- ಕಾನ್ ಬಾನ್ - ನವೆಂಬರ್ 12, 2020
- ನಾಳೆ ಶನಿವಾರ…! - ಸೆಪ್ಟೆಂಬರ್ 18, 2020
- ಭೂಮಿಗೆ ಗಾಯವಾದೀತು - ಸೆಪ್ಟೆಂಬರ್ 5, 2020
William Shakespeare
“We know what we are but know not what we may be.”
ಹೆಬ್ಬಟ್ಟಿಗಾದ ಗಾಯವನ್ನು ಒತ್ತಿ ಹಿಡಿದ ರಾಮದೇವ ”ಕಿಟ್ಟಿ.. ಬಾಗಿಲ ಹಿಂದಿರುವ ಸೊಪ್ಪಿನ್ ಲೇಹ ತಗೊಂಡ ಬಾ “ಎಂದು ಹೇಳಿದರು.ಕಿಟ್ಟಿ ತಂದ ಸೊಪ್ಪಿನ ಲೇಹವನ್ನು ಗಾಯದ ಸುತ್ತಲೂ ಹಚ್ಚುತ್ತಿರುವಾಗ ”ಕಿಟ್ಟಿ..ಇವತ್ತು ಹ್ಯಾಂಗಾದ್ರು ಮಾಡಿ ಲೇಹವನ್ನು ಒಂದು ಹಂತಕ್ಕೆ ಕಾಯಿಸಿ ಅದ್ರಿಂದ ಬಂಗಾರ ಬರುವಂತೆ ಮಾಡಲೆಬೇಕು”,ತಮ್ಮ ಮಾತು ಮುಗಿಯುವಷ್ಟರಲ್ಲಿ ರಾಮದೇವರು ಒಳಕೋಣೆಯಲ್ಲಿ ಪ್ರತಿಷ್ಟಾಪಿತರಾಗಿದ್ದರು.ಕಿಟ್ಟಿ “ಗುರುಜಿ“ ಎಂದು ಹಿಂಬಾಲಿಸತ್ತಲೆ ರಾಮದೇವರ ಹಿಂದೆಯೆ ನಡೆದು ಹೋದ.”ಕಿಟ್ಟಿ ಇವತ್ತು ನಿಂಗೆ ಗಿಡಮೂಲಿಕೆಗಳಿಂದ ಬೆಳ್ಳಿ ಮಾಡೋದನ್ನು ಹೇಳ್ಕೊಡಾಕಾಗಲ್ಲ.ನೀನು ಅದನ್ನ ಸ್ವಾರ್ಥಕ್ ಬಳಸಲ್ಲಾ ಅನ್ನೊದು ನಂಗೂ ಇನ್ನೂ ಖಾತ್ರಿಯಾಗಿಲ್ಲ” ಅಂತ ಕಡ್ಡಿ ಮುರಿದಂಗೆ ಹೇಳಿ ಪ್ರಯೋಗಾಲಯದ ಕೊಣೆಯ ಬಾಗಿಲನ್ನು ಹಾಕಿ ಬಂಗಾರವನ್ನು ತಯಾರಿಸುವ ಪ್ರಕ್ರಿಯೆಯ ಮೊದಲ ಭಾಗವಾದ ಗಿಡಮೂಲಿಕಗಳಿಂದ ಲೇಹ ಮತ್ತು ಹಾಲನ್ನು ತಯಾರಿಸಲು ಸಿಧ್ದರಾದರು.ಕಿಟ್ಟಿ ಬಾಗಿಲೆದುರಲ್ಲೆ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದ. ಎಲ್ಲಾ ತಯಾರಾದ ಮೇಲೆ ಕೋಣೆಯ ಬಾಗಿಲನ್ನು ತೆರೆದು ಕಿಟ್ಟಿಯನ್ನು ಒಳ ಕರೆದು “ನೋಡ್ ಕಿಟ್ಟಿ ನಂಗೆ ಅನ್ನಿಸದಂಗ ಗಿಡಮೂಲಿಕೆಗಳಿಂದ ಕೇವಲ ಇನ್ನೊಂದರೆಡು ದಿನದಾಗ ಬಂಗಾರವೂ ಉತ್ಪಾದನೆಯಾಗ ಬಹುದು.ಅದಾದ ಮೇಲೆ ಮೊದಲು ನಿಂಗೆ ಬೆಳ್ಳಿ ಮಾಡೋದ್ ಕಲಿಸಿದಾದ್ ಮೇಲ್ ಬಂಗಾರದ್ ಬಗ್ಗೆಯೂ ಹೇಳಿಕೊಡ್ತೀನಿ.ಆದರೆ ಯಾವ್ದೇ ಕಾರಣ್ಕೂ ಆ ವಿದ್ಯೆ ನೀನು ಸ್ವಾರ್ಥಕ್ಕೆ ಬಳಸಬಾರದು” ಅಂತ ಹೇಳಿ ಒಳ ಬರಲು ಅನುಮತಿ ಕೊಟ್ಟರು.
.”ನೋಡ್ ಕಿಟ್ಟಿ ಇದನ್ನ ತಾಳಕ ಅಂತ ಕರಿತಾರೆ,ಮೂವತ್ತೆರೆಡು ಪಾಷಾಣಗಳಲ್ಲಿ ಇದು ಒಂದು,ಇದು ಭೂಮಿಯಲ್ಲಿ ಸಿಗುತ್ತೆ “ ಅಂತ ಹೇಳಿ ಮೇಲು ನೋಟಕ್ಕೆ ಕಲ್ಲಿನಂತೆ ಕಾಣುವ ಬಂಗಾರ ಬಣ್ಣದ ಒಂದು ಪದಾರ್ಥವನ್ನು ತೋರಿಸಿದರು.ನಂತರ ”ನೋಡು ಇದು ತವರ ಒಂದು ಲೋಹ” ಮತ್ತು ಇನ್ನೊಂದು ಗಾಜಿನ ಸೀಸೆಯಲ್ಲಿದ್ದ ದ್ರಾವಣವನ್ನು ತೋರಿಸಿ “ಇದು ಪಾದರಸ” ಅಂತ ವಿವರಿಸಿದರು’ ತಾಳಕಕ್ಕೆ ಮೊದಲೆ ತಯಾರಿಸಿದ್ದ ಗಿಡಮೂಲಿಕಗಳ ಲೇಹವನ್ನು ಮೆತ್ತಲು ಶುರು ಮಾಡಿದರು.”ಗುರುಜಿ ಇದನ್ನು ಯಾವ ಗಿಡದಿಂದ ತಯಾರಿಸಲಾಗಿದೆ?” ಎಂದು ಕೇಳಿದಾಕ್ಷಣ ರಾಮದೇವರು ಉಗ್ರನಾಗಿ ”ಕಿಟ್ಟಿ ನಾನ್ ಮೊದಲೆ ಹೇಳಿನಲ್ಲಾ ಗಿಡಮೂಲಿಕೆಗಳ ವಿಚಾರ ಈಗ್ಲೆ ಹೇಳಾಕಾಗಲ್ಲ” ಅಂತ ಕಣ್ಣು ಕೆಂಪು ಮಾಡಿ ಹೇಳಿ ಮುಗಿಸಿದ್ದರು.ರಾಮದೇವರ ಖಡಕ್ ಉತ್ತರ ಕೇಳಿ ಕಿಟ್ಟಿ ಉಸಿರೆತ್ತದಂತೆ ಮೊಗಮ್ಮಾಗಿ ಮೂಲೆ ಸೇರಿದ್ದ.
ಅದು ಸುಮಾರು ಐದು ವರುಷಗಳ ಹಿಂದಿನ ಮಾತು.
ರಾಮದೇವರು ಪಟ್ಟಣದಲ್ಲಿ ಊರಾಚೆ ಇರುವ ಒಂದು ಮನೆ ಬಾಡಿಗೆ ಪಡೆದು ತಮ್ಮಷ್ಟಕ್ಕೆ ತಾವು ಪ್ರಯೋಗಗಳಲ್ಲಿ ತಲ್ಲೀನವಾಗಿ ಬಿಟ್ಟರುತಿದ್ದರು.ಈ ಕಡೆ ನಗರ ಪ್ರದೇಶವೂ ಆಗಿರದೆ ಆ ಕಡೆ ಹಳ್ಳಿಯೂ ಆಗಿರದ ಆ ಪಟ್ಟಣದಲ್ಲಿ ಹಾಗೂ ಆ ತರಹದ ಬೇರೆ ಇನ್ಯಾವುದಾದರು ಪಟ್ಟಣದಲ್ಲಿರುವ ವಾಸಿಗಳಿಗೆ ಬೇರೆಯವರ ಸುದ್ದಿಯೆ ಬಹುಮುಖ್ಯ.ಹಾಗಾಗಿ ಒಂದಲ್ಲ ಒಂದು ವಿಚಾರವಾಗಿ ರಾಮದೇವನನ್ನು ಚರ್ಚೆಗೆ ಎಳೆದು ತಂದು ತಮ್ಮ ಬೇಸರ ನೀಗಿಸಿಕೊಳ್ಳುತಿದ್ದರು ಮತ್ತು ಸಮಯವನ್ನು ಸಾಗಿಸುತ್ತಿದ್ದರು.ಇದರ ಫಲವೆನ್ನುವಂತೆ ರಾಮದೇವರ ಬಗ್ಗೆ ಹತ್ತಾರು ಕಥೆಗಳನ್ನು ಕಟ್ಟಿದರು.ಅದಕ್ಕೆ ಪೂರಕವೆನ್ನುವಂತೆ ರಾಮದೇವರು ಸಹಾ ತೀರ ರಹಸ್ಯವಾಗಿಯೆ ಬದುಕುತಿದ್ದರು.ಯಾರೊಂದಿಗೂ ಆತ್ಮೀಯ ಮಾತು ಕತೆಯಾಗಲಿ ಮತ್ತು ಸಹಜವಾದ ಉಭಯಕುಷಲೋಪರಿಯಾಗಲಿ ಇರಲಿಲ್ಲ.ತಾನಾಯಿತು ಮತ್ತು ತನ್ನ ಪ್ರಯೋಗಗಳಾಯಿತು.ಆದರೆ ದಿನಂಪ್ರತಿ ಬ್ರಾಹ್ಮಿ ಮುಹೂರ್ತಕ್ಕೆ ಮನೆಯಿಂದ ಕಾಡಿನ ಕಡೆ ನಡೆದು ಸುಮಾರು ಎರೆಡು ಮೂರು ತಾಸಿನ ನಂತರ ಮನೆಗೆ ವಾಪಸ್ಸಾಗಿರುತ್ತಿದ್ದರು.ಇಡಿ ಪಟ್ಟಣದ ಜನತೆಗೆ ರಾಮದೇವರ ಪರಿಚಿತವಾದ ಜೀವನ ಶೈಲಿಯೆಂದರೆ ಕೇವಲ ಇದು ಮಾತ್ರ.ಇದನ್ನು ಬಿಟ್ಟು ಬೇರೆಲ್ಲವೂ ರಹಸ್ಯವಾಗಿಯೆ ಇರುತ್ತಿತ್ತು.ಈ ರಹಸ್ಯದ ಪರಿಣಾಮಾವಾಗಿಯೆ ಪಟ್ಟಿಣವಾಸಿಗಳು ಕಟ್ಟಿದ ಕಥೆಗಳು ಇನ್ನಷ್ಟು ಬಣ್ಣ ಬಣ್ಣಗಳಾಗಿ ಊರ ತುಂಬೆಲ್ಲಾ ರಾಚಿಸುತ್ತಿದ್ದವು.
ಒಂದು ದಿನ ಆಕಸ್ಮಿಕವಾಗಿ ಕಲ್ಲನ್ನು ಎಡವಿ ಬಿದ್ದು ಹಣೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಯುವತಿಯನ್ನು ತನ್ನ ಮನೆಯ ಸನಿಹದಲ್ಲಿಯೆ ಗಮನಿಸಿದ ರಾಮದೇವರು, ಅವಳಿಗೆ ರಸ್ತೆಯಲ್ಲಿಯೆ ತನ್ನ ಬಳಿಯಿದ್ದ ಗಿಡಮೂಲಿಕೆಗಳಿಂದ ಚಿಕಿತ್ಸೆ ಮಾಡಿದ್ದರು.ಆ ಕ್ಷಣದ ರಾಮದೇವರ ಚಿಕಿತ್ಸೆಯ ಸಹಾಯದಿಂದ ಯುವತಿ ಒಂದು ತೀಕ್ಷ್ಣ ಪ್ರಮಾಣದ ಅಪಾಯದಿಂದ ಪರಾಗಿದ್ದಳು.ಈ ಒಂದು ಘಟನೆ ಊರ ಜನತೆ ರಾಮದೇವರನ್ನು ನೋಡುವ ಪರಿಯನ್ನೆ ಬದಲಿಸಿತ್ತು.ಅಲ್ಲದೆ ಎಲ್ಲಾ ತೆರೆನಾದ ಖಾಯಿಲೆ , ಘಾಯಗಳಿಗೆ ರಾಮದೇವರ ಬಳಿ ಬರಲು ಪ್ರಾರಂಭಿಸಿದರು.ತನ್ನಲ್ಲಿರುತ್ತಿದ್ದ ಗಿಡಮೂಲಿಕಗಳಿಂದಲೆ ಚಿಕಿತ್ಸೆ ಕೊಟ್ಟು ಬಹುತೇಕ ಗುಣವಾಗುವಂತೆ ನೋಡಿಕೊಳ್ಳುತ್ತಿದ್ದ,ರಾಮದೇವರ ಗಿಡಮೂಲಿಕೆಗಳ ಔಷದೀಯ ವಿದ್ಯೆಯಿಂದ ರೋಗಗಳನ್ನು ಉಪಚರಿಸುವ ವೈಖರಿ ಕೇವಲ ಆ ಪಟ್ಟಣಕ್ಕೆ ಸೀಮಿತವಾಗದೆ ಸುತ್ತಮುತ್ತಲಿನ ಹಳ್ಳಿಗಳಿಗೂ ಪಸರಿಸಿತ್ತು.ಗಿಡಮೂಲಿಕೆಗಳಿಂದ ಔಷಧವನ್ನು ಕೊಡುವ ರಾಮದೇವರಿಗೆ ‘ಬಾಬ’ ಎಂದು ಕರೆಯುವುದು ರೂಢಿಯಾಯಿತು.ನಿಧಾನವಾಗಿ ಬಾಬನ ರಹಸ್ಯಮಯ ಜೀವನ ಕರಗುತ್ತಾ ಹೋಯಿತು.
ಬಾಬನ ಮನೆಗೆ ಕೇವಲ ಔಷಧ ಉಪಚಾರಕ್ಕೆಂದು ಬಾರದೆ ಬಾಬನ ರಹಸ್ಯಮಯ ಜೀವನವನ್ನು ಅರಿಯುವುದಕ್ಕಾಗಿ ಹಲವಾರು ಜನರು ಬಂದು ಹೋದರು.ಇದರ ಫಲಿತಾಂಶವೆನ್ನುವಂತೆ ಬಾಬನ ಜೀವನ ಚರಿತ್ರೆಯ ಮೊದಲ ಭಾಗವನ್ನು ಪಟ್ಟಣದ ಜನತೆ ಬರೆದು ಬಿಟ್ಟಿದ್ದರು. ಬಾಬ ಹಿಮಾಯಲದಲ್ಲಿ ಹತ್ತಾರು ವರುಷಗಳ ತಪಸ್ಸು ಮಾಡಿದ್ದಾರೆ.ನಂತರ ಅಲ್ಲಿರುವ ಸನ್ಯಾಸಿಗಳ ಜೊತೆಗೂಡಿ ಗಿಡಮೂಲಿಕೆಗಳನ್ನು ಬಳಸಿ ಮತ್ತು ಅದರ ಜೊತೆ ತೀರಾ ಕನಿಷ್ಟ ಪ್ರಮಾಣದಲ್ಲಿ ಇನ್ನಿತರೆ ಲೋಹಗಳನ್ನು ಉಪಯೋಗಿಸಿ ಬೆಳ್ಳಿಯನ್ನು ತಯಾರಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ.ಬಹು ಮುಖ್ಯ ವಿಚಾರವಾದ ಬ್ರಾಹ್ಮಿ ಮುಹೂರ್ತದಲ್ಲಿ ಗಿಡಮೂಲಿಕೆಗಳನ್ನು ಸಂಗ್ರಹ ಮಾಡಲು ಹೊರಡುವ ವಿಷಯವನ್ನು ಪತ್ತೆ ಹಚ್ಚಿದ್ದರು.ಅಲ್ಲದೆ ತಾವೂ ಸಹಾ ಬಾಬನಂತೆಯೆ ಗಿಡಮೂಲಿಕೆ ಸಂಗ್ರಹಿಸಲು ಹೊರಟರು.ಆದರೆ ಇದನ್ನು ಗಮನಿಸಿದ್ದ ಬಾಬ ಜನರು ಹಿಂಬಾಲಿಸಿದ ದಿನ ಯಾವುದೊ ಗಿಡಮೂಲಿಕೆಗಳನ್ನು ಕಿತ್ತು ಜನರ ದಾರಿ ತಪ್ಪಿಸಿದ್ದರು.ಬಾಬನ ಹತ್ತಿರ ಚಿಕಿತ್ಸೆ ಪಡೆಯುವಂತೆ ಬಂದ ಜನರಲ್ಲಿ ಕೆಲವರು ಬೆಳ್ಳಿಯನ್ನು ತಯಾರಿಸುವ ಕಲೆಯನ್ನು ಕಲಿಸಿಕೊಡುವಂತೆ ಬಾಬನನ್ನು ಗಂಟು ಬಿದ್ದರು.ಬಾಬನ ಬೆನ್ನು ಹತ್ತಿ ತಿರುಗಿದರು ಆದರೆ ಬಾಬನ ನಿರ್ದ್ಯಾಕ್ಷಿಣ್ಯ ನಿರಾಕರಣೆ ಮತ್ತು ಕೆಂಡದಂತೆ ಉಕ್ಕುತ್ತಿದ್ದ ಸಿಟ್ಟು ಬಂದ ವೇಗದಲ್ಲಿಯೆ ಜನರನ್ನು ಓಡಿಸಿ ಬಿಡುತ್ತಿತ್ತು.ಆದರೆ ಇದಕ್ಕೆ ಅಪವಾದವೆನ್ನುವಂತೆ ಉಳಿದವನೆಂದರೆ ಕಿಟ್ಟಿ.ಬಾಬ ಎಷ್ಟೆ ಜರಿದರೂ ಕೆಂಡ ಕಾರಿದರು ಕಿಟ್ಟಿ ಒಂದಿಷ್ಟು ಬೇಸರಿಸಿಕೊಳ್ಳದೆ ಬಾಬನ ಹಿಂದೆ ಹಿಂದೆಯೆ ತಿರುಗ ಹತ್ತಿದ, ಬೆನ್ನು ಹತ್ತಿದ ಬೇತಾಳದಂತೆ ಕಾಡಿದ.ಇದೆಲ್ಲದರ ಮಧ್ಯದಲ್ಲಿ ಬಾಬನ ಆರೋಗ್ಯವೂ ಕ್ಷೀಣಿಸ ಹತ್ತಿದ್ದರಿಂದ ಮೊದಲಿದ್ದ ಚೈತನ್ಯ ಬಾಬನ ಬಳಿ ಇರಲಿಲ್ಲ.ಹೀಗಾಗಿ ತನಗೂ ಒಂದು ಆಸರೆಯಾಗುವುದನ್ನುವಂತೆ ಕಿಟ್ಟಿಯನ್ನು ಒಂದು ಷರತ್ತಿನ ಮೇಲೆ ತನ್ನ ಬಳಿ ಇರಲು ಹೇಳಿದರು.ಯಾವುದೆ ಕಾರಣಕ್ಕೂ ಬೆಳ್ಳಿ ಮಾಡುವ ಪ್ರಕ್ರಿಯೆಯನ್ನು ಮತ್ತು ಅದಕ್ಕೆ ಬಳಸಲಾಗುವ ಗಿಡಮೂಲಿಕಗೆಳ ವಿವರವನ್ನು ಕೇಳಬಾರದು.ತನಗೆ ಕಿಟ್ಟಿಯ ಮೇಲೆ ವಿಶ್ವಾಸ ಬಂದ ಮೇಲೆ ತಾನೆ ಆ ವಿದ್ಯೆಯನ್ನು ಮತ್ತು ಅದಕ್ಕೆ ಬಳಸಲಾಗುವ ಗಿಡಮೂಲಿಕಗೆಳ ವಿವರವನ್ನು ಹೇಳುವುದಾಗಿ ಷರತ್ತು ಮಾಡಿಯೆ ಮನೆಯೊಳಗೆ ಬಿಟ್ಟಿದ್ದರು.ದಿನಗಳೂ,ವಾರಗಳು,ತಿಂಗಳುಗಳು ಕಳೆದರು ಬಾಬಾ ಬೆಳ್ಳಿ ತಯಾರಿಕೆಯ ಪ್ರಕ್ರಿಯೆಯ ಯಾವ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ .ಹೀಗಾಗಿ ಕಿಟ್ಟಿ ಸತಾಯಿಸಲು ಪ್ರಾರಂಭಿಸಿದ್ದ,
ಬಾಬಾನ ಹೆಬ್ಬಟ್ಟಿಗಾದ ಗಾಯ ಹಸುರಿನ ಬಣ್ಣಕ್ಕೆ ತಿರುಗಿ ಉಳಿದ ಬೆರೆಳುಗಳಿಗೂ ಹರಡಿತ್ತು.ಬಾಬ ಬೆರೆಳುಗಳನ್ನೊಮ್ಮೆ ಗಮನಿಸಿದರು ಆದರೆ ತಲೆಯಲ್ಲಿ ಕೊರೆಯುತ್ತಲಿದ್ದ ಗಿಡಮೂಲಿಕಗಳಿಂದ ಬಂಗಾರವನ್ನು ತಯಾರಿಸುವ ಪ್ರಕ್ರಿಯೆಯ ವಿಚಾರದ ಮುಂದೆ ಬೆರೆಳುಗಳಿಗೆ ಹರಡಿದ್ದ ಹಸಿರು ಬಣ್ಣದ ವಿಚಾರ ಹಿನ್ನೆಲೆಗೆ ಸರಿಯಿತು.ಇಳಿ ಸಂಜೆ ಊಟವಾದ ನಂತರ ಪ್ರಯೋಗಾಲಯದ ಕೋಣೆ ಸೇರಿ ಬಾಗಿಲನ್ನು ಹಾಕಿ ಬಂಗಾರ ತಯಾರಿಕೆಯ ಪ್ರಕ್ರಿಯೆಗೆ ಮುಂದಾದರು.
William Shakespeare
“How poor are they that have not patience? What wound did ever heal but by degrees? –
ದಿನನಿತ್ಯದ ರೂಢಿಯಂತೆ ಬ್ರಾಹ್ಮಿ ಮುಹೂರ್ತದಲ್ಲಿ ಗಿಡಮೂಲಿಕೆಗಳ ಸಂಗ್ರಹಕ್ಕೆ ತೆರಳುವಾಗ ಬಾಬ ಮನೆಯ ತಲ ಬಾಗಿಲನ್ನು ತೆರೆದು ಪ್ರಯೋಗಾಲಯದ ಕೋಣೆಗೆ ಬೀಗ ಜಡಿದು ಹೊರಡುವುದು ಸಾಮಾನ್ಯವಾಗಿತ್ತು.ಆದರೆ ಸೂರ್ಯೋದಯವಾದ ಎಷ್ಟೊ ಗಂಟೆಗಳ ನಂತರ ಎಚ್ಚರವಾದ ಕಿಟ್ಟಿಗೆ ಆ ದಿನ ಆಶ್ಚರ್ಯವಾಗಿತ್ತು.ತಲ ಬಾಗಿಲು ಇನ್ನು ಹಾಕಿಯೆ ಇತ್ತು ಮತ್ತು ಪ್ರಯೋಗಾಲಯದ ಕೋಣೆಯ ಬಾಗಿಲು ತೆರೆದಿತ್ತು.ಪ್ರಯೋಗಾಲಯದ ಕೋಣೆಯೊಳಕ್ಕೆ ಹೊರಟ ಕಿಟ್ಟಿಗೆ ಆಘಾತವಾಗಿತ್ತು.ಬಾಬನ ದೇಹ ಪೂರ್ತಿ ಹಸಿರು ಬಣ್ಣಕ್ಕೆ ತಿರುಗಿ,ಜೀವ ಹಾರಿ ಹೋಗಿ ಎಷ್ಟೊ ಗಂಟೆಗಳಾಗಿರುವುದೆಂದು ಮುರುಟುಗಟ್ಟಿದ್ದ ದೇಹವೆ ಹೇಳುತ್ತಿತ್ತು.ಬಾಬಾ ಬರೆದಿಟ್ಟಿದ್ದ ಪತ್ರ ಕಣ್ಣಿಗೆ ಬಿತ್ತು ಮತ್ತು ಆ ಪತ್ರವನ್ನು ಕಿಟ್ಟಿ ಓದಲು ಪ್ರಾರಂಭಿಸಿದನು.
“ಪ್ರಿಯ ಕಿಟ್ಟಿ ನಾನು ಹೇಳುವ ಚಿನ್ನ ಮತ್ತು ಬೆಳ್ಳಿಯನ್ನು ಮಾಡುವ ಪ್ರಕ್ರಿಯೆಯನ್ನು ಬೇರೆ ಯಾರಿಗೂ ಹಂಚಿಕೊಳ್ಳದಿರುವೆ ಅನ್ನುವ ವಾಗ್ದಾನದೊಂದಿಗೆ ಮುಂದೆ ಬರೆದಿರುವುದನ್ನು ಓದು.ಬೆಳ್ಳಿ ಮತ್ತು ಬಂಗಾರ ತಯಾರಿಕೆಯ ಎರೆಡು ಪ್ರಕ್ರಿಯೆಗಳು ಬಹುಶಃ ಒಂದೆ ತೆರೆನಾಗಿವೆ.ಆದರೆ ಕೇವಲ ಗಿಡಮೂಲಿಕೆಗಳಲ್ಲಿ ಸ್ವಲ್ಪ ವೆತ್ಯಾಸವಿದೆ.ಎರೆಡೂ ಲೋಹ ತಯಾರಿಕೆಗೆ ಭೂಮಿಯಲ್ಲಿ ದೊರೆಯುವ ತಾಳಕವೆನ್ನುವ ಪಾಶಣ ,ಪಾದರಸ ,ತವರ ಮತ್ತು ಕೇವಲ ಅತ್ಯಲ್ಪ ಪ್ರಮಾಣದ ಬಂಗಾರ ಮತ್ತು ಬೆಳ್ಳಿ ಹಾಗೂ ಗಿಡಮೂಲಿಕೆಗಳು ಬೇಕಾಗಿವೆ. ಗಿಡಮೂಲಿಕೆಗಳ ಪ್ರಮಾಣ ಮತ್ತು ಹೆಸರಗಳನ್ನು ಅವುಗಳ ಪಕ್ಕದಲ್ಲಿಯೆ ಬರೆದಿಟ್ಟಿರುವೆ.ಕೇವಲ ಅತ್ಯಲ್ಪ ಪ್ರಮಾಣದ ಬಂಗಾರ ಮತ್ತು ಬೆಳ್ಳಿಯಿಂದಲೆ ಸುಮಾರು ತೂಕದ ಬೆಳ್ಳಿ ಮತ್ತು ಬಂಗಾರವನ್ನು ತಯಾರಿಸ ಬಹುದು.ಗಿಡಮೂಲಿಕೆಗಳನ್ನು ಸಂಗ್ರಹಿಸಲು ನಸುಕಿನಲ್ಲಿಯೆ ಕಾಡಿಗೆ ಹೊರಡಬೇಕು ಇಲ್ಲದೆ ಹೋದರೆ ಗಿಡಮೂಲಿಕೆಗಳ ಸಾರ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.ಗಿಡಮೂಲಿಕೆಗಳನ್ನು ಸಂಗ್ರಹಿಸುವಾಗ ಒಂದು ಮುಂಜಾಗ್ರತೆಯನ್ನು ತುಂಬಾ ಲಕ್ಷ್ಯ ವಹಿಸಿ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಬಳ್ಳಿಯಲ್ಲಿನ ಎಲೆಗಳನ್ನು ಕಿತ್ತುವಾಗ ಬಳ್ಳಿ ಆಸರೆ ಪಡೆದ ಮರದ ಕೆಳಗೆ ಒಂದು ಪಾಚಿಗಟ್ಟಿದ ನೀರನ ಹೊಂಡವಿದೆ. ಹೊಂಡದ ಸುತ್ತ ದರ್ಬೆಯ ಜಾತಿಗೆ ಸೇರಿದ ಹುಲ್ಲು ಕೇದಿಗೆಗೆ ಇರುವಂತೆ ಮುಳ್ಳುಗಳನ್ನು ಹೊತ್ತು ಬೆಳೆಯುತ್ತದೆ.ಸಹಜವಾಗಿ ಬೆಳೆಯುವ ಹುಲ್ಲಿನ ಮಧ್ಯೆ ಈ ಹುಲ್ಲು ಬೆಳೆದಿರುವುದರಿಂದ ಗುರುತಿಸುವುದು ಕಷ್ಟ.ಆ ದರ್ಬೆಯಾಕಾರದ ಹುಲ್ಲನ್ನು ಮೈಗೆ ತಾಗಿಸಿಕೊಂಡಿದ್ದೆ ಆದರೆ ಆ ಹುಲ್ಲಿನಲ್ಲಿರುವ ನಂಜು ದೇಹವನ್ನು ಹೊಕ್ಕು ನಿಧಾನವಾಗಿ ದೇಹವನ್ನು ಆವರಿಸಿ ನೆತ್ತಿಗೆ ಏರುವಲ್ಲಿಗೆ ನಮ್ಮನ್ನು ಬಲಿ ತೆಗೆದು ಕೊಳ್ಳುತ್ತದೆ.ನನಗೂ ಅದೆ ಆಗಿದ್ದು.ಆ ಹುಲ್ಲಿನ ಬಗ್ಗೆ ನನಗೂ ಸಹಾ ತಿಳಿದಿರಲಿಲ್ಲ ಆದರೆ ಒಂದು ದಿನ ಗಿಡಮೂಲಿಕೆ ಸಂಗ್ರಹಕ್ಕೆಂದು ಹೋದಾಗ ಹೆಬ್ಬಟ್ಟಿನಿಂದ ತುಳಿದೆ,ಅದೆ ನನ್ನ ಹೆಬ್ಬಟ್ಡಿಗಾದ ಗಾಯ.ನಿಧಾನವಾಗಿ ವಿಷ ನನ್ನನ್ನು ಆವರಿಸಿ ಹತ್ತಿತು.ನಿನ್ನೆ ತಡ ರಾತ್ರಿ ಬಂಗಾರವನ್ನು ಗಿಡಮೂಲಿಕಗಳಿಂದ ತಯಾರು ಮಾಡುವಾಗ ವಿಷ ಹಣೆಯವರೆಗೂ ಏರಿತ್ತು.ಆಗ ನನಗೆ ಆ ಹುಲ್ಲಿನ ಮರ್ಮ ಅರ್ಥವಾಯಿತು.ವಿಷ ನೆತ್ತಿಗೆ ಏರುವಷ್ಟರಲ್ಲಿ ಈ ಪತ್ರವನ್ನು ಬರೆದು ಮುಗಿಸಿದ್ದೇನೆ.ಯಾವುದೆ ಕಾರಣಕ್ಕೂ ಆ ದರ್ಬೆ ತರಹ ಇರುವ ಹುಲ್ಲನ್ನು ಮೈಗೆ ತಾಗಿಸಿಕೊಳ್ಳಬೇಡ . ಈ ವಿದ್ಯೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದಿಲ್ಲ ಮತ್ತು ಸ್ವಾರ್ಥಕ್ಕಾಗಿ ಉಪಯೋಗಿಸುವುದಿಲ್ಲ ಎನ್ನುವ ವಾಗ್ದಾನವನ್ನು ಕೊಟ್ಟಿರುವೆ ಎಚ್ಚರಿಕೆ.ಒಳ್ಳೆಯದಾಗಲಿ” ”
ಪತ್ರ ಓದಿದ ನಂತರ ಕಿಟ್ಟಿಗೆ ಮಾತೆ ಹೊರಡದಾಗಿತ್ತು.ಜೀವ ಕೈಗೆ ಬಂದಂತಾಗಿತ್ತು.ತನ್ನ ಹಿಮ್ಮಡಿಯ ಕಾಲಿಗಾದ ಗಾಯವನ್ನು ಗಮನಿಸಿದ ಅದು ಹಸುರಿನ ಬಣ್ಣಕ್ಕೆ ತಿರುಗುತ್ತಲಿತ್ತು.
ಬಾಬಾ ಗಿಡಮೂಲಿಕೆಗಳ ರಹಸ್ಯವನ್ನು ಎಷ್ಟೆ ಅಲವತ್ತು ಕೊಂಡರು ಹೇಳಿ ಕೊಡದೆ ಇದ್ದ ಕಾರಣ.ಕಿಟ್ಟಿ ತಾನೆ ಹಿಂದಿನ ದಿನ ಬಾಬ ಗಿಡಮೂಲಿಕೆಗಳನ್ನು ಸಂಗ್ರಹಿಸಿ ವಾಪಸ್ಸಾದ ನಂತರ ಕಾಡಿಗೆ ತೆರೆಳಿ ಒಂದು ಅಂದಾಜಿನ ಮೇಲೆ ಗಿಡಮೂಲಿಕೆಗಳನ್ನು ಆಯಲು ಶುರು ಮಾಡಿದ್ದ.ಆ ಘಟನೆಯಲ್ಲಿ ದರ್ಬೆಯನ್ನು ಹೋಲುವ ವಿಷಕಾರುವ ಹುಲ್ಲನ್ನು ಹಿಮ್ಮಡಿಯಿಂದ ತುಳಿದು ಬಿಟ್ಟಿದ್ದ. ಹಿಮ್ಮಡಿಯಿಂದ ವಿಷ ನಿಧಾನವಾಗಿ ಮುಂಗಾಲು ,ಮೊಣಕಾಲು ,ತೊಡೆಯನ್ನು ಆವರಿಸಿ ಮೇಲೆರಲು ಹತ್ತಿತು. ಕಿಟ್ಟಿಯ ಗಂಟಲಿನ ಪಸೆಯಾರಿಯಾಗಿತ್ತು.
“To be, or not to be: that is the question” –
William Shakespeare
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ