- ನೀಲಿ ಅಗಾಧತೆ… - ಏಪ್ರಿಲ್ 11, 2021
- ಸಜೀವ ಹಿನ್ನೆಲೆಯೊಂದು… - ಏಪ್ರಿಲ್ 4, 2021
- ದೀಪಕ್ ಬಗೈರ್ ಕೈಸೇ, ಪರವಾನೆ ಜಲ್ ರಹೀ ಹೈ… - ಮಾರ್ಚ್ 21, 2021
ಮರಳು ದಿಬ್ಬದ ಮೇಲೆ ಕೂತು ನೆಳಲು ಬೆಳಕಿನ ವಿಚಿತ್ರ ವಿನ್ಯಾಸಗಳನ್ನು ಕಡಲಿನ ಘೋಷದ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಮನದೊಳಗೆ ಭಾವಿಸುತ್ತಿದ್ದ ಗಳಿಗೆಗಳು. ಸ್ವಿಮಿಂಗ್ ಸೂಟ್ ನಲ್ಲಿದ್ದಾಕೆ , ಗಾಗಲ್ ಮತ್ತು ಕ್ಯಾಪ್ ತೆಗೆಯುತ್ತಾ ಬಂದವಳೇ ಪಕ್ಕದಲ್ಲಿ ಕೂತಳು.
ಕಡಲ ದಂಡೆಯ ಈ ಜಾಗ, ಜನರು ಸಾಮಾನ್ಯವಾಗಿ ಸಮುದ್ರದಲ್ಲಿ ಆಡಲು ಅಥವಾ ವಾಕ್ ಬರುವ ಸ್ಥಳವಲ್ಲ. ಶಹರದಿಂದ ಐವತ್ತು ಕಿ.ಮೀದೂರ. ಪ್ರಶಾಂತತೆ, ವಿಶಿಷ್ಟ ಏಕಾಂತತೆ ಸ್ಥಳವಾಗಿ ಮಾರ್ಪಟ್ಟಂತೆ.
ನಾನು ಆಕೆಯನ್ನು ನೋಡುವ ಅಥವಾ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ.
ಆಕೆ ; ಒಬ್ಬರೇ ಕೂತಿದ್ದೀರಾ..?
ನೋಟ ಕಡಲಾಳದೊಗಿಂದ ಹೊರ ತೆಗೆಯದೇ,
ನಾನು; ಗೆಳತಿಯರು ಇಲ್ಲೇ ಹೋಗಿದ್ದಾರೆ..
ಆಕೆಯನ್ನೇ ದಿಟ್ಟಿಸುತ್ತಾ ಕೇಳಿದೆ; ಇಲ್ಲಿ ಒಬ್ಬರೇ ಸ್ವಿಮ್ ಮಾಡುತ್ತಿದ್ದೀರಾ, ಭಯವೆನಿಸದಾ…
ಆಕೆ; ದೊಡ್ಡದೊಂದು ನಗೆ ನಕ್ಕಳು, ಇಲ್ಲೆ ಪಕ್ಕದ ಊರು ನನ್ನದು. ನನ್ನ ಆಪ್ತ ಸ್ಥಳವಿದು. ಓಪನ್ ವಾಟರ್ ಸ್ವಿಮ್ಮರ್ ನಾನು ಎಂದವಳೇ ಮೌನಿಯಾದಳು…ಒಂದೆರಡು ನಿಮಿಷ ಕಳೆದು ಹೌದು
‘ ಕಡಲು…’ ಏನೆನಿಸುತ್ತದೆ ಎಂದಳು..
ನಾನು; ಜೀವ ತುಂಬುವ ಮಾರ್ಗ, ನಿಮಗೆ…?
ಆಕೆ; ಬದುಕು, ನಾನು ಸಮುದ್ರವನ್ನು ಎಷ್ಟು ದ್ವೇಷಿಸುತ್ತೇನೋ ಅಷ್ಟೇ ಮೋಹ ಕೂಡ. ನನ್ನ ಬದುಕು ಅಸ್ತಿತ್ವ ಇದರಲ್ಲೇ
ಹೌದು, ಇಷ್ಟೊಂದು ಏಕಾಂತ, ಪ್ರಶಾಂತತೆ, ಭಯವೆನಿಸದಾ…
ನಾನು; ರಸ್ತೆಯಲ್ಲಿ ಕಾರ್ ನಿಂತಿದೆ, ಡ್ರೈವರ್ ಇದ್ದಾನೆ. ಆದರೂ ಮನುಷ್ಯರ ವರ್ತನೆಗಳು ಜರ್ಜರಗೊಳಿಸುವಷ್ಟು ಭಯ ಇನ್ನೆಲ್ಲಿ ಸಾಧ್ಯ.?
ಆಕೆ ಮುಗುಳ್ನಕ್ಕಿದ್ದು ಅರಿವಿಗೆ ನಿಲುಕಿತು.
ಆಕೆ; ಹೌದು, am happy, am sportive, am positive ಎಂದು ಬರೆದುಕೊಳ್ಳುವವರ ಏಕಾಂತ ಒಮ್ಮೆ ನೋಡಬೇಕು.
ನಾನು; ಕ್ರೂರ ವಾಸ್ತವ, ದಿನನಿತ್ಯದ ಜಂಜಡಗಳಲ್ಲಿ ಎಲ್ಲವನ್ನೂ ಹುದುಗಿಸಿಕೊಂಡು ಮುಖವಾಡ ತೊಡುವ ಮಾರ್ಗ.
ಆಕೆ; ಹೌದು, ಆದರೆ ಏಕಾಂತದಲ್ಲಿ ನಮ್ಮೊಟ್ಟಿಗೆ ಇರಬೇಕಾದವರು ನಾವು ಮಾತ್ರವೇ.
ನಾನು; ಕಾರಣ ಬೇರೆ ಇದ್ದರೂ, ಕಡಲು ಯಾಕೋ ಇಬ್ಬರಿಗೂ ಚೈತನ್ಯದ ಮಾರ್ಗ ಎನಿಸುತ್ತಿದೆ.
ಆಕೆ; ಇಂಗ್ಲೀಷ್ ಕಡಲ್ಗಾಲುವೆ ಕ್ರಮಿಸುವಾಗ, 10 ಗಂಟೆ ಈಜಿದ ನಂತರ ಪ್ರವಾಹ ಆರಂಭವಾಯಿತು. ದೈತ್ಯ ಅಲೆಗಳು, ಕಾಣದ ದಿಕ್ಕು, ಮಬ್ಬುಗಟ್ಟಿದ ಆಗಸ, ರಾಚಿ ಬಿಸಾಕುವ ರಕ್ಕಸ ಅಲೆಗಳೊಂದಿಗಿನ ಸೆಣಸಾಟ. ಪಕ್ಕದಲ್ಲೇ ಸಾಗುವ ವೇಲ್, ಶಾರ್ಕ್ ನಂತ ರಕ್ಕಸ ಮೀನುಗಳು… ಸುತ್ತಲಿದ್ದ ಈ ಎಲ್ಲಾ ವಾತಾವರಣಕ್ಕಿಂತ ಕ್ರೂರ ಎನಿಸಿದ್ದು ಮನದೊಳಗಿನ ರಾಕ್ಷಸರ ದಾಳಿ….
ತರಬೇತಿ ಕಡಿಮೆಯಾಯಿತಾ, ಪ್ರವಾಹ ಕಡಿಮೆಯಾಗದೇ ಹೋದರೆ, ಈ ಮ್ಯಾರಥಾನ್ ನ ಉಳಿದ ಸ್ಪರ್ದಿಗಳೆಲ್ಲಿ ಹೋದರೋ ಹೀಗೆ…
ಹೊರಗೆ ಹಾಗಲ್ಲ, ನಮ್ಮೊಳಗಿನ ಇಂಥ ರಾಕ್ಷಸರನ್ನ ದಿನನಿತ್ಯದ ಜಂಜಡದೊಳಗೆ, ಜನರೊಂದಿಗೆ ಬೆರೆಯುವುದು, ಜಾಲತಾಣ, ಟಿ ವಿ ಇತ್ಯಾದಿಗಳಲ್ಲಿ ಎಲ್ಲರೂ ಅವಿಸಿಕೊಂಡೇ ಓಡಾಡುತ್ತೇವೆ. ಆದರೆ ಪ್ರವಾಹದ ಒಂದುವರೆ ಗಂಟೆ ನೀಲಿ ಅಗಾಧತೆಯ ನೀಲಿ ಅಬ್ಬರದ ನಡುವಿನ ಒಳಗೆ ಮತ್ತು ಹೊರಗಿನ ಈ ಸೆಣಸಾಟ – ಸಂಘರ್ಷ “ನನ್ನೊಳಗಿನ ನನ್ನನ್ನು ಭೇಟಿ ಮಾಡಿಸಿತ್ತು…” ಹಿಂದೆ ಇದ್ದ ನನಗಿಂತ ನನ್ನನ್ನು ಸರಿಪಡಿಸಿಕೊಂಡು ನಡೆಯುವುದು ಮತ್ತು ನನ್ನದೇ best possible version ಆಗುತ್ತಾ ಸಾಗುವುದು , ನನ್ನ ಪ್ರತೀ ಸೆಣಸಾಟ ನನ್ನೊಂದಿಗೆ ಎನ್ನುವುದು ಸ್ಪುಟವಾಯ್ತು.
ಜೊತೆಯಲ್ಲೇ ಸಾಗುವ ರಕ್ಕಸ ಮೀನುಗಳು, ಜೀವಂತ ಹಿಂದಿರುಗುತ್ತೇನೋ ಇಲ್ಲವೋ ಎನಿಸುವ ಕ್ಷುಬ್ದ ವಾತಾವರಣ ಜೊತೆಗೆ ದಾಳಿಯಿಕ್ಕುವ ಒಳಗಿನ ರಕ್ಕಸ ಆಲೋಚನೆಗಳು ಇವೆಲ್ಲವನ್ನೂ ಬಹುವಾಗಿ ದ್ವೇಷಿಸುತ್ತೇನೆ. ಆದರೆ ಇದೆಲ್ಲದರ ಮಧ್ಯೆ ನೀಲಿ ಅಗಾಧತೆಯ ನಡುವೆ ಇದ್ದಾಗ ಜೀವಂತವಾಗಿರುವ ಭಾವವನ್ನು ಬಹುವಾಗಿ ಮೋಹಿಸುತ್ತೇನೆ.
ಇದೇ ನನ್ನ ” ಬದುಕು…”
ಇಬ್ಬರ ಮಧ್ಯೆ ವಿಶಿಷ್ಟ ಅಲೆಗಳ ಸದ್ದಿನ ವಿನಹ ಇನ್ನೇನೂ ಇರಲಿಲ್ಲ. ಇಬ್ಬರೂ ಅಲೆಗಳನ್ನೇ ದಿಟ್ಟಿಸುತ್ತಿದ್ದೆವು.
ಕಡಲು ನನ್ನನ್ನು ಸಮಾಧಾನಿಸಲು ಅವಳನ್ನು ಕಳುಹಿಸಿರಬೇಕೆನಿಸಿತು.
ಬ್ಯಾಗ್ ನಲ್ಲಿದ್ದ ಜ್ಯೂಸ್ ಬಾಟಲ್ ಮತ್ತು ಚಿಪ್ಸ ಆಕೆಗೆ ನೀಡಿದೆ. ” M” ಆಕಾರದಲ್ಲಿ ಗೀಚಿಕೊಂಡಿದ್ದ ಶಂಖುವೊಂದನ್ನು ಆಕೆ ನನ್ನೆಡೆಗೆ ಚಾಚಿದಳು.
ಈ ಕ್ಷಣ ಕಡಲಿನ ವಿಶಾಲತೆಯೆದುರು ಮಾತ್ರ ಸಾಧ್ಯ ಎನಿಸಿತು…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್