- ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ.. - ಆಗಸ್ಟ್ 23, 2024
- ನಮ್ಮೂರ ರಾಮ :ಹರವು ಶ್ರೀ ರಾಮ ಮಂದಿರ - ಜನವರಿ 20, 2024
- ಹೊಯ್ಸಳ ಕಾಲದ ಅಮೂಲ್ಯ ನಿಧಿ ಈ ದೇಗುಲ - ನವೆಂಬರ್ 11, 2023
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಗ್ರಾಮ ಹರವು. ಈ ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಕ್ರಿ.ಶ.1369ರಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ದೊರೆ ವೀರ ಬಕ್ಕಣ್ಣನಿಂದ ನಿರ್ಮಿತವಾದ ಬೃಹತ್ ಶ್ರೀ ರಾಮ ದೇವರ ದೇವಸ್ಥಾನವೇ ಸಾಕ್ಷಿಯಾಗಿ ನಿಂತಿದೆ.
ವಿಶಾಲವಾದ ಪ್ರದೇಶದಲ್ಲಿ ಬೃಹತ್ ಕಲ್ಲು ಕಂಬಗಳಿಂದ ನಿರ್ಮಿತವಾಗಿರುವ ಈ ದೇವಾಲಯದ ಪ್ರವೇಶದ್ವಾರ 6 ಅಡಿ ಎತ್ತರವಿದೆ. ಈ ದ್ವಾರವನ್ನು ದಾಟಿ ಒಳ ನಡೆಯುತ್ತಿದ್ದಂತೆಯೇ ಎದುರಾಗುವ ವಿಸ್ತರವಾದ ಹಜಾರ ಕಣ್ಮನ ಸೆಳೆಯುತ್ತದೆ. 42 ದೈತ್ಯ ಕಂಬಗಳ ಆಧಾರದಿಂದ ನಿರ್ಮಿಸಲಾಗಿರುವ ಈ ಹಜಾರದ ಪ್ರತಿಕಂಬದ ಮೇಲ್ಬಾಗವೂ 6 ಮೂಲೆಗಳಿಂದ ಕೂಡಿದ್ದರೆ ಕೆಳಭಾಗ ಚೌಕಾಕಾರದಲ್ಲಿದೆ. ದೀಪಗಳನ್ನು ಹಚ್ಚಲು ಕೆಲವು ಕಂಬಗಳಲ್ಲಿ ದೀಪಾಕೃತಿಗಳನ್ನು ಕೊರೆಯಲಾಗಿದೆ.
ನವರಂಗ: ಸಭಾ ಮಂಟಪದಲ್ಲಿ ಎದುರಾಗುವ ಎರಡನೇ ದ್ವಾರವನ್ನು ಪ್ರವೇಶಿಸಿದಂತೆಯೇ 68 ಕಂಬಗಳ ಆಧಾರದಲ್ಲಿ ನಿಮಾಣವಾಗಿರುವ ನವರಂಗವಿದೆ. ಗಭಗುಡಿ ಸುತ್ತ ಪ್ರದಕ್ಷಿಣ ಪಥವಿದ್ದು ಗರ್ಭಗೃಹದ ಹೊರ ಭಿತ್ತಿಯಲ್ಲಿ ಕಲಾತ್ಮಕವಾದ ಉಬ್ಬು ಶಿಲ್ಪಗಳಿವೆ. ಉತ್ತರ ದಿಕ್ಕಿನ ಹೊರಭಿತ್ತಿಯಲ್ಲಿ ನಾಗಬಂಧವನ್ನು ಬಿಡಿಸಲಾಗಿದೆ.
ಇನ್ನು ಗರ್ಭಗುಡಿ ಪ್ರವೇಶ ದ್ವಾರದಲ್ಲಿ 4 ಅಡಿ ಎತ್ತರದ ಜಯ-ವಿಜಯರ ದ್ವಾರಪಾಲಕ ವಿಗ್ರಹಗಳಿವೆ. ದೇವಾಲಯದ ಮೂಲ ವಿಗ್ರಹ ಶ್ರೀರಾಮ ದೇವರು ಯಾವುದೋ ಕಾಲಘಟ್ಟದಲ್ಲಿ ಕಳ್ಳತನವಾಗಿದ್ದು ದೇವಾಲಯವು – ದೇವರಿಲ್ಲದ ಆಲಯವಾಗಬಾರದು ಎಂಬ ಕಾರಣಕ್ಕೆ ಶ್ರೀಲಕ್ಮೀನಾರಾಯಣ, ಶ್ರೀ ದೇವಿ ಭೂದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಶ್ರೀ ರಾಮಚಂದ್ರನ ಆಲಯವೇ ಆಗಿತ್ತು ಎಂಬುದನ್ನು ಶಾಸನಗಳು ಮತ್ತು ಜನಪರ ನಂಬಿಕೆ ದೃಢಪಡಿಸುತ್ತಿದೆ.
ಪ್ರನಾಳ: ಗರ್ಭಗುಡಿಯ ಉತ್ತರಕ್ಕೆ ಕಲಾತ್ಮಕವಾದ ಹಾಗೂ ನಯನ ಮನೋಹರವಾದ ವಿಗ್ರಹಕ್ಕೆ ಅಭಿಷೇಕ ಮಾಡಿದರೆ ತೀರ್ಥ ಹೊರಹೋಗಲು ಭಿತ್ತಿಯಲ್ಲಿ ಸಿಂಹವಕ್ತ್ರ ಶೈಲಿಯ ರಂಧ್ರಯುಕ್ತ ಪ್ರನಾಳವಿದೆ. ಈ ರೀತಿಯ ಪ್ರಣಾಳವು ಸ್ವತ: ರಾಜನೇ ಈ ದೇವಾಲಯವನ್ನು ಕಟ್ಟಿಸಿರುವುದರ ಲಕ್ಷಣವಾಗಿದೆ.
ಗರುಡ ಸ್ಥಂಭ: ದೇವಾಲಯದ ಮುಂಭಾಗದಲ್ಲಿ ಸುಮಾರು 3೦ ಅಡಿ ಎತ್ತರದ ಗರುದ ಸ್ಥಂಭವಿದ್ದು, ಇದರ ಪಾದ ಭಾಗದಲ್ಲಿ ದೇವಾಲಯಕ್ಕೆ ಎದುರಾಗಿ ಕೈಮುಗಿದು ನಿಂತಿರುವ ಗರುಡ ಶಿಲ್ಪವಿದೆ – ಪೂರ್ವಕ್ಕೆ ಶಂಖ, ಉತ್ತರಕ್ಕೆ ಸಿಂಹ, ದಕ್ಷಿಣಕ್ಕೆ ಆಂಜನೆಯರ ಉಬ್ಬು ಶಿಲ್ಪವಿದೆ, ಸ್ಥಂಭದ ಸಮೀಪದಲ್ಲಿಯೇ ಓಕುಳಿ ಗುಂಡಿಯಿದೆ.
ದೇವಾಲಯದ ವಿಶೇಷ – ಮುಷ್ಟಿಕೆ.
ದೇವಾಲಯ ನಿರ್ಮಿಸಿದ ಶಿಲ್ಪಿಯ ಕಲಾ ನೈಪುಣ್ಯಕ್ಕೆ ಹೆಗ್ಗುರುತಾದ ಏಕಶಿಲಾಕೃತಿಯ ಮುಷ್ಟಿಕೆ ದೇವಾಲಯದಲ್ಲಿದೆ. ಅಂಗೈಯಲ್ಲಿಟ್ಟು ನೋಡಬಹುದಾದ ಈ ಕಲಾಕೃತಿಯ ಸುತ್ತ ಸಣ್ಣ ಸಣ್ಣ ಕಂಬಗಳ ಸುಂದರವಾದ ಕೆತ್ತನೆಯಿದೆ. ಅದರ ಮೇಲೆ ಅಷ್ಟದಿಕ್ಪಾಲಕರ ಮೂರ್ತಿಯನ್ನು ಕಡೆಯಲಾಗಿದೆ. ಒಳಗಡೆ ನಿಂಬೆಹಣ್ಣಿನ ಆಕಾರದ ಎರಡು ಸಾಲಿಗ್ರಾಮಗಳು ಓಡಾಡುವಂತೆ ನಿರ್ಮಿಸಲಾಗಿದೆ. ಮುಷ್ಟಿಕೆ ಮೇಲೆ ಸರ್ಪಬಂಧವಿದೆ.
ದೇವಾಲಯವು ಒಂದು ಕಾಲಘಟ್ಟದಲ್ಲಿ ಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ದೇವಾಲಯದ ಸುತ್ತಲ ಪೌಳಿಯು ಕುಸಿದಿದ್ದು, ನಂತರ ದಿನಗಳಲ್ಲಿ ಹರವು ಗ್ರಾಮದ ಎಚ್ಚೆತ್ತ ಯುವಜನತೆ, ಸಾಮಾಜಿಕ ಸಂಕಲ್ಪದಿಂದ ದೇವಾಲಯದ ಜೀರ್ಣೋದ್ಧಾರ ಮಾಡಲು ಶ್ರಮಿಸಿದ್ದು, 1996ರ ಅಕ್ಟೋಬರ್ 28ರಿಂದ ಅಧಿಕೃತವಾಗಿ ಆರಂಭವಾಗಿ ಈಗ ದೇವಾಲಯದ ಗತವೈಭವ ಪಡೆದಿದೆ. ಜೀರ್ಣೋದ್ಧಾರದ ಬಳಿಕ ದೇವಾಲಯದ ಸುತ್ತ ನಿರ್ಮಾಣವಾಗಿರುವ ಔಷಧ ಸಸ್ಯಗಳ ವನ ಬೆಳೆಸಲಾಗಿದ್ದು, ದೇವಾಲಯಕ್ಕೆ ರಕ್ಷಣೆಯಾಗಿ ತಂತಿಬೇಲಿ ವ್ಯವಸ್ಥೆ ಮಾಡಲಾಗಿದೆ. ದೇಗುಲ ಈಗ ನವ ವಧುವಿನಂತೆ ಕಂಗೊಳಿಸುತ್ತಿದೆ.
ದೇವಾಲಯಕ್ಕೆ ಭೇಟಿ ನೀಡಿದ್ದ ವಿಧಾನಪರಿಷತ್ ಸದಸ್ಯರಾಗಿದ್ದ ಗೋ. ಮಧುಸೂಧನರವರು ದೇವಾಲಯದ ನಿರ್ಮಾಣ ಶೈಲಿಗೆ ಮತ್ತು ನಡೆದಿರುವ ಅಭಿವೃದ್ದಿ ಕಾರ್ಯಗಳಿಗೆ ಸ್ಪಂದಿಸಿ ಶಾಸಕರ ನಿಧಿಯಿಂದ ನೆರವು ನೀಡಿದ್ದು, ಪರಿವಾರ ಸಮೇತ ಶ್ರೀರಾಮಚಂದ್ರನ ಪುನರ್ ಪ್ರತಿಷ್ಠಾಪನೆಯಾಗಿ ದೇವಾಲಯ ಕಂಗೊಳಿಸುತ್ತಿದೆ.
ಈ ದೇವತಾ ಕಾರ್ಯ, ಸಾಮಾಜಿಕ ಕಾರ್ಯ, ಪ್ರಾಚೀನ ಸ್ಮಾರಕಗಳನ್ನು ಉಳಿಸುವ ಪ್ರಯತ್ನದಲ್ಲಿ ತೊಡಗಿರುವ ಮನಸ್ಸುಗಳು ಹಲವು, ಸಾಸಿರ. ಎಲ್ಲರ ನಿರಂತರ ಪ್ರಯತ್ನ ಮತ್ತು ಹಂಬಲದಿಂದಲೇ ದೇವಾಲಯವು ಅದ್ಬುತವಾಗಿ ತನ್ನ ಗತವೈಭವನ್ನು ಮೈಗೂಡಿಸಿಕೊಳ್ಳುತ್ತಿದೆ.
ಈ ಕಾರ್ಯದಲ್ಲಿ ಸಾಂಕೇತಿಕವಾಗಿ ಹೆಸರಿಸಬಹುದಾದ ಹೆಸರುಗಳು: ತೈಲೂರು ವೆಂಕಟಕೃಷ್ಣ, ಹರವು ದೇವೇಗೌಡ ಮತ್ತು ಅವರ ಯುವತಂಡ, ಹರವು ಸುತ್ತಮುತ್ತಲ ಗ್ರಾಮಸ್ಥರು, ಹಲವು ರೀತಿಯಲ್ಲಿ ಸಹಕರಿಸಿದ ಅಧಿಕಾರಿ ವರ್ಗ, ಎಲ್ಲರೂ ವಂದನೀಯರು. ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂ:9481675575.
ಹೋಗುವುದು ಹೇಗೆ: ಮೈಸೂರಿನಿಂದ ಕೆ.ಆರ್.ಎಸ್ ಮಾರ್ಗವಾಗಿ ಹೋದರೆ ಹರವು 27 ಕಿ.ಮೀ ದೂರವಷ್ಟೇ. ಶ್ರೀರಂಗಪಟ್ಟಣದಿಂದ 12 ಕಿ.ಮೀ. ಪಾಂಡವಪುರದಿಂದ 7 ಕಿ.ಮೀ., ಕೆ.ಆರ್.ಎಸ್.ನಿಂದ 7 ಕಿ.ಮೀ .
ಬೆಳಗುಲಿಯ ಬಗ್ಗೆ ಓದಲು …
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್