಿಕ್ಕು ಒದ್ದಾಡಿ ಸಾಯುತ್ತೇವೆ. ಶೇಕ್ಸ್‌ಪಿಯರ್ ಪಾತ್ರಗಳಿಗೆ ಸಿಕ್ಕ ಕೆಥಾರ್ಸಿಸ್ ಕೂಡ ನಮಗೆ ದಕ್ಕದೇ ಇರುವುದು ನಮ್ಮ ಮಿತಿ.

ಆಧುನಿಕ ದಿನಗಳ behavioral science ಹೇಳುವ ಅನೇಕ ಸತ್ಯಗಳನ್ನು ಶೇಕ್ಸ್‌ಪಿಯರ್ ಎಂದೋ ಹೇಳಿದ್ದಾನೆ. ಜೀವನಶೈಲಿ ನಿರ್ವಹಣೆ ಹಾಗೂ ಮನುಷ್ಯನ ಗುಣಸ್ವಭಾವ ಅರಿಯುವ ಉಪಕ್ರಮ ಅವನ ನಾಲ್ಕು tragic ಪಾತ್ರಗಳಲ್ಲಿ ಸಿಗುತ್ತದೆ.

ವರ್ತಮಾನದ ರಾಜಕಾರಣದ ಮಾತುಗಳನ್ನು ಕೇಳಿದಾಗ ಬ್ರೂಟಸ್ ನೆನಪಾಗುತ್ತಾನೆ.
ಬೆನ್ನಿಗೆ ಚೂರಿ ಹಾಕುವ ಮಾತುಗಳು ಸೀಸರ್ ಅಂತ್ಯದ ಮುಂದೆ ಯಾವ ಲೆಕ್ಕ!

ಹೀಗೆ ನನಗೆ ನಿತ್ಯವೂ ಹೊಸ ಮದುಮಗನಂತೆ ಕಂಗೊಳಿಸುವ ವಿಲಿಯಂ ಶೇಕ್ಸ್‌ಪಿಯರ್, ನಾನು ಸಂಕಷ್ಟದಲ್ಲಿದ್ದಾಗ ಕೈಹಿಡಿದು ನಡೆಸುತ್ತಾನೆ. ತಪ್ಪು ಮಾಡಿದಾಗ ಒಳಮನಸ ಎಚ್ಚರಿಸುತ್ತಾನೆ.
“ಒಂದರೆ ಗಳಿಗೆ ನನ್ನ ದುರಂತ ನಾಯಕರು ಮತ್ತವರ tragic flaw ನೆನಪಿಸಿಕೋ ದುರಂತ ಕಾಣಬೇಡ” ಎಂದು ಇರಿಯುತ್ತಾನೆ.

ನಮ್ಮ ಸಮಯ ಪ್ರಜ್ಞೆ ಮತ್ತು ಸಮೂಹ ಪ್ರಜ್ಞೆಯ ಸಂಕೇತವಾಗಿರುವ ಶೇಕ್ಸ್‌ಪಿಯರ್ ಹುಟ್ಟು ದಿನದ ನೆಪದಲ್ಲಿ ಅವನ ಕುರಿತು ಒಂದಿಷ್ಟು ಹಂಚಿಕೊಂಡೆ.
ಪುಸ್ತಕ ಓದುವ ಹುಚ್ಚು ಹಿಡಿಸಿದ ಶೇಕ್ಸ್‌ಪಿಯರ್ ಹಾಗೂ ಪುಸ್ತಕ ದಿನಾಚರಣೆಯ ಶುಭಾಶಯಗಳು.