- ದೀಪಾವಳಿ - ಜೂನ್ 16, 2021
- ತೆರೆಯಲು ಮರೆತ ಪುಟಗಳ ನಡುವೆ.. - ಮೇ 1, 2021
- ಅಮ್ಮನಿಗೊಂದು ಸ್ಮಾರ್ಟ್ ಫೋನ್ - ಫೆಬ್ರುವರಿ 20, 2021
“ನಿಂಗೆ ಡಿಂಗನಿಗಿಂತಲೂ ಜಾಸ್ತಿ ಶಕ್ತೀನಾ?”
“ಓ, ಡಿಂಗ ಎಂತ, ಅವರಪ್ಪನಿಗಿಂತಲೂ ಜಾಸ್ತಿ ಶಕ್ತಿ ನಂಗೆ!”
“ಏನಂದೇ? ತಗೋ ಹಾಗಾದ್ರೆ.. ಡಿಶೂಂ! ಡಿಶೂಂ!”
ಇದು ಯಾವುದೋ ಮಕ್ಕಳ ಕಥೆಯ ಕಾಲ್ಪನಿಕ ದೃಶ್ಯವಲ್ಲ. ಮೂರನೆಯದೋ, ನಾಲ್ಕನೆಯದೋ ತರಗತಿಯಲ್ಲಿದ್ದಾಗ ನನ್ನದೇ ಜೀವನದಲ್ಲೇ ನಡೆದ ಒಂದು ಭಯಾನಕ ಆ್ಯಕ್ಷನ್ ಘಟನೆ. ಇಲ್ಲಿ ಹೊಡೆದವನು ನಾನಾದರೆ ಹೊಡೆತ ತಿಂದದ್ದು ನನಗಿಂತ ಕನಿಷ್ಠ ಎರಡು ವರ್ಷಕ್ಕಾದರೂ ಚಿಕ್ಕವನಾದ ಒಬ್ಬ ಪಾಪದ ಹುಡುಗ. (ಅವನ ಜಾಗದಲ್ಲಿ ನನ್ನದೇ ವಯಸ್ಸಿನ ಬೇರ್ಯಾರಾದರೂ ಇದ್ದಿದ್ದರೆ ನನ್ನನ್ನು ಕಾಪಾಡಲಿಕ್ಕೆ ಸಾಕ್ಷಾತ್ ಆ ಡಿಂಗನೇ ಬರಬೇಕಾಗುತ್ತಿತ್ತು ಎಂಬುದು ಬೇರೆ ವಿಷಯ). ಹೀಗೆ ಡಿಂಗನ ಶಕ್ತಿ, ಸಾಮರ್ಥ್ಯಗಳಿಗೆ ಅವಮಾನ ಮಾಡಿದ ದುಷ್ಟ ಬಾಲಕನೊಬ್ಬನ ಡೊಕ್ಕೆಗೆ ನಾನು ಎರಡು ಬಾರಿಸುವ ಮೂಲಕ ಈ ಮಾರಾಮಾರಿ ಅಂತ್ಯವಾಯಿತು.
ನಾನು ಮಾತ್ರವಲ್ಲ, ಡಿಂಗನ ಬಗ್ಗೆ ಒಂದೇ ಒಂದು ಮಾತಂದರೂ ತೊಂಭತ್ತರ ದಶಕದ ಎಷ್ಟೋ ಮಕ್ಕಳು ಕರಾಟೆ ಕಿಂಗರಾಗಿ ಎದುರಿದ್ದವರ ಮೇಲೆ ಪ್ರಹಾರ ಮಾಡುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಬಾಲಮಂಗಳ ಎನ್ನುವ ಆ ಮಾಯಾ ಪುಸ್ತಕದಲ್ಲಿ ಬರುವ ಯಾವುದೇ ಹೀರೋನ ಬಗ್ಗೆ ಕೆಟ್ಟ ಮಾತಂದರೂ ಅಲ್ಲಿ ನಡೆಯುತ್ತಿದ್ದುದು ಮಲ್ಲಯುದ್ಧವೇ!
********
ಆ ಹೊತ್ತಿಗೆ ಇಂದಿನಂತೆ ಮನೆಮನೆಯಲ್ಲೂ ಟೀವಿಯಿರಲಿಲ್ಲ. ಇದ್ದರೂ ಅದರಲ್ಲಿ ಕನ್ನಡದ ಒಂದೇ ಒಂದು ಪದ ಕೇಳಲಿಕ್ಕೆ ಅಖಂಡ ಮುಕ್ಕಾಲು ದಿನ ಕಾಯಬೇಕಿತ್ತು. ಹಾಗೆ ಕಾದ ಮೇಲಾದರೂ ಅದರಲ್ಲಿ ಬರುತ್ತಿದ್ದ ಕೃಷಿದರ್ಶನವಾಗಲೀ, ವಾರ್ತಾಪ್ರಸಾರವಾಗಲೀ, ಸಾಕ್ಷಿಚಿತ್ರಗಳಾಗಲೀ ಮಕ್ಕಳಾದ ನಮಗೆ ಅರ್ಥವಾಗುತ್ತಿರಲಿಲ್ಲ. ಇಂತಹಾ ಸಮಯದಲ್ಲಿ ನಮ್ಮೊಳಗೆ ನಮ್ಮದೇ ರೀತಿಯಲ್ಲಿ ಕಲ್ಪನಾ ಲೋಕವನ್ನು ಅರಳಿಸುತ್ತಿದ್ದುದು ಬಾಲಮಂಗಳ, ತುಂತುರು, ಚಂಪಕ ಮುಂತಾದ ಪುಸ್ತಕಗಳು. ಪಾಕ್ಷಿಕ ಅಥವಾ ಮಾಸಿಕವಾಗಿ ಬರುತ್ತಿದ್ದ ಇವುಗಳಲ್ಲಿನ ಪ್ರತಿಯೊಂದು ಪಾತ್ರವೂ ನಮ್ಮ ಬಾಲ್ಯದ ಗೆಳೆಯನೇ! ಭೀಕರ ಜೀವಿ ಡಿಂಗನನ್ನು ತನ್ನ ಮಾಂತ್ರಿಕ ಬಳೆಯಿಂದ ಬಂಧಿಸಿದ ದಿನ ನಾನಂತೂ ಬಹಳ ದುಃಖಿತನಾಗಿದ್ದೆ. ಅದೇ ಡಿಂಗ ಮುಂದಿನ ಸಂಚಿಕೆಯಲ್ಲಿ ಚೇತರಿಸಿಕೊಂಡು ಅದೇ ಭೀಕರಜೀವಿ, ಕೇರಗ, ಕರಿಂಗಾಡ, ಕ್ರೂರಿಸಿಂಹ ಮುಂತಾದ ಖಳ ಪ್ರಾಣಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದಾಗ ಜಿಂಕೆ, ಮೊಲ, ಮೊಮಲಿ ಕೋತಿ ಮುಂತಾದ ಪ್ರಾಣಿಗಳು ಕಥೆಯೊಳಗಿನ ಕಾಲ್ಪನಿಕ ಲೋಕದಲ್ಲಿ ವಾರೆವ್ಹಾ ಎಂದು ಚಪ್ಪಾಳೆ ತಟ್ಟುತ್ತಿದ್ದರೆ ಹೊರಗಿನ ನಿಜ ಪ್ರಪಂಚದಲ್ಲಿ ನನ್ನಂಥಹಾ ಅದೆಷ್ಟೋ ಮಕ್ಕಳು ಭಲೇ ಎಂದು ಕುಣಿದು ಕುಪ್ಪಳಿಸಿದ್ದರು.
ಇಂದಿನ ಮಕ್ಕಳು ಸ್ಪೈಡರ್ ಮ್ಯಾನ್, ಐರನ್ ಮ್ಯಾನ್ ರನ್ನು ಅನುಕರಿಸುವಂತೆ ನಾವೂ ಈ ಪುಸ್ತಕದ ಹೀರೋಗಳನ್ನು ಅನುಕರಿಸುತ್ತಿದ್ದೆವು. ಇದೇ ಡಿಂಗನಿಂದ ಪ್ರಭಾವಿತನಾದ ನನ್ನ ಗೆಳೆಯನೊಬ್ಬ ತಮ್ಮ ಮನೆಯ ಬೆಕ್ಕನ್ನು ತನ್ನ ಕೈಯಾರೆ ಒಂದು ಕಂಬಕ್ಕೆ ಕಟ್ಟಿಹಾಕಿದ್ದ. ಬಳಿಕ ಕುತ್ತಿಗೆಗೊಂದು ಕೆಂಪು ಟವಲ್ ಹಾಕಿಕೊಂಡು ಸಾಕ್ಷಾತ್ ಡಿಂಗನಾಗಿ ತಾನೇ ಕಟ್ಟಿಹಾಕಿದ ಬೆಕ್ಕನ್ನು ಕಾಪಾಡಲೆಂದು ಕಟ್ಟೆಯೊಂದರ ಮೇಲಿಂದ ಧುಮುಕಿದ್ದ. ಪಾಪ, ಇವನು ಡಿಂಗ ಎನ್ನುವುದು ಗುರುತ್ವಾಕರ್ಷಣೆಗೇನು ಗೊತ್ತು? ಮೇಲೆ ಹಾರುವ ಬದಲು ಅವನು ಕಾಲು ಮೇಲಾಗಿ ನೆಲಕ್ಕೆ ಬಿದ್ದಿದ್ದ.
ಇಂತಹಾ ಯಡವಟ್ಟೊಂದು ನಮ್ಮನೆಯಲ್ಲೂ ನಡೆಯಿತು. ಆಟದ ಮಧ್ಯೆ ನಡೆಯುತ್ತಿದ್ದ ಮಾರಾಮಾರಿಗಳಲ್ಲಿ ಸದಾ ನನ್ನಿಂದ ಪರಾಜಿತರಾಗುತ್ತಿದ್ದ ನನ್ನ ತಮ್ಮಂದಿರಿಬ್ಬರು ವಯಸ್ಸಿನಲ್ಲಿ ಮೂರ್ನಾಲ್ಕು ವರ್ಷಕ್ಕೆ ದೊಡ್ಡವನಾದ ನನ್ನನ್ನು ಸೋಲಿಸಲು ಮಾಸ್ಟರ್ ಪ್ಲಾನೊಂದನ್ನು ಮಾಡಿದರು. ಶಕ್ತಿಮದ್ದು ಧಾರಾವಾಹಿಯಲ್ಲಿನ ವೈದ್ಯರಂತೆಯೇ ತಾವೂ ಶಕ್ತಿಮದ್ದು ತಯಾರಿಸತೊಡಗಿದರು! ಅದನ್ನು ತಿಂದು ಲಂಬೋದರ, ವೀರಬಾಲಕರಂತೆಯೇ ಶಕ್ತಿವಂತರಾಗಿ ನನ್ನನ್ನು ಥಳಿಸುವ ಯೋಜನೆ ಹಾಕಿದ ಅವರು ಲಕ್ಕಿ, ಲಂಟಾನ, ಕಿಸ್ಕಾರು ಮುಂತಾದ ಗಿಡ, ಬೇರುಗಳನ್ನೆಲ್ಲಾ ಅರೆದು, ತೇಯ್ದು ವಿಚಿತ್ರವಾದ ಮಿಶ್ರಣವೊಂದನ್ನು ತಯಾರಿಸಿ ತಿಂದೇ ಬಿಟ್ಟರು! ಬಾಯಿಯ ಮೂಲಕ ಒಳಬಂದ ಈ ವಿಚಿತ್ರ ಮಿಶ್ರಣ ಯಾವ ವೈದ್ಯಕೀಯ ಪುಸ್ತಕದ ಯಾವ ಪುಟದಲ್ಲಿ ಹೇಳಿದ್ದು ಎಂಬುದೇ ಅರ್ಥವಾಗದೆ ಕಕ್ಕಾಬಿಕ್ಕಿಯಾದ ಅವರ ಜೀರ್ಣಾಂಗವ್ಯೂಹ ಕೊನೆಗೆ ಹೊಟ್ಟೆನೋವು ಬರಿಸುವ ಮೂಲಕ ತನ್ನ ಮೇಲೆ ಪ್ರಯೋಗ ನಡೆಸಿದ ಅವರಿಬ್ಬರ ಮೇಲೂ ಮುಯ್ಯಿ ತೀರಿಸಿಕೊಂಡಿತು.
********
‘ಬಾಲಮಂಗಳ’ದಲ್ಲಿನ ಕಥೆಗಳ ಮೇಲೆ ಆಟ ಕಟ್ಟಿ ಆಡುತ್ತಿದ್ದ ನಾನು ‘ತುಂತುರು’ವಿಗೆ ತಲುಪಿದ ಬಳಿಕ ನಾನಾಗಿಯೇ ಏನಾದರೂ ಬರೆಯುವ ಹಂತಕ್ಕೆ ತೇರ್ಗಡೆಯಾದೆ. ಈ ಹಂತದಲ್ಲಿ ನಾವೊಂದು ಕಥೆ ಬರೆದು ಕಳಿಸಿದರೆ ಸಾಕು, ಪತ್ರಿಕೆಯವರೇ ಅದಕ್ಕೆ ಸಂಪೂರ್ಣ ಚಿತ್ರ ಬರೆದು ಪ್ರಕಟಿಸುತ್ತಾರೆ ಎಂಬ ಮುಗ್ಧ ನಂಬಿಕೆಯೊಂದು ನನ್ನದಾಗಿತ್ತು. ಅಂತೆಯೇ ನಾನು ಒಂದಷ್ಟು ಕಥೆಗಳನ್ನು ಬರೆದು ಕಳಿಸಿದ್ದೆ ಕೂಡಾ. ಕಥೆಯನ್ನು ಪೋಸ್ಟ್ ಮಾಡಿದ ಮರುದಿನವೇ ಮುಂದಿನ ಸಂಚಿಕೆಯಲ್ಲಿ ನನ್ನ ಕಥೆ ಬರ್ತದೆ ಎಂದು ಗೆಳೆಯರು ಹಾಗೂ ಮನೆಯವರೆದರು ಬಡಾಯಿ ಕೊಚ್ಚುತ್ತಿದ್ದೆ.
ಆದರೆ ನನ್ನ ಕಥೆಗಳನ್ನು ಪ್ರಕಟಿಸಲಿಕ್ಕೆ ಸಂಪಾದಕರಿಗೆ ದೊಡ್ಡ ತೊಡಕೊಂದಿತ್ತು. ಅದೇನೆಂದರೆ ನಾನು ಬರೆದ ಕಥೆಗಳು ಬೇರ್ಯಾವುದೋ ಆಗಿರದೆ ನೇರವಾಗಿ ಆ ಪತ್ರಿಕೆಯ ಕಥೆಗಳ ತದ್ರೂಪವೇ ಆಗಿರುತ್ತಿದ್ದವು! ಕಿರೋನಿಯೋ, ಭವಾನಿ, ಮಂಡೂರಾಯ ಮುಂತಾದ ಕಥೆಗಳನ್ನೇ ನನಗೆ ತೋಚಿದಂತೆ ಬದಲಾಯಿಸಿ ಕಳಿಸುತ್ತಿದ್ದೆ. ಪತ್ರಿಕೆಯಲ್ಲಿನ ಡ್ರಾಗನ್ ಬಾಯಿಂದ ಬೆಂಕಿ ಉಗುಳಿದರೆ ನನ್ನ ಕಥೆಯಲ್ಲಿನ ಡ್ರ್ಯಾಗನ್ ಮೂಗಿಂದ ಬೆಂಕಿ ಬಿಡುತ್ತಿತ್ತು. ಪತ್ರಿಕೆಯಲ್ಲಿ ಏಲಿಯನ್ ಸೆಂಟಾರಿಸ್ ಗ್ರಹದಿಂದ ಬಂದಿದ್ದರೆ ನನ್ನ ಕಥೆಯಲ್ಲಿ ಪಿಂಟಾರಿಸ್ ಗ್ರಹದಿಂದ ಹಾರಿಬರುತ್ತಿದ್ದ. ಅಷ್ಟೇ ವ್ಯತ್ಯಾಸ! ಹೀಗೆ ತಮ್ಮದೇ ಪತ್ರಿಕೆಯ ಕಥೆಯನ್ನು ಕಾಪಿ ಮಾಡಿ ತಮಗೇ ಪ್ರಕಟಿಸಿ ಎಂದು ಕಳಿಸುತ್ತಿದ್ದ ನನ್ನ ಪತ್ರಗಳನ್ನು ಓದಿ ಸಂಪಾದಕರು ಹೇಗೆಲ್ಲಾ ತಲೆ ಚಚ್ಚಿಕೊಂಡಿದ್ದರೋ ದೇವರೇ ಬಲ್ಲ.
ಈ ಅವಾಂತರಗಳೆಲ್ಲಾ ಏನೇ ಆದರೂ ಬರೆಯಬೇಕು ಎಂಬ ಸ್ವಸ್ಥ ಹವ್ಯಾಸವನ್ನು ಮೊಟ್ಟಮೊದಲ ಬಾರಿಗೆ ಅದೆಷ್ಟೋ ಮಕ್ಕಳ ಎದೆಯಲ್ಲಿ ಬಿತ್ತಿದ, ಕೈ ಹಿಡಿದು ಬರೆಸಿದ, ಬರೆದಿದ್ದಕ್ಕೊಂದು ವೇದಿಕೆ ಕಲ್ಪಿಸಿದ ಶ್ರೇಯ ಈ ಎಲ್ಲ ಮಕ್ಕಳ ಪತ್ರಿಕೆಗಳಿಗೇ ಸಲ್ಲಬೇಕು. ಅವರಿಗೆ ಇಷ್ಟವಾದ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮುಖಾಂತರ ವಿನೋದಮಯವಾದ ಕಥೆಗಳನ್ನು ಹೆಣೆದು, ಅದರೊಳಗೇ ಕಾಣದಂತೆ ನೀತಿಗಳನ್ನು ಬೆರೆಸಿ ಉಣಬಡಿಸುತ್ತಿದ್ದ ಈ ಪತ್ರಿಕೆಗಳು ಓದಿದವರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ.
********
“ಏನು ಚಂದಾಮಾಮ ಕಥೆ ಹೇಳ್ತಿದೀಯಾ?”
ಸಿನೆಮಾಗಳಲ್ಲಿ, ನಿಜ ಜೀವನದಲ್ಲಿ ಚಂದಾಮಾಮವನ್ನು ಲೇವಡಿಮಾಡಿ ಹೇಳುವ ಈ ಮಾತನ್ನು ಕೇಳಿದಾಗ ಬಹಳ ಬೇಸರವಾಗುತ್ತದೆ. ಬಹುಷಃ ಜೀವಮಾನದಲ್ಲಿ ಒಮ್ಮೆಯಾದರೂ ಚಂದಾಮಾಮವನ್ನು ಓದದವರು ಮಾತ್ರ ಹೇಳಬಹುದಾದ, ಬರೆಯಬಹುದಾದ ಮಾತಿದು. ನಿಜ.. ಚಂದಾಮಾಮವೆಂದರೆ ಕೇವಲ ಪುಟಾಣಿಗಳು ಓದುವ ಪುಸ್ತಕವೆನ್ನುವ ತಪ್ಪುಕಲ್ಪನೆಯೊಂದು ನಮ್ಮಲ್ಲಿ ವ್ಯಾಪಕವಾಗಿದೆ. ಆದರೆ ಯಾವ ಪಂಚತಂತ್ರಕ್ಕೂ ಕಡಿಮೆಯಿಲ್ಲದ ನೀತಿ ಕಥೆಗಳನ್ನು, ಬದುಕಿನ ಸತ್ಯಗಳನ್ನು, ಸಮಾಜದ ರೀತಿನೀತಿಗಳನ್ನು ಕಟ್ಟಿಕೊಟ್ಟ ಪತ್ರಿಕೆ ಈ ಚಂದಮಾಮ ಎನ್ನುವುದು ಅದನ್ನು ಓದಿದ ತೊಂಭತ್ತು ಹಾಗೂ ಅದರ ಹಿಂದಿನ ದಶಕದ ಪೀಳಿಗೆಯವರಿಗಷ್ಟೇ ಗೊತ್ತಿರುವ ಸತ್ಯ. ಬದುಕಿನ ಎಲ್ಲ ಘಟ್ಟಗಳಿಗೂ ಅನ್ವಯವಾಗುವಂಥಹಾ ನೀತಿಗಳನ್ನು ಕಥೆಗಳ ಮೂಲಕ ಕಟ್ಟಿಕೊಟ್ಟ ಪತ್ರಿಕೆ ಈ ಚಂದಮಾಮ.
ಉದಾಹರಣೆಯಾಗಿ ನನ್ನ ನೆನಪಿನ ಮಡತೆಗಳಲ್ಲಿ ಅಚ್ಚಾಗಿರುವ, ಲೇಖಕರ ಹೆಸರು ಗೊತ್ತಿಲ್ಲದ ಎರೆಡು ಚಂದಾಮಾಮ ಕಥೆಗಳನ್ನು ಚುಟುಕಾಗಿ ಹೇಳುತ್ತೇನೆ. ಮೊದಲನೆಯದರ ಹೆಸರು ‘ಗಂಗಾ ಸ್ನಾನದ ಫಲ’. ಈ ಕಥೆಯಲ್ಲಿ ಬದುಕಿನಲ್ಲಿ ಪಾಪವನ್ನೇ ಮಾಡದ ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನ ಸಂಸಾರದೊಂದಿಗೆ ವಾಸಿಸುತ್ತಿರುತ್ತಾನೆ. ಹೊರಜಗತ್ತಿನಲ್ಲಿ ಅಷ್ಟಾಗಿ ಬೆರೆಯದೆ ತನ್ನ ಪಾಡಿಗೆ ತಾನಿರುವ ಅವನಿಂದ ಒಮ್ಮೆ ಒಂದು ತಪ್ಪು ನಡೆದುಹೋಗುತ್ತದೆ. ಕೂಡಲೇ ಇದನ್ನು ಮನಗಂಡ ಅವನು ಸಂಸಾರದ ಜವಾಬ್ದಾರಿಯನ್ನು ಮಗನ ಹೆಗಲಿಗೆ ವಹಿಸಿ, ತಾನು ಪಾಪ ಕಳೆದುಕೊಳ್ಳಲೆಂದು ಗಂಗಾ ನದಿಯತ್ತ ನಡೆಯುತ್ತಾನೆ.
ಹೀಗೆ ಹೊರಟ ಅವನಿಗೆ ದಾರಿಯಲ್ಲೊಂದು ನಾಲೆ ಎದುರಾಗುತ್ತದೆ. ಅದನ್ನೇ ಗಂಗೆ ಎಂದು ತಿಳಿದ ಅವನು ಅಲ್ಲೇ ವಾಸಿಸುತ್ತಾ ಜಪತಪಗಳನ್ನಾಚರಿಸುತ್ತ, ಸುತ್ತಲಿನ ಪ್ರಾಣಿಪಕ್ಷಿಗಳಿಗೆ ಆಹಾರ ನೀಡುತ್ತಾ ಐದು ವರ್ಷಗಳನ್ನು ಕಳೆಯುತ್ತಾನೆ. ಅದೇ ಹೊತ್ತಿಗೆ ಆ ದಾರಿಯಲ್ಲಿ ನಡೆದು ಬಂದ ಒಬ್ಬ ಪ್ರಯಾಣಿಕನಿಂದ ಅವನಿಗೆ ಇದು ಗಂಗಾನದಿಯಲ್ಲವೆಂದೂ, ಯಾವುದೋ ನಾಲೆಯೆಂದೂ ತಿಳಿಯುತ್ತದೆ. ಅಲ್ಲಿಂದ ಹೊರಟ ಅವನಿಗೆ ಸ್ವಲ್ಪ ದಿನಗಳ ಬಳಿಕ ಇನ್ನೊಂದು ನದಿ ಎದುರಾಗುತ್ತದೆ. ಇದೇ ಗಂಗೆಯೆಂದು ಮತ್ತೆ ಐದು ವರ್ಷಗಳನ್ನು ಅಲ್ಲಿ ಜಪ-ತಪ-ಸೇವೆಗಳಲ್ಲಿ ಕಳೆಯುತ್ತಾನೆ. ನಂತರದಲ್ಲಿ ಅದೂ ಗಂಗೆಯಲ್ಲವೆನ್ನುವುದು ತಿಳಿಯುತ್ತದೆ. ಅಲ್ಲಿಂದ ಹೊರಟು ಮುಂದೆ ಮತ್ತೆ ಐದು ವರ್ಷಗಳನ್ನು ಯಾವುದೋ ತಪ್ಪು ನದಿಯ ತಟದಲ್ಲಿ ಕಳೆಯುತ್ತಾನೆ. ಕೊನೆಯಲ್ಲಿ ಅಲ್ಲಿಂದಲೂ ಹೊರಟು ನಿಜವಾದ ಗಂಗಾನದಿಯ ಸಮೀಪ ಬಂದು ಇನ್ನೇನು ಅದನ್ನು ಸೋಕಬೇಕೆನ್ನುವಷ್ಟರಲ್ಲಿ ಅವನ ಪ್ರಾಣ ಹೋಗುತ್ತದೆ.
ಯಮಕಿಂಕರರು ಅವನ ಆತ್ಮವನ್ನೊಯ್ದು ಯಮರಾಜನ ಮುಂದೆ ನಿಲ್ಲಿಸಿದಾಗ ಯಮರಾಜ ಇವನ ಪಾಪ-ಪುಣ್ಯಗಳ ಪಟ್ಟಿಯನ್ನು ಹೇಳು ಎಂದು ಚಿತ್ರಗುಪ್ತನನ್ನು ಕೇಳುತ್ತಾನೆ. ಆಗ ಚಿತ್ರಗುಪ್ತನು “ಮಹಾಸ್ವಾಮೀ, ಈ ವ್ಯಕ್ತಿಯು ತನ್ನ ಜೀವನದಲ್ಲಿ ಒಂದು ಪಾಪವನ್ನು ಮಾಡಿದ್ದಾನೆ. ಆದರೆ ಸತತ ಹದಿನೈದು ವರ್ಷಗಳ ಕಾಲ ಗಂಗೆಯ ದಡದಲ್ಲಿ ನೆಲೆಸಿ ಜಪ-ತಪಗಳನ್ನಾಚರಿಸಿರುವುದರಿಂದ ಇವನ ಪಾಪ ಪರಿಹಾರವಾಗಿದೆ” ಎಂದು ಹೇಳುತ್ತಾನೆ.
ನಂಬಿಕೆ, ಶ್ರದ್ಧೆಗಳಿಗಿಂತ ಮಿಗಿಲಾದ ದೇವರು ಬೇರೊಂದಿಲ್ಲ ಎಂಬ ನೀತಿಯನ್ನು ಇದಕ್ಕಿಂತ ಸುಂದರವಾಗಿ ಹೆಣೆಯಲು ಸಾಧ್ಯವೇ?
ಎರಡನೇ ಕಥೆಯ ಶೀರ್ಷಿಕೆ ನೆನಪಿಲ್ಲ. ಅದರಲ್ಲಿ ಜನರಿಂದ ತುಂಬಿದ ಪೇಟೆಯೊಂದರ ನಡುರಸ್ತೆಯಲ್ಲಿ ಕೂಲಿಯವನೊಬ್ಬ ತನ್ನ ಯಜಮಾನನಿಗಾಗಿ ಖರೀದಿಸಿದ ಪಿಂಗಾಣಿ ಪಾತ್ರೆಗಳನ್ನು ಬುಟ್ಟಿಯಲ್ಲಿ ಹೊತ್ತು ನಡೆಯುತ್ತಿರುವಾಗ ಹಠಾತ್ತನೆ ಕಾಲು ಜಾರಿ ನಡುರಸ್ತೆಯಲ್ಲೇ ಬಿದ್ದುಬಿಡುತ್ತಾನೆ. ಅವನ ಬುಟ್ಟಿಯಲ್ಲಿದ್ದ ವಸ್ತುಗಳೆಲ್ಲಾ ನೆಲಕ್ಕೆ ಬಿದ್ದು ಒಡೆದು ಚೂರಾಗುತ್ತವೆ. ಆಗ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಬಳಿ ಬಂದು ಅವನನ್ನು ಹಿಡಿದೆತ್ತಿ “ಪಾಪ, ನೋಡಿದರೆ ಕೂಲಿಯವನಂತಿದ್ದೀಯ. ಈ ವಿಷಯ ನಿನ್ನ ಯಜಮಾನನಿಗೆ ತಿಳಿದರೆ ನೀನು ಒಡೆದಿರುವ ಈ ಪಾತ್ರೆಗಳ ಹಣವನ್ನು ನಿನ್ನ ಸಂಬಳದಲ್ಲಿ ಕತ್ತರಿಸುತ್ತಾನೆ. ಅದಕ್ಕೇ ಒಂದು ಉಪಾಯ ಹೇಳುತ್ತೇನೆ. ನಾನು ಹಾಗೂ ಇಲ್ಲಿರುವ ಎಲ್ಲರೂ ಒಂದೊಂದು ವರಹ ಕೊಡುತ್ತೇವೆ. ನೀನು ಅದರಲ್ಲಿ ಮತ್ತೆ ಹೊಸ ಪಾತ್ರೆಗಳನ್ನು ಖರೀದಿಸಿ ನಿನ್ನ ಒಡೆಯನಿಗೆ ಕೊಡು” ಎಂದು, ಒಂದು ವರಹ ಕೊಟ್ಟು ಅಲ್ಲಿಂದ ತೆರಳುತ್ತಾನೆ. ಅವನ ಮಾತು ಕೇಳಿಸಿಕೊಂಡ ಉಳಿದವರೂ ತಲಾ ಒಂದೊಂದು ವರಹವನ್ನು ಅವನಿಗೆ ಕೊಡುತ್ತಾರೆ. ಹೀಗೆ ಸಂಗ್ರಹವಾದ ಹಣದಿಂದ ಮತ್ತೆ ಪಾತ್ರೆಗಳನ್ನು ಖರೀದಿಸಿ ಹೊರಟ ಕೂಲಿಯವನನ್ನು ವ್ಯಕ್ತಿಯೊಬ್ಬ ನಿಲ್ಲಿಸಿ “ಅಂತೂ ಇಂತೂ ನೀನು ಎಲ್ಲರ ಸಹಾಯದಿಂದ ಮಾಲಿಕನ ಬೈಗುಳದಿಂದ ಹಾಗೂ ಸಂಬಳ ನಷ್ಟವಾಗುವುದರಿಂದ ಪಾರಾದೆ. ಅಷ್ಟಕ್ಕೂ ನಿನ್ನ ಮಾಲಿಕ ಯಾರು? ಎಂದು ಕೇಳುತ್ತಾನೆ. ಅದಕ್ಕೆ ಆ ಕೂಲಿಯವನು “ಇನ್ಯಾರು ಸ್ವಾಮಿ? ನಾನು ಬಿದ್ದಾಗ ಮೊದಲಿಗೆ ಬಳಿ ಬಂದು, ಕೈ ಹಿಡಿದೆತ್ತಿ, ಒಂದು ವರಹ ಕೊಟ್ಟು ಹೋದರಲ್ಲಾ? ಅವರೇ ನನ್ನ ಮಾಲಿಕರು” ಎನ್ನುತ್ತಾನೆ!
*******
ಇವಿಷ್ಟೇ ಅಲ್ಲ, ಇಂಥಹಾ ನೂರಾರು ಮನೋಜ್ಞ ಕಥೆಗಳು ಈಗಿನ ಮಕ್ಕಳು ತೆರೆದೋದದ ಆ ಪುಸ್ತಕಗಳಲ್ಲಿ ಬಂದುಹೋಗಿವೆ. ಬದುಕನ್ನು, ಅದರ ವಿವಿಧ ಸವಾಲುಗಳನ್ನು, ಅವನ್ನೆದುರಿಸಬೇಕಾದ ರೀತಿಗಳನ್ನೂ ವಿನೋದಮಯ ಕಥೆಗಳ ಮೂಲಕ, ಸೊಗಸಾದ ಪಾತ್ರಗಳ ಮೂಲಕ ಮನೋಜ್ಞವಾಗಿ ಕಟ್ಟಿಕೊಟ್ಟು, ಬಾಲ್ಯದಿಂದಲೇ ಮಕ್ಕಳ ಮನಸ್ಸನ್ನು ಉತ್ತಮ ದಿಕ್ಕಿನೆಡೆಗೆ ನಡೆಸುತ್ತಿದ್ದ ಖ್ಯಾತಿ ಈ ಎಲ್ಲ ಪತ್ರಿಕೆಗಳದ್ದು. ಸೂಕ್ಷವಾಗಿ ನೋಡಿದರೆ ಅಂದು ನರಿಯಾಗಿಯೋ, ಮೊಲವಾಗಿಯೋ, ಕೂಲಿಯವನಾಗಿಯೋ ಓದಿದ ಎಷ್ಟೋ ಪಾತ್ರಗಳು ಇಂದು ನಮ್ಮೆದುರೇ ಓಡಾಡಿಕೊಂಡಿವೆ. ಒಂದಿಲ್ಲೊಂದು ದಿನ ನಾವವಕ್ಕೆ ಮುಖಾಮುಖಿಯಾಗುತ್ತೇವೆ. ಅಲ್ಲಿ ಹೇಳಿದ್ದ ಎಷ್ಟೋ ಸನ್ನಿವೇಶಗಳನ್ನು ನಾವು ಹಾದಿದ್ದೇವೆ, ಹಾಯುತ್ತಿದ್ದೇವೆ, ಹಾಯಲಿದ್ದೇವೆ. ಸದಾ ಒಳತಿಗಾಗೇ ಹೋರಾಡುವ ಡಿಂಗ, ಕಿರೋನಿಯೋರಾಗಲೀ ಅಥವಾ ಗಂಗಾಸ್ನಾನದ ಫಲದ ಆ ವ್ಯಕ್ತಿಯೇ ಆಗಲಿ, ಹೇಳಿದ ನೀತಿ ಒಂದೇ- ಒಳಿತಿಗೆ ಎಂದೆಂದೂ ಜಯ ಎನ್ನುವುದು.
ಆದರೆ ಇಂತಹಾ ಕಥೆಗಳನ್ನೂ, ಪುಸ್ತಕಗಳನ್ನೂ ಓದುವುದೇ ಇಲ್ಲವೆಂದರೆ ಯಾವ ಕಥೆಗಾರ, ಸಂಪಾದಕರು ತಾನೇ ಏನು ಮಾಡಿಯಾರು? ಜಗತ್ತಿನಲ್ಲಿ ಎಷ್ಟೆಷ್ಟೋ ಒಳ್ಳೆಯ ಸಂಗತಿಗಳಿವೆ ನಿಜ. ಆದರೆ ಅವನ್ನು ಅನುಸರಿಸದೇ ಹೋದರೆ ಅವಿದ್ದೂ ಇಲ್ಲದಂತಾಗುತ್ತವೆ. ಓದುವ ಹವ್ಯಾಸ ಇಲ್ಲದ ಅನೇಕರ ಜೀವನದಲ್ಲಿ ನಡೆಯುತ್ತಿರುವುದೂ ಇದೇ.
ಬಾಲ್ಯದಿಂದಲೇ ಓದುವ ಹವ್ಯಾಸ ಬೆಳೆಸಿ ಎನ್ನುತ್ತಿರುವ ಎಲ್ಲ ಕವಿ, ಲೇಖಕ, ಬುದ್ಧಿಜೀವಿಗಳ ಮಾತಿನ ಹಿಂದಿನ ಆತಂಕವೂ ಇದೇ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್