- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
“ಬಂದ ವಸಂತಾ ಬಂದ ಹಸಿರಿನ ಸಿರಿಯಲಿ ಏನಾನಂದ ಚಿನ್ನದ ಚಿಗುರೆಲೆ ಧರಿಸಿಹ ಮಾಮರದೊಂದಿಗೆ…..” (ಲತಾ ದಾಮ್ಲೆ) ಎನ್ನುತ್ತಾ ಜೀವನದ ಸಂಭ್ರಮವನ್ನು ಇಮ್ಮಡಿಸುವ ನವ ವಸಂತ ಯುಗಾದಿ ಬಂದಿದೆ. ಮಾವು -ಬೇವುಗಳ ಸಂಚಯನದೊಂದಿಗೆ ಉಲ್ಲಾಸದಿಂದ ನವ ವಸಂತವನ್ನು ಸ್ವಾಗತಿಸೋಣ.
ಚೈತ್ರ ಬಂದಿಹಳು ಚೈತನ್ಯ ತಂದಿಹಳು ಗಾನಕೋಗಿಲೆ ಕೂಗಿ ಕರೆದಿದೆ ಚೈತ್ರಮಾಸವನಿಲ್ಲಿಗೆ…..
ಎನ್ನುತ್ತಲೇ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಸ್ಥಾನವಿರುವ ‘ಯುಗಾದಿ’ ಬಗ್ಗೆ ಒಂದಷ್ಟು ಮಾತು ಇಲ್ಲಿದೆ. ಭಾರತೀಯರ ಹೊಸ ವರ್ಷ ಯುಗಾದಿಯಿಂದಲೇ ಪ್ರಾರಂಭವಾಗುತ್ತದೆ. ಆಂಗ್ಲ ದಿನದರ್ಶಿಕೆಯ ಪ್ರಕಾರ 2021 ರ ಏಪ್ರಿಲ್ 13 ಯುಗಾದಿ ಹಬ್ಬ ಅಂದು ನಾವು ‘ಶಾರ್ವರಿ’ ಸಂವತ್ಸರಧಾಟಿ ‘ಪ್ಲವ’ ಸಂವತ್ಸರಕ್ಕೆ ಕಾಲಿಡುತ್ತೇವೆ. ಇದು 60ಸಂವತ್ಸರಗಳಲ್ಲಿ 35 ನೆಯದು. ಇಂತಹ ಸಂವತ್ಸರ ಚಕ್ರವು ಹಿಂದೆಷ್ಟೋ ಕಳೆದುಹೋಗಿವೆ. 60 ಸಂವತ್ಸರಗಳಿಗೆ ಒಂದು ಸಂವತ್ಸರಚಕ್ರ ಮುಕ್ತಾಯವಾಗುತ್ತದೆ.
‘ಪ್ರಭವನಾಮ’ ಸಂವತ್ಸರ ಮೊದಲನೆಯದಾದರೆ ‘ಅಕ್ಷಯ’ ಸಂವತ್ಸರಕಡೆಯದು. ಪಂಚಾಂಗ ಅಂದರೆ ವಾರ,ತಿಥಿ, ನಕ್ಷತ್ರ, ಕರಣ,ಯೋಗ. ಮಳೆ -ಬೆಳೆ, ಧನಾಧಿಪತಿ, ಸಸ್ಯಾಥಿಪತಿ, ಗ್ರಹಣ, ಜಾತ್ರೆ, ಉತ್ಸವ. ಮದುವೆ, ಮುಂಜಿ. ನಾಮಕರಣ ಇತ್ಯಾದಿಗಳಿಗೆ ದಿನ ನಿಗದಿ ಮಾಡಲು ನಾವು ಯುಗಾದಿಯ ಹೊಸ ಪಂಚಾಂಗವನ್ನೇ ಆಶ್ರಯಿಸತ್ತೇವೆ.
‘ಯುಗ’ ಮತ್ತು ‘ಆದಿ’ ಸೇರಿ ಯುಗಾದಿ ಆಗಿದೆ. ಯುಗಾದಿ ಮೂಲತಃ ಸಂಸ್ಕೃತ ಪದ. ಇದರ ತದ್ಭವವೇ ‘ಉಗಾದಿ’. ಯುಗವೆಂದರೆ ಕಾಲ, ವರ್ಷ ಇಂತಹ ವರ್ಷದ ಆರಂಭವೇ ‘ಯುಗಾದಿ’ ಎನ್ನಬಹುದು. “ಯಗಾದಿ”ಯನ್ನು ಆಯನಗಳ ಜೋಡಿ ಎಂದು ಕರೆಯವುದಿದೆ ‘ಯುಗ’ ಪದಕ್ಕೆ ‘ಜೋಡಿ’ ‘ಜೊತೆ’ ಎಂಬ ಅರ್ಥವೂಇದೆ. ಹಾಗಿದ್ರೆ ಯಾವ ಜೋಡಿ ಯೋಚಿಸಿದರೆ ನಮಗೆ ತಕ್ಷಣಕ್ಕೆ ‘ಉತ್ತರಾಯಣ’ ಮತ್ತು ‘ದಕ್ಷಿಣಾಯನಗಳೆಂಬ’ ಎರಡು ಆಯನಗಳ ಜೋಡಿ ನೆನಪಾಗುತ್ತದೆ.
‘ಯುಗ’ ಪದಕ್ಕಿರುವ ಮತ್ತೊಂದು ಅರ್ಥ ‘ದ್ವಂದ್ವ’ ಅರ್ಥಾತ್ ಸುಖ-ದುಃಖಗಳೆಂಬ ದ್ವಂದ್ವ. ‘ಯುಗಾದಿ’ ಆಡು ಮಾತಿನಲ್ಲಿ ‘ಉಗಾದಿ’ ಆಗಿದೆ. ಚೈತ್ರ ಶುದ್ಧ ಪಾಡ್ಯದಂದೇ ಏಕೆ ಈ ಹಬ್ಬ ಆಚರಿಸಬೇಕು? ಅದಕ್ಕೂ ಕಾರಣವಿದೆ. ಜಗತ್ತು ಸೃಷ್ಠಿಯಾದದ್ದು ಚೈತ್ರ ಶುದ್ಧ ಪಾಡ್ಯದಂದೇ ಎಂದು ಬ್ರಹ್ಮಾಂಡ ಪುರಾಣದಲ್ಲಿ ವ್ಯಕ್ತವಾಗಿದೆ. ಬ್ರಹ್ಮಚೈತ್ರ ಮಾಸದ ಶುಕ್ಲಪಕ್ಷದ ಪ್ರಥಮ ದಿನದಂದು ಸೂರ್ಯೋದಯದ ವೇಳೆಯಲ್ಲಿ ಗ್ರಹ,ಋತು, ತಿಂಗಳು ಅಧಿಪತಿಗಳನ್ನೊಳಗೊಂಡAತೆ ಸಮಸ್ತ ಲೋಕವನ್ನು ಸೃಷ್ಠಿಸಿದರು, ಕಾಲದಗಣನೆಯನ್ನೂ ಸಹ ಅಂದಿನಿಂದಲೇ ಆರಂಭಿಸಲಾಯಿತು. ಈ ಕಾರಣದಿಂದಾಗಿ ಚೈತ್ರ ಶುದ್ಧ ಪಾಡ್ಯವೇ ವರ್ಷದ ಮೊದಲ ದಿನವೆಂದು ಪರಿಗಣನೆಯಾಯಿತು.
ಪ್ರಪಂಚದಲ್ಲಿ ಯುಗಾದಿ ಹಬ್ಬದ ಆಚರಣೆ ತುಂಬಾ ಪ್ರಾಚೀನಕಾಲದಿಂದ ನಡೆದುಕೊಂಡು ಬಂದಿದೆ. ಕ್ರಿ.ಪೂರ್ವದಲ್ಲ್ಲಿ ಮೆಸಟೋಮಿಯಾದಲೂ ಯುಗಾದಿ ಆಚರಣೆಯಿತ್ತು ಎಂದು ಹೇಳುವುದಿದೆ. ಮಲ್ಲಿನಾಥನೆಂಬ ೧೪ನೇ ತೀರ್ಥಂಕರ ಹುಟ್ಟಿದ್ದು, ಆದಿ ತೀರ್ಥಂಕರನ ಮಗ ಭರತ ದಿಗ್ವಿಜಯ ಸಾಧಿಸಿದ್ದು ಯುಗಾದಿ ದಿನವಾದ್ದರಿಂದ ಜೈನರಿಗೂ ಯುಗಾದಿ ಮಹತ್ವದ ದಿನವೇ.
ಯುಗಾದಿಯ ಮೊದಲ ತಿಂಗಳಿಗೆ ‘ಚೈತ್ರ’ ಎಂಬ ಹೆಸರು ಬರಲೂ ಕಾರಣವಿದೆ. ಹುಣ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದೊಂದಿಗೆ ಇರುತ್ತಾನೋ ಅದನ್ನು ಅನುಸರಿಸಿ ಆ ತಿಂಗಳನ್ನು ಹೆಸರಿಡುತ್ತಾರೆ. ಚಿತ್ತ ನಕ್ಷತ್ರದಿಂದ ಚೈತ್ರಮಾಸ, ವಿಶಾಖ ನಕ್ಷತ್ರದಿಂದ ವೈಶಾಖ ಮಾಸ, ಜ್ಯೇಷ್ಠಾ ನಕ್ಷತ್ರದಿಂದ ಜ್ಯೇಷ್ಠ ಮಾಸ ಇತ್ಯಾದಿ……. ನವಸಂವತ್ಸರದ ಆಗಮದ ದ್ಯೋತಕವೆಂದರೆ ಪ್ರಕೃತಿಯು ಹಸಿರು ಸೀರೆಯನ್ನು ನವ ವಧುವಿನಂತೆ ಮಲ್ಲಿಗೆ ಮಾಲೆ ಮುಡಿದು ಹೂ ಹಣ್ಣುಗಳಿಂದ ತುಂಬಿ ತುಳುಕುತ್ತಿರುತ್ತಾಳೆ. ಮಾವು ಮಲ್ಲಿಗೆಯ ಕಂಪಿನೊAದಿಗೆ ಬೇವಿನ ಕಂಪು ಸೇರಿಸಿ ಎಲ್ಲೆಡಯೂ ಕಾಜಾಣ ಕೋಗಿಲೆಗಳ ಸಡಗರವಿರುತ್ತದೆ. ಮನೆಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಹೊಸ ಬಟ್ಟೆ,ಆಭರಣತೊಟ್ಟು ಹೆಂಗಳೆಯರು ಸಂಭ್ರಮಿಸುತ್ತಾರೆ.
ಯುಗಾದಿ ಅಂದರೆ ವ್ಯಾಪಾರಿಗಳಿಗೂ ಸುಗ್ಗಿಯೇ ಸರಿ! ಹೊಸ ವಸ್ತುಗಳ ಖರೀದಿಗೆ ಯುಗಾದಿಯೇ ಪ್ರಶಸ್ತ ಎಂಬ ನಂಬಿಕೆಯೂ ನಮ್ಮಲ್ಲಿದೆ. ಯುಗಾದಿ ಅಂದರೆ ಹೊಸ ಉತ್ಸಾಹ! ಹೊಸ ಹುರುಪು! ಎಲ್ಲೆಲ್ಲೂ ಧವನ, ಮರುಗ, ಮೈಸೂರು ಮಲ್ಲಿಗೆಯ ಪರಿಮಳದ್ದೇ. ಕಾರುಬಾರಾಗಿರುತ್ತದೆ.
ಯುಗಾದಿಯ ದಿನ ಉಷಾ ಕಾಲಕ್ಕೆ ಎದ್ದು ತೈಲಾಭ್ಯಂಗ ಮಾಡಿ, ನೂತನ ಪಂಚಾಂಗವನ್ನು ಪೂಜಿಸಿ ನಂತರ ಬೇವು-ಬರಲ್ಲ ಸ್ವೀಕರಿಸಿ, ಮಂತ್ರಾಕ್ಷತೆ, ಗಂಧ ಇತ್ಯಾದಿಗಳನ್ನು ಪಂಚಾಂಗಕ್ಕೆ ಅರ್ಪಿಸಿ ಸಂವತ್ಸರದ ಫಲ ಕೇಳಬೇಕೆಂಬುದಾಗಿ ಹೇಳುತ್ತಾರೆ. ಯುಗಾದಿ ಅಂದರೆ “ನಿಂಬಕದಳ ಭಕ್ಷಣ” ಯುಗಾದಿ ದಿನ ಆಚರಿಸುವ ಕರ್ತವ್ಯಗಳಲ್ಲಿ ಒಂದು ಅಂದರೆ ಬೇವು-ಬೆಲ್ಲಗಳ ಸೇವನೆ ಮಾಡುತ್ತೇವೆ. ಇದಕ್ಕೇನುಕಾರಣ? ಅಂದರೆ ಮಾನವನಜೀವನ ಸುಖ-ದುಃಖಗಳ ಮಿಶ್ರಣ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು ಇವೆರಡನ್ನೂ ಸಮಾನವಾಗಿ ಕಾಣಬೇಕೆಂಬುದೇ ಬೇವು-ಬೆಲ್ಲ ಸೇವನೆಯ ಸಂಕೇತ.
ಭಗವದ್ಗೀತೆಯಲ್ಲಿಯೂ ಸಹ “ಸುಖದುಃಖೇ ಸಮೇಕೃತ್ವಾ” ಎಂದು ಉಪದೇಶಿಸಲಾಗಿದೆ. ಕೆಲವರ ಜೀವನದಲ್ಲಿ ಬೆಲ್ಲ ಹೆಚ್ಚಾಗಿರಬಹುದು. ಆದರೂ ಈ ದ್ವಂದ್ವಗಳನ್ನು ಸಂಭ್ರಮದಿಂದಲೇ ಸ್ವೀಕರಿಸಬೇಕು. ಬೇವು ದುಃಖದ ಸಂಕೇತವಾದರೆ ಬೆಲ್ಲ ಸುಖದ ಸಂಕೇತ ಇದನ್ನು ಸಮಪ್ರಮಾಣದಲ್ಲಿ ಸ್ವೀಕರಿಸಬೇಕು.
ಯುಗಾದಿಯಲ್ಲಿ ಬೇವೇ ಏಕೆ? ಮಾವು ಏಕಾಗಬಾರದು? ಎಂಬುದಕ್ಕೂಕಾರಣವಿದೆ. ಬಿಲ್ವ, ಅಶ್ವತ್ಥ ಮುಂತಾದ ವೃಕ್ಷಗಳ ಆರಾಧನೆ ನಮ್ಮಲ್ಲಿ ಬಹು ಹಿಂದಿನಿಂದಲೂ ನಡೆದು ಬಂದಿದೆ. ಅಂತಹ ಪೂಜಾರ್ಹ ವೃಕ್ಷಗಳಲ್ಲಿ ಬೇವೂ ಒಂದು. ಬೇವಿನ ಚಿಗುರು, ಹೂ, ಎಲೆ, ತೊಗಟೆ, ಬೀಜ, ಎಣ್ಣೆ ಬೇರು ಕಾಂಡಗಳು ರೋಗಪರಿಹಾರಕ ಮತ್ತು ಶಕ್ತಿವರ್ಧಕವೆಂದು ಆಯುರ್ವೇದದಲ್ಲಿ ಉಕ್ತವಾಗಿದೆ.
ಯುಗಾದಿ ದಿನ ಬೇವಿನ ಎಸಳುಗಳನ್ನು ಭಕ್ಷಿಸುವಾಗ ಹೇಳು ಶ್ಲೋಕವೇ ಇದಕ್ಕೆ ಸಾಕ್ಷಿ
ಶತಾಯುರ್ವಜ್ರದೇಹಾಯ
ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಂಕಂದಳ ಭಕ್ಷಣಂ
ಬೇವಿನೊಂದಿಗೆ ಬೆಲ್ಲವೇ ಏಕೇ? ಇದಕ್ಕೂ ಆಯುರ್ವೇದಿಯ ಕಾರಣವಿದೆ. ಸಿಹಿ ಸುಖದ ಸಂಕೇತ. ಆಗಲಿ ಸಕ್ಕರೆಯೂ ಸಿಹಿಯೇ ಅಲ್ಲವೇ? ಸಕ್ಕರೆ ‘ಶರ್ಕರ’ ಎಂಬ ಹೆಸರಿನಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ.
ವರ್ಷದ ಹಬ್ಬಗಳಿಗೆ ಮುನ್ನುಡಿ ಬರೆಯುವ ಯುಗಾದಿ ನಿಸರ್ಗದ ಮರು ಹುಟ್ಟನ್ನು ಸಂಕೇತಿಸುತ್ತದೆ. ಬೇಂದ್ರೆಯವರ ಗೀತೆಯ..
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ…….ಯುಗ ಯುಗಾದಿ…
ಸಾಲುಗಳನ್ನು ಕೇಳಿದಷ್ಟು ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನ್ನಿಸುತ್ತಸದೆ. ಚಂದ್ರನ ಚಲನೆಯ ಗತಿಯನ್ನು ಆಶ್ರಯಿಸಿ ‘ಚಾಂದ್ರಮಾನಯುಗಾದಿ’, ಸೂರ್ಯನ ಚಲನೆಯಗತಿಯನ್ನು ಆಶ್ರಯಿಸಿ ‘ಸೌರಮಾನ ಯುಗಾದಿ’ ಎಂದು ನಿರ್ಧಾರ ಮಾಡುವುದಿದೆ. ಕರ್ನಾಕಟದಲ್ಲಿ ಚೈತ್ರ ಶುದ್ಧ ಪ್ರತಿಪದೆಯಿಂದ ಫಾಲ್ಗುಣ ಮಾಸದ ಅಮವಾಸ್ಯೆಯವರೆಗೆ ಹನ್ನೆರಡು ತಿಂಗಳುಗಳ ಅವಧಿ ಚಾಂದ್ರವತ್ಸರವೆನಿಸುತ್ತದೆ.ಕರ್ನಾಟಕ ಆಂಧ್ರಗಳಲ್ಲಿ ‘ಚಾಂದ್ರಮಾನಯುಗಾದಿ’ಯ ಆಚರಣೆಯಾದರೆ ತಮಿಳುನಾಡು ಕೇರಳಗಳಲ್ಲಿ ‘ಸೌರಮಾನಯುಗಾದಿ’ಯ ಆಚರಣೆ ತುಳುನಾಡಿನವರು ‘ಬಿಸು ಹಬ್ಬ’ ಎಂಬ ಹೆಸರಿನಿಂದ ‘ಸೌರಮಾನಯುಗಾದಿ’ಯನ್ನೇ ಆಚರಿಸುತ್ತಾರೆ.
ಯುಗಾದಿಯನ್ನು ಕುರಿತಂತೆ ಜಾನಪದ ತ್ರಿಪದಿಯಲ್ಲಿ
ಊರಾಗ ಉಗಾದಿ ಉಂಡ್ಹೋಗ ಅಣ್ಣಯ್ಯ
ಶಾವೀಗಿ ಆಗಿ ಗುಳಿಗ್ಯಾಗಿ| ಮ್ಯಾಲೀನ
ಬಾನ ಬಸಿಯೋದು ತಡವಿಲ್ಲ||
ಎಂಬ ಮಾತಿದೆ.
ಅಂದರೆ ಯುಗಾದಿಯಲ್ಲಿ ಮಾಡುವ ಆಡುಗೆಗಳ ಕಿರುಪರಿಚಯವಿದೆ. “ಬೇವಿನ ಹೂವಿನ ಹುಡಿಯ ಗಂಧಮಾವಿನ ಮಿಡಿಗಾಯಿ ಬಲು ಚಂದ” ಎಂಬಂತೆ ಕರ್ನಾಟಕದಲ್ಲಿ ಬೇವಿನ ಹೂ, ಬೇಳೆ ಹೋಳಿಗೆ,ಹೋಳಿಗೆ ಸಾಂಬಾರು,ಮಾವಿನ ಕಾಯಿ ಚಿತ್ರಾನ್ನ,ಹುಳಿಯನ್ನ ಎಂತಹವರ ಬಾಯಲ್ಲೂ ನೀರೂರಿಸುತ್ತವೆ.
ಆಂಧ್ರದಲ್ಲಿ ಬೇವು-ಬೆಲ್ಲ ಹುಣಸೆಹುಳಿ, ಖಾರ ಸೇರಿಸಿ ಪಚಡಿ ಮಾಡಿ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಕೊಡುತ್ತಾರೆ. ಇಲ್ಲಿ ಸೇರುವ ಷಡ್ರಸಗಳು ಜೀವನದ ಅಂಶಗಳನ್ನು ಸಂಕೇತಿಸುತ್ತದೆ. ವಸಂತ ಋತುವಿನ ಕಾಯಿಲೆಗಳನ್ನು ತಡೆಯಲು ಬೇವು-ಬೆಲ್ಲ ಅತ್ಯಂತ ಸಹಕಾರಿ. ಆಯುರ್ವೇದದ ಪ್ರಕಾರ ಮುಂಜಾನೆ ಖಾಲಿಹೊಟ್ಟೆಗೆ ಬೇವನ್ನು ತಿಂದರೆ ಕಫಕ್ಕೆ ಸಂಬಂಧಿಸಿದ ತೊಂದರೆಗಳು ಗುಣವಾಗುತ್ತವೆ ಎನ್ನುತ್ತಾರೆ. ಯುಗಾದಿ ಆರಂಭದಿಂದ ಎರಡು ತಿಂಗಳು ಕಹಿ ಮತ್ತು ಒಗರುಗಳಿಂದ ಕೂಡಿದ ತರಕಾರಿಗಳನ್ನು ಸೇವಿಸಬೇಕು ಎನ್ನುತ್ತಾರೆ. ಹಾಗಲ, ಹೀರೆ,ಪಡುವಲ, ಸೋರೆ, ಒಂದೆಲಗ(ಬ್ರಾಹ್ಮಿ) ಮೆಂತೆ ಬೂದಿಕುಂಬಳ ಇತ್ಯಾದಿ ಇತ್ಯಾದಿ ಅದರಲ್ಲೂ ಹಾಗಲಕಾಯಿ, ಹೀರೆಕಾಯಿ, ಪಡುವಲಕಾಯಿಗೆ ಮೊದಲ ಆದ್ಯತೆ.
ಈ ಋತುವಿನಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ರವ ಹೆಚ್ಚಾಗುತ್ತದೆ. ಹೇಗೆ ಗಿಡ ಮರಗಳು ಚಿಗುರುತ್ತವೆಯೋ ಹಾಗೆ ನಮ್ಮ ಚರ್ಮವೂ ಲವಲವಿಕೆಯನ್ನು ಪಡೆದುಕೊಳ್ಳುತ್ತದೆ. ಅಂತಹ ಚರ್ಮಕ್ಕೆ ಶ್ರೀಗಂಧ, ಲಾವಂಚ, ಅರಿಶಿಣ ಮುಂತಾದವುಗಳಿಂದ ತಯಾರಿಸಿದ ಚೂರ್ಣದಿಂದ ಸ್ನಾನ ಮಾಡಬೇಕೆನ್ನುತ್ತಾರೆ. ಇಲ್ಲವೆ ಬೇವಿನ ಎಲೆಗಳನ್ನು ಅದರ ತೊಗಟೆ ಸಹಿತ ಬಿಸಿನೀರಿನಲ್ಲಿ ಹಾಕಿ ಸ್ನಾನಮಾಡಿದರಂತೂ ಚರ್ಮಕಾಯಿಲೆಗಳಿಗೆ, ಬೆನ್ನುನೋವಿನಂತಹ ಸಮಸ್ಯೆಗಳಿಗೆ ರಾಮಬಾಣಎನ್ನುತ್ತಾರೆ ಹಿರಿಯರು.
ಈ ಋತುವಿನಲ್ಲಿ ಬಿಸಿಲಿನ ಝಳ ಹೆಚ್ಚಾಗುವ ಕಾರಣದಿಮದ ಮೊಸರಿನ ಬದಲು ಮಜ್ಜಿಗೆಯನ್ನೂ, ಕುದಿಸಿ ಆರಿಸಿದ ನೀರನ್ನುಯಥೇಚ್ಛವಾಗಿ ಸೇವಿಸಬೇಕು ಇದರಿಂದ ನಿರ್ಜಲೀಕರಣ, ಜೀರ್ಣಾಂಗಕ್ಕೆ ಸಂಬಂಧಿಸಿದ ವ್ಯಾದಿಗಳನ್ನು ದೂರವಿಡಬಹುದು ಎನ್ನುತ್ತಾರೆ.
‘ಉಗಾದಿ ಉಂಡು ಚಂದ್ರನನ್ನು ನೋಡಬೇಕು’ ಎಂಬ ಮಾತು ಬಳಕೆಯಲ್ಲಿದೆ. ‘ಯುಗಾದಿ’ ಈ ಪದ ಚಲನ ಶೀಲತೆಗೂ ನಾಂದಿ ಹಾಡುತ್ತದೆ. ‘ಮಹಾಲಯ ಅಮವಾಸ್ಯೆ’ ‘ಶರನ್ನವರಾತ್ರಿ’ಯನ್ನು ಸಂಕೇತಿಸಿದರೆ ಯುಗಾದಿ ಅಮವಾಸ್ಯೆ ‘ವಸಂತನವರಾತ್ರಿ’ಯನ್ನು ಸಂಕೇತಿಸುತ್ತದೆ.
ಗ್ರಾಮಿಣ ಪ್ರದೇಶಗಳಲ್ಲಿ ಊರ ಉತ್ಸವ, ದೇವತೆಗಳ ಉತ್ಸವ ಮೆರವಣಿಗೆ,ರಥೋತ್ಸವಗಳು ಅದ್ಧೂರಿಯಾಗಿ ನಡೆಯುತ್ತವೆ. ಮಹನೀಯರ ಜಯಂತಿಗಳ ಪರ್ವ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಹೋಳಿ ಹುಣ್ಣಿಮೆ ಕಳೆದು ೧೫ ದಿನಕ್ಕೆ ಯುಗಾದಿ ಹಬ್ಬ. ಯುಗಾದಿ ಹಬ್ಬ ಕಳೆದು ಒಂಭತ್ತನೆಯ ದಿನಕ್ಕೆ “ಶ್ರೀರಾಮನವಮಿ” ರಾಮೋತ್ಸವದ ಹೆಸರಿನಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಮುಂದಿನ ಅಮವಾಸ್ಯೆ ಕಳೆದು ಮೂರನೆ ದಿನಕ್ಕೆ ಬಸವ ಜಯಂತಿ ಅರ್ಥಾತ್ “ಅಕ್ಷಯತದಿಗೆ” ಅಂದರೆ ಸಂಭ್ರಮದ ಸುಗ್ಗಿಯ ಕಾಲ ಎನ್ನಬಹುದು.
ಹೊಸ ಸಂವತ್ಸರದಲ್ಲಿ ರೈತರು ‘ಹೊನ್ನಾರು’ ಉತ್ಸವದ ಹೆಸರಿನಲ್ಲಿ ಬೇಸಾಯ ಪ್ರಾರಂಭಿಸುವುದೂ ಇದೆ. (ಇದಕ್ಕೆ ಚಿನ್ನದ ಉಳುಮೆ, ಮೊದಲ ಉಳುಮೆ ಎಂತಲೂಕರೆಯುತ್ತಾರೆ.) ದನಕರುಗಳಿಗೆ ಶೃಂಗಾರ ಮಾಡಿ ನೇಗಿಲು, ನೋಗ ಮುಂತಾದ ಕೃಷಿ ಪರಿಕರಗಳನ್ನು ಒಪ್ಪವಾಗಿ ಜೋಡಿಸಿ ಅದಕ್ಕೆ ಪೂಜೆ ಮಾಡಿ ಮಾಡಿದ ಹಬ್ಬದಡುಗೆಯನ್ನು ಜಾನುವಾರುಗಳಿಗೆ ತಿನ್ನಿಸುವುದಿದೆ, ನಂತರ ಊರಿನ ಪ್ರಮುಖರು ಮೆರವಣಿಗೆಯಲ್ಲಿ ಹೋಗಿ ಭೂದೇವಿಗೂ ಪೂಜೆ ಸಲ್ಲಿಸಿ ಉಳುಮಗೆ ನಾಂದಿಹಾಡುತ್ತಾರೆ. ಇಲ್ಲಿ ಸೆಗಣಿಯ ಬೆನಕನನ್ನು ಮಾಡಿ ಗರಿಕೆ ಇಟ್ಟು ನೇಗಿಲು ಮತ್ತು ಭೂಮಿಯನ್ನು ಪೂಜಿಸುತ್ತಾರೆ.ಫಲವತ್ತತೆಗೆ ‘ಸೆಗಣಿ., ಸಸ್ಯ ಸಂಕುಲಕ್ಕೆ ‘ಗರಿಕೆ’ ಸಂಕೇತ ಈ ಎರಡರ ಸಮತೂಕದ ಸಂಯೋಜನೆ ಹೊಸವರ್ಷದ ಹೊಸ ಬೇಸಾಯಕ್ಕೆ ಇಲ್ಲಿ ನಾಂದಿಯಾಗುತ್ತದೆ.
ವಸಂತಋತು ಎಂದರೆ “ಋತುಗಳ ರಾಜ” ಅದಕ್ಕೆ “ವಸಂತ ಬಂದ…….. ಋತುಗಳ ರಾಜ ತಾ…… ಬಂದ” ಎಂದು ಹಾಡಿರುವುದು. ಈ ಮಾಸ ಆಸೆ -ಚೈತನ್ಯಗಳ ಹೊರೆಯನ್ನೇ ಹೊತ್ತು ತರುತ್ತದೆ ಈ ಚೈತನ್ಯದ ಸೆಲೆ ಚಿರಂತನವಾಗಿರಲಿ ಅಲ್ವೆ! ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್