ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ಆರ್ಯ​

ಪಂಪಾ ಕ್ಷೇತ್ರದ ಇತಿಹಾಸ ಗಮನ – ೪

ಆರ್ಯ​

(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೩ )

ಮಳೆಗಾಲದ ಸಮಯವಾದ್ದರಿಂದ ನೆಲವೆಲ್ಲ ಹಸಿರು, ಆಗಸವೆಲ್ಲ ಘನನೀರು. ಕೋಟೆಯ ಬೆನ್ನಿಗೆ ಅಂಟಿಕೊಂಡೆ ಬೆಟ್ಟದ ಮೇಲೆ ದೊಡ್ಡ-ದೊಡ್ಡ ಬಂಡೆಗಳಿವೆ. ದೊಡ್ಡ-ದೊಡ್ಡ ಬಂಡೆಗಳ ಮಧ್ಯೆ ಅಲ್ಲಲ್ಲಿ ಕಾಡು ಪ್ರಾಣಿಗಳಿಗೆ, ಸಾಧಕರಿಗೆ ವಾಸಯೋಗ್ಯ ಗುಹೆಗಳಿವೆ. ನೀರಿನ ಆಕರಗಳಿವೆ, ಮರಗಳೂ ಇವೆ. ಇದನ್ನೆಲ್ಲ ಕಂಡಾಗ ದೇಹಗತ ಆತ್ಮವೊಮ್ಮೆ ದೊಡ್ಡದಾಗಿ ಹಲ್ಲುಬಿಟ್ಟಿರಬೇಕು. ಏಕೆಂದರೆ ನಮ್ಮಂಥವರಿಗೆ ಹೇಳಿ ಮಾಡಿಸಿದ ಜಾಗ. ಜ್ಞಾನವೆಂಬ ನಾಲಿಗೆಯಲ್ಲಿ ಧ್ಯಾನದ ನೀರೂರುತ್ತಿತ್ತು.

ಚಿತ್ರ ಕೃಪೆ : ಆರ್ಯ​

ಆನೆಗಳನ್ನು ಕಟ್ಟುವ ಸ್ಥಳದ ಮೇಲೆ‌ ಹತ್ತಿ ಕಣ್ಣಿಗೆ ಕಾಣ್ಕೆ ಕೊಟ್ಟಷ್ಟು, ನನ್ನ ದೃಶ್ಯಕಕ್ಷೆಗೆ ನಿಲುಕಿದಷ್ಟು ದೃಶ್ಯವನ್ನು ‘ವ್ಯವಸಾಯಾತ್ಮಿಕಾ ಬುದ್ಧಿಃ ಏಕೇಃ ಕುರುನಂದನ’ ಎನ್ನುವ ಕೃಷ್ಣನ ಮಾತಿನಂತೆ ಹಂಪಿಯ ಗಾಥೆಗಳನ್ನೇ ಮನನ ಮಾಡುತ್ತ, ಆಗಿಹೋದ ಆಗುಹೋಗುಗಳ ಬಗೆಗೆಲ್ಲ ಮನದಲ್ಲಿ ವಿಕಲ್ಪಗಳನ್ನು ಸೃಷ್ಟಿಸಿಕೊಳ್ಳುತ್ತಲಿದ್ದೆ. ಸುಯ್ಯನೆ ಸುಳಿಯುವ ಸಮೀರನೂ ತನಗೆ ತಿಳಿದದ್ದಷ್ಟನ್ನು ತಿಳಿಹೇಳುತ್ತಿದ್ದ, ನಾ ಏಕಚಿತ್ತನಾಗಿ ಕೇಳುತ್ತ ಹೆಗಲಿಗೇರಿಸಿದ್ದ ಬ್ಯಾಗನ್ನು ಪಕ್ಕಕ್ಕಿಟ್ಟು ಕುಳಿತಿದ್ದೆ. ಒಂದರ್ಧ ತಾಸು ಹಾಗೆಯೇ ಕುಳಿತಿದ್ದು ಆ ಭಾವದಿಂದ ಹೊರಬಂದು ಜೊತೆಗೆ ತಂದಿದ್ದ ಹಣ್ಣುಗಳನ್ನು ತಿನ್ನುತ್ತ ವಿದ್ಯಾನಂದ ಶೆಣೈ’ರು ಬರೆದ ‘ಭಾರತ ದರ್ಶನ’ದಲ್ಲಿನ ವಿಜಯನಗರ ಅಧ್ಯಾಯದ ಪುಟಗಳನ್ನು ತೆರೆದು ಓದುತ್ತ ಕುಳಿತೆ.

ಚಿತ್ರ ಕೃಪೆ : ಆರ್ಯ​

ಗೂಗಲ್ ನಕ್ಷೆಯಲ್ಲೂ ಸಿಗದಂತಹ ಭಾರತದ ಮಹತ್ವದ ಜಾಗಗಳ ಬಗ್ಗೆ ವಿದ್ಯಾನಂದರು ಆ ಅಮೂಲ್ಯಗ್ರಂಥದಲ್ಲಿ ಆಮೂಲಾಗ್ರವಾಗಿ ಬರೆದಿಟ್ಟಿದ್ದಾರೆ. ಅಂತೆಯೇ ಆನೆಗುಂದಿಯ ಸುತ್ತಲಿನ ಪ್ರದೇಶಗಳ ಬಗ್ಗೆ ಓದಿ, ತಿಳಿದುಕೊಂಡು ಮುಂದೆ ಯಾವ ಯಾವ ಜಾಗಗಳನ್ನು ಯಾವಾಗ ನೋಡುವುದೆಂದು ಮನದಲ್ಲೇ ಕ್ರಮವಾಗಿ ಜೋಡಿಸಿಕೊಂಡೆ.

ನಾ ಮೊದಲೇ‌ ನಿಶ್ಚಯಿಸಿದಂತೆ ನಿಧಾನವಾಗಿ ಹಂಪೆಯ ಒಂದು ಭಾಗವನ್ನು ಮಾತ್ರ ಪರಿವೀಕ್ಷಿಸಿ (ಈ ಸಲ ಆನೆಗುಂದಿ ಸುತ್ತಲಿನ ಎಲ್ಲ ಜಾಗಗಳು) ಜೊತೆಗೆ ಎರಡು ಬೆಟ್ಟಗಳ ಚಾರಣ ಮಾಡುವುದೆಂದು ನಿಶ್ಚಯಿಸಿದ್ದೆ. ಬೆಂಗಳೂರು ಬಿಟ್ಟಾಗಿನಿಂದ ಚಾರಣ ಕಾರ್ಯಾಚರಣೆಗಳ ಕೊರತೆಯಾಗಿತ್ತು, ದೇಹಕ್ಕೆ ತುರಂತಕ್ಕೆ ಒಂದೆರಡು ಬೆಟ್ಟಗಳನ್ನು ಹತ್ತಿಳಿಯಬೇಕೆಂಬ ಹಪಹಪಿಯಿತ್ತು. ತುಂಬಾ ದಿನಗಳಿಂದ ನನ್ನ ದೇಹಕ್ಕೆ ಬೆಟ್ಟದ ಧ್ಯಾನದ ಕೊರತೆಯಾಗಿತ್ತು.

ವಾರಾಂತ್ಯದ ದಿನವಾದರೂ ಜನರ ಸುಳಿವೇ‌ ಇಲ್ಲದೆ ಆನೆಗುಂದಿ ಕೋಟೆಯು ಆ ಕ್ಷಣಕ್ಕೆ ಏಕಾಂತದಿಂದ ತುಂಬಿತುಳುಕುತ್ತಿತ್ತು. ಸಮಯಸಾಧನೆಗೆ ಬೆಟ್ಟದ ಬುಡಗಳಲ್ಲಿ ಒಂದು ಚೆಂದ, ಪ್ರಶಸ್ತವಾದ ಗುಹೆಯೊಂದನ್ನು ನೋಡಿ ಅಲ್ಲಿ ಸ್ವಲ್ಪ ಹೊತ್ತು‌ ಧ್ಯಾನನಿರತನಾಗಬೇಕೆಂದು ಮನಸ್ಸಿಗೆ ಬಂತು, ಅಂತೆಯೇ ಒಂದು ಸ್ಥಳದಲ್ಲಿ ಸಾಮನುಗಳನ್ನೆಲ್ಲ ಬದಿಗಿಟ್ಟು, ಮೊಬೈಲನ್ನು ನಿಶ್ಶಬ್ದಿಸಿಟ್ಟು ಕಣ್ಮುಚ್ಚಿ ಕುಳಿತುಕೊಂಡೆ. ಧ್ಯಾನದ ವಿಷಯ ಧೀರ ವಿದ್ಯಾರಣ್ಯರು, ವೀರ ಹಕ್ಕ-ಬುಕ್ಕರು ಹಾಗೂ ವಿಜಯನಗರ ಸಾಮ್ರಾಜ್ಯಕ್ಕೆ ಪೂರ್ವಸಿದ್ಧತೆಯಂತಿದ್ದ ಕುಮ್ಮಟದುರ್ಗದ ಕಲಿ ಕಂಪಿಲರಾಯ ಮತ್ತು ಆತನ ಪುತ್ರರತ್ನ ಕುಮಾರರಾಮ.

ಒಂದು ಪ್ರಹರ ಕಾಲದ ನಂತರ ಪುಣ್ಯಾತ್ಮರ ಸ್ಮರಣೆಯೊಂದಿಗೆ ಆನೆಗುಂದಿಯ ಕೋಟೆಯಿಂದ ಹೊರಬಂದೆ. ನೀಲಾಗಸಕ್ಕೆಲ್ಲ ಬೂದುಬಣ್ಣ ಬಳಿದ ಕಪ್ಪು ಮೋಡಗಳು ಎಲ್ಲೆಡೆ ಆವರಿಸಿದ್ದರೂ ಯಾಕೋ ಕರಗಿ ನೀರಾಗಲೊಲ್ಲವು, ಬಹುದಿನಗಳಿಂದ ಮಡಿಚಿಟ್ಟ ನನ್ನ ಛತ್ರಿಯು ಗಾಳಿಗೆ ಮೈಯ್ಯೊಡ್ಡಲು ಅವಕಾಶಕ್ಕಾಗಿ ಹಾತೊರೆಯುತ್ತಿತ್ತು. ಸೂರ್ಯನೂ ಪರದೆಯ ಹಿಂದೆ ಏನೋ ಯೋಜನೆ ಹಾಕುತ್ತಿರಬೇಕು ಅಂತ ಯೋಚಿಸುತ್ತಾ ಮೇಲೆ ಮುಖ ಮಾಡಿ ನೋಡಿದರೆ ಏನಾಶ್ಚರ್ಯ !! ಅಂತರಿಕ್ಷದಲ್ಲೊಂದು ಗುರುಕುಲದ ಕಾರ್ಯಾಗಾರ. ಇಂದ್ರ, ವರುಣ, ಸೂರ್ಯ, ಉಷಸ್ಸು, ಅಗ್ನಿ, ವಾಯು ಇತ್ಯಾದಿ ಎಲ್ಲ ಚಕ್ಕಂಬಕ್ಕಳ ಹಾಕಿಕೊಂಡು ಕುಳಿತಿದ್ದಾರೆ, ಪ್ರಕೃತಿ ಗುರುಸ್ಥಾನದಲ್ಲಿ ನಿಂತು ಸ್ವಸ್ತಿ ವಾಚನ ಮಾಡಿಸುತ್ತಿದ್ದಾಳೆ. ಎಲ್ಲರ ಗಮನ ಅವಳ ವಚನದ ಮೇಲೆ, ಅವಳ ಚಿತ್ತಗಮನ ಪರಮಪುರುಷ ಪರಶಿವನ ಮೇಲೆ. ಪರಶಿವನ ಗಮನ ಎಲ್ಲರ ಮೇಲೆ ಓತಪ್ರೋತವಾಗಿದೆ.

ಮಧ್ಯಾಹ್ನ ಮುಗಿದು ಅಪರಾಹ್ಣದ ಮಧ್ಯಭಾಗದಲ್ಲಿತ್ತು, ನಾನೂ “ಓಂ ಭದ್ರಂ ಕರ್ಣೇಭಿಃ……” ಎಂಬ ಸ್ವಸ್ತಿ ವಾಚನದೊಂದಿಗೆ ಅಲ್ಲಿಂದ ಮುಂದೆ ಪಂಪಾಕ್ಷೇತ್ರದ ಪಂಪಾಸರೋವರದೆಡೆಗೆ ನಡೆದೆ. ಇದೇ ಸ್ಥಳದಲ್ಲೇ ಮೊಟ್ಟಮೊದಲಿಗೆ ಸೂರ್ಯನನ್ನೇ ನುಂಗಲು ಹೋದ ಸಾಹಸವಂತ ಸಮೀರಕುಮಾರನನ್ನು ಶ್ರೀ ರಾಮಲಕ್ಷ್ಮಣರು ಭೇಟಿಯಾಗಿದ್ದು. ಇದೇ ಸ್ಥಳದಲ್ಲೇ ಸ್ವರ್ಣಸಾಮ್ರಾಜ್ಯ ಲಂಕೆಯ ಅಧಿಪತಿ ದಶಾನನನ ಅವನತಿಯು ಅನುವುಗೊಂಡಿದ್ದು.

ಅತ್ಯಂತ ಉತ್ಸುಕನಾಗಿ ಸ್ಥಳಕ್ಕೆ ಬಂದ ನಾನು ಅಲ್ಲಿನ ಉದ್ಯೋಗಗಳನ್ನು ನೋಡಿ ತಕ್ಷಣಕ್ಕೆ ಬೇಸರಗೊಂಡಿದ್ದಂತೂ ದಿಟ. ಕೆಳಗಿನ ಪಟವನ್ನು ನೋಡಿದರೆ ನಿಮಗೇ ಕಾರಣದರಿವಾಗಬಹುದು.

ಭಾರತದಲ್ಲಿ ಪಂಚ ಪವಿತ್ರ ಸರೋವರಗಳಲ್ಲಿ ಈ ಪಂಪಾ ಸರೋವರವೂ ಒಂದು‌ (ಮಾನಸ, ನಾರಾಯಣ, ಬಿಂದು, ಪುಷ್ಕರ ಹಾಗೂ ಪಂಪ ಸರೋವರ). ನೈಸರ್ಗಿಕ ಸರೋವರವನ್ನು ಹೀಗೆ ಆಧುನಿಕರಣಗೊಳಿಸುವ ಆ ಉದ್ಯೋಗಗಳು ನಿಜಕ್ಕೂ ಬೇಸರ ತರಿಸುವಂಥವು. ಪಂಪಾ ಸರೋವರವು ಈಗ ಪಂಪುನೀರಿನ ಈಜುಕೊಳದಂತೆ ಕಂಡುಬಂತು. ಸದಾ ಸರೋಜಗಳಿಂದ ಸುಲಂಕೃತವಾಗಿರುತ್ತಿದ್ದ ಆ ಸರಸ್ಸಿನಲ್ಲಿದ್ದ ಸರೋಜಗಳನ್ನೆಲ್ಲ ತೆಗೆದು ಹಾಕಲಾಗಿತ್ತು. ಸರಸಿಗೆ ಅಭಿಮುಖವಾಗಿದ್ದ ಲಕ್ಷೀ ಹಾಗೂ ಶಿವಾಲಯಗಳ ಪ್ರತಿಯೊಂದು ಅಂಗಗಳನ್ನು ವಿಗ್ರಹ ಭಂಗ ಮಾಡಿ, ಪೂರ್ಣದೇವಸ್ಥಾನವನ್ನು ನವೀಕರಿಸಲಾಗುತ್ತಿರುವ ಕಾರ್ಯ ಭರದಿಂದ ಸಾಗಿತ್ತು.

ಈ ದೃಶ್ಯ ಕಂಡ ನಾನು ಪಕ್ಕದ ಬೆಟ್ಟದ ಮೇಲೆ ಏರಿ ಕುಳಿತು ಯೋಚನಾಮಗ್ನನಾದೆ. ಮುಸಲರಿಂದ ಭಗ್ನಗೊಂಡಿರುವ ದೇವಮೂರುತಿಗಳನ್ನು, ಆಲಯಗಳನ್ನು ಹಾಗೆಯೇ ಬಿಡುವುದೊಳಿತಾ ? ಅಥವಾ ಹೀಗೆ ಹಳೆಯ ದೇಗುಲಗಳಿಗೆ ಆಧುನೀಕರಣದ ಬಣ್ಣ ಹಚ್ಚಿ ಅವುಗಳನ್ನು ನಿನ್ನೆ ಮೊನ್ನೆ ಕಟ್ಟಿದ ಹಾಗೆ ಚಮಚಮಕಿಸುವಂತೆ ಮಾಡುವುದು ಒಳಿತಾ ? ಹಲವು ನಿಮಿಷ ಕುಳಿತು ಯೋಚಿಸಿದರೂ ಇದಕ್ಕೆ ಸಮರ್ಪಕ ಉತ್ತರ ನನಗಂತೂ ಹೊಳೆಯಲಿಲ್ಲ. ವಾಚಕರಿಗೆ ಸಮರ್ಪಕ ಸಮಾಧಾನ ಸಿಕ್ಕರೆ ತಿಳಿಸಬಹುದು. ಮನಸು ದ್ವಂದ್ವರಹಿತವಾಗಬೇಕಷ್ಟೇ.

ಸಪ್ಪಗಿನ‌ ಮೋರೆ ಮಾಡಿಕೊಂಡು ಸಣ್ಣಗೆ ಸಣಾಪುರ ಕೆರೆಯ ಪಕ್ಕದಲ್ಲಿನ ನನ್ನ ತಂಗುದಾಣಕ್ಕೆ ಹೊರಟುಬಂದೆ. ಬೆಳಿಗ್ಗೆಯಿಂದ ಸತತ ಸುತ್ತಾಟದಲ್ಲಿದ್ದ ದೇಹಕ್ಕೆ ಸ್ವಲ್ಪ ದಣಿವಾಗಿದ್ದರಿಂದ ಒಂದರ್ಧ ತಾಸು ವಿಶ್ರಮಿಸಿ ಸಣಾಪುರ ಕೆರೆಯ ಕಡೆಗೆ ಸೂರ್ಯಾಸ್ತವೀಕ್ಷಣೆಗೆ ಹೋದರಾಯ್ತು ಎಂದು ಆಲೋಚಿಸಿ ಮಲಗಿದೆ.

ಸಂಜೆ ಸಮಯ ೫:೩೦ಕ್ಕೆ ನಿದ್ದೆಯಿಂದೆದ್ದು, ಮುಖಪ್ರಕ್ಷಾಲನೆ ಮಾಡಿ, ಅಮ್ಮ ಮನೆಯಿಂದ ಕಟ್ಟಿಕೊಟ್ಟ ಚೂಡಾ (ಮಸಾಲೆ ಮಂಡಕ್ಕಿ), ಮೊಬೈಲು, ಟ್ರೈಪಾಡ್’ಗಳನ್ನೆಲ್ಲ ತೆಗೆದುಕೊಂಡು ಸಣಾಪುರ ಕೆರೆಯ ಕಡೆ ಹೊರಟೆ. ಸಣಾಪುರದ ಮೀಸಲು ಅರಣ್ಯಪ್ರದೇಶದ ತುಂಗೆಯ ನೀರಿನ ಆಕರ, ಸುತ್ತಲಿನ ಬೆಟ್ಟಗಳನ್ನೆಲ್ಲ‌ ಸುತ್ತುತ್ತ ನೋಡಿ ಸೂರ್ಯಾಸ್ತ ವೀಕ್ಷಣೆಗೆ ಒಂದು ಪ್ರಶಸ್ತವಾದ ಜಾಗವನ್ನು ಪರೀಕ್ಷಿಸಿ ನೋಡಿ ಒಂದು ಕಡೆ ಟ್ರೈಪಾಡ್’ಗೆ ಮೊಬೈಲ್ ಸಿಕ್ಕಿಸಿಟ್ಟು, ನಾ ಪಕ್ಕದಲ್ಲೇ ಸೂರ್ಯನತ್ತ ಮುಖಮಾಡಿ, ಚಿತ್ತಬಂಧ ಮಾಡಿ ಕುಳಿತುಕೊಂಡೆ. ಮೋಡಗಳ ಮಧ್ಯೆ ಆಗೊಮ್ಮೆ ಈಗೊಮ್ಮೆ ಸೂರ್ಯ ಕಾಣ್ಕೆ ಕೊಡುತ್ತಿದ್ದರೂ, ತೃಪ್ತಿಯಿಲ್ಲ. ಮಾರ್ತಾಂಡನ ಅಖಂಡ ದರ್ಶನಕ್ಕಾಗಿ ಕಾದು ಕುಳಿತಿದ್ದೆ. ಮೋಡಗಳು ಪಡುವಣದಿಂದ ಮೂಡಣದ ಕಡೆ ಗಡಬಡಾಯಿಸಿ ಓಡುತ್ತಿದ್ದವು. ಸೂರ್ಯನಿಂದ ನಮಗೆ ಸಂಜೆಯಾದರೂ ಅವನಿಗೆ ಸಂಜೆ-ರಾತ್ರಿಗಳ ಮೇರೆಯೇ ಇಲ್ಲ, ತಪಿಸುವುದಷ್ಟೇ ಅವನಿಗೆ ಗೊತ್ತಿರುವುದು. ಮಳೆ, ಬಿಸಿಲು, ಗಾಳಿ ಎಲ್ಲ ನಮಗೆ ಸಂಬಂಧಿಸಿದವುಗಳು. ಅವನಿಗೆ ತಾಪವೊಂದೇ. ತಪಸ್ಸೇ ಅವನ ಏಕಮಾತ್ರ ಕಾರ್ಯ.

ಚಿತ್ರ ಕೃಪೆ : ಆರ್ಯ​

ದಿನವೆಲ್ಲ ಅಂತರಿಕ್ಷ-ಅವನಿಗಳ ಮಧ್ಯೆ ವ್ಯವಹರಿಸಿದ ಹಕ್ಕಿಗಳು ಅಂದಿನ ಸಂಜೆಯ ರಾಗದೊಂದಿಗೆ ಅವುಗಳ ಗೂಡಿನೆಡೆಗೆ ಆಕಾಶಗಮನಮಾಡುತ್ತಿದ್ದವು. ಕತ್ತಲಿನ ರಂಗಪ್ರವೇಶವಾಗುವುದರಲ್ಲಿತ್ತು. ನನ್ನ ನಾಟಕ ಮುಗಿಸಿ ಬಿಡಾರಕ್ಕೆ ಮರಳಿ ಊಟ ಮಾಡಿ ಮಲಗಿದೆ.

ಪಂಪಾಕ್ಷೇತ್ರದ ಮೊದಲ ದಿನದ ಇಷ್ಟೆಲ್ಲಕ್ಕೂ ನನ್ನಾತ್ಮ ಸಾಕ್ಷಿಯಾಗಿತ್ತು.

(ಮುಂದುವರೆಯುವುದು……)