- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ಒಂದು ಮಾತು ಹೇಳು
ನೆನ್ನೆ ರಾತ್ರಿ ಭಗವಂತ ಬಂದು ನನ್ನ ಮಂಚದ ಮೇಲೆ ಕೂತು
ದೀನನಾಗಿ ನನ್ನಕಡೆ ನೋಡಿ ನೋಟ ತಪ್ಪಿಸಿದ
ಏನಾದರೂ ಹೇಳಿದೆನಾ ? ನಾನೇನಾದರೂ ಹೇಳಿದೆನಾ ?
ಹಸಿವೆ ಎನ್ನುತ್ತ ಆಶೆಗಳ ಹೊತ್ತು ಎಲ್ಲದರಲ್ಲೂ ಸೋತು
ಆತ್ಮಹತ್ಯೆ ಮಾಡಿಕೊಂಡ ಹುಡುಗನ ಬಗ್ಗೆ ಕೇಳಿದೆನಾ ?
ಬೀದಿಗಿಟ್ಟು ಮಾನ, ದಣಿದ ಜೀವನ
ಸಾಗಿಸುತ್ತಾ ಸಾಗಿಸುತ್ತಾ ಸಂಜೆಯಲ್ಲಿ ನೇಣಿಗೆ ಶರಣಾದ
ವೇಶ್ಯೆಯ ಬಗ್ಗೆ ಹೇಳಿದೆನಾ ?
ಚೀನದ ಜೊತೆ ಯುದ್ಧದಲ್ಲಿ ಮಡಿದ ಮಗನ ಸುದ್ದಿ ಕೇಳಿ
ಕತ್ತಲಲ್ಲಿ ಹೊಳೆಗೆ ಹಾರಿದ ಮುದುಕಿಯ ಹಸಿ ಎದೆಯನ್ನು
ನಾನು ತೋರಿಸಿದೆನಾ ?
ಕಾಂಗೋನಲ್ಲಿ, ಕ್ಯೂಬಾನಲ್ಲಿ, ಸೈಪ್ರಸ್ ನಲ್ಲಿ, ಲಾವೋಸ್ ನಲ್ಲಿ
ಸುಟ್ಟು ಕಮಟು ನಾರುವ ಸಮಯದ ಕತೆ, ಮನಸ್ಸಿನ ವ್ಯಥೆ
ನಾನು ವಿವರಿಸಿದೆನಾ ?
ಸತ್ಯ ಹೇಳು ಸತ್ಯ ಹೇಳು
ನಿನ್ನ ಬಗ್ಗೆ ನನ್ನ ಬಗ್ಗೆ
ಸಮಸ್ತ ಸೃಷ್ಟಿಯಲ್ಲಿಯ ಹುಳುಕಿನ ಬಗ್ಗೆ
ನೀರವ ಸುಂದರ ಹೃದಯ ಪಾತ್ರೆಯಲ್ಲಿ
ತುಂಬಿದ ಹಾಲಾಹಲದ ಬಗ್ಗೆ
ಸತ್ಯ ಹೇಳೆಂದು ಕೇಳಿದೆನಾ ? ನಿಂದಿಸಿದೆನಾ? ಒತ್ತಾಯಿಸಿದೆನಾ?
ನನಗೆ ಗೊತ್ತು ನನಗೆ ಗೊತ್ತು
ಸರಪಳಿಯಲ್ಲಿಯ ಸುಳಿವು
ನನಗೆ ಗೊತ್ತು ನನಗೆ ಗೊತ್ತು
ಭಗವಂತನ ಕೆನ್ನೆಯಮೇಲೆ ದೀನವಾಗಿ ಜಾರುವ ಕಂಬನಿಯನ್ನು
ದೀಪಕಾಂತಿಯಲ್ಲಿ ನೋಡಿ ಸಟ್ಟನೆ ಮರುಕದಿಂದ ಎದ್ದು
ಅಪ್ಪಿಕೊಂಡು, ಸಂತೈಸಿ
ವಿದಾಯ ಹೇಳುತ್ತ ಬೀದಿಯ ಕೊನೆವರೆಗೆ ಕಳಿಸಿ ಬಂದೆ
ನನಗೆ ಗೊತ್ತು ನನಗೆ ಗೊತ್ತು
ಮಾನವನೇ ದಾನವನಾಗಿ ಅವನತಿಯತ್ತ ಸಾಗಿದಾಗ
ಪಾಪ ಮನೆಗೆ ಹಿರಿಯವ- ಹೆತ್ತ ಹೊಟ್ಟೆ – ಮತ್ತೇನು ಮಾಡಿಯಾನು ಅಂತ!
- ‘ಸುಧೆ ಸುರಿದ ರಾತ್ರಿ’ ಕವಿತಾ ಸಂಕಲನದಿಂದ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ