- ಆದಿಯೂ… ನೆಟ್ನ ಪಾಠವೂ - ಆಗಸ್ಟ್ 11, 2021
- ಕಾವ್ಯ ಮತ್ತು ಕಾವ್ಯಾನುಸಂಧಾನ - ಜುಲೈ 16, 2021
- ದೇವರು, ಭೂತ, ಭಯ ಇತ್ಯಾದಿ - ಮೇ 23, 2021
ಬಹುತೇಕ ಎಲ್ಲ ಮಕ್ಕಳಿಗೆ ತಿಳಿವು ಮೂಡಿದ ಕ್ಷಣದಲ್ಲಿ ಮೊತ್ತಮೊದಲು ಎದುರಾಗುವುದು ಕತ್ತಲೆಯ ಭಯ. ಕತ್ತಲೆಯಲ್ಲಿ ಏನೂ ಕಾಣಿಸದಿರುವಾಗ ಉಂಟಾಗುವ ಅವ್ಯಕ್ತದ ಭಯವು ನಿಧಾನಕ್ಕೆ ಭೂತದ ಭಯವಾಗಿ ತಿರುಗುತ್ತದೆ. ಇದಕ್ಕೆ ಹಿರಿಯರ ಕಾಣಿಕೆಯೇನೂ ಕಡಿಮೆಯಲ್ಲ. ಭೂತದ ಭಯವನ್ನು ಎದುರಿಸಲು ದೇವರನ್ನು ತೋರಿಸುತ್ತಾರೆ. ಕ್ರಮೇಣ ದೇವರೇ ಒಂದು ಭಯವಾಗಿ ಮನಸ್ಸಿನಲ್ಲಿ ನೆಲೆಸುತ್ತದೆ. ಈ ಭೂತ ಮತ್ತು ದೇವರ ಭಯಗಳನ್ನು ಗೆಲ್ಲಲು ಅನುಭವವೇ ಸಾಧನ. ಅನೇಕ ಬಾರಿ ಮೋಹ ಮತ್ತು ಲೋಭಗಳ ಸನ್ನೆಗೋಲುಗಳೂ ಸಹಾಯಕವಾಗಿ ಒದಗಿ ಬರುತ್ತವೆ.
ನಾನು ಹುಟ್ಟಿ ಬೆಳೆದ ಊರಿನಲ್ಲಿ ವಿದ್ಯುತ್ತಿನ ಪ್ರವೇಶವಾಗಿದ್ದು ಅರವತ್ತರ ದಶಕದ ಕೊನೆಯಲ್ಲಿ. ಹಣತೆ, ಚಿಮಣಿ, ಲಾಟೀನು, ದೊಂದಿಗಳು ತಮ್ಮ ಸುತ್ತಣ ತಮವನ್ನು ತರಿಯಲು ಹರಸಾಹಸ ಪಡುತ್ತಿದ್ದವು. ಯಕ್ಷಗಾನ ಮದುವೆಗಳಂತಹ ಸಂಭ್ರಮಗಳಿದ್ದರೆ ಮಾತ್ರ ಪೆಟ್ರೋಮ್ಯಾಕ್ಸ್ ಕಾಣಬಹುದಿತ್ತು. ಇಂದಿಗೆ ಎಲ್ಲೆಲ್ಲೂ ವಿದ್ಯುತ್ ಪ್ರವೇಶ ಮಾಡಿದ್ದರೂ ಕತ್ತಲೆಯ ಸಾಮ್ರಾಜ್ಯ ಹಾಗೆಯೇ ಮುಂದುವರೆದಿದೆ.
ಹೊರಗೆ ಕಾಲಿಟ್ಟರೆ ಗವ್ವೆನ್ನುವ ಕತ್ತಲೆ. ಅಲ್ಲೊಂದು ಇಲ್ಲೊಂದು ನರಿಯ ಊಳು. ಗೂಂಕ್ ಗೂಂಕ್ ಎಂದು ಕೂಗುವ ಗೂಬೆ, ಆವುಸ್ ಆವುಸ್ ಎಂದು ಕೂಗುವ ಒಂದು ವಿಶೇಷ ಜಾತಿಯ ಬೆಕ್ಕು, ಕತ್ತಲಲ್ಲಿಯೇ ಹಾರಾಡುವ ಬಾವಲಿಗಳು, ಅವುಗಳು ಕಪ್ಪೆಗಳನ್ನೇನಾದರೂ ಹಿಡಿದಿದ್ದರೆ ಆ ಕಪ್ಪೆಗಳ ವಿಚಿತ್ರ ಆರ್ತನಾದ, ಬೆದೆಗೆ ಬಂದ ಎರಡು ಬೆಕ್ಕುಗಳ ವಿಚಿತ್ರ ಕಿರುಚಾಟ ಎಲ್ಲ ಸೇರಿಕೊಂಡ ಸನ್ನಿವೇಶದಲ್ಲಿ ಭೂತವಲ್ಲದೆ ದೇವರ ನೆನಪಾಗುತ್ತದೆಯೆ? ಜನಿವಾರ ಹಿಡಿದುಕೊಂಡು ಗಾಯತ್ರಿ ಹೇಳಿಕೊಂಡರೂ ಮನಸ್ಸು ಭೂತವನ್ನೇ ಕಲ್ಪಿಸುತ್ತಿರುತ್ತದೆ.
ಜೊತೆಗೆ ಹಿರಿಯರು ಹೇಳುವ ಕಥೆಗಳು. ಹೆದ್ದಾರಿ ಬೊಬ್ಬರ್ಯನ ಕಟ್ಟೆಯಿಂದ ದಾನಗುಂದು ದೈವದ ಮನೆಯವರೆಗೆ ಭೂತಗಳು ಸೂಡಿ ಹಿಡಿದುಕೊಂಡು ತಿರುಗಾಡುವುದು; ಅದಕ್ಕೆ ಪೂರಕವಾಗಿ ಆಗೊಮ್ಮೆ ಈಗೊಮ್ಮೆ ಉರಿವ ಸೂಡಿ ಚಲಿಸುತ್ತಿರುವುದನ್ನು ನಾವೇ ನೋಡಿದ್ದು, ಪಕ್ಕದ ಮನೆಯ ಗುಮ್ಮಿಯ ದಡದಲ್ಲಿದ್ದ ಅಶ್ವತ್ಥನ ಕಟ್ಟೆಯ ನಾಗರ ಕಲ್ಲಿಗೆ ನೀರೆರೆಯುವಾಗ ಅಚಾನಕ್ ಗುಮ್ಮಿಯ ಕಡೆ ಕಣ್ಣು ಹೊರಳಿದಾಗ ಕೆರೆಯ ತಳದಿಂದ ಮೇಲಕ್ಕೆ ಎದ್ದು ಬಂದು ತೇಲಿದ ಹೆಣ, ಶ್ರಾದ್ಧದ ದಿನ ದೊಡ್ಡಮ್ಮನ ಮೈಮೇಲೆ ಬರುವ ಜಕಣಿ, ಕಾರಂತರ ಒಕ್ಕಲು ಬಚ್ಚಿಯ ಮೈಮೇಲೆ ಬರುವ ಕೋಳೇರ ಮಾವ, ಅಜ್ಜನ ಮನೆಯ ಪಕ್ಕದ ಗುಡಿಯ ದೈವಕ್ಕೆ ಬಲಿಯಾಗಿ ಕೋಳಿಯನ್ನು ಕಚ್ಚಿ ರಕ್ತ ಹೀರಿದ ಪೂಜಾರಿ, ಪಾತ್ರಿಯ ಮೈಮೇಲೆ ಆಳಿ ಬರುವ ನಾಗ, ದೈವಗಳ ಹೂಂಕಾರ, ಬಡಕನ ಗುಮ್ಮಿಯ ಉಮ್ಮಲ್ತಿ, ಆಕೆಯ ಸೆರಗು ನೀರಿನಲ್ಲಿ ಚಾಚಿಕೊಂಡಿರುವುದು; ಇವೆಲ್ಲ ದಾಖಲಾದ ಎಳೆಯ ಮನಸ್ಸುಗಳಿಗೆ ಆಧಾರ ದೇವರ ಕೋಣೆಯಲ್ಲಿ ಭದ್ರವಾಗಿ ಕುಳಿತ ದೇವರೊಬ್ಬನೇ.
ಈ ದೇವರು ಹುಟ್ಟಿಸುವ ಭಯವೇನೂ ಕಡಿಮೆಯಲ್ಲ. ಕಾರ್ಗಾಲದಲ್ಲಿ ಕರಿಘಟೆಗಳಂತೆ ಉರವಣಿಸುವ ಕಾರ್ಮೋಡಗಳ ಮರೆಯಿಂದ ಛಟೀಲ್ ಎಂದು ಅಪ್ಪಳಿಸುವ ಮಿಂಚು, ಜೊತೆಗೆ ಘುಡುಘುಡಿಸುವ ಗುಡುಗು, ಸಾಲು ಸಾಲು ತೆಂಗಿನಮರಗಳನ್ನು ಸುಟ್ಟುರಿದು ಬೊಬ್ಬಿರಿವ ಬರಸಿಡಿಲು, ಸುಂಟರ ಗಾಳಿ, ಉಕ್ಕಿ ಸೊಕ್ಕುವ ಸಮುದ್ರ, ಬೇಸಿಗೆಯ ಮಟಮಟ ಮಧ್ಯಾಹ್ನ ಹುಟ್ಟುವ ದಿಗಿಲು….. ಎಲ್ಲವೂ ಭಯವನ್ನು ಹುಟ್ಟಿಸುತ್ತವೆ.
ನಾವು ಚಿಕ್ಕವರಿದ್ದಾಗ ರಜೆಯ ದಿನಗಳಲ್ಲಿ ಹೋರಿ ಮೇಯಿಸಲು ಹೋಗುತ್ತಿದ್ದೆವು. ಮನೆಯ ಹೋರಿ, ಎಮ್ಮೆಗಳನ್ನು ನಾವು ಹೊಡೆದುಕೊಂಡು ಕೊಮ್ಮೆಕೆರೆ ಅಥವ ಬಡಕನ ಗುಮ್ಮಿ ಹತ್ತಿರ ಹೋಗುತ್ತಿದ್ದೆವು. ಅಲ್ಲಿ ಒಂದು ಎಳೆ ಹುಲ್ಲೂ ಇರುತ್ತಿರಲಿಲ್ಲ. ಹೋರಿ ಮೇಯಿಸುವುದು ಒಂದು ಹೆಳೆ. ನಮಗೆ ಬೇಕಾಗಿದ್ದು ಸ್ನೇಹಿತರ ಜೊತೆ ಕೆರೆಯಲ್ಲಿ ನೀರಾಟ. ಕೊಮ್ಮೆಕೆರೆಯಲ್ಲಿ ನೀರಾಟ ಆಡಿ ದಣಿದು ಮೇಲೆ ಬಂದರೆ ಹೋರಿಗಳೆಲ್ಲಿ? ನಾಪತ್ತೆ! ಆ ಬಿರುಬಿಸಿಲಿಗೆ ಕಾದ ಮಣ್ಣು ಕಂಪಿಸುತ್ತಿರುವಂತೆ ಕಾಣಿಸುತ್ತದೆ. ಜುಟ್ಟಿನ ಟಿಟ್ಟಿಭಗಳು ಅಲ್ಲೊಂದು ಇಲ್ಲೊಂದು ವಿಚಿತ್ರ ದನಿಯಲ್ಲಿ ಟುಟುರ್ ಟುಟುರ್ ಎಂದು ಕೂಗುತ್ತಿದ್ದರೆ ನಮಗೆ “ಹೋರಿ ಸತ್ಹೋಯ್ತೋ, ಹೋರಿ ಸತ್ಹೋಯ್ತೋ” ಎಂದು ಕೂಗಿದ ಹಾಗೆ ಕೇಳಿಸಿ ದಿಗಿಲಾಗುತ್ತಿತ್ತು. ಬಡಕನ ಗುಮ್ಮಿಯ ಕಡೆ ಹೋಗೋಣವೆಂದರೆ ಅದು ಉಮ್ಮಲ್ತಿ ಮೀಯಲು ಬರುವ ಹೊತ್ತು. ಕೆರೆಯಲ್ಲಿ ಅವಳ ಹಸಿರು ಸೀರೆಯ ಸೆರಗು ಹರಡಿಕೊಂಡದ್ದು ನಾವೇ ನೋಡಿದವರು. ಆಕೆಯ ಕೈಯಿಂದ ತಪ್ಪಿಸಿ ಕೊಳ್ಳಲು ನಮ್ಮ ಕೈಯಲ್ಲಿ ವೀಳೆಯದೆಲೆಯ ಕಟ್ಟೂ ಇಲ್ಲವಲ್ಲ! ಹೀಗಾಗಿ ಇನ್ನೊಂದು ದಿಕ್ಕಿಗೆ ಹುಡುಕಲು ಹೊರಟರೆ ಬಲರಾಮ ಹಂದೆಯವರ ಮನೆಯ ದೊಡ್ಡಿಯ ಭಯ. ಅಪ್ಪಯ್ಯನ ಹೆಸರು ಹೇಳಿದರೆ ಹಂದೆಯವರು ಕಟ್ಟಿಹಾಕಿದ ಹೋರಿಗಳನ್ನು ಬಿಟ್ಟಾರು, ಆದರೆ ದಾರಿಯಲ್ಲಿ ಎದುರಾಗುವ ದಾನಗುಂದು ದೈವದ ಮನೆಯನ್ನು ದಾಟಿಹೋಗುವುದು ಹೇಗೆ? ಇದರ ಜೊತೆಗೆ ಹಿಂದೊಮ್ಮೆ ಪೌರೋಹಿತ್ಯಕ್ಕೆಂದು ಬರಿಗಾಲಿನಲ್ಲಿ ಹೊರಟಿದ್ದ ನರಸಿಂಹೈತಾಳರು ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ತೀರಿಕೊಂಡದ್ದು ತೀರ ನೆನಪಿನಲ್ಲಿದೆ. ನಮ್ಮ ಊರಲ್ಲಿ ಸ್ಮಶಾನವಿಲ್ಲ. ಬಯಲಿನಲ್ಲಿಯೇ ಹೆಣಗಳನ್ನು ಸುಡುತ್ತಿದ್ದರು. ಆ ಹೆಣ ಸುಟ್ಟ ಸ್ಥಳಗಳು ರಾತ್ರಿಯಂತೆ ಹಗಲಿನಲ್ಲಿಯೂ ಭಯ ಹುಟ್ಟಿಸುತ್ತಿದ್ದವು.
ಆರಂಭದ ಹತ್ತು ವರ್ಷಗಳ ಭಯದ ವರ್ಣನೆಯನ್ನು ಸಾಗರವನ್ನು ಶಾಯಿ ಮಾಡಿಕೊಂಡು ಆಕಾಶವನ್ನೇ ಕಾಗದ ಮಾಡಿಕೊಂಡರೂ ಬರೆದು ಮುಗಿಸಲಾಗದು. ಅದು ಇಷ್ಟಕ್ಕೆ ಸಾಕು, ನಾನು ಭಯವನ್ನು ಗೆಲ್ಲಲು ಸಾಧ್ಯವಾದ ಕೆಲವು ಸ್ವಾರಸ್ಯಕರ ಪ್ರಸಂಗಗಳನ್ನು ವಿವರಿಸುತ್ತೇನೆ.
ಭೂತಗಳು ಹಿಲಾಲು ಹಿಡಿದುಕೊಂಡು ದೊಡ್ಡಕಟ್ಟಿನ ಮೇಲೆ ತೇಲಿಕೊಂಡು ದಾನಗುಂದು ದೈವದ ಮನೆಗೆ ಹೋಗುತ್ತಿದ್ದವು ಎಂದು ಹೇಳಿದ್ದೆ. ನನ್ನ ಸ್ನೇಹಿತನೊಬ್ಬ ಹೈಸ್ಕೂಲಿನಲ್ಲಿ ಸ್ಕೂಲ್ ಡೇ ಮುಗಿದ ನಂತರ ರಾತ್ರಿಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ. ಅಪರಾತ್ರಿಯಾಗಿತ್ತು. ಒಳದಾರಿಯಾಗಿ ಬಯಲಿನ ಮೇಲೆ ನಡೆದು ಬರುತ್ತಿದ್ದ ಆತ ದೊಡ್ಡಕಟ್ಟು ರಸ್ತೆಗೆ ಹತ್ತಿದ ಕೂಡಲೆ ಮೂರು ಸೂಡಿಗಳು ಎದುರಾದವು. ಬೆದರಿದ ಆತ ಓಡಲು ಯತ್ನಿಸಿದ. ಕಗ್ಗತ್ತಲಲ್ಲಿ ದಾರಿಕಾಣದೆ ಕಲ್ಲಿಗೆ ಎಡವಿ ಮುಗ್ಗರಿಸಿ ಬಿದ್ದ. ಸೂಡಿಗಳು ಹತ್ತಿರಾದವು. ಓಡಲು ಕಾಲುಗಳು ಸಹಕರಿಸುತ್ತಿಲ್ಲ. ಇನ್ನೇನು ತನ್ನ ಕತೆ ಮುಗಿಯಿತೆಂದುಕೊಳ್ಳುವಷ್ಟರಲ್ಲಿ ದೊಂದಿಗಳು ಅವನ ಎದುರಿಗೇ ಬಂದವು. ದೊಂದಿಗಳ ಅಸ್ಪಷ್ಟ ಬೆಳಕಿನಲ್ಲಿ ಮಾನವರ ಮುಖಗಳು ಕಾಣಿಸಿದವು. ಅವರಲ್ಲೊಬ್ಬನ ಗುರುತು ಹತ್ತಿತು. ಅವನು ದೈವದ ಮನೆಯ ಹಿಂದಿನ ಕೂಸಾಳು ಗುಡಿಯಲ್ಲಿ ವಾಸವಾಗಿದ್ದವ. ಅವನದು ಮುಡಿ ಕಟ್ಟುವ ಕಾಯಕ.
ನಾಲ್ಕಾರು ಊರುಗಳಲ್ಲಿ ಮುಡಿ ಕಟ್ಟುವವನು ಅವನೊಬ್ಬನೇ. ಹೀಗಾಗಿ ಕೋಟ, ಹಂದಟ್ಟುಗಳಲ್ಲಿ ಮುಡಿ ಕಟ್ಟುವ ಕೆಲಸ ಮುಗಿದ ಮೇಲೆ ಅವ ಕೆಲಸ ಹುಡುಕಿಕೊಂಡು ಬನ್ನಾಡಿ, ಸಾಯ್ಬರ ಕಟ್ಟೆ ಮುಂತಾದ ಮೂಡಣ ಊರುಗಳಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದ. ಜೊತೆಗೆ ಸಹಾಯಕ್ಕೆಂದು ಹೆಂಡತಿ ಮತ್ತು ಮಗನನ್ನೂ ಕರೆದುಕೊಂಡು ಹೋಗುತ್ತಿದ್ದ. ಹಾಗೆ ಹೋದಾಗ ಹಿಂದಿರುಗಿ ಬರುವುದು ತಡವಾಗುತ್ತಿತ್ತು. ಅವರು ಮೂವರೂ ಹೆದ್ದಾರಿಯ ವರೆಗೆ ಬಸ್ಸಿನಲ್ಲಿ ಬಂದು ಕೋಟ ಶಾಲೆಯ ಹತ್ತಿರ ಇಳಿದ ಮೇಲೆ ದೊಂದಿಗಳನ್ನು ಹಿಡಿದುಕೊಂಡು ದೊಡ್ಡ ಕಟ್ಟಿನ ಮೇಲೆ ನಡೆದು ಬರುತ್ತಿದ್ದರು. ಇದನ್ನೇ ಊರವರು ದೆವ್ವಗಳು ಮೆರವಣಿಗೆ ಹೋಗುತ್ತಿದ್ದವು ಎಂದು ಭಾವಿಸಿದ್ದರು. ಅವರಲ್ಲಿ ಅಲ್ಪಸ್ವಲ್ಪ ಪರಮಾತ್ಮನ ಪ್ರವೇಶವೂ ಆಗಿರುತ್ತಿದ್ದರೆ ತೇಲಿಕೊಂಡು ಹೋದಂತೆ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ. ದೆವ್ವಗಳ ಮೆರವಣಿಗೆಯ ಈ ರಹಸ್ಯ ಬಯಲಾಗಬೇಕಾದರೆ ನನ್ನ ಸ್ನೇಹಿತನ ಅನುಭವದವರೆಗೆ ಕಾಯಬೇಕಾಯಿತು.
ಈ ದೊಂದಿಯ ವಿಚಾರ ಬಂದಾಗ ನನಗೆ ನಮ್ಮ ಪಕ್ಕದ ಮನೆಯಲ್ಲಿದ್ದ ಮೂಕಣ್ಣಯ್ಯ ಎನ್ನುವವರ ನೆನಪು ಬರುತ್ತದೆ. ಅವರ ನಿಜವಾದ ಹೆಸರು ನರಸಿಂಹ ತುಂಗ. ಅವರಿಗೆ ಮಾತು ಬರದಿದ್ದುದರಿಂದ ನಾವು ಮೂಕಣ್ಣಯ್ಯ ಎಂದು ಕರೆಯುತ್ತಿದ್ದೆವು. ಅವರ ಜೊತೆಗೆ ಅನತಿ ದೂರದ ಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಸೋಣೆ ಆರತಿ, ರಂಗಪೂಜೆಗಳಿಗೆ ಹೋಗಿ ಪಂಚಕಜ್ಜಾಯ ಪ್ರಸಾದ ತಿಂದು ಬರುವ ವಾಡಿಕೆ ಇತ್ತು. ದೇವಸ್ಥಾನದಿಂದ ಮನೆಗೆ ಬರುವಾಗ ನಮಗೆ ಮೂಕಣ್ಣಯ್ಯನೇ ತೆಂಗಿನ ಓಲೆಗಳಿಗೆ ಅಲ್ಲಲ್ಲಿ ಹುಲ್ಲು ಸೇರಿಸಿ ಬಿಗಿಯಾಗಿ ಕಟ್ಟಿದ ಸೂಡಿಯ ಬೆಳಕೇ ಗಟ್ಟಿ. ಸೂಡಿ ಹಚ್ಚಿಕೊಂಡು ಅವರು ಮುಂದೆ ಹೋಗುತ್ತಿದ್ದರೆ ನಾವು ಮಕ್ಕಳೆಲ್ಲ ಅವರ ಹಿಂದೆ ಸಾಗುತ್ತಿದ್ದೆವು. ಮೂಕಣ್ಣಯ್ಯನ ಹೆಜ್ಜೆಯ ಮೇಲೆ ಹೆಜ್ಜೆ ಇರಿಸಿ ಕೊಂಡು ನಾವು ಹೋಗುತ್ತಿದ್ದೆವೇ ವಿನಃ ಅವರ ಸೂಡಿಯ ಬೆಳಕು ನಮ್ಮ ಕಾಲಿನ ಬುಡದ ದಾರಿಯನ್ನು ತೋರಿಸಿದ ನೆನಪು ನನಗಿಲ್ಲ. ಬಹುಶಃ ಸೂಡಿಯ ಉಪಯೋಗ ಎದುರುಗಡೆಯಿಂದ ಬರುವ ಜನರಿಗಾಗಿ ಅಥವಾ ಪ್ರಾಣಿ ಪಕ್ಷಿಗಳನ್ನು ಬೆದರಿಸುವ ಸಲುವಾಗಿ ಮಾತ್ರ ಎಂದು ಈಗ ಕಾಣಿಸುತ್ತಿದೆ.
ವಿಷಯಾಂತರವಾಯಿತು. ಒಮ್ಮೆ ನಮ್ಮ ತಂದೆಯ ಸ್ನೇಹಿತರಾದ ಗಣಪಯ್ಯ ಬಾಯಿರಿಯವರು ಅವರ ಮನೆಯ ಎದುರಿನ ಹಾಡಿಯಲ್ಲಿದ್ದ ನಾಗದೇವರ ದರ್ಶನವನ್ನು ಏರ್ಪಡಿಸಿದ್ದರು. ಅದನ್ನು ನೋಡಲು ನಾನು ಹೋಗಿದ್ದೆ. ಅಂತಹ ಸಂದರ್ಭಗಳಲ್ಲಿ ಒಬ್ಬ ಬ್ರಹ್ಮಚಾರಿಯ ಅಗತ್ಯವಿತ್ತು. ಅದೇ ತಾನೇ ಉಪನಯನವಾಗಿದ್ದ ನಾನೂ ಒಬ್ಬ ಬ್ರಹ್ಮಚಾರಿಯಾಗಿ ದರ್ಶನದಲ್ಲಿ ಭಾಗವಹಿಸಿದ್ದೆ. ನಾಗದೇವರು ಪಾತ್ರಿಯ ಮೈಮೇಲೆ ಆಳಿ ಬಂದಿತು. ಸಿಂಗಾರ ಹೂವಿನ ಸೇವೆಯಾಯಿತು. ವಾಲಗದ ಸ್ವರಕ್ಕೆ ನಾಗನ ನರ್ತನವೂ ಮುಗಿಯಿತು. ಬುಸುಗುಡುತ್ತಿದ್ದ ಪಾತ್ರಿಯ ಮೈಮೇಲೆ ಆಳಿ ಬಂದಿದ್ದ ನಾಗ ಬಾಯಿರಿಯವರಿಗೆ ಹಂದಟ್ಟಿನ ಬನದಲ್ಲಿ ನನ್ನ ಪೂಜೆಯನ್ನು ಏಕೆ ನಿಲ್ಲಿಸಿದೆ? ನಿನಗೆ ಒಳಿತಾಗುವುದಿಲ್ಲ ಎಂದು ಬೆದರಿಸಿತು. ಅದಕ್ಕೆ ಬಾಯಿರಿಯವರು ಕೊಟ್ಟ ಜವಾಬು ನನ್ನನ್ನು ದಂಗು ಬಡಿಸಿತ್ತು. ನಿನ್ನ ಪೂಜೆಯನ್ನು ನಾನು ಮಾಡುತ್ತಿದ್ದುದು ನಿಜ, ಆದರೆ ನಿನ್ನ ಬನದ ಎಲ್ಲಾ ದಾರಿಗಳನ್ನು ಅಕ್ಕ ಪಕ್ಕದ ಜನರು ಕಟ್ಟಿಬಿಟ್ಟಿದ್ದಾರೆ. ಪೂಜೆ ಬೇಕೆನ್ನುವ ನಿನಗೆ ಅವರಿಗೆ ಬುದ್ಧಿ ಬರುವಂತೆ ಮಾಡಲು ಸಾಧ್ಯವಾಗಲಿಲ್ಲವೆ? ಸುಮ್ಮನೆ ನನ್ನ ಮೇಲೇಕೆ ಹಾರಾಡುತ್ತೀ. ನೀನು ದಾರಿ ಮಾಡಿಕೊಟ್ಟರೆ ಪೂಜೆ ಮಾಡುತ್ತೇನೆ ಎಂದು ಅಬ್ಬರಿಸಿದ್ದರು. ಅಬ್ಬಾ! ದೇವರಿಗೆ ಬೆದರಿಕೆ ಹಾಕುವ ಶಕ್ತಿ ಇವರಿಗೆ ಹೇಗೆ ಬಂತಪ್ಪ ಎಂದು ಅಂದು ಅಚ್ಚರಿಯಾಗಿತ್ತು. ಆದರೆ ಇದಂತೂ ನಿಜ; ಶುದ್ಧ, ಸಾತ್ವಿಕ, ನಿಸ್ವಾರ್ಥ ಜೀವನವನ್ನು ನಡೆಸಿದವರು ಗಣಪಯ್ಯ ಬಾಯಿರಿಯವರು. ಹೀಗಾಗಿ ಅವರು ದೇವರಿಗೂ ಅಂಜುತ್ತಿರಲಿಲ್ಲ. ಅವರಲ್ಲಿದ್ದ ಅಪಾರ ಆತ್ಮಸ್ಥೈರ್ಯ ಅವರ ಬಾಯಿಯಿಂದ ಆ ರೀತಿ ಮಾತನಾಡಿಸಿತ್ತು. ನಾವು ಧರ್ಮಮಾರ್ಗದಲ್ಲಿದ್ದರೆ ದೇವರಿಗೂ ಹೆದರುವ ಅಗತ್ಯವಿಲ್ಲವೆಂಬುದು ಅಂದು ನನಗೆ ಮನವರಿಕೆಯಾಯಿತು.
ಅಂದಿನ ದಿನಗಳಲ್ಲಿ ನನ್ನ ಅಣ್ಣ ಮಣೂರು ಪಡುಕೆರೆಯ ಗುಡ್ಡೆ ಶಾಲೆಯಲ್ಲಿ ಮಾಸ್ತರನಾಗಿದ್ದ. ಒಮ್ಮೆ ಅವನು ಶಾಲೆಯ ಮಕ್ಕಳನ್ನು ಧರ್ಮಸ್ಥಳದ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ. ಆ ಕಾಲದಲ್ಲಿ ನಾನು ತುಂಬಾ ಬುದ್ಧಿವಂತ ಹುಡುಗನಾಗಿದ್ದೆ. ಹೀಗಾಗಿ ಅವನ ಶಾಲೆಯ ವಿದ್ಯಾರ್ಥಿಗಳು ಬರೆದ ಉತ್ತರಪತ್ರಿಕೆಗಳನ್ನು ನಾನು ತಿದ್ದಿ ಕೊಡುತ್ತಿದ್ದೆ. ಅದಕ್ಕಾಗಿಯೇ ಏನೋ, ಅವನು ನನ್ನನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ. ಧರ್ಮಸ್ಥಳವನ್ನು ತಲುಪಿದೆವು. ನೋಡಬೇಕಾಗಿದ್ದ ಸ್ಥಳಗಳನ್ನೆಲ್ಲ ನೋಡಿದೆವು. ಊಟವನ್ನು ಮಾಡಿದೆವು. ಊರಿಗೆ ಮರಳಲು ಪುನಃ ಬಸ್ಸನ್ನು ಹತ್ತಿದೆವು. ಬಸ್ಸಿನ ಕಂಡಕ್ಟರ್ ಒಂದು ತಟ್ಟೆಯನ್ನು ಹಿಡಿದುಕೊಂಡು ಎಲ್ಲ ಮಕ್ಕಳ ಮುಂದೆ ಬಂದ. ಧರ್ಮಸ್ಥಳಕ್ಕೆ ಬಂದವರು ಹಿಂದಿರುಗಿ ಹೋಗುವಾಗ ಏನಾದರೂ ಕಾಣಿಕೆಯನ್ನು ಸಲ್ಲಿಸಬೇಕು ಇಲ್ಲದಿದ್ದರೆ ಅಪಾಯ, ಅನಿಷ್ಟ ಎಂಬ ನಂಬಿಕೆ ಅಂದು ಚಾಲ್ತಿಯಲ್ಲಿತ್ತು. ಎಲ್ಲ ಮಕ್ಕಳೂ ತಮ್ಮ ತಮ್ಮ ಜೇಬಿನಲ್ಲಿದ್ದ ಐದು, ಹತ್ತು ಪೈಸೆ ನಾಣ್ಯಗಳನ್ನು ತಟ್ಟೆಗೆ ಹಾಕಿದರು. ನನ್ನ ಜೇಬಿನಲ್ಲಿ ನಾಲ್ಕಾಣೆಯ ಒಂದು ಪಾವಲಿ ಇತ್ತು. ಅದು ಅಮೃತೇಶ್ವರಿ ಹಬ್ಬಕ್ಕೆಂದು ಅಪ್ಪಯ್ಯ ಕೊಟ್ಟ ಹಣವಾಗಿತ್ತು. ಅದನ್ನು ಖರ್ಚು ಮಾಡದೆ ಜೋಪಾನವಾಗಿ ಉಳಿಸಿಕೊಂಡಿದ್ದೆ. ಅದನ್ನು ಈಗ ಈ ದೇವರಿಗೆ ಕೊಟ್ಟು ಬಿಡುವುದೇ? ನನ್ನ ಮನಸ್ಸು ಇಬ್ಬಂದಿಯಾಯಿತು. ಕೊನೆಗೆ ನಾಲ್ಕಾಣೆಯ ಮೇಲಿನ ಆಸೆಯೇ ತೀವ್ರವಾಗಿ “ಏನಾದರಾಗಲಿ ನಾನು ಹಾಕುವುದಿಲ್ಲ” ಎಂದು ನಿಶ್ಚಯಿಸಿ ಜೇಬಿನಲ್ಲಿದ್ದ ನಾಲ್ಕಾಣೆಯನ್ನು ಭದ್ರವಾಗಿ ಹಿಡಿದುಕೊಂಡೆ. ಅಲ್ಲಿಂದ ಊರಿಗೆ ಮರಳುವವರೆಗೂ ಜೀವವನ್ನು ಕೈಯಲ್ಲಿಯೇ ಹಿಡಿದುಕೊಂಡಿದ್ದೆ. ಸುದೈವದಿಂದ ಏನೂ ಆಗಲಿಲ್ಲ. ಹೀಗಾಗಿ ಅಂದು ಗೆದ್ದ ಒಂದು ಮೂಢನಂಬಿಕೆ ಮುಂದೆ ಹಲವಾರು ಮೂಢನಂಬಿಕೆಗಳನ್ನು ಗೆಲ್ಲಲು ಮೂಲವಾಯಿತು.
ದಿವಾಳಿ ತಿಂಗಳು ಕೊಯ್ಲಿನ ಕಾಲ. ಗದ್ದೆಗಳು ಮನೆಯಿಂದ ತುಂಬ ದೂರವಿದ್ದವು. ಕೊಯ್ಲು ಮಾಡಿದ ಫಸಲು ಹಸಿಯಾಗಿ ಭಾರವಾಗಿದ್ದುದರಿಂದ ಅಂದಂದೇ ಮನೆಗೆ ಹೊತ್ತು ತರುವುದು ಕಷ್ಟವಾಗುತ್ತಿತ್ತು. ಹೀಗಾಗಿ ಫಸಲು ಒಣಗಿ ಹಗುರವಾಗಲೆಂದು ಗದ್ದೆಗಳಲ್ಲಿಯೇ ಹರವಿ ಬಿಟ್ಟಿರುತ್ತಿದ್ದರು. ಅದು ಕಷ್ಟದ ದಿನಗಳ ಕಾಲ. ಅರೆಹೊಟ್ಟೆ ಊಟಕ್ಕೂ ಗತಿ ಇಲ್ಲದ ಜನರು ರಾತ್ರೋರಾತ್ರಿ ಗದ್ದೆಯಲ್ಲಿ ಹರವಿದ ಫಸಲುಗಳನ್ನು ಕದ್ದೊಯ್ಯುತ್ತಿದ್ದರು. ಹೀಗಾಗಿ ರಾತ್ರಿ ಗದ್ದೆ ಕಾಯುವ ಕೆಲಸವನ್ನು ನಾವು ಮಾಡಬೇಕಾಗಿತ್ತು. ಮೊದ ಮೊದಲು ಅಪ್ಪಯ್ಯ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಗದ್ದೆ ಕಾಯಲು ಹೋಗುತ್ತಿದ್ದರು. ಅವರ ಒಂದು ಅನುಭವವನ್ನು ಅವರ ಬಾಯಿಯಿಂದಲೇ ಕೇಳಿ.
ಅದೊಂದು ಬೆಳ್ಳಂಬೆಳ್ಳಗಿನ ಬೆಳದಿಂಗಳ ರಾತ್ರಿ.
“ನರಸಿಂಹ, ಅಲ್ಲಿ ನೋಡು, ದೂರದ ಮೂಲೆಗದ್ದೆಯಲ್ಲಿ ಏನೋ ಕುಳಿತಿದೆ, ತೋರುತ್ತಾ?”
“ನಿನಗೆ ಮರುಳು, ಗಣಪಯ್ಯ, ಅಲ್ಲಿ ಯಾರೂ ಕಾಣಿಸುತ್ತಿಲ್ಲ”
“ಸರಿಯಾಗಿ ನೋಡು, ನರಸಿಂಹ, ಅದು ಹಂದಾಡುತ್ತಿದೆ, ಭೂತವೇ ಇರಬೇಕು, ನನಗೆ ಹೆದರಿಕೆಯಾಗುತ್ತಿದೆ, ಮರಳಿ ಹೋಗೋಣ”
“ಬೇಡ ಗಣಪಯ್ಯ, ಅದೇನೆಂದು ನೋಡಿಯೇ ಬಿಡುವ, ಅಲ್ಲಿಗೆ ಹೋಗುವ”
ಗಣಪಯ್ಯನಿಗೆ ಭಯವಾಯಿತು, ಮುಂದೆ ಹೋಗಲು ನಿರಾಕರಿಸುತ್ತಿದ್ದ. ನಾನೇ ಮುಂದಡಿಯಿಟ್ಟೆ. ಅವನಿಗೆ ಹಿಂದೆ ಹೋಗಲೂ ಭಯ. ಅದುರುತ್ತ ನನ್ನ ಹಿಂದೆಯೇ ಬಂದ. ಹತ್ತಿರ ಹೋಗಿ ನೋಡಿದರೆ ಅದು ಗದ್ದೆಯ ಮೂಲೆಯಲ್ಲಿ ಹಾಕಿದ್ದ ಹಟ್ಟಿಗೊಬ್ಬರದ ರಾಶಿ. ಬೆಳದಿಂಗಳಿನ ಕತ್ತಲೆಗೆ ಯಾರೋ ಕುಳಿತಂತೆ ಕಾಣಿಸುತ್ತಿತ್ತು, ಹೆದರಿದ ಮನಸ್ಸಿಗೆ ಹಂದಾಡುತ್ತಿರುವಂತೆಯೂ ಭ್ರಮೆ ಹುಟ್ಟಿಸಿತ್ತು. ಆ ದಿನ ನನಗಿಂತ ಹೆಚ್ಚು ನಕ್ಕವನು ಗಣಪಯ್ಯನೇ.
ಅಪ್ಪಯ್ಯ ಹೇಳಿದ ಈ ಕಥೆ ಮುಂದೆ ನಾವೇ ಗದ್ದೆ ಕಾಯಲು ಹೋಗುವಾಗ ನೆನಪಿಗೆ ಬರುತ್ತಿತ್ತು. ನಮಗೆ ಸ್ವಲ್ಪ ಬುದ್ಧಿ ಬಂದಮೇಲೆ ಗದ್ದೆ ಕಾಯುವುದು ಮೋಜಿನ ಸಂಗತಿ ಎಂದು ಅನ್ನಿಸಿ ನಾವು ಮೂರು ನಾಲ್ಕು ಜನ ಅಣ್ಣತಮ್ಮಂದಿರು ಒಂದು ದೊಡ್ಡಮಂಡೆ ಬ್ಯಾಟರಿಯನ್ನು ಹಿಡಿದುಕೊಂಡು ಗದ್ದೆ ಕಾಯಲು ಹೊರಡುತ್ತಿದ್ದೆವು. ಹೀಗೆ ಒಂದು ದಿನ ಹೊರಟ ನಾವು ಗುಳಬಯಲಿನಿಂದ ಸಾಗಿ ಮಾವಿನ ಹಾಡಿಯ ಮೇಲಿನಿಂದ ಕದ್ರಿಕಟ್ಟಿನ ವರೆಗೆ ಹೋಗಿ ಹಿಂದಿರುಗಿ ಬರುತ್ತಿದ್ದೆವು. ಇನ್ನೇನು ಮನೆಯ ಹತ್ತಿರ ಬರಬೇಕು ಎನ್ನುವಷ್ಟರಲ್ಲಿ ಒಂದು ಎತ್ತರವಾದ ಸುಮಾರು ಎರಡಾಳಷ್ಟು ಎತ್ತರವಾದ ಬಿಳಿಯ, ಕೈಕಾಲುಗಳಿಲ್ಲದ ಆಕೃತಿಯೊಂದು ನಮ್ಮ ಕಡೆಗೇ ಬರುತ್ತಿದ್ದುದು ಕಾಣಿಸಿತು. ಎಲ್ಲರಿಗೂ ಎದೆ ಧಸಕ್ಕೆಂದಿತು. ಅದು ನಟ್ಟ ನಡುರಾತ್ರಿಯ ಸಮಯ. ಬೆಳದಿಂಗಳು ಎಲ್ಲೆಲ್ಲೂ ಹರಡಿತ್ತು. ಮರಗಿಡಗಳೆಲ್ಲ ಕಪ್ಪು ಆಕೃತಿಗಳಾಗಿ ಕಾಣಿಸುತ್ತಿದ್ದವು. ನಾವು ಬರುತ್ತಿದ್ದ ಸ್ಥಳದಲ್ಲಿ ಕೆಲವು ದಿನಗಳ ಹಿಂದೆ ಬೇಸಿಗೆಯಲ್ಲಿ ಒಂದು ಹೆಣವನ್ನು ಸುಟ್ಟಿದ್ದರು. ಹೀಗಾಗಿ ನಮಗೆ ಭಯದ ಕಟ್ಟೆಯೊಡೆಯಿತು. ಆದರೂ ನಾಲ್ಕು ಜನ ಜೊತೆಗೆ ಇದ್ದುದರಿಂದ ದೇವರ ಹೆಸರನ್ನು ಜಪಿಸುತ್ತ ಮುಂದೆ ಸಾಗಿದೆವು. ಭೂತ ಹತ್ತಿರ ಬಂದು ನಮ್ಮೆದುರು ಅಡ್ಡವಾಗಿ ನಿಂತು ಬಿಟ್ಟಿತು. ನಮ್ಮ ಎದೆಯೊಡೆಯುವ ಮೊದಲೇ ಭೂತ ಮಾತನಾಡತೊಡಗಿತು. ಆಗ ತಿಳಿಯಿತು, ಐತಾಳರ ಮಗ ಒಬ್ಬರೇ ಗದ್ದೆ ಕಾಯಲು ಹೊರಟಿದ್ದರು. ಒಂದು ಧೋತರದ ಎರಡು ಚಿಡಿಗಳನ್ನು ಬಿಡಿಸಿ ಒಂದು ಉದ್ದ ಕೋಲಿನ ತುದಿಗೆ ಅದನ್ನು ಸಿಕ್ಕಿಸಿ ಸುಮಾರು ಎರಡಾಳು ಎತ್ತರ ಎತ್ತಿಕೊಂಡು ಕೆಳಗೆ ಇಳಿದ ಧೋತರವನ್ನು ಮುಖ ಮಾತ್ರ ಕಾಣುವಂತೆ ಹೊದ್ದುಕೊಂಡು ಬರುತ್ತಿದ್ದರು. ಇದು ನಮಗೆ ಭೂತದ ಕಲ್ಪನೆಯನ್ನು ಹುಟ್ಟಿಸಿತ್ತು. ಗುರುತು ಹತ್ತಿದಾಗ ನಮಗೆ ನಗುವೋ ನಗು. ಮುಂದೆ ನಾವೂ ಅದೇ ವೇಷದಲ್ಲಿ ಹೊರಡುತ್ತಿದ್ದೆವೆನ್ನಿ.
ನೆನಪಿನ ಓಣಿಯಲ್ಲಿ ಎಣ್ಣೆದೀಪ ಹಿಡಿದುಕೊಂಡು ಹೊರಟಾಗ ಇಂತಹ ಅಸಂಖ್ಯ ಘಟನೆಗಳು ಎದುರಾಗುತ್ತವೆ. ಇಂದು ಹಿಂದಿರುಗಿ ನೋಡಿದರೆ ಒಂದಂತೂ ನಿಜ. “ನಮಗೆ ದೇವರ ಭಯ ಉಳಿದಿಲ್ಲ; ಭೂತಗಳ ಭಯ ಸಂಪೂರ್ಣ ಮಾಯವಾಗಿಲ್ಲ.”
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್