- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಬದುಕು ಎಷ್ಟೊಂದು ವಿಚಿತ್ರ ನೋಡಿ! ಕತ್ತಲೆಯಲ್ಲಿ ಬೆಳಕ ಅರಸುವುದು ಸಹಜ ಹಾಗಾದರೆ ಬೆಳಕಲಿ ಕತ್ತಲ ಹುಡುಕುವುದೆಂದರೆ ಏನು?
ಕತ್ತಲು-ಬೆಳಕು, ಸುಖ-ದುಃಖ, ಹಗಲು-ರಾತ್ರಿ ಅಮವಾಸ್ಯೆ-ಹುಣ್ಣಿಮೆಯಂತೆ ಮನುಷ್ಯನ ಮನಸ್ಸು. ಒಂದ ಹಿಡಿದರೆ ಮತ್ತೊಂದ ಬಿಡುವಾಸೆ.
ಭಾವುಕನಾದರೆ ನೂರೆಂಟು ಗೊಂದಲಗಳು,ಅದೇ ವಾಸ್ತವವಾಗಿ ಆಲೋಚನೆ ಮಾಡಿ ಮನ ಬಂದಂತೆ ಬದುಕಿದರೆ ಯಾವುದೇ ಆತಂಕ ಇರದೆ ಬದುಕು ಸಲೀಸಾಗಿ ಮುಗಿದೇ ಹೋಗುತ್ತದೆ.
ಆದರೆ ಇಷ್ಟೊಂದು ಸರಳವಾಗಿ ಇರುವ ಬದುಕು ಗೊಂದಲಮಯವಾಗಲು ಬೆಳಕು ಕತ್ತಲು ಎರಡನ್ನೂ ಗಂಭೀರವಾಗಿ ತೆಗೆದುಕೊಳ್ಳುವುದೆ ಕಾರಣ.
ಇಬ್ಬರು ಪ್ರೇಮಿಗಳು ಗಾಢವಾಗಿ ಪ್ರೀತಿಸುತ್ತಾರೆ, ಅದೇ ಕಾರಣಕ್ಕಾಗಿ ಅಲ್ಲವೇ ಅವರನ್ನು ಪ್ರೇಮಿಗಳು ಅನ್ನೋದು.
ಅವರು ಆಗಾಗ ಅನೇಕ ವಿಷಯಗಳನ್ನು ಗಂಭೀರವಾಗಿ ಚರ್ಚೆ ಮಾಡುತ್ತಾರೆ; ಕೆಲವೊಮ್ಮೆ ಮಾಡಬಾರದ ವಿಷಯಗಳನ್ನು ಅನ್ನಿ. ದೇಹ, ಮನಸ್ಸು ಒಂದಾದ ಮೇಲೆ ಕೇವಲ ಅದಷ್ಟನ್ನೆ ಅನುಭವಿಸಿ ಖುಷಿ ಪಡಲು ಇವರು ಬರೀ ಪ್ರಾಣಿಗಳಲ್ಲವಲ್ಲ. ಹಾಗಾಗಿ ಆಗಾಗ ಮನುಷ್ಯರ ತರಹ ಕಚ್ಚಾಡಿ ಗಾಯ ಮಾಡಿಕೊಳ್ಳುತ್ತಾರೆ. ಒಂದೆರಡು ದಿನದ ಮುನಿಸು, ಕೋಪ ತಾಪ ಇದ್ದೇ ಇರುತ್ತದೆ.
ಇಬ್ಬರಲ್ಲಿ ಯಾರಾದರೂ ಒಬ್ಬರು ಜಗಳವಾಡಿದ್ದ ಮರೆತು ಮಾತನಾಡಿಸಿಬಿಡುತ್ತಾರೆ. ಇದನ್ನೇ ಬೆಳಕಿನಲ್ಲಿ ಕತ್ತಲ ಹುಡುಕೋದು ಎಂದು ಕರೆಯಬಹುದು. ಇಬ್ಬರೂ ಅಷ್ಟೇ ಬುದ್ಧಿವಂತರು, ಪರಸ್ಪರ ಆಕರ್ಷಕರಾಗಿದ್ದಾಗ ಇಂತಹ ಹುಡುಕಾಟ, ಹುಡುಗಾಟ ಜಾಸ್ತಿ.
ಇನ್ನೂ ಕೆಲವು ಜೋಡಿಗಳು ತಮ್ಮ ಪ್ರೀತಿ, ಜಗಳ ಹಂಚಿಕೊಳ್ಳಲು ಪುರುಸೊತ್ತು ಇಲ್ಲದವರ ಹಾಗೆ ತಣ್ಣಗೆ ಬದುಕುತ್ತಾರೆ. ಕೇಳಿದರೆ ‘ಅಯ್ಯೋ ಬಿಡಿ ನಮಗೆ ಕೆರಕೊಳ್ಳೋಕೆ ಬಿಡುವಿಲ್ಲ ಇನ್ನೂ ಜಗಳ ಎಲ್ಲಿಂದ ಬಂತ್ರಿ’ ಎಂದು ರಾಗ ಹಾಡುತ್ತಾರೆ.
ಮೇಲೆ ವಿವರಿಸಿದ ಜೋಡಿಗಳು ಬದುಕುತ್ತಾರೆ, ಅದೇ ರೀತಿ ಇವರೂ ಬದುಕುತ್ತಾರೆ. ಮೊದಲ ಜೋಡಿ ಕತ್ತಲೆಯಲ್ಲಿ ಬೆಳಕನ್ನು, ಬೆಳಕಿನಲ್ಲಿ ಕತ್ತಲನ್ನು ಹುಡುಕುವ ಕ್ರಿಯಾಶೀಲತೆಯನ್ನು ಜೀವಂತವಾಗಿಟ್ಟುಕೊಂಡಿರುತ್ತಾರೆ. ಆದರೆ ಎರಡನೇ ಜೋಡಿ ಬದುಕನ್ನು ತುಂಬಾ ನೀರಸವಾಗಿ ಕಳೆಯುತ್ತಾರೆ.
ಬೇಂದ್ರೆ ಅಜ್ಜ ಹೇಳುವ ‘ಸಮರಸ’ ಅನುಭವಿಸದೆ ನೀರಸವಾಗಿ ಹೋಗಿಯೇ ಬಿಡುತ್ತಾರೆ. ಮನುಷ್ಯ ಕೇವಲ ಸಂಘ ಜೀವಿಯಾದರೆ ಸಾಲದು, ಕುಟುಂಬ ಜೀವಿಯಾಗಿರಬೇಕು. ಬರೀ ಕುಟುಂಬ ಜೀವಿಯಾದರೂ ಸಾಲದು ವೈಯಕ್ತಿಕ ಖುಷಿಯನ್ನೂ ಅನುಭವಿಸಬೇಕು. ತುಂಬಾ ಹೊತ್ತು ಒಂದೇ ಕಡೆ ಕಳೆದರೆ ಅಮೃತವೂ ಕಹಿಯಾಗುತ್ತದೆ.
ಹಾಗಾದರೆ ಈ ವೈಯಕ್ತಿಕ ಖುಷಿ ಎಂದರೆ ಏನು?
ಓದು, ಬರಹ, ಧ್ಯಾನ, ಹಾಡು, ಕುಣಿತ, ವಾಕು, ಬಿಸಿನೀರ ಜಳಕ, ತಣ್ಣೀರ ಈಜು, ಬಿಸಿ ಬಿಸಿ ಕಾಫಿ, ಒಂದೋ ಎರಡೋ ಪೆಗ್, ಒಂದಿಷ್ಟು ಲೆಗ್ ಹೀಗೆ ಏನಾದರೂ ಆದೀತು.
ಆದರೆ ಅದು ಏಕಾಂಗಿಯಾಗಿ ಅನುಭವಿಸಬೇಕು.
ತುಂಬಾ ಪ್ರೀತಿಸುವ ಸಂಗಾತಿ ಇಲ್ಲಿಯೂ ಇರಲಿ ಎಂಬ ಬಯಕೆ ಅಸಮಂಜಸ. ಸಂಗಾತಿ ಜೊತೆಗೆ ಇದನ್ನೆಲ್ಲ ಮಾಡಬಹುದು ಆದರೆ ಆಗ ಏಕಾಂತದ ಸ್ವಾತಂತ್ರ್ಯ ಅರ್ಥವಾಗುವುದಿಲ್ಲ.
ಹೀಗೆ ಮೇಲೆ ಕೊಟ್ಟಿರುವ ಪಟ್ಟಿಯಲ್ಲಿ ಯಾವುದು ಇಷ್ಟ ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ. ನೀವು ನಿಮಗಾಗಿ ಎಲ್ಲಾ ಜಂಜಡಗಳ ಬದಿಗಿರಿಸಿ ಕೊಂಚ ಸ್ಪೇಸ್ ಇಟ್ಟುಕೊಂಡು ಬಿಡಿ.
ಸ್ಪೇಸ್ ಬೆಲೆ ಅರ್ಥವಾದ ಕೂಡಲೇ ಆಗುವ ಖುಷಿ ಅಷ್ಟಿಷ್ಟಲ್ಲ. ಸ್ವಾತಂತ್ರ್ಯ, ಸ್ಪೇಸ್ ಮತ್ತು ಏಕಾಂತದ ಬೆಲೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಅನುಭವಿಸಬೇಕು. ಇತರರನ್ನು ಅರ್ಥ ಮಾಡಿಕೊಂಡು ಅನುಭವಿಸುವ ಅವಕಾಶ ಮಾಡಿ ಕೊಡಬೇಕು.
ಇಲ್ಲಿ ನಾನು ಇದ್ದೇನೆ, ನೀವು ಇದ್ದೀರಿ ಇತರರು ಇದ್ದಾರೆ ಎಲ್ಲರೂ ಹೀಗಿರಲಿ ಎಂಬ ಸದಿಚ್ಛೆಯಿಂದ ಒಮ್ಮೆ ಕ್ರಾಸ್ ಚೆಕ್ ಮಾಡಿಕೊಂಡು ಮುಂದೆ ಹೋಗಿ ಒಮ್ಮೆ ಅನುಭವಿಸಿ ಬಿಡೋಣ ಬನ್ನಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್