- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಮಹಾಕಾವ್ಯದ ಗುಣಲಕ್ಷಣಗಳನ್ನು ಹೇಳುವಾಗ ಕೆಥಾರ್ಸಿಸ್ ಎಂಬ ಮಾತನ್ನು ಅರಿಸ್ಟಾಟಲ್ ತನ್ನ ಕಾವ್ಯಾನುಸಂಧಾನದಲ್ಲಿ ವಿವರಿಸುತ್ತಾನೆ.
ನವರಸಗಳ ನಿರೂಪಣೆ, ದೃಶ್ಯ ವೈಭವ ಮತ್ತು ಭಾವನಾತ್ಮಕ ಸನ್ನಿವೇಶಗಳು ಮನುಷ್ಯನ ಉದ್ವೇಗ ಹೆಚ್ಚಿಸುತ್ತವೆ.
ಆ ಭಾವ ಪ್ರಪಂಚದಿಂದ ವಾಸ್ತವ ಲೋಕಕ್ಕೆ ಮರಳಿ ಬಂದು ಹಗುರಾಗುವ ಪ್ರಕ್ರಿಯೆಯೇ ಕೆಥಾರ್ಸಿಸ್.
‘ದುಃಖ’ ಬಹುವಾಗಿ ಕಾಡುವ ರಸಗಳಲ್ಲಿ ಒಂದು.
ಒಂದು ಕೃತಿಯನ್ನು ಓದುವಾಗ ಅಥವಾ ದೃಶ್ಯಗಳನ್ನು ನೋಡುವಾಗ ವ್ಯಕ್ತಿ ಭಾವಪರವಶನಾಗಿ ವಾಸ್ತವವನ್ನು ಮರೆತು,ತೇಲಿ ಹೋಗಿ ತನ್ನನ್ನು ತಾನು ಮರೆಯುತ್ತಾನೆ.ತನ್ನ ಎಲ್ಲಾ ಭಾವನೆಗಳನ್ನು ಪಾತ್ರದ ಭಾವನೆಗಳೊಂದಿಗೆ ಸಮೀಕರಿಸಿಕೊಂಡು ತಾನೇ ಪಾತ್ರವಾಗಿ ಬಿಡುತ್ತಾನೆ.
ವೈಯಕ್ತಿಕ ಬದುಕಿನ ಸಂಗತಿಗಳ ತಾಳ ಮೇಳ ಶುರುವಾಗುತ್ತದೆ.
ಮಹಾಭಾರತ ಗ್ರಂಥ ರೂಪದಲ್ಲಿ ಓದಿದಾಗ ಆದ ಅನುಭವಕ್ಕಿಂತಲೂ, ದೃಶ್ಯ ಮಾಧ್ಯಮದ ಮೂಲಕ ನೋಡಿದಾಗ ಪರಿಣಾಮ ದ್ವಿಗುಣಗೊಳ್ಳುತ್ತದೆ.
‘ಪುಸ್ತಕ’ ಕೇವಲ ಅಕ್ಷರಸ್ಥರ ಮಾಧ್ಯಮ ಆದರೆ ‘ದೃಶ್ಯ’ ಮಾಧ್ಯಮ ಜನಸಾಮಾನ್ಯರ ಮಾಧ್ಯಮವೂ ಹೌದು.
ಅದೇ ಕಾರಣಕ್ಕೆ ಸಿನೆಮಾ ಬಹು ಜನಪ್ರಿಯ ಮಾಧ್ಯಮವಾಗಿದೆ.
ಈಗ ಆ ಸ್ಥಾನವನ್ನು ಟಿವಿ ಕಿತ್ತುಕೊಂಡು ವ್ಯಾಪಿಸಿದೆ.
ಕೆಲ ತಿಂಗಳುಗಳಿಂದ ಕನ್ನಡಕ್ಕೆ ರೂಪಾಂತರ ಹೊಂದಿ ಪ್ರಸಾರವಾಗುತ್ತಿರುವ ಮಹಾಭಾರತ ತನ್ನ ಸಂಭಾಷಣೆಗಳ ಮೂಲಕ ಕನ್ನಡದ ಮನಸುಗಳಿಗೆ ಹೆಚ್ಚು ಆಪ್ತವಾಗಿದೆ.
ತುಂಬ ಕುತೂಹಲದಿಂದ ಮಹಾಭಾರತ ಧಾರಾವಾಹಿಯನ್ನು ಅಪ್ಪಟ ಸಾಹಿತ್ಯದ ವಿದ್ಯಾರ್ಥಿಯಾಗಿ ಅಸ್ವಾದಿಸುತ್ತೇನೆ.
“ಇಡೀ ಮಹಾಕಾವ್ಯದ ಕೇಂದ್ರ ವಸ್ತು ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ.”
ಧರ್ಮ, ಅಧರ್ಮ ತನ್ನ ತೀವ್ರ ಸ್ವರೂಪ ಪಡೆದುಕೊಳ್ಳುವುದು ಸದರಿ ಪ್ರಸಂಗದಿಂದ, ದುರ್ಯೋಧನ, ದುಶ್ಯಾಸನ ಮತ್ತು ಶಕುನಿಯ ಕುತಂತ್ರ ಮತ್ತು ಪ್ರತೀಕಾರ ಪಗಡೆ ಆಟದಲ್ಲಿ ಸೋಲುಂಟು ಮಾಡುವುದು ಇತಿಹಾಸ.
ಆದರೆ ಅಂತಿಮವಾಗಿ ದ್ರೌಪದಿಯ ಅವಮಾನ ಮತ್ತು ಅನೈತಿಕ ಸಂಬಂಧಕ್ಕೆ ಬಹಿರಂಗವಾಗಿ ಆಹ್ವಾನಿಸುವ ದುರ್ಯೋಧನನ ಉದ್ಧಟತನದ ‘ಮಾತು’ ಮತ್ತು ಹಿರಿಯರಾದ ಭೀಷ್ಮ ಪಿತಾಮಹ, ದ್ರೋಣಾಚಾರ್ಯ, ವಿಧುರ ಮತ್ತು ದೃತರಾಷ್ಟ್ರನ ‘ಮೌನ’ ತನ್ನ ವ್ಯಾಪಕತೆಯನ್ನು ಸಾದರ ಪಡಿಸುತ್ತದೆ.
ಮಾತು ಮತ್ತು ಮೌನ ತಂದ್ದೊಡ್ಡಬಹುದಾದ ಅಪಾಯಗಳ ಹೃದ್ಯಂಗ ನಿರೂಪಣೆ ಇದೆ.
ಹಿರಿಯರು ಧರ್ಮ ಕಾರಣದಿಂದ, ದೃತರಾಷ್ಟ್ರ ತನ್ನ ಕುರುಡು ವ್ಯಾಮೋಹದಿಂದ ಮೌನವಾಗುವ ಪ್ರಸಂಗ ಜಗತ್ತಿನ ಇತರ ಕಾವ್ಯಗಳಲ್ಲಿ ಸಿಗುವುದಿಲ್ಲ.
ಧರ್ಮ-ಅಧರ್ಮ ವ್ಯಾಖ್ಯಾನದ ಸಂಘರ್ಷಕ್ಕೆ ಬಲಿಯಾಗುವುದು ಅಸಹಾಯಕ ಕೆಳ ವರ್ಗದ ಶೋಷಿತರು ಮತ್ತು ಹೆಣ್ಣು ಎನ್ನುವುದನ್ನು ಮಹರ್ಷಿ ವ್ಯಾಸ ಒಪ್ಪಿಕೊಂಡಂತೆ ಭಾಸವಾಗುತ್ತದೆ.
ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಕುಮಾರವ್ಯಾಸ ಭಾರತ ಓದಲಾಗಿಲ್ಲ. ಮಹಾಭಾರತದ ಬಿಡಿ,ಬಿಡಿ ಪ್ರಸಂಗಗಳನ್ನು ದೃಶ್ಯ ಮಾಧ್ಯಮದ ಮೂಲಕ ಅನುಭವಿಸಲು ಮಾತ್ರ ಸಾಧ್ಯವಾಗಿದೆ.
ಮೊದಲ ಬಾರಿಗೆ ದೃಶ್ಯ ವೈಭವಗಳ ಮೂಲಕ ನೋಡುವಾಗ ಸಂಪೂರ್ಣ ಅನುಭೂತಿ ಲಭಿಸಲಾರಂಭಿಸಿ, ಮಹಾಕಾವ್ಯದ ಒಟ್ಟು ಸಾಮರ್ಥ್ಯ ಗ್ರಹಿಕೆಯಾಗಿದೆ.
ಇಡೀ ಮಹಾಭಾರತವನ್ನು ಕೇವಲ ಕಾವ್ಯವಾಗಿ ಮಾತ್ರ ಸ್ವೀಕರಿಸಬೇಕು ಎಂಬುದನ್ನು ಮತ್ತೊಮ್ಮೆ ನಿವೇದಿಸಿಕೊಳ್ಳುವೆ. ನಿಜವಾದ ಘಟನೆ ಎಂಬ ವಾದ ಬದಿಗಿರಿಸಿ ಮಹಾಕಾವ್ಯವಾಗಿ ಮಾತ್ರ ಒಪ್ಪಿಕೊಳ್ಳೋಣ.
ಮನಸಿನ ಆಳದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಭಾವನೆಗಳು ಸಮೀಕರಣಗೊಂಡಿರುತ್ತವೆ.
ಪಾಂಡವರು ಸಕಾರಾತ್ಮಕ, ಕೌರವರು ನಕಾರಾತ್ಮಕ ಎಂಬ ವಾದ ಸರಣಿ ಹಿಡಿದುಕೊಂಡು ಇಡೀ ಕಾವ್ಯದ ರಸ ಸ್ವಾದವನ್ನು ಅನುಭವಿಸಬೇಕು.
ಮನುಷ್ಯನ ವಿಕಾರ ಮತ್ತು ಸಕಾರಗಳಿಗೆ ಹೆಣ್ಣು ಬಲಿಯಾಗುತ್ತಾಳೆ ಎಂಬುದನ್ನು ಮಹರ್ಷಿ ಒಪ್ಪಿಕೊಂಡ ಫಲಶೃತಿಯೇ ದ್ರೌಪದಿ.
ಸಕಾರಾತ್ಮಕ ಉದ್ದೇಶ ಹೊಂದಿದ್ದ ಪಾಂಡವರ ಧರ್ಮ ಸಂಕಟ ತಪ್ಪಿಸಲು ಕುಂತಿ ಮಾತಿನಂತೆ ದ್ರೌಪದಿ ಐವರು ಪುರುಷರನ್ನು ಮದುವೆಯಾಗುವ ಹಿಂಸೆ ಅನುಭವಿಸುತ್ತಾಳೆ. ಕುಂತಿ ಮೊದಲ ಬಾರಿ ಶೋಷಣೆ ಮಾಡುತ್ತಾಳೆ.
ಆದರೆ ಅವಳ ತ್ಯಾಗವನ್ನು ಅರಿತ ಯುಧಿಷ್ಟಿರ ಅವಳನ್ನು ಧರ್ಮದ ಹೆಸರಿನಲ್ಲಿ ಪಣಕ್ಕಿಟ್ಟು ಹೊಸ ರೀತಿಯಲ್ಲಿ ಎರಡನೇ ಬಾರಿ ಶೋಷಣೆ ಮಾಡುತ್ತಾನೆ.
ನಂತರ ದುಷ್ಟ ದುರ್ಯೋಧನ ಅಧರ್ಮದ ಹೆಸರಿನಲ್ಲಿ ಸೀರೆ ಸೆಳೆದು ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಾನೆ.
ಸಾಲದ್ದಕ್ಕೆ ತಾಯಿ ಸಮಾನಳಾದ ಅತ್ತಿಗೆಯನ್ನು ದೇಹ ಸುಖ ಅನುಭವಿಸಲು ಆಹ್ವಾನಿಸಲು ಅವಳು ಐವರೊಂದಿಗೆ ಮದುವೆಯಾದ ಕಾರಣ ಚಾರಿತ್ರ್ಯ ಹೀನಳು ಎಂಬ ಕೀಳು ಭಾವನೆ ಬೇರೆ.
ಐದು ಜನರನ್ನು ಮದುವೆಯಾಗಲು ಒಪ್ಪಿಕೊಂಡ ಹಿಂದಿನ ತ್ಯಾಗವನ್ನು ದುರ್ಬಲ ಪುರುಷ ಅರ್ಥ ಮಾಡಿಕೊಳ್ಳಲಾರ ಎಂಬುದು ಮಹರ್ಷಿಯ ವಾದ.
ಮನುಷ್ಯನ ಉದ್ಧಟತನದಿಂದ ದೊರೆ ದಾಸನಾಗುತ್ತಾನೆ,ದಾಸ ದೊರೆಯಾಗುತ್ತಾನೆ.
ದೊರೆಸಾನಿ ದ್ರೌಪದಿ ಕೆಲವೇ ಕ್ಷಣಗಳಲ್ಲಿ ದಾಸಿಯಾಗುವುದು ಧರ್ಮದ ಬಹುದೊಡ್ಡ ವ್ಯಂಗ್ಯ.
ಆದರೆ ಅವಳು ತನ್ನನ್ನು ಹೀನಾಯವಾಗಿ ಎಳೆದು ತಂದ ದುಶ್ಯಾಸನನ ಕ್ರೌರ್ಯದಿಂದ ಬೆದರಿ ಹೋಗುತ್ತಾಳೆ. ದೈಹಿಕ ಹಿಂಸೆ,ಮಾನಸಿಕ ಅನಾಚಾರ ಪುರುಷ ಮನಸಿನ ವಿಕೃತ ರೂಪದ ನಿದರ್ಶನ.
ಪುರುಷ ಹೆಣ್ಣಿನ ಮೇಲೆ ನಡೆಸುವ ದೌರ್ಜನ್ಯವನ್ನು ನಿರೂಪಿಸಲೆಂದು ಮಹಾಕವಿ ವ್ಯಾಸ ಸದರಿ ಪ್ರಸಂಗವನ್ನು ಪರಿಣಾಮಕಾರಿಯಾಗಿ ಚಿತ್ರಿಸಿ, ಪುರುಷರ ಅನಾಗರಿಕತೆಯನ್ನು ಬೆತ್ತಲೆ ಮಾಡಿದ್ದಾನೆ.
ದುಶ್ಯಾಸನ ವಿಕೃತ ಮನಸಿನ ಪುರುಷರ ಪ್ರತಿನಿಧಿ.
ದುರ್ಯೋಧನ ಸೇಡಿಗೂ ಹೆಣ್ಣೇ ಬಲಿಯಾಗಲಿ ಎಂದು ಬಯಸುವ ಕಾಮುಕ.
ಭಾರತೀಯ ಚಿತ್ರ ವಿಚಿತ್ರ ಧಾರ್ಮಿಕ ವ್ಯಾಖ್ಯಾನಗಳು ಮಹಿಳೆಯ ಶೋಷಣೆಯ ಸುತ್ತಲೂ ಗಿರಕಿ ಹೊಡೆಯುತ್ತದೆ.
ಇದನ್ನು ಗ್ರಹಿಸದ ಧರ್ಮ ಪರಿಪಾಲಕ ಪಾಂಡವರು ಅವಳನ್ನು ಪಣಕ್ಕಿಟ್ಟು ಸ್ತ್ರೀ ವಾದಿ ಚಿಂತನೆಗೆ ಅಪಮಾನ ಮಾಡುತ್ತಾರೆ.
‘ಆಸ್ತಿ,ಅಂತಸ್ತಿನ ಮೇಲೆ ರಾಜನ ಅಧಿಕಾರ ಇರುತ್ತದೆ, ಹೆಣ್ಣಿನ ಭಾವನೆಗಳ ಮೇಲೆ ಅಲ್ಲ’ ಎಂಬ ದ್ರೌಪದಿ ಪ್ರಶ್ನೆಗೆ ಅಂದು ಉತ್ತರ ಸಿಕ್ಕಿಲ್ಲ, ಈಗಲೂ ಸಿಕ್ಕಿಲ್ಲ.
ಏಕೆಂದರೆ ಇದು ಪುರುಷ ಪ್ರಧಾನ ವ್ಯವಸ್ಥೆ ಭಾರತದಲ್ಲಿ ಧರ್ಮ ಮತ್ತು ಕಟ್ಟಳೆಗಳ ನೆಪದಲ್ಲಿ, ವಿದೇಶದಲ್ಲಿ ಜಾಹಿರಾತು ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಸ್ತ್ರೀ ವಸ್ತ್ರಾಪಹರಣ ಅಗುತ್ತಲಿದೆ.
ಸ್ತ್ರೀ ವಾದಿ ಚಳುವಳಿಯ ಪ್ರತಿನಿಧಿಯಾಗಿ ದ್ರೌಪದಿ ಎತ್ತಿದ ಪ್ರಶ್ನೆಗಳಿಗೆ ಮಹಾದೇವಿ ಅಕ್ಕ ಅಧ್ಯಾತ್ಮಿಕ ಉತ್ತರ ಕೊಟ್ಟಿದ್ದಾಳೆ.
ಆದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ಬದುಕುವ ಮಹಿಳೆ ಅಕ್ಕಮಹಾದೇವಿ ಆಗಲಾರಳು.
ಸಮಾಜದಲ್ಲಿ ತನ್ನ ಅಸ್ಮಿತೆ ಉಳಿಸಿಕೊಂಡು ಆಗುವ ಅಪಮಾನಕ್ಕೆ ಪ್ರಶ್ನೆ ಕೇಳಬಾರದು,ತಾನೇ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಇದೆ.
ಕಾವ್ಯದ ಓದಿನ ಸಂದರ್ಭದಲ್ಲಿ ಅಪಾರ ಆರ್ದ್ರತೆ ಉಂಟು ಮಾಡಿ ದುಃಖಕ್ಕೆ ದೂಡಿದ ವಸ್ತ್ರಾಪಹರಣ ಪ್ರಸಂಗ ನನ್ನನ್ನು ಕಲಕಿ ಹಾಕಿತು.
ದ್ರೌಪದಿ ನಮ್ಮನ್ನು ಎಂದಿಗೂ ಕ್ಷಮಿಸಲಾರಳು,ಕ್ಷಮಿಸಬಾರದು ಕೂಡ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್