ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿ.ಎಸ್. ಭೀಮರಾಯ
ಇತ್ತೀಚಿನ ಬರಹಗಳು: ಸಿ.ಎಸ್. ಭೀಮರಾಯ (ಎಲ್ಲವನ್ನು ಓದಿ)

ಅನಾದ: ಹಲವು ಬೌದ್ಧಿಕ ದರ್ಶನಗಳ ಲೇಖಕ ಸಾಮರ್‍ಸೆಟ್ ಮಾಮ್
ಮೂಲ: ಸಾಮರ್‍ಸೆಟ್ ಮಾಮ್
ಕನ್ನಡಕ್ಕೆ: ಡಾ. ರಾಜಶೇಖರ ಮಠಪತಿ (ರಾಗಂ)
ಪುಟ:208, ಬೆಲೆ:200/-
ಪ್ರಕಾಶನ: ಕಾಚಕ್ಕಿ ಪ್ರಕಾಶನ,ಕುಣಿಗಲ್

ಕನ್ನಡದ ಪ್ರಮುಖ ಕವಿ, ವಿಮರ್ಶಕ ಮತ್ತು ಲೇಖಕರಲ್ಲಿ ಒಬ್ಬರಾಗಿರುವ ಡಾ. ರಾಜಶೇಖರ ಮಠಪತಿ (ರಾಗಂ) ಅನೇಕ ವರ್ಷಗಳಿಂದ ಇಂಗ್ಲಿಷ್‍ನಿಂದ ಕನ್ನಡಕ್ಕೆ ಅನುವಾದಗಳನ್ನು ಮಾಡಿಕೊಂಡು ಬಂದವರು. ಈವರೆಗೆ ಅವರು ಕನ್ನಡ ಮತ್ತು ಇಂಗ್ಲಿಷ್- ಈ ಎರಡೂ ಭಾಷೆಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಾಮರ್‍ಸೆಟ್ ಮಾಮ್ ಜಗತ್ತು ಕಂಡ ಅತ್ಯಂತ ಪ್ರತಿಭಾವಂತ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ನಾಟಕಕಾರ, ವಿದ್ವಾಂಸ ಮತ್ತು ಚಿಂತಕ. ಅವನು ಆಧುನಿಕ ಜಾಗತಿಕ ಸಾಹಿತ್ಯ ನಿರ್ಮಾಣದಲ್ಲಿ ತನ್ನ ಯುಗಪ್ರವರ್ತಕ ಕೃತಿಗಳ ಮೂಲಕ ಕೊಡುಗೆ ನೀಡಿದ ಗಮನಾರ್ಹ ಲೇಖಕ. ಮಾಮ್ ಕಥೆ, ಕಾದಂಬರಿ, ಪ್ರಬಂಧ ಮತ್ತು ನಾಟಕ ಮುಂತಾದ ಸಾಹಿತ್ಯದ ಪ್ರಕಾರಗಳಲ್ಲಿ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾನೆ. ಕಳೆದ ಇಪ್ಪತ್ತು ವರ್ಷಗಳಿಂದ ಸಾಮರ್‍ಸೆಟ್ ಮಾಮ್ ನನ್ನನ್ನು ಕಾಡುತ್ತಲೇ ಬಂದಿದ್ದಾನೆ. ಮಾಮ್ ಬರೆದ ಅನೇಕ ಕಥೆ, ಪ್ರಬಂಧ, ನಾಟಕ ಮತ್ತು ಕಾದಂಬರಿಗಳನ್ನು ನಾನು ಓದಿದ್ದೇನೆ, ಅನೇಕ ವರ್ಷಗಳ ಕಾಲ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧಿಸಿದ್ದೇನೆ. ಜಗತ್ತಿನಾದ್ಯಂತ ಅಪಾರ ಓದುಗರನ್ನು ಗಳಿಸಿರುವ ಸಾಮರ್‍ಸೆಟ್ ಮಾಮ್ ಕನ್ನಡಕ್ಕೆ ಅನುವಾದಗೊಂಡಿದ್ದು ವಿರಳ. ಮಾಮ್ ಕನ್ನಡಕ್ಕೆ ಸ್ವಲ್ಪ ಮಟ್ಟಿಗೆ ಅಪರಿಚಿತನೇ. ಮಾಮ್ ವಿಮರ್ಶೆಯ ಎಲ್ಲೆಗಳನ್ನು ಹಿಗ್ಗಿಸುವ ಲೇಖಕ, ಅವನ ಹಲವಾರು ಕೃತಿಗಳು ಕನ್ನಡಕ್ಕೆ ಬಾರದೆ ಉಳಿದದ್ದು, ಅವನ ಕೃತಿಗಳ ಕುರಿತು ವಿವರವಾದ ವಿಶ್ಲೇಷಣೆ-ವಿಮರ್ಶೆ ಬಾರದೆ ಹೋದದ್ದು ನಮಗೆ ನಷ್ಟವೇ. ಸಾಮರ್‍ಸೆಟ್ ಮಾಮ್ ಚಿಂತನಾಲೋಕದ ಅಪೂರ್ವ ಮಿಂಚು, ಮಿನುಗು, ಆಳ ಮತ್ತು ಗಾಂಭೀರ್ಯಗಳ ಸಂಕೀರ್ಣ ಮುಖಗಳನ್ನು ಕಾಣ ಸುವ ಇಷ್ಟೊಂದು ವೈವಿಧ್ಯಮಯ ಅವನ ಬರಹಗಳ ಕೃತಿಯೊಂದು ಡಾ. ರಾಗಂ ಅವರಿಂದ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟವಾಗಿದೆ.

ಸಾಮರ್‍ಸೆಟ್ ಮಾಮ್ ಹುಟ್ಟಿದ್ದು ಪ್ಯಾರೀಸ್‍ನಲ್ಲಿ; 25 ಜನವರಿ 1874ರಲ್ಲಿ. ಅವನದು ರೋಮಾಂಚಕಾರಿ ಬದುಕು. ತಂದೆ ರಾಬರ್ಟ್ ಆರ್ಮಂಡ್ ಮಾಮ್, ತಾಯಿ ಎಡಿತ್ ಮೇರಿ. ಚಿಕ್ಕವಯಸ್ಸಿನಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡ ಮಾಮ್ ಚಿಕ್ಕಪ್ಪನ ಮನೆಯಲ್ಲಿ ಬೆಳೆದನು. ಆ ಮನೆಯ ವಾತಾವರಣದಿಂದ ಅವನಿಗೆ ಕ್ರೈಸ್ತ ಧರ್ಮ ಮತ್ತು ಚರ್ಚ್‍ಗಳ ಬಗ್ಗೆ ಬೇಸರ ಬಂದಿತು. ಈ ಸಂದರ್ಭದಲ್ಲಿ ಅವನಲ್ಲಿ ಅಜ್ಞೇಯತಾವಾದ ಬೆಳೆಯಿತು. ಮುಂದೆ ಅವನು ‘ಸಿನಿಕ್’ ಎನ್ನಿಸಿಕೊಂಡನು. ಅವನು ತನ್ನ ಮೊದಲ ಹತ್ತು ವರ್ಷಗಳನ್ನು ಪ್ಯಾರೀಸ್‍ನಲ್ಲಿ ಕಳೆದನು, ಇಂಗ್ಲೆಂಡ್ ಮತ್ತು ಜರ್ಮನ್ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದನು. ಅವನು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಇಂಗ್ಲೆಂಡ್‍ಗೆ ಹಿಂದಿರುಗಿದನು. ಆದರೆ ಅವನು ವೈದ್ಯಕಿಯ ವೃತ್ತಿಯನ್ನು ನಿರ್ವಹಿಸದೆ, ಫುಲ್‍ಟೈಮ್ ಬರಹಗಾರನಾದನು. ಸಾಮರ್‍ಸೆಟ್ ಮಾಮ್ ಧಾರ್ಮಿಕ ಮನೋಭಾವದ ವ್ಯಕ್ತಿಯಲ್ಲ; ಅವನ ಆ ಮನೋಭಾವ ಸಹ ತೋರಿಕೆಯದಲ್ಲ. ಎಂಥ ಪ್ರತಿಕೂಲ ದೈವವೇ ಇರಲಿ, ಮನುಷ್ಯ ಮನುಷ್ಯ ಸಾಮಥ್ರ್ಯವನ್ನು ನಂಬಿ ಮುನ್ನಡೆಯಬೇಕು, ಮನುಷ್ಯ ಮನುಷ್ಯನಂತೆಯೇ ವರ್ತಿಸಬೇಕೆಂಬುದು ಅವನ ವಿಚಾರವಾಗಿದೆ. ಇಪ್ಪತ್ತನೇ ಶತಮಾನದ ವಿಚಾರವಾದಿ ಸಂಪ್ರದಾಯದಂತೆ ಸಾಹಿತ್ಯ, ನೈತಿಕತೆ ಮತ್ತು ತತ್ವಜ್ಞಾನಗಳ ಸಂಗಮ, ಅವನ ಬರವಣ ಗೆಯಲ್ಲಿ ಕಾಣ ಸಿಕೊಳ್ಳತೊಡಗಿತು. ಮಾಮ್ ಲೇಖಕನಾಗಿ ಸ್ಪೇನ್, ಕೇಫ್ರಿ, ಸ್ಕಾಟ್ಲೆಂಡ್, ಅಮೇರಿಕಾ, ಹೈಡೆಲ್‍ಬರ್ಗ್, ಮ್ಯೂನಿಚ್, ಇಂಗ್ಲೆಂಡ್, ಇಟಲಿ, ಜಿನೇವಾ, ಕೊಲಂಬೊ, ರಂಗೂನ್, ಮ್ಯಾಂಡಲೆ, ಬ್ಯಾಂಕಾಕ್, ಜರ್ಮನ್, ರಷ್ಯಾ, ಸಿಂಗಾಪುರ, ಸ್ಕಾಟ್ಲೆಂಡ್, ಭಾರತ ಮೊದಲಾದ ದೇಶಗಳನ್ನು ಸುತ್ತಿದನು. ವಿಶ್ವದ ಮೊದಲನೆ ಮಹಾಯುದ್ಧದಲ್ಲಿ ಬ್ರಿಟನ್ ರೆಡ್‍ಕ್ರಾಸ್ ‘ಲಿಟರರಿ ಆ್ಯಂಬುಲನ್ಸ್ ಡ್ರೈವರ್ಸ್’ ಎಂಬ ಇಪ್ಪತ್ನಾಲ್ಕು ಲೇಖಕರ ಪಡೆಯನ್ನು ತಯ್ಯಾರಿಸಿತು. ಫ್ರಾನ್ಸ್‍ನಲ್ಲಿ ಭಾಗವಹಿಸಿದ ಅವರಲ್ಲಿ ಒಬ್ಬರಾಗಿ ಮಾಮ್ ಕೂಡ ಸೇರಿಕೊಂಡ. ಭಾವಾವೇಶ, ಉದ್ವೇಗಗಳಿಲ್ಲದ ಜೀವನ, ಮರಣ ಮತ್ತು ಪ್ರೇಮಗಳ ವಾಸ್ತವತೆಯನ್ನು ನಿರ್ವಿಕಾರವಾಗಿ ಬರೆದ ಮಾಮ್ ಜಗತ್ತಿನ ಸಾಹಿತ್ಯ ಪರಂಪರೆಯಲ್ಲಿ ತನ್ನ ವಿಶಿಷ್ಟ ವ್ಯಕ್ತಿತ್ವದ ಛಾಪು ಮೂಡಿಸಿ ತೊಂಬತ್ತೊಂದನೆಯ ವಯಸ್ಸಿನಲ್ಲಿ 16 ಡಿಸೆಂಬರ್ 1965ರಲ್ಲಿ ತೀರಿಕೊಂಡ.

W. Somerset Maugham, the British playwright, novelist and short story  writer, was born 147 years ago today - Frank Beacham's Journal

‘ಅನಾದ’ ಸಾಮರ್‍ಸೆಟ್ ಮಾಮ್‍ನ ಒಂದು ಬಗೆಯ ಬೌದ್ಧಿಕ ಆತ್ಮಚರಿತ್ರೆಯಿದ್ದಂತೆ. ಸಾಮರ್‍ಸೆಟ್ ಮಾಮ್‍ನ ಚಿಂತನೆಯ ನೆಲೆಗಟ್ಟಿರುವ ನಿಲುವುಗಳು, ಆತ್ಮೀಯ ಸ್ಮರಣೆಗಳು, ಸಾಹಿತ್ಯ-ಕಲೆಗಳ ವಿಮರ್ಶೆ, ಜಗತ್ತಿನ ಕೆಲವು ಸೂಕ್ಷ್ಮ ವಿದ್ಯಮಾನಗಳ ವ್ಯಾಖ್ಯಾನ, ಸ್ವಾತಂತ್ರ್ಯ, ಧ್ಯಾನ, ಅಧಿಕಾರ, ಯುದ್ಧ, ಸಂಸ್ಕೃತಿ, ಪ್ರೀತಿ, ಪ್ರೇಮ, ಮನುಷ್ಯ ಸಂಬಂಧ, ಶಿಕ್ಷಣ, ಇತಿಹಾಸ, ಭ್ರಷ್ಟತೆ, ಕಾಲ, ಜನ, ನೆಲಗಳ ನೈಜ ಚಿತ್ರಣವೇ ಈ ಕೃತಿ. ಇದು ಕನ್ನಡದ ಈ ಹೊತ್ತಿನ ಚಿಂತನಾಕ್ರಮದ ಭಾಗವಾಗಬೇಕೆಂಬುದು ನನ್ನ ವಿಚಾರ. ಈ ಕೃತಿಯಲ್ಲಿ ಮಾಮ್‍ನ ಬಾಹ್ಯ ಜೀವನಕ್ಕಿಂತ ಅವನ ಅಂತರ್ ಲೋಕವನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಲು ಪ್ರಯತ್ನಿಸಲಾಗಿದೆ. ಅವನ ಲೋಕಗ್ರಹಿಕೆಯು ಜೀವನ ಮೀಮಾಂಸೆಯ ಅನೇಕ ಪ್ರಮುಖ ನಿಲುವುಗಳನ್ನು ಈ ಕೃತಿ ಮುನ್ನೆಲೆಗೆ ತರುವಂತಿದೆ. ಇಲ್ಲಿ ಸೇರ್ಪಡೆಯಾಗಿರುವ ಅವನ ಬದುಕಿನ ಸಣ್ಣ ಸಣ್ಣ ವಿವರಗಳು ಆಸಕ್ತಿ ಹುಟ್ಟಿಸುವಂತಿವೆ. ಜಗತ್ತಿನ ಸಾಹಿತ್ಯ, ಸಾಹಿತ್ಯ ಕೃತಿಗಳ ಬಗ್ಗೆ ಸಾಮರ್‍ಸೆಟ್ ಮಾಮ್‍ನಿಗೆ ಎಷ್ಟೊಂದು ಹಸಿವಿತ್ತು ಎಂಬುದಕ್ಕೆ ಈ ಕೃತಿ ಒಂದು ಉತ್ತಮ ನಿದರ್ಶನ. ಇಲ್ಲಿ ನಿಜವಾದ ಲೇಖಕ ಎಂದರೆ ಎಲ್ಲದರಲ್ಲೂ ಆಸಕ್ತಿ ಮತ್ತು ಕಾಳಜಿ ಇರುವವನು ಎಂಬುದಕ್ಕೆ ಸಾಕ್ಷಿಯಿದೆ. ಅನುರಣನ ಶಕ್ತಿಯುಳ್ಳ ಬರಹಗಳ ಈ ಸಂಕಲನದಲ್ಲಿರುವುದು ಸಾಮರ್‍ಸೆಟ್ ಮಾಮ್‍ನ ಬಾಲ್ಯ, ವಿದ್ಯಾಭ್ಯಾಸ, ಸಾಹಿತ್ಯ, ಕಲೆ, ರಾಜಕೀಯ, ಚರಿತ್ರೆ, ಧರ್ಮ ಮೊದಲಾದವುಗಳನ್ನು ಕುರಿತು ಚರ್ಚಿಸುವ ಮೂವತ್ನಾಲ್ಕು ಲೇಖನಗಳು. ಇವುಗಳಲ್ಲಿ ಹಾಸುಹೊಕ್ಕಾಗಿರುವುದು ಅಂತರಾರ್ಥ, ವ್ಯಾಖ್ಯಾನ, ಓದುಗನನ್ನು ಯೋಚಿಸುವಂತೆ ಮಾಡಬಲ್ಲ ಪ್ರತಿಭೆ. ಇವುಗಳ ಉದ್ದೇಶ ಓದುಗರಿಗೆ ಏನು ಯೋಚಿಸಬಹುದೆಂದು ಹೇಳವುದಷ್ಟೇ ಅಲ್ಲ, ಏನೆಲ್ಲ ವಿಷಯಗಳ ಬಗ್ಗೆ ಹೇಗೆಲ್ಲ ಯೋಚಿಸಲಾಗಿದೆ ಎಂಬುದನ್ನು ತಿಳಿಸಿಕೊಡುವುದು ಕೂಡ. ಇಲ್ಲಿನ ಬಹುಪಾಲು ಲೇಖನಗಳು ಮಾಮ್‍ನ ವಿಚಾರಗಳ ವಿಕಸನವನ್ನು ಪ್ರತಿಫಲಿಸುವುದಲ್ಲದೆ ಅವನ ಆಸಕ್ತಿ-ಅನುರಕ್ತಿಗಳ ಆಳ-ಅಗಲಗಳನ್ನು ಪ್ರಕಾಶಪಡಿಸುತ್ತವೆ. ಅರ್ನೆಸ್ಟ್ ಹೆಮಿಂಗ್ವೆ, ಜಾನ್ ಡಾಸ್‍ಪಾಸ್, ಕಮಿಂಗ್ಸ್, ಜಾರ್ಜ್ ಆರ್ವೆಲ್, ಥಾಮಸ್ ಮಾನ್, ವಿಲಿಯಂ ಫಾಕ್‍ನರ್, ಜೇಮ್ಸ್ ಜಾಯ್ಸ್, ಎಡ್ಮಂಡ್ ಗಾಸ್, ಇಬ್ಸನ್, ಏಟ್ಸ್, ಪ್ರಾಟಸ್ಟಂಟ್, ಮೆರಿಡಿತ್, ವಾಲ್ಟರ್ ಪೇಂಟರ್, ವರ್ಜಿನಿಯಾ ವೂಲ್ಪ್ ಹೀಗೆ ಸಾಹಿತ್ಯ ಲೋಕದ ಮೊದಲಾದ ಲೇಖಕರ ಕುರಿತು ಮಾಮ್ ಬರೆದಿದ್ದಾನೆ. ಈ ಬರಹಗಳಿಗೆ ಆಪ್ತತೆಯ ಗುಣವಿದೆ.

W. Somerset Maugham | Nice

ಆಧುನಿಕ ಯುರೋಪಿಯನ್ ಸಾಹಿತ್ಯದಲ್ಲಿ ಸಾಮರ್‍ಸೆಟ್ ಮಾಮ್‍ನದು ವಿಶಿಷ್ಟ ಸ್ಥಾನ. ಅವನು ಏಳು ದಶಕಗಳವರೆ ಬರವಣ ಗೆ ಮಾಡಿದನು, ತೊಂಬತ್ತಕ್ಕೂ ಹೆಚ್ಚಿನ ಮೌಲಿಕ ಕೃತಿಗಳನ್ನು ಇಂಗ್ಲಿಷ್ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಪರೂಪದ ಲೇಖಕ ಮಾಮ್. ಸಾಮರ್‍ಸೆಟ್ ಮಾಮ್‍ನ ಕೆಲವು ಪ್ರಮುಖ ಕೃತಿಗಳ ಪಟ್ಟಿಯನ್ನು ಗಮನಿಸಿ:
ಕಾದಂಬರಿಗಳು: ‘ಲಿಜಾ ಆಫ್ ಲ್ಯಾಂಬೆತ್’ (1897), ‘ದಿ ಮೇಕಿಂಗ್ ಆಫ್ ಎ ಸೇಂಟ್’ (1898), ‘ದಿ ಹಿರೋ’ (1901), ‘ದಿ ಮೆರ್ರಿ-ಗೋ-ರೌಂಡ್’ (1904), ‘ದಿ ಮ್ಯಾಜಿಸಿಯನ್’(1908), ‘ಎಕ್ಸ್‍ಪ್ಲೋರರ್’ (1908), ‘ಆಫ್ ಹ್ಯೂಮನ್ ಬಾಂಡೇಜ್’ (1915), ‘ದಿ ಮೂನ್ ಆ್ಯಂಡ್ ಸಿಕ್ಸ್ ಪೆನ್ಸ್’ (1919), ‘ದಿ ಪೇಂಟೆಡ್ ವೇಲ್’(1925), ‘ಕೇಕ್ಸ್ ಆ್ಯಂಡ್ ಏಲ್’ (1930), ‘ದಿ ನ್ಯಾರೊ ಕಾರ್ನರ್’ (1932), ‘ದಿ ರೇಜರ್ಸ್ ಎಡ್ಜ್’ (1940), ‘ಕ್ಯಾಟಲಿನಾ’ (1948), ‘ದೆನ್ ಆ್ಯಂಡ್ ನೌ’ (1948).
ಕಥಾಸಂಕಲನಗಳು: ‘ದಿ ಟ್ರೆಂಬ್ಲಿಂಗ್ ಆಫ್ ಎ ಲೀಫ್: ಲಿಟಲ್ ಸ್ಟೋರೀಸ್ ಆಫ್ ದಿ ಸೌತ್ ಸೀ ಐಲ್ಯಾಂಡ್ಸ್’ (1921), ‘ದಿ ಕ್ಯಾಸುವಾರಿನಾ ಟ್ರೀ: ಸಿಕ್ಸ್ ಸ್ಟೋರೀಸ್’ (1926), ‘ಜಡ್ಜ್ಮಂಟ್ ಸೀಟ್’ (1934), ‘ದಿ ಮಿಕ್ಸ್ಚರ್ ಆಸ್ ಬಿಪೋರ್’ (1940).
ನಾಟಕಗಳು: ‘ದಿ ಲ್ಯಾಂಡ್ ಆಫ್ ಪ್ರಾಮೀಸ್’ (1917), ‘ದಿ ಸರ್ಕಲ್’ (1921), ‘ಈಸ್ಟ್ ಆಫ್ ಸೂಯೆಜ್’ (1922), ‘ದಿ ಕ್ಯಾಮಲ್ಸ್ ಬ್ಯಾಕ್’ (1923), ‘ದಿ ಕಾನ್ಸ್ಟಂಟ್ ವೈಫ್’ (1926), ‘ದಿ ಲೆಟರ್’ (1927) ‘ದಿ ಸೆಕ್ರೆಡ್ ಫ್ಲೇಮ್’ (1928) ಮುಂತಾದ ಕೃತಿಗಳು ಸಾಮರ್‍ಸೆಟ್ ಮಾಮ್‍ನ ಲೋಕಾನುಸಂಧಾನ ಮತ್ತು ಹೋರಾಟದ ಬದುಕನ್ನು ಮುಂದಿಡುತ್ತವೆ. ಸಾಮರ್‍ಸೆಟ್ ಮಾಮ್ ಕಥೆಗಾರನಾಗಿ, ಕಾದಂಬರಿಕಾರನಾಗಿ ಮತ್ತು ನಾಟಕಕಾರನಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದನು. ಅವನ ಹಲವಾರು ಕಥೆಗಳು, ಕಾದಂಬರಿಗಳು ಮತ್ತು ನಾಟಕಗಳು ಚಲನಚಿತ್ರಗಳಾಗಿವೆ. ಆದ್ದರಿಂದ ಅವನು ತನ್ನ ದೇಶದಾಚೆ ಸಹ ಬಹು ಖ್ಯಾತಿಯನ್ನು ಪಡೆದನು. ‘ಆಫ್ ಹ್ಯೂಮನ್ ಬಾಂಡೇಜ್’ನಲ್ಲಿ ಆತ್ಮವೃತ್ತ ಕಾದಂಬರಿಯ ಪರಂಪರೆಯನ್ನು ಬೆಳೆಸಿದನು. ‘ಕೇಕ್ಸ್ ಆಂ್ಯಂಡ್ ಏಲ್’ನಲ್ಲಿ ಪಾತ್ರ ನಿರೂಪಣೆ ಮತ್ತು ತಂತ್ರ ವಿಶಿಷ್ಟವಾದವು. ಮಾಮ್‍ನ ಅನೇಕ ಕೃತಿಗಳು ಅಂತರ್‍ರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದು ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

ಈ ಸಂಕಲನದ ಲೇಖನಗಳಲ್ಲಿ ನಿಸರ್ಗ, ಬದುಕು, ಸಾಹಿತ್ಯ ಹಾಗೂ ಜಗತ್ತಿನ ಕುರಿತಾಗಿ ಇರುವ ತೀವ್ರತೆ ಯಾರನ್ನಾದರೂ ತಾಕುವಂತಿದೆ. ಮಾಮ್ ಏಕಾಂತ, ಮೌನ, ಸಂಶಯ, ಪ್ರೀತಿ, ಪ್ರೇಮ, ಭಯ, ಪ್ರಶ್ನೆ, ಉತ್ತರ-ಇವುಗಳ ಮೂಲಕ ಬದುಕಿನ ಬಗ್ಗೆ ಬರೆದದ್ದು ಹೊಸ ಬೆಳಕಿನ ಕಿಂಡಿಗಳನ್ನು ತೆರೆಯುವಷ್ಟು ಶಕ್ತವಾಗಿವೆ. ಅವನ ಬರಹದ ಬನಿ ನಮ್ಮ ಅರಿವಿಗೆ ಬರುವಂತೆ ಹಾಗೂ ಲಯ ಕೇಳುವಂತೆ ಡಾ. ರಾಗಂ ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಬೆತ್ತಲೆಯೆ ಬರಹವಲ್ಲ’, ‘ಬರಹ-ಬದುಕು’, ‘ಬರಹವೇ ಭರವಸೆ’, ‘ಲೇಖಕ ನ್ಯಾಯಾಧೀಶನಲ್ಲ’, ‘ಮನುಷ್ಯನೇ ಮಹಾನ್ ಗ್ರಂಥ’, ‘ಭಾಷೆ ಬದುಕು ತಿಳಿಸದು’, ‘ಜಿನಿಯಸ್ ಕಾಣುವ ಜಗತ್ತು’, ‘ಬರಹವೇ ಕ್ರಿಯಾಶೀಲತೆಯೇ’, ‘ಬರಹವೆಂಬ ಅರಿವಿನ ದಾರಿ’, ‘ಮಾಸ್ಟರ್ ಪೀಸ್’, ‘ಈಗ ವ್ಯವಧಾನವಿಲ್ಲ’, ‘ಸಂಸ್ಕøತಿ ಚರ್ಚಿಸಬಹುದೆ?’, ‘ಆತ್ಮ ರಹಸ್ಯವೇ’, ‘ಮನುಷ್ಯ ಒಬ್ಬನೆ-ಇತಿಹಾಸವೂ ಒಂದೇ’, ‘ವಿಮರ್ಶೆ ಮಿತಿ’ ಮೊದಲಾದ ಲೇಖನಗಳು ಬರಹದ ಸೃಜನಶೀಲ ಸಾಧ್ಯತೆಗಳ ವಿಶ್ಲೇಷಣೆ ಆಗಿರುವಂತೆಯೇ ಬರಹಗಾರನ ಆತ್ಮವಿಶ್ಲೇಷಣೆಯ ಸಾಧ್ಯತೆಗಳೂ ಆಗಿರುವುದು ವಿಶೇಷ. ಈ ಲೇಖನಗಳು ಕೇವಲ ಸಾಹಿತ್ಯ, ವಿಮರ್ಶೆ ಮತ್ತು ಪ್ರಕೃತಿಯ ಬಗ್ಗೆ ಮಾತನಾಡುತ್ತವೆ ಎಂದು ತಿಳಿದುಕೊಂಡರೆ ಅದು ಸುಳ್ಳು. ಮಾಮ್ ಎಂಥ ದೊಡ್ಡ ದರ್ಶನವಿರುವ, ಬದುಕಿನ ಬಗ್ಗೆ ಆಳವಾದ ನಂಬಿಕೆಯುಳ್ಳ ಮನುಷ್ಯನೆಂಬುದು ಈ ಲೇಖನಗಳನ್ನು ಓದಿದಾಗ ಗೊತ್ತಾಗುತ್ತದೆ. ಅವನು ಇಲ್ಲಿ ಮನುಷ್ಯನ ಮೂಲಭೂತ ಸ್ಥಿತಿಯ ಬಗ್ಗೆ ಧ್ಯಾನಿಸಿ ಮಾತನಾಡಿದಂತೆ ಅದು ಕೇಳಿಸುತ್ತದೆ. ಅನೇಕ ಕಡೆಗಳಲ್ಲಿ ಮಾಮ್‍ನ ಗದ್ಯ ಕಾವ್ಯದ ಸ್ವರೂಪವನ್ನು ಪಡೆಯುತ್ತದೆ. ಮಾಮ್‍ನ ವ್ಯಕ್ತಿತ್ವವೇ ಗದ್ಯ ಕಾವ್ಯದಂತಿದೆ. ಅವನು ಗದ್ಯ ಕಾವ್ಯವನ್ನೇ ಬದುಕಿದ್ದನ್ನು. ಮಾಮ್‍ನ ವಿಚಾರ ಮತ್ತು ಅನುಭವಗಳ ಹಿನ್ನೆಲೆಯಲ್ಲಿ ಈ ಲೇಖನಗಳು ಇಷ್ಟವಾಗುತ್ತವೆ; ಬದುಕಿನ ಬಗ್ಗೆ ಬರೆದದ್ದು ಹೊಸ ಬೆಳಕಿನ ಕಿಂಡಿಗಳನ್ನು ತೆರೆಯುವಷ್ಟು ಶಕ್ತವಾಗಿವೆ. ಲೇಖನಗಳಿಗೆ ಪೂರಕವಾಗಿ ಬಳಸಿಕೊಂಡಿರುವ ರೇಖಾಚಿತ್ರಗಳು ಆಕರ್ಷಕವಾಗಿವೆ.

‘ಬರೆಯುವ ಧಾವಂತದಲ್ಲಿ ಇರುವ ಒಂದು ಬದುಕನ್ನೇ ವಿಕಾರದ ದಡಕ್ಕೆ ತಂದು ನಿಲ್ಲಿಸಬಾರದು’ (ಪುಟ-07). ಈ ಎಚ್ಚರಿಕೆಯನ್ನು ಲೇಖಕರು ನೆನಪಿನಲ್ಲಿಟ್ಟುಕೊಂಡು ತಮ್ಮ ಬರವಣಿಗೆಯಲ್ಲಿ ಮುಂದುವರೆಯುವುದು ಅಗತ್ಯ. ಸಾಹಿತಿಗಳು ಸಮಾಜದ ಸ್ವತ್ತು. ಸಮಾಜದ ನಡುವೆ ಇದ್ದಾಗ ಮಾತ್ರ ಸಾಹಿತಿಗಳಿಗೆ ತಾವು ಕೃಷಿ ಮಾಡುವ ಕ್ಷೇತ್ರದಲ್ಲಿ ಸಾಧನೆಗೈಯಲು ಸಾಕಷ್ಟು ವಿಷಯಗಳು ಸಿಗುತ್ತವೆ. ಲೇಖಕನಿಗೆ ಸಾಮಾಜಿಕ ಬದ್ಧತೆ ಇರಬೇಕು; ಸಾಹಿತಿ ಯಾವಾಗಲೂ ಸಮಾಜ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಬರೆಯಬೇಕು.
‘ಮನುಷ್ಯ, ನನ್ನೆದುರು ಕುಳಿತ ಮನುಷ್ಯ ಒಂದು ಮಹಾನ್ ಗ್ರಂಥ, ಅವನನ್ನು ಓದಬೇಕು ನಾನು, ಶ್ರದ್ಧೆಯಿಂದ ಓದಿದೆನೂ ಕೂಡಾ’ (ಪುಟ-68). ಹೀಗೆ ಮನುಷ್ಯನ ಆತ್ಮವನ್ನು ಮತ್ತು ಅವನ ಆಳವನ್ನು ಮುಟ್ಟುವಂತೆ ಮಾಮ್ ಬರೆಯುತ್ತಾನೆ.
‘ಮನುಷ್ಯನ ಸಹಜತೆ ಎನ್ನುವುದು ಕ್ವಚಿತವಾಗಿ ಸಿಗುವ ದರ್ಶನ. ಅದು ಮಾದರಿಯೂ ಕೂಡ. ಇದನ್ನು ಆದರಿಸಿ ರೂಪಗೊಳ್ಳಬೇಕಾದುದು ನಮ್ಮ ಕೃತಿಯೊಳಗಿನ ಪಾತ್ರ. ಆದರೆ ಮನುಷ್ಯನ ಈ ಗುಣಗಳ ಕುರಿತಾಗಿಯೇ ದಿವ್ಯ ನಿರ್ಲಕ್ಷ ನಮ್ಮ ಲೇಖಕರಲ್ಲಿದೆ’ (ಪುಟ-72). ಈ ರೀತಿಯ ಮಾಮ್ ‘ಮನುಷ್ಯಧರ್ಮ’ (Religion of Man)ದಲ್ಲಿ ಮಾತ್ರ ವಿಶ್ವಾಸವಿರಿಸುತ್ತಾನೆ. ಕ್ರಿಯಾಶೀಲ ಹಾಗೂ ಪ್ರಾಮಾಣ ಕನಾದವನು ಮನುಷ್ಯ ಸಾಮಥ್ರ್ಯವನ್ನು ಬಳಸಿಕೊಂಡು ಬದುಕಬಲ್ಲ.
‘ನಿಸರ್ಗದ ಎದುರು ‘ಮನುಷ್ಯ’ ಒಂದು ದುರ್ಬಲ ‘ಗೊಂಬೆ’ ಅಷ್ಟೆ. ದೈವದ ಕೃಪೆಯಲ್ಲಿ ಬದುಕುತ್ತಿದ್ದಾನೆ. ನಿಸರ್ಗದ ನಿತ್ಯ ಸಾವಿರಾರು ನಿಯಮಗಳಿಂದ ನಿಯಂತ್ರಿಸಲ್ಪಟ್ಟಿದ್ದಾನೆ. ಸೋಲೆ ಅಂತಿಮ ಫಲಿತಾಂಶ ಎಂದು ಮೊದಲೇ ಗೊತ್ತಿದ್ದೂ ಕೂಡಾ ವಿಧಿ ಇಲ್ಲದೆ ಈ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಇಳಿದಿದ್ದಾನೆ. ಮನುಷ್ಯನಲ್ಲಿಯ ಮೂಲ ಪ್ರವೃತ್ತಿಗಳನ್ನೇ ದಾರಿಯಾಗಿಸಿಕೊಂಡು ನಿಸರ್ಗ ಆತನ ಬದುಕಿನೊಂದಿಗೆ ಆಟವಾಡುತ್ತಿದೆ’ (ಪುಟ-76). ಸುಮಾರು ಅರವತ್ತು ವರ್ಷಗಳ ಹಿಂದೆ ಮಾಮ್ ಬದುಕಿ, ನುಡಿದ ಮಾತುಗಳು ಯಾವಾಗಲೂ ಅನುರಣವಾಗುತ್ತಲೇ ಇವೆ.

‘ನೂರು ಎಕರೆ ಭೂಮಿಯ ಉಳುಮೆಯಿಂದ ಪಡೆಯುವ ಅನುಭವ ಸಾವಿರ ಪುಸ್ತಕಗಳಿಂದ ಸಂಗ್ರಹಿಸಿದ ಅನುಭವಕ್ಕಿಂತಲೂ ಶ್ರೇಷ್ಠವಾಗಿದೆ’ .

(ಪುಟ-94), ರಾಗಂ ಅವರ ಅನಾದ ಪುಸ್ತಕದಿಂದ

ಭೂಮಿಯನ್ನು ಉಳುಮೆ ಮಾಡುವ ರೈತರಿಂದ ಲೇಖಕರಾಗಿ ನಾವು ಕಲಿಯುವುದು ಬಹಳವಿದೆ.
‘ಸತ್ಯ ಹಾಗೂ ಕಲೆಯೊಂದಿಗೆ ಬರಹಗಾರ ವ್ಯವಹರಿಸಬೇಕಾದ ಪ್ರಶ್ನೆ ಹಿಂದೆಂದಿಗಿಂತಲೂ ಇಂದು ಗುರುತರವಾಗಿದೆ’ (ಪುಟ-106). ಸಮಾಜದಲ್ಲಿ ರಾಜಕಾರಣ ಮತ್ತು ಧರ್ಮಗುರುವಿಗಿಂತ ಒಬ್ಬ ಕವಿ, ಕಲಾವಿದ, ಲೇಖಕರ ಜವಾಬ್ದಾರಿ ಹಿಂದೆಂದಿಗಿಂತಲೂ ಇಂದು ಹೆಚ್ಚೆಂದು ಈ ಸಾಲು ಹೇಳುತ್ತದೆ. ಬಿಕ್ಕಟ್ಟು-ಸಂಘರ್ಷಗಳಿಲ್ಲದ ಕಾಲವೊಂದು ಇರಲಾರದು. ಆದರೆ ಇಂದು ಅವುಗಳೆಲ್ಲವನ್ನೂ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಮತ್ತು ದಲಿತರು ಹಿಂದೆಂದಿಗಿಂತಲೂ ಹೆಚ್ಚು ಅನುಭವಿಸುತ್ತಿದ್ದಾರೆ. ಎಲ್ಲ ಕಾಲದಲ್ಲಿಯೂ ನಿರ್ಲಿಪ್ತವಾಗಿ ತಮ್ಮ ಪಾಡಿಗೆ ತಾವು ಬರೆದುಕೊಂಡಿರುವ ಸಾಹಿತಿಗಳು ಇದ್ದೇ ಇರುತ್ತಾರೆ. ಆದರೆ ನಮ್ಮ ಕಾಲದಲ್ಲಿ ಅಂಥವರ ಸಂಖ್ಯೆಯೇ ಹೆಚ್ಚಾಗಿರುವುದು ಆತಂಕಕಾರಿ ಸಂಗತಿ. ಲೇಖಕ ಕೇವಲ ನಾಲ್ಕು ಗೋಡೆಗಳ ಮಧ್ಯೆದಲ್ಲಿ ಕುಳಿತು ಬರೆಯುವುದನ್ನು ಮಾತ್ರ ಕಲಿಯದೆ, ಗಟ್ಟಿಯಾಗಿ ಮಾತನಾಡುವುದನ್ನು ಕಲಿಯಬೇಕು ಮತ್ತು ಬೀದಿಗೆ ಬರಬೇಕು. ಸಾಹಿತಿಯ ಬರಹ ಕಾಲ ಮತ್ತು ದೇಶಕ್ಕೆ ಸವಾಲಾಗಿ ನಿಲ್ಲಬೇಕು.

‘ಬಹಳಷ್ಟು ರಾಷ್ಟ್ರಗಳನ್ನು ಆಳುತ್ತಿರುವ ರಾಜಕಾರಣ ಗಳಲ್ಲಿ ತಮ್ಮ ತಮ್ಮ ಬೌದ್ಧಿಕ ಅಪ್ರಬುದ್ಧತೆಯನ್ನು ಮೆರೆಯುವ ರಾಜಕಾರಣಿಗಳೇ ಹೆಚ್ಚಾಗಿರುವವರೇ ವಿನಃ ಪ್ರಬುಧ್ಧತೆಯನ್ನಲ್ಲ. ಇವರಲ್ಲಿ ಬಹುಪಾಲರು ಮಾನಸಿಕ ಅಸ್ವಸ್ಥರು, ಸಾಮಾಜಿಕ ದೃಷ್ಟಿಕೋನದ ಸ್ಪಷ್ಟತೆ ಇಲ್ಲದವರು, ಬದುಕಿನ ಸಾಮಾನ್ಯ ಜ್ಞಾನ ಕೂಡ ಇಲ್ಲದವರು, ಮಾನಸಿಕವಾಗಿ ಶೈಶವಾವಸ್ಥೆಯವರು, ಪ್ರಬುದ್ಧ ಕಲ್ಪನಾಶಕ್ತಿ ಇಲ್ಲದ ದುರ್ಬಲರು, ಎಲ್ಲ ಇಂಥವರೆ ಸೇರಿಕೊಂಡಿದ್ದು, ಇವರೆಲ್ಲ ರಾಜಕೀಯ ಸ್ಥಾನಮಾನಗಳನ್ನು ಪಡೆದದ್ದು ಕೇವಲ ತಮ್ಮ ಭಾಷಣಗಳ ಮೂಲಕ ಎಂದೂ ಕೂಡಾ ಒಂದೊಮ್ಮೆ ನನಗೆ ಅನ್ನಿಸಿದ್ದುಂಟು’ (ಪುಟ-143). ವರ್ತಮಾನದ ಜಗತ್ತಿನ ಪ್ರಜಾಪ್ರಭುತ್ವ ಮತ್ತು ರಾಜಕಾರಣ ಗಳ ನಡಿಗೆಯನ್ನು ಗಮನಿಸಿದಾಗ ಮಾಮ್ ಹೇಳುವ ಈ ಮಾತುಗಳ ಪ್ರಸ್ತುತೆಯನ್ನು ಯಾರೂ ಅಲ್ಲಗಳೆಯಲಾಗದು. ಧರ್ಮ ಮತ್ತು ರಾಜಕೀಯದ ನಡುವಿನ ವ್ಯತ್ಯಾಸವನ್ನು ಮರೆತ ಕಾಲಘಟ್ಟವಿದು. ಈ ಎರಡರ ಅಪವಿತ್ರ ಸಂಯೋಗದ ಫಲವನ್ನು ವಿವಿಧ ರೂಪದಲ್ಲಿ ನಾವು ಕಾಣುತ್ತಲೇ ಇದ್ದೇವೆ. ಇಂದು ದೇಶವನ್ನು ಸುಳ್ಳು, ಭ್ರಮೆ ಹಾಗೂ ದ್ವೇಷಗಳು ಆಳ್ವಿಕೆ ಮಾಡುತ್ತಿವೆ. ಸುಳ್ಳಿನ ಭಾಷಣ ಮಾಡುವ ರಾಜಕಾರಣ ಗಳು ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಂತೆ ಕಾಣ ಸುತ್ತಿದ್ದಾರೆ. ಮಾತಿನಲ್ಲೇ ಮನೆ ಕಟ್ಟುವ ರಾಜಕಾರಣ ದುಡ್ಡು ಸುರಿದು ದುಡ್ಡು ಮಾಡುವ ದಂಧೆಯಾಗಿದೆ. ಹೀಗಾಗಿ, ಇಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ.

‘ಬರಹ ಎನ್ನುವುದು ಅರಿವಿನ ದಾರಿ, ಅರಿವೇ ಬದುಕಿಗೆ ದಾರಿ’ (ಪುಟ-149) ಎಂದು ಬರೆವ ಮಾಮ್‍ನನ್ನು ತಮ್ಮದೇ ಶೈಲಿಯಲ್ಲಿ ಅವನ ಶೈಲಿ ಗೊತ್ತಾಗುವಂತೆ, ಅವನ ಬರಹದ ಒಳದನಿ ಮತ್ತು ಬನಿ ನಮ್ಮ ಅರಿವಿಗೆ ಬರುವಂತೆ ಹಾಗೂ ಲಯ ಕೇಳುವಂತೆ ಸಮರ್ಥವಾಗಿ ಅನುವಾದಿಸಿದ್ದಾರೆ ರಾಜಶೇಖರ ಮಠಪತಿ. ಈ ಅನುವಾದವವನ್ನು ಓದುತ್ತಿದ್ದಂತೆ ಬಹುಮುಖ್ಯ ಲೇಖಕನೊಬ್ಬನ ಮನಸ್ಸು ನಮ್ಮನ್ನು ಮುಟ್ಟುತ್ತ ಹೋಗುತ್ತದೆ. ಇದನ್ನು ಅನುವಾದದ ಯಶಸ್ಸು ಎಂದು ಸಹಜವಾಗಿ ಹೇಳಬಹುದು.
ಸಾಮರ್‍ಸೆಟ್ ಮಾಮ್‍ನ ಅನುಭವ ಮತ್ತು ಆಲೋಚನೆಗಳ ಹರವು ತುಂಬ ದೊಡ್ಡದು. ಈ ಕೃತಿಯನ್ನು ಓದುತ್ತಿರುವಾಗ ಉದ್ದಕ್ಕೂ ನಾನು ಮಾಮ್‍ನ ಆಸಕ್ತಿಗಳ ವ್ಯಾಪ್ತಿಯನ್ನು ಕಂಡು ಆಶ್ಚರ್ಯಗೊಂಡಿದ್ದೇನೆ. ಸಾಹಿತ್ಯ-ಸಂಸ್ಕೃತಿಯ ಮೂಲಕ ಪ್ರೀತಿ, ವಿಶ್ವಾಸ, ಸತ್ಯ, ಘನತೆ, ವಿನಮ್ರತೆ, ಕರ್ತವ್ಯನಿಷ್ಠೆ, ಸ್ವಾಭಿಮಾನ, ಕನಸು, ಪ್ರಾಮಾಣ ಕತೆ, ಆತ್ಮಗೌರವ ಮುಂತಾದ ಸದ್ಗುಣಗಳನ್ನು ಎತ್ತಿ ಹಿಡಿಯಲು ಆತ ಆಂತರಿಕವಾಗಿ ಆಸಕ್ತನಾಗಿದ್ದನೆಂಬುದು ಸುಸ್ಪಷ್ಟ. ಮನುಷ್ಯ ಮನುಷ್ಯನನ್ನು ಗುರುತಿಸುವ ಮತ್ತು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಬೇಕಾದ ಅಗತ್ಯವನ್ನು ಆತ ಚೆನ್ನಾಗಿ ಅರಿತವನಾಗಿದ್ದನು. ನಿಸರ್ಗ ಮತ್ತು ಮನುಷ್ಯನ ಚಲನಶೀಲ, ಪರಿವರ್ತನಶೀಲ ಗುಣ ಹಾಗೂ ಜೀವಂತಿಕೆಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಬಲ್ಲ ಸಾಮರ್ಥ್ಯ ಆತನಲ್ಲಿತ್ತು. ಮಾಮ್ ದೇಶ, ಕಾಲ, ಭಾಷೆ, ನೆಲ, ಮತ, ನಂಬಿಕೆ, ಆಚಾರ, ವಿಚಾರ, ಗೆಲುವು, ಸೋಲು ಮತ್ತು ಸಾಧನೆಗಳ ಆಚೆ ಓರ್ವ ಲೇಖಕನಾಗಿ ಬಿಚ್ಚಿಟ್ಟ ಬದುಕು ಬಹಳ ದೊಡ್ಡದು. ಅತ್ಯಂತ ಪ್ರಜ್ಞಾಪೂರ್ವಕವಾಗಿ ಅವನು ಕ್ರಮಿಸಿದ ಬದುಕಿನ ದಾರಿ ಅಪಾರ ನೆನಪು, ಪರಿಶ್ರಮ, ಹೋರಾಟ ಹಾಗೂ ಪ್ರಯೋಗಶೀಲತೆಯಿಂದ ವಿಸ್ತಾರವಾದುದು.

ಸಾಮರ್‍ಸೆಟ್ ಮಾಮ್‍ನ ಚಿಂತನೆಗಳು ಪ್ರತಿ ಓದಿಗೂ ಬೇರೆ ಬೇರೆ ಅರ್ಥಗಳನ್ನು ಬಿಟ್ಟುಕೊಡುವ ಶಕ್ತಿ ಹೊಂದಿವೆ. ಖಚಿತವಾದ ಮಾತು, ಸ್ಪಷ್ಟ ನಿಲುವು ಇಲ್ಲಿನ ಎಲ್ಲಾ ಲೇಖನಗಳ ಇನ್ನೊಂದು ಗುಣ. ವ್ಯಂಗ್ಯ, ವಿಡಂಬನೆ ಮತ್ತು ನೇರ ನುಡಿಗಳು ಓದುಗರನ್ನು ಬಹುಕಾಲ ಆಕರ್ಷಿಸುತ್ತವೆ. ಯಾವ ಪುಟವನ್ನು ತೆರೆದು ಓದಿದರೂ ಸಂತೋಷ ಕೊಡುವ, ಸಾರ್ಥಕವೆನಿಸುವ ಬರಹ ಇಲ್ಲಿದೆ. ಇಂಥ ಸಂಕೀರ್ಣ ಸಂಗತಿಗಳನ್ನು ಅನುವಾದಕ ಡಾ. ರಾಗಂ ಸರಳವಾಗಿ ಹಾಗೂ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ; ಅನುವಾದವನ್ನು ಸಣ್ಣ ಸಣ್ಣ ವಾಕ್ಯಗಳನ್ನಾಗಿ ಮಾಡಿರುವುದರಿಂದ ಓದಿನ ಆಯಾಸ ಉಂಟಾಗುವುದಿಲ್ಲ. ಇದೊಂದು ಅನುವಾದದಂತಿರದೆ ಮೂಲ ಲೇಖಕರ ನೇರ ಮಾತುಕತೆಯಂತಿದೆ. ಇದು ಮತ್ತೆ ಮತ್ತೆ ಆಕರ್ಷಿಸುವ, ಪ್ರಬುದ್ಧ ಚಿಂತನೆಗೆ ಸೆಳೆಯುವ ಕೃತಿ. ಆದ್ದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇದೊಂದು ಮಹತ್ವದ ಕೃತಿ. ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಾಹಿತ್ಯಾಸಕ್ತರು ಓದಲೇಬೇಕಾದ ಮಹತ್ವದ ಕೃತಿ ‘ಅನಾದ’.