- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಭಾರತ ಬಹುತ್ವದ ದೇಶ. ಇಲ್ಲಿ ನಡೆದಂತೆಲ್ಲಾ ಅಷ್ಟಷ್ಟು ದೂರಕ್ಕೆ ಭಾಷೆ, ಆಚರಣೆ, ಸಂಪ್ರದಾಯ, ಕಲೆ, ಸಂಸ್ಕೃತಿ ಎಲ್ಲವೂ ಬದಲಾಗುತ್ತಲೇ ಹೋಗುತ್ತದೆ. ತನ್ನ ಬಹುತ್ವದ ಪ್ರತ್ಯೇಕತೆಯನ್ನು ಅಷ್ಟೇ ಸಂಭ್ರಮದಿಂದ ಆಚರಿಸಿಕೊಂಡು ಬಂದ ದೇಶವೂ ಹೌದು. ಭಾರತ ಆಗಿರುವುದೇ ಹೀಗೆ, ಬಹುತ್ವವಿಲ್ಲದಿದ್ದರೆ ಬಹುಶಃ ಭಾರತವೂ ಇಲ್ಲ. ಹಿಂದೂ ಜೀವನ ಪದ್ಧತಿಯಲ್ಲೇ ಹಲವು ಭಿನ್ನತೆಗಳಿವೆ ಹಾಗೂ ಅವೆಲ್ಲವೂ ಅವುಗಳದ್ದೇ ಆದ ಮಹತ್ವವನ್ನು ಹೊಂದಿವೆ. ಅವುಗಳೆಲ್ಲವನ್ನೂ ಒಂದೇ ರೀತಿಯ ಆಚರಣೆಯ ಅಡಿಯಲ್ಲಿ ತರುವುದಕ್ಕೆ ಹೊರಡುವುದು ಅಥವಾ ಅವುಗಳೆಲ್ಲವನ್ನೂ ಧಿಕ್ಕರಿಸಿ ದೂರ ಮಾಡಲು ಹೊರಡುವುದು ಬಹುತ್ವದ ಭಾರತದ ಕುಸಿತಕ್ಕೆ ಮೂಲವೇ ಆಗಬಹುದು. ಹಾಗೆಯೇ ಇತರ ಮತಗಳಿಗೂ ಕೂಡಾ ಅವುಗಳದ್ದೇ ಆದ ಸೌಂದರ್ಯವಿದೆ. ಭಾರತದ ಹೂಮಾಲೆಯ ಹೂಗಳ ಬಣ್ಣ ಒಂದೇ ಅಲ್ಲ. ಹಾಗೇ ಸಾಂಸ್ಕೃತಿಕ ಜಗತ್ತಿಗೆ ಭಾರತ ಅತ್ಯಂತ ಪ್ರಾಚೀನ ಹಾಗೂ ಇಂದಿಗೂ ಚಾಲ್ತಿಯಲ್ಲಿರುವ ನಾಡು. ಆಧುನಿಕ ಕಲಾ ಪ್ರಕಾರಗಳಲ್ಲದೇ, ಒಂದು ಸುದೀರ್ಘ ಇತಿಹಾಸವಿರುವ ಪ್ರತಿ ದೇಶಕ್ಕೂ ಜನಪದದ ಹಿನ್ನೆಲೆ ಇದ್ದೇ ಇರುತ್ತದೆ. ಬಹುಶಃ ಇಂಥ ಜನಪದದಲ್ಲೇ ಆ ದೇಶದ ಸಾಂಸ್ಕೃತಿಕ ಸಮೃದ್ಧಿ ಮತ್ತು ವೈಶಿಷ್ಟ್ಯ ಇರುವುದು ಅನಿಸುತ್ತದೆ. ಗರ್ಬಾ ಕೂಡ ಇಂಥ ಹಿನ್ನೆಲೆಯ ಒಂದು ನೃತ್ಯ.
ಗುಜರಾತಿನ ನೆಲದಲ್ಲಿ ಹುಟ್ಟಿದ ನೃತ್ಯ ಪ್ರಕಾರ ಈ ಗರ್ಬಾ ( ಗರ್ಭಾ, ಗರಾಬಾ ) ಬಹುತೇಕ ನೃತ್ಯ ಪ್ರಕಾರಗಳಂತೆ ಶಕ್ತಿ ದೇವತೆಯ ಅಥವಾ ದೈವಿಕ ಸ್ತ್ರೀ ರೂಪವನ್ನು ಆರಾಧಿಸುವ ಒಂದು ಅಭಿವ್ಯಕ್ತಿ. ವೃತ್ತಾಕಾರದಲ್ಲಿ ನಿಂತು ಹೆಣ್ಣು ಗಂಡು ಇಬ್ಬರೂ ಒಟ್ಟಿಗೆ ಯಾವ ಭೇದವಿಲ್ಲದೆ ನೃತ್ಯ ಮಾಡುವ ಈ ಪ್ರಕಾರಕ್ಕೆ ಅದರದ್ದೇ ಆದ ಸಾಂಪ್ರದಾಯಿಕ ದಿರಿಸು ಕೂಡಾ ಇದೆ. ಅದರಲ್ಲೂ ಹೆಣ್ಣಿಗೆ ನೃತ್ಯ ಸಹಜವಾಗಿ ಒಲಿಯುವ ಕಲೆಯೇನೋ ಅನ್ನಿಸಿಬಿಡುತ್ತದೆ ಒಮ್ಮೊಮ್ಮೆ. ನೃತ್ಯಕ್ಕೆ ಬೇಕಾದ ನಾಜೂಕುತನ ಮತ್ತು ಸೂಕ್ಷ್ಮತೆ ಹೆಣ್ಣಿಗೆ ತಾನಾಗೇ ಒಲಿದ ಗುಣಗಳು. ಹೀಗಿರುವಾಗ ಒಂದು ಪುಟ್ಟದಾದ ಹಳ್ಳಿಯಲ್ಲಿ ಹೆಂಗಸರು ಈ ನೃತ್ಯವನ್ನು ಮಾಡಬಾರದೆಂಬ ನಿರ್ಬಂಧವಿದ್ದರೆ? ಅದರ ಜೊತೆಜೊತೆಗೆ ಕಸೂತಿಯನ್ನೂ ಹೆಂಗಸರು ಮಾಡುವ ಹಾಗಿಲ್ಲ ಅನ್ನುವ ನಿಯಮವಿದ್ದರೆ? ಗಂಡಸರು ಮಾತ್ರವೇ ನೃತ್ಯ ಮಾಡುತ್ತಾ ಮಳೆಗಾಗಿ ಪ್ರಾರ್ಥಿಸುವಾಗ ಹೆಂಗಸರಿಗೆ ಆ ಜಾಗಕ್ಕೂ ಪ್ರವೇಶವಿಲ್ಲವೆಂದರೆ? ಇಂಥ ಹಿನ್ನೆಲೆಯೊಂದಿಗೆ ಹಾಗೂ ಇಂಥ ಕಟ್ಟಳೆಗಳನ್ನು ಮುರಿಯಬಹುದಾ ಅನ್ನುವ ಪ್ರಶ್ನೆಯೊಂದಿಗೆ ಉತ್ತರವನ್ನೂ ಕಂಡುಕೊಳ್ಳುವ ಪ್ರಯತ್ನದೊಂದಿಗೆ ತಯಾರಾದ ಗುಜರಾತಿ ಭಾಷೆಯ ಚಿತ್ರವೇ ‘ಹೆಲ್ಲಾರೋ’
ತುರ್ತು ಪರಿಸ್ಥಿತಿ ಘೋಷಣೆಯಾದ ಕಾಲಘಟ್ಟವನ್ನು ಈ ಸಿನೆಮಾದ ಕತೆಯ ಕಾಲಘಟ್ಟವಾಗಿ ಬಳಸಿಕೊಳ್ಳಲಾಗಿದೆ. ದೈನಂದಿನ ಕೆಲಸ ಮಾಡುವುದು ಮತ್ತು ಬೇಕು ಬೇಕೆಂದಾಗಲೆಲ್ಲಾ ಗಂಡನ ಕಾಮತೃಷೆ ತೀರಿಸುವುದು, ಇಷ್ಟು ಮಾತ್ರವೇ ಆ ಪುಟ್ಟ ಹಳ್ಳಿಯ ಹೆಂಗಸರ ನಿತ್ಯದ ಬದುಕು. ಗಂಡನನ್ನು ಬಿಟ್ಟು ಇತರ ಗಂಡಸಿನ ಜೊತೆ ಮಾತನಾಡುವ ಹಕ್ಕು ಕೂಡಾ ಇರಲಿಲ್ಲ, ಅದರ ಜೊತೆಗೆ ಇತರ ಯಾವ ಮನರಂಜನೆಯ ಮಾಧ್ಯಮವೂ ಇರದ ಕಾಲ ಅದು. ಇದ್ದ ಒಂದೇ ಒಂದು ಮನರಂಜನೆ ಅಥವಾ ಸ್ವಲ್ಪ ತಿಳಿ ಸಮಯ ಅಂದರೆ ಬೆಳಿಗ್ಗೆ ಊರ ಹೆಂಗಸರೆಲ್ಲಾ ಒಟ್ಟಾಗಿ ನೀರು ತರುವುದಕ್ಕೆ ಹೋಗುವ ಸಮಯ. ಅಲ್ಲಿಯೂ ವಿಧವೆಯರ ಕುರಿತಾಗಿ ಅದೇ ಹೆಂಗಸರಲ್ಲೇ ಭಿನ್ನ ಮತಗಳಿದ್ದವು. ಹೀಗಿರುವಾಗ ಏಳನೇ ತರಗತಿಯವರೆಗೆ ಓದಿದ ಹುಡುಗಿ ಈ ಪುಟ್ಟ ಹಳ್ಳಿಗೆ ಸೊಸೆಯಾಗಿ ಬಂದಾಗ, ಅವಳು ಈ ಆಚರಣೆಗಳನ್ನು ಪ್ರಶ್ನಿಸಲು ಪ್ರಯತ್ನಿಸಿದಾಗ ಅವಳ ಗಂಡ, ನೀನು ಓದಿದ್ದೀಯಾ ಅನ್ನೋ ಗರ್ವವನ್ನು ಇಲ್ಲಿಗೇ ಬಿಟ್ಟುಬಿಡು, ಇಲ್ಲದಿದ್ದರೆ ನಿನ್ನ ರೆಕ್ಕೆ ಮತ್ತು ಕೊಂಬು ಎರಡನ್ನೂ ಕತ್ತರಿಸಬೇಕಾಗುತ್ತದೆ ಎಂಬರ್ಥದ ಮಾತುಗಳನ್ನು ಆಡುತ್ತಾನೆ. ಆದರೆ, ಶಿಕ್ಷಣದ ಶಕ್ತಿಯೇ ಬೇರೆ. ವೈಚಾರಿಕ ಪ್ರಜ್ಞೆ ಒಮ್ಮೆ ರೂಪುಗೊಂಡರೆ ಅದು ಮತ್ತೆ ಮತ್ತೆ ಚಿಂತನೆಗೆ ಪ್ರೇರೇಪಿಸುತ್ತಲೇ ಇರುತ್ತದೆ. ಒಂದು ದಿನ ಈ ಹೆಂಗಸರೆಲ್ಲರ ಬದುಕಲ್ಲಿ ಒಬ್ಬ ಗಂಡಸು ಬರುತ್ತಾನೆ ಹಾಗೂ ಅದು ಒಂದು ಮಹತ್ತರ ಬದಲಾವಣೆಯ ಆರಂಭಿಕ ಕ್ಷಣವಾಗುತ್ತದೆ.
ಈ ಗಂಡಸಿನ ಪಾತ್ರವನ್ನು ಹೀಗೇ ಸಮೀಕರಿಸಿದರೆ ಅಷ್ಟು ಸಮಂಜಸವಲ್ಲದಿದ್ದರೂ, ಕೆಲವು ಅಂಶಗಳಿಂದಲಾದರೂ ಶ್ರೀ ಕೃಷ್ಣನನ್ನು ಹೋಲುತ್ತದೆ ಅನಿಸುತ್ತದೆ. ಗೋಪಿಕೆಯರ ಏಕತಾನತೆಯನ್ನು ಮುರಿಯುವುದಕ್ಕೇ ಕೃಷ್ಣ ಗೋಪಿಕೆಯರ ಸಖ್ಯ ಮಾಡಿಕೊಂಡ. ಇಲ್ಲಿಯೂ ಈ ಗಂಡಸು ಈ ಎಲ್ಲ ಹೆಂಗಸರ ಬದುಕಿನ ಮರುಭೂಮಿಯಲ್ಲಿ ಹೊಸ ಗಾಳಿಯನ್ನು ತಂದವನಾಗುತ್ತಾನೆ. ಕೃಷ್ಣನ ಕೈಯಲ್ಲಿ ಕೊಳಲಿತ್ತು, ಈತನ ಕೈಯಲ್ಲಿ ಡೋಲು. ಕೃಷ್ಣನ ಸುತ್ತಲೂ ಗೋಪಿಕೆಯರು ವೃತ್ತಾಕಾರದಲ್ಲಿ ನಿಂತು ರಾಸನೃತ್ಯವಾಡಿದರು. ಇಲ್ಲೂ ಕೊನೆ ಕೊನೆಗೆ ಆತ ಮಧ್ಯ ನಿಂತು ಡೋಲು ಬಾರಿಸುವುದು ಹಾಗೂ ಇವರು ಅವನ ಸುತ್ತ ವೃತ್ತಾಕಾರದಲ್ಲಿ ನಿಂತು ನೃತ್ಯ ಮಾಡುವುದು ನಡೆಯಿತು. ಇಷ್ಟೂ ದಿನ ಯಾಂತ್ರಿಕವಾಗಿ ನೀರು ತರಲು ಹೋಗುತ್ತಿದ್ದವರಿಗೆ ಈಗ ನೀರು ತರಲು ಹೋಗುವುದೆಂದರೆ ಅದೊಂದು ಸಂಭ್ರಮವಾಗಿ ಮಾರ್ಪಟ್ಟಿತು. ಅವರಿಗಾಗೇ ಅಲ್ಲೊಂದು ಮಾಯಕದ ಜಗತ್ತು ನಿರ್ಮಾಣವಾದಂತೆ; ಎಲ್ಲ ಸಂಕೋಲೆಗಳನ್ನು ಕಳಚಿಟ್ಟು ಆನಂದ ಉಕ್ಕುವವರೆಗೆ ಕುಣಿಯುವುದು ದಿನಚರಿಯಾಯಿತು. ಯಾವುದೂ ಇದ್ದ ಸ್ಥಿತಿಯಲ್ಲಿಯೇ ಬಹಳ ದಿನ ಮುಂದುವರೆಯುವುದಿಲ್ಲ ಅಲ್ಲವಾ?
ಈ ಸಿನೆಮಾ ಒಟ್ಟೊಟ್ಟಿಗೆ ಹಲವು ಅಂಶಗಳನ್ನು ಹೇಳುತ್ತದೆ. ನಮಗೆಲ್ಲರಿಗೂ ಗೊತ್ತಿರುವ ಪುರುಷ ಪ್ರಧಾನ ವ್ಯವಸ್ಥೆಯ ಎಳೆ ಎಳೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ. ಜೊತೆಗೆ ಕೆಲವು ಸಂಬಂಧಗಳಿಗೆ ಹೆಸರಿರುವುದಿಲ್ಲ, ಅವು ಕೇವಲ ಮಾನವೀಯವಾಗಿರುತ್ತದೆ ಅನ್ನುವುದನ್ನೂ ಈ ಸಿನೆಮಾ ಹೇಳುತ್ತದೆ. ಬಹುಶಃ ನಿಜವಾದ ಅನಾಥ ಮಾತ್ರ ನಿಜವಾದ ಪ್ರೀತಿ ಕೊಡಬಲ್ಲನಾ ಅನ್ನುವ ಒಂದು
ವಿಲಕ್ಷಣ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ. ಇಲ್ಲಿ ಅನಾಥ ಎಂದರೆ ಅಂತರಂಗದಲ್ಲಿ ಒಂಟಿಯಾಗಿರುವವ ಅನ್ನುವ ಅರ್ಥವೇ ಹೆಚ್ಚು ಸೂಕ್ತ ಅನಿಸುತ್ತದೆ. ಹಾಗೇ ನಮ್ಮ ಕೆಲವು ಆಚರಣೆಗಳು, ನಂಬಿಕೆಗಳು ಬದಲಾಗಲೇಬೇಕು. ಇದು ಕೇವಲ ಈ ಕಾಲದ ಕೂಗಲ್ಲ. ಎಲ್ಲಾ ಕಾಲದಲ್ಲೂ ಸ್ತ್ರೀ ಸಂವೇದನೆ, ಸ್ತ್ರೀ ಸ್ವಾತಂತ್ರ್ಯದ ಧ್ವನಿಯಿತ್ತು. ಅದನ್ನು ಗುರುತಿಸುವಲ್ಲಿ ನಾವು ಪ್ರತೀ ಸಲ ವಿಫಲರಾಗುತ್ತೇವೆ ಹಾಗೂ ಹಿಂದಿನದನ್ನು ಹಳಿಯುತ್ತೇವೆ. ಸ್ತ್ರೀಯ ಭಾವನಾಲೋಕವೇ ಬೇರೆ ಹಾಗೂ ಅವಳೊಳಗಿನ ಮಿಡಿತಗಳೇ ಬೇರೆ. ಅದೊಂದು ಕುಸುರಿಯ ಹಾಗೆ; ಸೂಕ್ಷ್ಮಪ್ರಜ್ಞೆಯಿಲ್ಲದೇ ಅದು ತಟ್ಟುವುದೂ ಅಸಾಧ್ಯ. ಅದನ್ನು ಅರಿತರೆ ಮಾತ್ರವೇ ಅವಳ ಒಳಗನ್ನು ಪ್ರವೇಶಿಸುವ ಪ್ರಯತ್ನ ಮಾಡಬಹುದು, ಇಲ್ಲದಿದ್ದಲ್ಲಿ ಅವಳು ಅಪಾರದರ್ಶಕ.
ಈ ಚಿತ್ರ ಒಂದು ಬೇರೆ ಕಾಲಘಟ್ಟದ ಕತೆಯಾಗಿರುವುದರಿಂದ, ಬೇರೆ ಪ್ರದೇಶದ ಜನರ ಕತೆಯಾಗಿರುವುದರಿಂದ, ಒಂದು ಜನಾಂಗದ ದೈನಂದಿನ ಕತೆಯಾಗಿರುವುದರಿಂದ ಆ ಹೊತ್ತಿನ ಜನಜೀವನದ ಕುರಿತಾಗಿ ಕೂಡಾ ಬೆಳಕು ಚೆಲ್ಲುತ್ತಾ ಒಂದು ಭಿನ್ನ ವೀಕ್ಷಣಾ ಅನುಭವವನ್ನು ಕಟ್ಟಿಕೊಡುವುದರಲ್ಲಿ ಸಂದೇಹವಿಲ್ಲ. ೨೦೧೮ರ ಅತ್ಯುತ್ತಮ ರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನೂ ಈ ಚಿತ್ರ ಪಡೆದುಕೊಂಡಿದೆ. ಹಾಗೇ ಈ ಸಿನೆಮಾದ ಒಂದೆರಡು ದೃಶ್ಯಗಳು ‘ದಿ ಅಫ್ಘನ್ ಗರ್ಲ್’ ( The Afghan Girl ) ಖ್ಯಾತಿಯ, ವಿಶ್ವ ವಿಖ್ಯಾತ ಛಾಯಾಗ್ರಾಹಕ ಸ್ಟೀವ್ ಮೆಕ್ಕರಿ ( Steve McCurry ) ಅವರು ‘ಮಾನ್ಸೂನ್’ ( Monsoon ) ಶೀರ್ಷಿಕೆಯಡಿಯಲ್ಲಿ ತೆಗೆದ ಒಂದು ಛಾಯಾಚಿತ್ರವನ್ನೂ ನೆನಪಿಸುತ್ತವೆ. ಆ ಛಾಯಾಚಿತ್ರ ಅವರ ‘ಇಂಡಿಯಾ’ ( India ) ಅನ್ನುವ ಪುಸ್ತಕದ ಭಾಗವೂ ಆಗಿದೆ.
ಸಮಾನ ಹಕ್ಕು ಮತ್ತು ಸಮಾನ ಸ್ವಾತಂತ್ರ್ಯದ ಪರಿಕಲ್ಪನೆ ಅಡಗಿರುವುದು ಅವರವರಿಗೆ ಸಿಗಬೇಕಾಗಿರುವುದನ್ನು ಸಿಗುವಂತೆ ಮಾಡುವುದರಲ್ಲಿ. ಎಲ್ಲ ಲಿಂಗಿಗಳನ್ನೂ ಮಾನವೀಯತೆಯ ಚೌಕಟ್ಟಿನಲ್ಲಿ ಗೌರವಿಸುವುದು ಹಾಗೂ ಆದರಿಸುವುದು. ಕೆಲವೊಮ್ಮೆ ಕ್ರಾಂತಿಯಾಗುವುದಕ್ಕೆ ಹೋರಾಟಗಳ ಅಗತ್ಯವೇ ಅಗತ್ಯ ಅನ್ನುವ ಪರಿಸ್ಥಿತಿಯಿರುವುದಿಲ್ಲ. ನಮ್ಮ ಮನೆಯೊಳಗಿನ, ಮನದೊಳಗಿನ ಸಣ್ಣ ಬದಲಾವಣೆ ಇಡೀ ಸಮಾಜದ ಒಟ್ಟು ಬದಲಾವಣೆಯ ಮೊತ್ತವಾದಾಗ ಅದು ಕ್ರಾಂತಿಯಾಗಿ ಕಾಣಬಹುದು ಕೂಡಾ. ಹಾಗಾಗಿ ಗಂಡಸೆನ್ನುವ ದರ್ಪದ ಪೊರೆಯ ಆಚೆ ನಿಂತು ಸ್ಪಂದಿಸಬಹುದಾದ ಸಣ್ಣ ರೀತಿ ಕೂಡಾ ಸಮಾನತೆಯ ನಿಟ್ಟಿನಲ್ಲಿ, ಸಮಾನತೆಯ ಹಾದಿಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಹಾಗೂ ಅದೇ ಒಂದು ಸೂಕ್ಷ್ಮ ಸಂವೇದನೆಯ ಸಮಾಜದ ಪುಟ್ಟ ಆರಂಭ!
`ಶ್ರೀ’ ತಲಗೇರಿ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್