- ನೋವಿನಲೆ - ಮೇ 28, 2022
ನೋವುಗಳ ಕುಣಿಕೆಯಲಿ ಸಿಲುಕಿಹೆನು ನಾನು
ನಿಲ್ಲಲು ಸಾಧ್ಯವಿಲ್ಲ ಕೂತರೆ ಉಳಿವಿಲ್ಲ
ಅಲುಗಾಡಿದರೆ ಪ್ರಾಣ ಹೋಗುವುದು
ಕಣ್ಣಂಚಲಿ ತುಂಬಿಹುದು ಕಣ್ಣೀರು
ಮನವು ಬಯಸಿದೆ ನಿರಾಳ ಮೌನ…
ಕಣ್ಣೀರು ಸಹ ಕೇಳಿದೆ ಕಾರಣ
ಏನ ಹೇಳಲಿ ನಾ?
ಎಲ್ಲವನು ಹೇಳುತ
ಬಿಗಿದಪ್ಪಲಿ ಯಾರನಾ?
ನೋವಿನಲೆ ಬಡಿದು
ದಂಗಾಗಿ ನಿಂತಿಹೆನು
ಬಿಕ್ಕಿ ಬಿಕ್ಕಿ ಅಳುತಿದೆ ಮನ
ಸುಡುತಿದೆ ಮನ ನೋವಿನ ಬೇಗೆಯಲಿ
ಉರಿದು ಹೋಗುತಿದೆ ಕನಸು
ನಾ ಆರಿಸುವ ಮುನ್ನ
ಎತ್ತ ನೋಡಿದರತ್ತ ಕತ್ತಲೆಯ ಕಗ್ಗಂಟು
ಬಿಡಿಸಲಿ ಹೇಗೆ ನಾ?
ಒಬ್ಬಂಟಿ ನಾನಿಲ್ಲಿ
ಅಳುಕಿಲ್ಲದೆ ನಡೆವೆನೆಂದರೆ
ಉಳುಕು ಹಿಂಬಾಲಿಸಿದೆ ನನ್ನೇ
ಕನಸಿಲ್ಲದೆ ಜೀವಿಸುವೆನೆಂದರೆ
ನಾನಿಲ್ಲದೆ ಸಾಧ್ಯವೇ? ಎಂದಿದೆ
ಕಾರ್ಮೋಡ ಸರಿದಿದೆ ಎನ್ನುವಷ್ಟರಲ್ಲೆ
ಮತ್ತೆ ಕವಿಯಲು ಕತ್ತಲೆ
ಶಿಥಿಲಗೊಳುತಿದೆ ಮನದ ಅರಮನೆ
ಸರಿ ಪಡಿಸುವ ಪರಿ ನಾನರಿಯೆ
ಹೇ…ನೋವೆ ದಯಮಾಡಿ ಕೇಳುವೆನು
ನೀ ಮತ್ತೆ ಬಾರದಿರು ನನ್ನ ಉಸಿರೆಡೆಗೆ
ನಾ ನಿನಗೆ ಅರ್ಪಿಸುವೆ ಕೃತಜ್ಞತೆಯನು
ನಿನ್ನ ಪಾದದಡಿಗೆ…
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..