- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ )
ಈ ಪ್ರಾಕಾರದಲ್ಲಿ ಎರಡು ಮುಖ್ಯ ಭಾಗಗಳಿವೆ. ಒಂದು ರಘುನಾಥ ದೇವರ ಮುಖ್ಯಸ್ಥಾನ ಮತ್ತೊಂದು ದೊಡ್ಡ ಕಲ್ಯಾಣಮಂಟಪ. ಎರಡೂ ಕಟ್ಟಡಗಳ ಮುಂಭಾಗದಲ್ಲಿ ವಿಜಯನಗರದ ಪ್ರಸಿದ್ಧ ಮಾದರಿ ಸಿಂಹಸ್ತಂಭಗಳಿವೆ, ಹಿಂದಿನ ಭಾಗದಲ್ಲಿ ಹಲವು ಸ್ತಂಭಗಳು. ಪ್ರತೀ ಸ್ತಂಭದ ನಾಲ್ಕೂ ಮುಖಗಳಲ್ಲೂ ಭಗವಾನ ವಿಷ್ಣುವಿನ ವಿವಿಧ ಅವತಾರಗಳ ಕಲಾಕೃತಿಗಳನ್ನು, ಲಕ್ಷ್ಮಣ ಹಾಗೂ ಆಂಜನೇಯರ ಕಲಾಕೃತಿಗಳನ್ನ ಅಳವಡಿಸಲಾಗಿದೆ. ಪುರಾಣೇತಿಹಾಸ ಪ್ರಿಯರಿಗೆ ಒಂದೊಂದು ಕಂಬವನ್ನು ನೋಡಲು ಕನಿಷ್ಠ ಐದು ನಿಮಿಷವಾದರೂ ಬೇಕು. ಈ ದೇವಾಲಯದಲ್ಲಿ ಸಾಮಾನ್ಯವಾಗಿ ಕರ್ನಾಟಕದಲ್ಲಿ ಎಲ್ಲೂ ಕಾಣಸಿಗದ ಇನ್ನೊಂದು ವಿಶೇಷವಿದೆ. ಇಲ್ಲಿ ಪ್ರತಿದಿನವೂ ಸಂತ ತುಳಸಿದಾಸ ಕೃತ ‘ರಾಮಚರಿತಮಾನಸ’ವನ್ನು ಸಾಮವಾಗಿ ಭಜಿಸುವ ತಂಡವೊಂದಿದೆ. ರಾಮಪದವನ್ನು ಕೇಳುತ್ತ ದೇವಸ್ಥಾನದ ಪರ್ಯಟನೆಗೈಯ್ಯುವುದೊಂದು ಅನುಪಮವಾದ ಅನುಭವ. ಇಲ್ಲಿ ರಾಮಲಕ್ಷ್ಮಣರು ಸೀತಾಶೋಧ ನಡೆಸುವ ಕಾರ್ಯಮಧ್ಯೆ ವರ್ಷಾಋತುವಿನಲ್ಲಿ ವಿಶ್ರಾಂತಿ ಪಡೆದರೆಂದು ಐತಿಹ್ಯವಿದೆ.
ವಿಜಯನಗರದ ಸಂಕೇತವಾದ ದೇವಸ್ಥಾನದ ಸುತ್ತಲೂ ಸರಾಗವಾಗಿ ಹತ್ತಲಸದಳವಾದ ಎತ್ತರವಾದ ತಡೆಗೋಡೆಯಿದೆ, ಗೋಡೆಯು ಸಮುದ್ರದಂತೆ ಬಿಂಬಿತವಾಗುವಂತೆ ಅದರ ಮೇಲೆ ಜಲಚರಗಳ ವಿವಿಧ ಆಕೃತಿಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಪ್ರಾಕಾರದ ಪಶ್ಚಿಮ ಭಾಗದಲ್ಲಿ ತಡೆಗೋಡೆಯ ಹೊರಗೆ ಒಂದು ಶಿವಾಲಯವಿದೆ.
ಚಿತ್ರ ಕೃಪೆ : ಆರ್ಯ
ಶಿವಾಲಯದ ಹೊರಗಡೆ ಬೃಹತ್ತಾದ ಬಂಡೆಯ ಮೇಲೆ ಕೆಲವು ಶಿವಲಿಂಗಗಳನ್ನು, ಪ್ರತಿ ಶಿವಲಿಂಗದ ಮುಂದೆ ನಂದಿಯನ್ನು ಸಾಲಾಗಿ ಕೆತ್ತಿದ್ದು ವಿಶೇಷವಾಗಿ ಗಮನ ಸೆಳೆಯುತ್ತದೆ. ವಿಜಯನಗರವೆಂದರೆ ಕೇವಲ ವೈಷ್ಣವ-ಶೈವ ಸಂಪ್ರದಾಯದ ಸಮಾಗಮವಾಗದೆ ಸರ್ವಧರ್ಮಸಮಾಗಮದ ಸಂಕೇತವಾಗಿದೆ. ಎಂತಲೇ ಅದಕ್ಕೆ ಸಾಕ್ಷಿಯಾಗಿ ವಿಜಯನಗರ ಸ್ಥಾಪಕರಾದ ಋಷಿ ವಿದ್ಯಾರಣ್ಯರು ಸರ್ವಧರ್ಮಸಂಗ್ರಹವೆಂಬ ಅಭೂತಪೂರ್ವ ಸಂಸ್ಕೃತ ಗ್ರಂಥವೊಂದನ್ನು ರಚಿಸಿ ನಮಗೆ ಕರುಣಿಸಿದ್ದಾರೆ.
ನಂತರ ವಿರೂಪಾಕ್ಷ ದೇವಸ್ಥಾನದೆಡೆಗೆ ಹೋಗುತ್ತಿದ್ದೆ, ದಾರಿಯಲ್ಲಿ ಎಡಪಾರ್ಶ್ವದಲ್ಲಿ “ಭೀಮನ ಮಹಾದ್ವಾರ” ಎಂಬ ಫಲಕವು ಗಮನ ಸೆಳೆದ ಕ್ಷಣವೇ ಅತ್ತಕಡೆ ಮೌರ್ಯನೊಂದಿಗೆ ಹೋದೆ. ದೂರದಿಂದಲೇ ಒಂದು ಬೃಹತ್ ದ್ವಾರವೊಂದು ಸ್ವಾಗತದ ಭಂಗಿಯಲ್ಲಿ ನಿಂತಿದ್ದು ಕಂಡಿತು, ಭೀಮನ ದ್ವಾರವಲ್ಲವೇ ! ಬೃಹತ್ತಾಗೇ ಇರಬೇಕು. ದ್ವಾರದೊಳಗೆ ಕಾಲಿಟ್ಟರೆ ಬೃಹತ್ ಕಲ್ಲುಗಳಿಂದ ಕಟ್ಟಿದ ಸದೃಢ ಕೋಟೆ, ಕೋಟೆಯ ಒಂದು ಭಿತ್ತಿಯ ಮೇಲೆ ಭೀಮನು ದುಶ್ಯಾಸನನ ಕರಳು ಬಗೆದು ರಕ್ತಪಾನ ಮಾಡುವ ಕೆತ್ತನೆ ಇದೆ, ಪಕ್ಕದಲ್ಲಿ ಶಪಥಸಾರ್ಥಕ ಭಾವದಲ್ಲಿ ನಿಂತ ದ್ರೌಪದಿ. ಅಲ್ಲಿಯೇ ಹತ್ತಿರದಲ್ಲಿ ಭೀಮನದೊಂದು ವಿಲಕ್ಷಣ ಮೂರ್ತಿಯು ಪ್ರತಿಷ್ಠಾಪಿತವಾಗಿದೆ.
ಚಿತ್ರ ಕೃಪೆ : ಆರ್ಯ
ಅದರ ಬಗ್ಗೆ ಮೊದಲೇ ಬರೆದುಕೊಂಡಂತೆ :
ಕುಮಾರವ್ಯಾಸನು ತಾನು – “ತಿಳಿಯಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂತಿರೆ” ಅಂತ ಬರೆದುಕೊಂಡಿದ್ದರೂ ಕುಮಾರನ ಭಾರತದಲ್ಲಿ ನಾ ಕಂಡಂತೆ ಮೂವರು ನಾಯಕರು. ಶ್ರೀಕೃಷ್ಣ, ಅರ್ಜುನ ಹಾಗೂ ಭೀಮ. ಆ ಮೂರ್ತಿಯನ್ನು ಕಂಡಾಗ ಕುಮಾರನು ಭೀಮನ ಬಗೆಗೆ ಉಸುರಿದ ಪದಗಳೆಲ್ಲ ಮೂರ್ತರೂಪವಾಗಿ ನಿಂತಂತೆ ಕಂಡಿದ್ದಂತೂ ಸುಳ್ಳಲ್ಲ. ಕರ್ಣಾಟ ಭಾರತ ಕಥಾಮಂಜರಿಯ ಕೆಲವು ಷಟ್ಪದಿಗಳನ್ನು ನೆನಪಿದ್ದಷ್ಟು ಗೇಯುತ್ತ ವಿರೂಪಾಕ್ಷನ ಸನ್ನಿಧಿಯನ್ನು ಸಮೀಪಿಸಿದೆ.
ರಾಜಗೋಪುರದತ್ತಲೇ ನೆಟ್ಟದೃಷ್ಟಿಯನ್ನು ಕಿಂಚಿತ್ತೂ ಕದಲಿಸದೆ ಪಾದರಕ್ಷೆಗಳನ್ನು ಅನ್ಯತ್ರ ಸ್ಥಾಪಿಸಿ ಒಳನಡೆದೆ. ದೇವಾಲಯದ ಒಳಗಾಗುತ್ತಲೇ ಒಂದು ಚೆಂದದ ಮಂಟಪದಲ್ಲಿ ಶಿವಧ್ಯಾನದಲ್ಲಿದ್ದ ನಂದಿದ್ವಯರನು ನಮಿಸಿ ಕರ್ಣಾಟ ಕುಲದೈವದ ಗರ್ಭಗೃಹದೆಡೆಗೆ ನಡೆದೆ. ರವಿವಾರವಾದ್ದರಿಂದ ಜಂಗುಳಿಯು ತುಂಬಿತುಳುಕುತ್ತಿತ್ತು, ಕತ್ತುಹಿಸುಕುವ ಅನುಭವವಾಗುವುದರೊಳಗೆ ಅಲ್ಲಿಂದ ಕಾಲ್ಕೀಳಬೇಕೆಂದು, ನೇರ ದಾಸೋಹ ಮನೆಗೆ ಹೋಗಿ ಸೋಹಂ ಎನ್ನದೆ ದಾಸೋಹಂ ಎಂದು ಪ್ರಸಾದವನ್ನು ಗ್ರಹಿಸಿ, ದಾಸೋಹ ಕಾರ್ಯಕ್ಕೆ ಅಲ್ಪ ಕಾಣ್ಕೆಯನ್ನಿತ್ತು ಅನ್ಯದ್ವಾರದ ಮುಖೇನ ಹೊರಗಾಗಿ ನೇರ ಹಂಪೆಯ ಬಜಾರಿನ ದಾರಿಗುಂಟ ಸಾಗಿ ಮಾತಂಗ ಋಷಿಗಳ ಆವಾಸಸ್ಥಾನವಾದ ಬೆಟ್ಟದ ಬುಡಕ್ಕೆ ಬಂದುಬಿಟ್ಟೆ.
ತುಂಬ ದಿನಗಳ ನಂತರ ಒಂದು ಬೆಟ್ಟವನ್ನು ಹತ್ತುತ್ತಿದ್ದೆ. ಶರ್ಮದ ಗುಂಗಿನಿಂದ ಹೊರಬಂದು ವರ್ಮನಾಗಿ, ತನು-ಮನಗಳಿಂದ ಸರ್ವಸನ್ನದ್ಧನಾಗಿ ಪ್ರಶಸ್ತವಾದ ಶ್ವಾಸೋಚ್ಛ್ವಾಸಗಳೊಂದಿಗೆ ಆರೋಹಣಕ್ಕೆ ಅನುವಾದೆ. ಶಬರೀ, ನಿನ್ನ ಪ್ರೀತಿಯ ರಘುರಾಮ ಒಂದು ದಿನ ನಿನ್ನ ಉಸಿರು ನಿಲ್ಲುವ ಮುನ್ನ ನಿನ್ನೆದುರು ಬಂದು ನಿಲ್ಲುವನು ಅಲ್ಲಿಯವರೆಗೂ ಕಾಯುತ್ತಲಿರು (ತಪಿಸು) ಎಂದು ಶಬರಿಗೆ ರಾಮಮಂತ್ರವನ್ನು ಕೊಟ್ಟ ಮಾತಂಗ ಋಷಿಗಳ ಸಾನ್ನಿಧ್ಯದಲ್ಲಿ ನಾನಿದ್ದೆ, ಮತ್ತೆ ಶರ್ಮನಾದೆ. ಬೆಟ್ಟದ ಮೇಲೆ ಪುಟ್ಟ ಆಲಯ. ಒಳಗೆ ಶಿವನ ದಿಟ್ಟಭಟ ವೀರಭದ್ರ. ನಮಿಸಿ ಅರ್ಚಕರಿಗೆ ಕಾಣ್ಕೆಯಿತ್ತು ಬೆಟ್ಟದ ಒಂದು ನಿರ್ಜನ ಜಾಗಕ್ಕೆ ಬಂದು ಕೂತೆ. ಮುಂದೆ ಅಚ್ಯುತರಾಯನ ದೇವಸ್ಥಾನ ದೂರದಿಂದಲೇ ಬಾ ಎನ್ನುವಂತಿತ್ತು. ನಾನೂ ಮನದ ಸಂಜ್ಞೆಯಿಂದಲೇ ಈ ಬಾರಿಯಲ್ಲ, ಮುಂದಿನ ಬಾರಿ ಬರುವೆ ಎಂದು ಬೆಟ್ಟದ ಗಾಳಿಯನ್ನು ಕುಡಿಯಲಾರಂಭಿಸಿದೆ. ಸಮಯ ಮಧ್ಯಾಹ್ನ ೨ ಗಂಟೆ ಆದರೂ ಸೂರ್ಯನ ಸ್ವಭಾವವಾದ ತಾಪವೇ ಇಲ್ಲ. ವಾತಾವರಣ ಅನುಕೂಲವಾಗಿತ್ತು.
ರಾಜಧಾನಿಯ ಸುತ್ತಲಿನ ಬಹುತೇಕ ಜಾಗಗಳು ಆ ಬೆಟ್ಟದಿಂದಲೇ ಸಾರಾಂಶರೂಪದಲ್ಲಿ ಕಾಣಸಿಗುತ್ತವೆ. ವಿರೂಪಾಕ್ಷನ ಪಾರ್ಶ್ವದಲ್ಲಿಯೇ ಪಹರೆಯಿರುವ ತುಂಗಾನದಿ, ಇನ್ನೊಂದು ಬದಿಗೆ ಆನೆಗುಂದಿ. ಅಸಂಖ್ಯ ಅನಾಮಿಕ ಪರ್ವತವೃಂದ. ಸಂಜೆಯವರೆಗೂ ಅಲ್ಲಿಯೇ ಕುಳಿತಿದ್ದು, ಕತ್ತಲಾಗುವ ಮುನ್ನ ಹಕ್ಕಿಗಳ ಸಂಗಡ ಗೂಡು ಸೇರಲು ಆನೆಗುಂದಿಗೆ ಬಂದೆ.
ಮರುದಿನ ಮೂರನೆಯ ದಿನ ನಸುಕಿನಲ್ಲೇ ಎದ್ದು ಸ್ನಾನಾದಿಗಳನ್ನು ಪೂರೈಸಿ ಅಷ್ಟಾಂಗದ ಚತುರ್ಥಾಂಗವಾದ ಪ್ರಾಣಾಯಾಮವನ್ನು ಮಾಡಿ ಮುಖ್ಯಪ್ರಾಣನಿರುವ ಸ್ಥಳ ಅಂಜನಾದ್ರಿ ಕಡೆಗೆ ಚರಿಸಿದೆ. ಬೆಳಕಾಗುವ ಮುನ್ನವೇ ಬೆಟ್ಟದ ಮೇಲಿದ್ದರೆ ಜನಸಂದಣಿಯೂ ಕಡಿಮೆ, ಅರುಣೋದಯವನ್ನೂ ಆನಂದಿಸಬಹುದೆಂದು ಅಂದುಕೊಂಡು ಬೇಗ ವಿಜಯಂಗೈದೆ.
ಹತ್ತಾರು ನಿಮಿಷಗಳಲ್ಲಿ ಅಂಜನಾಚಲದ ಹೊಸ್ತಿಲಿಗೆ ಬಂದು ಪಾದರಕ್ಷೆಗಳನ್ನು ಒಂದೆಡೆ ಬಿಟ್ಟು ತುಳಸೀದಾಸ ವಿರಚಿತ ಹನುಮಾನ ಚಾಲಿಸದ ಪಠಣದೊಂದಿಗೆ ಆಂಜನೇಯನ ಮಹಾನತೆಯನ್ನು ಮನನ ಮಾಡುತ್ತ, ಸೋಪಾನಗಳನ್ನೇರುತ್ತ ಸುತ್ತಮುತ್ತಲಿನ ಸಸ್ಯಶ್ಯಾಮಲೆಯ, ಪಾಶಾಣದ ಸಮುದಾಯವನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಆರೋಹಣಿಸುತ್ತಿದ್ದಂತೆ ಜಗವೆಲ್ಲ ಬೆಳಕು ಕಂಡಿತು. ಕಣ್ಣಿಗೆ ಈಗ ಇನ್ನೂ ಬಲ ಹೆಚ್ಚಾಗಿ ಸುತ್ತಲಿನ ಪಕ್ಷಿನೋಟ ಇನ್ನೂ ಪಕ್ವವಾಯಿತು.
ಹತ್ತು ಹದಿನೈದು ನಿಮಿಷಗಳಲ್ಲಿ ಬೆಟ್ಟವನ್ನು ಹತ್ತಿ ಮೇಲೆ ಬಂದೆ, ಬೆಳಕೂ ಕತ್ತಲೆಯನ್ನೆಲ್ಲ ಆಗಲೇ ಹತ್ತಿಕ್ಕಿತ್ತು. ನನ್ನ ಹಿಂದಿನಂದಲೇ ಕೇಸರಿ ಶಾಲು ಹೊದ್ದುಕೊಂಡ ಒಬ್ಬರು ಪೂಜಾರಿಗಳು ಗಡಬಡನೆ ಗುಡ್ಡವನ್ನೇರಿ ಬಂದರು. ಅರ್ಕನುದಯದ ಸಮಯಕ್ಕೆ ಪೂರ್ವಾಗಸವೆಲ್ಲ ಕೇಸರಿಮಯವಾಗುವುದರಲ್ಲಿತ್ತು. ಅಷ್ಟರಲ್ಲಿ ಕಾರ್ಮೋಡಗಳು ಧಾವಿಸಿ ಬಂದು ಕೇಸರಿಯನ್ನು ಮಸುಕುಮಸುಕಾಗಿಸಿದವು. ಪೂಜಾರಿಗಳು ಆಲಯದ ಕೀಲವನ್ನು ಶಿಥಿಲಗೊಳಿಸಿ ನಿಖಿಲಸ್ಥಾನವನ್ನೂ ಸ್ವಚ್ಛಗೊಳಿಸುತ್ತಿದ್ದರು, ಅವರಿಗೆ ಕಿರಿಕಿರಿಯಾಗಗೊಡದೆ ನಾ ಬೆಟ್ಟದ ಇನ್ನೊಂದು ಬದಿಗೆ ಹೋಗಿ ಸ್ವಲ್ಪ ಹೊತ್ತು ಧ್ಯಾನಸ್ಥನಾಗಿದ್ದು ಮತ್ತೆ ಕೇಸರಿನಂದನನ ದರ್ಶನಕ್ಕೆ ಗರ್ಭಗೃಹ ಪ್ರವೇಶಿಸಿದೆ. ಅಷ್ಟರೊಳಗೆ ಪೂಜಾದಿಗಳನ್ನು ಪೂರೈಸಿದ ಪೂಜಾರಿಗಳು ಕೇಸರಿವರ್ಣದಿಂದ ಮಿಂದ ಮುತ್ತತ್ತಿರಾಯನ ಮೂರುತಿಯ ಮುಂದೆ ಧ್ಯಾನ ಮಾಡುತ್ತಿದ್ದರು. ಆಗಿನ ಪರಿಸರ ಅತ್ಯಂತ ದಿವ್ಯವಾಗಿತ್ತು, ವರ್ಣಿಸಲಾಸಲ್ಲ.
ಆಂಜನೇಯನ ಸುದರ್ಶನದಿಂದ ಸಂತೃಪ್ತನಾಗಿ, ಸಾವಕಾಶವಾಗಿ ಆಲಯದಿಂದ ಹೊರಬಂದು ಸ್ವಲ್ಪ ಹೊತ್ತು ಹಂಪೆಯ ಇನ್ನೊಂದು ಬದಿಯ ಕಾಣ್ಕೆಯನ್ನು ಕಣ್ತುಂಬಿಕೊಂಡು ಉಲ್ಲಸಿತ ಭಾವದಿಂದ ಪರ್ವತಾವರೋಹಣವನ್ನು ಮುಗಿಸಿ ಮತ್ತೆ ಬಿಡಾರಕ್ಕೆ ಮರಳಿ, ಎಲ್ಲ ಸಾಮಾನುಗಳನ್ನು ಬ್ಯಾಗಿಗೆ ತುಂಬಿಕೊಂಡು, ಬಿಡಾರದಿಂದ ಹೊರಬಂದು, ತಿಂಡಿ ತಿಂದು, ಇಷ್ಟೆಲ್ಲಕ್ಕೂ ಮೂಲಕಾರಣರಾದ ಮಹರ್ಷಿ ಮಾಧವಾಚಾರ್ಯರರ ಸ್ಮರಣೆಯೊಂದಿಗೆ ಅಂತಃಕರಣದಲ್ಲಿ ಅನೂಚಾನವಾದ ಸಾತ್ವಿಕ ಸ್ಮೃತಿಗಳನ್ನು ತುಂಬಿಕೊಂಡು ಸದ್ಯದ ಸ್ವಸ್ಥಾನದೆಡೆಗೆ ಹೊರಟೆ.
(ಮುಗಿಯಿತು)
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್