ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾನೂ ನೋಡುತ್ತಿದ್ದೇನೆ

ಚಂಪೋ


ನಾನೂ ನೋಡುತ್ತಿದ್ದೇನೆ
ನಿಮ್ಮಗಳ ನಿರಂತರ ಆಟ.
ಸುಖಾಸುಮ್ಮನೆ ಗೊತ್ತು-
ಗುರಿಯಿಲ್ಲದ ನಿಮ್ಮ ಓಟ.

ಹತ್ತಾರು ಕಡೆ ನಿಂತಿದ್ದೇನೆ
ನಾ ಉಸಿರುಗಟ್ಟಿ ದಣಿದು
ನಿಮ್ಮದೋ ನಾಗಾಲೋಟ
ಉಸಿರಿಲ್ಲದ ರೋಬೋಟ್ನಂತೆ

ಎಲ್ಲಂದರಲ್ಲಿ ಹೋಗುತ್ತೀರಿ
ಸಮಯ ಸಂದರ್ಭ ಮೀರಿ
ಸಂಯಮ ಸೂಕ್ಷ್ಮತೆ ಎಂದರೆ
ನಾನು ನನ್ನ ಹಕ್ಕು ಎನ್ನುವಿರಿ

ಬೇಕಾಬಿಟ್ಟಿ ಬರೆಯುತ್ತೀರಿ
ಮನಸೋ ಇಚ್ಛೆ ಬೈಯುತ್ತೀರಿ
ಕಿವುಡು ಕುರುಡು ಬಂದಂತಿರುವಿರಿ
ಬಾಯಿ ಬಿಟ್ಟರೆ ಸ್ವಾತಂತ್ರ್ಯ ಎನ್ನುವಿರಿ

ಸತ್ತವರನ್ನೂ ಬಿಡಲೊಲ್ಲಿರಿ
ಸಾಯುವರನ್ನು ಸುಲಿಯುವಿರಿ
ಪಾಪ….ಇರದವರ ಕಸಿದು ಹಿಂಸಿಸುವಿರಿ
ಸಿರಿಗೆ ಸೆರಗೊಡ್ಡಿ ಶರಣಾಗುವಿರಿ

ಸೆಡ್ಡು ಹೊಡೆವರ ಮುಂದೆ
ಅಂಬೆಗಾಲಿಕ್ಕಿ ಅಳುವಿರಿ
ಛೀ..ಸಂಭಾವಿತರ ತಲೆಯೇರಿ
ಬೆನ್ನಿಗೆ ಗುದ್ದು ಕೊಡುವಿರಿ

ನೈತಿಕತೆ ಮಾನವೀಯತೆ
ಕರುಣೆ ಕಾಲ ಕಸವಾಗಿಸಿದಿರಿ
ಥೂ..ಮೊಂಡುತನ ಧಗಲಬಾಜಿ
ಕೊಲೆ ಕಳ್ಳತನ ಬಿಡಲೊಲ್ಲಿರಿ

ಎಂದೋ ನಿನ್ನ ಬುಡಕ್ಕೇ ಬಂದಾಗ
ಅಬಬ ಸಾಚಾನಂತೆ ಕೈಕಟ್ಟುವಿರಿ
ನಾಚಿಕೆಬಿಟ್ಟು ಆಗಲೂ ಇದೇ ವರಸೆ
ಬದಲಾಗದ ನೀವುಗಳು ಎಷ್ಟು ಓಡಿದರೇನು
ಕಾಲನ ವೇಗದ ಮುಂದೆ ನಿಲ್ಲಲಾರಿರಿ
ಏಳಿ ಎಚ್ಚರಗೊಳ್ಳಿ ಸ್ವಲ್ಪ ನಿಧಾನಿಸಿ
ಧ್ಯಾನಿಸಿ ಮನಶುಚಿಗೊಳಿಸಿ ಯೋಚಿಸಿ
ಮನುಷ್ಯರಾಗಲು ಬಹಳ ಸಮಯ ಬೇಕಿಲ್ಲ!!