ಅಭಿನವ ಪ್ರಕಾಶನ ಪ್ರಕಟಿಸಿರುವ ಪ್ರಜ್ಞಾ ಮತ್ತಿಹಳ್ಳಿಯವರ ಪ್ರಥಮ ಕಥಾಸಂಕಲನ (ಹತ್ತನೆಯ ಕೃತಿ) ಬಿಟ್ಟಸ್ಥಳ ಧಾರವಾಡದಲ್ಲಿ ಲೋಕಾರ್ಪಣೆಗೊಂಡಿದೆ.
ಪುಸ್ತಕವನ್ನು ಬಿಡುಗಡೆಗೊಳಿಸಿದ ಖ್ಯಾತ ಕತೆಗಾರ ರಾಘವೇಂದ್ರ ಪಾಟೀಲರು ಸಂಕಲನದ ಕತೆಗಳು ಯಾವುದೇ ಇಸಂ ಗಳ ಹಿಡಿತಕ್ಕೆ ಸಿಲುಕದೇ ತಮ್ಮದೇ ಆದ ಪ್ರತ್ಯೇಕತೆಯನ್ನು ಮೆರೆದಿದ್ದಾವೆ ಎಂದು ಅಭಿಪ್ರಾಯಪಟ್ಟರು.
ಒಳ್ಳೆಯ ಕೃತಿಯು ತನ್ನನ್ನು ಅರ್ಥೈಸಿಕೊಳ್ಳುವ ಪ್ರಮಾಣಗಳನ್ನು ತನ್ನೊಳಗೇ ದೊರಕಿಸಿಕೊಳ್ಳಬೇಕೇ ಹೊರತು ಹೊರಗಿನ ಪ್ರಮಾಣಗಳನ್ನು ಅವಲಂಬಿಸಿಕೊಂಡಿರಬಾರದು. ಇದಕ್ಕೆ ಉದಾಹರಣೆಯಾಗಿ ಆಕಾಶಕ್ಕೊಂದು ಮೆಟ್ಟಿಲು ಎಂಬ ಕತೆಯನ್ನು ನೋಡಬಹುದು. ತನ್ನದೇ ಆದ ವಿಲಕ್ಷಣ ವ್ಯಕ್ತಿತ್ವವನ್ನು ಹೊಂದಿದ ಚಂದಗೋಪ ಜಾಗತೀಕರಣದ ಪರಿಣಾಮಗಳಾದ ವಿದೇಶಿ ಕಂಪನಿಗಳ ಉದ್ಯೋಗಗಳಲ್ಲಿ ಮಗ-ಸೊಸೆ ಸೇರಿಕೊಂಡು ಅವರ ಮಗುವಿನ ಪಾಲನೆಗಾಗಿ ಹೆಂಡತಿಯೂ ವಿದೇಶವಾಸಿಯಾಗಿ ಅನಾಥನಾಗಿಬಿಡುವ ನೋವನ್ನು ದಾಖಲಿಸಿ ಪ್ರಮಾಣ ನೀಡುತ್ತದೆ. ಸೈಡ್ ವಿಂಗ್ ಕತೆಯಲ್ಲಿ ಅತ್ಯಂತ ಜೀವಂತಿಕೆಯಿಂದ ಕೂಡಿದ ತುಳಸಿ ಪಾತ್ರ ಬೇಜವಾಬ್ದಾರಿಯ ಗಂಡನನ್ನು ತೊರೆಯುವುದನ್ನು ಸಮರ್ಥಿಸಿಕೊಳ್ಳುವ ಪ್ರಮಾಣವನ್ನು ಒದಗಿಸುತ್ತದೆ.
ಸಾಮಾನ್ಯವಾಗಿ ಬಹಳಷ್ಟು ಕಥಾಸಂಕಲನಗಳನ್ನು ಓದೊವಾಗ ನನ್ನ ಅನುಭವವೇನೆಂದರೆ ಕೊನೆಯ ಕತೆಗೆ ಬರುವಷ್ಟರಲ್ಲಿ ಮೊದಲ ಕತೆಗಳು ಮರೆತು ಹೋಗಿರುತ್ತದೆ. ಆದರೆ ಕತೆ ಕಟ್ಟುವ ಕೌಶಲ್ಯದಲ್ಲಿ ಪ್ರಜ್ಞಾ ಅವರು ಎಷ್ಟು ಪಳಗಿದ್ದಾರೆಂದರೆ ಪ್ರತಿ ಕತೆಯೂ ಅದರ ಎಲ್ಲಾ ಅನುಭವಗಳೊಂದಿಗೆ ನಮ್ಮ ಸ್ಮರಣೆಯಲ್ಲಿ ಗಟ್ಟಿಯಾಗಿ ಕೂತುಗೊಳ್ಳುತ್ತದೆ. ಭಾಷೆಯ ವಿಷಯದಲ್ಲಿ ಹೇಳುವುದಾದರೆ ಗಾಂಗೇಯ ದಂತಹ ಕತೆಯಲ್ಲಿ ಭಾಷೆಯು ಕಾವ್ಯಸ್ವರೂಪಿಯಾಗಿ ಜುಳುಜುಳು ಹರಿಯುವಷ್ಟು ಸಶಕ್ತವಾಗಿದೆ. ನಮ್ಮ ದೃಷ್ಟಿಕೋನವನ್ನು ಹಿಗ್ಗಿಸುವ, ಬದುಕಿನ ಇತ್ಯಾತ್ಮಕತೆಯನ್ನು ಎತ್ತಿ ಹಿಡಿಯುವ ಕೃತಿಗಳನ್ನು ನಾವು ಓದಬೇಕು ಹಾಗೂ ಮೆಚ್ಚಬೇಕು. ಪ್ರಜ್ಞಾ ಅವರ ಕೃತಿಯನ್ನು ಓದಿದಾಗ ಇಂತಹ ಧನಾತ್ಮಕ ನೋಟವೊಂದು ಎದ್ದು ಕಾಣುತ್ತಿದೆ ಎಂದು ಅನೇಕ ಕತೆಗಳ ಕುರಿತು ಚರ್ಚಿಸಿದರು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ