- ಬಕುಲದಲ್ಲಿ ಅಡಗಿದ ಪಿಸುಮಾತು. - ಜುಲೈ 7, 2022
“ಹೆಣ್ಣಿನ ಮನಸು ಅರಿಯೋದು ಕಷ್ಟ ; ಮೀನಿನ ಹೆಜ್ಜೆಯ ಹಾಗೆ ಅಂತಾರೆ” ಇಂತಹ ಮಾತು ನಾನು ಕೇಳಿದ್ದು ತೀರಾ ಇತ್ತೀಚಿಗೆ ಅನ್ನಿ. ತುಂಬು ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳ ತಾಯಿ ನನ್ನಮ್ಮ. ಹಾಗಾಗಿ ಹೆಣ್ಣಿನ ವೇದನೆ ಸಂವೇದನೆ ಎಲ್ಲವೂ ಬೇಗ ಅರ್ಥ ಆಗತ್ತೆ ನನಗೆ. ಕಾದಂಬರಿಗಳೇ ಮಾತನಾಡುವ ಕಾಲವಿದು. ಅದರಲ್ಲೂ ಕಾರಂತರು ಪೂಚಂತೇ ಅವರ ಅಭಿಮಾನಿಗಳೇ ಹೆಚ್ಚು;ಅದ್ರಲ್ಲಿ ನಾನೂ ಸಹ. ಕಥಾ ಸಂಕಲನ ಅಂತ ಇದೆ ಅಂತ ಗೊತ್ತಾಗಿದ್ದು ಬಹಳ ಇತ್ತೀಚಿಗೆ . ನಾನು ಓದೋದು ಏನಿದ್ರೂ ಕಾದಂಬರಿಗಳನ್ನ. ಇವತ್ತು ಮಳೆ ಜೊತೆಗೆ ರಜೆ ಅಲ್ವಾ; ಜೊತೆಯಾಗಿದ್ದು ಸುಧಾ ಆಡುಕಳ ಅವರ ಬಕುಲದ ಬಾಗಿಲಿನಿಂದ.
ಸುಧಾ ಮೇಡಂ, ನಾನು ಅವರನ್ನು ನೇರವಾಗಿ ನೋಡಿದ್ದು ೨೦೧೮ರಲ್ಲಿ ಗಂಗೊಳ್ಳಿಯ ಕಾಲೇಜಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ; ಅವರು ಅತಿಥಿಯಾಗಿ ಬಂದಿದ್ರು. ನಾನು ಏನೋ ನಾಲ್ಕು ಸಾಲು ಬರೆದಿದ್ದ ಕವನ ಓದೋಕೆ ಹೋಗಿದ್ದೆ. ಆಮೇಲೆ ಫೇಸ್ಬುಕ್ ಅಲ್ಲಿ ನೋಡಿದ್ದೆ. ಅವರು ಒಂದು ಅಕ್ಷರ ಬರೆಯದೇ ಇರುವ ದಿನವಂತೂ ಇರಲಿಕ್ಕೆ ಇಲ್ಲ. ಅವರ ಕಥೆ ತುಷಾರ ಮಯೂರ ಅವಧಿ ಅಲ್ಲೆಲ್ಲ ಬರ್ದಾಗ ಓದಿ ಓಹ್ ಇವರಿಗೆ ಒಂದ್ ಒಂದ್ ಸಲ ಹೇಗೆ ಒಂದ್ ಒಂದ್ ಕಥೆ ಬರತ್ತೆ ತಲೇಲಿ ಅಂತ ಭಾಳ ಯೋಚನೆ ಅಂತೂ ಮಾಡಿದೀನಿ. ಇವತ್ ಯಾಕೋ ಇದನ್ನೇ ಓದುವ ಹುಚ್ಚು ಬಂದು ಓದಲು ಕುಳಿತೆ. ಅಲ್ಲೊಂದು ಸೆಳೆತ ಇತ್ತು ಓದು ಅಂತ.
ನಾನೂ ಒಂದು ಸಾಮಾನ್ಯ ಓದುಗಳಾಗಿ ಏನಿದೆ ಇಲ್ಲಿ ಅನ್ನೋ ಕುತೂಹಲದಲ್ಲಿ ಶುರು ಮಾಡಿದ್ದೆ. ಮೊದಲೇ ರಾಧೆಯ ಪ್ರೇಮಿ ನಾನು. ಅವಳ ಅಂತರಂಗದ ಒಳಗಿನ ಮಾತು, ಕೃಷ್ಣ ರಾಧೆಯ ಪ್ರೇಮದ ಪರಿ ಅದನ್ನು ಅಕ್ಷರದಲ್ಲಿ ಇನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಬರೆದಷ್ಟೂ ಮುಗಿಯದ ಅಕ್ಷಯ ಪ್ರೇಮಕಾವ್ಯ ರಾಧೆ! ಈ ಸಾಲು ಬಹಳ ಇಷ್ಟ ಆಯ್ತು. ನಮ್ಮನ್ನು ನಾವು ಇದ್ದ ಹಾಗೆ ಸ್ವೀಕರಿಸುವ ಮಂದಿಯಲ್ಲ. ಈಗಂತೂ ಒಂದು ಇಂಚು ಆಚೀಚೆ ಬದಲಾವಣೆ ಆದರೂ ಚಿಂತಿಸುತ್ತೇವೆ. ಇಲ್ಲಿರುವ ಚಿತ್ರೆಯ ಕಥೆ ಕೇವಲ ಕಥೆಯಲ್ಲ, ಇನ್ಯಾರನ್ನೋ ಮೆಚ್ಚಿಸುವ ಸಲುವಾಗಿ ನಾವೂ ಆಗಾಗ ಮುಖವಾಡ ತೋಡುತ್ತೇವೆ. ಅದನ್ನೇ ಹೇಳಿದ ಹಾಗಿದೆ. ಅದೆಷ್ಟೇ ನೋವು ದುಃಖ ಕಷ್ಟ ಬಂದರೂ ಚೂರು ಸುಳಿವೇ ಕೊಡದ ಹಾಗೆ ಬದುಕೋದು ಹೆಣ್ಣು. ಅದರಲ್ಲೂ ತಾಯಿ! ಈಚೆ ಗಂಡನ ಮಾತು ಮೀರುವ ಹಾಗಿಲ್ಲ, ಮಕ್ಕಳ ಮಾತು ಕೇಳದೆ ಇರುವ ಹಾಗಿಲ್ಲ. ಅವಳ ಮಾತು ಕೇಳೋಕೆ ಯಾರು ಇರೋದೇ ಇಲ್ಲ. ಎಷ್ಟೋ ಸಲ ನಮ್ಮವರೇ ನಡೆಸುವ ದೌರ್ಜನ್ಯ ಶೋಷಣೆ ; ಆದರೂ ಸಹ ಯಾರಿಗೂ ಹೇಳುವ ಧೈರ್ಯ ಮಾಡುವುದಿಲ್ಲ. ಅಲ್ಲಿ ಅಪ್ಪ-ಅಮ್ಮನ ಮರ್ಯಾದೆ, ಕುಟುಂಬದ ಮಾನ, ಸಮಾಜ ನಮ್ಮನ್ನು ಸ್ವೀಕರಿಸುತ್ತದ? ಎನ್ನುವ ಗೊಂದಲದ ಜೊತೆಗೆ ಹಾಗೆ ಬದುಕಿ ಬಿಡುತ್ತೇವೆ ಇಲ್ಲವೋ ಜೀವ ತೆಗೆದು ಕೊಳ್ಳುತ್ತೇವೆ. ಅಂತವರಿಗೆ ಇಲ್ಲೊಂದು ಸಾಂತ್ವನವಿದೆ. ಬದುಕಿಗೆ ಬೇಕಾದ ಭರವಸೆಯಿದೆ.
ಮನೆಯಲ್ಲಿ ಎಲ್ಲರನ್ನೂ ಸರಿದೂಗಿಸುವ ಅಪ್ಪನಿಗೆ ಅಮ್ಮನ ಇರುವು ಕಾಣದಿದ್ದರೆ ? ಕೊಂಚ ಸಮಯವೂ ಕೊಡದೆ ಹೋದರೆ? ಹೆಣ್ಣು ಕಾಯುವುದು ಹಂಬಲಿಸುವುದು ಕ್ಷಣದ ನೋಟಕ್ಕೆ, ಚಿಕ್ಕ ಸಾಂತ್ವನಕ್ಕೆ ಜೊತೆಯಲ್ಲಿ ಒಂದು ಹೆಜ್ಜೆಗೆ. ಅಂತಹ ಊರ್ಮಿ ನಮ್ಮೆಲ್ಲರ ಬದುಕಿನಲ್ಲೂ ಕಾಣುತ್ತಾಳೆ. ಯಶೋಧರೆ ತ್ಯಾಗದ ಸಾಲಿನಲ್ಲಿ ದಿವ್ಯ ಮೂರ್ತಿಯಾಗಿ ನಿಲ್ಲುತ್ತಾಳೆ. ಪ್ರಪಂಚಕ್ಕೆ ಮಾರ್ಗ ತೋರಿಸಿ ಬೋಧಿಸಿದ ಬುದ್ಧ ಪರಿತಪಿಸಿದ್ದು ಈಕೆಯ ಕ್ಷಮೆಗೆ. ಕ್ಷಮೆಯೇಕೆ ನೀಡಬೇಕು? ಅರ್ಧಕ್ಕೆ ಬಿಟ್ಟು ನಡೆದಿದ್ದಕ್ಕಾ! ಅಥವಾ ಮಗನಿಗೆ ತಂದೆಯಾಗದೆ ಉಳಿದದ್ದಕ್ಕಾ! ಜೊತೆಗೆ ನಡೆಯುವ ಪ್ರಮಾಣವನ್ನು ಸುಳ್ಳು ಎಂದು ಸಮರ್ಥನೆ ಮಾಡಿದಕ್ಕಾ ! ಯಾರಿದ್ದಾರೆ ಅವಳಿಗೆ ! ಮಗನಿಗೆ ಏನೆಂದು ಹೇಳಿಯಾಳು ತಂದೆಯ ಬಗ್ಗೆ?
ಮುಟ್ಟು ಹೆಣ್ಣಿನ ಬದುಕಿನಲ್ಲಿನ ಒಂದು ಭಾಗ. ಆಕೆ ನಾಲ್ಕೈದು ದಿನಗಳು ಪ್ರಕೃತಿಯ ಒಂದು ಬದಲಾವಣೆಗೆ ಭಾಗವಾಗುತ್ತಾಳೆ. ಈಗಿನ ಕಾಲದಲ್ಲಿ ತೀರಾ ಸಾಮಾನ್ಯವೆನಿಸುವ ಈ ವಿಚಾರ ಹಿಂದೆ ಹೇಗಿತ್ತು? ನಾಲ್ಕು ದಿನ ಮನೆಯ ಜಗಲಿಯ ಮೂಲೆಯಲ್ಲಿರಬೇಕು. ಈಗಲೂ ನಮ್ಮ ಕಡೆಯಲ್ಲಿ ಅದರ ರೂಢಿ ಇದೆ ಅದು ಬೇರೆ ಪ್ರಶ್ನೆ, ಒಂದು ಚೊಂಬು ನೀರು, ಒಂದು ಚಾಪೆ, ಅಡಿಕೆ ಗೋಣಿ, ಕಂಬಳಿ ಕೊಟ್ಟರೆ ಮುಗಿಯಿತು. ಸ್ನಾನಕ್ಕೆ ನೀರು ಸಹ ಅವರೇ ತೆಗೆದುಕೊಡಬೇಕು. ಈಗ ಬಿಡಿ ಪ್ಯಾಡು ನ್ಯಾಪ್ಕಿನ್ ಕಪ್ಪುಗಳು ಏನೇನೋ ಬಂದಿದೆ. ಆದರೆ ಆಗ ಆ ಕಾಟನ್ ಬಟ್ಟೆಯ ಬಳಕೆ ಒಂದು ನರಕ. ನಾವೆಲ್ಲರೂ ಅಲ್ಪವಾದರೂ ಅನುಭವಿಸಿದವರೇ. ಮಳೆಗಾಲದಲ್ಲಿ ಬಟ್ಟೆ ಒಣಗಲ್ಲ. ಸೊಪ್ಪು, ಹುಲ್ಲು ಹೀಗೆ ಎಲ್ಲಿಗೋ ಅಮ್ಮ ಹೊರಗೆ ಹೋಗಿ ಮನೆಗೆ ಬರುವಾಗ ಬಟ್ಟೆ ಒದ್ದೆಮುದ್ದೆ . ಅಂತಹದರಲ್ಲಿ ಮುಟ್ಟಿನ ರಕ್ತಸ್ರಾವ ಕೆಲವೊಮ್ಮೆ ತೊಟ್ಟಿಕ್ಕುತ್ತದೆಯಂತೆ. ಇದೆಲ್ಲವನ್ನು ನಾವು ಸಮಸ್ಯೆ ಎಂದು ಭಾವಿಸಿದ್ದೆವು. ಆದರೆ ಇಥಿಯೋಪಿಯಾದಲ್ಲೆಲ್ಲೋ ಹೆಣ್ಣಿನ ಯೋನಿ ಛೇದನ ಎಂಬ ಕ್ರೂರವಾದ ಆಚರಣೆಯ ಬಗ್ಗೆ ಕೇಳಿದಾಗ ನಾನು ಬೆಚ್ಚಿದ್ದೇನೆ. ಓದುತ್ತಾ ಓದುತ್ತಾ ಹೆದರಿದ್ದೇನೆ. ತನ್ನ ದೇಹದ ಭಾಗವನ್ನೇ ಹರಿದು ಹೊಲಿದರೆ ಆಕೆ ಇನ್ನೂ ಪವಿತ್ರಳು ; ಇಂತಹ ಪವಿತ್ರತೆಯೇ ಬೇಡ. ಅಲ್ಲಿಗೇ ಮುಗಿದವೇ ; ಮುಟ್ಟಿನ ಸಮಯದ ನೋವು, ಪ್ರತಿ ತಲ್ಲಣ ನೋವೂ ಇಲ್ಲಿ ಅಕ್ಷರದಲ್ಲಿ ವ್ಯಕ್ತವಾಗಿದೆ.
ನಂಗೇಲಿ ; ಬದುಕು ಅದೆಷ್ಟು ದುಸ್ತರ. ತನ್ನ ಮಾನವನ್ನು ಮುಚ್ಚಿಕೊಳ್ಳಲು ಬಟ್ಟೆ ತೊಡಲು ಸರ್ಕಾರಕ್ಕೆ ದುಡ್ಡು ಕೊಡಬೇಕು. ಇಲ್ಲಿ ಅಸಹಾಯಕ ಹೆಣ್ಣುಮಗಳ ಬದುಕನ್ನು ಕಂಡು ಮರುಗಿದ್ದೇನೆ. ಇನ್ನು ತನ್ನ ಶೀಲ ಪರಪುರುಷರ ಮುಂದೆ ಹರಣವಾಗುವುದೆಂದು ಸ್ತನಗಳನ್ನೇ ಕತ್ತರಿಸಿದ ನಂಗೇಲಿ ಹೆಣ್ಣುಮಕ್ಕಳ ಕುಲಕ್ಕೆ ಅಚ್ಚರಿ ಆಗ್ತಾಳೆ. ಅಯ್ಯೋ ನಂಗೇಲಿ ನಮ್ಮ ಈ ಕಾಲದಲ್ಲಿ ದುಡ್ಡಿದ್ದರೂ ಹೆಣ್ಣುಮಕ್ಕಳು ಮೈ ಮುಚ್ಚದೆ ಉಳಿದಿದ್ದಾರೆ, ನೀನು ಈ ಕಾಲದಲ್ಲಿ ಇರಬೇಕೆಂದು ಕೂಗಬೇಕು ಅನ್ನಿಸುತ್ತದೆ. ಹೆಂಡತಿಯ ಜೊತೆಗೆ ತಾನೂ ಚಿತೆಯೇರಿದ ಚಿರುಕೊಂಡಂನ್ ನಿಜಕ್ಕೂ ಇಂತಹ ಗಂಡನಿದ್ದಾನೆ ಎಂದು ಪ್ರೀತಿ ಆಗುತ್ತೆ. ಒಟ್ಟಾರೆ ನಂಗೇಲಿ ನಮ್ಮಲ್ಲಿ ಒಬ್ಬಳಾಗಿ ಕನವರಿಕೆಯಲ್ಲಿ ಉಳಿದು ಹೋಗುತ್ತಾಳೆ.
ಇಲ್ಲಿ ಹೆಣ್ಣು, ಅವಳ ತಲ್ಲಣಗಳಿವೆ, ಬಯಕೆಯಿದೆ, ನೋವಿದೆ ; ಅಂತರಾಳವಿದೆ. ಬಚ್ಚಿಟ್ಟ ಅದೆಷ್ಟು ಮಾತಿದೆ. ಹೇಳದೇ ಉಳಿದ ಭಾವವಿದೆ. ಸಮಯ ಮಾಡಿ ಓದಿ, ಸುಧಾ ಮೇಡಂ ನಾನಂತೂ ನಿಮ್ಮ ಅಭಿಮಾನಿ!
ನಿಮ್ಮ ಹಲವು ಬರಹಗಳ ಅಭಿಮಾನಿ ಸುಧಾ ಮೇಡಂ; ಪ್ರತಿ ಸಾಲನ್ನು ಬಿಡದೇ ಓದುವ ಚಾಳಿ ಅಂತೂ ಇತ್ತು , ಇವತ್ತು ಬಕುಲದ ಬಾಗಿಲಿನಿಂದ ಓದುವ ಸಮಯ ಬಂತು. ನಿಜಕ್ಕೂ ಹೇಳ್ತೇನೆ ನಾನು ಓದಿ ಮುಗಿಸಿ ಸುಮಾರು ನಾಲ್ಕು ಗಂಟೆಯ ಮೇಲಾದರೂ ಇನ್ನೂ ನನಗೆ ಹೊರಗೆ ಬರೋಕೆ ಆಗ್ತಾ ಇಲ್ಲ; ಒಮ್ಮೆ ಮನಸಾರೆ ಅತ್ತಿದ್ದೀನಿ.
ಎಲ್ಲರಲ್ಲೂ ಇರುವ ರಾಧೆ ; ಸಿಗದ ಶ್ಯಾಮ ; ಅವ್ಯಕ್ತ ಪ್ರೇಮ ಎಲ್ಲವೂ ನೆನಪಾಗಿ ಹೋಯ್ತು, ರಾಧೆ ನಿಜಕ್ಕೂ ಅವಳು ಪ್ರೇಮ ಅಷ್ಟೆ ಅನ್ನೋದು ಬಿಟ್ಟರೆ ಇನ್ಯಾವ ಭಾವ ಉಳಿಯಲಿಲ್ಲ. ನನ್ನಮ್ಮ ನಿತ್ಯ ನೋಡುವ ಅನುಭವಿಸುವ ಕಥೆ ನೀವೇ ಹೇಳಿ ಬಿಟ್ಟಿರಿ. ಅಲ್ಲಿ ಅವರೂ ನನಗೆ ಅಮ್ಮನೇ ಆದರು. ಎಲ್ಲೋ ಶೋಷಣೆಗೆ ಒಳಗಾದ ಹೆಣ್ಣು ಮನಕ್ಕೆ ಸಾಂತ್ವನ ನೀಡಿದಿರಿ. ಮಾಲಿನಿ ನಾವೂ ಆಗಿರಬಹುದು. ಒಂದು ಧೈರ್ಯ ಬದುಕುವ ಭರವಸೆ ಸಿಕ್ಕಿತು. ಊರ್ಮಿ ಎಂದಾಗ ನನ್ನ ಅಮ್ಮಮ್ಮ ನೆನಪಾದಳು. ಅಜ್ಜಯ್ಯ ಹೇಳಿದ್ದೇ ಆಗಬೇಕು ಅನ್ನುವ ಮನೆ ಕಟ್ಟು ಪಾಡು ಹೀಗೆ ನನ್ನದೇ ಬದುಕು ಎನ್ನಿಸಿ ಹೋಯಿತು. ಯಶೋಧರೆ ನಾನೇ ಅವಳಾಗಿದ್ದರೆ ಎನ್ನುವ ಕಲ್ಪನೆಗೆ ನಾನು ಹೆದರಿ ಅಂಜಿದ್ದೇನೆ. ಜಗತ್ತಿಗೆ ಅವನು ಬುದ್ಧ ಆದರೆ ಹೆಂಡತಿ ಮಗನಿಗೆ? ದಕ್ಕದ ಜೀವ. ನನ್ನ ಸಂಪೂರ್ಣ ಸೋಲಿಸಿದ್ದು ನಂಗೇಲಿ; ಹೆಣ್ಣು ಜನ್ಮವೇ ಬೇಡ ಎನ್ನಿಸಿ ಬಿಟ್ಟಿತು. ನಾವೆಷ್ಟು ಪುಣ್ಯ ಮಾಡಿದ್ದೇವೆ! ಅವಳ ಅಮ್ಮನ ಅಸಹಾಯಕತೆ. ಮೈ ಮುಚ್ಚಲು ದುಡ್ಡು ಕೊಡಬೇಕು ? ಒಂದೊಂದು ಸಾಲೂ ಓದುತ್ತಾ ಕಳೆದೇ ಹೋಗಿದ್ದೇನೆ. ಇಂತಹ ಒಳ್ಳೆಯ ಪುಸ್ತಕ ತಡವಾಗಿ ಓದಿದ್ದಕ್ಕೆ ರಾಶಿ ಬೇಜಾರಿದೆ; ಮತ್ತೆ ಮತ್ತೆ ನಿಮ್ಮ ಅಕ್ಷರಗಳ ಅಭಿಮಾನಿಯಾದೆ!
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ