- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
- ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು - ಆಗಸ್ಟ್ 10, 2022
ಇರುವೆ ನಡಿಗೆ-೮
ಎಷ್ಟೊಂದು ಛಳಿ ಇಲ್ಲಿ!. ದಿನ ಕಡಿಮೆ, ರಾತ್ರಿ ಹೆಚ್ಚು. ೮ ಗಂಟೆಗೆ ಬೆಳಗಾದರೆ, ಸಾಯಂಕಾಲ ನಾಲ್ಕಕ್ಕೇ ಸೂರ್ಯನಿಗೆ ನಿದ್ದೆ!. ೧೯೩೫ ನೇ ಇಸವಿ, ಜನವರಿ ಹನ್ನೊಂದು. ಇಂಗ್ಲೆಂಡ್ ನ ರಾಯಲ್ ಅಸ್ಟ್ರೋನಮಿಕಲ್ ಸೊಸೈಟಿಯಲ್ಲಿ ಬಾಹ್ಯಾಕಾಶ ಸಂಶೋಧಕರ ಸಮ್ಮೇಳನ.
“ಮುಂದಿನ ಸಂಶೋಧನಾ ಪ್ರಬಂಧ ಮಂಡನೆ, ಸುಬ್ರಹ್ಮಣ್ಯನ್ ಚಂದ್ರಶೇಖರ್”
ಕಾರ್ಯಕ್ರಮ ನಿರ್ವಾಹಕರು ಕರೆದರು.
ಸಾಧಾರಣ ಮೈಕಟ್ಟಿನ ಭಾರತೀಯ ಹುಡುಗ ಎದ್ದು ನಿಂತ. ಹೊಳಪು ಗಣ್ಣು, ಕಪ್ಪು ಕೋಟು, ಎಣ್ಣೆ ಹಚ್ಚಿ ಬಾಚಿದ ಕೂದಲು, ಸದಾ ಚಿಂತನೆಯಿಂದ ಪ್ರಭೆಸೂಸುವ ಮುಖ. ೨೫ ರ ಹರಯದಲ್ಲಿಯೇ ಘಟಾನುಘಟಿ ವಿಜ್ಞಾನಿಗಳ ಸಾಲಿನಲ್ಲಿ ಗುರುತಿಸಿಕೊಂಡ ಮೇಧಾವಿ ಚುರುಕು ನಡಿಗೆಯಿಂದ ವೇದಿಕೆ ಹತ್ತಿದ. ಭಾಷಣ ಆರಂಭಿಸಿದ. ವಿದ್ವನ್ಮಣಿಗಳು ಮಂತ್ರಮುಗ್ಧರಾಗಿ ಆಲಿಸಿದರು.
” ವೈಟ್ ಡ್ವಾರ್ಪ್ ಎಂಬ ನಕ್ಷತ್ರದ ಕೇಂದ್ರ ಗೋಲ, ಗುರುತ್ವಾಕರ್ಷಣ ಶಕ್ತಿಯಿಂದ ಸಂಕೋಚನಗೊಳ್ಳುವುದನ್ನು ವಿರೋಧಿಸಲು ನಕ್ಷತ್ರದ ಒಳಗೆ ಹರಿ ಹರಿದು ಹರಿಯುವ ಎಲೆಕ್ಟ್ರಾನ್ ಗಳಿಗೆ ಮಾತ್ರ ಸಾಧ್ಯ. ಅದನ್ನು ಅರ್ಥಮಾಡಿಕೊಳ್ಳಲು “ಪೌಲಿ” ಯ ಸಿದ್ಧಾಂತವನ್ನು ಅಳವಡಿಸಬೇಕಾಗುತ್ತೆ. ಪೌಲಿಯ ಸಿದ್ಧಾಂತದ ಪ್ರಕಾರ ಒಂದೇ ಚೈತನ್ಯದ ಸ್ಥಿತಿಯಲ್ಲಿ ( state) ಎರಡು ಇಲೆಕ್ಟ್ರಾನ್ ಇರುವಂತಿಲ್ಲ. ಇದು ಕ್ವಾಂಟಮ್ ಸಿದ್ಧಾಂತ. ಗುರುತ್ವಾಕರ್ಷಣ ಶಕ್ತಿಯಿಂದ ಪರಸ್ಪರ ಹತ್ತಿರವಾಗುತ್ತಾ ಹೋಗುವ ಈ ಎಲೆಕ್ಟ್ರಾನ್ ಗಳ ಸಾಗರ ಪೌಲಿಯ ಸಿದ್ಧಾಂತದ ಪ್ರಕಾರ ತಮ್ಮದೇ ಆದ ರೀತಿಯಲ್ಲಿ ವಿರುದ್ಧ ಶಕ್ತಿಯನ್ನು ಸಂಚಯಿಸಿ, ಗುರುತ್ವಾಕರ್ಷಣ ಶಕ್ತಿಯಿಂದ ನಡೆಯುತ್ತಿರುವ ಸಂಕೋಚನವನ್ನು ವಿರೋಧಿಸುತ್ತದೆ. ಅದನ್ನು ‘ಇಲೆಕ್ಟ್ರಾನ್ ಡಿಜನರೆಸಿ ಪ್ರೆಷರ್’ ಎನ್ನುತ್ತೇವೆ.
ಈ ಇಲೆಕ್ಟ್ರಾನ್ ಗಳು ನಕ್ಷತ್ರದ ಒಳಗೆ ಅತ್ಯಂತ ವೇಗದಲ್ಲಿ ಓಡಾಡುತ್ತವೆ. ಅವುಗಳ ವೇಗ ಬೆಳಕಿನ ವೇಗಕ್ಕೆ ಹತ್ತಿರ ಹತ್ತಿರ ಬರುವಷ್ಟು ಇರುತ್ತೆ. ಹಾಗಾಗಿ, ಇವುಗಳ ಓಡಾಟ, ಇವುಗಳ ‘ ಡಿಜನರೆಸಿ ಪ್ರೆಷರ್’ ಅನ್ನು ಲೆಕ್ಕ ಹಾಕಲು, ಐನ್ಸ್ಟೈನ್ ಅವರ ವಿಶೇಷ ಸಾಪೇಕ್ಷ ಸಿದ್ಧಾಂತವನ್ನೂ ಅಳವಡಿಸಬೇಕು.
ಈ ಎರಡೂ ಸಿದ್ಧಾಂತಗಳನ್ನು ಸಮನ್ವಯಿಸಿ ನಾನು ಪ್ರತಿಪಾದಿಸುವ ಬಿಂದುಗಳು ಕೆಳಗಿನಂತಿವೆ. “
ಛಳಿಗಾಲದ ಛಳಿಗೂ ಬಿಸಿಲ ಬಿಸುಪು ತಟ್ಟಿದ ಹಾಗೆ, ಪ್ರೇಕ್ಷಕರ ಕುತೂಹಲ ಗರಿಗೆದರಿತು.
ಹ್ಞಾ! ಕ್ವಾಂಟಮ್ ಸಿದ್ಧಾಂತ ಮತ್ತು ವಿಶೇಷ ಸಾಪೇಕ್ಷತಾ ಸಿದ್ದಾಂತದ ಸಮನ್ವಯ?.. ಅಬ್ಬಾ ಇದೇನೋ ತುಂಬಾ ವಿಚಿತ್ರವಾಗಿದೆ. ಆಕರ್ಷಕವೂ ಆಗಿದೆ. ಈ ಸಮ್ಮೇಳನದಲ್ಲಿ ಪ್ರತಿಪಾದಿಸಲು ಅವಕಾಶ ಗಿಟ್ಟಿಸಿದೆ, ಅಂದರೆ ಬಹಳ ಮಹತ್ವದ್ದೇ ಇರಬೇಕು. ಅದೂ ಆಗಷ್ಟೇ ಗಡ್ಡಮೊಳೆತ ಹುಡುಗನಿಂದ?..
ವಿಜ್ಞಾನೀ ಪ್ರೇಕ್ಷಕರ ಸಮೂಹ ಮೌನಸಾಂದ್ರ ಹವೆಯನ್ನು ಅನುಭವಿಸಿ ಆಲಿಸಿತು.
” ಮೊದಲನೆಯದಾಗಿ, ವೈಟ್ ಡ್ವಾರ್ಫ್ ನ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಯ 1.44 ಪಟ್ಟಿಗಿಂದ ಕಡಿಮೆಯಿದ್ದರೆ, ಗುರುತ್ವಾಕರ್ಷಣ ಶಕ್ತಿಯನ್ನು ಸಮಬಲವಾಗಿ ವಿರೋದಿಸಲು ‘ಇಲೆಕ್ಟ್ರಾನ್ ಡಿಜನರೆಸಿ ಪ್ರೆಷರ್’ ಗೆ ಸಾಧ್ಯವಾಗುತ್ತೆ. ಆಗ ವೈಟ್ ಡ್ವಾರ್ಫ್, ತನ್ನ ಸಮತೋಲನದ ಸಮಾಧಾನವನ್ನು ಅನುಭವಿಸುತ್ತದೆ.
ವೈಟ್ ಡ್ವಾರ್ಫ್ ನ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿ ಗಿಂತ 1.44 ಪಟ್ಟಿಗಿಂದ ಹೆಚ್ಚಿದ್ದರೆ ಗುರುತ್ವಾಕರ್ಷಣ ಶಕ್ತಿ ಅತ್ಯಂತ ಹೆಚ್ಚಾಗಿ ಅದರ ಕೈ ಮೇಲುಗೈ ಆಗುತ್ತೆ. (ನಿಮಗೆ ತಿಳಿದಂತೆ ದ್ರವ್ಯರಾಶಿ ಹೆಚ್ಚಿದ್ದಷ್ಟು ಗುರುತ್ವಾಕರ್ಷಣ ಶಕ್ತಿಯೂ ಹೆಚ್ಚು)
ಇದರಿಂದಾಗಿ ವೈಟ್ ಡ್ವಾರ್ಫ್ ಇನ್ನೂ ಸಂಕೋಚನ ಅನುಭವಿಸಿ ಗಾತ್ರದಲ್ಲಿ ಸಣ್ಣದಾಗುತ್ತಾ ಹೋಗುತ್ತದೆ.
ಹಾಗಾಗಿ ವೈಟ್ ಡ್ವಾರ್ಫ್ ಸಮತೋಲನ ಅನುಭವಿಸಬೇಕಾದರೆ, ಅದರ ದ್ರವ್ಯ ರಾಶಿ ಸೂರ್ಯನ ದ್ರವ್ಯರಾಶಿ ಗಿಂತ 1.44 ಪಟ್ಟಿಗಿಂತ ಕಡಿಮೆ ಇರಬೇಕು.”
ಪಿನ್ ಡ್ರಾಪ್ ಸೈಲೆನ್ಸ್.. ವಿಜ್ಞಾನಿಗಳು ಚಪ್ಪಾಳೆ ತಟ್ಟಿದ್ದರು. ಚಂದ್ರಶೇಖರ್ ಧೈರ್ಯ ಮತ್ತು ಗೆಲುವಿನ ಭಾವದಿಂದ ವೇದಿಕೆಯಿಂದ ಇಳಿದು ತನ್ನ ಕುರ್ಚಿಯಲ್ಲಿ ಆಸೀನನಾಗಿ ಒಮ್ಮೆ ಕಣ್ಣುಮುಚ್ಚಿಕೊಂಡ. ಮನಸ್ಸು ಮದರಾಸಿಗೆ ಹಿನ್ನಡೆದಿತ್ತು.
” ಮದರಾಸಿನ ಪ್ರೆಸಿಡೆನ್ಸಿ ಕಾಲೇಜು. ಪೂರ್ವ ಮುಖಿಯಾಗಿ ಸಮುದ್ರಕ್ಕೆ ನೋಟ ನೆಟ್ಟ ಕಾಲೇಜು.
ಭೌತಶಾಸ್ತ್ರಜ್ಞ ‘ಅರ್ನಾಲ್ಡ್ ಸೊಮ್ಮರ್ ಫೀಲ್ಡ್’ ಅವರ ಭಾಷಣವೇ ಪ್ರೇರಣೆ. ಕಾಲೇಜಿನ ಎದುರು ಹರಡಿಕೊಂಡ ಮೆರೀನಾ ಬೀಚ್ ನ ಅಸಂಖ್ಯ ಮಳಲ ಕಣಗಳು, ಬಂಗಾಳ ಕೊಲ್ಲಿಯ ಸಮುದ್ರದ ಕಣ್ಣಿಗೆಟುಕದ ಅಗಾಧತೆ. ಸಾಯಂಕಾಲ ಕಡಲತೀರದಲ್ಲಿ ಕುಳಿತರೆ ಭೌತಶಾಸ್ತ್ರದ್ದೇ ಯೋಚನೆ. ಇಪ್ಪತ್ತನೆಯ ಶತಮಾನದಲ್ಲಿ ಭೌತಶಾಸ್ತ್ರದ ವಿಜ್ಞಾನಿಗಳದ್ದೇ ಕಾರುಬಾರು. ಮ್ಯಾಕ್ಸ್ ಪ್ಲಾಂಕ್ ನ ಕ್ವಾಂಟಮ್ ಥಿಯರಿ ಆಗಿನ ಬುದ್ಧಿವಂತಿಕೆಗೆ ಸವಾಲೊಡ್ಡಿದರೆ, ನೀಲ್ಸ್ ಬೋರ್, ಫರ್ಮಿ, ಡಿರಾಕ್, ಪೌಲಿ, ಹೈಸನ್ ಬರ್ಗ್, ಐನ್ಸ್ಟೈನ್, ಹೀಗೇ ಹಲವರು. ಬೊಗಸೆಯಲ್ಲಿ ಒಣಮಳಲ ಕಣಗಳನ್ನು ತುಂಬಿ ನಿಧಾನವಾಗಿ ಉದುರಿಸುತ್ತಾ ಕಣ ಸಿದ್ಧಾಂತದ್ದೇ ( ಕ್ವಾಂಟಮ್ ಸಿದ್ಧಾಂತ) ಯೋಚನೆ.
ಸೂಕ್ಷ್ಮ ಕಣಗಳಾದ ಇಲೆಕ್ಟ್ರಾನ್, ಬೆಳಕಿನಕಣ ಫೋಟಾನ್, ಅವುಗಳ ಸ್ವಭಾವವನ್ನು ವಿವರಿಸುವ, ಕ್ವಾಂಟಮ್ ಮೆಕಾನಿಕ್ಸ್, ಇವುಗಳನ್ನು ಓದುತ್ತಾ ಮಿದುಳು ಬೆಳಗುತ್ತೆ..
ಅರೇ! ರಾತ್ರೆಯಾಯಿತಲ್ಲಾ!, ಆಗಸ ತುಂಬಾ ನಕ್ಷತ್ರಗಳು ಮಿನುಗುತ್ತಿವೆ.
ಈ ನಕ್ಷತ್ರದ ವಿಕಾಸದ ನಿರ್ದಿಷ್ಟ ಹಂತವಾದ ವೈಟ್ ಡ್ವಾರ್ಫ್ ಸ್ಥಿತಿಯನ್ನು ವಿವರಿಸಲು ಕ್ವಾಂಟಮ್ ಸಿದ್ಧಾಂತ ಉಪಯೋಗಿಸಿದರೆ ಹೇಗೆ?..ನಕ್ಷತ್ರ ವೈಟ್ ಡ್ವಾರ್ಫ್ ಸ್ಥಿತಿ ಗೆ ಬಂದಾಗ, ಪರಮಾಣುಗಳ ಇಲೆಕ್ಟ್ರಾನ್ ಗಳು ಕಳಚಿಕೊಂಡು ತಮ್ಮದೇ ಪ್ಲಾಸ್ಮಾ ದೊಳಗೆ ಹರಿದಾಡುವುದು ನಿಜವಷ್ಟೇ. ಹಾಗಿದ್ದರೆ, ಈ ಇಲೆಕ್ಟ್ರಾನ್ ಗಳ ಸ್ವಭಾವ ನಕ್ಷತ್ರ ದ ಒಳಗಿದ್ದರೂ ಕ್ವಾಂಟಮ್ ಸಿದ್ಧಾಂತವನ್ನು ಅನುಸರಿಸಬೇಕಲ್ಲಾ..
ಮೊನ್ನೆಯಷ್ಟೇ ಕ್ಯಾಂಬ್ರಿಜ್ ಯುನಿವರ್ಸಿಟಿಯ ಪ್ರೊಫೆಸರ್, ರಾಲ್ಫ್ ಫೌಲರ್ ಅವರಿಗೆ ಬರೆದ ಪತ್ರಕ್ಕೆ ಉತ್ತರ ಬಂದಿದೆ. ಡಾಕ್ಟರೇಟ್ ಮಾಡಲು ಆಹ್ವಾನ ಪತ್ರವದು. ತಿಂಗಳುಗಳ ಹಿಂದೆ ನಾನು ಕಳಿಸಿದ್ದ ಸಂಶೋಧನಾ ಪ್ರಬಂಧವನ್ನೂ ಮೆಚ್ಚಿಕೊಂಡು ಪ್ರಕಟಿಸಿದ್ದರು.”
ಚಪ್ಪಾಳೆಯ ಸದ್ದಿಗೆ ಚಂದ್ರ ಎಚ್ಚರಗೊಂಡು ಕಣ್ತೆರೆದ.
ಮುಂದಿನ ಸಂಶೋಧನಾ ಪ್ರಬಂಧ, ಪ್ರೊಫೆಸರ್ ಎಡಿಂಗ್ಟನ್ ಅವರದ್ದು ಎಂಬ ಅನೌನ್ಸ್ಮೆಂಟ್ ಗೆ ಪ್ರೇಕ್ಷಕರ ಚಪ್ಪಾಳೆ ಅದು. ಎಡಿಂಗ್ಟನ್ ತಮ್ಮ ಅರ್ಧ ಶತಕದ ವಯಸ್ಸು ಹೊಡೆದ ದೇಹವನ್ನು ಪೋಡಿಯಂನತ್ತ ನಡೆಸುತ್ತಿದ್ದರು..ಅವರು ಅಸ್ಟ್ರೋಫಿಸಿಕ್ಸ್ ನಲ್ಲಿ ಆ ಕಾಲದ ವಾಕಿಂಗ್ ಲೆಜೆಂಡ್.
” ಪ್ರೊಫೆಸರ್ ಎಡಿಂಗ್ಟನ್ ಎಷ್ಟು ಅದ್ಭುತ ವಿಜ್ಞಾನಿ!.
ಚಂದ್ರ, ವಾಟ್ ಈಸ ಯುವರ್ ರೀಸೆಂಟ್ ಫೈಂಡಿಂಗ್?
ಅಂತ ಹೆಗಲಿಗೆ ಕೈ ಹಾಕಿ ನಡೆಯುವ, ಆತ್ಮೀಯತೆಯಿಂದ ಧೈರ್ಯ ಕೊಡುವ ಕುಶಾಗ್ರಮತಿ ಪ್ರೊಫೆಸರ್ ಅವರು. ನನ್ನ ಸಂಶೋಧನೆಯನ್ನು ಹೆಜ್ಜೆ ಹೆಜ್ಜೆಗೂ ವಿಚಾರಿಸಿ ಪ್ರೋತ್ಸಾಹಿಸಿದ ಹಿರಿಯ ವಿಜ್ಞಾನಿ. ಇಂದು ಓದಿದ ನನ್ನ ಪ್ರಬಂಧವನ್ನು ಈ ಕಾನ್ಫರೆನ್ಸ್ ಗೆ ರೆಕಮಂಡ್ ಮಾಡಿದವರೇ ಎಡಿಂಗ್ಟನ್..”
ಚಂದ್ರ ನ ಮನಸ್ಸು ಎಡಿಂಗ್ಟನ್ ಬಗ್ಗೆ ಯೋಚಿಸುತ್ತಾ, ಪುನಃ ಆರು ವರ್ಷ ಹಿಂದೆ, ಕ್ಯಾಂಬ್ರಿಜ್ ತಲಪಲು ಮಾಡಿದ ಹಡಗು ಯಾತ್ರೆಯತ್ತ ಹೊರಳಿತು.
” ಹಡಗು ತೇಲುತ್ತಿದೆ, ಮದರಾಸಿನಿಂದ ಹೊರಡುವಾಗ ಅಲೆಗಳೋ ಅಲೆಗಳು. ಮನಸ್ಸೂ ಅಷ್ಟೇ ತುಂಬಾ ತುಮುಲಗಳು. ಆಗ ವಯಸ್ಸು ಬರೇ ಹತ್ಯೊಂಭತ್ತು.
ಭೂ ತೀರದಿಂದ ಸಾಗರದ ದೂರತೀರದತ್ತ ತೊಯ್ದ ಹಡಗು ಈಗ ಸಮತೋಲನ ಅನುಭವಿಸಿ ಸಾಗುತ್ತಿದೆ. ಸಮುದ್ರ ನೀರಿನಲ್ಲಿ ತೇಲಿ ಮುನ್ನುಗ್ಗುವಾಗ ನೀರನ್ನು ದಿಟ್ಟಿಸಿ ನೋಡಿದರೆ ಹಡಗು ನಿಂತೇ ನಿಂತಂತೆ, ನೀರು ಹಿಮ್ಮುಖವಾಗಿ ಚಲಿಸಿದಂತೆ ಭಾಸವಾಗುತ್ತದೆ. ಇದನ್ನು ರಿಲೇಟಿವಿಟಿ ಅನ್ತಾರಲ್ಲಾ..
ಯುರೇಕಾ!
ಹೊಸ ಐಡಿಯಾ ಹೊಳೆಯುತ್ತಿದೆ! ಒಳಮುಖೀ ಗುರುತ್ವಾಕರ್ಷಣ ಶಕ್ತಿ ವೈಟ್ ಡ್ವಾರ್ಫ್ ಅನ್ನು ಸಂಕೋಚನ ಮಾಡುತ್ತಾ ಹೋದಂತೆ, ಇಲೆಕ್ಟ್ರಾನ್ ಗಳು ಪೌಲಿಸ್ ಎಕ್ಸ್ಕ್ಲೂಷನ್ ನಿಯಮದ ಪ್ರಕಾರ ಅದನ್ಮು ವಿರೋಧಿಸಬೇಕು. ಹಾಗೆ ವಿರೋಧಿಸುವ ಒತ್ತಡಕ್ಕೆ ಇಲೆಕ್ಟ್ರಾನ್ ಡಿಜನರೆಸಿ ಪ್ರೆಷರ್ ಅಂತ ಹೆಸರಿಡೋಣ. ಅದೇ ಹೊತ್ತಿಗೆ, ನಕ್ಷತ್ರದ ಒಳಗೆ ಓಡಾಡುವ ಇಲೆಕ್ಟ್ರಾನ್ ಗಳು ಅತ್ಯಂತ ವೇಗವಾಗಿ ಓಡಾಡುವಾಗ, ಅವುಗಳು ಐನ್ಸ್ಟೈನ್ ಅವರ ವಿಶೇಷ ಸಾಪೇಕ್ಷತಾ ಸಿದ್ಧಾಂತ ವನ್ನೂ ಅನುಸರಿಸಬೇಕಲ್ಲಾ..
ಈ ಎರಡೂ ಸಿದ್ಧಾಂತಗಳನ್ನು ಜತೆ ಜತೆಗೆ ವೈಟ್ ಡ್ವಾರ್ಫ್ ಗೆ ಅನ್ವಯಿಸಿದರೆ ಹೇಗೆ?.
ಹಡಗಿನಲ್ಲಿ ಕುಳಿತೇ ಪೆನ್ನು ಪೇಪರ್ ಹಿಡಿದು ಲೆಕ್ಕ ಹಾಕಿದ್ದೆ. ಸಮೀಕರಣಗಳನ್ನು ಸಾಲ್ವ್ ಮಾಡಿದ್ದೆ. ಅದರ ಕೊನೆಯ ಹಂತವೇ ಇಂದು ಪ್ರತಿಪಾದಿಸಿದ ಸಿದ್ಧಾಂತ.. “
ಚಂದ್ರ ಪುನಃ ಎಚ್ಚೆತ್ತುಕೊಂಡ.
ಎಡಿಂಗ್ಟನ್ ಭಾಷಣ ಪ್ರಾರಂಭ ಮಾಡಿದ್ದರು..
ಅವರ ಕಂಚಿನಕಂಠ, ಶ್ರೀಮಂತ ಭಾಷೆ, ನ್ಯಾಯವಾದಿಯ ಖಚಿತತೆ ಉಚ್ಛರಿಸುವ ಪ್ರತಿಯೊಂದು ಪದದಲ್ಲಿ ತುಳುಕಿ ಹರಿಯುತ್ತಿದೆ.
” ಚಂದ್ರ ಅವರ ಸಿದ್ಧಾಂತ ಆಕರ್ಷಕವಾಗಿರಬಹುದು.. ಆದರೆ…
ಆದರೆ…”
ಚಂದ್ರ ಕಣ್ಣರಳಿಸಿ ಬೆರಗಿನಿಂದ ನೋಡಿದ. ತನ್ನನ್ನು ಸಂಶೋಧನೆಯನ್ನು ಆಸಕ್ತಿಯಿಂದ ಬೆನ್ತಟ್ಟಿದ ಎಡಿಂಗ್ಟನ್, ಆದರೆ…ಎಂದರಲ್ಲಾ?. ಯಾಕೋ ಒಳ ಮನಸ್ಸೊಳಗೆ ಅವಲಕ್ಕಿ ಕುಟ್ಟಿದ ಭಾವ.
ಇಡೀ ಹಾಲ್ನಲ್ಲಿ ಆಸೀನರಾದ ವಿಜ್ಞಾನಿಗಳಿಗೆ ಎಡಿಂಗ್ಟನ್ ಮುಂದೆ ಏನನ್ನುತ್ತಾರೆ ಎಂಬ ಕುತೂಹಲ. ಚಂದ್ರ ಅವರ ಪ್ರತಿಪಾದನೆಯ ಬಗ್ಗೆ ಎಡಿಂಗ್ಟನ್ ಏನನ್ನ ಬಹುದು?.. ಕಣ್ಣುಗಳು ಎಡಿಂಗ್ಟನ್ ನ ಮೇಲೆ ಲಾಕ್ ಆಗಿದ್ದವು.
” ಸಾಪೇಕ್ಷ ಮೆಕಾನಿಕ್ಸ್ ಮತ್ತು ಸಾಪೇಕ್ಷವಲ್ಲದ ಕ್ವಾಂಟಮ್ ಸಿದ್ಧಾಂತದ ದ ಜೋಡಿಯಿಂದ ಜನಿಸಿದ ಸಿದ್ಧಾಂತದ ಮಗು, ನ್ಯಾಯಬದ್ಧವಾಗಿ ಮದುವೆಯಾದ ಜೋಡಿಗೆ ಜನಿಸಿದ ಮಗುವಾಗಲು ಸಾಧ್ಯವಿಲ್ಲ”
” The formula based on a combination of relativity machanics and non-relativity quantum theory, and I do not regard the offspring of such a union as born in lawful wedlock”
ಇಡೀ ಹಾಲ್ ಸ್ತಬ್ಧವಾಗಿತ್ತು. ಕಳೆದೆರಡು ವರ್ಷಗಳಿಂದ ಚಂದ್ರನನ್ನು ಪ್ರೋತ್ಸಾಹ ನೀಡಿ ಬೆಳೆಸಿದ, ಪ್ರೊ.ಎಡಿಂಗ್ಟನ್ ಹೀಗೇಕೆ ಮಾಡಿದರು?.
ಚಂದ್ರ, ಅವಮಾನದಿಂದ ತಲೆ ತಗ್ಗಿಸಿದ್ದ. ಒಳಗೊಳಗೇ ತಾನು ಹೇಳಿದ ಸಿದ್ಧಾಂತ ಸರಿ ಅನ್ನುತ್ತಿತ್ತು ಒಳ ಮನಸ್ಸು.
ಎಡಿಂಗ್ಟನ್ ತನ್ನ ಭಾಷಣ ಮುಂದುವರೆಸಿ ಹೇಳಿದರು..
” ಒಂದು ವೇಳೆ, ಈ ಯುವ ವಿಜ್ಞಾನಿ ಹೇಳುವುದು ಸರಿ ಎಂದಿಟ್ಟುಕೊಂಡರೆ, ಗುರುತ್ವಾಕರ್ಷಣ ಶಕ್ತಿಯಿಂದಾಗಿ, ನಕ್ಷತ್ರ ಸಂಕೋಚನ ಅನುಭವಿಸುತ್ತಾ ಚಿಕ್ಕದಾಗುತ್ತಾ, ಕೊನೆಗೊಂದು ದಿನ ಕೆಲವೇ ಕಿಲೋಮೀಟರ್ ನಷ್ಟು ಸಣ್ಣದಾಗಬಹುದು. ಹಾಗಾದಾಗ, ಅಜೇಯವಾದ ಗುರುತ್ವಾಕರ್ಷಣ ಶಕ್ತಿ, ನಕ್ಷತ್ರದೊಳಗಿಂದ, ಬೆಳಕಿನ ಕಿರಣಗಳನ್ನು ಹೊರಬಾರದಂತೆ ಹಿಡಿದಿಡಬಹುದು! ಮತ್ತು ನಕ್ಷತ್ರ ಕೊನೆಗೂ ಚಿರಶಾಂತಿಯನ್ನು ಅನುಭವಿಸಬಹುದು”
( The star has to go on radiating and contracting until, I suppose, It gets to a few kilometer’s radius, when gravity becomes strong enough to hold the radiation and star can at last have peace”
ಎಡಿಂಗ್ಟನ್ ಅವರ ಅಣಕುವಿಗೆ ಸಂಶೋಧಕ ಬಳಗ ಘೊಳ್ಳನೆ ನಕ್ಕಿತು. ವಿಚಿತ್ರ ಎಂದರೆ ಎಡಿಂಗ್ಟನ್ ಅಣಕು ಮಾಡಿದ ವಿಷಯ ಮುಂದೆ ಸತ್ಯವೇ ಆಗಿ ಎಪ್ಪತ್ತರ ದಶಕದಲ್ಲಿ ಕಪ್ಪುರಂಧ್ರ ( black hole) ಎಂದೇ ಪ್ರಸಿದ್ಧವಾಯಿತು.
ಜತೆಗೇ ಒಳಗೊಳಗೇ ಬೆಂದು ಬೇಂದ್ರೆಯಾದ ಚಂದ್ರನಿಗೆ ಐದು ದಶಕಗಳ ನಂತರ ನಾಬೆಲ್ ಪುರಸ್ಕಾರ ಸಿಕ್ಕಿತು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್