- ಕವಿಗಳು ಕಂಡ ಸಂಭ್ರಮದ ಯುಗಾದಿ. - ಏಪ್ರಿಲ್ 9, 2024
- ವಿಜಯದಶಮಿ ರೈತರ “ಬನ್ನಿ ಹಬ್ಬ” - ಅಕ್ಟೋಬರ್ 24, 2023
- ಮುನ್ನಡೆಯುವ ಹಕ್ಕು ಮಹಿಳೆಯರಿಗೂ ಇದೆ - ಮಾರ್ಚ್ 8, 2023
‘ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ ಬೆಳಕು’….. ಬೆಳಕಿನ ಬಗ್ಗೆ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದ ಅತ್ಯಂತ ಜನಪ್ರಿಯ ಹಾಡಿನ ಸಾಲುಗಳಿವು. ಬೆಳಕು ಅರಿವಿನ, ಜ್ಞಾನದ ಸಂಕೇತ. ಹಣತೆ ಬೆಳಕು ಪಸರಿಸುವ ಸಾಧನ. ಈ ಬೆಳಕಿನ ಹಬ್ಬ ದೀಪಾವಳಿ ಕಾರ್ತಿಕ ಮಾಸದಲ್ಲಿ ಬರುವ ಭಾರತೀಯರ ಪ್ರಮುಖ ಹಬ್ಬ.ಈ ಹಬ್ಬ ನಮಗೆ ಆದರ್ಶವನ್ನು ಬಿಂಬಿಸುವ, ಜೀವನವನ್ನು ಉನ್ನತ ಮಟ್ಟಕ್ಕೇರಿಸುವ ಸಂದೇಶ ನೀಡುತ್ತದೆ. ಇದನ್ನು ಬೆಳಕಿನ ಮಾಸ ಎಂತಲೂ ಕರೆಯುತ್ತಾರೆ.ಏಕೆಂದರೆ ಈ ಮಾಸದಲ್ಲಿ ಉರಿಯುವಷ್ಟು ದೀಪಗಳನ್ನು ಬೇರೆ ಯಾವ ಮಾಸದಲ್ಲೂ ಉರಿಸುವುದಿಲ್ಲ.
ಸ್ನೇಹ ಸಮ್ಮೇಳನದ ಸಂಕೇತ.
ದೀಪಗಳ ಹಬ್ಬ ದೀಪಾವಳಿ ಮೂರುವರೆ ಮುಹೂರ್ತದ ಪೈಕಿ ಇದು ಒಂದು ಶುಭ ಮುಹೂರ್ತವಾಗಿದೆ. ದೀಪಾವಳಿ ಕತ್ತಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಹೋಗುವ ದಿವ್ಯ ಸಂದೇಶವನ್ನು ನೀಡುವ ಹಬ್ಬ ಹಾಗೂ ಜ್ಞಾನ ಜ್ಯೋತಿಯನ್ನು ಬೆಳಗಿಸಿ ಮನದ ಕತ್ತಲೆಯನ್ನು ಹೋಗಲಾಡಿಸುವ ಹಬ್ಬ. ದೀಪದ ಬೆಳಕು ಜೀವನದಲ್ಲಿ ಉತ್ಸಾಹ, ಹೊಸ ಚೈತನ್ಯ ತುಂಬುತ್ತದೆ. ಸಮಾಜದಲ್ಲಿ ಇರುವ ಬಂಧು ಬಾಂಧವರೊಡನೆ ಸಂಬಂಧವನ್ನು ಮತ್ತಷ್ಟು ಬೆಸೆಯುತ್ತದೆ. ದೀಪಾವಳಿಯು ಕೇವಲ ಹಬ್ಬವಾಗಿರದೆ ಸ್ನೇಹ ಸಮ್ಮೇಳನದ ಸಂಕೇತವಾಗಿದೆ. ಈ ಹಬ್ಬ ಭಕ್ತಿ,ಧ್ಯಾನ, ಕರ್ಮಗಳ ತ್ರಿವೇಣಿ ಸಂಗಮ.
ವಿದೇಶಗಳಲ್ಲೂ ದೀಪಾವಳಿ.
ಈ ದೀಪಾವಳಿ ಆಚರಣೆ ಭಾರತವಲ್ಲದೆ ವಿದೇಶಗಳಲ್ಲಿಯೂ ಕಂಡುಬರುತ್ತದೆ. ದೀಪಾವಳಿ ಆಚರಣೆಯ ಮೂಲ ಉದ್ದೇಶ ಒಂದೇ ಆದರೂ ಆಚರಿಸುವ ವಿಧಾನದಲ್ಲಿ ವೈವಿಧ್ಯ ಕಂಡು ಬರುತ್ತದೆ. ಈ ದೀಪಾವಳಿ ದಿನವನ್ನು ನರಕ ಚತುರ್ದಶಿ,ಅಮಾವಾಸ್ಯೆ ಮತ್ತು ಬಲಿಪಾಡ್ಯಮಿ ಎಂಬ ಹೆಸರುಗಳಿಂದ ಒಟ್ಟು ಮೂರು ದಿನಗಳ ಕಾಲ ಇದನ್ನು ಎಲ್ಲ ಹಿಂದುಗಳೂ ಆಚರಿಸುತ್ತಾರೆ. ಕೆಲವು ಕಡೆ ಭಾವನ ಬಿದಿಗೆ, ಅಕ್ಕನ ತೆದಿಗೆ ಎಂದೂ ಆಚರಿಸುವುದುಂಟು. ಈ ಹಬ್ಬಗಳು ಅನೇಕ ವೈಶಿಷ್ಟ್ಯತೆಗಳಿಂದ ಕೂಡಿದವುಗಳು.
ಗಂಗಾ ಮಾತೆಗೆ ಪೂಜೆ.
ಧನತ್ರಯೋದಶಿ ದೀಪಾರಾಧನೆಯ ಆರಂಭದ ದಿನ . ಈ ದಿನವನ್ನು ನೀರು ತುಂಬುವ ಹಬ್ಬವೆಂದು ಕರೆಯುತ್ತಾರೆ. ನೀರು ನಮ್ಮ ಜೀವ ನಾವು ಬದುಕಿರುವುದು ನೀರಿನಿಂದಲೇ. ದೇವರು ನಮಗೆ ಕೊಟ್ಟ ವರ. ದಿನನಿತ್ಯ ನಾವು ಬಳಸುವ ವಸ್ತುಗಳಲ್ಲಿ ನಾವು ದೇವರನ್ನು ಕಾಣುತ್ತೇವೆ ಹಾಗೆ ಅವುಗಳ ಬಗ್ಗೆ ಪೂಜ್ಯ ಭಾವನೆಯು ಬರುತ್ತದೆ.ಅಶ್ವಿಜ ಬಹುಳ ಸಂಜೆ ಈ ಹಬ್ಬ ಬರುತ್ತದೆ. ಗಂಗಾಮಾತೆಯ ಹೆಸರಿನಲ್ಲಿ ಈ ಪೂಜೆ ನಡೆಯುವುದರಿಂದ ಗಂಗಾಪೂಜೆ ಎನ್ನುತ್ತಾರೆ. ಅಂದು ಮನೆಯಲ್ಲಿರುವ ಪಾತ್ರಗಳನ್ನು, ನೀರಿನ ಹಂಡೆಗಳನ್ನು ಸ್ವಚ್ಛಗೊಳಿಸಿ, ಶುದ್ಧವಾದ ನೀರು ಅಂಡೆಗೆ ತುಂಬಿಸುವುದು ಮೊದಲ ಕಾರ್ಯಕ್ರಮ. ಅದರ ಮುಂದೆ ರಂಗೋಲಿ ಬಿಟ್ಟು, ಪೂಜೆ ಮಾಡಿ ನೈವೇಧ್ಯ ಮಾಡುತ್ತಾರೆ.
ನರಕಾಸುರನ ವಧೆ.
ಹಿಂದೆ ಪುರಾಣ ಕಾಲದಲ್ಲಿ ಪ್ರಾಗ್ಜೋತಿಷ ನಗರವೆಂಬ (ಈಗ ಅಸ್ಸಾಂ ರಾಜ್ಯವಿರುವ ಪ್ರದೇಶ) ರಾಜ್ಯವಿತ್ತು. ಆ ರಾಜ್ಯವನ್ನು ನರಕಾಸುರನೆಂಬ ರಾಕ್ಷಸ ದೊರೆ ಆಳುತ್ತಿದ್ದ. ಅವನು ಹದಿನಾರು ಸಾವಿರ ಸುಂದರ ಕನ್ಯೆಯರನ್ನು ತನ್ನ ಸೆರೆಮನೆಯಲ್ಲಿ ಬಂಧಿಸಿ ಇಟ್ಟಿದ್ದನು. ಲೋಕ ಕಂಟಕನಾದ ಆತ ಅದಿತಿಯ ಕುಂಡಲ,ಇಂದ್ರನ ಶ್ವೇತಚ್ಛತ್ರವನ್ನು ಆಪಹರಿಸಿದ್ದ. ಶ್ರೀಕೃಷ್ಣನು ಯುದ್ದ ಮಾಡಿ ದುರುಳ ನರಕಾಸುರನನ್ನು ಮಧ್ಯರಾತ್ರಿಯ ಹೊತ್ತಿಗೆ ಸಂಹರಿಸಿದ ಮತ್ತು ರಾಜ್ಯ ಕನ್ಯೆಯರನ್ನು ಮುಕ್ತಗೊಳಿಸಿದ. ಸಾಯುವಾಗ ನರಕಾಸುರನು ಕೃಷ್ಣನಲ್ಲಿ,” ಇಂದಿನ ತಿಥಿಗೆ ಯಾರು ಮಂಗಳ ಸ್ನಾನವನ್ನು ಮಾಡುತ್ತಾರೋ ಅವರಿಗೆ ನರಕದ ತೊಂದರೆಯಾಗದಿರಲಿ” ಎಂಬ ವರವನ್ನು ಬೇಡಿದನು ಮತ್ತು ಕೃಷ್ಣನು ಆ ವರವನ್ನು ಕೊಟ್ಟನು. ಅಲ್ಲದೆ ನರಕಾಸುರನ ತಾಯಿ ಭೂದೇವಿ ತನ್ನ ಮಗನ ಹೆಸರು ಚಿರಾಯುವಾಗಿರಲಿ ಶ್ರೀಕೃಷ್ಣನಲ್ಲಿ ಮೊರೆ ಹೋದಳು. ಶ್ರೀಕೃಷ್ಣನು ಲೋಕಕ್ಷೇಮಕ್ಕಾಗಿ ಚತುರ್ದಶಿ ಕಗ್ಗತ್ತಲಿನಲ್ಲಿ ನರಕಾಸುರನ ತಾಯಿಯ ಕೋರಿಕೆಯಂತೆ ಆತನನ್ನು ವರ್ಷಕ್ಕೊಮ್ಮೆ ಎಲ್ಲರೂ ಪೂಜಿಸುವ ಅವಕಾಶ ಕಲ್ಪಿಸಿ ಕೊಲ್ಲುತ್ತಾನೆ. ಹಾಗೆ ಬೆಳಗಿನ ಜಾವ ಮನೆಗೆ ಬಂದು ಅಭ್ಯಂಗ ಸ್ನಾನ ಮಾಡಿದನು.ಈ ದಿನದ ನೆನಪಿಗಾಗಿ ಬ್ರಾಹ್ಮೀಮುಹೂರ್ತದಲ್ಲಿ ತೈಲದಿಂದ ಅಭ್ಯಂಜನ ಸ್ನಾನ ಮಾಡುತ್ತಾರೆ ಹಾಗೆ ಹೊಸ ಬಟ್ಟೆ ಧರಿಸುತ್ತಾರೆ ಇದು ಸಂಪ್ರದಾಯ.
ಅಭ್ಯಂಗ ಸ್ನಾನದ ಮಹತ್ವ.
ಈ ದೀಪಾವಳಿಯ ಸಂದರ್ಭದ ಅಭ್ಯಂಜನ ಸ್ನಾನ ಪವಿತ್ರವಾದುದು. ಕಾವೇರಿ ಮಹಿಮಾದಲ್ಲಿ “ತ್ಯೆಲೇಲಕ್ಷ್ಮೀ ಜಲೇಗಂಗಾ”ಎಂದು ಹೇಳಿದೆ. ತೈಲ ರೂಪಿ ಲಕ್ಷೀ, ಗಂಗೆ ಜಲ ರೂಪಿ. ಎಣ್ಣೆಯಲ್ಲಿ ಲಕ್ಷ್ಮಿಯೂ, ನೀರಿನಲ್ಲಿ ಗಂಗೆಯೂ ಇರುವುದರಿಂದ ನಮಗೆ ಲಕ್ಷ್ಮಿಯ ಕೃಪೆ ಮತ್ತು ಗಂಗಾದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ದೀಪಾವಳಿಯ ಅಭ್ಯಂಜನ ಆಯುರಾರೋಗ್ಯಾಭಿವೃದ್ಧಿಗೆ ನೆಲೆಯಾಗಿದೆ. ದೀಪಾವಳಿಯ ನರಕ ಚತುರ್ದಶಿ ದಿನ ತೈಲಭ್ಯಂಗ ಮಾಡಿದರೆ ಸಕಲ ಪಾಪಗಳೂ ನಿವಾರಣೆಯಾಗುವುವು ಎಂಬ ಉಲ್ಲೇಖ ಪುರಾಣಗಳಲ್ಲೂ ಇದೆ. ಈ ದಿನದ ಸ್ನಾನವನ್ನು ಗಂಗಾಸ್ನಾನ ಎಂದು ಹೇಳುತ್ತಾರೆ. ಬಹಿರಂಗ ಶುದ್ದಿಗೆ ಇದು ಸಾಧನವಾದರೆ, ಜ್ಞಾನವನ್ನು ತಿಳಿಯುವ ಮೂಲಕ ಅಂತರಂಗ ಶುದ್ಧಿ ಪಡೆಯಬೇಕೆಂದೂ ಹಬ್ಬ ಸಂಕೇತವಾಗಿ ಹೇಳುತ್ತದೆ. ಹೀಗೆ ನರಕಾಸುರನ ಸಂಹಾರ ಹಾಗೂ ರಾಜಕನ್ಯೆಯರ ಬಿಡುಗಡೆಯಾದದ್ದು ಚತುರ್ಥಿಯ ದಿನ. ಆದುದರಿಂದಲೇ ಆ ದಿನವನ್ನು ನರಕ ಚತುರ್ದಶಿ ಎಂದು ಕರೆಯುತ್ತಾರೆ.
ಧನಲಕ್ಷೀ ಪೂಜೆ.
ನರಕ ಚತುರ್ದಶಿಯ ಮರುದಿನವೇ ಧನಲಕ್ಷ್ಮೀ ಯನ್ನು ಪೂಜಿಸುವ ದಿನ ಅಮಾವಾಸ್ಯೆ ಯಾಗಿರುತ್ತದೆ.ಈ ಅಮಾವಾಸ್ಯೆಯನ್ನು ವರ್ಷದ ಅತ್ಯಂತ ಕತ್ತಲೆಯ ದಿನವೆಂದು ಪರಿಗಣಿಸಲಾಗಿದೆ. ಲಕ್ಷೀದೇವಿಯ ಪೂಜೆ ಆ ದಿವಸದ ವಿಶೇಷ.ಲಕ್ಷೀ ಇಷ್ಟಾರ್ಥಗಳನ್ನು ಕರುಣಿಸುವ ಕಾಮಧೇನು, ಕಲ್ಪವೃಕ್ಷ ಎಂಬ ನಂಬಿಕೆ ಇದೆ.ಲಕ್ಷೀ ಸಂಪತ್ತಿನ ಅಧಿದೇವತೆ.ಭಕ್ತರ ಮನೆಗೆ ಪ್ರವೇಶಿಸುತ್ತಾಳೆಂಬ ನಂಬಿಕೆ ಇದೆ.ಅಂದು ಯಾರು ಲಕ್ಷ್ಮೀಯನ್ನು ಭಕ್ತಿಯಿಂದ ಪೂಜಿಸುತ್ತಾರೋ ಅಂಥವರಿಗೆ ಸುಖ, ಶಾಂತಿ, ಸಂಪತ್ತು ನೀಡುವಳೆಂಬ ಪ್ರತೀತಿ ಇದೆ.
ಧನಲಕ್ಷ್ಮಿ ಪೂಜೆ ವ್ಯಾಪಾರಸ್ಥರಿಗಂತೂ ತುಂಬಾ ವಿಶೇಷವಾದ ದಿನ. ಅವರಿಗೆ ಪ್ರಾರಂಭದ ಶುಭ ದಿನ. ಲಕ್ಷ್ಮಿಯ ಚಿತ್ರದ ಎದುರು ಬೆಳ್ಳಿ, ಸುವರ್ಣ ನಾಣ್ಯಗಳನ್ನು ಇಟ್ಟು ಪೂಜಿಸಿ, ಆಹ್ವಾನಿತರಿಗೆ ಸಿಹಿ ತಿಂಡಿ ಕೊಡುವ ಸಂಪ್ರದಾಯವಿದೆ.ಈ ದಿನ ಯಾವುದಾದರೂ ಒಂದು ಹೊಸ ವಸ್ತುವನ್ನು (ಸಾಮಾನ್ಯವಾಗಿ ಚಿನ್ನ, ಬೆಳ್ಳಿಯಿಂದ ಮಾಡಿದ ವಸ್ತುಗಳನ್ನು ತರುವ ಸಂಪ್ರದಾಯ).ಈದಿನ ಕೊಂಡು ತರುವುದುಂಟು. ಈ ರೀತಿ ಕೊಂಡು ತರುವುದರಿಂದ ಒಳ್ಳೆಯಯದಾಗುತ್ತದೆಂಬ ನಂಬಿಕೆ ಇದೆ.ಅಂದು ಮನೆಗಳಲ್ಲಿ, ಅಂಗಡಿಗಳಲ್ಲಿ ದೀಪಗಳನ್ನು ಬೆಳಗಿಸುವುದು. ಅತ್ಯಂತ ಶುಭಕರ.ದೀಪವು ಲಕ್ಷ್ಮೀ ದೇವಿ ಸ್ವರೂಪವಾದ್ದರಿಂದ ಲಕ್ಷ್ಮೀಯನ್ನು ಮನೆ ಯೊಳಗೆ ಸ್ವಾಗತಿಸುವ ರೀತಿ ಅದು.ದೀಪ ಅಭಿವೃದ್ಧಿ ಹಾಗೂ ಸದ್ಗುಣಗಳ ಪ್ರತೀಕವಾದ ಲಕ್ಷ್ಮೀಯನ್ನು ಪ್ರತಿನಿಧಿಸುತ್ತದೆ.
ಬಲಿಪಾಡ್ಯಮಿ.
ಲಕ್ಷ್ಮಿ ಪೂಜೆಯ ಮರುದಿನವೇ ಬಲಿಪಾಡ್ಯಮಿ. ಈ ಹೊಸ ವರ್ಷಕ್ಕೆ ಬಲಿಪ್ರತಿಪದೆ ಎಂದು ಹೇಳುತ್ತಾರೆ. ಕಾರ್ತಿಕ ಶುದ್ಧ ಪ್ರಥಮವೇ ಪ್ರಸಿದ್ಧವಾದ ದಿನ.ಇದು ದೀಪಾವಳಿಯಲ್ಲಿ ಅತ್ಯಂತ ಪ್ರಮುಖವಾದ ದಿನ. ಹಿಂದೂ ಪಂಚಾಂಗಗಳಲ್ಲಿ ಅತ್ಯಂತ ಪವಿತ್ರವೆನಿಸಿರುವ ದಿನಗಳಲ್ಲಿ ಇದೂ ಒಂದು.ಈ ದಿನವನ್ನು ದಾನ, ತ್ಯಾಗ ಮತ್ತು ಸೌಹಾರ್ದಕ್ಕೆ ಮೀಸಲಾದ ದಿನ ಎಂತಲೂ ಹೇಳಬಹುದು.
ನರಕಾಸುರನ ಕಥೆ ಪಾಪದ ಪ್ರತೀಕವಾದರೆ,ಬಲಿಯ ಕಥೆ ಪುಣ್ಯದ ಪ್ರತೀಕವಾಗಿದೆ. ಬಲಿ ಒಬ್ಬ ದೈತ್ಯ ಚಕ್ರವರ್ತಿಯಾದರೂ, ಅವನು ಕೊನೆಯಲ್ಲಿ ಗಳಿಸಿದ ಪುಣ್ಯ ಅನುಪಮವಾದದು. ದಾನಶೂರ ಬಲಿಚಕ್ರವರ್ತಿಯನ್ನು, ವಾಮನನನ್ನು ಪಾತಾಳಕ್ಕೆ ತಳ್ಳಿದ ದಿನ,ಕನಕ ಮತ್ತು ಪ್ರತಿಭೆ ಇವುಗಳ ಮೋಹದಲ್ಲಿ ಬಿದ್ದು ಅಸುರನಾದಾಗ ಅವುಗಳ ಅಂಧತ್ವ ಹೋಗಲಾಡಿಸಲು ಬಲಿಚಕ್ರವರ್ತಿಯ ಪರಾಭವವನ್ನು ಜ್ಞಾಪಿಸಿ, ಈದಿನ ದೀಪವನ್ನು ಬೆಳಗಿಸಿ ಬಲೀಂದ್ರಪೂಜೆ ಪೂಜಿಸಲಾಗುವುದು ಅಂಧಕಾರದಿಂದ ಬೆಳಕಿನಡೆಗೆ ಸಾಗುವ ಹಬ್ಬವೇ ದೀಪಾವಳಿ. ಈ ದಿನ ಬಹು ಪ್ರಶಸ್ತವಾದ ದಿನ.
ವೈವಿಧ್ಯಮಯ ದೀಪಾವಳಿ.
ಬಲೀಂದ್ರನಿಗೆ ದೀಪಾರಾಧನೆ ಮತ್ತು ದೀಪದಾನಗಳೂ ಸಹ ತುಂಬಾ ಪ್ರಿಯವಾಗಿದ್ದ ವಂತೆ. ಆದುದರಿಂದ ಜನ ಆ ದಿನ ತಮಗೆ ಸಾಧ್ಯವಿರುವಷ್ಟು ಎಣ್ಣೆ ದೀಪಗಳನ್ನು ಬೆಳಗಿ ಸಂಭ್ರಮ ಪಡುತ್ತಾರೆ. ಈ ಮೂರು ದಿನಗಳ ಕಾಲ ಮನೆಗಳಲ್ಲಿ ರಾತ್ರಿ ಹಚ್ಚುವ ಎಣ್ಣೆ ದೀಪಗಳ ಸಾಲು ಅತ್ಯಂತ ಮೋಹಕ, ಉಲ್ಲಾಸ, ಉಜ್ವಲ ಬೆಳಕು, ಜ್ಞಾನ, ಸಂತಸವನ್ನು ಉಂಟುಮಾಡುವುದಲ್ಲದೆ, ಭಾಗ್ಯವನ್ನು ಕರುಣಿಸುತ್ತದೆ.
ಈ ಹಬ್ಬವನ್ನು ಕೆಲವರು ತುಂಬಾ ವೈವಿಧ್ಯಮಯವಾಗಿ ಆಚರಿಸುತ್ತಾರೆ. ಹಬ್ಬದ ದಿನಗಳಲ್ಲಿ ಹೊಸಬಟ್ಟೆ, ತರಾವರಿ ಸಿಹಿತಿಂಡಿಗಳು ಹಾಗೂ ಬಗ್ಗೆ ಬಗ್ಗೆ ಪಟಾಕಿಗಳು ಮೂರು ವಸ್ತುಗಳಿಗೆ ತುಂಬಾ ಮಹತ್ವವಿರುತ್ತದೆ ಮಹತ್ವವಿರುತ್ತದೆ ಜಾತಿಮತಗಳ ಭೇದವಿಲ್ಲದೆ ಎಲ್ಲರೂ ಈ ಹಬ್ಬ ಮಾಡಿ ದೀಪ ಬೆಳಗಿಸಿ ಆನಂದಿಸುತ್ತಾರೆ.
ಪರಿಸರಸ್ನೇಹಿ ದೀಪಾವಳಿ.
ಪಟಾಕಿಗಳು ಶಬ್ದ ಮಾಲಿನ್ಯ ವಾಯು ಮಾಲಿನ್ಯ ಗಳನ್ನು ಉಂಟುಮಾಡಿ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ ಹಾಗೂ ಆರೋಗ್ಯವನ್ನು ಹದಗೆಡಿಸುತ್ತದೆ.ಪಟಾಕಿ ಹಚ್ಚುವುದರಿಂದ ಹೊಗೆ, ರಾಸಾಯನಿಕಗಳು ಮತ್ತು ವಿಷಕಾರಿ ಸೂಕ್ಷ್ಮ ಕಣಗಳು ಪಸರಿಸಿ ಎಲ್ಲರ ಆರೋಗ್ಯದ ಮೇಲೂ ಹಾಗೂ ಸಾಕು ಪ್ರಾಣಿಗಳ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಆದುದರಿಂದ ಜನತೆ ಪರಿಸರ ಕಾಳಜಿಯಿಂದ ದೀಪಾವಳಿ ಹಬ್ಬವನ್ನು ಆಚರಿಸಬೇಕು.
ದೀಪಾವಳಿಯ ದಿವ್ಯ ಸಂದೇಶ.
ಎಲ್ಲಾ ಹಬ್ಬಗಳ ಆಚರಣೆಯಲ್ಲಿ ಸಂದೇಶ ವಿರುವಂತೆ ದೀಪಾವಳಿ ಹಬ್ಬದ ಆಚರಣೆಯಲ್ಲೂ ಮನುಕುಲದ ಹಿತ ಬಯಸುವ ದಿವ್ಯ ಸಂದೇಶವಿದೆ. ನರಕಚತುರ್ದಶಿ ಜ್ಞಾನಕ್ಕೂ, ಧರ್ಮಕ್ಕೂ ದೊರೆತ ವಿಜಯದ ಸಂಕೇತವಾಗಿದೆ. ಲಕ್ಷ್ಮೀ ಪೂಜೆಗೆ ಮೀಸಲಾದ ದೀಪಾವಳಿಯ ಅಮವಾಸ್ಯೆಯು ಭಕ್ತಿಯ ಸಂಕೇತವಾಗಿದೆ. ಮೂರನೇ ದಿನವಾದ ಬಲಿಪಾಡ್ಯಮಿಯು ಉದಾರ ಮನಸ್ಸಿನ ದಾನ, ತ್ಯಾಗ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ. ಪ್ರತಿಯೊಬ್ಬ ಮನುಷ್ಯನ ಆತ್ಮೋದಾರಕ್ಕೆ ಸಹಾಯಕವಾದ ಈ ಮೂರು ಸಂಕೇತಗಳ ಸಂಗಮವೇ ದೀಪಾವಳಿ. ಬೆಳಕು ಜ್ಞಾನದ ಸಂಕೇತ, ದೀಪವು ಸತ್ಯದ ಸಂಕೇತ. ಬೆಳಕಿನ ಅಣತಿಯು ತಿಳಿಸುವುದೇನೆಂದರೆ, ಎಣ್ಣೆಯು ಪ್ರೀತಿಯ, ಬತ್ತಿಯು ಸೇವಾನು ಭಾವನೆಯ, ಬೆಳಕು ಜ್ಞಾನದ, ದೀಪವು ಭೂಮಿಯ ಸಹನೆಯನ್ನು ಪ್ರತಿಬಿಂಬಿಸುತ್ತದೆ. ಪ್ರೇಮ, ಪ್ರೀತಿ, ಅಂತಃಕರಣ ಹಾಗೂ ಶಾಂತಿ ಉಂಟುಮಾಡುವ ಸಂದೇಶ ಈ ಹಣತೆಯಲ್ಲಿ ಅಡಗಿದೆ. “ತಮಸೋಮಾ ಜ್ಯೋತಿರ್ಗಮಯ”ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಬಾ ಎಂದರ್ಥ. ಈ ಮಂತ್ರದ ಸಾಧನೆ ಮಾಡುತ್ತ ಜೀವನದಲ್ಲಿ ಪ್ರಕಾಶಮಾನವಾಗಬೇಕು. ಅಂಥ ದೀಪಾವಳಿಯ ಸಡಗರ ಸಂಭ್ರಮದಲ್ಲಿ ಕವಿವರ್ಯ ರವೀಂದ್ರನಾಥ ಟ್ಯಾಗೂರ್ ದೇವರು ಈ ದಿವ್ಯ ಸಂದೇಶ ಅಡಗಿದೆ.
“ಸೂರ್ಯನು ಮುಳುಗಿದ್ದಾಗ ಕತ್ತಲೆಯು ಆವರಿಸಿದೆ, ಆದರೆ ಮೂಲೆಯಲ್ಲಿ ಕುಳಿತ ಹಣತೆಯು ಚಿಕ್ಕದಾದರೂ ಸೂರ್ಯನಿಗೆ ಪರ್ಯಾಯವಾಗಿ ಕೆಲಸ ಮಾಡುತ್ತದೆ”.
ದೀಪಾವಳಿಯನ್ನು ಸ್ವಾಗತಿಸಿ ಸಂತೋಷದಿಂದ ಆಚರಿಸುವುದರ ಮೂಲಕ ನಮ್ಮ ಮನದಲ್ಲಿರುವ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಿ, ಜ್ಞಾನವೆಂಬ ಬೆಳಕನ್ನು ಸ್ವಾಗತಿಸೋಣ.
ಲೇಖಕರು
ಹೆಚ್ಚಿನ ಬರಹಗಳಿಗಾಗಿ
ಕವಿಗಳು ಕಂಡ ಸಂಭ್ರಮದ ಯುಗಾದಿ.
ವಿಜಯದಶಮಿ ರೈತರ “ಬನ್ನಿ ಹಬ್ಬ”
ದೀಪವೆಂದರೆ……