- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ತಿರುವುನಂತರ,ತಿರುವು ನಂತರ, ನಂತರ ಐತಂದಿರಿ ಹೈದರಾಬಾದಿಗೆ
ಹುಲ್ಲು ಚಿಗುರಿಸಿದಿರಿ ಧಗೆ ಕಾರುವ ಬಂಡೆಗಳಲಿ
ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ಮೇಲಿನ ಎಲರ್ ನಿಂದ ತೇಲಿ ಬಂದ
ಎತ್ತರದ ನುಡಿಗಳನು, ವಿಸ್ತಾರ ಕಡಲನ್ನು ಒಡಲೊಳಗೆ ತಂದಿರಿ ಹೊತ್ತು-
ಬಂದ ಗಳಿಗೆ ಒಳಿತಾಗಿತ್ತು, ಒಳಗೆ ಬರ ಬರುತ ನಿಮ್ಮೊಳಗೆ ಶಹರು
ನಿಮ್ಮೊಳಗಾಗಿ , ಮಾಯವಾಯಿತು ಕ್ಲಾಕ್ ಟವರ್ ಮೇಲಿನ ಕಾಗೆ
ಜನ ಕಡಲು ಮನ ಕಡಲು ಮಾಡಿ ನೀವು ಒಡೆದಿದ್ದಿರಿ ಒಗಟ
ಯಾವುದೂ ಸುಮ್ಮನೆ ಹಾಗೇ ಬಿಡುವದು ಅಲ್ಲ ನಿಮ್ಮ ಚಟ, ಗೊತಿಲ್ಲವೆ ನಿಮ್ಮ ಹಟ
ಶಹರಿನ ಆವಾಹನೆ ಇಂಚಿಂಚು, ಅದರ ಒಂದೊಂದು ಅಂಗವ ನಿರುಕಿಸುತ ಪರಿಕಿಸುತ
ನೋಡುವ ನಿಮ್ಮ ಸೂಕ್ಷ್ಮ ನೋಟಕೆ ಕಂಡಿತು
ಇದ್ದಿಲಂಗಡಿಯ ಪೆಂಟಯ್ಯನ ಅಂಗಿ
ಅಪರೂಪಕ್ಕೆ ಉಟ್ಟ ಅವನ ಅಚ್ಚ ಹೊಸ ಬಿಳಿ ಅಂಗಿ ಕಪ್ಪಾದಾಗ ಉಟ್ಟಂದ ದಿನವೇ
ಹಳಹಳಿಸಿ ನೊಂದು ಅಂದು ಬಿಟ್ಟಿರಿ ಮನದ ಮಾತು, ನಮಗೇಕೆ ಹರಿಯಲಿಲ್ಲ ಇದರೆಡೆಗೆ ಗಮನ
ಶೀತದ ಸಮಯದಲಿ ತುಂಬಿಕೊಂಡು ಬರುವ ಸೀತಾಫಲದ ಬಂಡಿಗಳನು ಕಂಡಿರಿ
ದಿನ ನಸುಕು ಬಂದು ಶಹರಿನ ಬೀದಿಗಳನು ಹಣ್ಣು ಮಯ ಮಾಡಿದವರು
ತಾವೇ ಹಣ್ಣಾಗಿ ಹಿಂತಿರುಗಿ ಹೋಗುವದ ನೋಡಿ ಮಮ್ಮಲ ಮರುಗಿದಿರಿ
ಕಲಿಸಿದಿರಿ ದುಸ್ತರ ದುರ್ಗಮ ರಸ್ತೆಗಳ ದಾಟುವದ , ನಿಬಿಡ ಆಬಿಡ್ಸೂ ಸೇರಿ
ಮುಂದೆ ಹೊರಟಿತು ತಾರನಾಕಕೆ ನಿಮ್ಮ ಸವಾರಿ, ನಿಮಗೆ ತಾರೆಗಳೆಣಿಸುವ ತರಾತುರಿ
ಕಣ್ಣು ಮಿಟುಕಿಸಿದ ತಾರೆಗಳ ಎಣಿಸುತ್ತ ನಿಂತಿರಿ ಚೌಕದಲಿ, ಮಿರ್ಚಿ ಬಜ್ಜಿ ಕಡಿಯುತ್ತ
ಕುಳಿತು ನೋಡಿದೆವು ಬೆರಗುಗಣ್ಣಿನಿಂದ, ಅರಗಿಸಿಕೊಂಡು ಎಲ್ಲವನು
ಹುಟ್ಟಿ ಬೆಳೆದ ನಮ್ಮೂರ ಗುಟ್ಟುಗಳ ನಮಗೆ ಅರುಹಿದಿರಿ, ತೋರಿದಿರಿ ನಮಗೆ ನೋಡಿಯೂ ಕಾಣದ
ಹೈದರಾಬಾದನ್ನು ನಿಮ್ಮ ಅಂಗೈಯ ಕನ್ನಡಿಯಲ್ಲಿ ತಿರುಗಿ ಗಲ್ಲಿ ಗಲ್ಲಿ
ಹೊತ್ತಾಯಿತು ಮತ್ತೆ ಹೊತ್ತಿಗೆಗಳ ಭೇಟಿಗೆ, ಗ್ರಂಥಾಲಯ ಸಾಕಾಗಲಿಲ್ಲ ತಣಿಸಲು ನಿಮ್ಮ ಹಸಿವು
ಸಾಸಿವೆಯ ಕಾಳಾಯ್ತೆ ಆ ಎಲ್ಲ ಕೋಶ, ಆಲಯವ ಬಿಟ್ಟು ಬಂದಿರಿ ಬೀದಿ ಫುಟ್ ಪಾತ್ ಗಳಲಿ
ಅರಸುತ ಗ್ರಾಸ
ನಿಮ್ಮ ಮಿದುಳು- ಮನಗಳ ಗಾತ್ರಕೆ
ಎಲ್ಲವೂ ಹ್ರಾಸ,
ಒಂದು ತಾಣದಲಿ ನಿಲ್ಲಲು ಆಗದ ನೀವು
ಬಂದಿರಿ ಕಾಚಿಗುಡಾ ರೈಲು ನಿಲ್ದಾಣಕೆ. ರೈಲು ಕಿಟಕಿಗಳಿಂದ ಹೊರ ತೂರಿ ಕೈ ಬೀಸುವ ಕೈಗಳ
ನೋಡಿ, ಯಾವ ಕೈ ಯಾರ ಕದ ತಟ್ಟಿತು ಎಂದು ಹಾಕಿದಿರಿ ಲೆಕ್ಕಾಚಾರ, ನಿಮ್ಮ ಅಂತಃಕರಣ ಅಪಾರ
ಬೀರಿದಿರಿ ಎಲ್ಲೆಡೆ ಒಲವು ತುಂಬಿದ ನೋಟ, ನೀವು ಉಲಿದ ಮೃದು ಮಾತುಗಳಿಗೆ ಕರಗಿವೆ ಶಹರಿನ ಬಂಡೆಗಳು
ಹುಸೇನ್ ಸಾಗರದಲಿ ನಿಂತ ನಿರ್ಲಿಪ್ತ ಬುದ್ಧನೂ ಮಂದಸ್ಮಿತ ನಿಮ್ಮ ಕವನಗಳನಾಲಿಸಿ
ಅಕ್ಕರಗಳ ಸಂಪತ್ತು ತಂದಿರಿ ಜೊತೆಯಲ್ಲಿ ‘ಆಬಾದು’ ಮಾಡಿದಿರಿ ನಗರವ
ಮನದಾಳದಿಂದ ನಿರಾಳವಾಗಲು ಹರಿಯ ಬಿಟ್ಟ ನುಡಿಗಳಿಗೀಗ ಗಡಿಗಳ ಸೀಮೆಯಿಲ್ಲ
ಹರಡಿ ಎಲ್ಲೆಡೆ ಈಗ ಉಸಿರಾಡುತಿದೆ ಶಹರು ನಿಮ್ಮ ಕವನಗಳನೇ
ಸಿಂಧು-ಬಂಧುಗಳ ಬಿಟ್ಟು ಬಂದು ನೆಲಸಿದ ನೆಲವ ಹಾಡಿ ಹೊಗಳಿದ
ಅಕ್ಕರದ ಮಾಂತ್ರಿಕರೆ ನಿಮಗಿದೋ ನಮನ, ನಿಮಗಿದೋ ನಮನ
ಹೆಚ್ಚಿನ ಬರಹಗಳಿಗಾಗಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ