- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
- ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು - ಆಗಸ್ಟ್ 10, 2022
ಇರುವೆ ನಡಿಗೆ-11
“ಅನೂ, ನಿಂಗೆ ಈವತ್ತೊಂದು ಕತೆ ಹೇಳ್ತೇನೆ ಕೇಳು.”
” ಮಾದೇವ ಮಾಮಾ!, ನಂಗೆ ಕತೆ ಅಂದ್ರೆ ಇಷ್ಟ. ನಾನು ಸಣ್ಣಾಗಿರುವಾಗ, ಅಜ್ಜ, ಪ್ರತೀದಿನ ರಾತ್ರೆ, ನಿದ್ದೆ ಮಾಡುವ ಮೊದಲು ವಾಲ್ಮೀಕಿ ರಾಮಾಯಣವನ್ನು ಸ್ವಲ್ಪ ಸ್ವಲ್ಪವೇ ಓದಿ ವಿವರಿಸುತ್ತಿದ್ದರಲ್ವಾ!. ಎಷ್ಟೊಂದು ಇಮ್ಯಾಜಿನೇಷನ್ಗಳು. ನಂಗೆ ಹನುಮಂತ ಇಷ್ಟ ಮಾಮಾ!”
” ನೀನೊಂದು ಬಾಲ ಇಲ್ಲದ ಮಂಗಿಯೇ ಬಿಡು!!. ನಿಂಗೆ ಹನುಮಂತ ಅಲ್ಲದೆ ಇನ್ಯಾವ ಪಾತ್ರ ಇಷ್ಟವಾದೀತು!.
ಅದಿರಲಿ, ಈವತ್ತು ನಾನು ಹೇಳುವ ಕತೆ ಎಡ್ವರ್ಡ್ ನಾರ್ಟನ್ ಲಾರೆನ್ಸ್ , ಎಂಬ ಹವಾಮಾನ ಮುನ್ಸೂಚನೆಯ ಅಧ್ಯಯನ ಮಾಡಿದ ವಿಜ್ಞಾನಿಯದ್ದು.
೧೯೬೦ ರ ದಶಕದಲ್ಲಿ, ಹವಾಮಾನ ಮುನ್ಸೂಚನೆ ಎಂಬುದು ತುಂಬಾ ಕಠಿಣ ವಿಷಯವಾಗಿತ್ತು. ಈವತ್ತು ಮಳೆ ಬರುತ್ತಾ?, ಈವತ್ತು ಛಳಿ ಎಷ್ಟಿರುತ್ತೆ, ಚಂಡಮಾರುತ ನೆಲಕ್ಕಪ್ಪಳಿಸುತ್ತಾ?. ಅದರ ವೇಗ ಎಷ್ಟಿರಬಹುದು? ಹೀಗೆಲ್ಲಾ ಪ್ರಶ್ನೆಗಳು.
ಹವಾಮಾನವನ್ನು ಪ್ರೆಡಿಕ್ಟ್ ಮಾಡಲು ಗಣಿತದ ಸಮೀಕರಣಗಳನ್ನು ಉಪಯೋಗಿಸಬೇಕು. ಆದರೆ ಆ ಸಮೀಕರಣಗಳು ಅತ್ಯಂತ ಕ್ಲಿಷ್ಟವಾದ ನಾನ್ಲೀನಿಯರ್ ಡಿಫರೆನ್ಷಿಯಲ್ ಇಕ್ವೇಷನ್ ಗಳು.”
“ಅರೇ ಮಾಮಾ! ಇದೆಂತ ಕತೆಯಾ? ಕಬ್ಬಿಣದ ಕಡಲೆಯ ಖಣಖಣವಾ?. ಸ್ವಲ್ಪ ವಿವರಿಸಿ ಹೇಳು ನಂಗೆ.”
” ನೋಡು ಪುಟ್ಟೂ, ನೀನು ಒಂದು ಬಯಲು ಪ್ರದೇಶದಲ್ಲಿರುವ ರಸ್ತೆಯಲ್ಲಿ ಸಂಚರಿಸುತ್ತಿರುವೆ ಅಂದ್ಕೋ.. ಅದು ಕಿಲೋಮೀಟರ್ ಗಟ್ಟಲೆ ತಿರುವುಗಳೇ ಇಲ್ಲದ ನೇರ ರಸ್ತೆ. ರಸ್ತೆಯ ಒಂದು ತುದಿಯಿಂದ ನೋಡಿದರೆ ಕಣ್ಣಿಗೆಟಕುವಷ್ಟು ದೂರ ರಸ್ತೆ ಕಾಣಿಸುತ್ತದೆ. ಕಿಲೋಮೀಟರ್ ದೂರದಲ್ಲಿ ಚಲಿಸುವ ವಾಹನಗಳೂ ಕಾಣಿಸುತ್ತವೆ ಅಲ್ವಾ”
“ಹೌದು ಮಾಮಾ, ಹಾಗೆ ನೇರ ರಸ್ತೆ ಇದ್ದರೆ, ಒಂದೇ ವೇಗದಲ್ಲಿ, ನೇರದಿಕ್ಕಿನಲ್ಲಿ ಎಷ್ಟು ಸ್ಮೂತ್ ಆಗಿ ಕಾರ್ ಚಲಿಸುತ್ತೆ. ದೂರ ದೂರದ ವರೆಗೆ ಕಾಣಿಸುವುದರಿಂದ, ಡ್ರೈವ್ ಮಾಡುವಾಗ ಅಚಾನಕ್ಕಾಗಿ ಏನೂ ಆಗಲ್ಲ. ಅಲ್ವಾ..”
” ಹಾ! ಈ ಒಂದೇ ವೇಗದ ಚಲಿಸುವ ಕಾರ್ನ ಪೊಸಿಷನ್ ಅನ್ನು, ಒಂದೇ ದಿಕ್ಕಿನ ಚಲನೆಯನ್ನು ಗಣಿತದ ಸಮೀಕರಣದಲ್ಲಿ ಬರೆದರೆ ಅದು ಒಂದು ನೇರ ಸರಳ ರೇಖೆಯ ಸಮೀಕರಣವಾಗುತ್ತೆ ಅಂತಿಟ್ಕೋ.
ಈಗ ಚಲಿಸುವ ಕಾರು, ಪಶ್ಚಿಮಘಟ್ಟದ ಭಾಗವಾದ ಚಾರ್ಮಾಡಿ ಘಟ್ಟ ಹತ್ತಲು ಶುರುಮಾಡಿದರೆ?”
” ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೋಗಿದ್ದೀನಿ ಮಾಮಾ. ಘಾಟ್ ಸೆಕ್ಷನ್ ನಲ್ಲಿ ರಸ್ತೆ ತುಂಬಾ ತಿರುವುಗಳು ಅಲ್ವಾ. ಗುಡ್ಡದಲ್ಲಿ ಉದ್ದಕ್ಕೆ, ಅಡ್ಡಕ್ಕೆ ಮಲಗಿದ ಹಾವಿನ ಹಾಗೆ!. ತಿರುವು ಬಂದಾಗ ಡ್ರೈವರ್ ವೇಗ ತಗ್ಗಿಸಿ ಹಾರ್ನ್ ಹಾಕಿ ಬಸ್ ತಿರುಗಿಸುವಾಗ, ಒಂದು ಕಡೆ ಆಳ ಪ್ರಪಾತ. ಇನ್ನೊಂದು ಕಡೆ ಕಡಿದ ಗುಡ್ಡ. ನಂಗೆ ತುಂಬಾ ಭಯವಾಗುತ್ತಿತ್ತು ಮಾಮಾ.”
” ಡ್ರೈವರ್ ಹಾರ್ನ್ ಹಾಕುತ್ತಾನೆ ಅಂದ್ಯಲ್ಲಾ ಪುಟ್ಟೂ!. ತಿರುವುಗಳಲ್ಲಿ ಆಕಡೆಯಿಂದ ಬರುವ ವಾಹನಗಳು ಕಾಣಿಸಲ್ಲ. ಅದಕ್ಕೆ ಹಾರ್ನ್ ಹಾಕೋದು. ಇಲ್ಲಿ ಗಮನಿಸಬೇಕಾದ ಅಂಶ, ಪ್ರತೀ ನಿಮಿಷದಲ್ಲಿ ಬಸ್ಸಿನ ವೇಗ ಬದಲಾಗುತ್ತಲೇ ಇರುತ್ತೆ. ಒಂದೇ ವೇಗದಲ್ಲಿ ಚಲಿಸಲು ಸಾಧ್ಯವೇ ಇಲ್ಲ. ಚಲನೆಯ ದಿಕ್ಕು ಕೂಡಾ ಬದಲಾಗುತ್ತಾ ಇರುತ್ತೆ. ಈಗ ಬಸ್ಸಿನ ಪೊಸಿಷನ್ ಅನ್ನು ಸಮಯದ ಜತೆಗೆ ಸಮೀಕರಿಸಿದರೆ ಅದು ನೇರರೇಖೆಯ ಸಮೀಕರಣಕ್ಕೆ ಹೊಂದದು. ಅದಕ್ಕೆ ವಕ್ರರೇಖೆಯ ಸಮೀಕರಣ ಬೇಕು. ಅದಕ್ಕೆ ನಾನ್ಲಿನಿಯರ್ ಸಮೀಕರಣ ಅಂತೀವಿ. ನಿಮಿಷ ನಿಮಿಷಕ್ಕೆ ಬದಲಾಗುವ ವೇಗ, ಯಾವ ರೀತಿಯಲ್ಲಿ ಪ್ರತೀ ಕ್ಷಣದಲ್ಲಿ ಬದಲಾಗುತ್ತೆ ಅನ್ನುವುದಕ್ಕೆ, ನಾನ್ ಲಿನಿಯರ್ ಡಿಫರೆನ್ಷಿಯಲ್ ಸಮೀಕರಣ ಬೇಕು.”
” ಮಾಮಾ, ಹಾಗಿದ್ರೆ ಲೀನಿಯರ್ ಸಮೀಕರಣ ಸ್ಟ್ರೈಟ್ ಲೈನ್ ನನ್ನು ಫಾಲೋ ಮಾಡುತ್ತೆ, ನಾನ್ ಲೀನಿಯರ್ ಸಮೀಕರಣ, ವಕ್ರರೇಖೆಯನ್ನು ಅನುಸರಿಸುತ್ತೆ ಅಂತಾಯ್ತು ಅಲ್ವಾ”
” ಹೌದು ಅನು, ಸಮೀಕರಣದಲ್ಲಿ ಚರಸಂಖ್ಯೆ ಪ್ರತೀ ಹಂತದಲ್ಲಿಯೂ ಬದಲುತ್ತಿದ್ದರೆ, ಮತ್ತು ಆ ಬದಲಾವಣೆಯೂ ವಕ್ರಗತಿಯಲ್ಲಿ ಇದ್ದರೆ ಅಂತಹಾ ವಿದ್ಯಮಾನಗಳಿಗೆ ನಾನ್ಲಿನಿಯರ್ ಡಿಫರೆನ್ಷಿಯಲ್ ಸಮೀಕರಣ ಬಳಸಬೇಕು “
” ಮಾಮಾ! ನೀನು ಬರೇ ಮೋಸ!!
ಕತೆ ಹೇಳ್ತೇನೆ ಅಂತ ಕ್ಯಾಂಡಿ ತೋರಿಸಿ, ನನ್ನ ತಲೆ ಮೇಲೆ ಉಪ್ಪಿನಕಾಯಿ ಮೆಣಸು ಅರೆಯುತ್ತಿರುವೆ!.”
” ನಮ್ಮ ಲಾರೆನ್ಸ್ ಕೂಡಾ ಈ ಕಬ್ಬಿಣದ ಕಡಲೆಯನ್ನು ಜಗಿಯ ಹೊರಟಿದ್ದ. ಹವಾಮಾನ ಮುನ್ಸೂಚನೆಯ ನಾನ್ ಲೀನಿಯರ್ ಸಮೀಕರಣವನ್ನು ಆತ ಕಂಪ್ಯೂಟರ್ ಉಪಯೋಗಿಸಿ ಸಾಲ್ವ್ ಮಾಡಲು ಪ್ರಯತ್ನ ಮಾಡಿದ. ಈ ವಿಧಾನಕ್ಕೆ ಕಂಪ್ಯುಟೇಷನಲ್ ವಿಧಾನ ಅಂತಾರೆ.
ಪುಟ್ಟೂ, ನಿಂಗೆ ಗಾಲ್ಫ್ ಆಟ ಗೊತ್ತಿರಬಹುದು. ಈ ಆಟದಲ್ಲಿ ಚೆಂಡನ್ನು ದೂರದಲ್ಲಿರುವ ಒಂದು ಪುಟ್ಟ ಗುಳಿಗೆ ತಲಪಿಸಬೇಕು. ಚೆಂಡನ್ನು ಗಾಲ್ಪ್ ಬ್ಯಾಟ್ ಉಪಯೋಗಿಸಿ ಬೀಸಿ ಹೊಡೆಯುತ್ತಾನೆ ಆಟಗಾರ. ಒಂದೇ ಹೊಡೆತದಲ್ಲಿ ಆತನಿಗೆ ಚೆಂಡನ್ನು ಗುಳಿಯೊಳಗೆ ಹಾಕಲು ಆಗಲ್ಲ. ಮೊದಲ ಹಂತದಲ್ಲಿ ಆಟಗಾರ, ಚೆಂಡನ್ನು, ಗುಳಿಯ ಸಮೀಪ ತಲಪಿಸುತ್ತಾನೆ. ಮುಂದಿನ ಹಂತದ ಹೊಡೆತದಲ್ಲಿ ಚೆಂಡನ್ನು ಗುಳಿಗೆ ಇನ್ನೂ ಹತ್ತಿರ ತಲಪಿಸುತ್ತಾನೆ. ಹೀಗೆ ಮೂರ್ನಾಲ್ಕು ಹಂತದಲ್ಲಿ ಆತ ಚೆಂಡನ್ನು ಗುಳಿಯ ಹತ್ತಿರ ತಂದು ಕೊನೆಗೆ ಗುರಿ ತಲಪಿಸುತ್ತಾನೆ.
ಹಾಗೆಯೇ ಕಂಪ್ಯೂಟೇಷನಲ್ ವಿಧಾನದಲ್ಲಿ ಹಲವಾರು ಹಂತದಲ್ಲಿ ( ಇದು ಕೆಲವು ಸಾವಿರದಿಂದ ಹಲವು ಲಕ್ಷಗಳಷ್ಟು ಹಂತಗಳು. ಇದಕ್ಕೆ ಇಟರೇಷನ್ ಅಂತ ಹೆಸರು)
ಲೆಕ್ಕ ಹಾಕುತ್ತಾ ಹೋಗಿ ಕೊನೆಗೆ ಸೊಲ್ಯೂಷನ್ ತಲುಪುತ್ತಾನೆ.
ಈ ವಿಧಾನದಲ್ಲಿ ಪ್ರಾರಂಭದಲ್ಲಿ ಎಲ್ಲಾ ಚರಸಂಖ್ಯೆಗಳಿಗೆ ಒಂದು ನಿರ್ದಿಷ್ಟ ವ್ಯಾಲ್ಯೂ ಫಿಕ್ಸ್ ಮಾಡಬೇಕು. ಹೀಗೆ ಫಿಕ್ಸ್ ಮಾಡೋದಕ್ಕೆ ಇನಿಷಿಯಲ್ ಕಂಡಿಷನ್ ಅಂತಾರೆ.
ಪುಟ್ಟೂ!! ಎಂತ ಮಾತಾಡ್ತಿಲ್ಲ! ನಿದ್ದೆ ಬಂತಾ!?”
” ಇಲ್ಲ ಮಾಮಾ, ಸ್ವಲ್ಪ ಕ್ಲಿಷ್ಟವಾಗಿದೆ. ಲಾರೆನ್ಸ್ ಹವಾಮಾನ ಮುನ್ಸೂಚನೆಯ ಲೆಕ್ಕ ಹಾಕಲು ಕಂಪ್ಯೂಟರ್ ಪ್ರೋಗ್ರಾಂ ರನ್ ಮಾಡುವಾಗ ಆರಂಭದಲ್ಲಿ ಕಂಪ್ಯೂಟರ್ ಗೆ ಕೊಟ್ಟ ಇನ್ಪುಟ್ ಫೈಲ್ ನಲ್ಲಿ ಈ ಇನಿಷಿಯಲ್ ಕಂಡಿಷನ್ ಸೆಟ್ ಮಾಡಿದ ಅಂತೀಯಾ ಮಾದೇವ ಮಾಮಾ?.”
“ಹೌದು ಪುಟ್ಟು. ಆ ಆರಂಭದ ಕಂಡಿಷನ್, ವಾತಾವರಣದ ಒತ್ತಡ, ಗಾಳಿಯ ವೇಗ ಇತ್ಯಾದಿಗಳ ವ್ಯಾಲ್ಯೂ ಇದ್ದಿರಬಹುದು.
ಒಂದು ದಿನ ಆತ ಇನಿಷಿಯಲ್ ಕಂಡಿಷನ್ ನಲ್ಲಿ ಸೆಟ್ ಮಾಡಿ ಸಮೀಕರಣ ವನ್ನು ಸಾಲ್ವ್ ಮಾಡಿದಾಗ, ಚೆನ್ನಾಗಿ ಮಳೆ ಬರುತ್ತೆ ಅಂತ ಹವಾಮಾನ ಮುನ್ಸೂಚನೆ ಬಂತಂತೆ.
ಈಗ ಆತ ಒಂದು ಅನೂಹ್ಯ ಅನುಭವಕ್ಕೆ ಒಳಗಾದ.ಆತ ಏನು ಮಾಡಿದನೆಂದರೆ,
ಅದೇ ಇನಿಷಿಯಲ್ ಕಂಡಿಷನ್ ನಲ್ಲಿ ಆತ ೦.೦೦೦೦೦೧ ಅಂದರೆ ಡೆಸಿಮಲ್ ನಿಂದ ಆರನೇ ಸಂಖ್ಯೆಯನ್ನು ಬದಲಿಸಿ ಪುನಃ ಕಂಪ್ಯುಟೇಷನ್ ಮಾಡಿದ. (ಈ ಬದಲಾವಣೆ ಅತ್ಯಂತ ಅತ್ಯಂತ ಚಿಕ್ಕ ಬದಲಾವಣೆ. ಒಂದು ಚಿಟ್ಟೆ ರೆಕ್ಕೆ ಬೀಸಿದರೆ ಗಾಳಿಯಲ್ಲಿ ಆಗುವ ಬದಲಾವಣೆ ಯಷ್ಟು ಚಿಕ್ಕದ್ದು.)
ಹೀಗೆ ಮಾಡಿದಾಗ ಆತನಿಗೆ ಸಿಕ್ಕಿದ ಫಲಿತಾಂಶ ನೋಡಿ ಆತ ದಂಗಾದ!. ಕಂಪ್ಯೂಟರ್ ಹೇಳಿತ್ತು, ಬಿಸಿ ಸುಂಟರಗಾಳಿ, ಬೀಸುತ್ತೆ! ಅಂತ.
ಎಲ್ಲಿ ತಂಪು ಮಳೆ, ಎಲ್ಲಿ ಬಿಸಿ ಸುಂಟರಗಾಳಿ.
ಇನಿಷಿಯಲ್ ಕಂಡಿಷನ್ ನಲ್ಲಿ ಅತ್ಯಂತ ಕಡಿಮೆ ಬದಲಾವಣೆ ಮಾಡಿದರೂ ಫಲಿತಾಂಶ ಅನೂಹ್ಯವಾಗಿ ಬದಲಾಯಿತು.
ಇದಕ್ಕೆ ಲಾರೆನ್ಸ್
“ಬಟರ್ ಫ್ಲೈ ಎಫೆಕ್ಟ್” ಅಂತ ಹೆಸರಿಟ್ಟ.”
” ಮಾಮಾ, ಮೊನ್ನೆ ಯೋಗ ಮತ್ತು ವಿಜ್ಞಾನ ವಿವರಿಸುವೆ ಅಂತ ಪ್ರಾಮಿಸ್ ಮಾಡಿ, ಈಗ ಈ ಬಟರ್ ಫ್ಲೈ ಇಫೆಕ್ಟ್ ಬಗ್ಗೆ ಹೇಳ್ತಿರುವೆ.. ?”
” ಪುಟ್ಟು, ಅಲ್ಲಿಗೇ ಬರುವೆ. ಒಂದು ಬಟರ್ ಫ್ಲೈ ರೆಕ್ಕೆ ಬಡಿದಾಗ ಗಾಳಿಯ ಅಲೆಯಲ್ಲಿ ಆಗುವ ಬದಲಾವಣೆ, ಹಂತ ಹಂತವಾಗಿ ಬೆಳೆದು ಸುಂಟರಗಾಳಿ ಆಗುವ ಸಾಧ್ಯತೆಯನ್ನು ಲಾರೆನ್ಸ್ ಹೇಳಿದ ಅಲ್ವಾ.
ಇದು ಆತ ವೈಜ್ಞಾನಿಕ ಸಂಶೋಧನಾ ಪ್ರಬಂಧವಾಗಿ ಪ್ರಕಟ ಮಾಡಿದ್ದು ಸುಮಾರು ೧೯೭೦ರ ಆಸುಪಾಸಿನಲ್ಲಿ. ಆ ನಂತರದಲ್ಲಿ ಜಗತ್ತಿನ ಎಲ್ಲಾ ವಿದ್ಯಮಾನಗಳೂ ನಾನ್ಲೀನಿಯರ್ ವಿದ್ಯಮಾನಗಳು ಅಂತ ವಿಜ್ಞಾನದ ತಿಳಿವಿಗೆ ಬಂತು ಅನಬಹುದು.
ಈ ಜೀವಜಗತ್ತಿನ ಅಸಂಖ್ಯಾತ ಜೀವಿಗಳಿರಬಹುದು, ವಸ್ತು ಜಗತ್ತಿನ ಅಣು ಪರಮಾಣುಗಳು ಗ್ರಹ ನಕ್ಷತ್ರಗಳಿರಬಹುದು, ಎಲ್ಲವೂ ಪರಸ್ಪರ ಒಂದಲ್ಲ ಒಂದು ರೀತಿಯಲ್ಲಿ ನಾನ್ಲೀನಿಯರ್ ಸಮೀಕರಣದ ಇನಿಷಿಯಲ್ ಕಂಡಿಷನ್ ನನ್ನು ಪ್ರಭಾವಿಸುವಂತಹವೇ. ಇಲ್ಲಿ ಅತ್ಯಂತ ಮುಖ್ಯ ವಾದದ್ದೇನೆಂದರೆ, ಫಲಿತಾಂಶ ಎಂದಿಗೂ ಸೆನ್ಸಿಟಿವ್ ಟು ಇನಿಷಿಯಲ್ ಕಂಡಿಷನ್ ಅಂತ.”
” ಮಾಮಾ, ಇದಕ್ಕೂ ಯೋಗವಿಜ್ಞಾನಕ್ಕೂ ಎಂತ ಸಂಬಂಧ?”
” ಸಂಬಂಧವಿದೆ ಪುಟ್ಟು. ನಮ್ಮ ಅಸ್ತಿತ್ವ, ನಮ್ಮ ದೇಹ ವ್ಯವಸ್ಥೆ ನಮ್ಮ ಮಾನಸಿಕ ಅವಸ್ಥೆ, ನಮ್ಮ ದೇಹ ಮತ್ತು ಮನಸ್ಸಿನೊಳಗೆ ನಡೆಯುವ ಅಸಂಖ್ಯಾತ ವಿದ್ಯಮಾನಗಳು ಕೂಡಾ ಸೆನ್ಸಿಟಿವ್ ಟು ಇನಿಷಿಯಲ್ ಕಂಡಿಷನ್. ನಿಂಗೆ ನಿನ್ನ ಅಮ್ಮ ಅಥವಾ ಶಾಲೆಯ ಅತ್ಯಂತ ನೆಚ್ಚಿನ ಟೀಚರ್ ಬೈದರೆ ಅದು ನಿನ್ನ ಸಂವೇದನೆಯನ್ನು ಕೆಣಕಿ, ಓತಪ್ರೋತವಾಗಿ ಭಾವನೆಗಳನ್ನು, ಯೋಚನೆಗಳನ್ನು ಹುಟ್ಟುಹಾಕಿ ಮನಸ್ಸಿನ ಹವಾಮಾನ ಅಲ್ಲೋಲಕಲ್ಲೋಲ ಆಗುತ್ತೆ ಅಲ್ವಾ.
ಜರ್ಮನಿಯಲ್ಲಿ ಹಿಂದೊಮ್ಮೆ ಓರ್ವ ವಿದ್ಯಾರ್ಥಿ ವರ್ಣಚಿತ್ರಕಲೆಯಲ್ಲಿ ಬಹಳ ಆಸಕ್ತನಾಗಿದ್ದ. ಆತ, “ಅಕಾಡಮಿ ಆಫ್ ಫೈನ್ ಆರ್ಟ್ಸ್” ವಿಯೆನ್ನಾ ಗೆ ಅಧ್ಯಯನ ಮಾಡಲು ಅಪ್ಲೈ ಮಾಡಿದ. ಆತನ ಅಪ್ಲಿಕೇಶನ್ ಅನ್ನು ಓರ್ವ ಪ್ರೊಫೆಸರ್ ರಿಜೆಕ್ಟ್ ಮಾಡಿದರಂತೆ ( ಬಹುಷಃ ಅವರು ಜ್ಯೂಯಿಷ್ ಸಮುದಾಯದವರು) ನೊಂದುಕೊಂಡ ಆ ಹುಡುಗನ ‘ಸೆನ್ಸಿಟಿವ್ ಟು ಇನಿಷಿಯಲ್ ಕಂಡಿಷನ್’ ಮನಸ್ಸು ಮುಂದೆ ಆತನನ್ನು ಹಿಟ್ಲರ್ ನನ್ನಾಗಿ ಮಾಡಿತು ಅಂತ ಇಂಟರ್ನೆಟ್ ನಲ್ಲಿ ಓದಿರುವೆ. ಓರ್ವ ಸೃಜನಶೀಲ ವರ್ಣಚಿತ್ರಕಾರನಾಗಬೇಕಾಗಿದ್ದ ಹುಡುಗ, ಏನಾದ, ಅದರಿಂದ ಜಗತ್ತಿನಲ್ಲಿ ಏನೆಲ್ಲಾ ಅನಾಹುತ ನಡೆಯಿತು ಅಲ್ವಾ.
ಹಾಗಾಗಿ, ನಮ್ಮ ಯೋಗವಿಜ್ಞಾನದಲ್ಲಿ ಮನಸ್ಸು, ದೇಹ ಮತ್ತು ಪ್ರಾಣ( ಉಸಿರು) ಇವುಗಳ ಸಮನ್ವಯಕ್ಕಿಂತ ಮೊದಲು ನಾವು ಪ್ರಕೃತಿ ಮತ್ತು ವಿಶ್ವದ ಜತೆಗೆ ಹೇಗೆ ಸಂಬಂಧ ಬೆಳೆಸಬೇಕು ಎಂಬ ವಿಧಾನಗಳಿವೆ.
ಪತಂಜಲಿ ಎಂಬ ವಿಜ್ಞಾನಿ ಋಷಿಯ ಯೋಗಸೂತ್ರದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಯೋಗಸಾಧನೆಯನ್ನು ವಿವರಿಸಲಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಹಂತಗಳವು. ಇವುಗಳಲ್ಲಿ ಮೊದಲ ಎರಡು ನಮ್ಮ ಸಂವೇದನಾ ಶೀಲ ( ಸೆನ್ಸಿಟಿವ್ ಟು ಇನಿಷಿಯಲ್ ಕಂಡಿಷನ್) ಜೀವನ ವಿಧಾನದ ‘ಡೂ’ಸ್ ಅಂಡ್ ‘ಡೋಂಟ್’ಸ್ ಅನ್ನು ವಿವರಿಸುತ್ತೆ.
ಇದರ ಬಗ್ಗೆ ಸ್ವಾಮಿ ವಿವೇಕಾನಂದ ಅವರು ಬರೆದ ‘ರಾಜಯೋಗ’ ಪುಸ್ತಕ ಓದಬಹುದು ಪುಟ್ಟೂ.”
“ಮಾಮ ತುಂಬಾ ವಿಷಯ ತಿಳಿಸಿದಿ. ಅಂತೂ ಜಗತ್ತಿನ ವಿದ್ಯಮಾನಗಳೆಲ್ಲವೂ ‘ಸೆನ್ಸಿಟಿವ್ ಟು ಇನಿಷಿಯಲ್ ಕಂಡಿಷನ್’ ಅಂತಾಯ್ತು. ಹಾಗಾಗಿ, ಯಾವುದೇ ಜೀವಿಯನ್ನು, ಕಾಯವನ್ನು, ಸಣ್ಣದು ಅಂತ ನಿರ್ಲಕ್ಷಿಸುವಂತಿಲ್ಲ. ಅತ್ಯಂತ ಪುಟ್ಟ ಚಿಟ್ಟೆಯ ರೆಕ್ಕೆ ಬಡಿತವೂ ಸುಂಟರಗಾಳಿಗೆ ಕಾರಣವಾಗಬಹುದು. ಅಲ್ವಾ ಮಾಮಾ”
” ಹೌದು ಅನು ಪುಟ್ಟು. ಅದಕ್ಕಾಗಿ ನಾವು ಎಲ್ಲವನ್ನೂ ಸಮಗ್ರವಾಗಿ ಏಕತ್ವದಿಂದ ನೋಡಬೇಕು. ಹಾಗೊಂದು ಸಮಗ್ರವೂ ಪ್ರೀತಿಪೂರ್ಣವೂ ಆದ ದೃಷ್ಟಿಯಿಂದ ಯೋಗವಿಜ್ಞಾನವನ್ನು ಮುಂದಿನ ವಾರ ತಿಳಿಯೋಣ ಆಯ್ತಾ..
” ಆಯ್ತು ಮಾದೇವ ಮಾಮಾ.. 💃💃💃”
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್