ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೆರುವಿನ ಪವಿತ್ರ ಕಣಿವೆಯಲ್ಲಿ

ನಿರಂತರ ಪೆರುವಿನ ಕಣಿವೆಗಳಲ್ಲಿ ಅಮೇಜಾನ್ ನದಿಕಾಡುಗಳಲ್ಲಿ ಸುತ್ತಾಡಿಕೊಂಡು ಬಂದ ಅನುಭವ ನೀಡಿದ್ದು ನನ್ನ ಮೆಚ್ಚಿನ ಲೇಖಕಿ “ನೇಮಿಚಂದ್ರ” ಅವರ “ಪೆರುವಿನ ಪವಿತ್ರ ಕಣಿವೆಯಲ್ಲಿ”ಪುಸ್ತಕ…
ಕನ್ನಡದ ಬಹು ಅಪರೂಪದ ಲೇಖಕಿ ನೇಮಿಚಂದ್ರ. ಅವರ ಬರಹಗಳನ್ನು ತುಂಬಾ ಮೊದಲೇ ಮೆಚ್ಚಿಕೊಂಡವಳು ನಾನು. ಯಾದ್ ವ ಶೇಮ್ ಓದಿದಾಗ ಅವರ ಪ್ರಬುದ್ಧಬರಹದ ಬಗ್ಗೆ ಬಹಳಷ್ಟು ಖುಶಿಯಾಗಿತ್ತು. ಇದೀಗ ಪೆರುವಿನ ಚರಿತ್ರೆಯ ಪುಟಗಳ ಓದುವಾಗ ಲೇಖಕಿ ಅಲ್ಲೆಲ್ಲ ನಮ್ಮನ್ನು ಜೊತೆಜೊತೆಯಾಗಿ ನಡೆದಾಡಿಸಿಕೊಂಡು ಬರುತ್ತಿದ್ದಾರೆ ಅನ್ನಿಸುತ್ತದೆ. ಅದೊಂದು ಗುಂಗು ಹೊತ್ತಿಸಿದೆಯೆಂದರೆ ಪುಸ್ತಕ ಬರೀ ಒಂದು ಪ್ರವಾಸ ಕಥನ ಅನ್ನಿಸುವುದಿಲ್ಲ. ಅದು ಪೆರು ಎಂಬ ಪುಟ್ಟ ದೇಶದ ಆತ್ಮಚರಿತ್ರೆಯಂತಿದೆ.

ಪುಸ್ತಕದಲ್ಲಿರುವ ಯಾವುದೇ ಒಂದು ಪೇಜು ಅಧ್ಯಾಯದ ಬಗ್ಗೆ ಹೇಳಹೊರಟರೆ ಅದನ್ನು ಪ್ರತಿಬಿಂಬಿಸುವುದಾಗಲೀ ವಿಮಶರ್ಿಸುವುದಾಗಲೀ ಮಾಡಲಾಗದಂತದು. ಒಂದು ಪುಸ್ತಕವ ಓದುವ ರಸಾನುಭವ ಅದನ್ನು ಓದಿದವರಿಗೆ ಮಾತ್ರ ದಕ್ಕುವಂತದ್ದು. ಹಾಗಾಗಿ ಹೂರಣದ ಕುರಿತು ಏನೂ ಹೇಳುವುದಿಲ್ಲ. ಹೇಳಲೇಬೇಕಾದ ಒಂದೆರಡು ಮಾತುಗಳೆಂದರೆ ಅಧ್ಯಾತ್ಮ ಮತ್ತು ಪ್ರಕೃತಿಯನ್ನು ಮೂಲವಾಗಿಟ್ಟುಕೊಂಡ ನಾಗರಿಕತೆಗಳಿಗೆಲ್ಲ ಆತ್ಮವಿದೆ. ಚರಿತೆಯಿದೆ, ಕತೆಗಳಿವೆ. ಉಸಿರಿದೆ.. ಇದನ್ನು ಲೇಖಕಿ ಅಲ್ಲಲ್ಲಿ ತುಂಬಾ ಚಂದವಾಗಿ ಕಟ್ಟಿಕೊಡುತ್ತಾರೆ.
ಭಾರತ ಮತ್ತು ಇತರ ಪುರಾತನ ನಾಗರಿಕತೆಗಳ ನಡುವಿನ ಸಾಮ್ಯತೆ ಮತ್ತು ಭಿನ್ನತೆಯನ್ನು ಕೂಡ ತುಂಬಾ ಚಂದವಾಗಿ ಹೇಳುತ್ತಾರೆ. ಅಮೇಜಾನ್ ನದಿಯ ಮೇಲಿನ ಪಯಣ ಮಾತ್ರ ಒಮ್ಮೆಯಾದರೂ ಆ ನದಿಯ ತೀರ ಸುತ್ತಾಡಲೇಬೇಕು ಅನ್ನುವ ಹಂಬಲ ಹುಟ್ಟುಹಾಕುವಂತದ್ದು. ಪೆರುವಿನ ಕಣಿವೆಗಳು ಅಲ್ಲಿನ ನಾಸ್ಕಾ ಗೆರೆಗಳು,ಇನ್ಕಾ ಚರಿತ್ರೆಯ ಪುಟಗಳು ಯಾವುದನ್ನೂ ಮಿಸ್ ಮಾಡಿಕೊಳ್ಳುವಂತಿಲ್ಲ. ಪುಟಪುಟವನ್ನು ಸಾವಧಾನವಾಗಿ ನಿಂತು ನಿಂತು ಓದಿ ಅರಗಿಸಿಕೊಳ್ಳುವ ಅದ್ಭುತ ನಾಡನ್ನು ತೆರೆದಿಟ್ಟ ಲೇಖಕಿಗೆ ಮತ್ತೊಮ್ಮೆ ಪ್ರೀತಿಯ ಧನ್ಯವಾದಗಳ ಹೇಳುತ್ತ ಕಲ್ಪನೆಗಳಿಗಿಂತ ನಿಖರವಾದ ಚರಿತ್ರೆಯ ಪುಟಗಳ ಒಮ್ಮೆ ತೆರೆಯಬೇಕೆನ್ನಿಸದರೆ ಮರೆಯದೇ ಕೈಗೆತ್ತಿಕೊಳ್ಳಿ..
“ಪೆರುವಿನ ಪವಿತ್ರ ಕಣಿವೆಯಲ್ಲಿ”

( ಲೇಖಕಿ : ನೇಮಿಚಂದ್ರ
ಕೃತಿ : ಪೆರುವಿನ ಪವಿತ್ರ ಕಣಿವೆಯಲ್ಲಿ)