- ಟಿಬೆಟಿಯನ್ ಕ್ಯಾಂಪಿಗೆ ಭೇಟಿ - ಏಪ್ರಿಲ್ 30, 2023
- ಥಿಯರಿ ಆಫ್ ರಿಲೇಟಿವಿಟಿ - ಅಕ್ಟೋಬರ್ 13, 2022
- ಎರಡು ಕವಿತೆಗಳು - ಆಗಸ್ಟ್ 3, 2021
ರಾತ್ರಿ
ಅವರ ದೃಷ್ಟಿಯ ಪರಿಧಿಯನ್ನೆಲ್ಲಾ ಆ ಕೊಳವೇ ಆವರಿಸಿತ್ತು. ಕೊಳದಲ್ಲಿ ಚಂದ್ರ ಚಂಚಲಚಿತ್ತನಾಗಿದ್ದರೆ ಮೇಲೆ ಕಡುಗಪ್ಪು ಆಗಸದಲ್ಲಿ ಆತ ಸಮಚಿತ್ತನಂತೆ ಬೆಳದಿಂಗಳು ಸೂಸುತ್ತಿದ್ದ. ದಂಡೆಯಲ್ಲಿದ್ದ ಮರಗಳ ಟೊಂಗೆಗಳು ತಂಗಾಳಿಗೆ ಓಲಾಡುತ್ತಿದ್ದವು. ಇಬ್ಬರೂ ಬಹಳ ಹೊತ್ತಿನಿಂದ ತಮ್ಮ ಎದುರಿದ್ದ ರಾತ್ರಿಯ ಆ ಮೋಹಕ ದೃಶ್ಯವನ್ನೇ ನೋಡುತ್ತಿದ್ದರು. ಆತ ದಿಬ್ಬದ ಮೇಲೆ ಒಂದು ಸಮತಟ್ಟಾದ ಕಲ್ಲಿನ ಮೇಲೆ ಕುಳಿತಿದ್ದ. ಆತನ ಎಡ ಮೊಣಕೈ ಎಡಮಂಡಿಯ ಮೇಲೆ ಕುಳಿತು ಎಡಗೈ ಆತನ ಗದ್ದವನ್ನು ಎತ್ತಿ ಹಿಡಿದಿತ್ತು. ಆಕೆ ಅವನ ಪಕ್ಕದಲ್ಲೇ ಒರಗಿ ಕೂತು ಆತನ ಬಲತೋಳಿಗೆ ತಲೆಯಾನಿಸಿದ್ದಳು. ಅವಳತ್ತ ತಿರುಗದೇ ಆತ ಹೇಳಿದ ‘ ನೋಡಿದೆಯಾ ಪ್ರಿಯೆ, ಆ ಚಂದಿರನ? ಲಕ್ಷಗಟ್ಟಲೆ ಕಿಲೋಮೀಟರು ದೂರವಿದ್ದರೂ ಕೂಡ ಎಷ್ಟೊಂದು ಸ್ಫುಟವಾಗಿ ಕಾಣಿಸ್ತಾ ಇದ್ದಾನೆ. ದೂರವೆನ್ನುವುದು ಕೇವಲ ರಿಲೇಟಿವ್ (relative) ಅಲ್ಲವೇ’? ಆಕೆ ನಸುನಕ್ಕು ಹೇಳಿದಳು ‘ನಿಜ’
ಬೆಳಿಗ್ಗೆ
ಇಬ್ಬರೂ ಆ ಚಿಕ್ಕದಾದ ಬೆಟ್ಟದ ತುದಿಯ ಹತ್ತಿರ ನಿಂತಿದ್ದರು. ಎದುರಿಗಿದ್ದ ಬಾನು ತನ್ನ ಕಪ್ಪು ಬಣ್ಣವನ್ನು ವೇಗವಾಗಿ ಕಳೆದುಕೊಳ್ಳುತ್ತಿತ್ತು. ಸೂರ್ಯೋದಯದ ಮೊದಲಿನ ಕ್ಷಣಗಳವು. ಏದುಸಿರಿನಿಂದ ಇಬ್ಬರ ಮುಖಗಳೂ ಕೆಂಪಡರಿದ್ದವು. ಆಕೆಯ ಹಣೆಯ ಮೇಲಿನ ಬೆವರಹನಿಗಳು ಈಗ ಕೊಂಚ ಹೊಳೆಯತೊಡಗಿದವು. ಅವರೆದುರಿಗಿದ್ದ ಆಗಸ ಕೆಂಪು ಮಿಶ್ರಿತ ಹಳದಿಯಾಗಿ ಮಾರ್ಪಡುತ್ತಿತ್ತು. ಆಗಸದಲ್ಲಿ ನಡೆಯುತ್ತಿರುವ ಕುಂಚದಾಟ ಅವರೆದುರಿಗೆ ಅದ್ಭುತಲೋಕವನ್ನೇ ಸೃಷ್ಟಿಸಿತ್ತು. ಕೆಲ ಕ್ಷಣಗಳಲ್ಲೇ ದಿಗಂತದಲ್ಲಿ ಸೂರ್ಯ ಕಾಣಿಸಿದ. ಆತ ತನ್ಮಯನಾಗಿ ‘ಎಷ್ಟೊಂದು ಸುಂದರ! ಕೋಟಿಗಟ್ಟಲೆ ಕಿಲೋಮೀಟರುಗಳಷ್ಟು ದೂರವಿದ್ದರೂ ಆ ಸೂರ್ಯ ಕೈಚಾಚಿದರೆ ಸಿಕ್ಕೇಬಿಡುವನೇನೋ ಅನ್ನಿಸ್ತಾ ಇದೆಯಲ್ಲಾ’ ಎಂದ. ಆಕೆ ನಸುನಕ್ಕು ಹೇಳಿದಳು ‘ನಿಜ’
ಸಂಜೆ
ಇಬ್ಬರೂ ಸೂರ್ಯಾಸ್ತದ ಸ್ಥಳಕ್ಕೆ ಹೊರಡಲು ರೆಡಿಯಾದರು. ಆಕೆ ಮಂಚದ ತುದಿಗೆ ಕುಳಿತು ಎದುರಿಗಿದ್ದ ಫೋಟೋವನ್ನೇ ನೋಡುತ್ತಿದ್ದಳು. ಆತ ‘ಯಾಕೆ ಹೊರಡುತ್ತಿಲ್ಲ? ಒಂದು ಗಂಟೆಯೊಳಗೆ ಸೂರ್ಯಾಸ್ತ ನೋಡಿ ಮರಳಬಹುದು’ ಎಂದ. ಅವಳು ಫೋಟೋವನ್ನೇ ನೋಡುತ್ತಾ ‘ ಅಷ್ಟೊಂದು ಕೋಟಿ , ಲಕ್ಷ ಕಿಲೋಮೀಟರು ದೂರದ ವಸ್ತುಗಳನ್ನು ನೋಡಿ ಏನ್ಮಾಡೋದು? ನಾವಿಬ್ಬರೂ ಇಲ್ಲಿ ಬಂದಿದ್ಯಾಕೆ?’ ಎಂದಳು. ಆತ ಒಂದು ಕ್ಷಣ ವಿಚಲಿತನಾಗಿ ‘ ಅಯ್ಯೊ ಏನಾಯ್ತು? ಸಿಟಿ ಲೈಫಿನ ಜಂಜಡ ಸಾಕಾಗಿ ಕೆಲ ಸಮಯ ನಾವಿಬ್ಬರೇ ಕಾಲ ಕಳೆಯೋಣ ಎಂದಿದ್ದು ನೀನೆ ತಾನೇ?’ ಎಂದ. ಆಕೆ ‘ ಅದು ಸರಿ, ಆದರೆ ನಾವಿಬ್ಬರೂ ಒಬ್ಬರನೊಬ್ಬರು ಹತ್ತಿರದಿಂದ ಅರಿಯುವುದು ಯಾವಾಗ? ಒಬ್ಬರ ಪಕ್ಕ ಒಬ್ಬರು ನಿಂತು ಪ್ರಕೃತಿಯನ್ನು ಆಸ್ವಾದಿಸಿದರೆ ಆಯಿತೇ? ಒಬ್ಬರಿಗಾಗಿ ಒಬ್ಬರು ಎಂಬ ಭಾವನೆ ಬರುವುದೆಂದು?’ ಎಂದಳು. ಆತ ಸೋತ ಸ್ವರದಲ್ಲಿ ‘ಅದೆಂತ ಮಾತು? ನೀನಿದ್ದರೆ ತಾನೇ ನಾನು. ನಾವಿಬ್ಬರೂ ಒಂದೇ ಜೀವ ಎರಡು ದೇಹ ಅಲ್ಲವೇ? ಆದರೂ ಪ್ರಕೃತಿಯನ್ನು ಸವಿದರೆ ತಪ್ಪೇನು?’ ಎಂದ. ಆಕೆ ಶುಷ್ಕನಗೆಯನ್ನು ಬೀರುತ್ತಾ ‘ಸರಿ ಹೋಯ್ತು! ದೂರದ ತರಹ ಹತ್ತಿರ ಕೂಡ ರಿಲೇಟಿವ್ (relative) ಆಗಿಬಿಡ್ತು’ ಎಂದಳು.
ಮರುದಿನ
ಇಬ್ಬರೂ ಮೊಬೈಲಿನಲ್ಲಿ ಬ್ಯುಸಿಯಾಗಿದ್ದರು. ನೆಟವರ್ಕ್ ಸಿಗದೇ ಆತ ಅಂಗಳದಲ್ಲಿ ಕೂಗುತ್ತಿದ್ದ ‘ತುಂಬಾ ಚೆನ್ನಾಗಿದೆ ಜಾಗ ಕಣೋ. ಒಂದು ವಾರ ಇದ್ದರೂ ಬೇಜಾರಾಗಲ್ಲ. ಆದರೆ ಏನ್ಮಾಡೋದು ಮರಳಲೇಬೇಕಲ್ಲ’ ಆಕೆ ಬಾಲ್ಕನಿಯಲ್ಲಿ ಪಿಸುಗುಡುತ್ತಿದ್ದಳು. ‘ ಹೌದೇ, ಮುಂದಿನ ವಾರದವರೆಗೂ ಇದ್ದ ರಜೆ ಕ್ಯಾನ್ಸಲ್ ಮಾಡಿದೆ. ನಾಳೆಯೇ ಇಬ್ಬರೂ ಜಾಯಿನ್ ಆಗ್ತಾ ಇದ್ದೇವೆ’
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ