- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಪ್ರೀತಿ, ಜೀವ ಜಗತ್ತಿನ ಮೂಲಗುಣ ಅಂತ ನಾವೆಲ್ಲಾ ಅದೆಷ್ಟೇ ಪ್ರತಿಪಾದಿಸಲು ಮುಂದಾದರೂ ಬಹುಶಃ ಪ್ರೀತಿ ಕೇವಲ ಆಗಾಗ ಉದ್ದೀಪನಗೊಳ್ಳುವ ಒಂದು ಭಾವದ ಆವೇಶವೋ, ವೇಷವೋ ಅಷ್ಟೇ ಅನ್ನುವುದು ಬಹುತೇಕ ನಮ್ಮೆಲ್ಲರಿಗೂ ಯಾವುದೋ ಒಂದು ಸಮಯದ ಬಿಂದುವಿನಲ್ಲಿ ಅನಿಸಿಯೇ ಅನಿಸುತ್ತದೆ. ಹಾಗಾದರೆ ಮೂಲಗುಣ ಯಾವುದು ಅಂತ ಆಲೋಚಿಸುವುದರೊಳಗಾಗಿ ಕ್ರೌರ್ಯ ಧುತ್ತನೆ ನಮ್ಮೆದುರಿಗೆ ಬಂದು ನಿಲ್ಲುತ್ತದೆ. ಕ್ರೌರ್ಯ, ಅರಿಷಡ್ವರ್ಗಗಳ ಉಪ ಉತ್ಪನ್ನವಾಗಿದ್ದರೂ ನಾಶಕ್ಕೆ ಕಾರಣೀಭೂತವಾಗುವುದು ಇದೇ. ಹಾಗಾದರೆ ಇದೇ ಮೂಲಗುಣವಾ ಅಂತ ಕೇಳಿದರೆ, ಖಡಾಖಂಡಿತವಾಗಿ ಹೇಳಲಿಕ್ಕಾಗುವುದಿಲ್ಲ. ಹೀಗೆ ಯಾವುದೇ ಒಂದು ನಿರ್ಧಾರಕ್ಕೆ ಬರಲಾರದೇ ಅಪೂರ್ಣವಾಗೇ ಇರುವ ಸಂಗತಿಗಳಲ್ಲೇ ಮಹತ್ವದ ಸತ್ಯಗಳು ಅನಾವರಣಗೊಳ್ಳುವುದು.
ಇಂಥ ಅಪೂರ್ಣಗಳಲ್ಲೇ ಹಲವು ಪ್ರಶ್ನೆಗಳಿಗೆ, ಹುಡುಕಾಟಕ್ಕೆ ಆಸ್ಪದವಿರುವುದು. ಮನುಷ್ಯ ಮಗುವಾಗಿದ್ದಾಗ ಅತ್ಯಂತ ಮುಗ್ಧ. ಬೆಳೆಯುತ್ತಾ ಬೆಳೆಯುತ್ತಾ ಸುತ್ತಮುತ್ತಲಿನ ಸಾರವನ್ನು ಹೀರಿಕೊಂಡು ತನ್ನನ್ನು ತಾನು ರೂಪಿಸಿಕೊಳ್ಳುತ್ತಾನೆ. ಹಾಗಾದರೆ ಆತನ ಮೂಲ ಯಾವುದು? ಇದೊಂಥರಾ ಚಕ್ರ. ಅದರ ಜೊತೆಜೊತೆಗೆ ಒಂದೇ ಕಾಲಕ್ಕೆ ಮನುಷ್ಯ ಒಬ್ಬರಿಗೆ ಒಳ್ಳೆಯವನಾಗಿಯೂ ಇನ್ನೊಬ್ಬರಿಗೆ ಕೆಟ್ಟವನಾಗಿಯೂ ಕಾಣುವಾಗ ಯಾವುದು ಆ ವ್ಯಕ್ತಿಯ ನಿಜವಾದ ಗುಣ ಅಂತ ಪ್ರಶ್ನೆ ಹುಟ್ಟುವುದೇ ಈ ದ್ವಂದ್ವದಿಂದಾಗಿ ಮತ್ತು ಈ ದ್ವಂದ್ವವೇ ಅವರವರಿಗೆ ಬೇಕಾದ ಉತ್ತರವನ್ನು ಅವರವರು ಕಂಡುಕೊಳ್ಳುವುದಕ್ಕೆ ಪೂರಕವಾಗಿ ನಿಲ್ಲುತ್ತದೆ. ಹೀಗೆ ಕ್ರೌರ್ಯಕ್ಕೆ ತಣ್ಣನೆಯ ಸ್ಪರ್ಶ ಕೊಟ್ಟು, ಹುಟ್ಟು ಸಾವು ಪುನರ್ಜನ್ಮ ಹಂಗಾಮಿತನದ ಅಂಶಗಳೆಲ್ಲವನ್ನೂ ಸೇರಿಸಿ, ಕಿಮ್ ಕಿ ಡುಕ್ ಅವರು ಮಾಡಿದ ಚಿತ್ರವೇ ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್.. ಅಂಡ್ ಸ್ಪ್ರಿಂಗ್’ ಅಥವಾ ಸ್ಪ್ರಿಂಗ್ ಸಮ್ಮರ್ ಆಟಮ್ ವಿಂಟರ್.. ಅಂಡ್ ಸ್ಪ್ರಿಂಗ್’.
ಇಡೀ ಸಿನೆಮಾ ಬೌದ್ಧ ಮತದ ತತ್ವ, ನಂಬಿಕೆ, ಆಚರಣೆಗಳನ್ನು ಅವಲಂಬಿಸಿದೆ. ‘ಋತುಗಳು ಹೇಗೆ ಪುನರಾವರ್ತನೆಯಾಗುತ್ತಲೇ ಇರುತ್ತವೆಯೋ ಹಾಗೆಯೇ ಮನುಷ್ಯ ಜನ್ಮ’ ಅನ್ನುವುದು ಇಲ್ಲಿನ ಒಂದು ವಾಕ್ಯದ ಸಾರಾಂಶ. ಆದರೆ ಅಷ್ಟೇ ಅಲ್ಲ. ಇಲ್ಲಿ ಕೇವಲ ಮನುಷ್ಯ ಜನ್ಮ ಪುನರಾವರ್ತನೆಯಾಗುವುದಲ್ಲ; ಅದರ ಜೊತೆಜೊತೆಗೆ ಅದಕ್ಕೆ ಅಂಟಿಕೊಂಡ ಅಥವಾ ಅದರ ಲಕ್ಷಣವೇ ಎಂಬಂತೆ ಇರುವ ಒಂದಷ್ಟು ಸಂಗತಿಗಳೂ ಪುನರಾವರ್ತನೆಯಾಗುತ್ತವೆ ಅನ್ನುವುದನ್ನೂ ಸಿನೆಮಾ ಹೇಳುತ್ತದೆ. ಮನುಷ್ಯನ ರೂಪ ಬದಲಾದರೂ, ಆತನ ಕ್ರೌರ್ಯದ ರೂಪ ಬದಲಾದರೂ, ಅದರ ಮೂಲದ ವಿಕೃತ ಆನಂದ ಒಂದೇ ಅನ್ನುತ್ತಲೇ ಸಿನೆಮಾ ತಾನು ಹೇಳಬಹುದಾದ ವಿಷಯದ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತದೆ. ಜನಾಂಗದಿಂದ ಜನಾಂಗಕ್ಕೆ ಹೊಸಹೊಸ ಜೀವಕೋಟಿ ಹುಟ್ಟಿದರೂ ಎಲ್ಲೋ ಮನುಷ್ಯ ಜನಾಂಗ ವಿಕೃತಿಯನ್ನೇ ಹುಡುಕಿಕೊಂಡು ಹೋಗುತ್ತದಾ ಅನ್ನುವ ಒಂದು ವಿಲಕ್ಷಣ ಹೊಳಹನ್ನು ಈ ಸಿನೆಮಾ ನಮ್ಮ ಮುಂದಿಡುತ್ತದೆ. ಆದರೆ, ಆ ವಿಕೃತ ಆನಂದದ ಹಾಗೂ ಅದರ ಪಶ್ಚಾತ್ತಾಪದ ಭಾರವನ್ನು ನಾವು ನಮ್ಮ ಹೃದಯದಲ್ಲೇ ನಮ್ಮ ಸಾವಿನವರೆಗೂ ಕೊಂಡೊಯ್ಯುತ್ತೇವೆ. ಪಶ್ಚಾತ್ತಾಪಕ್ಕಿಂತ ಬೇರೆ ಪ್ರಾಯಶ್ಚಿತ್ತವಿಲ್ಲ ಅಂತ ಹೇಳುವುದು ಇದಕ್ಕೇ ಇರಬೇಕು. ಈ ಅಂಶವನ್ನು ಹೇಳುವಾಗ ಒಂದು ತಣ್ಣನೆಯ ಕ್ರೌರ್ಯದ ಪ್ರಸಂಗವನ್ನು ಸಿನೆಮಾದಲ್ಲಿ ಬಳಸಿಕೊಂಡಿದ್ದಾರೆ. ಸಿನೆಮಾ ನೋಡಿದ ಅದೆಷ್ಟೋ ದಿನಗಳ ಕಾಲ ಈ ದೃಶ್ಯ ವಿಚಿತ್ರವಾಗಿ ಕಾಡುತ್ತದೆ. ನಮ್ಮ ನಮ್ಮ ಬಾಲ್ಯದ ‘ಏರೋಪ್ಲೇನ್ ಚಿಟ್ಟೆ’ ಹಾಗೂ ನಮ್ಮ ನಮ್ಮ ಕೈಯಲ್ಲೊಂದು ದಾರ ನೆನಪಾದರೆ, ನಮ್ಮ ನಮ್ಮ ಹೃದಯದಲ್ಲೂ ಒಂದು ಭಾರ ಬಂದು ಕೂತಂತೆ!
ಈ ಸಿನೆಮಾದಲ್ಲಿ ಬೌದ್ಧ ಧರ್ಮದ ಕುರಿತಾಗಿ ಒಂದು ವಿಶಿಷ್ಟ ಸಂಕೇತವನ್ನು ಬಳಸಿಕೊಂಡಿದ್ದಾರೆ. ಗೋಡೆಗಳೇ ಇಲ್ಲದ ಬಾಗಿಲುಗಳು; ಬಹುಶಃ ನಾವು ಒಬ್ಬರನ್ನೊಬ್ಬರು ತಲುಪುವುದಕ್ಕೆ ಬಾಗಿಲುಗಳನ್ನಿಟ್ಟುಕೊಂಡಿದ್ದೇವೆಯೇ ಹೊರತೂ ಒಬ್ಬರು ಇನ್ನೊಬ್ಬರಿಗೆ ಕಾಣದಂತೆ ಗೋಡೆಗಳನ್ನಿಟ್ಟುಕೊಂಡಿಲ್ಲ ಅಂತ ಹೇಳುತ್ತವೆ ಅಂತ ಅಂದುಕೊಂಡರೆ, ಇದಕ್ಕೆ ಇನ್ನೊಂದು ಅರ್ಥವನ್ನೂ ಕೊಡಬಹುದು. ಧರ್ಮದ ಬಾಗಿಲಿನಲ್ಲಿ ನಡೆದರೂ ತಲುಪಬಹುದು, ಅಥವಾ ಅದರ ಚೌಕಟ್ಟಿನಾಚೆ ನಡೆದರೂ ತಲುಪಬಹುದು. ಬಾಗಿಲುಗಳಿವೆ ನಡೆದಾಡುವುದಕ್ಕೆ ಆಚೆ ಈಚೆ. ಆದರೆ, ಅದನ್ನು ಬಿಟ್ಟು ನಡೆಯುತ್ತೇವೆ ಅಂದರೆ ಅದಕ್ಕೂ ಅವಕಾಶವಿದೆ ಅಂತಲೂ ಇವು ಸೂಚಿಸುತ್ತಿರಬಹುದು. ಇಡೀ ಸಿನೆಮಾದ ವೇದಿಕೆ ಪ್ರಶಾಂತ ಸರೋವರದ ಮಧ್ಯ ಇರುವ ಬೌದ್ಧ ಸನ್ಯಾಸಿಯ ಒಂಟಿ ಆಶ್ರಮ. ಏಕತಾನತೆಯಲ್ಲೂ ಇರಬಹುದಾದ ಏರಿಳಿತದ ಲಯವನ್ನು ಸಹಜವಾಗಿ ಸೆರೆಹಿಡಿವ ಪ್ರಯತ್ನದ ಕತೆ ಇದು.
ಪ್ರತಿ ಋತುಮಾನವೂ ತಾತ್ಕಾಲಿಕ, ಅಂತೆಯೇ ಮನುಷ್ಯನ ಬದುಕಿನ ಹಂತಗಳು. ಕಾಲಕ್ಕೆ ಬೇಕಾದ ಬದಲಾವಣೆಗಳು ತಾನೇ ತಾನಾಗಿ ಆಗುತ್ತಾ ಆಗುತ್ತಾ ಅದು ತನ್ನೊಂದಿಗೆ ಎಲ್ಲವನ್ನೂ ಬದಲಾಯಿಸುತ್ತಲೇ ಹೋಗುತ್ತದೆ. ಯಾವುದನ್ನೂ ಶಾಶ್ವತವಾಗಿ ಹಿಡಿದಿಟ್ಟುಕೊಳ್ಳಲಾಗದ ಸ್ಥಿತಿ ನಮ್ಮದು. ಆದರೆ ನಮ್ಮ ನಮ್ಮ ಕರ್ಮದ ಚಿತ್ರ ನಮ್ಮ ನಮ್ಮ ಎದೆಯ ಹಚ್ಚೆ. ಹಂಗಾಮಿ ಸುಖ ನಮ್ಮೊಳಗಿನ ಇತರ ಮೋಹಗಳನ್ನು ಉದ್ದೀಪಿಸಲು ಯತ್ನಿಸುವಾಗ, ಕೊಟ್ಟ ಬಾಗಿಲುಗಳ ಮೂಲಕ ಓಡಾಡಬೇಕೇ ಹೊರತೂ ಗೋಡೆಗಳೇ ಇಲ್ಲವೆಂದು ಆ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಂಬುದು ಎಷ್ಟು ಸಮಂಜಸ ಅನ್ನುವ ಪ್ರಶ್ನೆ ಮೂಡುತ್ತದೆ.
ಮೋಹ ಅನ್ನುವುದು ಎಷ್ಟು ವೇಗವಾಗಿ ಬರುತ್ತದೆಯೋ ಅಷ್ಟೇ ವೇಗವಾಗಿ ಹೋಗಿಬಿಡುವಂಥದ್ದು ಅನ್ನುವುದನ್ನು ಒಂದು ಹುಡುಗಿಯ ಪಾತ್ರದ ಮೂಲಕ ಹೇಳಿದ್ದಾರೆ. ಆದರೆ ಒಮ್ಮೊಮ್ಮೆ ಅನಿಸುತ್ತದೆ, ಇನ್ನೆಷ್ಟು ವರ್ಷಗಳ ಕಾಲ ಹೆಣ್ಣನ್ನು ಮೋಹ, ಮಾಯೆ ಇತ್ಯಾದಿಗಳಲ್ಲೇ ನಾವು ಗುರುತಿಸುತ್ತೇವೆ ಅಂತ! ವಿಚಲಿತರಾಗುವವರು ಇರುವಾಗ, ವಿಚಲಿತವಾಗಿಸಿದರು ಅಂತ ಅನ್ನುವುದು ಬದಲಾಗದ ನಮ್ಮ ಮನಸ್ಥಿತಿಗಳಿಗೆ ಹಿಡಿದ ಕನ್ನಡಿಯೇ ಹೊರತೂ ಇನ್ನೇನಲ್ಲ.
ಈ ಸಿನೆಮಾದಲ್ಲಿ ಆ ಸರೋವರದ ಮಧ್ಯಭಾಗದಲ್ಲಿರುವ ಆಶ್ರಮವೇ ಎಲ್ಲ ಘಟನೆಗಳಿಗೆ ಮುಖ್ಯ ವೇದಿಕೆ. ನಮ್ಮ ಜೀವದ ಕೇಂದ್ರವೇ ಎಲ್ಲಕ್ಕೂ ವೇದಿಕೆ ಅನ್ನುವುದನ್ನು ಇದು ಹೇಳುತ್ತಿದೆಯಾ! ಋತುಮಾನಗಳು ಬದಲಾದರೂ ಕೆಲವಷ್ಟು ವಿಷಯಗಳು ಸಾರ್ವಕಾಲಿಕವಾದವುಗಳು. ಅದರಲ್ಲಿ ಮನುಷ್ಯನ ವಿಕೃತಿಯೂ ಒಂದು. ಅದರಿಂದ ಆತ ಅನುಭವಿಸಬಹುದಾದ ವಿಕೃತ ಆನಂದವೂ ಒಂದು. ಕಿಮ್ ಕಿ ಡುಕ್ ಅವರ ಕುರಿತಾಗಿಯೂ , ಚಿತ್ರೀಕರಣಕ್ಕಾಗಿ ಅವರು ಪ್ರಾಣಿಗಳನ್ನು ಬಳಸಿಕೊಳ್ಳುವ ಬಗೆಯ ಕುರಿತಾಗಿಯೂ ಇಂಥದ್ದೇ ಸುದ್ದಿಗಳಿವೆ!
ಒಂದು ಅಗಾಧ ಸತ್ಯವನ್ನು ತಣ್ಣಗೆ ಹೇಳಿ ಕೂತುಬಿಡುವಂಥ ಚಿತ್ರ ಇದು. ಸೂಕ್ಷ್ಮ ಮನಸ್ಸಿನವರಾಗಿದ್ದರೆ ಈ ಚಿತ್ರದಿಂದ ದೂರ ಉಳಿಯುವುದೇ ಉತ್ತಮ. ರಕ್ತಪಾತವಿಲ್ಲದೆಯೇ ಕ್ರೌರ್ಯವನ್ನು ತೋರಿಸಬಹುದು ಹಾಗೂ ಅದು ಬಹಳ ಕಾಲದವರೆಗೆ ನಮ್ಮೊಳಗೆ ಒಂದು ತಲ್ಲಣವನ್ನು ಹುಟ್ಟಿಸಬಹುದು!
ಕೊನೆಯ ಮಾತು, ಮಕ್ಕಳೊಂದಿಗೆ ಕೂತು ಈ ಚಿತ್ರ ‘ನೋಡದಿದ್ದರೆ’ ತುಂಬಾ ತುಂಬಾ ಒಳ್ಳೆಯದು…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್