ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಗಿ, ಕಳವೆಯ ನಾಟಿ

ಬಿ.ಎಸ್. ಚಂದ್ರಶೇಖರ್
ಇತ್ತೀಚಿನ ಬರಹಗಳು: ಬಿ.ಎಸ್. ಚಂದ್ರಶೇಖರ್ (ಎಲ್ಲವನ್ನು ಓದಿ)

ನಾಡಿನ ಈ ಎದೆ ಗೂಡಿನ ಜಾಗ, ಗುನುಗುವ ಅದೆ ಸಾವೇರಿ
ಯಾಕೋ ಸಾಕಾಗಿದೆ ಬೇರೇನಿದೆ ದಾರಿ?
ಜಡಿಯುವ ಮಳೆಯಿದ ಹೊಡೆದಟ್ಟುವ ಗಾಳಿ
ಬೇಕೇ ಬೇಕಾಗಿದೆ ಮರುಬೇಸಗೆ ಪಾಳಿ

ಅರೆಮುಳುಗಿದ ಸಂಕವನೇರಿ ಕೆರೆಗುರುಳಿದ ಲಾರಿ
ಬರಿಜನರಿದ್ದರು ನಿಯಮಾವಳಿ ತೂರಿ
ಸರಿಯಿದು ಅಪಘಾತ, ಬದುಕಿದ್ದವ ತಾತ
ಅವನೊಬ್ಬನೆ ಸದ್ಯಕೆ ಮರಣವ ಗೆಲಿದಾತ
ಬರಿ ಕೆಸರೆರಚಾಟ ಕಿರಿಕಿರಿ ಕಿರುಚೀರಿ
ಸರಿಯಿರದುದು ತಿಳಿದಿರುವುದೆ ಮರೆತಿದೆ ಸರಿದಾರಿ
ಕರಿಮೋಡದ ಭಾರ, ಮಳೆ ಬಿದ್ದುದೆ ಘೋರ!

ಹತ್ತಿತೆ ವಾಹನ ರಸ್ತೆಯ ಬೈತಲೆಗೆ?
ಉಹು.. ಮರೆತಿದೆ ಹಾದಿಯೆ ಚಕ್ರದ ಕಂಗಳಿಗೆ
ಕೆರೆಯೊಡೆದಿದೆ ನೋಡಿ ಹಿರಿಮೀನುಗಳೊದ್ದಾಡಿ
ನಡುರಸ್ತೆಯ ಪಾಡಿಗೆ ನಗಿ, ಕಳವೆಯ ನಾಟಿ
(ತೋರಿಕೆ? – ರೋಡಲಿ ಬರಿ ಬಿತ್ತನೆ ಬೇಡ
ದೂರಕೆ ಕಣ್ಣಿಡಿ: ಬೆಳಸಿರಿ ಹಿರಿ ಕಾಡ!)

ಜಡಿ ಮಳೆಯತಿ, ಟ್ರಿಪ್ಪಾಗುವ ಸ್ವಿಚ್ಚು
ಹಳೆದೀಪವ ತೆಗೆ ಹಚ್ಚು
ಒರೆಸಿಡು ಲಾಟೀನಿನ ಮಸಿಹಳದಿಯ ಗಾಜು
ಮರೆಯದೆ ಕೊಳವೆಯ ಹುಸಿಬಿಳಿಬಣ್ಣದ ಮೋಜು
ಮಾಸಿದ ಮೀಸೆಯ ಮೇಲಿಡು ಕೈಯ
ಅಲ್ಲವೆ ನಿನ್ನುದ್ಯೋಗವೆ ರಾಜಕೀಯ
ಆಸೆಯ ದೋಸೆಗೆ ಎಣ್ಣೆಯ ಹುಯ್ಯಿ
ತಪ್ಪಿದ್ದರು ಇರದಿದ್ದರು ಬಯ್ಯಿ, ತೀರಿಸಿಕೋ ಮುಯ್ಯಿ.

ಬಿ.ಎಸ್. ಚಂದ್ರಶೇಖರ್