- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
“ಬೆಟ್ಟದ ಮೇಲಿನ ನೆಲ್ಲಿಕಾಯಿಗು ಸಮುದ್ರದೊಳಗಣ ಉಪ್ಪಿಗು ಎತ್ತಣಿಂದೆತ್ತ ಸಂಬಂಧವಯ್ಯಾ” ಎಂಬಂತೆ “ಭಾರತದ ಹೋಳಿ ಹಬ್ಬಕ್ಕೂ ಕರೊನ ವೈರಸ್ಗೂ ಎತ್ತಣಿಂದೆತ್ತ ಸಂಬಂಧವಯ್ಯಾ” ಎನ್ನುವ ಹಾಗಾಗಿದೆ. ಈ ಬಾರಿ ಎರಡನೆ ಅಲೆ ಎಂದೇ ಬಹುತೇಕ ಭಾವಿಸಿರುವ ಕೊರೊನ ವೈರಸ್ ಎಂಬ ಕಿರಿಕಿರಿಯಿಂದ ಹೋಳಿ ಆಚರಣೆಗೆ ಘೋಷಿತ ನಿರ್ಬಂಧ ವಿಧಿಸಿದೆ. ಹೇಗೂ ಇರಲಿ “ಹೋಳಿಹೋಳಿ… ಬಣ್ಣ ಹೋಳಿ…,”, “ ಭೂರಾ ನ ಮಾನೋ.. ಹೋಲಿ ಹೈ…” ಎಂದು ಮತ್ತೊಮ್ಮೆ ಈ ಹಬ್ಬ ಬಂದಿದೆ.
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಹೋಳಿ ಹಬ್ಬ ಇಲ್ಲವೆ ಕಾಮನ ಹಬ್ಬವನ್ನು ಆಚರಿಸುವುದು ವಾಡಿಕೆ. ವರ್ಷಗಳು ಉರುಳಿದಂತೆ ಈ ಹಬ್ಬದ ಆಚರಣೆ ಜಾತಿ, ಮತ, ಧರ್ಮ, ದೇಶ ಇವುಗಳನ್ನು ಮೀರಿ ಆಚರಿಸಲ್ಪಡುತ್ತಿತ್ತು. ಆದರೆ ಈ ವರ್ಷವೂ ಕೊರೊನಾದ ಕರಿನೆರಳು ಹೋಳಿ ಆಚರಣೆ ಮೇಲಿದೆ.
ಹೋಳಿ, ಓಕುಳಿ, ಎಂಬ ಹೆಸರಿನಿಂದ ಕರೆಸಿಕೊಳ್ಳುವ ಈ ಹಬ್ಬ ಬಣ್ಣದ ಹಬ್ಬ, ಸಂಭ್ರಮದಿ ಕುಣಿದು ಕುಪ್ಪಳಿಸುವ ಹಬ್ಬ. ಇದರ ಹಿಂದೆ ಎರಡು ಕತೆಗಳನ್ನು ಉಲ್ಲೇಖ ಮಾಡಬಹುದು. ತಾರಕಾಸುರ ಎಂಬ ರಾಕ್ಷಸ ಲೋಕಕಂಟಕನಾಗಿ ಮೆರೆಯುತ್ತಾ ಇರುತ್ತಾನೆ. “ತನಗೆ ಮರಣ ಬರುವುದೇ ಆದರೆ ಶಿವನಿಗೆ ಜನಿಸಿದ ಏಳನೆಯ ಶಿಶುವಿನಿಂದ ಮರಣ ಬರಲಿ” ಎಂಬ ವರವನ್ನು ಬ್ರಹ್ಮನಿಂದ ಪಡೆದಿರುತ್ತಾನೆ. ಭೋಗ ಸಮಾಧಿಯಲ್ಲಿ ಇದ್ದ ಶಿವನು ಪಾರ್ವತಿಯೊಡನೆ ಸಮಾಗಮವಾಗುವುದು ಸಾಧ್ಯವಿರಲಿಲ್ಲ. ಹಾಗಾಗಿ ದೇವತೆಗಳು ಮನ್ಮಥನಲ್ಲಿ ಹೋಗಿ ತಾರಕಾಸುರನ ಉಪಟಳದಿಂದ ತಪಪ್ಪಿಸಿಕೊಳ್ಳಲು ಹೇಗಾದರು ಮಾಡಿ ಶಿವ ಪಾರ್ವತಿಯನ್ನು ಮೋಹಿಸುವಂತೆ ಮಾಡುಬೇಕಾಗಿ ಕೇಳಿಕೊಂಡಾಗ ಆತ ಶಿವನ ಮೇಲೆ ಹೂ ಬಾಣಗಳನ್ನು ಬಿಡುವುದಾಗಿ ನಿರ್ಧರಿಸಿ ಬಾಣ ಪ್ರಯೋಗ ಮಾಡಿದರೆ ಕೋಪಗೊಂಡ ಶಿವನು ಅಗ್ನಿ ನೇತ್ರದಿಂದ ಸುಟ್ಟು ಭಸ್ಮ ಮಾಡುತ್ತಾನೆ. ಮತ್ತೆ ಪಾರ್ವತಿಯ ಕೋರಿಕೆಯಂತೆ ಅವನನ್ನು ಶಿವನು ಅನಂಗನಾಗಿ ಜಗತ್ತಿನಲ್ಲಿ ಚಿರಾಯುವಾಗುವಂತೆ ಮಾಡುತ್ತಾನೆ. ಲೋಕಕಲ್ಯಾಣಕ್ಕಾಗಿ ನಡೆದ ಈ ಕಾರ್ಯ ಶುಭ ಎಂದು ಭಾವಿಸಿ ಆ ದಿನವನ್ನು ಅಂದಿನ ಹುಣ್ಣಿಮೆಯನ್ನು ಕಾಮನ ಹುಣ್ಣಿಮೆಯಾಗಿ ಆಚರಿಸುವಂತಾಯಿತು.
ಇನ್ನು ಕನಕದಾಸರ ‘ಮೋಹನ ತರಂಗಿಣಿಯಲ್ಲಿ’ ಕಾಮದಹನದ ಪ್ರಸಂಗ ಹೇಗೆ ಬಂದಿದೆ ಎಂಬುದನ್ನು
ಪದ್ಯಗಳ ಸಹಿತ ಭಾವಾರ್ಥವನ್ನು ಇಲ್ಲಿ ನೋಡೋಣ.
ಗಂಡಲರ್ವಕ್ಕಿ ತಿರುವಾಂತ ಕುಸುಮಕೋ
ದಂಡವನೆಡೆಗೆಯ್ಯೊಳಾತು
ಚಂಡವಿಕ್ರಮ ನಯ್ದಿಲೆಗೋಲ ತಿರುಹುತ
ಕಂಡನು ಕುಳಿತಿರ್ದ ಶಿವನ
ಗಂಡು ದುಂಬಿಗಳ ಹೆದೆಯುಳ್ಳ ಹೂಬಿಲ್ಲನ್ನು ಎಡಗೈಯಲ್ಲೂ ಹಿಡಿದು, ನೀಲಿ ಕಮಲದ ಬಾಣವನ್ನು ತಿರುಗಿಸುತ್ತ, ಪ್ರಚಂಡ ಪರಾಕ್ರಮಿಯಾದ ಮನ್ಮಥನು ಅಲ್ಲಿ ಕುಳಿತಿದ್ದ ಶಿವನನ್ನು ಕಂಡನು.
ಕಂಜ ಬಾಂದವಚಂದ್ರಶತಕೋಟಿ ತೇಜಃ
ಪುಂಜ ಶಾರ್ದೂಲಚರ್ಮದಲಿ
ಸಂಜೋಗದೆ ಕುಳಿತಿರ್ದ ತಪೋಗ್ರತೆ
ಗಂಜದೆ ಕಾಮ ನಿಟ್ಟಿಸಿದ
ಶತಕೋಟಿ ರವಿಶಶಿಗಳ ಪ್ರಭೆಯುಳ್ಳವನಾಗಿ,ಹುಲಿಯ ಚರ್ಮದ ವಸ್ತ್ರಧಾರಿಯಾಗಿ ಕುಳಿತಿದ್ದ ಶಿವನ ತಪಸ್ಸಿನ ಉಗ್ರತೆಗೆ ಹೆದರದೆ ಕಾಮನು ಶಿವನನ್ನು ನೋಡಿದನು
ವಿಲಸಿತ ಕುಸುಕೋದಂಡಕ್ಕೆ ಬಿಗಿದ ಕ
ಮ್ಮಲರ್ವಕ್ಕಿದೆಯ ಜೇವಿಡೆದು
ಗೆಲುವಾಂತು ಕಿವಿವರೆದೆಗೆದೆಚ್ಚ ನೀಲೋ
ತ್ಪಲಬಾಣದಿಂದಲೀಶ್ವರನ
ಮನೋಹರವಾದ ಹೂಬಿಲ್ಲಿಗೆ ಬಿಗಿದ ತುಂಬಿಗಳ ಹೆದೆಯನ್ನು ಮೀಟಿ, ಉತ್ಸಾಹಭರಿತನಾಗಿ ಕಿವಿಯವರೆಗೂ ಅದನ್ನು ಎಳೆದು ಕನ್ನೈದಿಲೆಯ ಬಾಣದಿಂದ ಈಶ್ವರನನ್ನು ಹೊಡೆದನು.
ತಾಗಿದು ಮರ್ಮಸ್ಥಾನವ ಕಡಿದು ವಿ
ಭಾಗಿಸೆ ದೃಢಚಿತ್ತವಿಡಿದು
ಭೋಗಿಭೂಷಣ ಕೋಪವ ತಾಳ್ದು ಕಿಡಿಕಿಡಿ
ಯಾಗಿ ಕೆಂಗಿಡಿಗಣ್ಣ ತೆರೆದ
ಕಾಮ ಬಾಣವು ಶಿವನ ಮರ್ಮಸ್ಥಲವನ್ನು ತಾಗಿ ದೃಢಚಿತ್ತವನ್ನು ಕಡಿದು ತುಂಡರಿಸಿತು. ಆಗ ಸರ್ಪಭೂಷಣನು ಕನಲಿ ಕಿಡಿಕಿಡಿಯಾಗಿ ಉರಿಗಣ್ಣು ತೆರೆದನು.
ಭುಗಿ ಭುಗಿ ಛಿಟಿಛಿಟಿಲೆಂದು ಲೋಚನದೊಳಿ
ರ್ದೊಗೆದ ದಳ್ಳುರಿಸುತ್ತಸ್ಮರನ
ಬಿಗಿದ ಬತ್ತಲಿಕೆ ಕರ್ವಿಲ್ಲುಸಹಿತೆ ಸು
ಟ್ಟುಗಿದು ಕಡಿ ನಭಸ್ಥಲಕೆ
ಭುಗಿಲ್ಬುಗಿಲೆಂದು ಛಿಟಿಛಿಟಿಲೆಂದು ಹಣೆಗಣ್ಣಿನಿಂದ ಹೊರ ಹೊಮ್ಮಿದ ಜ್ವಾಲೆಯು ಬಿಗಿದ ಬತ್ತಳಿಕೆ ಕಬ್ಬನ ಬಿಲ್ಲನ್ನು ಮೊದಲುಗೊಂಡು ದಹಿಸಿ ಆಕಾಶಕ್ಕೆ ತೋರಿತು
.ಕರಗಸವೆತ್ತ ಕದಳಿಯೆತ್ತ ಕಾಲಸಂ
ಹರನೆತ್ತ ಕಂದರ್ಪನೆತ್ತ
ತರವಲ್ಲದ ಕಾರ್ಯವ ನೆಗಳ್ದೆಡೆ ಸುರ
ನರನಾಗಲೋಕ ಮೆಚ್ಚುವುದೇ
ಗರಗಸಕ್ಕೆ ಬಾಳೆ ಸಾಟಿಯೇ? ಕಾಲಸಂಹರನಾದ ಶಿವನಿಗೆ ಕಾಮದೇವನು ಸಾಟಿಯೇ? ಉಚಿತವಲ್ಲದ ಕಾರ್ಯವನ್ನು ಮಾಡಿದರೆ ದೇವಲೋಕವಾಗಲಿ, ಮಾನವಲೋಕವಾಗಲಿ, ನಾಗಲೋಕವಾಗಲಿ ಮೆಚ್ಚಬಲ್ಲುದೇ?
ಸರಳವಾಗಿ ಕಾಮದಹನ ಪ್ರಸಂಗವನ್ನು ಕಾವ್ಯಾತ್ಮಕವಾಗಿ ಹೇಳಿರುವ ಕನಕದಾಸರ ಅನನ್ಯತೆ ಇಲ್ಲಿ ಗಮನಸೆಳೆಯುತ್ತದೆ. ಕಾಳಿದಾಸನ ‘ರತ್ನಾವತಿ ಕಲ್ಯಾಣ’ ಹಾಗು ಮುದ್ದಣನ ‘ರತ್ನಾವತಿ ಕಲ್ಯಾಣ’ ಕೃತಿಗಳಲ್ಲೂ ಈ ಸಂದರ್ಭವನ್ನುನೋಡಬಹುದು. ಯಕ್ಷಗಾನದಲ್ಲಿ ‘ರತ್ನಾವತಿ ಕಲ್ಯಾಣ’ ಹೆಸರಿನಲ್ಲಿ ಪ್ರಸಂಗಗಳಲ್ಲಿ ಈ ಪ್ರಸಂಗ ರಸವತ್ತಾಗಿ ಬರುತ್ತದೆ.
ಹಿರಣ್ಯಕಶ್ಯಪು ತನ್ನ ಮಗ ಆತನ್ನು ದೇವರೆಂದು ಒಪ್ಪದೇ ಇದ್ದಾಗ ತನ್ನ ತಂಗಿ ಹೋಲಿಕಾಳ ಜೊತೆ ಅಗ್ನಿಕುಂಡಕ್ಕೆ ಇಳಿಸುತ್ತಾನೆ. ಆಕೆಗೆ ಬೆಂಕಿಗೆ ಬಿದ್ದರೂ ಸುಡದಂಥ ಬಟ್ಟೆ ಧರಿಸುವ ವರವಿರುತ್ತದೆ.ಆದರೆ ವಾಯುದೇವನಿಂದ ಆ ಬಟ್ಟೆ ಗಾಳಿಯಲ್ಲಿ ಹಾರಿ ಹೋಗುತ್ತದೆ ಮಗ ಪ್ರಹ್ಲಾದ ಬದುಕುತ್ತಾನೆ ಹೋಳಿಕಾ ಸುಟ್ಟು ಭಸ್ಮವಾಗುತ್ತಾಳೆ.
ಈ ಎರಡೂ ಕತೆಗಳು ಅರಿಷ್ಡವರ್ಗಗಳನ್ನು ಬಿಡಬೇಕು ಕೆಡುಕಿಗೆ ನಾಂದಿ ಹಾಡಿ ಉತ್ತಮಿಕೆಯನ್ನು ರೂಢಿ ಮಾಡಿಕೊಳ್ಳಬೇಕೆಂಬ ಸಂದೇಶವನ್ನು ಹೇಳುತ್ತದೆ.
ಹೋಳಿ ಹಬ್ಬವು ಕಾಮ ಕ್ಷಣಿಕ, ಪ್ರೇಮ ಶಾಶ್ವತ ಎಂದೂ. ಕಾಮ ದೈಹಿಕವಾದದ್ದು. ಪ್ರೇಮ ಮಾನಸಿಕವಾದದ್ದು ಎಂದೂ ನಮ್ಮ ಅಂತರಂಗಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಪ್ರಿಯ ಬದುಕನ್ನು ಕಂಡೊಕೊಳ್ಳುವ ಪರಿಯನ್ನು ಅರ್ಥೈಸುತ್ತದೆ..
ಹೋಳಿ ಹಬ್ಬವನ್ನು ‘ವಸಂತೋತ್ಸವ’, ‘ರಂಗಪಂಚಮಿ’, ‘ಫಗ್ವಾಡೋಲ್ ಯಾತ್ರಾ’ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ. ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ. ವಿಜಯನಗರ ಅರಸರ ಕಾಲದಲ್ಲಿ ಹಾಗು ಅಹಮದ್ ನಗರ, ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳು ದೊರೆತಿವೆ. ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಉಲ್ಲೇಖವಿದೆ.
ಬೇಲೂರಿನ ಮದನಿಕೆಯರಲ್ಲಿನ ಶಿಲ್ಪದಲ್ಲಿ ವಸಂತೋತಸ್ವಕ್ಕೆ ಆಹ್ವಾವಾನಿಸುವ ಮುಖ್ಯ ಶಿಲ್ಪ ಹಾಗು ಓಕುಳಿಯ ಸಿದ್ಧತೆ ಮಾಡಿಕೊಂಡಿರುವ ಸಹ ಶಿಲ್ಪಗಳನ್ನು ಕಾಣಬಹುದು. ಇದನ್ನು ಡಿವಿಜಿಯವರು ತಮ್ಮ “ಅಂತಃಪುರಗೀತೆ” ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಜೀವನ ಪ್ರೇಮಿಗೆ ಯಾವಾಗಲೂ ವಸಂತೋತ್ಸವವೇ, ವಸಂತೋತ್ಸವ, ವಸಂತಕಾಲ ಎಂದರೆ ಎಲ್ಲರಿಗೂ ಬೇಕಾದುದೇ ಅಂತ ಜೀವನ ಪ್ರೀತಿಯನ್ನು ಸ್ಫುಟಗೊಳಿಸುವ ಶಿಲ್ಪ ಎಂದರೆ ವಾಸಂತೀ ಎಂಬ ಶಿಲ್ಪ. ಎಡಗೈಯ್ಯಲ್ಲಿ ವೀಳ್ಯವನ್ನು, ಬಲಗೈಯಲ್ಲಿ ಜೀರ್ಕೊಳವೆಯನ್ನು ಹಿಡಿದು ಪ್ರಿಯಕರನ ನಿರೀಕ್ಷೇಯಲ್ಲಿದ್ದಾಳೆ ರಾಕೇಂದುಮುಖಿ. ಅವಳಲ್ಲಿ ವಿರಹವೇದನೆ ಮಡುಗಟ್ಟಿದೆ. ಅಂತಹ ಭಗ್ನಹೃದಯಿಗೆ ಸಖಿಯರು ಅರ್ಥಾತ್ ಸಹಶಿಲ್ಪಗಳು, ಸಂತೋಷ ಸಂಜೀವಿನಿ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಕೆಯನ್ನು ಸುತ್ತುವರಿದಿರುವ ಶಿಲ್ಪಗಳೆ ಅವಳನ್ನು ವಸಂತೋತ್ಸವಕ್ಕೆ ಆಹ್ವಾನಿಸುವ ಪರಿ ಎಂಥವರನ್ನು ಬೆರಗು ಗೊಳಿಸುವಂತಹದು.
ಹೋಳಿ ಆಚರಣೆಯಲ್ಲಿ ಬಣ್ಣಗಳು
ಹೋಲಿ ಬಣ್ಣಗಳ ಹಬ್ಬ ವಿನೋದಕ್ಕೆಂದು ಬಳಸುತ್ತ ಇದ್ದ ಈ ಬಣ್ಣಗಳು ಆರೋಗ್ಯಕ್ಕೆ ಸಹಕಾರಿಯೂ ಆಗಿದ್ದವು. ಅರಿಶಿನ, ಬೇವು, ಹೂಗಳು, ಮೆಹೆಂದಿಸೊಪ್ಪು ಮುಂತಾದ ಕಚ್ಚಾ ಪದಾರ್ಥಗಳನ್ನು ಉಪಯೋಗಿಸಿ ಬಣ್ಣಗಳನ್ನು ಮಾಡಲಾಗುತ್ತಿತ್ತು ಆದರೆ ಈಗ ರಾಸಯನಿಕಯುಕ್ತ ಬಣ್ಣಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೃತಕ ಬಣ್ಣದಲ್ಲಿ ಡೀಸೇಲ್, ಅಲ್ಯುಮಿನಿಯಂ, ಬ್ರೋಮೈಡ್, ತಾಮ್ರದ ಸಲ್ಫೇಟ್, ಪಾದರಸ, ಮತ್ತು ಕ್ರೋಮಿಯಂ ಅಯೋಡಿನ್ ಗಳು ಇರುತ್ತವೆ.
- ಸಿಲ್ವರ್ ಕಲರಿನಲ್ಲಿರುವ ಅಲ್ಯೂಮಿನಿಯಂ ಅಯೋಡಿನ್ ಎಂಬುದು ಕ್ಯಾನ್ಸರ್ ಕಾರಕವಾಗಿದೆ.
- ಹಸಿರು ಬಣ್ಣದಲ್ಲಿ ಕಾಪರ್ ಸಲ್ಫೇಟ್ ಇರುವುದರಿಂದ ದೃಷ್ಟಿ ದೋಷವಾಗುವ ಸಾಧ್ಯತೆಯಿರುತ್ತದೆ.
- ಕೆಂಪು ಬಣ್ಣದಲ್ಲಿ ಸಲ್ಫೇಟ್ನ ಅಂಶ ಹೆಚ್ಚಾಗಿ ಇರುವುದರಿಂದ ಮಂದಬುದ್ಧೀ, ಮತ್ತು ಪಾರ್ಶ್ವ ವಾಯುವಾಗುವ ಸಾಧ್ಯತೆಯಿರುತ್ತದೆ.
- ನೀಲಿ ಬಣ್ಣ ಇದು ಚರ್ಮ ಕಾಯಿಲೆಗಳನ್ನು ತರಿಸುತ್ತದೆ. ಕ್ಲೋರಿನಂಶ ಇರುವುದರಿಂದ ಅಸತಮಾಕ್ಕೆ ಕಾರಣವಾಗುತತದೆ.
- ಇಷ್ಟಲ್ಲದೆ ಗಾಳಿಯ ಮೂಲಕ ಸೀಸದ ಆಕ್ಸ್ಐಡ್ ಹೊಂದಿರುವ ಗಾಢಬಣ್ಣವನ್ನು ಅಧಿಕವಾಗಿ ಸೇವಿಸುವುದರಿಂದ ಮೂತ್ರಪಿಂಡದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಬಣ್ಣಗಳು ನೇರವಾಗಿ ನಮ್ಮ ನರಮಂಡಲದ ಮೇಲೆ ದಾಳಿ ಮಾಡುತ್ತವೆ. ಜೊತೆಗೆ ಕೂದಲಿನ ಆರೋಗ್ಯವನ್ನು ಬಹುಬೇಗನೆ ಕಸಿಯುತ್ತವೆ.
- ಆರೋಗ್ಯಕರ ಹೋಳಿಗೆ ಸಲಹೆಗಳು
- ಸಾವಯವ ಬಣ್ಣಗಳು ಸವಲ್ಪ ತುಟ್ಟಿಯಾದರೂ ಅವುಗಳನ್ನು ಖರೀದಿಸುವುದು ಉತ್ತಮ.
- ಸನ್ ಕ್ರೀಂಲೋಶನ್ಗಳನ್ನು ಬಳಸುವುದು ಉತ್ತಮ
- ಹೋಳಿ ಆಚರಣೆಯ ನಂತರ ಬಣ್ಣಗಳನ್ನು ತೆಗೆಯಲು ಕ್ಲೆನ್ಸ್ರ್ಗಳನ್ನು ಬಳಸುವುದು ಉತ್ತಮ.
ಹೋಳಿಯನ್ನು ಕರ್ನಾಟಕದಲ್ಲಿ ಎಲ್ಲಮ್ಮನಗುಡ್ಡದಲ್ಲಿ ಅದ್ದೂರಿ ಜಾತ್ರೆ ಮಾಡುವ ಮೂಲಕ, ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಮೂಲಕ, ಶ್ರೀ ಲಕ್ಷ್ಮೀನರಸಿಂಹ ದೇವಾಲಯಗಳಲ್ಲಿ ರಥೋತ್ಸವಗಳನ್ನು ಆಚರಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. ಫಾಲ್ಗುಣ ಹುಣ್ಣಿಮೆಯಲ್ಲಿ ಗಿಡಮರಗಳು ಚಿಗುರಿ ಹೂಗೊಂಚಲುಗಳು ಮೂಡುತ್ತಿರುತ್ತವೆ. ಇದು ವಸಂತನ ಆಗಮನವನ್ನು ಸೂಚಿಸುತ್ತದೆ .ಹಿಂದೆ ಈ ಸಂದರ್ಭವನ್ನು ರಾಜರು ಕೌಮುದಿ ಮಹೋತ್ಸವ ಆಚರಿಸುವುದರ ಮೂಲಕ ಸಂಭ್ರಮಿಸುತ್ತಿದ್ದರು. ಈಗ ಇವೆಲ್ಲಾ ಸಾಮೂಹಿಕ ಆಚರಣೆಗಳು ಆಗಿವೆ.
ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ ಅದಕ್ಕೆ ಹಳೇ ಬಟ್ಟೆಗಳನ್ನೆಲ್ಲ ಧರಿಸಿ ಸಾಮೂಹಿಕವಾಗಿ ಲಂಕೇಶನನ್ನು ಸುಡುತ್ತಾರೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಆ ದಿನ ಮನೆಯಲ್ಲಿರುವ ವ್ಯರ್ಥ ವಸ್ತುಗಳನ್ನೆಲ್ಲ ತಂದು ಒಂದೆಡೆ ರಾಶಿ ಹಾಕಿ ಹುಡುಗನೊಬ್ಬನಿಗೆ ಶಿಖಂಡಿಯ ವೇಶ ಹಾಕಿಸಿ ಅವನಿಂದ ಬೇಡದ ವಸ್ತುಗಳ ರಾಶಿಗೆ ಬೆಂಕಿ ಇಡುವುದಿದೆ. ಇನ್ನು ಕಾಮದಹನದ ಸಂದರ್ಭದಲ್ಲಿ ತೆಂಗಿನ ಕಾಯಿಯನ್ನು ಕಾಮನ ತಲೆಯನ್ನು ಎಸೆಯುವರು ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎಂಬ ನಂಬಿಕಯೂ ಇದೆ. ಕಾಮನನ್ನು ಸುಟ್ಟು ಅವನ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುವುದು ಕೂಡ ಮನದ ಕೆಟ್ಟ ಕಾಮನೆಗಳನ್ನು ಸುಡುವುದರ ಸಂಕೇತವೆಂದು ತಿಳಿಯುವುದಿದೆ. .
ಒಟ್ಟಾರೆ ಅಂತರಂಗ ಹಾಗು ಬಹಿರಂಗ ಶುದ್ಧಿಯನ್ನು ಪಡೆಯಬೇಕೇಂಬುದು ಈ ಆಚರಣೆಗಳ ಉದ್ದೇಶವಾಗಿದೆ. ಶಿವನ ಹಣೆ ಎಂದರೆ ಜ್ಞಾನಚಕ್ಷು, ಕಾಮ ಎಂದರೆ ಕೆಟ್ಟದ ಆಸೆ .ಕೆಟ್ಟ ಆಸೆಯನ್ನು, ಕೆಟ್ಟ ಕಾಮನೆಗಳನ್ನು ಜ್ಞಾನ ಚಕ್ಷುವಿನ ಸಹಾಯದಿಂದ ಸುಟ್ಟು ಉತ್ತಮ ಸಂಸ್ಕಾರ ಹೊಂದುವುದು ಹೋಳಿ ಆಚರಣೆಯ ಉದ್ದೇಶ.
ಒಟ್ಟು ಇನ್ನೊಮ್ಮೆ ಹೋಳಿ ಬಂದಿದೆ. ರಂಗಿನ ಹಬ್ಬ ರಂಗಾಗಿರಲಿ. ರಸಾಯನಿಕಗಳನ್ನು ಬಳಸಿ ಮಾಡಿದ ಬಣ್ಣಗಳಿಂದ ಆದಷ್ಟೂ ದೂರವಿದ್ದು . ಪರಸ್ಪರ ಸಾಮರಸ್ಯ ಕೆಡಿಸಿಕೊಳ್ಳದೆ ಸಂತಸದ ದ್ಯೋತಕವಾಗಿ ಹಬ್ಬದ ಆಚರಣೆಯಾದರೆ ಹಬ್ಬ ಇನ್ನಷ್ಟು ಕಳೆಗಟ್ಟುತ್ತದೆ. ಆದರೆ ಈ ಬಾರಿ ಕೊರೊನಾ ಎಂಬ ಕಳೆ ಹೋಳಿಯನ್ನು ಕಳೆಗುಂದಿಸಿದೆ . ಎಲ್ಲಾ ಸಾಂಕ್ರಾಮಿಕ ವ್ಯಾಧಿಗಳು ನಿವಾರಣೆಯಾಗಿ ವಸಂತೋತ್ಸವ , ಹೋಳಿಹಬ್ಬ ಮುಂದಿನ ದಿನಮಾನಗಳಲ್ಲಿ ಕಳೆಗಟ್ಟಲಿ ಎಂಬ ಬಯಕೆ ನನ್ನದು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್