ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪಂಪಾ ಕ್ಷೇತ್ರದ ಇತಿಹಾಸ ಗಮನ – ೫

ಆರ್ಯ​

(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ )

ನಾ ನನ್ನನ್ನು ಆರ್ಯ ಸಂಸ್ಕೃತಿಗೆ (ಸನಾತನ) ಹೊಂದಿಸಿಕೊಂಡ ದಿನದಿಂದ ಸೂರ್ಯೋದಯದ ನಂತರ ನಿದ್ದೆಯಿಂದೆದ್ದಿದ್ದು ತೀರ‌ ವಿರಳವೆನ್ನಬಹುದು. ಮುಂದೆ ಒಂದಾನೊಂದು ದಿನ‌ ಬ್ರಹ್ಮವೇ ಆಗುವ‌‌ ನಾನು ಬ್ರಾಹ್ಮೀ ಮಹೂರ್ತದಲ್ಲೇ ಎದ್ದು ಪ್ರಾಂಜಲಿಬದ್ಧನಾಗಿ ಸಿದ್ಧಾಸನದಲ್ಲಿ ಪ್ರತ್ಯಕ್ಷ ಬ್ರಹ್ಮನಾದ ಮಾರ್ತಾಂಡನ ಸ್ಮರಣೆ ಮಾಡಿ, ಪ್ರಾತರಾಹ್ನೀಕಗಳನ್ನು ಮುಗಿಸುವಷ್ಟರಲ್ಲಿ ಮುಗಿಲಲ್ಲಿ ಮಂದವಾದ ಮುಂಬೆಳಕು ಆವರಿಸುವುದರಲ್ಲಿತ್ತು.

ಯಥಾಪ್ರಕಾರ ವಾಯುವಿಹಾರಕ್ಕೆಂದು ಕೋಣೆಯಿಂದ ಹೊರಬಂದೆ. ಸಣಾಪುರ ಸಂರಕ್ಷಿತ ಅರಣ್ಯ ಪ್ರದೇಶ ನನಗಾಗಿ ಕಾದಿತ್ತು, ತೆಳುವಾದ ಮಂಜಿನ ಪದರವೊಂದು ಅರಣ್ಯವನ್ನೆಲ್ಲ ವ್ಯಾಪಿಸಿತ್ತು. ಮೈತುಂಬಿದ‌ ಮೋಡಗಳು, ಹೆಚ್ಚಾಗಿ ತುಳುಕುತ್ತಿದ್ದ ನೀರಿನಿಂದ ಮೇದಿನಿಗೆ ಸ್ನಾನ ಮಾಡಿಸುತ್ತಿದ್ದವು. ಪ್ರಕೃತಿಯ ಸಮಷ್ಟಿ ರೂಪದಲ್ಲಿ ಪರಿವೇಷ್ಠಿತನಾದ ನಾನು ಮಳೆಗೆ ಅಂಜುವುದನ್ನು ಬಿಟ್ಟು ಹಲವು ವರ್ಷಾಋತುಗಳೇ ಆಗಿಹೋಗಿವೆ. ಆಗಸದಲ್ಲಿ ಅಂಬುದಗಳು ನಿಧಾನಗತಿಯಲ್ಲಿ ಗಮನಿಸುತ್ತಿದ್ದವು, ಭೂಮಿಯಲ್ಲಿ ನಾನು ಬಿರುಸಿನಿಂದ‌ ಹೆಜ್ಜೆ ಹಾಕುತ್ತಿದ್ದೆ.

ಅವಳು ಪ್ರಪಂಚದಲ್ಲಿ ಅತ್ಯಂತ ಘನತಮ ಕಾರ್ಯಸಾಧನೆ ಮಾಡಿದರೂ ಕಿಂಚಿತ್ ಶಬ್ದವೂ ಉಂಟಾಗುವುದಿಲ್ಲ, ಆಗೊಮ್ಮೆ ಈಗೊಮ್ಮೆ ಗುಡುಗು ಮಿಂಚುಗಳಾದರೂ ಅದು ಯಾರಿಗೂ ಕಿರಿಕಿರಿಯುಂಟು ಮಾಡಿರುವುದಿಲ್ಲ. ಆದರೆ ಮನುಷ್ಯರದು ಹಾಗಲ್ಲ ! ಸುಮ್ಮನೆ ಕುಳಿತರೂ ಸುತ್ತಮುತ್ತಲಿನ ಪರಿಸರದಲ್ಲಿ ತಲ್ಲಣವುಂಟುಮಾಡಿರುತ್ತಾನೆ, ಗದ್ದಲೆಬ್ಬಿಸಿರುತ್ತಾನೆ. ಗುಂಡಪ್ಪನವರದೊಂದು ಕಗ್ಗ ಕೇಳಿಲ್ಲವಾ ?

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ।।

ನನ್ನ ಪುಣ್ಯಕ್ಕೆ ಆ ಕಾಲದಲ್ಲಿ, ಕಾಂತಾರದಲ್ಲಿ ಕಾಡುವವರ ಸುಳಿವೇ ಇರಲಿಲ್ಲ, ನಿರ್ಜನವಾದ‌ ಪ್ರದೇಶದಲ್ಲಿ ನಿರ್ಭಯವಾಗಿ, ನಿಶ್ಶಬ್ದವಾಗಿ ನಡೆಯುತ್ತಿದ್ದೆ. ಸಮೀರನ ಸುಯ್ಯುವಿಕೆ ನನ್ನ ಸಹಸ್ರ ರೋಮಗಳೊಂದಿಗೆ ಪಿಸುಮಾತಾಡುತ್ತಿತ್ತು. ಆ ಸಮಯಕ್ಕೆ ಎಲ್ಲೋ ದೂರದಲ್ಲಿ ಕೇಳಿಬರುತ್ತಿದ್ದ ಹಕ್ಕಿಗಳ ಚಿಲಿಪಿಲಿಯು ಹಿಮ್ಮೇಳದಂತೆ ಪರಿಣಮಿಸಿತ್ತು. ಕೆರೆಯ ಒಂದು ತೀರದಲ್ಲಿ ಪ್ರಶಸ್ತವಾದ ಸ್ಥಳವೊಂದನ್ನು ನೋಡಿ ಪೂರ್ವಾಭಿಮುಖವಾಗಿ ಎವೆಗಳನ್ನು ಒಂದಕ್ಕೊಂದು ತಗುಲಿಸಿ ಕುಳಿತುಕೊಂಡೆ. ಆಗ ಒಳಗಣ್ಣಿನ ಕೆಲಸ ಜೋರಾಗಿತ್ತು, ಏನೇನೋ‌ ಕಾಣ್ಕೆಯೀಯುತ್ತಿತ್ತು, ನಾನು ಸುಮ್ಮನೆ ಗಮನಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ವಾಯುವಿನ ಅವಗಣನೆ ಕಡಿಮೆಯಾಗಿ ಕರೆಯ ತೆರೆಗಳು ಶಾಂತವಾದವು, ನನ್ನ ಚಿತ್ತಸರೋವರದ ವೀಚಿಗಳೂ ಸಹ. ಆಗ ಗಾಯತ್ರೀ ಮಂತ್ರದ ಮೊರೆಹೋಗುತ್ತಿದ್ದೆ. ಸವಿತೃವು ಸಮಗ್ರ ಲೋಕಗಳಿಗೂ ಬೆಳಕಿನ ಸ್ನಾನ ಮಾಡಿಸುತ್ತಿತ್ತು.

ಸ್ವಲ್ಪ ಸಮಯದ ನಂತರ ಖಗಸಾಮ್ರಾಜ್ಯದ ಉದ್ಯೋಗ ಜೋರಾಗಿ ನಡೆಯುತ್ತಿರಲು ನಾನು ನನ್ನ ಎವೆಗಳಿಗೆ ವಿರಹವೇದನೆಯನ್ನಿತ್ತು ಬಹಿರ್ಮುಖನಾದೆ. ಎಲ್ಲ ಹಕ್ಕಿಗಳೂ ತಮ್ಮ ತಮ್ಮ ಗೂಡಿನಿಂದ ಹೊರಬಂದು ಆಹಾರವನ್ನರಸುವ ಗಡಿಬಿಡಿಯಲ್ಲಿದ್ದವು. ಬೆಳಕಿನ ಮೃದುವಾದ ಬಿಸಿಗೆ ಕವಿದ ಮಂಜೆಲ್ಲ ಕರಗುತ್ತಿತ್ತು. ಸೂರ್ಯ ನಿಧಾನವಾಗಿ ಅಲ್ಲಲ್ಲಿ ಚುಕ್ಕಿ ಇಟ್ಟು ಬೆಳಕಿನ ರಂಗವಲ್ಲಿ ಹರವುದರ ಪೂರ್ವತಯಾರಿಯಲ್ಲಿದ್ದ. ನಾನು ಅವನ ಆಗಮನಕೆ ಮನಸಾ ಆಚಮನ ಮಾಡಿ ಬೆಳಗಿನ ಸಂಧ್ಯೆಯ ಸೂರ್ಯನಿಗೆ ವಂದನೆ ಮಾಡಲು ಅನುವಾದೆ.

ದಿನಮಣಿಯು ತನ್ನ ನಿಗದಿತ ದಿನಚರಿಯಂತೆ ದಿಗಂತದಂಚಿನಲ್ಲಿ ದಯಮಾಡಿಸುತ್ತಿದ್ದ. ಮಂಜಿನ ನೀರು ಎಲ್ಲೆಲ್ಲೂ ಮುತ್ತಿನ ಹನಿಗಳನ್ನು ಪೋಣಿಸಿಹೋಗಿತ್ತು, ದಿನಮಣಿಯ ಕೃಪೆಯಿಂದ ಆಗ ಅವೆಲ್ಲವೂ ಒಂದೊಂದು ಕಿರುದೀಪದಂತೆ ಫಳಫಳ​ನೆ ಹೊಳೆಯುತ್ತಿದ್ದವು. ಕೆಲವು ಕ್ಷಣಗಳಲ್ಲೇ ಸೂರ್ಯ ಮೇಲೇರುತ್ತಾ ಮತ್ತೆ ಮೋಡಗಳ ಹಿಂದೆ ಸರಿದ. ದೀಪಗಳಲ್ಲಿನ ಎಣ್ಣೆ ಖಾಲಿಯಾದಂತೆ ಎಲ್ಲ ಹನಿಗಳ ಹೊಳಪೂ ಹನನವಾಯಿತು. ಘನಶ್ಯಾಮವರ್ಣದ ಮೋಡಗಳು ಆಗಸವನ್ನಾವರಿಸಿದವು. ನಾನೂ ಮುಂದಿನ ಕಲಾಪಗೈಯ್ಯಲೆಂದು ಬಿಡಾರದೆಡೆಗೆ ಬರುತ್ತಿದ್ದೆ, ತುಂಬಿದ ಕೆರೆಯ ನೀರಲ್ಲಿ ಕೆಲವು ಧೀವರರು ತಮ್ಮ ಬಲೆಗಳನ್ನು ಬೀಸುತ್ತಲಿದ್ದರು.

ಮೊದಲದಿನದ ಮೊದಲು ದರ್ಶನ ಶ್ರೀಕೃಷ್ಣದೇವರಾಯರದ್ದು, ಎರಡನೆಯ ದಿನ ಕೃಷ್ಣದೇವರಾಯರಿಗೆ ಆಶ್ರಯವಿತ್ತ ದೈವ ವಿರೂಪಾಕ್ಷನ ದರ್ಶನ ಮಾಡುವುದೆಂದು ನಿಶ್ಚಯಿಸಿದಂತೆಯೇ ಬಿಡಾರಕ್ಕೆ ಮರಳಿ ಮಿತಾಗತ್ಯ ಸಾಮಾನುಗಳನ್ನು ತೆಗೆದುಕೊಂಡು ಅತ್ತ ನಡೆಯುತ್ತಿದ್ದೆ. ಬೇಸಿಗೆಯಲ್ಲಿ ಆನೆಗುಂದಿಗೂ ಹಂಪೆಗೂ ಮೂರು ಮೈಲಿಗಳಷ್ಟೇ ದೂರ. ಅದೇ ದೂರ ಮಳೆಗಾಲದಲ್ಲಿ ಹಿಗ್ಗಿ ಹದಿನೈದು ಮೈಲಿಗಳಷ್ಟಾಗುತ್ತದೆ. ಎಲ್ಲ ತುಂಗೆಯ ಕೃಪೆ.

ಬುಕ್ಕಸಾಗರದ ಸೇತುವೆ – ವೆಂಕಟಾಪುರವನ್ನು ದಾಟಿದ ಮೇಲೆ‌ ಬಲಗಡೆ ಭದ್ರಗೋಪುರವೊಂದು ಗಮನ ಸೆಳೆಯುತ್ತಿತ್ತು.

ಚಿತ್ರ ಕೃಪೆ : ಆರ್ಯ​

ಅದನ್ನೇ ನೋಡುತ್ತ ಮುಂದೆ ಬರುವಾಗ ಬಲಗಡೆ ಒಂದು ಫಲಕ ‘ಮಾಲ್ಯವಂತ ರಘುನಾಥ ದೇವಸ್ಥಾನ’ ಎಂದು. ನನಗರಿವಿಲ್ಲದಂತೆ ನಾ ಆ ದೇವಸ್ಥಾನದೆಡೆಗೆ ನಡೆದಿದ್ದೆ.‌ ಆ ಏರುದಾರಿಯಲ್ಲೊಂದು ಗೋಪುರ ಸಹಿತ ಎತ್ತರದ ಮಂಟಪವೊಂದಿತ್ತು. ಅಲ್ಲಿಯೇ ಕೆಲಹೊತ್ತು ನಿಂತು ಸುತ್ತಲೂ ದೃಷ್ಟಿಹಾಯಿಸಿ ಸುತ್ತಲಿನ ಬೆಟ್ಟಗಳನ್ನು ಕಣ್ತುಂಬಿಕೊಂಡು ಮುಖ್ಯದೇವಸ್ಥಾನದತ್ತ ನಡೆದೆ.

ಚಿತ್ರ ಕೃಪೆ : ಆರ್ಯ

ಪೂಜ್ಯರಾದ ತಿರುವಳ್ಳುವರ್’ರು ಅರುಹುವಂತೆ

ಉಳ್ಳುವದೆಲ್ಲಾಂ ಉಯರ್ ಉಳ್ಳಲ್ ಮತ್ರಟ್ಟು ತಲ್ಲೀನಂ ತೆಲ್ಲಾಮೈ ನಿರುತ್ತುಟ್ಟು.

(ನಿಮ್ಮ ಧ್ಯೇಯವು ಗುರಿಮುಟ್ಟದೇ ಹೋದರೂ, ಮೇಲಕ್ಕೇರುವ ಆಲೋಚನೆಯೇ ನಿಮ್ಮನ್ನು ಎತ್ತರಕ್ಕೆ ಏರಿಸುತ್ತದೆ.)

ರಾಜಗೋಪುರ ನೋಡಿ ಹಿರಿಹಿರಿ ಹಿಗ್ಗಿ ರಘುನಾಥನ ದರ್ಶನಕ್ಕೆಂದು ದ್ವಾರಬಾಗಿಲಿನೊಳಗೆ ಕಾಲಿಡುತ್ತಲೇ ಹಿಗ್ಗಿದ ಮುಖವೆಲ್ಲ ಕೊಂಚ ಕುಗ್ಗಿತು, ಆರುನೂರು ವರುಷಗಳಷ್ಟು ಹಳೆಯದಾದ, ಭವ್ಯವಾದ ಶಿಲ್ಪಕಲೆಗಳಿಂದ ಅಲಂಕೃತವಾದ ದೇವಸ್ಥಾನದ ಕೆಲವು ಭಾಜ್ಯ ಅಂಗಗಳಿಗೆ ಸುಣ್ಣ ಬಳೆದಿದ್ದರು. ಆ ಅಲಂಕಾರಿಕ ವಿವರಗಳನ್ನೆಲ್ಲ ಸುಣ್ಣವು ಸಣ್ಣಗಾಗಿಸಿತ್ತು. ಬೆಳಿಗ್ಗೆಯೇ ಮನಸ್ತಾಪ ಮಾಡಿಕೊಳ್ಳಬಾರದೆಂದು ಅಲ್ಲಿ ನಿಲ್ಲದೇ ಬೇಗ ದೇವಸ್ಥಾನದ ಗರ್ಭದೆಡೆಗೆ ಹೋಗಿ ರಾಘವನ ಮುಂದೆ ಅಂಜಲಿಬದ್ಧನಾಗಿ ನಿಂತು ನಮಸ್ಕರಿಸಿ, ತುಳಸೀ ತೀರ್ಥ ಗ್ರಹಿಸಿ ದೇವಸ್ಥಾನದ ಪ್ರಾಂಗಣವನ್ನೊಮ್ಮೆ ಪ್ರದಕ್ಷಿಣೆ ಹಾಕಲನುವಾದೆ.

ನಮ್ಮ ಸನಾತನದ ದೇಗುಲಗಳೇ ಹಾಗೆ, ಆಸ್ಥಾನದ ವಿಸ್ತೀರ್ಣ ದೊಡ್ಡದಿರಲಿ ಚಿಕ್ಕದಿರಲಿ ಅಲ್ಲಿ ಮಾಡುವ ಸುಗಮನವು ಮೂರು ಲೋಕಗಳನ್ನೂ ಸುತ್ತಿಬಂದಂತಹ ಅನುಭವ ಕೊಡುತ್ತದೆ.
ನಾನು ಈ ಅನುಭವದ ಮಾತುಗಳನ್ನು ಆಡುವಾಗ ನನ್ನ ಮನದಲ್ಲಿ ಪೂಜ್ಯ ವಿದ್ವಾನ್ ಗುಂಡಪ್ಪನವರು ಕಾವ್ಯ-ಸ್ವಾರಸ್ಯ ಎಂಬ ತಮ್ಮ ಕೃತಿಯಲ್ಲಿ ಸೌಂದರ್ಯ ತ್ರಿಕೂಟ ಎಂಬ ಶೀರ್ಷಿಕೆಯಡಿ ಬರೆದುಕೊಂಡಿರುವ ನಾಲ್ಕಾರು ಸುಭದ್ರ ವಾಕ್ಯಗಳು ನೆನಪಾದವು. ಅವುಗಳ ಯಥಾರೂಪ ಹೀಗಿದೆ:

ಯಾತ್ರೆ ಎಂಬುದು ಸೌಂದರ್ಯೋಪಾಸನೆ – ತೆರೆದ ಕಣ್ಣುಳ್ಳಾತನಿಗೆ, ಸೌಂದರ್ಯದ ಮುಖ್ಯ ಕಾರ್ಯ ಮನಃಪ್ರಸಾದ, ಭಾವವಿಕಾಸ, ಜೀವೋತ್ಕರ್ಷ, ಅಹಂಭಾವವಿಲಯನ. “ನಾನು-ನಾನು, ನನ್ನದು – ನನ್ನದು” ಎಂಬ ಮನಸ್ಸಂಕೋಚದಿಂದ ಆತ್ಮವು ಬಿಡುಗಡೆ ಪಡೆವುದೇ, – ಆತ್ಮವು ಸ್ವಪ್ರಯತ್ನದಿಂದ ದೇಹಭಿತ್ತಿಗಳನ್ನು ದಾಟಿ ವಿಶ್ವಾತ್ಮವನ್ನು ಸಂಧಿಸಹೊರಡುವುದೇ, – ಪರಮ‌ಪುರುಷಾರ್ಥ. ಅದಕ್ಕೆ ಸಾಧನಾಭೂತವಾದದ್ದು ಸೌಂದರ್ಯಾನುಭವ.

ನಮ್ಮ ಪೂರ್ವಿಕರು ಆ ಅನುಭವದ ಸಾಧುವಿಧಾನವನ್ನು ದೇವಕ್ಷೇತ್ರ ನಿರ್ಮಾಣ ವಿವೇಕದಲ್ಲಿ ತೋರಿಸಿದ್ದಾರೆ; ಸೃಷ್ಟಿ ಸೌಂದರ್ಯ, ಕಲಾಕಲ್ಪಿತ ಸೌಂದರ್ಯ, ಜೀವಸಂಸ್ಕಾರ ಸೌಂದರ್ಯ – ಈ ಸೌಂದರ್ಯ ತ್ರಿಕೂಟವೇ ಅವರ ಪರಮ ಧ್ಯೇಯದ ಪ್ರತಿಬಿಂಬ.

(ಮುಂದುವರೆಯುವುದು…)