ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದಿನಚರಿ

ಜಿತೇಂದ್ರ ಬೇದೂರು
ಇತ್ತೀಚಿನ ಬರಹಗಳು: ಜಿತೇಂದ್ರ ಬೇದೂರು (ಎಲ್ಲವನ್ನು ಓದಿ)

ಟೊಂಗೆಗಾದರೂ ಕೇಳಿಸಿತ್ತೇ? 
ತೊಟ್ಟು ಕಳಚಿದ ಸದ್ದು!?
ಈಗಷ್ಟೇ ಉದುರಿದ, ತನ್ನದೇ ಎಲೆಯ ನಿಟ್ಟುಸಿರು?.
ಅಥವಾ,
ಹೊಸ ಚಿಗುರಿನ ಸಂಭ್ರಮದಲ್ಲಿದ್ದ  ಟೊಂಗೆಗೆ
ಗಾಳಿಯೊಂದು ನೆಪವೇ?

ಹೊತ್ತು ಸರಿಯಿತು..
ಸದ್ದಿಲ್ಲದೇ ಕರಗಿದ ಹುಲ್ಲಿನ ಮೇಲಿನ ಹನಿಯ
ಮನಸನ್ನು ಅರಿತವರಾರು?
ಕನಸುಗಳು ಇದ್ದಿರಬಹುದೇ ಆ ಹನಿಗೆ?
ಕರಗಿರಬಹುದೇ,ಜೊತೆಗೇ?
ಗಮನಿಸಿದ್ದನೇ ಸೂರ್ಯ,ಹೊಳೆವ ಹನಿಗಳನ್ನು?
ಅಥವಾ,
ಏರು ರವಿಗೆ ಕಾಯಕವೊಂದು ನೆಪವೇ?

ಹೊತ್ತು ಮುಳುಗಿತು..
ರೆಕ್ಕೆ ಬಲಿಯದ
ಪುಟ್ಟ ಚಿಟ್ಟೆಗಳ ಹಿಂಡು
ತಿಳಿದೋ, ತಿಳಿಯದೆಯೋ,
ಬೆಂಕಿಯ ಮೋಹಕ್ಕೆ ಬಿದ್ದು..
ಸುಟ್ಟ ರೆಕ್ಕೆಗಳ ಕಮಟು ವಾಸನೆ..
ಎದೆಯ ತುಂಬಾ!

ಹೊತ್ತು ಮೂಡಿತು ಮತ್ತೆ!
ಬಿದ್ದ ತರಗೆಲೆಯ ಮೇಲೆಲ್ಲಾ ಮಂಜು ಹನಿಗಳ ಸಾಲು,
ಇನ್ನೆಷ್ಟು ಹನಿಗಳ ಸರದಿಯೋ ಈಗ
ಜೊತೆಗೆ ಕರಗುವ ಕನಸುಗಳು ಎಷ್ಟೋ?

ಜಡ ಹರಿದ ಭ್ರಮೆಯಲ್ಲಿ
ಜಗಕೆ ಧಾವಂತ