- ನಲವಿನ ನಾಲಗೆ – ನನಗೆ ನಿಲುಕಿದ್ದು - ಡಿಸಂಬರ್ 3, 2020
ಬರಹ, ಓದು, ಅಭಿಪ್ರಯಿಸುವಿಕೆ ಹಾಗೂ ವಿಮರ್ಶಿಸುವಿಕೆ ಇವು ಸಾಹಿತ್ಯ ಲೋಕದ ನಿರಂತರ ಪ್ರಕ್ರಿಯೆಗಳು, ಒಬ್ಬ ಬರಹಗಾರನಿಗೆ ಬರೆಯುವುದರಲ್ಲಿ ಕುತೂಹಲ ಕೇಂದ್ರಿಕರಿಸಿದರೆ, ಒಬ್ಬ ಓದುಗನಿಗೆ ಓದುವ ಗೀಳು ಮೈಗಂಟಿರುತ್ತದೆ. ಇಂತಹದ್ದೇ ಗೀಳಿನಲ್ಲಿ ಬಿದ್ದ ನನಗೆ ಇತ್ತೀಚಿಗಷ್ಟೇ ಪ್ರಕಟಗೊಂಡಿದ್ದ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ, ಲೇಖಕಿ ಶ್ರೀಮತಿ ಸುಮಾವೀಣಾರವರ ಪ್ರಬಂಧ ಸಾಹಿತ್ಯದ ಕೃತಿಯೊಂದನ್ನು ಓದುವ ಸದಾವಕಾಶ ನನ್ನ ಪಾಲಿಗೆ ಲಭಿಸಿತು ಎಂದರೆ ತಪ್ಪಾಗಲಾರದು ಅಂದಹಾಗೆ ಆ ಕೃತಿಯ ಹೆಸರು “ನಲವಿನ ನಾಲಿಗೆ”.
“ನಲವಿನ ನಾಲಗೆ” ಹಾಗಾದರೆ ಈ ಕೃತಿ ನಾಲಿಗೆಯನ್ನು ಕುರಿತು ಹೇಳುವಂತದ್ದೇ?ಎಂದು ಪ್ರಶ್ನೆ ಹಾಕಿಕೊಂಡರೆ ಹೌದು! ಮತ್ತು ಇಲ್ಲ! ಎನ್ನುವ ಹಾಗೂ ಮತ್ತೊಂದು ಪ್ರಶ್ನೆಗೆ ಎಡೆಮಾಡಿಕೊಡುವ ದ್ವಂದ್ವಾತ್ಮಕ ಉತ್ತರವಾಗಿರುತ್ತದೆ. ಈ ರೀತಿಯ ಉತ್ತರಕ್ಕೆ ಕಾರಣವೂ ಉಂಟು. “ನಲವಿನ ನಾಲಿಗೆ” ಅನೇಕ ಪ್ರಬಂಧಗಳ ಒಂದು ಸಂಕಲನ. ಅಂದರೆ ಇದೊಂದು ಪ್ರಬಂಧ ಸಂಕಲನ. ಅನೇಕ ಪ್ರಬಂಧಗಳಲ್ಲಿ ಒಂದಾದ “ನಲವಿನ ನಾಲಿಗೆ” ಲೇಖನವು ನಾಲಿಗೆಯ ಸಮಗ್ರ ಮೀಮಾಂಸೆಯನ್ನು ಓದುಗರ ಮುಂದೆತೆರೆದಿಡುತ್ತದೆ. ಹಾಗೂ ಮತ್ತೊಂದು ಮುಖ್ಯ ವಿಚಾರ ನಾಲಿಗೆಯೂ ಮನಸ್ಸಿನ ಭಾವನಗಳಿಗೆ, ಅನಿಸಿಕೆ, ಅಭಿಪ್ರಾಯಗಳಿಗೆ ಜೀವತುಂಬುವ ಮೂಲಕ ಸಹೃದಯ ಮನಸ್ಸನ್ನುತಲುಪುವಂತೆ ಮಾಡುವ ಧ್ವನ್ಯಾಂಗ ಮತ್ತು ಸಾಧನ. ಹಾಗಾಗಿ ಈ ಪ್ರಬಂಧ ಸಂಕಲನಕ್ಕೆ ಇಟ್ಟಿರುವ ಶೀರ್ಷಿಕೆ ಸೂಕ್ತವೆನಿಸುತ್ತದೆ.
ಒಟ್ಟು ಹದಿನೈದು ಲೇಖನಗಳಲ್ಲಿ ಮೊದಲನೆಯದು “ಸ್ವಾತಿ ಮುತ್ತು”. ಮುತ್ತಿನ ಮಹತ್ವವವನ್ನು ಹೇಳುತ್ತಲೇ ಮೊದಲಿಗೆ ಅದರ ವ್ಯುತ್ಪತ್ತಿ ಹಾಗೂ ರಕ್ಷಣೆಯನ್ನು ವಿವರಿಸಲಾಗಿದೆ. ಮುತ್ತು ಬಹಳ ಅಮೂಲ್ಯವಾದ ವಸ್ತು. ಈ ಅಮೂಲ್ಯ ವಸ್ತುವನ್ನು ಜೀವನದ ಅಪರೂಪ ಮತ್ತು ಅಮೂಲ್ಯ ಸಂದರ್ಭಗಳಲ್ಲೆಲ್ಲಾ ಹೇಗೆ ಬಳಸುತ್ತಲೇ ಬರಲಾಗಿದೆ ಎಂಬುದನ್ನು ಉದಾಹರಣೆಯ ಸಮೇತ ಓದುಗರಿಗೆ ತಲುಪಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಮುತ್ತು ಬದುಕಿನ ಗಾಂಭಿರ್ಯ, ಮುತ್ತು ಬದುಕಿನ ಘನತೆ ಹಾಗೆಯೇ ಅದೇ ಮುತ್ತು ಬದುಕಿನ ಒಲವಿನ ಹೃದಯಗಳ ಕಣ್ಮಣಿಯೂ ಹೌದು. ಹಾಗಾದರೆ ಇಂತಹ ಮುತ್ತನ್ನು ಸಂಬಂಧಗಳಿಗೆ ಬೆಸೆದು ಮುತ್ತಿನಂತಹ ಸಂಬಂಧದ ಉಳಿವಿಗಾಗಿ ಲೇಖಕಿಯಲ್ಲಿ ಹಂಬಲ ವ್ಯಕ್ತವಾಗುತ್ತದೆ.
ಬಳೆಯನ್ನು ಕುರಿತ ವ್ಯಾಪಕ ಹಾಗೂ ಸಮಗ್ರ ಮಾಹಿತಿಯನ್ನೊಳಗೊಂಡ ಬರಹ “ಸ್ತ್ರೀಕುಲದ ಸಂಸ್ಕೃತಿಯ ಶುಭ ಸಂಕೇತ ಬಳೆಗಳು”. ಬಳೆ ಎಂದಕೂಡಲೇ ಬಳೆಯಲ್ಲೇನಿದೆ ? ಅದೊಂದು ಸ್ತ್ರೀಯರು ತೊಡುವ ಆಭರಣ ಎನ್ನುವವರಿಗೆ ಬಳೆಯಲ್ಲಿ ಏನೇನೆಲ್ಲಾ ಇದೆ ಎಂದು ಸಮಗ್ರ ವಿಚಾರಧಾರೆಗಳನ್ನು ನೀಡುವ ಲೇಖನವಿದು. ಸಾಂಪ್ರದಾಯಿಕತೆಯಿಂದ ಆಧುನಿಕ ಬದುಕಿನವರೆವಿಗೂ ಬದಲಾದ ಬಳೆಯ ಬಗೆಗಿನ ಸ್ವರೂಪ ಮತ್ತು ದೃಷ್ಟಿಕೋನಗಳನ್ನು ಕುತೂಹಲಕಾರಿಯಾಗಿ ಪ್ರಸ್ತುತ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.
“ಪತ್ರ ಸಂವಾದ” ಪ್ರಬಂಧ ಬರಹದ ಓದು ಹಾಸ್ಯ ಬರಹಗಾರರಾದ ಗೊರೂರು, ಹಾ.ಮಾ.ನ ರವರ ಶೈಲಿಯನ್ನು ನೆನಪಿಸುತ್ತದೆ. ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದಾಗಿ ಪತ್ರ ವ್ಯವಹಾರದ ಗಾಂಭೀರ್ಯತೆ ಪ್ರಸ್ತುತ ಸಂದರ್ಭದಲ್ಲಿ ಕ್ಷೀಣಿಸುತ್ತಿದೆ. ಇದೇ ಬೆಳವಣಿಗೆ ಮುಂದುವರಿದರೆ ಮುಂದಿನ ಪೀಳಿಗೆಯಲ್ಲಿ ಪತ್ರವ್ಯವಹಾರದ ಗಂಧಗಾಳಿಯೇ ಇರುವುದಿಲ್ಲ ಎನ್ನುವಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಪತ್ರ ವ್ಯವಹಾರ ತೀವ್ರತೆ ಕ್ಷೀಣಿಸಿದ ಯಾವುದೇ ಸಂದರ್ಭದಲ್ಲಿಯೂ ಪ್ರಸ್ತುತ ಲೇಖನವನ್ನು ಓದಿದರೆ ಪತ್ರವ್ಯವಹಾರದಲ್ಲಿ ನಡೆಯುತ್ತಿದ್ದ ಅನೇಕ ಬಗೆಯ ಹಾಸ್ಯಮಯ ವಿಚಾರಗಳು ಕಣ್ಣ ಮುಂದೆ ಹಾದುಹೋಗದೆಇರಲು ಸಾಧ್ಯವಿಲ್ಲ. ಪತ್ರವ್ಯವಹಾರದಲ್ಲಿ ನಡೆಯುತ್ತಿದ್ದ ಫಜೀತಿ. ಮಧ್ಯವರ್ತಿ ಓದುಗ ಮಹಾಶಯನ ಕದ್ದು ಓದುವ ಛಾಳಿ, ಅಕ್ಷರತಪ್ಪಿನಿಂದಾಗಿ ತಂದೆ-ತಾಯಿಯರಲ್ಲಿ ಉಂಟಾಗುತ್ತಿದ್ದ ಗೊಂದಲ ಹೀಗೆ ಪತ್ರ ವ್ಯವಹಾರದಲ್ಲಿನ ರೋಚಕ ಕ್ಷಣಗಳನ್ನು ಲೇಖಕರ ಹಾಸ್ಯಪ್ರಜ್ಞೆಯಿಂದ ಮೂಡಿಬಂದಿರುವುದುಕುತೂಹಲಕಾರಿಯಾಗಿದೆ. ಬದುಕಿನೊಂದಿಗಿನ ಪತ್ರವ್ಯವಹಾರದ ಭಾವನಾತ್ಮಕ, ಹಾಸ್ಯಾತ್ಮಕತೆಯ ಹಲವಾರು ಸನ್ನಿವೇಶಗಳನ್ನು ಹೇಳುತ್ತಲೇ ಸಾಗುವ ಈ ಲೇಖನದಲ್ಲಿ ಸಾಹಿತ್ಯಾತ್ಮಕ ಸ್ಪರ್ಷವಿರುವುದು ಅಷ್ಟೇ ಸಮಂಜಸವಾಗಿದೆ.
ಲೇಖಕಿ ಹೇಳುವಹಾಗೆ ನಾಲಿಗೆ ಎಂಬುದು ದೇಹದಒಂದು ಅಂಗ ಮಾತ್ರವಲ್ಲ, ಅದು ವ್ಯಕ್ತಿತ್ವದ ಪ್ರತೀಕವೂ ಹೌದು. ‘ನಾಲಿಗೆ ಶುದ್ಧವಿದ್ದರೆ ನಾಡೆಲ್ಲಾ ಶುದ್ಧ’ ಎಂಬಂತೆ ನಾಲಿಗೆ ನುಡಿಯುವ ನುಡಿಗಳು ಇತರರ ಹಿತಾಸಕ್ತಿಯಿಂದ ಕೂಡಿದ್ದರೆ ತನು-ಮನ ಶುದ್ಧತೆಯಜೊತೆಗೆ ನಾಡಿಗೂ ಸಹ ಶ್ರೇಯಸ್ಸುಂಟಾಗುತ್ತದೆ.
ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ‘ನುಡಿದರೆ ಮುತ್ತಿನ ಹಾರದಂತಿರಬೇಕು…..ಲಿಂಗ ಮೆಚ್ಚಿ ಅಹುದಹುದೆನ್ನುವಂತಿರಬೇಕು’ ಎನ್ನುವ ಬಸವಣ್ಣನವರ ವಚನದಂತೆ ನಾವಾಡುವ ಮಾತುಗಳು ಆತ್ಮಪ್ರಜ್ಞೆಯಿಂದ ಕೂಡಿರಬೇಕೆಂಬ ಭಾವ ಪ್ರಸ್ತುತ ಲೇಖನದಲ್ಲಿಅಭಿವ್ಯಕ್ತಿಗೊಂಡಿದೆ. ಪರರನ್ನು ಎಂದಿಗೂ ಹೀಯಾಳಿಸಬಾರದು, ನಮ್ಮ ನಾಲಿಗೆಯ ಮೇಲೆ ನಮ್ಮ ಹಿಡಿತವಿರಬೇಕು. ಬಾಯಿಗೆ ಬಂದ ಹಾಗೆ ಎಲುಬಿಲ್ಲದ ನಾಲಿಗೆಯೆಂದು ಮತ್ತೊಬ್ಬರನ್ನು ಹಿಯಾಳಿಸಿ ಅಮಾನವೀಯತೆಯನ್ನು ಮೆರೆಯಬಾರದು. ಹಾಗಾಗಿಯೇ ಲೇಖನದಲ್ಲಿ ಉಲ್ಲೇಖಗೊಂಡಿರುವಂತೆ ನಾಲಿಗೆಯ ಪರಿಣಾಮದೊಡ್ಡದು. ಆ ಪರಿಣಾಮ ಸಕಾರಾತ್ಮಕವಾಗಿದ್ದಾಗಲೇ ಅದು ನಲವಿನ ನಾಲಿಗೆಯಾಗಲು ಸಾಧ್ಯ.
“ಆದರ್ಶಗುರು” ಎಂಬ ಲೇಖನವೂ ‘ಗುರು’ ಪರಂಪರೆಯನ್ನು ವಿವರಿಸುತ್ತಲೇ ಸಮಕಾಲಿನ ಗುರುವಿನ ಸ್ಥಾನಮಾನವನ್ನು ಚರ್ಚಿಸುತ್ತಾ ಶೈಕ್ಷಣಿಕ ರಂಗದ ವಾಸ್ತವ ಸಂದರ್ಭಗಳನ್ನು ಕಣ್ಣಿಗೆಕಟ್ಟುವಂತೆವಿವರಿಸಲಾಗಿದೆ. ಗುರುವೆಂದರೆ ಮಾರ್ಗದರ್ಶಕ, ಸಮಾಜದ ಮುನ್ನುಡಿಯ ಹರಿಕಾರ, ಕತ್ತಲಿನಿಂದ ಬೆಳಿನೆಡೆಗೆ ಇಡೀ ಸಮಾಜವನ್ನು ಕೊಂಡೊಯ್ಯುವ ಜವಾಬ್ದಾರಿಯುತ ಗುರು, ಕಾಲದಿಂದ ಕಾಲಕ್ಕೆ ಅಂದಂದಿನ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನನ್ನು ತಾನು ಅಗತ್ಯಕ್ಕೆತಕ್ಕಂತೆ ಮಾರ್ಪಾಡು ಮಾಡಿಕೊಳ್ಳುವುದರಲ್ಲಿ ನೈಪುಣ್ಯತೆ ಹೊಂದಿರಬೇಕೆಂಬುದು ಪ್ರಸ್ತುತ ಲೇಖನದಿಂದ ಮನದಟ್ಟಾಗುತ್ತದೆ. ಸಾಂಪ್ರದಾಯಕ ಗುರು-ಶಿಷ್ಯ ಪರಂಪರೆಯ ಸೂಕ್ಷ್ಮತೆಗಳೊಂದಿಗೆ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಯಾಂತ್ರಿಕ ಬದುಕಿನೊಟ್ಟಿಗೆ ಹೆಜ್ಜೆಯಿಡುವ ಕುಶಲಮತಿಯಾಗಿರಬೇಕು. ಇಲ್ಲವಾದಲ್ಲಿ ಲೇಖಕಿ ಹೇಳುವಂತೆ “ಬದಲಾದ ವಿದ್ಯಾಮಾನಗಳನ್ನು ಅರಿಯದೆ ನಿಷೇಧಿಸಿದ ಔಷಧಿಯನ್ನು ರೋಗಿಗೆ ಬರೆದು ಕೊಡುವ ವೈಧ್ಯರಿಗೆ ಸಮನಾಗಿ ನಗೆಪಾಟಲಿಗೀಡಾಗಬೇಕಾಗುತ್ತದೆ”.
“ದೃಶ್ಯಕಲೆ, ಬಿಂದುಜ ಕಲೆ ರಂಗೋಲಿಯನ್ನು ಕುರಿತ ಸಮಗ್ರ ಮಾಹಿತಿಯನ್ನು ಒಳಗೊಂಡ ಲೇಖನವಿದು. ರಂಗೋಲಿಯನ್ನು ಹಾಕುವ ಮೂಲಕ ಭಗವಂತನನ್ನು ಆರಾಧಿಸುವ ಕ್ರಮ, ರಂಗೋಲಿಯ ವೈವಿಧ್ಯತೆ, ರಂಗೋಲಿಗಿರುವ ಇತಿಹಾಸ ಹಾಗೂ ವಿಭಿನ್ನ ಸಂಸ್ಕೃತಿಯಲ್ಲಿ ರಂಗೋಲಿಯ ವೈಶಿಷ್ಟತೆಯನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಆಧುನಿಕಕಾಲದಲ್ಲಿ ರಂಗೋಲಿಯೂ ನೇಪಥ್ಯಕ್ಕೆ ಸರಿದಿದ್ದು, ಪ್ಲಾಸ್ಟಿಕ್ ಹಾಳೆಯ ಮೇಲೆ ಈಗಾಗಲೇ ಅಚ್ಚಾಗಿರುವರಂಗೋಲಿ ಪ್ರತೀತಿಯಲ್ಲಿರುವುದು ವಾಸ್ತವ.ರಂಗೋಲಿಗಿರುವ ವೈಜ್ಞಾನಿಕ ಕಾರಣ ತಿಳಿದುಬಂದದ್ದು ಈ ಲೇಖನವನ್ನುಓದಿದಾಗಲೆ.
ಮತ್ತೊಂದು ಲೇಖನ “ಎಂಟರ ಮೇಲೊಂದು ವಿಚಾರ ತಲೆಗಂಟಿ ಕಾಡತೊಡಗಿದಾಗ”. ಶೀರ್ಷಿಕೆಗೆ ತಕ್ಕಹಾಗೆ ಒಂಭತ್ತು ನೈಜ ಸಂಗತಿಗಳನ್ನು ಲೇಖಕಿ ಮನಮುಟ್ಟುವಂತೆ ವಿವರಿಸಿದ್ದಾರೆ. ಹೌದು ಲೇಖಕಿ ಉಲ್ಲೇಖಿಸಿರುವ ಶಿವರಾಮಕಾರಂತರ ಮಾತಿನಂತೆ ಬಾಳ್ವೆ ಸ್ವೀಕಾರಕ್ಕಿದೆ ಹೊರತು ನಿರಾಕರಣೆಗಲ್ಲ. ಬದುಕಿನಲ್ಲಿ ಏನೇ ಏಳು-ಬೀಳು, ಸಿಹಿ-ಕಹಿಗಳಿದ್ದರೂ ಅವುಗಳನ್ನು ಸಮಚಿತ್ತ ಭಾವದಿಂದ ಅನುಭವಿಸಿಯೇ ತೀರಬೇಕು. ಸಹಾಯ ಮಾಡಿಎಂದು ಹೇಳುವ ಕೆಲವು ಮಂದಿಯೂ ಸಹ ವಾಸ್ತವವಾಗಿ ಮಾನವೀಯತೆಯನ್ನು ಮರೆತಿರುತ್ತಾರೆ ಎಂಬುದನ್ನು ಜೀವನದ ಕೆಲವು ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಅನುಭವಕ್ಕೆ ಬರುವ ಕೆಲವು ಘಟನೆಗಳು ನೆನಪಿಸುತ್ತಲೇ ಇರುತ್ತವೆ. ಇದಕ್ಕೆ ಲೇಖಕಿಯ ಬದುಕು ಹೊರತಲ್ಲ. ಬರಹಗಾರ್ತಿ ಮತ್ತೊಂದು ಪ್ರಶ್ನೆ ‘ನಂಬಿಕೆ ಎಲ್ಲೂಇಲ್ಲವೇ ?’ ಹೌದು ಆಧುನಿಕ ಸಂದರ್ಭದಲ್ಲಿ ಮಾನವನು ಅಧಿಕಾರದ ಮದ ಹಾಗೂ ಕೃತಕತೆಯ ಯಾಂತ್ರಿಕ ಬದುಕಿಗೆ ಮೊರೆಹೋಗಿ ಎಲ್ಲಿ, ಯಾವುದರ ಬಗ್ಗೆ ನಂಬಿಕೆ ಹೊಂದಿರಬೇಕು ಮತ್ತು ಹೊಂದಿರಬಾರದು ಎನ್ನುವುದರ ವಿವೇಕ ಕಳೆದುಕೊಂಡಿದ್ದಾನೆ. ಇನ್ನೂ ಅಪಘಾತದ ಸಂದರ್ಭದಲ್ಲಿ ಸಹಕಾರಿಯಾಗುವ ಬದಲು ಫೋಟೋ ಕ್ಲಿಕ್ಕಿಸಿ ಇತರರಿಗೆ ರವಾನಿಸುವ ಜನರಿಗಂತು ನಮ್ಮಲ್ಲಿ ಕೊರತೆಯಿಲ್ಲ. ಮಾನವೀಯತೆ, ಜೀವನ ಮೌಲ್ಯಗಳು, ಬದ್ಧತೆ, ನ್ಯಾಯ ನೀತಿಗಳ ಕೊರತೆಯಂತು ಸಹಜ ಬದುಕಿನಲಕ್ಷಣವಾಗಿಬಿಟ್ಟಿದೆ. ಇಂತಹ ಹಲವಾರು ವಿಚಾರಗಳ ಬಗೆಗೆ ನೈಜಅನುಭವದೊಂದಿಗೆ ಲೇಖನದಲ್ಲಿ ಬೆಳಕು ಚಲ್ಲಿರುವುದು ಗಮನಾರ್ಹ.
“ಟೋಪಿ”ಯ ವೈವಿಧ್ಯತೆ ಮತ್ತು ವೈಶಿಷ್ಟತೆಯನ್ನು ಕುರಿತು ಮಾತನಾಡುವ ಲೇಖನ “ಟೋಪಿ”. ಕೆಲವು ಬಾರಿ ಅನಿವಾರ್ಯತೆಯಿಂದ ಟೋಪಿ ಧರಿಸುವುದರಿಂದ ಹಿಡಿದು ಫ್ಯಾಷನ್ ಕಾರಣದಿಂದ ಟೋಪಿ ಧರಿಸುವ ಮಂದಿಯವರೆವಿಗೂ ಸವಿವರವಾಗಿ ಇಲ್ಲಿ ಹೇಳಲಾಗಿದೆ.
ಮುಂದಿನ ಪ್ರಬಂಧದ ಶೀರ್ಷಿಕೆ “ಅಳು”. ಮಗು ಅಳುತ್ತಲೇ ಭೂಮಿಗೆ ಬರುತ್ತದೆ. ಜೀವನದಲ್ಲಿ ಒಮ್ಮೆಯೂ ಅಳದವರಿಲ್ಲ. ಏನೇ ಆಗಲೀ ಅಳು ಮನಸ್ಸಿನ ಭಾರವನ್ನುಕಡಿಮೆ ಮಾಡುತ್ತದೆ. ಅಳುವಿನ ಸಹಜತೆ, ನೈಜತೆ ಹಾಗೂ ಅದರ ನಾಟಕೀಯತೆಯನ್ನು ಕುರಿತು ಉದಾಹರಣೆಯ ಸಮೇತ ವಿವರಿಸಿರುವುದು ಹೆಚ್ಚು ಸೂಕ್ತವಾಗಿದೆ.
ಹತ್ತನೆಯ ಪ್ರಬಂಧ “ಜಾನಪದ ತ್ರಿಪದಿಗಳು ಹಾಗೂ ಮಳೆ ನಕ್ಷತ್ರಗಳಿಗೆ ಸಂಬಂಧಿಸಿದ ಗಾದೆಗಳ ಹಿನ್ನೆಲೆಯಿಂದ ರೈತ”. ಇದೊಂದು ಅಪ್ಪಟ ಜನಪದ ಸಾಹಿತ್ಯದ ಮತ್ತೊಂದು ಎಳೆಯೇ ಆಗಿದೆ. ಜಾನಪದ ಸಾಹಿತ್ಯದ ಹಿನ್ನೆಲೆಯಲ್ಲಿ ಭೂಮಿ, ಮಳೆ ಮತ್ತು ರೈತನ ಮಹತ್ವವನ್ನು ಹೇಳಲಾಗಿದೆ. ಮುಂಗಾರಿನ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಕೃಷಿಯಾಚರಣೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಭೂಮಿತಾಯಿ ಸಮೃದ್ಧಿ ಬೆಳೆಯನ್ನು ನೀಡಲೆಂದು ರೈತನ ಹಪಹಪಿಕೆಯ ಧ್ವನಿಯನ್ನುು ಜಾನಪದ ತ್ರಿಪದಿಗಳ ಮೂಲಕ ಎಳೆ ಎಳೆಯಾಗಿ ಬಿತ್ತರಿಸಲಾಗಿದೆ.
ಮುಂದಿನ ಲೇಖನ “ನಾಗರಿಕರ ಸೂಕ್ಷ್ಮ ಹಾಗೂ ಮೌಲ್ಯಯುತ ಹೊಣೆಗಾರಿಕೆಗಳು” ಮಾನವನಾಗಿ ಹುಟ್ಟಿದ ಮೇಲೆ ಕನಿಷ್ಟತಮ ಜವಾಬ್ದಾರಿಗಳಿಂದ ನಡೆದುಕೊಳ್ಳುವುದರ ಬಗ್ಗೆ ಎಚ್ಚರಿಕೆಯನ್ನು ಮೂಡಿಸುವ ಲೇಖನ. ಇಲ್ಲಿ ಉಲ್ಲೇಖಗೊಂಡಿರುವ ಎಲ್ಲಾ ಅಂಶಗಳನ್ನು ಕುರಿತು ಆಲೋಚಿಸಿ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಉತ್ತಮ. ಆಗಾದಾಗಲೇ ಇಂದಿನ ನಾವು ನಾಳಿನ ನಮ್ಮವರಿಗೆ ಒಳ್ಳೆಯದ್ದನ್ನೇನಾದರೂ ಬಿಟ್ಟು ಹೋಗಲು ಬಿಟ್ಟು ಹೋಗಲು ಸಾಧ್ಯ..
“ಕುತೂಹಲ”ವೆಂಬ ಲೇಖನದಲ್ಲಿ ಮನುಷ್ಯ ಸಹಜ ಸ್ವಭಾವವನ್ನು ಕುರಿತು ತಿಳಿಸಲಾಗಿದೆ. ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಒಂದಲ್ಲ ಒಂದು ರೀತಿಯಲ್ಲಿ ಕುತೂಹಲ ಕಾತುರನಾಗಿರುತ್ತಾನೆ ಎಂಬುದನ್ನು ಸಾಮಾನ್ಯ ಮತ್ತು ವಿಶೇಷ ರೀತಿಯ ಕುತೂಹಲಗಳನ್ನು ಬದುಕಿನ ವಿಭಿನ್ನ ಘಟನೆಗಳಲ್ಲಿನ ಆಸ್ಥೆಗೆ ಅನುಗುಣವಾಗಿ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.
“ಮೌಲ್ಯ ಕಳೆದುಕೊಂಡಿದೆಯಾ ರುಪಾಯಿ ?” ಎಂಬ ಪ್ರಶ್ನಾರ್ಥಕ ಶೀರ್ಷಿಕೆಯಿಂದ ಒಳಹೊಕ್ಕು ನೋಡಿದಾಗ ಖಂಡಿತವಾಗಿಯೂ ರುಪಾಯಿ ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ ಎನ್ನುವುದು ಮನದಟ್ಟಾಗುತ್ತದೆ. ಆರ್ಥಿಕವಾಗಿಯೇ ಮಾತ್ರವಲ್ಲದೇ ಭಾರತದಂತಹ ಸಾಂಪ್ರದಾಯಿಕದೇಶದಲ್ಲಿ ಅನೇಕ ಆಚರಣೆಯ ಸಂದರ್ಭದಲ್ಲಿ ರುಪಾಯಿ ಮೌಲ್ಯ ಅತ್ಯಧಿಕವಾದದ್ದು ಎನ್ನುವ ವಿಚಾರಗಳು ಲೇಖನದಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಇನ್ನೂ “ಜಗಳ” ಎಂಬ ಲೇಖನದಲ್ಲಿ ಜಗಳದ ಸ್ವರೂಪ, ಅದರ ಲಾಭ-ನಷ್ಟಗಳನ್ನು ಕುರಿತುಚರ್ಚಿಸಲಾಗಿದೆ. ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ಬೆರೆತಿರುವ ಪ್ಲಾಸ್ಟಿಕ್ ಅನ್ನುಕುರಿತು ಹೇಳುವುದೇ “ ಬದುಕಿನೊಂದಿಗೆ ಬೆಸೆದುಕೊಂಡಿರುವ ಪ್ಲಾಸ್ಟಿಕ್ಗೆ ಪರ್ಯಾಯ ಮಾರ್ಗಗಳು”.
ಸೂಕ್ಷ್ಮ ಸಂವೇದನೆಯ ಬರಹಗಾರರೂ ಆಗಿರುವ ಸುಮಾವೀಣಾರವರು ವಿಷಯದ ಆಳಕ್ಕಿಳಿದು ಈಜುವ ಸಾಮರ್ಥ್ಯವಿರುವವರು ಎಂಬುದು ಅವರ ಈ ಕೃತಿಯಿಂದ ತಿಳಿದು ಬರುತ್ತದೆ. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ಯಾವುದೇ ಪರಿಕಲ್ಪನೆಯಾದರು ಅದರ ಬಗೆಗಿರುವ ಅವರ ಆಳ ಜ್ಞಾನ ವಿಷಯದ ಬಗೆಗೆ ಸಮಗ್ರ ಮಾಹಿತಿಯನ್ನು ನೀಡುವಂತದ್ದಾಗಿದೆ. ಅನೇಕ ವೈಚಾರಿಕ ಪ್ರಜ್ಞೆಯುಳ್ಳ “ನಲವಿನ ನಾಲಗೆ” ಪ್ರಬಂಧವು ಒಂದು ಉತ್ತಮ ಪ್ರಬಂಧ ಕೃತಿಯಾಗಿದ್ದು, ಹಲವಾರು ವಿಚಾರಗಳ ಮೇಲೆ ಸೂಕ್ಷ್ಮದೃಷ್ಟಿಕೋನದ ಮೂಲಕ ಎಳೆ-ಎಳೆಯಾಗಿ ಬೆಳಕು ಚೆಲ್ಲಿದೆ ಎಂದರೆ ತಪ್ಪಾಗಲಾರದು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ