- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ಉಪನೇತ್ರ’’,ಸುಲೋಚನ’, ‘ಚಾಳೀಸು’ ಎಂದು ಕರೆಸಿಕೊಂಡಿರುವ ಕನ್ನಡಕವನ್ನು ಹಾಕಬೇಕೆಂಬ ವಾಂಛೆ ಕಾಲೇಜು ದಿನಗಳಲ್ಲಿ ನನಗೆ ಬಹಳವಿತ್ತು . “ಅಸಲಿ ನೇತ್ರಗಳೇ ಚೆನ್ನಾಗಿವೆ. ಸುಸ್ಪಷ್ಟವಾಗಿಯೇ ಅಕ್ಷರಗಳೆಲ್ಲಾ ಕಾಣುತ್ತವೆಯಲ್ಲಾ ಮತ್ತೆ ಸುಲೋಚನ ಏಕೆ ಎಂದೇ ಇಷ್ಟು ದಿನ ತಳ್ಳುತ್ತಾ ಬಂದೆ”. ಕಾಲೇಜು ದಿನಗಳಲ್ಲಿ ನಾನೂ ಕನ್ನಡಕ ಧರಿಸಬೇಕು ಅನ್ನುವ ಬಯಕೆಯೇನೋ ಇತ್ತು. ಆದರೆ ನಮ್ಮಮ್ಮ “ಕನ್ನಡಕ ಕೊಡೊಸೊದೆ ಇಲ್ಲ! ಗಂಡಿನ ಕಡೆಯವರು ಬಂದರೆ ಹುಡುಗಿಗೆ ನಾಲ್ಕು ಕಣ್ಣು ಅಂತಾರೆ ಬೇಡ” ಅಂದಿದ್ದರು. ಉಪನೇತ್ರಗಳನ್ನು ಹೇರ್ ಬೋ ರೀತಿ ತಲೆಯ ಮೇಲೆ ಏರಿಸಿಕೊಳ್ಳಬೇಕು, ಉಪನೇತ್ರಗಳಿಗೊಂದು ಟ್ಯಾಗ್ ಹಾಕಿ ಕುತ್ತಿಗೆಗೆ ಇಳಿಬಿಟ್ಟುಕೊಳ್ಳ ಬೇಕು ಎಂದೆಲ್ಲಾ ಆಸೆ ಪಟ್ಟಿದ್ದೆ. . ಅಮ್ಮ “ಬೇಡ” ಎಂದು ನೇತ್ರಗಳಲ್ಲೆ ಗದರಿಸಿದಾಗ ಉಪನೇತ್ರಗಳ ಮೇಲೆ ವೈರಾಗ್ಯವಾಗಲಿ ಅಂಥಾ ಬೇಜಾರು ಏನು ಆಗಿರಲಿಲ್ಲ. ಉಪ ನೇತ್ರಗಳಿಗಾಗಿ ಅತ್ತೂ ಅತ್ತೂ ಕಣ್ಣು ಕೆಂಪಗೆ ಮಾಡಿಕೊಂಡು ಕೆನ್ನೆಯೆಲ್ಲಾ ಉಪ್ಪುಪ್ಪೂ ಮಾಡಿಕೊಳ್ಳಲಿಲ್ಲ ಕಾರಣ ನಾನು ಸುಲೋಚನ ಕೇಳಿದ್ದು ಶೋಕಿಗಾಗಿತ್ತಲ್ವ! ಹಾಗಾಗಿ ಸುಮ್ಮನಾದೆ. ಆದರೆ ನನ್ನ ಅಜ್ಜಿ ಕನ್ನಡಕ ತೆಗೆದಿಟ್ಟಾಗ ಆಗೊಮ್ಮೆ ಈಗೊಮ್ಮೆ ಹಾಕಿ ಟ್ರಯಲ್ ನೋಡುತ್ತಿದ್ದೆ.
ಓದು ಮುಗಿದು ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದೆ. ವೃತ್ತಿಯ ಪ್ರಾರಂಭದ ದಿನಗಳಲ್ಲಿ ಕಿರಿಯ ಉಪನ್ಯಾಸಕರಲ್ಲವೇ ಎಂದು ಹೆಚ್ಚು ಎಕ್ಸಾಮ್ ಡ್ಯೂಟಿಗಳನ್ನು ಹಾಕುತ್ತಿದ್ದರು. ನ್ಯೂಸ್ ಪೇಪರ್ಗಳನ್ನು, ಪುಸ್ತಕಗಳನ್ನು ಎಕ್ಸಾಂ ಹಾಲಿಗೆ ತೆಗೆದುಕೊಂಡು ಹೋಗುತ್ತಿದ್ದೆ ಸಮಯ ಕಳೆಯಲು . ಆದರೆ ಪ್ರಾಂಶುಪಾಲರು ಹಾಗೆಲ್ಲ ತೆಗೆದುಕೊಂಡು ಹೋಗುವ ಹಾಗಿಲ್ಲ ಎಂದು ಹೇಳಿದ ಮೇಲೆ ಇನ್ನೇನು , ಮಾಡುವುದು ಹಾಗೆ ಟೈಮ್ ಪಾಸು ಮಾಡುವುದು ಎಂದಾಯಿತು. ಒನ್ ಫೈನ್ ಡೇ ಸೈನ್ಸ್ ವಿಭಾಗದ ಮಕ್ಕಳು ಇರುವ ರೂಮಿಗೆ ಪರೀಕ್ಷಾ ಮೇಲ್ವಿಚಾರಕಿಯಾಗಿ ಹೋಗಬೇಕಾಗಿ ಬಂತು . ಖುಷಿಯಾಯಿತು! ಟೈಮ್ ಪಾಸ್ ಆಗುತ್ತದೆ ಎಂದು ಅದರಲ್ಲಿಯೂ ಮ್ಯಾಥೆಮ್ಯಾಟಿಕ್ಸ್ ಎಕ್ಸಾಮ್ ಇದೆ ಹೆಚ್ಚು ಅಡಿಶೀನಲ್ಸ್ ತೆಗೆದುಕೊಳ್ಳುತ್ತಾರೆ ಸಮಯ ಕಳೆಯಬಹುದು ಎಂದು ಹೋದೆ. ಪರೀಕ್ಷೆ ಪ್ರಾರಂಭವಾಯಿತು ಅಲ್ಲಿದ್ದ ಇಪ್ಪತ್ತನಾಲ್ಕು ಹುಡುಗಿಯರಲ್ಲಿ ಹತ್ತೊಂಬತ್ತು (ಸರಿಯಾಗಿ ಎಣಿಸಿದ್ದೇನೆ) ಜನರು ಉಪನೇತ್ರಗಳನ್ನು ಅರ್ಥಾತ್ ಕನ್ನಡಕ ಹಾಕಿದ್ದರು. ಆ ಹುಡುಗಿಯರು ಕನ್ನಡಕ ಸರಿ ಮಾಡಿಕೊಳ್ಳುವ ಪರಿ ಬಗೆಬಗೆಯದಾಗಿತ್ತು , ಕೆಲವರು ಎಡಗೈ ತೋರ್ಬೆರಳಿನಿಂದ, ಇನ್ನು ಕೆಲವರು ಮೂಗಿನಿಂದಲೇ ಮೇಲೇರಿಸಿಕೊಳ್ಳುವ ರೀತಿ, ಕನ್ನಡಕದ ಲೆನ್ಸನ್ನು ಒರೆಸಿ ಹಾಕಿಕೊಳ್ಳುವ ರೀತಿ, ಅವರುಗಳು ಹಾಕಿಕೊಂಡಿದ್ದ ಬಗೆ ಬಗೆಯ ಫ್ರೇಂಗಳು ಇತ್ಯಾದಿಗಳನ್ನು ಸೂಕ್ಷ್ಮವಾಗಿ ಗಮನಿಸಿದೆ. ಒಬ್ಬ ವಿದ್ಯಾರ್ಥಿನಿ ಲೆನ್ಸ್ ಹಾಕಿದ್ದಳು ಏನೋ ಕಸಿವಿಸಿ ಆದಂತಾಗಿ ಕಣ್ಗಳನ್ನೇ ತೆಗೆದು ಡಬ್ಬಿಯಲ್ಲಿ ತುಂಬಿಸುವಂತೆ ಲೆನ್ಸ್ ತೆಗೆದು ಡಬ್ಬಿಯಲ್ಲಿ ಹಾಕಿ ಮುಚ್ಚಿದ್ದನ್ನು ಕಂಡು ಭಯವಾಯಿತು. ಕಡೆಗೆ ಅನಿವಾರ್ಯ ಅನ್ನುವಲ್ಲಿಯವರೆಗೆ ನಾನು ಉಪನೇತ್ರಗಳ ಸುದ್ದಿಗೆ ಹೋಗುವುದು ಬೇಡ ಎಂದು ತೀರ್ಮಾನಿಸಿದೆ.
ಕಾಲೇಜಿನಲ್ಲಿ ಸಹೋದ್ಯೋಗಿಗಳು ಕನ್ನಡಕ ಧರಿಸುವಾಗ , ಎರಡೇ ಬೆರಳಲ್ಲಿ ನಯವಾಗಿ ಉಪನೇತ್ರಗಳನ್ನು ಹಿಡಿಯುವಾಗ ನಾನೂ ಹಾಕಿಕೊಳ್ಳಬೇಕೆಂದು ಆಸೆಯಾಗುತ್ತಿತ್ತು. ಆದರೆ ನನ್ನ ಪತಿ ಮಹಾಶಯ ಉಪನೇತ್ರಗಳನ್ನು ಸರಿಯಾಗಿ ಹಾಕಿಕೊಳ್ಳುವುದರ ಬದಲು ಮೂಗಿಗೆ ಧರಿಸಿವುದನ್ನು ಕಂಡಾಗ ಬೇಡ ಅನ್ನಿಸುತ್ತಿತ್ತು. . ಒಮ್ಮೆ ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳೆದುರು ಕೆ.ಎಸ್. ನಿಸಾರ್ ಅಹಮದ್ ಅವರ ಕವಿತೆಯನ್ನು ‘ದೈವ ಕಲಿಸುವ ಪಾಠ’ ಎಂದೋದುವುದಕ್ಕೆ ‘ದೆವ್ವ ಕಲಿಸುವ ಪಾಠ’ ಎಂದು ತಪ್ಪಾಗಿ ಓದಿದ್ದೆ. ತಕ್ಷಣ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೋರಿ ನಿತ್ಯೋತ್ಸವ ಕವಿಯಲ್ಲೂ ಮನಸ್ಸಿನಲ್ಲೇ ಕ್ಷಮೆಯಾಚಿಸಿದೆ. ತರಗತಿಗಳಲ್ಲಿ ಪಾಠ ಹೇಳುವಾಗ ತುಂಬಾ ಬಾರಿ ಪುಸ್ತಕವನ್ನು ಹತ್ತಿರಕ್ಕೆ ಹಿಡಿದು ಓದಬೇಕು ಅನ್ನಿಸುತ್ತಿತ್ತು. ತಪ್ಪು ಓದುವ ಮೊದಲು ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಅನ್ನಿಸಿತ್ತು.
ಕೋವಿಡ್ ಲಾಕ್ಡೌನ್ ದಿನಗಳಲ್ಲಿ ನಿಮ್ಮೆಲ್ಲರ ಹಾಗೆ ನಾನು ಮೊಬೈಲ್, ಕಂಪ್ಯೂಟರ್ ಹೆಚ್ಚೇ ಬಳಸಿಬಿಟ್ಟೆ. ತಲೆ ನೋವು ವಿಪರೀತವಾಗಿ ಬಾಧಿಸಲು ಪ್ರಾರಂಭವಾಯಿತು. ಅದಕ್ಕೂ ಮೊದಲೇ . ಅದೇ ರೀತಿಯ ತೀಕ್ಷ್ಣ ತಲೆ ನೋವು ಬರುತ್ತಿತ್ತು. ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದ, ತಲೆಗೆ ಸ್ನಾನ ಮಾಡಿ ಕೂದಲು ಸರಿಯಾಗಿ ಒಣಗದೆ ತಲೆ ನೋವು ಬಂದಿದೆಯಾ ಅಂದುಕೊಳ್ಳುತ್ತಿದ್ದೆ. ಆದರೆ ಲಾಕ್ಡೌನ್ ಸಮಯದಲ್ಲಿ ತೀಕ್ಷ್ಣವಾದ ತಲೆನೋವು ಹಿಂಸಿಸತೊಡಗಿದಾಗ ಒಮ್ಮೆ ಕಣ್ಣು ಪರೀಕ್ಷೆ ಮಾಡಿಸಲೇಬೇಕೆಂದು ಕಣ್ಣಾಸ್ಪತ್ರೆಗೆ ಹೋದೆ.
ಆ ಆಸ್ಪತ್ರೆಯಲ್ಲಿ ನನ್ನನ್ನು ಬಿಟ್ಟರೆ ಇನ್ನೊಬ್ಬರು ಮಾತ್ರ ಪೇಶಂಟ್ ಇದ್ದರು ಉಳಿದವರೆಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು. ಆಸ್ಪತ್ರೆಯ ಮುಂಬಾಗಿಲಲ್ಲೇ ಸ್ಯಾನಿಟೈಜರ್ ಇಟ್ಟಿದ್ದರು. ನಾನೂ ಹಾಕಿಕೊಂಡೆ!. ನಂತರ ಕನ್ಸಲ್ಟೇಶನ್ ಫೀ ಕಟ್ಟಿದೆ. “ಕುಳಿತುಕೊಳ್ಳೀ…” ಎಂದು ಹೇಳಿದರು ಕುಳಿತುಕೊಂಡೆ. ನಂತರ ನೇತ್ರಗಳ ಪರೀಕ್ಷೆ ಆಗಬೇಕಲ್ಲ ಅವರು ಕರೆದಾಗ ನೇರವಾಗಿ ಕೊಠಡಿಗೆ ಹೋದೆ ‘ಹಾವು ಕಂಡ ಹಾಗೆ’ ಆಡಿಬಿಟ್ಟರು ಮನಸ್ಸಿಗೆ ಬೇಸರವಾಯಿತು. ಇರಲಿ ಎಂದು ಟೆಸ್ಟ್ ಮಾಡಿಸಲು ತೆರಳಿದರೆ “ಮಾಸ್ಕ್ ತಗೆಯಬೇಡಿ ಹಾಗೆ ಗಲ್ಲ ಇಡಿ” ಎಂದರು ನಾನು ಯಂತ್ರದ ಮೇಲೆ ಗಲ್ಲವನ್ನಿರಿಸಿದೆ. ಒಂದು ಕ್ಷಣ ಕಣ್ಣಿಗೆ ಭರ್ರನೆ ಗಾಳಿ ಬೀಸಿದಂತಾಯಿತು “ಕಣ್ಣು ಮುಚ್ಚಬೇಡಿ ಕಣ್ಣು ಬಿಡಿ” ಅಂದರು. ಅವರಾಡುವುದಕ್ಕೆ ಕಣ್ಣುಗಳನ್ನು ಅವರ ಮೇಲೆ ಬಿಡಬೇಕು ಅನ್ನಿಸಿತು ಆದರೆ ಸೌಜನ್ಯ ಮುಖ್ಯವಲ್ಲವೇ ಕಣ್ಣುಗಳನ್ನು ಅರಳಿಸಿದೆ ಅಷ್ಟೆ.
ಇಂಗ್ಲೀಷಿನ ವರ್ಣಮಾಲೆ ಓದಲು ಹೇಳಿದರು ಸರಾಗವಾಗಿ ಓದಿದೆ. ನಂತರ ಅಕ್ಷರಗಳ ಗಾತ್ರ ಕಿರಿದಾಯಿತು bಮತ್ತು d ಅಕ್ಷರಗಳನ್ನು ಓದಲು ಗೊತ್ತಾಗಲಿಲ್ಲ . ಹಾಗೆ ಗೊತ್ತಾಗದಾಗ ಲೆನ್ಸ್ ಇಲ್ಲದ ಖಾಲಿ ಕಪ್ಪನೆ, ದಪ್ಪನೆ ಫ್ರೇಮ್ ಒಂದನ್ನು ನನಗೆ ತೊಡಿಸಿ ಅವರ ಬತ್ತಳಿಕೆಯಲ್ಲಿದ್ದ ಲೆನ್ಸ್ಗಳನ್ನು ಒಂದೊಂದೆ ಹಾಕಿದರು ಕೆಲವು ದಿಗ್ಭ್ರಮೆ ಆಗುವಂತೆ ಆದವು, ಇನ್ನು ಕೆಲವು ಏನೂ ಅನ್ನಿಸಲಿಲ್ಲ, ಇನ್ನು ಕೆಲವು ಮಬ್ಬಾಗಿ ಕಂಡವು. ಇನ್ನೊಂದು ಲೆನ್ಸ್ ಹಾಕಿದ ಕೂಡಲೆ ಸ್ಪಷ್ಟವಾಗಿ ಕಂಡಿತು “ಈಗ ಸರಿ !”ಎಂದೆ. ನಿಮಗೆ ಕನ್ನಡಕ ಹಾಕಲು ಹೇಳಬಹದು ಅಂದಾಗ “ಹೌದಾ! “ಅಂದೆ ಅದಕ್ಕೆ ಆಕೆ “House wife ಅಲ್ವೇ ಸಾಧಾರಣದ್ದೆ ತಗೊಳ್ಳಿ” ಅಂದರು. ನನಗೆ ಕೋಪ ಬಂತು “ನಾನು ವರ್ಕಿಂಗ್ ವುಮೆನ್ ಸ್ವಲ್ಲ ಮಾಡ್ ಆಗಿರೋದೆ ತೆಗೆದೊಕೊಳ್ತೇನೆ” ಅಂದು ಸಡನ್ ಆಚೆ ಬಂದೆ.
ಇನ್ನು ಹತ್ತು ನಿಮಿಷ ಕಳೆದು ಮತ್ತೆ ಡಾಕ್ಟರ್ ಬಳಿ ಹೋದರೆ “ಬೇಡ ಬೇಡ ಮಾಸ್ಕ ತೆಗೆಬೇಡಿ ಎಲ್ಲಿಯೂ ಮುಟ್ಟ ಬೇಡಿ ಹಾಗೆ ಗದ್ದ ಇಡಿ” ಎಂದರು ಡಾಕ್ಟರ್.ಕೂಲಂಕಷವಾಗಿ ಪರೀಕ್ಷಿಸಿ “ಕನ್ನಡಕ ಹಾಕಬೇಕು . ಓದುವಾಗ ಕಡ್ಡಾಯವಾಗಿ ಹಾಕಬೇಕಾಗುತ್ತೆ ನಮ್ಮಲ್ಲಿಯೆ ಸಿಗುತ್ತದೆ” ಎಂದರು .ಮತ್ತೆ ಬರುವವರು ಯಾರು ಎಂದು ಅಧಿಕೃತವಾಗಿ ನನಗೆ ಎಂದು ಹೊಸ ಕನ್ನಡಕ ನೋಡಲು ಶುರು ಮಾಡಿದೆ. ಅಲ್ಲಿಯೂ “ಸಿಂಪಲ್ ತಗೊಳಿ ಹಣ ಕಡಿಮೆ ಆಗುತ್ತೆ” ಎಂದರು “ಆಯಿತು” ಎಂದು ಅಲ್ಲಿಯೇ ಕುಳಿತುಕೊಂಡು ಮೊಬೈಲ್ನಲ್ಲೇ ಗೂಗಲ್ ಸರ್ಚ್ ಕೊಟ್ಟರೆ ಆ್ಯಂಟಿ ಗ್ಲೇರ್ ಗ್ಲಾಸ್ ಹಾಕುವುದು ಉತ್ತಮ ಎಂದು ತೋರಿಸಿತು. ಅದನ್ನೆ ಕೇಳಿದೆ. ಅಷ್ಟರಲ್ಲಿ ನನ್ನ ಹಳೆಯ ಕ್ಲಾಸ್ಮೇಟ್ ಒಬ್ಬಳು ಸಿಗಬೇಕೇ! ಅವಳು ಅಲ್ಲಿಯ ಮ್ಯಾನೇಜರ್. ಮಾತನಾಡಿಸುವುದಾ ?ಬೇಡವಾ? ಎಂದು ಮನಸ್ಸಿನಲ್ಲೇ ತರ್ಕ ಮಾಡಿದೆ . ಆತ್ಮೀಯ ಗೆಳತಿ ಜಯಶ್ರೀಯನ್ನೊಮ್ಮೆ ಕೇಳಿದೆ “ಹೇಗೇ?ಮೇಘ ಸಿಕ್ಕಿದ್ದಾಳೆ ಮಾತನಾಡಿಸುವುದ” ಎಂದೆ ಆಕೆ “ಸರಿ!” ಎಂದಾಗ ನನ್ನ ಗೆಳತಿ ಇದ್ದಲ್ಲಿಗೆ ಹೋದೆ “Yes what can I do for you?” ಎಂದಳು ನನ್ನ ಪರಿಚಯವಿಲ್ಲದೆ. “ಮೇಘ ಗುರುತು ಸಿಕ್ಕಿತಾ?” ಎಂದೆ “yes I am Megha, how can I help you” ಅಂದಳು . ಇವಳಿಗೆ ಹೇಗೆ ಅರ್ಥ ಮಾಡಿಸುವುದು ಎಂದು ಯೋಚಿಸಿ ನಾನು “ I am suma from Madikeri I was your classmate at st. Joseph’s” ಅಂದೆ. ಮೇಘ ಮೈಕೊಡವಿ “ya ya now I remember, would you please remove your mask ?“ ಅಂದಳು. ನಾನು ಅವಳ ಅಪ್ಪಣೆಯ ಮೇರೆಗೆ ಮಾಸ್ಕ್ ಸಡಿಲಿಸಿದೆ. “How are you ? How could you make out me? “Then whats up” ಎಂದಳು “ I am fine nothing dear” ಎಂದೆ “it’s very Surprising to me dear” ಎಂದಳು ನಾನೂ ಕೂಡ “I am also” ಎಂದೆ. ಮೇಘ ಮತ್ತೆ ನಾನು ಸಿಕ್ಕ ಖುಷಿಯಲ್ಲಿ ಅಲ್ವೆ! ಗೂಬೆ ಯಾಕೆ ಇಷ್ಟು ದಪ್ಪಕ್ಕಾಗಿದ್ದೀಯ ಗೊತ್ತೆ ಮಾಡಕ್ಕಾಗಲ್ವೇ?” ಅಂದಳು .ಅಷ್ಟರಲ್ಲಿ ಜಯಶ್ರೀ ಕೂಡ ಫೋನಿನಲ್ಲಿ ಮಾತನಾಡಿಳು. ಅಲ್ಲಿಗೆ ಆ ಆಸ್ಪತ್ರೆಗೆ ನಾನು ಪರಿಚಿತಳಾದೆ. ಆಗ ಅಲ್ಲಿದ್ದವರೆಲ್ಲಾ “ಮೇಡಂ ಬನ್ನಿ! ಬನ್ನಿ! ಇಲ್ಲಿ ಕುಳಿತುಕೊಳ್ಳಿ! ಕಾಫಿ ತಗೊಳಿ, ಬಿಸ್ಕೆಟ್ ತೆಗೊಳಿ!” ಅಂದರು. ನನ್ನ ಪತಿರಾಯರಿಗೂ ಮೇಘಳನ್ನು ಪರಿಚಯಿಸಿದೆ. ಈ ಪ್ಯಾಂಡಮಿಕ್ ಟೈಮಲ್ಲಿ ಕೈಕೊಡಬೇಕಲ್ಲಾ ಎಂದು ಕೈ ಮುಗಿದು “ನಮಸ್ಕಾರ” ಅಂದರು. ಮೇಘ ಕೂಡ “ನಮಸ್ಕಾರ” ಅಂದಳು. ನನ್ನ ಜೊತೆಗೆ ಪತಿರಾಯರು ಇದ್ದರಲ್ಲಾ “ಊಟಕ್ಕೆ ಟೈಮ್ ಆಯಿತು!” ಅಂದರು. “ಸರಿ!” ಎನ್ನುತ್ತಾ ನಾನು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾರದೆ ಹೊರಟು ಬಂದೆ. ಆದರೆ ಮನಸ್ಸಿನಲ್ಲಿ ಇನ್ನೂ ಸ್ವಲ್ಪ ಹೊತ್ತು ಅಲ್ಲಿ ಇರಬೇಕು ಅನ್ನಿಸಿತು.
ನನ್ನ ಪತಿರಾಯರು ಆಚೆ ಬಂದವರೆ “ಇಲ್ಲಿ ಗ್ಲಾಸ್ ತೆಗೆದುಕೊಳ್ಳುವುದು ಬೇಡ. ಬೇರೆ ಕಡೆ ಹೋಗೋಣ “ಎಂದರು. ನಾನು “ಸರಿ !”ಎಂದೆ ಹಾಗೆ ಅಲ್ಲಿಂದ ಮುಂದೆ ಬರುವಾಗ “ಅಲ್ಲಿರುವವರೆಲ್ಲಾ ಕೈಗಳನ್ನ ಏನು ಚಂದ ಇಟ್ಕೊಂಡಿದಾರೆ ” ಎಂದರು. ನಾನು “ಹೌದು!” ಅಂದೆ. “ಆ ಹುಡುಗರು ಒಳಗೆ ಹೋಗೊದು ಆಚೆ ಬರೋದು ಸ್ಯಾನಿಟೈಸರ್ ಹಾಕಿ ಕೊಳ್ಳೊದು ಕೈಫುಲ್ ವೈರಸ್ ಫ್ರೀ…” ಅಂದರುು. ನಾನೂ ಹೌದು! ಹೌದು! ಎಂದು ತಲೆಯಾಡಿಸಿ ಮುಂದೆ ಹೋದೆ.
ಹಾಗೆ ಪರಿಚಯದವರ ಕನ್ನಡಕದ ಅಂಗಡಿ ತಲುಪಿ ನಾನು ನನ್ನ ಉಪನೇತ್ರಗಳ ಬೇಡಿಕೆಯನ್ನು ಅವರ ಮುಂದಿಟ್ಟೆ. “ಮೊದಲು ಫ್ರೇಮ್ ನೋಡಿ, ಕಂಪೆನಿ ಗ್ಲಾಸಿಗೆ ಫ್ರೇಂ ಫ್ರೀ..”ಅಂದರು. ನೋಡಿದೆ ಬಹಳ ಸಿಂಪಲ್ ಆದ ಕನ್ನಡಕವನ್ನು . ನಾವು ಹೋದ ಹೈಟೆಕ್ ಆಸ್ಪತ್ರೆಯವರಿಗು ಕನ್ನಡಕದ ಅಂಗಡಿಯವರಿಗೂ ಪೈಪೋಟಿ ಇದ್ದಂತೆ ಕಾಣಿಸಿತು. “ಸಂಜೆ ಐದಕ್ಕೆ ಕನ್ನಡಕ ತಯಾರಾಗುತ್ತದೆ ಬಂದು ತೆಗೆದುಕೊಂಡು ಹೋಗಿ” ಅಂದರು. ಮನೆಗೆ ಬಂದು ಮತ್ತೆ ನಾನು ಸಂಜೆ ಐದಕ್ಕೆ ರೆಡಿಯಾದೆ ಅದರೆ ನನ್ನ ಪತಿರಾಯರು “ಬೇಡ!” ಅಂದರು. ಅಷ್ಟರಲ್ಲಿ ಕನ್ನಡಕ ಹಾಕಲೇ ಬೇಕೆಂಬ ಉತ್ಕಟ ಆಸೆ ನನಗೆ ಬಲವಾಗಿತ್ತು. ಮರು ದಿನವೂ ಕೇಳಿದೆ. “ಅಷ್ಟು ಆಸೆಯೇ ಕನ್ನಡಕ ಸಿಕ್ಕೇ ಸಿಗುತ್ತದೆ !ಇಡೀ ರಾತ್ರಿಯೆಲ್ಲಾ ಹಾಕೊಬಹುದು ದಿನವೆಲ್ಲಾ ಹಾಕಬಹುದು ಸ್ವಲ್ಪ ನಿಧಾನಿಸಬೇಕು” ಅಂದರು. ಆದರು ನಾನು ಅಂಗಡಿಯವರಿಗೆ ಫೋನ್ಮಾಡಿ ಕೇಳುತ್ತಲೇ ಇದ್ದೆ “ಕೊರೊಯರ್ ಲೇಟಾಯಿತು” ಎಂದು ಒಂದು ವಾರಕ್ಕೆ ನನ್ನ ಉಪನೇತ್ರಗಳನ್ನು ಹಸ್ತಾಂತರಿಸಿದರು. ನನ್ನ ಮಕ್ಕಳು ಪತಿರಾಯರು ಎಲ್ಲ ಸೇರಿ ನನ್ನ ಉಪನೇತ್ರಗಳನ್ನು ಅವರ ನೇತ್ರಗಳಿಗೊಮ್ಮೊಮ್ಮೆ ಇಟ್ಟು ನೋಡಿಕೊಂಡರು. ಬಹಳ ಚಂದ ಕಾಣಿಸುತ್ತಿತ್ತು. ಆದರೆ ಕಣ್ಣು ಸೆಳೆತ ಶುರುವಾದ ಕೂಡಲೆ ಕೊಟ್ಟು ಬಿಟ್ಟರು. ನಂತರ ಹೊಸ ಕನ್ನಡಕ ಧರಿಸಿದೆ “ನಾನು ಅಧಿಕೃತವಾಗಿ ಉಪನೇತ್ರೆಯಾದೆ”. ಎಂಬ ಹೆಮ್ಮೆಯಾಯಿತು.
ಹೊಸ ಕನ್ನಡಕ ಹಾಕಿಕೊಂಡ ಕೂಡಲೆ ಕಣ್ಣಿಗೆ ತಣ್ಣನೆ ಅನುಭವವಾಯಿತು,ಅಕ್ಷರಗಳು ಸ್ಪಷ್ಟವಾಗಿ ಕಂಡವು “ಈಗ ನಾನು ಸುಲೋಚನೆ!” ಅನ್ನಿಸಿತು. ಕಂಪ್ಯೂಟರ್ ನೋಡಿದರೂ ಕೂಡ ತಂಪಾದ ಅನುಭವವಾಯಿತು . ಹಾಗೆ ಓದುವಾಗ , ಕಂಪ್ಯೂಟರ್ ನೋಡುವಾಗ ಉಪನೇತ್ರಗಳನ್ನು ಧರಿಸಿದೆ, ಧರಿಸುತ್ತಿದ್ದೇನೆ ತಲೆನೋವು ಕಡಿಮೆಯಾಗಿದೆ .
ನನ್ನ ಹೊಸ ಕನ್ನಡಕ ನೋಡಿದವರೊಬ್ಬರು “ಇದು 1947 ಮಾಡೆಲ್” ಅಂದರು ಬೇಸರವಾಗಲಿಲ್ಲ “1947 ಮಾಡೆಲ್ ಉಪನೇತ್ರಗಳಲ್ಲವೆ ನಾನಲ್ಲವಲ್ಲ! ನನ್ನ ಉಪನೇತ್ರಗಳು ನನಗೆ ಇಷ್ಟವೇ!”. ನನ್ನ ಗೆಳತಿ “ಇದ್ಯಾಕೆ ಬೇರೆ ಸಿಗಲಿಲ್ಲವ ಫ್ರೇಂ ದೊಡ್ಡದು ಆಗಬೇಕಿತ್ತು ” ಎಂದು ಹೇಳಿದರೆ. ಈಗ “ಫ್ರೇಂಲೆಸ್ ಫ್ಯಾಷನ್ ಅಲ್ಲ! ದೊಡ್ಡದಾಯಿತು ಮುಖಕ್ಕೆ” ಎಂದು ಇನ್ನೊಬ್ಬರು ಅಂದರು. ಇನ್ನೊಬ್ಬ ಗೆಳತಿ “ಸರಿಹೊಂದುತ್ತದೆ ಬಿಡು” ಅಂದಳು.
ಅಯ್ಯೊ! ನಿಮಗೆಲ್ಲಾ ಗೊತ್ತೇ ಇದೆಯಲ್ಲಾ ತಮಿಳುನಾಡಿನ ದಿವಂಗತ ಮುಖ್ಯ ಮಂತ್ರಿ ಕರುಣಾನಿದಿ ಬ್ಲ್ಯಾಕ್ ಕನ್ನಡಕದಿಂದ , ವಾಠಾಳ್ ನಾಗರಾಜುರವರು ಅಗಲ ಕಪ್ಪು ಕನ್ನಡಕದಿಂದ ಫೇಮಸ್ ಅಲ್ವೇ! ಅಂದ ಹಾಗೆ ಗಾಂಧಿಯವರು ಧರಿಸಿದ ಕನ್ನಡಕ ಬ್ರಿಟನ್ನಿನಲ್ಲಿ 260,000ಪೌಂಡ್ಗಳಷ್ಟು ಭಾರೀ ಮೊತ್ತಕ್ಕೆ ಹರಾಜು ಆಗಿದೆ. ಇದನ್ನು ಗಾಂಧಿಯವರಿಗೆ 1900 ರಲ್ಲಿ ಉಡುಗೊರೆಯಾಗಿ ಕೊಡಲಾಗಿತ್ತಂತೆ.
ಕನ್ನಡಕ ಧರಿಸುವರೆಲ್ಲಾ ದೃಷ್ಠಿದೋಷವಿರುವವರು ಅನ್ನಬೇಕಾಗಿಲ್ಲ , ವಯಸ್ಸಾದವರು ಅನ್ನಬೇಕಿಲ್ಲ! ಯಾರು ಯಾವ ವಯಸ್ಸಿನವರು ಬೇಕಾದರೂ ಹಾಕಬಹುದು ಉದಾಹರಣೆಗೆ , ಬೈಕ್ ರೈಡರ್ಸ್,ಈಜು ಪಟುಗಳು, ವೆಲ್ಡಿಂಗ್ ಕೆಲಸ ಮಾಡುವವರು, ವಜ್ರದ ಕೆಲಸ ಮಾಡುವವರು, ವಾಚ್ ರಿಪೇರಿ ಮಾಡುವವರು ಇತ್ಯಾದಿ ಇತ್ಯಾದಿ ಎಲ್ಲಾ ವರ್ಗದವರು ಹಾಕಿಕೊಳ್ಳುತ್ತಾರೆ . ಹಳೇಯ ಕಾಲದಲ್ಲಿ ಕಣ್ಣಿನ ಸಮಸ್ಯೆಗೆ ಮಾತ್ರ ಇದೊಂದು ಅವಶ್ಯಕವಾಗಿತ್ತು. ಚಿಕ್ಕವಯಸ್ಸಿನವರು ಹಾಕಿದರೆ “ಸೋಡಗ್ಲಾಸ್, ನಾಲ್ಕುಕಣ್ಣು” ಎಂದು ರೇಗಿಸೋರು ಈಗ ಫ್ಯಾಷನ್ ಆಗಿದೆ. ಟ್ರೆಂಡಿ ಫ್ರೇಮ್ಗಳು ಬಂದಿವೆ. ತಂಪು ಕನ್ನಡಕಗಳನ್ನು ಹಾಕುವುದೇ ಈಗ ಹೆಚ್ಚುಗಾರಿಕೆ. .
“ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ” ಅಂದರೆ ಎಲ್ಲಾ ಇಂದ್ರಿಯಗಳಲ್ಲೂ ಕಣ್ಣುಗಳು ಅತ್ಯಂತ ಶ್ರೇಷ್ಟ ಅನ್ನುವ ಮಾತಿದೆ. ಹಾಗಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದೂ ಅತೀ ಮುಖ್ಯ. ಅಲರ್ಜಿ ಆಗದಂತೆ, ಧೂಳು ಬೀಳದಂತೆ ಜಾಗೃತೆ ವಹಿಸಬಹುದು. ಬದುಕಿನ ಬೆಳಕು ಅಂದರೆ ಕಣ್ಣು .ಕಣ್ಣು ಮುಖ್ಯ. ಹಾಗಂತ ಬೇರೆಯವರ ಮೇಲೆ ಕಣ್ಣಿಡು, ಕಣ್ಣು ಹಾಕು, ಕಣ್ಣು ಕೆಂಪಗೆ ಮಾಡು, ಕಣ್ಣುರಿ ಪಡುವುದಲ್ಲ ಅಯ್ಯೋ! ನಿಮಗ್ಯಾರಿಗೂ ಹೇಳಿದ್ದಲ್ಲ ! . ಹಾಗೆ ಮಾತಿಗೆ ಹೇಳಿದೆ ಅಷ್ಟೆ. ಇವುಗಳೆಲ್ಲ ಕಣ್ಣಿಗೆ ಸಂಬಂಧಿಸಿದ ನುಡಿಗಟ್ಟುಗಳಲ್ಲವೇ ಹಾಗಾಗಿ. “ ನೇತ್ರ ದಾನ ಮಹಾದಾನ” ಎನ್ನುವುದಿದೆ ಅದರಂತೆ ನೇತ್ರ ದಾನ ಮಾಡಲಾಗದೆ ಇದ್ದರೂ ಉಪಕಾರನೇತ್ರರಾಗಿರಬೇಕು ಅಲ್ವೇ? ಉಪದ್ರನೇತ್ರರಾಗುವ ಬದಲಿಗೆ. ಈ ಬರೆಹವನ್ನ ಬರೆಯುವಾಗಲು ಕನ್ನಡಕವನ್ನು ಧರಿಸಿ ಅಲ್ಲ! ಅಲ್ಲ! ಉಪನೇತ್ರೆಯಾಗೆ ಬರೆಯುತ್ತಿದ್ದೇನೆ! ಉಪನೇತ್ರೆಯಾಗಿ ಉಪನೇತ್ರಗಳ ಬಗ್ಗೆ ಬರೆಯುವುದದೆ ಒಂಥರ ಚಂದ ಅನ್ನಿಸುತ್ತಿದೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್