ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭಗವಂತಪ್ಪನ ಪುರಾಣ-ಕಥೆ

ಅಂದುಕೊಂಡ ನವರಾತ್ರಿ ಉತ್ಸವ ಬಂದೇ ಬಿಟ್ಟಿತು.ನವರಾತ್ರಿ ಯ ಮೊದಲ ದಿನ ಸಂಜೆ ‘ದೇವಿ ಮಾಹಾತ್ಮ’ ಹೇಳಲು ಸಜ್ಜಾದರು ಭಗವಂತಪ್ಪ.ಪುರಾಣ ಹೇಳುವುದಕ್ಕಾಗಿಯೇ ಮಾಡಿದ್ದ ಎತ್ತರದಲ್ಲಿ ಸ್ಥಳದಲ್ಲಿ ಆಸೀನಾರದರು,ಗಂಟಲನ್ನು ಸರಿಪಡಿಸಿಕೊಂಡು ಕುಳಿತಲ್ಲಿಂದಲೇ ಕಾಳಮ್ಮ ದೇವಿಗೆ ಮತ್ತೊಮ್ಮೆ ನಮಸ್ಕರಿಸಿ ದನಿ ತೆಗೆದು ಅನುಚಾನವಾಗಿ ಬಂದ ಪಧ್ಧತಿಯಂತೆ....
ಧೀರೇಂದ್ರ ನಾಗರಹಳ್ಳಿ
ಪ್ರೊಫೈಲ್
ಇತ್ತೀಚಿನ ಬರಹಗಳು: ಧೀರೇಂದ್ರ ನಾಗರಹಳ್ಳಿ (ಎಲ್ಲವನ್ನು ಓದಿ)

ಭಗವಂತಪ್ಪ ಹಿಂದೆಂದಿಗಿಂತಲೂ ಕಳೆದರೆಡು ವರ್ಷಗಳಿಂದ ಹಠಕ್ಕೆ ಬಿದ್ದವರಂತೆ ಕೆಲಸಮಾಡುತ್ತಿಲಿದ್ದ.ಶಾಂತ “ ನಮಗೇನ್ ಅಂತ ಕಷ್ಟ ಬಂದೈತಿ?ಈ ವಯಸ್ನಾಗ ಇಂಗ್ ಹಗ್ಲು ಮುರ್ತಾಸ್ ಬದ್ಕಿಗೆ ಹೋಗೋದ್ ಎನೈತಿ…?”ಅಂತ ಎಷ್ಟೋ ಬಾರಿ ಭಗವಂತಪ್ಪನಿಗೆ ಅಡ್ಡ ಹಾಕಿ ಕೇಳಿದ್ದಳು.”ನಿಂಗ್ ಏನೂ ಅರ್ತಾಗಿಕಿಲ್ಲ ಸುಮ್ಕೆ ಒಳಾಕ್ಹೋಗಿ ಕೆಲ್ಸ ನೋಡ್ ” ಅಂತ ಜಬುರಿಸಿ ಅಡ್ಡ ನಿಂತಿದ್ದವಳನ್ನು ಪಕ್ಕಕ್ಕೆ ಸರಿಸಿ ಯಥಾ ಪ್ರಕಾರ ತನ್ನ ಕೆಲಸಕ್ಕೆ ಹೋಗಿರುತ್ತಿದ್ದ.ಸರಳವಾಗಿ ಇಬ್ಬರು ಮಾತಾಡುವಾಗಲೆ ಆ ಮಾತಿನ ಗ್ರಹಿಕೆ ಮೇಲೆ ನಾಲ್ಕು ಜನ ಇರುವಾಗ.ಇನ್ನು ಜೀವನದಲ್ಲಿ ಮಾಗಿ ಸಂಕಟವನ್ನು ಮಡಿಲಲ್ಲಿರಿಸಿಕೊಂಡಿರುವ ತನ್ನ ಮಾತು ಶಾಂತ ಳಿಗೆ ಅರ್ಥವಾಗುವುದಿಲ್ಲ ಎನ್ನುವ ಸತ್ಯದ ಅರಿವಿತ್ತು ಭಗವಂತಪ್ಪನಿವರಿಗೆ.ಅದೊಂದಿನ ಹಿರಿಮಗ ಶಂಕ್ರ ಭಗವಂತಪ್ಪನ ಕೆಲಸಕ್ಕೆ ಸಂಬಂಧಪಟ್ಟ ಸಲಕರಣೆ ಗಳನ್ನು ಎಲ್ಲಿಯೋ ಎತ್ತಿಟ್ಟಬಿಟ್ಟಿದ್ದ..ಬೆಳಿಗ್ಗೆ ಯಥಾ ಪ್ರಕಾರ ರೊಟ್ಟಿ ತಿಂದಾದ ಮೇಲೆ ಸಲಕರಣೆಗಳು ಕೈಗೆ ಸಿಗದಾದ ಮೇಲೆ ಕೋಪ ನೆತ್ತಿಗೇರಿತ್ತು.ಅಲ್ಲೆ ಪಡಸಾಲೆಯಲ್ಲಿ ಕುಕ್ಕರಗಾಲಲ್ಲಿ ಟೀ.ವಿ ನೋಡುತ್ತಲಿದ್ದ ಶಂಕ್ರನ ಬಳಿ ಹೋಗಿ “ಶಂಕ್ರಿ ನಂಗ್ ಸಿಟ್ ಹತ್ಸಾಕೊಗ್ಬಾಡ..,ನಿಂಗ್ ಕೈಕಾಲು ಸರಿ ಇದ್ದು ,ಇನ್ನೋದೀಟ್ ಬುದ್ದಿ ಇದ್ರ ಮನೇಲ್ ಕುಂತಿರ್ತಿದ್ದೆ.” ಶಂಕ್ರ ಎನೇನೋ ಕೈಸನ್ನೆ ಮಾಡಿ ಹೇಳಲು ಪ್ರಯತ್ನಸಿದ ಅಲ್ಲದೆ ತನ್ನದೇ ಆದ ಒಂದು ಭಾಷೆಯಲ್ಲಿ ಏನನ್ನೋ ವಿವರಿಸಿದ.ಕುಳಿತಲ್ಲಿಂದ ಏಳಲು ಪ್ರಯತ್ನಿಸಿದ ಆದರೆ ಆಗಲಿಲ್ಲ.ಗೋಡೆಯ ಆಸರೆ ಪಡೆದು ಎದ್ದು ನಿಂತ. “ತಮ್ಮಾ…ನಿಂಗ್ ಸರ್ಯಾಗಿ ನಿಂತ್ಕಾಳಾಕ ಆಗಂಗಿಲ್ಲ ಇನ್ನೇನು ನನ್ ಜೊತೆ ಬದ್ಕಿಗ್ ಬರ್ತಿ…”ಅನ್ನುವಷ್ಟರಲ್ಲಿ ಟೀ.ವಿ ಹಿಂದಿನ ಸಂದಿನಲ್ಲಿಟ್ಟಿದ್ದ ಸಲಕರಣೆಗಳು ಭಗವಂತಪ್ಪನವರ ಕಣ್ಣಿಗೆ ಬಿದ್ದವು.”ತಮ್ಮಾ…ಅಲ್ಲೆ ಕಾಳಮ್ಮ ಗುಡಿತಾಗ ದೊಡ್ಡ ಬಿಲ್ಡಿಂಗ್ ಐತಲಾ ಅಲ್ಲಿಗೆ ಬುತ್ತಿ ತಗಂಡು ಬಂದ್ಬಿಡು…” ಅಂತ ಹೇಳಿ ಸಲಕರಣೆಗಳನ್ನು ಎತ್ತಿಕೊಂಡು ಹೊರಟು ಹೋದ.ಈಗ ಭಗವಂತಪ್ಪನವರ ತಲೆಯಲ್ಲಿ ನವರಾತ್ರಿಗೆ ಇನ್ನೆಷ್ಟು ದಿನ ಬಾಕಿ ಅದ?ಅನ್ನುವ ವಿಚಾರವೇ ಕೊರೆಯುತ್ತಿತ್ತು.ಕಟ್ಟಿಗೆ ತುಂಡುಗಳಿಗೆ ಗುರುತನ್ನು ಹಾಕಿಕೊಳ್ಳುವಾಗ ಮತ್ತು ಕಟ್ಟಿಗೆ ಗಳನ್ನು ತುಂಡರಿಸುವಾಗ ಹೀಗೆ ತನ್ನ ಕೆಲಸದ ಮಧ್ಯದಲ್ಲಿ ಅದೇ ಆಲೋಚನೆ ಮಾಡುತ್ತಿದ್ದರು.ಕಾಳಪ್ಪನವರು ಇನ್ನೆಷ್ಟು ದಿನಕ್ಕೆ ಮನೆಗೆ ಆಹ್ವಾನ ಕೊಡಲಿಕ್ಕೆ ಬರಬಹುದು.ಅವರನ್ನು ಹೇಗೆ ಮಾತಾಡಿಸಿ ಸಂಭಾವನೆ ಹೆಚ್ಚಿಸುವಂತೆ ಕೇಳ ಬೇಕು ಎಂದು ಮನದಲ್ಲೆ ಲೆಕ್ಕ ಹಾಕುತ್ತಿದ್ದ.

ಭಗವಂತಪ್ಪ ಬೆಳಗಿನ ಜಾವ ಎದ್ದು ಮುಖ ತೊಳೆದು ಇನ್ನೇನು ತಲಬಾಗಿಲಗೆ ಬರಬೇಕು ಎನ್ನುವಷ್ಟರಲ್ಲಿ , ಮುಂದೆ ಮಾಡಿದ್ದ ಮನೆಬಾಗಿಲನ್ನು ದೊಬ್ಬಿಕೊಂಡು ಕುಲಬಾಂಧವರಲ್ಲೆ ಹಿರಿಯರಾದ ಕಾಳಪ್ಪನವರು ಒಳಬಂದರು.ಕಾಳಪ್ಪನವರನ್ನು ನೊಡುತ್ತಲೇ ಭಗವಂತಪ್ಪನಿಗೆ ಗೊತ್ತಾಗಿ ಹೋಯಿತು ಇನ್ನು ನವರಾತ್ರಿಗೆ ಹೆಚ್ಚಿನ ದಿನ ಬಾಕಿ ಉಳಿದಿಲ್ಲ ವೆಂದು.ಹಿತ್ತಾಳೆ ಹರಿವಾಣದಲ್ಲಿದ್ದ ಹೂವು,ಹಣ್ಣು,ತಾಂಬೂಲ ಮತ್ತು ಧೋತ್ರ ವನ್ನು ಕಂಡು ಒಳಗೊಳಗೆ ಸಂಭ್ರಮಗೊಂಡರು.ತಾನು ‘ಇಟೊಂದಿನ ಕಾಯ್ಕೊಂಡು ಕುಂತಿದ್ದ ವ್ಯಾಳ್ಯಾ ..ಬಂದಾದ.. ‘ ಅಂತ ಅನ್ನಿಸಿತ್ತು.ಅದು ಪ್ರತಿ ವರ್ಷದ ಸಂಪ್ರದಾಯವಾಗಿತ್ತು.ನವಾರತ್ರಿಗೆ ಒಂದು ವಾರ ಮುಂಚೆಯೇ ಭಗವಂತಪ್ಪನ ಮನೆಗೆ ಕುಲಬಾಂಧವರೆಲ್ಲಾ ಹೋಗಿ ನವರಾತ್ರಿಯ ಶುಭ ಸಂದರ್ಭಕ್ಕೆ ಕಾಳಮ್ಮ ನ ದೇವಸ್ಥಾನದಲ್ಲಿ ‘ದೇವಿ ಮಹಾತ್ಮೆ’ ಪುರಾಣ ಹೇಳುವುದಕ್ಕೆ ಅಧಿಕೃತ ಆಹ್ವಾನ ನೀಡುವುದು ಭಗವಂತಪ್ಪನ ಸ್ಮರಣೆಯಿಂದ ಎರೆಡು ತಲೆಮಾರಿನಿಂದ ನಡೆದು ಬಂದದ್ದಾಗಿತ್ತು.ಅಂದರೆ ಭಗವಂತಪ್ಪನ ತಂದೆ ಜಕಣಾಚಾರಿ ಮತ್ತು ತಾತ ವಿಶ್ವನಾಥಾಚಾರಿ ಇಬ್ಬರ ಪುರಾಣ ವನ್ನು ಭಗವಂತಪ್ಪ ಕೇಳಿದ್ದರು.ಭಗವಂತಪ್ಪನ ತಂದೆ ಮರಣಶ್ಯಯ್ಯೆ ಯಲ್ಲಿದ್ದಾಗ ಭಗವಂತಪ್ಪನ್ನು ಕರೆದು “ ತಮ್ಮಾ …ಯಾವ್ದೇ ಕಾರ್ಣಕ್ಕೂ ನವರಾತ್ರಿ ಪುರಾನ ನಮ್ ಮನ್ತನದಿಂದ ನಿಲ್ಬಾರ್ದು.ಅಲ್ದೆ ಆ ಕಾರ್ಯಕ್ಕೆ ಹಣದ ಬೇಡಿಕೆ ಇಡಬಾರ್ದು.ವೇದ್ಮೂರ್ತಿ ದೊಡ್ಡವ ಇರ್ಬಹುದು ,ಆದ್ರೆ ಅವಗೆ ನಿನ್ನಷ್ಟು ಆಧ್ಯಾತ್ಮಿಕ ಜ್ಞಾನ ಇಲ್ಲಾ .ಅಲ್ದೆ ಅವ ನೌಕ್ರಿ ಅಂತ ಉರೂರ ಅಲಿತಾನೆ “ ಅಂತ ಹೇಳಿ ಭಾಷೆ ಮಾಡಿಸಿಕೊಂಡಿದ್ದರು.ಜಕಣಾಚಾರಿ ತೀರಿ ಹೋದ ಮೇಲೆ ಹನ್ನೆರಡು ವರ್ಷ ಯಾವುದೇ ಫಲಾಪೇಕ್ಷೆ ಇಲ್ಲದೆ ಪುರಾಣ ಕಾರ್ಯಕ್ರವನ್ನು ಭಗವಂತಪ್ಪನವರು ನಡೆಸಿಕೊಟ್ಟಿದ್ದರು.ಆ ದಿನ ಕಾಳಪ್ಪನವರು ಭಗವಂತಪ್ಪನ ಎದುರು ಬಂದು ನಿಂತಾಗ ಮಾತೇ ಹೊರಡದಾಯಿತು.ಒಂದು ಕಡೆ ಸ್ವಾಭಿಮಾನ ಮತ್ತು ತಂದೆಗೆ ಕೊಟ್ಟ ‘ಭಾಷೆ’ ಇನ್ನೊಂದು ಕಡೆ ಜೀವನದ ಕಟ್ಟ ಕಡೆಯ ಜವಬ್ದಾರಿ ಮತ್ತು ‘ಪಾಪ ಪ್ರಜ್ಞೆ’.ಹನ್ನರೆಡು ವರ್ಷವಿರದ ಬೇಡಿಕೆಯನ್ನು ಒಮ್ಮೆಲೇ ಈಗ ಹೇಗೆ ‘ದೇವಿ ಪುರಾಣ’ ಕ್ಕಾಗಿ ಮಂಡಿಸುವುದು?ಅಲ್ಲದೆ ಹಿಂದಿನ ಯಾವ ತಲೆಮಾರೂ ಸಹ ಹಣಕ್ಕಾಗಿ ಮಾಡದೆ ದೇವರ ಕೆಲಸ ಎಂದು ನಿರ್ವಹಿಸಿದ ಕಾರ್ಯವನ್ನು ಈಗ ಹೇಗೆ ಒಮ್ಮಿದೊಮ್ಮಲೇ ಹಣದಿಂದ ಅಳೆಯುವುದು?ಭಗವಂತಪ್ಪನಿಗೆ ಹಣದ ಬೇಡಿಕೆ ಇಡುವುದು ತುಂಬಾ ಹಿಂಸೆ ಯಾಗಿತ್ತು.ಕಾಳಪ್ಪನವರ ಜೊತೆ ಲೋಕಾಭಿರಾಮ ವಾಗಿ ಏನೇನೋ ಮಾತಾಡಿದರು.ವಿಷಯಕ್ಕೆ ಬಂದು ಬಿಡು ಎಂದು ಹೇಳುತ್ತಿರುವಾಗಲೇ ತುಂಬಾ ಹಿಂಸೆ ಯಾಯಿತು.ನಾಲಿಗೆ ತುದಿಯಲ್ಲಿದ್ದ ಮಾತನ್ನು ನುಂಗಿಬಿಟ್ಟರು.ಮತ್ತೆ ಮಾತಾಡಿದರು.ಶಾಂತ ಳಿಗೆ ಚಹಾ ಮಾಡಲು ಹೇಳಿದರು.ಚಹಾ ಹೀರುವಾಗಲು ಲೆಕ್ಕಚಾರ “ಕೇಳಿ ಬಿಡಲೇ?” ಆದರೆ ಆಗಲಿಲ್ಲ.ಪ್ರತಿ ಬಾರಿಯೂ ಕಾಳಪ್ಪನವರು “ಹೋಗ್ಬರ್ತೀನಿ” ಎಂದಾಗಲೂ ಕೆಲಸಕ್ಕೆ ಬಾರದ ವಿಷಯ ತೆಗೆದು ಎಳೆದು ಕೂಡಿಸಿತ್ತಿದ್ದರು.ಕಾಳಪ್ಪನಂತಹ ಮಾಗಿದ ಹಿರಿ ಜೀವಕ್ಕೆ ಭಗವಂತಪ್ಪ ಏನೋ ಕೇಳಬೇಕೆಂದಿರುವುದನ್ನು ಗುರುತಿಸುವುದು ಅಷ್ಟು ಕಷ್ಟವಾಗಲಿಲ್ಲ.ಕಾಳಪ್ದನವರೇ ಮುಂದುವರೆದು – “ಭಗವಂತ ಏನಾದ್ರೂ ಹೇಳದೈತೇನ್ ಮತ್ತ…” ಅಂತ ಕೇಳಿದರು.ಆದರೆ ಆ ಹಿರಿ ಜೀವ ದ ಸೌಜನ್ಯ ದ ಮುಂದೆ ನಾಲಿಗೆ ಹೊರಳದಂಗಾಗಿತ್ತು.ಭಗವಂತಪ್ಪ “..ಅಂತದ್ದೇನಿಲ್ಲ ..”ಅಂತ ಹೇಳಿ ಮಾತನ್ನೇನೊ ಮುಗಿಸಿದ್ದರು.ಆದರೂ “ಕೇಳಿ ಬಿಡಲೇ “ ಎನ್ನುವಷ್ಟರಲ್ಲಿ,ಕಾಳಪ್ಪನವರು ಎಲ್ಲೊ ಹೋಗುವ ಅವಸರ ವಿದ್ದಿದರಿಂದ ಅಕ್ಷರಶ: ಕೊಸರಿಕೊಂಡು ಓಡಿಬಿಟ್ಟರು.ಕಾಳಪ್ಪನವರು ಹೊರಡುತ್ತಲೇ “ಏಟ್ ಕಷ್ಟಾಕೈತಿ ರೊಕ್ಕ ಕೇಳೋದು ಅದು ನಮ್ ದೇವಿ ಕೆಲ್ಸಕ್ಕಾ…” ಮನಸ್ಸಿನಲೇ ಅಂದು ಕೊಂಡರು.ಈ ಬಾರಿಯ ನವರಾತ್ರಿಗೆ ಒಂದಿಷ್ಟು ಕಾಸು ಮಾಡಿಕೊಳ್ಳಬೇಕೆಂಬ ಅವರ ಬಯಕೆ ಬಯಕಯಾಗಿಯೇ ಉಳಿಯಿತು.ಇದೆಲ್ಲದರ ಹಿಂದೆಯೇ ಇನ್ನೊಂದು ಆಶಾಕಿರಣ ಮೂಡಿತ್ತು.ಆರತಿ ತಟ್ಟೆಯಲ್ಲಿ ಬೀಳುವ ದಕ್ಷಿಣೆಯ ಕಡೆ ಮನಸ್ಸು ಹರಿಯಿತು.ಪ್ರತಿ ವರ್ಷ ಪುರಾಣ ಮುಗಿದಾದ ಮೇಲೆ ಆರತಿ ಮಾಡಿ ದೇವಿಗೆ ನಮಸ್ಕರಿಸಿ ಬರುತ್ತಿರವಾಗ ದೇವಸ್ಥಾನ ಸಮಿತಿಯವರು ಆರತಿ ತಟ್ಟೆಯಲ್ಲಿ ಸೇರಿದ್ದ ಚಿಲ್ಲರೆ ಕಾಸನ್ನು ಬೊಗಸೆ ತುಂಬಾ ಕೊಟ್ಟು ಕಳುಹಿಸುತ್ತಿದ್ದರು.ಆದರೇ ಹಿಂದಿನ ವರ್ಷಗಳೆಲ್ಲಾ ಕೊಟ್ಟಕಾಸನ್ನು ಜೇಬಿಗಿಳಿಸಿ ಸುಮ್ಮನೇ ಹೊರಟುಬಿಡುತ್ತಿದ್ದರು.ಆದರೆ ಭಗವಂತಪ್ಪನವರಿಗೆ ಈಚೀಚಿಗೆ ‘ಸಾವು’ ವಿಪರೀತ ಕಾಡುತ್ತಿತ್ತು.ತಮ್ಮ ನಂತರ ದ ದಿನಗಳಲ್ಲಿ ಶಾಂತ ಮತ್ತು ಶಂಕ್ರ ನ ಪರಿಸ್ಥಿತಿ ನೆನೆದು ಜರ್ಜರಿತರಾಗಿದ್ದರು. ಇವೆರೆಡರ ಜೊತೆಗೆ ಹಿಂದಿನ ತಲೆ ಮಾರಿನ ಆಸ್ತಿ ತಾನೊಬ್ಬನೇ ಅನುಭವಿಸುತ್ತಿದ್ದೇನಲ್ಲ ಎನ್ನುವ ‘ಪಾಪ ಪ್ರಜ್ಞೆ’ ಹಿಡಿದು ಎಳೆಯುತ್ತಿತ್ತು.’ಹೌದು! ವೇದಮೂರ್ತಿಗೆ ಸರ್ಕಾರಿ ನೌಕರಿ ಇದೆ ಅವನಿಗೆ ಇದ್ಯಾವುದರ ಪರಿವೇ ಇಲ್ಲ ಮತ್ತು ಅವಶ್ಯಕತೆಯೂ ಇಲ್ಲ’ ಅಂತ ಸಾವಿರ ಸಾವಿರ ಬಾರಿ ತನಗೆ ತಾನು ಹೇಳಿಕೊಂಡಿದ್ದರು ಆ ಒಂದು ಚಕ್ರತೀರ್ಥದಿಂದ ಹೊರ ಬರಲು ಭಗವಂತಪ್ಪನವರಿಗೆ ಆಗಿರಲಿಲ್ಲ
ವೇದಮೂರ್ತಿ ಸರ್ಕಾರಿ ಗ್ರಂಥಾಲಯದಲ್ಲಿ ಗ್ರಂಥಾಲಯಧಿಕಾರಯಾಗಿ ಸೇವೆ ಸಲ್ಲಿಸಿ ಪುಸ್ತಕ ಖರಿದಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಸಿ ಮೊದಲು ಅಮಾನತ್ತಾಗಿದ್ದರು.ನಂತರದ ದಿನಗಳಲ್ಲಿ ಹಳೇ ಚಾಳಿ ನಿಲ್ಲಿಸದ ಕಾರಣ ಕೆಲಸದಿಂದಲೇ ಉಛ್ಛಾಟನೆಗೊಂಡಿದ್ದರು.ಮುಂದಿನ ದಿನಗಳಲ್ಲಿ ಏನೇನು ನಡೆದಿಲ್ಲ ಎನ್ನುವಂತೆ ಢಾಳಾಗಿಯೇ ವಿಜಯನಗರ ಬಡಾವಣೆಯಲ್ಲಿ ಮನೆ ಕಟ್ಟಿಸಿಕೊಂಡು ವಾಸವಾಗಿದ್ದರು. ತಮ್ಮ ಅವ್ಯವಹಾರದ ಹಣದಿಂದ ತನ್ನಿಬ್ಬರು ಮಕ್ಕಳಾದ ರಾಘವೇಂದ್ರ ಮತ್ತು ಶಿವಾನಂದ ರಿಗೆ ಬಡಿಗಾರಿಕೆಗೆ ಬೇಕಾಗಿರುವ ದೊಡ್ಡ ದೊಡ್ಡ ಯಂತ್ರೋಪಕರಣಗಳನ್ನು ಹಾಕಿಸಿ ಕೊಟ್ಟು ಜೀವನಕ್ಕೆ ದಾರಿ ಮಾಡಿದ್ದರು.ನಂತರದ ಕೆಲ ತಿಂಗಳಲ್ಲಿ ಲಕ್ವ ಹೊಡೆದು ಹಾಸಿಗೆಯನ್ನೇನೋ ಹಿಡಿದರು.ಆದರೆ ಅದು ಬಿಟ್ರೆ ಬೇರೆ ಎಲ್ಲಾ ರೀತಿಯಿಂದಲೂ ಆರಾಮಾಗಿಯೇ ಬದುಕಿದ್ದರು.ಈ ಕಡೆ ನೋಡಿದರೆ ಭಗವಂತಪ್ಪ ಸಂಕೋಚದ ಗುಬ್ಬಿ ಯಾಗಿ ಒಳಗೊಳಗೆ ನಲುಗುತಿದ್ದರು .ಹಿರಿಯರ ಆಸ್ತಿಯಾಗಿದ್ದ ಹಳೇ ಮನೆ ಮತ್ತು ಐದು ಎಕರೆ ತೋಟಗಳಲ್ಲಿ ಯಾವುದನ್ನಾದರು ಅಣ್ಣನಿಗೆ ಬಿಟ್ಟುಕೊಟ್ಟರೆ ಸಮಾಧಾನ ವಾಗುರುತ್ತಿತ್ತು.ಇನ್ನೊಂದು ಕಡೆ ಅಣ್ಣ ಬೇಕಾ ಬಿಟ್ಟಿಯಾಗಿ ಅವ್ಯವಹಾರ ನಡೆಸಿದ್ದರೂ ಎನೂ ನಡೆದಿಲ್ಲವೆಂಬಂತೆ ಬದುಕಿದ್ದರು.ಇದರ ತರ್ಕವೇನೆಂದು ಹುಡುಕಿದರೆ.ಅದು ತರ್ಕಕ್ಕೆ ಸಿಗದು.ಹೋಗಲಿ ಅಲ್ಲಿರುವ ತತ್ವವಾದರೂ ಏನೂ?ಅದು ತತ್ವಕ್ಕೂ ಸಿಗದು.ಬಹುಶಃ ತತ್ವಜ್ಞಾನಿಯಾಗಿ ತರ್ಕ ಹುಡುಕಿದರೆ ಸಿಗಬಹುದೇನೋ? ಎಲ್ಲವನ್ನು ಹಿಂದಿನ ಜನ್ಮದ ಪಾಪ ಪುಣ್ಯ ಅಂತ ಅಂದು ಬಿಟ್ಟರೆ ಆಯಿತೆ? ‘ಇದು ಹಿಂಗ್ಯಾಕೆ?’ ಅಂತ ಕೇಳಿದರೆ ಬದುಕು ಕೊಡುವ ಉತ್ತರ ‘ಇದು ಹಿಂಗೆ’.ಆದರೆ ಭಗವಂತಪ್ಪ ತಮ್ಮ ಈ ಪರಿಸ್ಥಿತಿ ಯನ್ನು ಯಾವೊಂದು ದಿನವೂ ಹಳಿದಿರಲಿಲ್ಲ.ಎಲ್ಲವನ್ನೂ ಅವರವರ ‘ಲಭ್ಯ’ ಎಂದುಕೊಂಡು ಸುಮ್ಮನಾಗಿದ್ದರು. ಭಗವಂತಪ್ಪ ಕೋಟೆ ಪ್ರದೇಶದ ತಮ್ಮ ಮನೆಯಿಂದ ದೂರದ ಬಡಾವಣೆಯಾದ ವಿಜಯನಗರಕ್ಕೆ ಹೋಗಿ ಮತನಾಡಲು ಕೂಡ ಸಾಧ್ಯವಿರದ ತನ್ನ ಅಣ್ಣನ ಪಕ್ಕದಲ್ಲಿ ಕುಳಿತು ಬರುವುದು ದಿನ ನಿತ್ಯದ ರೂಢಿ ಯಾಗಿತ್ತು.ಆದರೇ ತೀರ ಇತ್ತೀಚಿನ ವರ್ಷಗಳವರೆಗೂ ಯಾವುದೇ ಸಂಕೋಚ ಮತ್ತು ಬಿಗುಮಾನಗಳಿಲ್ಲದೆ ಇದು ನಡೆದಿದ್ದರೂ, ಎರಡನೆಯ ಮಗ ಮಂಜುನಾಥ ತೀರಿ ಹೋದ ಮೇಲೆ ಮಾನಸಿಕವಾಗಿ ಕುಗ್ಗಿ ಹೋದದ್ದೇನೋ ಸರಿ ಆದರ ಜೊತೆ ಆ ಚಿಂತೆಯಲ್ಲಿಯೇ ದೇಹವೂ ಕುಗ್ಗಿ ಹೋಯಿತು.ಪ್ರತಿ ಸಂಜೆಯೂ ಮನೆಯಿಂದ ಕಾಲು ಹೊರ ಹಾಕುವಾಗ ತಮ್ಮ ‘ಪಾಪ ಪ್ರಜ್ಞೆ’ ಯನ್ನು ಅಣ್ಣ ನ ಮುಂದೆ ತೋಡಿಕೊಳ್ಳಬೇಕೆಂದೆ ಹೊರಡುತ್ತಿದ್ದರು.ಆದರೇ ಅಣ್ಣನ ಮನೆಗೆ ಹೋದ ಮೇಲೆ ಮಾತೇ ಹೊರಡುತ್ತಿರಲಿಲ್ಲ.ವೇದಮೂರ್ತಿ ಮಲಗಿರುತ್ತಿದ್ದ ಮಂಚ ದ ಪಕ್ಕದಲ್ಲಿ ಸುಮ್ಮನೇ ಯಾಂತ್ರಿಕವಾಗಿ ಟೀ.ವಿ ನೋಡುತ್ತ ಕುಳಿತು ಬಿಡುತ್ತಿದ್ದರು.ಅಣ್ಣ ಊರಿನ ಆಗುಹೋಗುಗಳ ಬಗ್ಗೆ ಸಜ್ಞೆ ಮಾಡಿ ಕೇಳುತ್ತಿದ್ದರು ಅದಕ್ಕಷ್ಟೆ ಉತ್ತರ ಕೊಟ್ಟು ಸುಮ್ಮನಾಗಿ ಬಿಡುತ್ತಿದ್ದರು ಭಗವಂತಪ್ಪ.ಹ್ಯಾಗಾದರು ಮಾಡಿ ತನ್ನ ಮನದಲ್ಲಿನ ತಿಕ್ಕಾಟ ಹೇಳಲೇ ಬೇಕೆಂದು ಕೊಂಡು ತಕ್ಕ ಮಟ್ಟಿಗೆ ಸಿಧ್ದತೆ ಮಾಡಿಕೊಂಡು ಇನ್ನೇನು ಹೇಳಬೇಕೆನ್ನುವಷ್ಟರಲ್ಲಿ ಮನೆಯವರಲ್ಲೇ ಯಾರೋ ಒಬ್ಬರು ಸುಳಿದಾಡಿಬಿಡುತ್ತಿದ್ದರು. ತಮಗಿಂತ ವಯಸ್ಸಿನಲ್ಲಿ ಎಷ್ಟೋ ವರ್ಷ ಸಣ್ಣವರಾದವರ ಮುಂದೆ ಹೇಗೆ ಸ್ವಾಭಿಮಾನ ಬಿಟ್ಟು ಎಲ್ಲವನ್ನೂ ಹೇಳುವುದು?ಎಲ್ಲವನ್ನೂ ಒಳಗೆ ನುಂಗಿ ವಿಷಕಂಠನಾಗಿ ಬಿಡುತ್ತಿದ್ದರು.ಮನೆಯ ಸೊಸೆಯರು ಕೊಟ್ಟ ಚಹಾ ಕುಡಿದು ಮತ್ತೆ ಅದೇ ವಿಚಾರದಲ್ಲಿ ಮನೆ ಕಡೆ ಹೊರಡುತ್ತಿದ್ದರು.ಇದು ಎಷ್ಟೋ ತಿಂಗಳುಗಳಿಂದ ನಡೆದಿತ್ತು. ಎಷ್ಟೋ ದಿನಗಳು ತನ್ನ ಅಣ್ಣನೇ ಮನೆಯ ಅವಶ್ಯಕತೆ ತನಗಿಲ್ಲ ಎಂದು ಹೇಳುವರೇ ಎಂದು ಕಾತುರದಿಂದ ಕಾಯುತ್ತಿದ್ದರು .ಒಂದು ದಿನವಂತು ಮನೆಯಲ್ಲಿ ಯಾರು ಇರದ ಸಂದರ್ಭದಲ್ಲಿ ತನ್ನ ಅಣ್ಣನ ಕೈ ಹಿಡಿದು ಚಿಕ್ಕ ಮಕ್ಕಳಂತೆ ಗಳಗಳನೇ ಅತ್ತು ಬಿಟ್ಟು ಇನ್ನೇನು ವಿಷಯ ಹೇಳ ಬೇಕೆನ್ನುವಷ್ಟರಲ್ಲಿ ಮನೆಯ ಕಿರಿಯ ಸೊಸೆ ಬಾಗಿಲು ತೆರೆಯವ ಸದ್ದಾಯಿತು .ಕಣ್ಣೀರು ಒರೆಸಿಕೊಂಡ ಭಗವಂತಪ್ಪ ತಮ್ಮೆಲ್ಲಾ ನೋವನ್ನೇಲ್ಲಾ ಗಂಟಲಲ್ಲೇ ಹಿಡಿದರು. ವೇದಮೂರ್ತಿಗೆ ಏನು ಅರ್ಥವಾಗಲಿಲ್ಲ.ಬಹುಶಃ ತನ್ನ ಈ ಪರಿಸ್ಥಿತಿ ನೋಡಿ ಬೇಸರ ಆಗಿರಬೇಕು ಇಲ್ಲವೇ ಕಿರಿಯ ಮಗ ಮಂಜುನಾಥನ ಅಕಾಲಿಕ ಸಾವು ಹೀಗೆ ಮಾಡಿರಬಹು ಎಂದುಕೊಂಡು,ಮಲಗಿದ್ದಲ್ಲಿಂದಲೇ ತಲೆ ಸವರಿ ಸಮಾಧಾನ ಮಾಡಿದ್ದರು.ಒಂದು ಅರ್ಥದಲ್ಲಿ ಮಂಜುನಾಥನ ಸಾವು ಭಗವಂತಪ್ಪನವರನ್ನು ಈ ರೀತಿ ನಡೆಸಿಕೊಂಡಿದೆ ಎಂದು ಹೇಳಬಹುದು ಆದರೇ ಅದೊಂದೆ ಕಾರಣ ವಾಗಿರಲಿಲ್ಲ.ಅಲ್ಲದೆ.ವಾಸ್ತವವಾಗಿ ವೇದಮೂರ್ತಿ ತಮ್ಮ ಪೂರ್ವಿಕರ ಹಳೆಯ ಮನೆ ಮತ್ತು ತೋಟ ಎರಡರ ಅವಶ್ಯಕತೆಯೇ ಇಲ್ಲದಷ್ಟು ಸಂಪಾದಿಸಿದ್ದರು.ಅಲ್ಲದೆ ಪೂರ್ವಿಕರ ಆಸ್ತಿಯ ಬಗ್ಗೆ ಯಾವುದೇ ಹಳ ಹಳಿಕೆ ಇರಲಿಲ್ಲ.


ಅಂದುಕೊಂಡ ನವರಾತ್ರಿ ಉತ್ಸವ ಬಂದೇ ಬಿಟ್ಟಿತು.ನವರಾತ್ರಿ ಯ ಮೊದಲ ದಿನ ಸಂಜೆ ‘ದೇವಿ ಮಾಹಾತ್ಮ’ ಹೇಳಲು ಸಜ್ಜಾದರು ಭಗವಂತಪ್ಪ.ಪುರಾಣ ಹೇಳುವುದಕ್ಕಾಗಿಯೇ ಮಾಡಿದ್ದ ಎತ್ತರದಲ್ಲಿ ಸ್ಥಳದಲ್ಲಿ ಆಸೀನಾರದರು,ಗಂಟಲನ್ನು ಸರಿಪಡಿಸಿಕೊಂಡು ಕುಳಿತಲ್ಲಿಂದಲೇ ಕಾಳಮ್ಮ ದೇವಿಗೆ ಮತ್ತೊಮ್ಮೆ ನಮಸ್ಕರಿಸಿ ದನಿ ತೆಗೆದು ಅನುಚಾನವಾಗಿ ಬಂದ ಪಧ್ಧತಿಯಂತೆ ಕನಕದಾಸರ ಒಂದು ಹಾಡನ್ನು ಹೇಳಲು ಪ್ರಾರಂಭಿಸಿದರು:-
“ನೀ ಮಾಯೆಯೋ…ನಿನ್ನೊಳು ಮಾಯೆಯೋ…ನೀ ದೇಹದೊಳೊ?ನಿನ್ನೊಳು ದೇಹವೋ?”
ಅವರ ಧ್ವನಿಯಲ್ಲಿ ಮೊದಲಿನ ಬಲ ಕಾಣಿಸಿಲಿಲ್ಲ,ಅಲ್ಲದೆ ಮೊದಲಿರುತ್ತಿದ್ದ ತನ್ಮಯತೆಯೂ ಇರಲಿಲ್ಲ.ಭಗವಂತಪ್ಪನವರು ತಮ್ಮ ದೇಹದಲ್ಲಿ ಆಗಿದ್ದ ಆ ಬದಲಾವಣೆಯನ್ನು ಗಮನಿಸದ್ದರು.ದೇಹವೂ ದಿನಕ್ಕೂ ದಿನಕ್ಕೂ ಕೃಷವಾಗುತ್ತಿತ್ತು.ಆ ದಿನದ ಪುರಾಣ ಮುಗಿದಾದ ಮೇಲೆ ದೇವಿ ಆರತಿ ಮಾಡಿ ಆರತಿಯನ್ನು ಭಕ್ತಾದಿಗಳೆಲ್ಲರಿಗೂ ಕೊಡಲು ಪ್ರಾರಂಭಿಸಿದರು.ಆರತಿ ತಟ್ಟೆಯಲ್ಲಿ ಭಕ್ತಾದಿಗಳು ಹಾಕುತ್ತಿದ್ದ ಚಿಲ್ಲರೆ ಕಾಸಿನ “ಠಣ್ …ಠಣ್ ..ಚಣ್…ಧನ್” ಒಂದೊಂದೆ ಶಬ್ದಗಳು ಅವರನ್ನು ಸಂತೋಷಗೊಳಿಸುತ್ತಿತ್ತು.ಎಲ್ಲ ಮುಗಿದಾದ ಮೇಲೆ ಮೆನೆಗೆ ಹೊರಡುವ ಸಂದರ್ಭದಲ್ಲಿ ‘ದೇವಸ್ಥಾನ ಸಮಿತಿ’ಯ ಸದಸ್ಯರು ಬೊಗಸೆಯಲ್ಲಿ ತಂದು ಕೊಡುತ್ತಿದ್ದ ರೊಕ್ಕ ಕಂಡು ಪುಟ್ಟದಾದ ಹೊಸ ಮನೆ ಕಟ್ಟಿಸಿಕೊಂಡು ತಾವಿದ್ದ ಹಳೆಯ ಮನೆ ಯನ್ನು ಅಣ್ಣನ ಸುಪರ್ದಿಗೆ ಒಪ್ಪಿಸಿದ ಸಂಭ್ರಮದಲ್ಲಿ ಮಿಂದೆದ್ದರು.


ಮಂಜುನಾಥ ಭಗವಂತಪ್ಪನ ಎರಡೆನೆಯ ಮಗ.ಹಿರಿಯ ಮಗ ಶಂಕರ ಅಂಗವಿಕಲ ಮತ್ತೆ ಸ್ವಲ್ಪ ಬಧ್ಧಿ ಮಾಂಧ್ಯ ಮಂಜುನಾಥ ಸರ್ಕಾರಿ ಕಾಲೇಜಿನಲ್ಲಿ ಬಿ,ಎ, ಮುಗಿಸಿ ಸಣ್ಣದೊಂದು ಬೀಡಾ ಅಂಗಡಿಯಿಟ್ಟು ಅದರ ಸಣ್ಣ ಆದಾಯದಿಂದ ಮನೆಗೆ ದೊಡ್ಡ ಮಟ್ಟದ ಆಧಾರ ವಾಗಿದ್ದ.ಎರೆಡು ವರ್ಷದ ಹಿಂದೆ ಗಣೇಶ ವಿಸರ್ಜನೆ ಕಾಲಕ್ಕೆ ನಡೆದ ಕೋಮುಗಲಭೆಯಲ್ಲಿ ಅವನು ಮತ್ತು ಗಲಭೆಕೋರರ ನಡುವೆ ನಡೆದ ಸಣ್ಣದೊಂದು ಮಾತುಕತೆಯೇ ದೊಡ್ಡದಾಗಿ ಅವನನ್ನು ಅಂಗಡಿ ಸಮೇತ ಸುಟ್ಟುಬಿಟ್ಟಿದ್ದರು.ಬೆಳೆದು ನಿಂತು ಮನೆಗೆ ಆಸರೆ ಯಾಗಿದ್ದ ಮಗನನ್ನು ಕಳೆದು ಕೊಂಡ ಯಾವಬ್ಬ ತಂದೆ ತಾಯಿ ಮತ್ತೆ ಹಿಂದಿನಿಂತೆ ಎಲ್ಲ ಮರೆತು ಬದುಕಿಯಾರು?ಗಲಭೆ ನಡೆದ ದಿನದಲ್ಲಿ ತುಂಬಾ ಸಕ್ರೀಯವಾಗಿದ್ದ ಆ ಸಂಘಟನೆ ಕಾರ್ಯಕ್ರ ವೊಂದಕ್ಕೆ ಭಗವಂತಪ್ಪನ್ನು ಆಹ್ವಾನಿಸಿ ಒಂದಿಷ್ಟು ಹಣ ಕೊಟ್ಟು ಕಳುಹಿಸಿದ್ದರು.ಅಲ್ಲದೆ . ‘ಹುತಾತ್ಮ ಮಂಜು” ಎಂದು ಅವನ ಪುತ್ಥಳಿ ಯನ್ನು ಕಾಮನ ಕಟ್ಟೆ ವೃತ್ತದಲ್ಲಿ ಸ್ಥಾಪಿಸಿದ್ದರು.ಆ ಪುತ್ಥಳಿ ನೋಡಿದಾಗಲೊಮ್ಮೆ ಅಥವಾ ಆ ರಸ್ತೆ ಯಲ್ಲಿ ನಡೆದಾಡುವಾಗ ಭಗವಂತಪ್ಪನವರಿಗೆ ದುಖಃ ಉಮ್ಮಳಿಸಿ ಬರುತ್ತಿತ್ತು.ನಂತರ ರಸ್ತೆ ಅಗಲಿಕರಣದಲ್ಲಿ ಆ ಪುತ್ಥಳಿಯನ್ನು ಕಡೆವಿ ಹಾಕಲಾಯಿತು.ಆದರೂ ಪುತ್ರ ಶೋಕ ನಿರಂತರ ಎನ್ನುವಂತೆ ಮಂಜುವಿನ ಅಗಲಿಕೆ ವಿಪರೀತ ಕಾಡುತ್ತಿತ್ತು.ಯಾವಾಗ ಮಂಜುನಾಥ ದುಡಿಯಲು ಪ್ರಾರಂಭಿಸಿದ್ದನೋ ಆ ದಿನದಿಂದ ಅಕ್ಷರಶಃ ಕೆಲಸಕ್ಕೆ ಹೋಗುವುದನ್ನು ಭಗವಂತಪ್ಪನವರು ನಿಲ್ಲಿಸಿ ಬಿಟ್ಟಿದ್ದರು.ದಿನಕ್ಕೊಮ್ಮೆ ತೋಟದ ಕಡೆ ಹೋಗಿ ಬರುತ್ತಿದ್ದರು.ಆಗಲೂ ಹಿರಿಯರ ಆಸ್ತಿಯನ್ನು ತಾನೊಬ್ಬನೇ ಅನುಭವಿಸುತ್ತಿರುವೆನಲ್ಲಾ ಎಂದು ‘ಪಾಪ ಪ್ರಜ್ಞೆ’ ಕಾಡುತ್ತಿತ್ತು.ಆದರೆ ಮಂಜು ದುಡಿಯುತ್ತಿರುವುದರಿಂದ ಹೇಗಾದರೂ ಮಾಡಿ ಒಂದಿಷ್ಟು ಕಾಸು ಮಾಡಿಕೊಂಡು ಬೇರೆ ಮನೆ ಮಾಡಿಕೊಂಡು ಹೋಗಬೇಕೆಂಬ ವಿಚಾರವಿತ್ತು.ಆದರೇ ಮಂಜುವಿನ ಅಕಾಲಿಕ ಮರಣದಿಂದ ಭಗವಂತಪ್ಪನವರು ಕುಸಿದುಬಿಟ್ಟರು.ಎರೆಡು ವರ್ಷ ಕಸುಬು ಬಿಟ್ಟಿದ್ದರಿಂದ ಎಲ್ಲಾ ಅಭ್ಯಾಸ ತಪ್ಪಿ ಹೋಗಿತ್ತು, ಅಲ್ಲದೆ ವಯೋ ಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದರು.ಒಮ್ಮೊಮ್ಮೆ ಅನ್ನಿಸುತ್ತಿತ್ತು ತನ್ನ ಅಣ್ಣ ಓದಿ ಸರ್ಕಾರಿ ನೌಕರಿ ಯಲ್ಲಿದ್ದಾನೆ ಅವನಿಗೆ ಇದರ ಅವಶ್ಯಕತೆ ಇಲ್ಲದಿಲ್ಲ. ಅದನ್ನು ಒಮ್ಮೆ ಅಣ್ಣ ತನ್ನ ಮುಂದೆ ಹೇಳಿದರೆ ಸಾಕಿತ್ತು.ಆದರೇ ವಾಸ್ತವದಲ್ಲಿ ವೇದಮೂರ್ತಿಯಾಗಲಿ ಮತ್ತು ವೇದಮೂರ್ತಿಯ ಇಬ್ಬರು ಮಕ್ಕಳಾಗಲಿ ಆ ಆಸ್ತಿ ಪಾಸ್ತಿ ಬಗ್ಗೆ ತಲೆಯೇ ಕೆಡಸಿಕೊಂಡಿದ್ದಿಲ್ಲ.ವೇದಮೂರ್ತಿಗೆ ಕೆಲಸದಲ್ಲಿದ್ದಾಗ ಕೇವಲ ತನ್ನ ಆದಾಯ ಹೇಗೆ ವೃಧ್ಧಿಸಿಕೊಳ್ಳಬೇಕೆಂಬ ಆಲೋಚನೆ ಮಾತ್ರ ಇತ್ತು.ಈಗಂತೂ ಹಾಸಿಗೆ ಹಿಡಿದುಬಿಟ್ಟಾಗಿದೆ.ಇನ್ನು ಮಕ್ಕಳಿಗೋ ವಿಪರೀತ ಕೆಲಸ.ಸುತ್ತ ಮುತ್ತಲ ಊರುಗಳಾದ ಹರಪನ ಹಳ್ಳಿ,ಹಗರಿ ಬೊಮ್ಮನಹಳ್ಳಿಗಳಿಂದಲೂ ಕೆಲಸ ಬರುತ್ತಿತ್ತು.ಸುತ್ತಲಿನ ನಾಲ್ಕಾರು ಊರುಗಳಲ್ಲಿ ಎಲ್ಲಿಯೂ ಈ ತರಹದ ಯಂತ್ರೋಪಕರಣಗಳು ಇರಲಿಲ್ಲ.ವೇದಮೂರ್ತಿ ಯ ಇಬ್ಬರು ಮಕ್ಕಳಿಗೆ ತಮ್ಮ ವ್ಯವಹಾರವನ್ನು ಸಂಭಾಳಿಸುವುದು ತುಂಬ ಕಷ್ಟವಾಗಿತ್ತು.ಅವರಲ್ಲಿ ಒಬ್ಬ ಆರ್ಡರ್ ತರುವುದಕ್ಕಾಗಿ ಉರೂರು ತಿರುಗಿದರೆ ಇನ್ನೊಬ್ಬ ಕೆಲಸಕ್ಕೆ ಬೇಕಾಗಿರುವ ಸಮಾನು,ಸರಂಜಾಮುಗಳನ್ನು ಹೊಂದಿಸುವಲ್ಲಿ ಮುಳುಗಿರುತ್ತಿದ್ದ.ಅಲ್ಲಿನ ದಿನ ನಿತ್ಯದ ಕೆಲಸದ ಮೇಲ್ವಿಚಾರಣೆಗೆ ಒಳ್ಳೆ ಪಳಗಿದ ಕಸುಬುದಾರ ಮತ್ತು ನಂಬಿಕರ್ಹ ವ್ಯಕ್ತಿ ಬೇಕಾಗಿತ್ತು.ಆಗ ಅವರಿಬ್ಬರಿಗೂ ಕಂಡಿದ್ದು ತಮ್ಮ ಕಕ್ಕ ನಾದ ಭಗವಂತಪ್ಪ.!!!ವ್ಯವಹಾರದಲ್ಲಿ ನಿಷ್ಣಾತರಾಗಿದ್ದಂತೆ ಸಂಬಂಧಗಳ ಸೂಕ್ಷ್ಮ ವನ್ನು ಮತ್ತು ಆಳ ಗಳನ್ನು ಚೆನ್ನಾಗಿಯೇ ಅರಿತದ್ದರು.ಹಾಗಾಗಿ ತಾವು ಯಾವುದೇ ವಿಷಯವನ್ನು ಪ್ರಸ್ತಾಪಿಸಿದೆ ತಮ್ಮ ತಂದೆಯ ಮೂಲಕ ವಿಷಯವನ್ನು ತಮ್ಮ ಕಕ್ಕನಿಗೆ ರೆವಾನಿಸಿದರು.ಭಗವಂತಪ್ಪನಿಗೆ ಮತ್ತೊಂದು ಧರ್ಮ ಸಂಕಟ.ಮೊದಲೇ ಇದ್ದ ಚಕ್ರತೀರ್ಥ ದ ಸುಳಿಗಳಾದ ಜೀವನದ ಕಟ್ಟ ಕಡೆಯ ಜವಬ್ದಾರಿ,ಹಿರಿಯರ ಆಸ್ತಿಯನ್ನು ಒಬ್ಬನೇ ಅನುಭವನಿಸತ್ತಿರುವ ‘ಪಾಪ ಪ್ರಜ್ಞೆ’ ಯ ಜೊತೆಗೆ ಹೊಸದೊಂದು ಸೇರ್ಪಡೆ.ವೇದಮೂರ್ತಿ ವಿಷಯವನ್ನು ಭಗವಂತಪ್ಪನಿಗೆ ಮುಟ್ಟಿಸಿದರೇನೋ ನಿಜ! ಆದರೆ ತನ್ನ ಅಣ್ಣ ನ ಮಾತನ್ನು ವಿರೋಧಿಸುವುದು ಹೇಗೆ?ವಿರೋಧಿಸಿದೆ ಇದ್ದರೆ ಮತ್ತೊಂದು ಸಿಕಂಚಿನಲ್ಲಿ ಸಿಕ್ಕಿ ಹಾಕಿ ಕೊಂಡಂತೆ ಆಗುತ್ತೆ ಅಲ್ಲವೇ?ಆದರೆ ಭಗವಂತಪ್ಪ ಅಣ್ಣನ ಮಾತಿಗೆ ವಿರೋಧಿಸದೆ ಒಪ್ಪಿಗೆ ಕೊಟ್ಟರು.ಭಗವಂತಪ್ಪನೆನ್ನುವ ಪಳಗಿದ ಕಸುಬುದಾರ ದೊರಕಿದ ಮೇಲೆ ತಮ್ಮ ಫ್ಯಾಕ್ಟರಿ ಯ ಕಡೆ ಆಲೋಚನೆಯನ್ನೇ ಬಿಟ್ಟು ಬಿಟ್ಟರು ಶಿವಾನಂದ ಮತ್ತು ರಾಘವೇಂದ್ರ .ತಮ್ಮ ತಮ್ಮ ಕೆಲಸಗಳ ಕಡೆ ವಿಶೇಷ ಗಮನಕೊಡಲು ಶರು ಮಾಡಿದರು.ಫ್ಯಾಕ್ಟರಿ ತಯಾರುಮಾಡುತ್ತಲಿದ್ದ ಉತ್ಪನ್ನಗಳ ಗುಣಮಟ್ಟ ಉತ್ಕೃಷ್ಟ ಮಟ್ಟದಲ್ಲಿದ್ದವು.ಮೊದಲಿನ ದಿನಗಳಲ್ಲಿ ಭಗವಂತಪ್ಪ ಅದೊಂದು ಸಿಕಂಚು ಎಂದು ಭಾವಿಸಿ ಕೆಲಸ ಮಾಡುತ್ತಿದ್ದರು.ಆದರೆ ನಂತರದ ದಿನಗಳಲ್ಲಿ ಆ ಕಾಳಮ್ಮನೇ ತನ್ನ ಮೇಲಿರುವ ಋಣ ಭಾರವನ್ನು ಇಳಿಸುವುದಕ್ಕಾಗಿಯೇ ಅವಕಾಶ ಮಾಡಿಕೊಟ್ಟಿದ್ದಾಳೆಂದುಕೊಂಡು ವಿಪರೀತ ಕೆಲಸ ಮಾಡಲು ಶುರು ಮಾಡಿದರು.ಭಗವಂತಪ್ಪನಿಗೆ ಸಂಬಳದ ರೂಪದಲ್ಲಿ ತಕ್ಕ ಮಟ್ಟಿಗೆ ಜೀವನಕ್ಕೆ ಸಹಾಯ ವಾಗುತ್ತಿದ್ದರು. ಮೊದ ಮೊದಲು ಅದನ್ನು ಒಪ್ಪಿಕೊಳ್ಳಲು ಮನಸ್ಸು ಸಜ್ಜಾಗಿರಲಿಲ್ಲ.ಆದರೆ ಎಲ್ಲಕ್ಕಿಂತ ಮಿಗಿಲಾಗಿ ಜೀವೆನ ವೆನ್ನುವುದು ಇರುವಾಗ ತಮ್ಮ ಸ್ವಾಭಿಮಾನ ಹಿಂದಕ್ಕೆ ಸರಿಯಿತು.ಭಗವಂತಪ್ಪನ ಆರೋಗ್ಯ ಇನ್ನೂ ಹದಗೆಟ್ಟಿತ್ತು.ಋಣಭಾರಿ ಇಳಿಸಿಕೊಳ್ಳಬೇಕು ಎನ್ನುವ ನೆಪದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದರು.ಕೆಲಸದ ಮಧ್ಯೆ ಬಿಡುವ ಮಾಡಿಕೊಂಡು ಅಣ್ಣನನ್ನು ಮತಾಡಿಸಿಕೊಂಡು ಬರುತ್ತಿದ್ದರು.ಮತ್ತದೇ ರಗಳೆ ಅಣ್ಣನ ಮನೆಗೆ ಹೋಗುವಾಗಲೇನೋ ಎಲ್ಲ ಹೇಳಿ ಭಾರ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಸಿಧ್ಧತೆಯಲ್ಲಿಯೇ ಹೋಗಿರುತ್ತಿದ್ದರು ಆದರೆ ನಾಲಿಗೆ ಬಿಟ್ಟು ಹೊರಬಾರದೆ ಮಾತುಗಳನ್ನು ಗಂಟಲಲ್ಲೇ ನುಂಗಿಕೊಂಡು ಬಿಡುತ್ತಿದ್ದರು.ಆರೋಗ್ಯದ ಕಡೆ ಗಮನ ಕೊಡು ಎಂದು ಮಲಗಿದಲ್ಲಿಂದಲೇ ಸಜ್ಞೆ ಮಾಡಿ ಹೇಳಿದ ವೇದಮೂರ್ತಿ ಮಾತನ್ನು ಭಗವಂತಪ್ಪ “ತನ್ನ ಆರೋಗ್ಯ ಹಾಗಿರಲಿ ನಿನ್ನ ಆರೋಗ್ಯದ ಕಡೆ ಗಮನ ಕೊಡು ..” ಎಂದು ಹೇಳಿ ಮಾತು ಮುಗಿಸಿದ್ದರು.


ಶಂಕ್ರನಿಗೆ ಜೀವನಕ್ಕೆ ದಾರಿ ಮಾಡಿ ಕೊಡುವ ಸಲುವಾಗಿ ಗ್ರಾಮ ದೇವತೆ ಊರಮ್ಮ ನ ದೇವಸ್ಥಾನ ದಲ್ಲಿ ತೀರ್ಥ ಕೊಡುವ ಕೆಲಸಕ್ಕೆ ನೇಮಿಸಿದರು.ತಮ್ಮ ಸಮಸ್ತ ಕುಲಬಾಂಧವರನ್ನು ಭೇಟ್ಟಿಯಾಗಿ ಪರಿಸ್ಥಿತಿಯನ್ನು ತಿಳಿಸಿ ಹೇಳಿ ಅವರಿಗೆ ಮನವರಿಕೆ ಮಾಡಿಕೊಟ್ಟು ಶಂಕ್ರನಿಗೆ ದಾರಿ ಮಾಡಿಕೊಟ್ಟಿದ್ದರು.ಶಂಕ್ರನಿಗೆ ಒಂದು ಜೀವನಕ್ಕೆ ದಾರಿಯಾಗಿತ್ತು.ಎಲ್ಲರಿಗೂ ಭಗವಂತಪ್ಪನವರ ಆದಾಯ ಮತ್ತು ಶಂಕ್ರ ನ ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ತಿಳುವಳಿಕೆ ಇದ್ದದ್ದರಿಂದ ಕೇವಲ ಕುಲ ಬಾಂಧವರಷ್ಟೇ ಅಲ್ಲ ಊರಿನ ಸಮಸ್ತ ಜನತೆ ದೇವಸ್ಥಾನಕ್ಕೆ ಬಂದಾಗ ಸ್ವಲ್ಪ ಹೆಚ್ಚೆ ಎನ್ನುವಂತೆ ದಕ್ಷಿಣೆ ಕೊಟ್ಟು ಹೋಗುತ್ತಿದ್ದರು.ಒಂದು ದಿನ ಕಾಳಪ್ಪನವರು ಶಂಕ್ರ ನ ಜೊತೆ ಮನೆಗೆ ಬಂದವರೇ…”ಭಗವಂತಾ ನೀನೆಷ್ಟು ಛೊಲೋ ಮನಷಾ ಅದಿ,ಅದರೆ ಇಂಗ್ಯಾಕೋ ಇವ್ನು…” ಎಂದು ಪೆಚ್ಚು ಪೆಚ್ಚು ನೋಡುತ್ತಿದ್ದ ಶಂಕ್ರ ನ ಕಡೆ ಕೈ ಮಾಡಿದರು.ಭಗವಂತಪ್ಪನವರಿಗೆ ಪರಿಸ್ಥಿತಿಯ ಹಿಂದು ಮುಂದು ಏನೂ ತಿಳಿದಿರಲಿಲ್ಲ.”ಏನ್ ಮಣ್ಣ್ ತಿನ್ನಾ ಕೆಲ್ಸಾ ಮಡೀಲೇ…”ಎಂದು ಕೃಧ್ಧರಾಗಿ ಶಂಕ್ರನ ಹೊಡೆಯಲು ಹೋದರು.ಆದರೆ ಕಾಳಪ್ಪನವರು ತಡೆದು ಸಮಾಧಾನ ಮಾಡಿ ಆಗಿ ಹೋಗಿದ್ದ ಘಟನೆಯನ್ನು ವಿವರಿಸಿದರು.ಭಗವಂತಪ್ಪನವರನ್ನು ಸಮಾಧಾನ ಮಾಡಿ ಕಾಳಪ್ಪನವರು ಮನೆಯಿಂದ ಹೋದ ಮರುಕ್ಷಣವೇ ಭಗವಂತಪ್ಪ ‘ಫಠರಾನೆ ‘ ಶಂಕ್ರನ ಕಪಾಳಕ್ಕೆ ಹೊಡೆದು…”ತಮ್ಮಾ …ನಿಂದಲ್ಲಲೇ .ತಪ್ಪು ಎಲ್ಲಾ ನಂದೈತಿ.ನಿಂಗ್ ಕೈ ಕಾಲ್ ಸರಿ ಇಲ್ಲ ಆದ್ರೆ ತಲ್ಯಾಗ ಒಂದೀಟ ಬುದ್ದಿ ಐತಿ,ದಿನಾ ಉಪ್ಪು ಕಾರ ಬ್ಯಾರೆ ತಿಂತಿ…ವಯಸ್ಸಿಗೆ ಬ್ಯಾರೆ ಬಂದಿ…ಈಟೋತ್ತಿಗಾಗಲೇ ನಿನ್ನಂತಾದೆ ಒಂದ್ ಹೆಣ್ ಗಂಟಾಕ್ಬೇತ್ತು.ಅದ ನನ್ ತಪ್ಪು”.ಭಗವಂತಪ್ಪನ ಚಕ್ರ ತೀರ್ಥಕ್ಕೆ ಮತ್ತೊಂದು ಸುಳಿ.


ಇಷ್ಟೆಲ್ಲದರ ಮಧ್ಯೆ ಮತ್ತೊಂದು ನವರಾತ್ರಿ ಬಂದಿತ್ತು.ಕಾಳಪ್ಪನವರೇನೋ ಅದೇ ಹಿಂದಿನ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅಹ್ವಾನ ಕೊಡಲು ಬಂದರು.ಒಂದು ಕಡೆ ಶಂಕ್ರ ಕುಕ್ಕರಗಲಲ್ಲಿ ಕುಳಿತು ಟೀ.ವಿ ನೋಡುತ್ತಿದ್ದಾನೆ ಮತ್ತೊಂದು ಕಡೆ ತಂದೆ ಜಕಣಾಚಾರಿ ಫೂಟು,ಮಧ್ಯೆ ಭಗವಂತಪ್ಪನವರು .