- ಅನಾದ - ಫೆಬ್ರುವರಿ 18, 2023
- ಗಾಳಿಗೆ ತೊಟ್ಟಿಲ ಕಟ್ಟಿ - ಆಗಸ್ಟ್ 22, 2021
- ಬಾಬಾಸಾಹೇಬರೆಡೆಗೆ - ಆಗಸ್ಟ್ 22, 2021
ನಿರಾಳ: ಸಾಹಿತ್ಯ-ಸಂಸ್ಕೃತಿಗಳ ಸಮದರ್ಶಿ ಲೇಖಕ ಡಾ. ಎಂ.ಎಂ. ಪಡಶೆಟ್ಟಿ
ನಿರಾಳ
ಸಂ: ಡಾ. ಶ್ರೀರಾಮ ಇಟ್ಟಣ್ಣವರ
ಪಟು: 612, ಬೆಲೆ: 600
ಪ್ರಕಾಶನ: ನೆಲೆ ಪ್ರಕಾಶನ ಸಂಸ್ಥೆ ಸಿಂದಗಿ
ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಕೆಲಸವನ್ನು ಮಾಡಿದ ಲೇಖಕರಿಗೆ ಅಭಿನಂದನ ಗ್ರಂಥವನ್ನು ಅರ್ಪಿಸುವ ಸಂಪ್ರದಾಯ ಕನ್ನಡ ನಾಡಿನಲ್ಲಿ 1941ರಲ್ಲಿ ಪ್ರಾರಂಭವಾಯಿತು. ಮೊದಲನೆಯ ಅಭಿನಂದನ ಗ್ರಂಥ ಆಚಾರ್ಯ ‘ಶ್ರೀ’ ಅವರಿಗೆ ಅರ್ಪಿಸಿದ ‘ಸಂಭಾವನೆ’. ಈ ಸಂಪ್ರದಾಯ ನಮಗೆ ತಂದು ಕೊಟ್ಟಿರುವ ಸುಮಾರು ಒಂದು ನೂರು ಅಭಿಂದನ ಗ್ರಂಥಗಳಲ್ಲಿ ಕೆಲವು ಶ್ರೇಷ್ಠ ಪ್ರಕಟಣೆಗಳಾಗಿವೆ. ಕೆಲವು ಅಭಿನಂದನ ಗ್ರಂಥಗಳು ಯಾವ ಲೇಕಕರಿಗೆ ಅರ್ಪಿತವಾದುವೋ ಅವರ ಜೀವನ-ಸಾಧನೆಗಳಿಗೆ ಮೀಸಲಾಗಿವೆ. ನಿಜವಾಗಿ ಅವರು ಪ್ರಮುಖ ಲೇಖಕರಾದಾಗ ಅಭಿನಂದನ ಗ್ರಂಥ ಬಹುಕಾಲ ನಿಲ್ಲುವ ಪ್ರಕಟಣೆಯಾಗಿರುತ್ತದೆ. ಕೆಲವು ಅಭಿನಂದನ ಗ್ರಂಥಗಳು ಬೇರೆ ರೀತಿಯ ಯೋಜನೆಯನ್ನು ಅನುಸರಿಸಿವೆ. ಸನ್ಮಾನಿಸುತ್ತಿರುವ ಲೇಖಕರ ಜೀವನ ಮತ್ತು ಕೃತಿಗಳನ್ನು ಒಂದು ಭಾಗ ಪರಿಚಯ ಮಾಡಿಕೊಡುತ್ತದೆ; ಪುಸ್ತಕದ ಇತರ ಭಾಗಗದಲ್ಲಿ ಅಥವಾ ಭಾಗಗಳಲ್ಲಿ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರೌಢ ಲೇಖನಗಳಿರುತ್ತವೆ.
ಡಾ. ಎಂ. ಎಂ. ಪಡಶೆಟ್ಟಿ ನಾಡಿನ ಪ್ರಮುಖ ಲೇಖಕರು, ಜಾನಪದ ವಿದ್ವಾಂಸರು, ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಬೋಧಿಸಿದವರು. ಅವರ ತರಗತಿಗಳಲ್ಲಿ ಕೂಡದಿದ್ದರೂ ಅವರಿಂದ ನೂರಾರು ಜನ ಪಾಠ ಕಲಿತಿದ್ದಾರೆ. ಈಗ ಈ ಹಿರಿಯ ಲೇಖಕರಿಗೆ ‘ನಿರಾಳ’ ಅಭಿನಂದನ ಗ್ರಂಥ ಅರ್ಪಿಸಿದ್ದು ತೀರ ಉಚಿತ. ಈ ಗ್ರಂಥ ಸನ್ಮಾನಿಸುತ್ತಿರುವ ಪಡಶೆಟ್ಟಿಯವರ ಜೀವನ ಮತ್ತು ಕೃತಿಗಳನ್ನು ಕುರಿತ ಲೇಖನಗಳನ್ನು ಒಳಗೊಂಡಿದೆ. ಜೊತೆಗೆ ಸಾಹಿತ್ಯಭ್ಯಾಸಿಗರಿಗೆ ತುಂಬ ಉಪಯುಕ್ತವಾಗುವ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಮೌಲಿಕ ಲೇಖನಗಳಿವೆ.
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವ ಡಾ. ಎಂ.ಎಂ. ಪಡಶೆಟ್ಟಿ ವಿಮರ್ಶೆ, ಜಾನಪದ, ಸಂಶೋಧನೆ, ಗ್ರಂಥ ಸಂಪಾದನೆ, ಜೀವನ ಚರಿತ್ರೆ, ವೈಚಾರಿಕ ಲೇಖನಗಳ ಮೂಲಕ ಕನ್ನಡದ ಸಹೃದಯರಿಗೆ ಪರಿಚಿತರು. ಅವರು ಈವರೆಗೆ ಹದಿನೈದಕ್ಕೂ ಹೆಚ್ಚು ಪ್ರಮುಖ ಕೃತಿಗಳನ್ನು ಪ್ರಕಟಿಸಿದ್ದಾರೆ. ಗಟ್ಟಿ ಸಾಹಿತ್ಯ ಸೃಷ್ಟಿಯ ಡಾ. ಎಂ. ಎಂ. ಪಡಶೆಟ್ಟಿಯವರಿಗೆ ಸಹಜವಾಗಿಯೇ ಅಭಿಮಾನಿ ಓದುಗರಿದ್ದಾರೆ. ಪ್ರಾಧ್ಯಾಪಕರಾದುದರಿಂದ ದೊಡ್ಡ ಶಿಷ್ಯಬಳಗವೂ ಇದೆ. ಈ ಅಭಿಮಾನಿ ಬಳಗ, ಶಿಷ್ಯವೃಂದ ಹಾಗೂ ಹಿತೈಷಿಗಳು ಹೊರ ತಂದಿರುವ ಕೃತಿ ‘ನಿರಾಳ’. ಈ ಕೃತಿ ಓರ್ವ ಜನಪ್ರಿಯ ಪ್ರಾಧ್ಯಾಪಕನ ಪರಿಚಯದ ಕೃತಿ ಆಗಿರುವಂತೆಯೇ, ಲೇಖಕನೊಬ್ಬನಿಗೆ ಸಂದಿರುವ ಅಭಿಮಾನದ ಕೃತಿಯೂ ಆಗಿದೆ. ನಾಡಿನ ಅನೇಕ ಹಿರಿಯ ಬರಹಗಾರರು, ಹೊಸ ತಲೆಮಾರಿನ ಲೇಖಕರು ಈ ಕೃತಿಯಲ್ಲಿ ತಾವು ಕಂಡ ಪ್ರೊ. ಎಂ. ಎಂ. ಪಡಶೆಟ್ಟಿಯವರನ್ನು ದಾಖಲಿಸಲು ಪ್ರಯತ್ನಿಸಿದ್ದಾರೆ. ಪಡಶೆಟ್ಟಿಯವರಿಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ ಈ ಗ್ರಂಥ ಪ್ರಕಟವಾಗಿದೆ. ಅವರ ಅನನ್ಯ ವ್ಯಕ್ತಿತ್ವದ ಬಗ್ಗೆ ನಾಡಿನ ಅನೇಕ ಲೇಖಕರು ಬರೆದಿರುವುದು ಈ ಅಭಿನಂದನ ಗ್ರಂಥದ ವಿಶೇಷ ಎಂದೇ ಹೇಳಬೇಕು.
ಒಬ್ಬ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸಾಧನೆಗಳ ಕುರಿತಾಗಿ ಎಲ್ಲರಿಗೂ ಕುತೂಹಲವಿರುತ್ತದೆ. ಎಂ. ಎಂ. ಪಡಶೆಟ್ಟಿ ಅವರು ರೈತಾಪಿ ಕುಟುಂಬದಲ್ಲಿ ಜನಿಸಿ, ಸ್ವಯಂ ಪ್ರತಿಭೆ ಮತ್ತು ಪರಿಶ್ರಮಗಳಿಂದ ಸಾಧನೆಯ ಮೆಟ್ಟಿಲುಗಳನ್ನೇರಿದವರು. ಸರಳತೆ, ಪ್ರಾಮಾಣಿಕತೆ, ಸಹೃದಯತೆಗಳು ಅವರಲ್ಲಿ ಕಂಡುಬರುವ ಮಾನವೀಯ ಮೌಲ್ಯಗಳಾಗಿವೆ. ಪಡಶೆಟ್ಟಿಯವರ ಆಸಕ್ತಿಯ ವ್ಯಾಪ್ತಿ ವಿಶಾಲವಾದದ್ದು. ಅವರು ಶಿಕ್ಷಣ, ಸಮಾಜ, ಸಾಹಿತ್ಯ, ಸಂಘಟನೆ, ಸಾಂಸ್ಕøತಿಕ ಕ್ಷೇತ್ರದ ವಿಭಿನ್ನ ಆಯಾಮಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಬದ್ಧತೆಯ ಹಿನ್ನೆಲೆಯಲ್ಲಿ ಜಾನಪದ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಪಡಶೆಟ್ಟಿಯವರು ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರು, ಅಷ್ಟೇ ಅಲ್ಲ, ಜನಸಾಮಾನ್ಯರೊಡನೆ ಸುಲಭವಾಗಿ ಬೆರೆಯುತ್ತಾರೆ. ಒಳ್ಳೆಯ ಹಾಸ್ಯಪ್ರಜ್ಞೆವುಳ್ಳವರು. ‘ಅಹಂ’ಗೆ ಬಹುಮಟ್ಟಿಗೆ ಕಡಿವಾಣ ಹಾಕಿದವರು. ಪಡಶೆಟ್ಟಿಯವರು ಅನ್ಯ ಪ್ರಭಾವದಿಂದಲ್ಲ, ಸ್ವಪ್ರಯತ್ನದಿಂದ ಪಲ್ಲವಿಸಿದವರು. ಕೆಲಸ ಮಾಡುತ್ತ ಮಾಡುತ್ತ ಬೆಳೆದು ನಿಂತವರು. ನಿರಂತರ ಕಷ್ಟ-ಕಾರ್ಯದಿಂದ ಮಾತ್ರ ಬೆಳವಣಿಗೆ ಎನ್ನುವುದನ್ನು ಸಾಧಿಸಿ ತೋರಿಸಿದವರು. ಆದರೆ ಅವರು ಏಕಾಕಿಯಾಗಿ ಬೆಳೆದವರಲ್ಲ.
ಪಡಶೆಟ್ಟಿಯವರು ಕನ್ನಡ ಪ್ರಾಧ್ಯಾಪಕ ವೃತ್ತಿಯೊಂದಿಗೆ ಸಾಮೂಹಿಕ ಬೆಳವಣಿಗೆಗೂ ಕಾರಣರಾದವರು. ವಚನ ಸಾಹಿತ್ಯ, ಸಂಸ್ಕøತಿ ಪರಿಸರದಲ್ಲಿ ಬೆಳೆದ ಪ್ರೊ. ಎಂ. ಎಂ. ಪಡಶೆಟ್ಟಿ ಸದಾ ಹಸನ್ಮುಖಿ. ಅವರ ಮನಸ್ಸು ಸಹ ‘ನಿರಾಳ’. ಪರಿಶ್ರಮ ಸಂಸ್ಕೃತಿ ಸಂತೃಪ್ತ ಬದುಕನ್ನು ನಿರ್ವಹಿಸಿದ ಧೀಮಂತ. ಅವರು ಸಹೃದಯರಾಗಿ ಅಪಾರ ಸ್ನೇಹಿತ, ಶಿಷ್ಯಗಣವನ್ನು ಹೊಂದಿದ ಅವರ ವ್ಯಕ್ತಿತ್ವ ಮತ್ತು ಬದುಕು ಎರಡಕ್ಕೂ ಸಾರ್ಥಕ.
ಡಾ. ಶ್ರೀರಾಮ ಇಟ್ಟಣ್ಣವರ ಪ್ರಧಾನ ಸಂಪಾದಕರಾಗಿರುವ ‘ನಿರಾಳ’ ಅಭಿನಂದನ ಗ್ರಂಥ ಮೂರು ಭಾಗಗಳಲ್ಲಿದೆ.
ಮೊದಲನೇ ಭಾಗ ಪಡಶೆಟ್ಟಿಯವರ ಪರಿಚಯ, ಸ್ನೇಹ, ಮಾತುಕಥೆ -ಇತ್ಯಾದಿಗಳಿಗೆ ಸಂಬಂಧಿಸಿದ ‘ಒಡನಾಡಿಗಳು ಕಂಡಂತೆ’. ಪಡಶೆಟ್ಟಿಯವರ ಬಹುಮುಖ ವ್ಯಕ್ತಿತ್ವ-ಸಾಧನೆಗಳನ್ನು ಪರಿಚಯಿಸುವ ಲೇಖನಗಳನ್ನು ಈ ಭಾಗ ಒಳಗೊಂಡಿದೆ. ಇಲ್ಲಿನ ಲೇಖನಗಳು ಪಡಶೆಟ್ಟಿಯವರು ಸಿಂದಗಿಯ ಜಿ.ಪಿ. ಪೋರವಾಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮಾಡಿದ ಕೆಲಸವನ್ನು, ಜೊತೆಗೆ ಅವರ ಆಸಕ್ತಿಯ ಕೆಲಸವಾದ ಜಾನಪದ ಸಂಶೋಧನೆಯನ್ನು ಕುರಿತು ಪ್ರಸ್ತಾಪಿಸಿವೆ. ಅವರ ವ್ಯಕ್ತಿತ್ವದ ಬಗ್ಗೆ ಲೇಖಕರಾದ ಗುರುಲಿಂಗ ಕಾಪಸೆ, ಶ್ರೀರಾಮ ಇಟ್ಟಣ್ಣವರ, ಚನ್ನಪ್ಪ ಕಟ್ಟಿ, ವೀರಣ್ಣ ದಂಡೆ, ಬಾಳಾಸಾಹೇಬ ಲೋಕಾಪುರ, ಮೀನಾಕ್ಷಿ ಬಾಳಿ, ಶಶಿಕಲಾ ವಸ್ತ್ರದ -ಮೊದಲಾದವರ ಲೇಖನಗಳು ಈ ಭಾಗದಲ್ಲಿವೆ. ಪಡಶೆಟ್ಟಿಯವರ ಸರಳ, ನೇರ, ಮುಗ್ಧ ವ್ಯಕ್ತಿತ್ವಕ್ಕೆ ಮಾರುಹೋಗಿರುವ ಲೇಖಕರು ಅವರ ಬದುಕು, ಬೋಧನೆ, ವ್ಯಕ್ತಿತ್ವ ಮತ್ತು ಸಾಧನೆಗಳ ಗುಣಗಾನವನ್ನು ಇಲ್ಲಿ ಮಾಡಿರುವುದು ಸಹಜವಾಗಿದೆ. ಇಲ್ಲೆಲ್ಲ ಒಂದು ಆತ್ಮೀಯ, ಅಂತಃಕರಣದ ನೋಟವನ್ನು ಓದುಗರು ಕಾಣಬಹುದು.
‘ಪುಸ್ತಕ ಅವಲೋಕನ’ ಎನ್ನುವ ಎರಡನೇ ಭಾಗ ಪಡಶೆಟ್ಟಿಯವರ ಕೃತಿಗಳ ಸಾಹಿತ್ಯ ವಿಮರ್ಶೆಗೆ ಮೀಸಲಾಗಿದೆ. ಪಡಶೆಟ್ಟಿಯವರ ಕೃತಿ ಸಮೀಕ್ಷೆಗಳಿಗೆ ಸೀಮಿತವಾಗಿರದೆ, ಸಮಕಾಲೀನ ಸಾಹಿತ್ಯದ ಅವಲೋಕನವೂ ಇರುವುದು ಈ ಭಾಗದ ವಿಶೇಷ. ಪಡಶೆಟ್ಟಿಯವರದು ವೇಗದ ಬರವಣಿಗೆಯಲ್ಲ. ಅವರು ಬರೆದದ್ದು ಕೇವಲ ಹದಿನೈದು ಕೃತಿಗಳು. ಆದರೆ ಅವರು ಬರೆದಷ್ಟೆಲ್ಲ ಮಹತ್ವದ ಕೃತಿಗಳೆಂದು ಗುರುತಿಸಬಹುದು. ಪಡಶೆಟ್ಟಿಯವರ ಸಾಹಿತ್ಯಿಕ ಕೊಡುಗೆಯನ್ನು ಕೇಂದ್ರವಾಗಿಟ್ಟುಕೊಂಡು ಅನೇಕ ವಿಮರ್ಶಕರು ಅವರ ಕೃತಿಗಳನ್ನು ವಿಶ್ಲೇಷಿಸಿ ವಿಮರ್ಶಿಸಿದ್ದಾರೆ. ಹಿರಿಯ ಲೇಖಕರ ಸಾಹಿತ್ಯದ ಹೆಜ್ಜೆ ಗುರುತುಗಳನ್ನು ಅವರ ಕೃತಿಗಳ ಮೂಲಕವೇ ಇಲ್ಲಿ ಗುರುತಿಸಲಾಗಿದೆ. ಈ ಭಾಗವನ್ನು ಓದಿದರೆ ಎಂ. ಎಂ. ಪಡಶೆಟ್ಟಿಯವರ ಸಾಹಿತ್ಯದ ಸ್ಥೂಲ ಪರಿಚಯವೊಂದು ಓದುಗರಿಗೆ ಸಿಗುತ್ತದೆ.
ಮೂರನೇ ಭಾಗ ಜನಪದ ಸಾಹಿತ್ಯ ಮತ್ತು ಕಲಾವಿದರ ಕುರಿತು ಸಂಬಂಧಿಸಿದ್ದು-‘ಬಾಗಿಲಿಗೆ ಬಂದವರು’. ಈ ಭಾಗವು ನಾಡಿನ ಜಾನಪದ ಸಾಹಿತ್ಯ, ಕಲೆ ಮತ್ತು ಕಲಾವಿದರ ಕುರಿತು ಮಾಹಿತಿ ನೀಡುತ್ತದೆ. ಭೂತೇರು, ಮಾತಂಗಿಯವರು, ಜೋಕುಮಾರ, ಚೌಡಕಿಯವರು, ಕವಲೆತ್ತಿನವರು, ಕೊರವಂಜಿಯರು, ಹಗಲು ವೇಷಗಾರರು, ಕರಡಿ ಕುಣಿಸುವವರು, ಕೋಲೆಬಸವ ಆಡಿಸುವವರು, ಗಂಗವ್ವ ಗೌರವ್ವ ಹಾಡುವವರು, ಸುಡುಗಾಡ ಸಿದ್ದರು, ಕಂಬಿಯವರು, ಗುರ್ಜಿಯವರು, ದುರಗಿ ಮುರಗಿಯವರು-ಹೀಗೆ ಮೂವತ್ತಕ್ಕೂ ಹೆಚ್ಚು ಜನಪದ ಕಲೆ- ಕಲಾವಿದರ ಕುರಿತಾದ ಸಂಶೋಧನಾ ಲೇಖನಗಳಿವೆ.
ಜನಪದ ಹಾಡುಗಳ ವಿವಿಧ ಮಜಲುಗಳ ವಿಶ್ಲೇಷಣೆ, ಜನಪದ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಕುರಿತಾದ ಈ ಲೇಖನಗಳು ಹೊಸ ಚಿಂತನಾ ಸ್ವರೂಪವನ್ನು ಪಡೆದಿವೆ.
ಪ್ರಧಾನ ಸಂಪಾದಕ ಶ್ರೀರಾಮ ಇಟ್ಟಣ್ಣವರ, ಸಹ ಸಂಪಾದಕ ಚನ್ನಪ್ಪ ಕಟ್ಟಿ, ಮನು ಪತ್ತಾರರು ತುಂಬಾ ಶ್ರಮವಹಿಸಿ ಈ ಲೇಖನಗಳನ್ನು ಸಂಗ್ರಹಿಸಿದ್ದಾರೆ. ಪುಸ್ತಕ ಸಂಪಾದನೆ ವೈವಿಧ್ಯಮಯವಾದ ಆಸಕ್ತಿಯನ್ನುಂಟುಮಾಡುವ ಕಾರ್ಯ, ಹೊಣೆಗಾರಿಕೆಯ ಕಾರ್ಯ, ಹಲವೊಮ್ಮೆ ಸವಾಲುಗಳನ್ನು ಒಡ್ಡುವ ಕಾರ್ಯ. ಈ ಕಾರ್ಯವನ್ನು ಸಂಪಾದಕರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆಕರ್ಷಕ ಭಾವಚಿತ್ರಗಳು ಸೇರಿ ಕೃತಿ ಬೃಹದಾಕಾರವಾಗಿ, ವರ್ಣರಂಜಿತ ಮುಖಪುಟದೊಂದಿಗೆ ಹೊರಬಂದಿದೆ. ಹೊಳಪು ಕಾಗದ ಮತ್ತು ವಿನ್ಯಾಸದಿಂದಾಗಿ ಈ ಗ್ರಂಥ ಮೊದಲ ನೋಟಕ್ಕೆ ಓದುಗರ ಗಮನ ಸೆಳೆಯುತ್ತದೆ.
ಪುಸ್ತಕದಲ್ಲಿ ಬಳಸಲಾಗಿರುವ ರೇಖಾಚಿತ್ರಗಳು ಗಮನಾರ್ಹವಾಗಿವೆ. ಸಾಹಿತಿ ಸಜ್ಜನರನ್ನು ಅಭಿನಂದಿಸುವ ಸತ್ಸಂಪ್ರದಾಯ ಸಿಂದಗಿಯಲ್ಲಿ ಇತ್ತೀಚೆಗೆ ಹೊಸದಾಗಿ ಪ್ರಾರಂಭವಾಗುತ್ತಿರುವುದಕ್ಕೆ ಕಾರಣ ಸಿಂದಗಿಯ ನಾಗರಿಕರ ಸಂಸ್ಕøತಿಕರಣವೆಂದು ಹೇಳಬಹುದು. ಕಾರಣ ಏನೇ ಇರಲಿ ಪರಿಣಾಮ ಮಾತ್ರ ಪರಿಣಾಮಕಾರಿ. ಶಿಕ್ಷಣ, ಸಾಹಿತ್ಯ, ಸಂಘಟನೆ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಡಾ. ಎಂ.ಎಂ. ಪಡಶೆಟ್ಟಿಯವರ ಬದುಕು-ಬರಹಗಳ ಕುರಿತು ಪರಿಚಯಿಸುವ ಸಂಪಾದಕರ ಪ್ರಯತ್ನ ಈ ಗ್ರಂಥದಲ್ಲಿ ಯಶಸ್ವಿಯಾಗಿದೆ. ನಾಡಿನ ಜಾನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಬಗೆಗೆ ಆಸಕ್ತಿಯಿಂದ ಅಧ್ಯಯನ ಮಾಡುವವರಿಗೆ ಈ ಗ್ರಂಥ ಉಪಯುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್