ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಪೀಠಿಕೆ 

(ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಮೂವತ್ತು ತುಂಬಿದ ಸಂಭ್ರಮದಲ್ಲಿ ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ಎಲ್ಲಗೌರವಾನ್ವಿತ ಪದಾಧಿಕಾರಿಗಳಿಗೆ, ಸದಸ್ಯರುಗಳು ಹಾಗೂ ಕಾರ್ಯಕ್ರಮದ ರೂವಾರಿಗಳಿಗೆ ನನ್ನ ಆತ್ಮೀಯ ನಮಸ್ಕಾರಗಳು. ಸಾಗರೋತ್ತರವಾಗಿ  ಸಾವಿರಾರು ಮೈಲಿ ಆಚೆ ಯೂರೋಪಿನಲ್ಲಿ ನೆಲೆಸಿರುವ  ಕನ್ನಡಿಗನಾದ ನನಗೆ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಟ್ಟದ್ದು, ಕನ್ನಡ ಅಭಿವೃದ್ದಿ ಪ್ರಾಧಿಕಾರ ಇವತ್ತು ಎಲ್ಲ ರೀತಿಯ  ಗಡಿ ಎಲ್ಲೆಗಳನ್ನು ದಾಟಿ ತನ್ನ  ವಿಸ್ತ್ರತೆಯನ್ನು, ಕನಸುಗಳ ಪರಿಧಿಯನ್ನೂ ಹಿಗ್ಗಿಸಿಕೊಳ್ಳುವತ್ತ ಸಾಗಿದೆ ಎಂಬುದಕ್ಕೆ ಒಂದು ಸಕಾರಾತ್ಮಕ  ನಿದರ್ಶನವಾಗಿದೆ ಎಂದು ಭಾವಿಸುತ್ತೇನೆ. ಪ್ರಾಧಿಕಾರದ ಮಹತ್ವಾಕಾಂಕ್ಷೆಯ ದಿಕ್ಕು, ದೆಸೆಗೆ ಪೂರಕವಾಗಿ ಕೆಲವು ವಿಚಾರಗಳನ್ನು ಹಂಚಿಕೊಳ್ಳುವ ವಿನಮ್ರ ಪ್ರಯತ್ನ ನಿಮ್ಮ ಮುಂದಿಡುತ್ತಿದ್ದೇನೆ. 

ನನ್ನ ಎಲ್ಲ ವಿಚಾರಗಳ ಹಿಂದೆ ಈ ಕೆಲವು ಹಿನ್ನೆಲೆ ಹಾಗೂ  ವೃತ್ತಿಮೂಲಗಳ ನೇರ ಅನುಭವ ನೆರವು ನೀಡಿದೆ.  ಗ್ರಾಮೀಣ ಭಾಗದ ಶುದ್ಧ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿ, ರಾಜ್ಯದ ಎಂಜಿನೀರಿಂಗ್ ಕಾಲೇಜಿನಿಂದ ಪದವಿ ಪಡೆದವನಾಗಿ,  ಒಬ್ಬ ಸಾಫ್ಟ್ ವೇರ್ ಎಂಜಿನೀರ್ ಆಗಿ ವೃತ್ತಿಯನ್ನು  ಆರಂಭಿಸಿ, ಇಂದಿನ 5G/6G ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ  ಮಂಚೂಣಿಯಲ್ಲಿರುವ ಒಂದು ಉತ್ಪಾದಕ  ಕಂಪನಿಯ ಒಡನಾಟ  ಹಾಗೂ  ಭಾರತೀಯ ಮೂಲದ  ಜಗತ್ತಿನ ಬೃಹತ್  ಮಾಹಿತಿ ತಂತ್ರಜ್ಞಾನ ಕಂಪನಿಗಳ ವ್ಯವಹಾರ ಅಭಿವೃದ್ಧಿ ವಿಭಾಗದ ನಿರ್ವಾಹಕನಾಗಿ ಕೆಲಸ ಮಾಡಿದ ಅನುಭವಗಳ, ಗಮನಿಕೆಗಳ  ಹಿನ್ನೆಲೆಯಲ್ಲಿ ಮೂಡಿಬಂದ , ಸಾರ್ವತ್ರಿಕವಾಗಿ ಅನ್ವಯಿಕವಾಗಬಲ್ಲ ವಿಚಾರವನ್ನು ಇಲ್ಲಿ  ಮುಂದಿಡ ಬಯಸುತ್ತೇನೆ..)

ಇವತ್ತಿನ ವಿಷಯ ಮುಖ್ಯವಾಗಿ ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು : ಸಾಧ್ಯತೆ ಹಾಗೂ ಸಿದ್ಧತೆ ಎಂಬುದು.ಇದು ಯಾಕೆ ಮಹತ್ವದ ವಿಷಯ ಎನ್ನುವುದಕ್ಕೆ ನಿಮಗೆ ೨೦೨೨ ರ  ಜಾಗತಿಕ ಸಮೀಕ್ಷೆಯ   ಕೆಲ ಅಂಕಿ ಅಂಶ ಕೊಡುತ್ತೇನೆ.  ವಿಚಾರ ಸಂಕಿರಣ ನಡೆಯುತ್ತಿರುವ ಈ ಹೊತ್ತಿನಲ್ಲಿ ಉದ್ಯೋಗಾವಕಾಶಗಳು ಕಳೆದ ವರ್ಷಕ್ಕೆ ಹೋಲಿಸಿದರೆ ,ಜಾಗತಿಕವಾಗಿ ೩೩ ಪ್ರತಿಶತ ಹಾಗೂ ಭಾರತದಲ್ಲಿ ೫೩ ಪ್ರತಿಶತ ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಕೊಂಡಿವೆ.  ಆದರೆ ಇವುಗಳ ನೇರ ಸದುಪಯೋಗ ಆಗಿದೆಯೇ ಎಂದರೆ ಇಲ್ಲ. ಖಾಲಿ ಹುದ್ದೆಗಳಿಗೆ  ತಕ್ಕ ಅಭ್ಯರ್ಥಿಗಳು ದೊರಕದೇ ಭರ್ತಿಯಾಗುತ್ತಿಲ್ಲ ಎನ್ನುವುದು ಎಲ್ಲ ಕಂಪನಿಗಳ ಸಿ.ಇ.ಓ ಗಳಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ..  ಶಿಕ್ಷಣ,ಆರೋಗ್ಯ, ಬ್ಯಾಂಕಿಂಗ್  ,ವಿಮಾ ಕ್ಷೇತ್ರ, ಡಿಜಿಟಲ್  ಮಾಧ್ಯಮ ಹಾಗೂ  ಸಂವಹನ ಕ್ಷೇತ್ರ, ದೂರ ಸಂಪರ್ಕ, ತಯಾರಿಕಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಬಹುತೇಕ ಎಲ್ಲ ಉದ್ಯಮ ಕ್ಷೇತ್ರಗಳಲ್ಲೂ ಅವಶ್ಯಕ ಕೌಶಲ್ಯಗಳ ತೀವ್ರ  ಕೊರತೆ ತಲೆದೋರಿದೆ. ಹೀಗಿದ್ದ ಪಕ್ಷದಲ್ಲಿ ನಮ್ಮ ನಾಡು , ನಮ್ಮ ಜನ ಹೇಗೆ ಸನ್ನದ್ಧರಾಗಬೇಕು ಎನ್ನುವ ವಿಷಯ ಆರಿಸಿದ್ದಕ್ಕಾಗಿ ಪ್ರಾಧಿಕಾರ ಖಂಡಿತವಾಗಿ ಪ್ರಶಂಸಾರ್ಹ.

ಇಲ್ಲಿ ದುಡಿಮೆಗೆ, ನುಡಿಮೆಗೆ ಏನು ಸಂಬಂಧ ಎಂದು ಕೆಲವರಿಗೆ ಅನ್ನಿಸಬಹುದು. ಸಹಜ. ಆದರೆ   ಈ ವಿಷಯದ ಬಗ್ಗೆ ಚರ್ಚಿಸುವ ಮುಂಚೆ ನಾವು ಒಂದು ವಿಷಯವನ್ನು ಗಮನಿಸಬೇಕು. 

 ನಮ್ಮ ಕಳೆದ ಕೆಲ ದಶಕಗಳಿಂದ  ನಾವು ಎರಡು ರೀತಿಯ ಉದ್ಯಮಿಕ ಪ್ರವೃತ್ತಿಗಳನ್ನು ಕಾಣಬಹುದು. ಒಂದು,ಜ್ಞಾನಾಧಾರಿತ (Knowledge Based). ಹಿಂದೆ ಕೇವಲ  ಪದವಿ ಶಿಕ್ಷಣ ಪಡೆದರೆ ಸಾಕು ಉದ್ಯೋಗಗಳು ದೊರಕುತ್ತಿದ್ದ ಕಾಲ. 

ನಂತರ ಬಂದಿದ್ದು ಕೌಶಲ್ಯಾಧಾರಿತ (Skill Based). ಉದ್ಯಮಕ್ಕೆ ತಕ್ಕ ಕೆಲವು ವಿಶೇಷ ತರಬೇತಿ ಹಾಗೂ ಅನುಭವಗಳಿಂದ ಉದ್ಯೋಗ ದಕ್ಕಿಸಿಕೊಳ್ಳುವ ಕಾಲ. 

ಇದು ಈಗ ಕ್ರಮೇಣ ಬದಲಾಗುತ್ತಿದ್ದು ಉದ್ಯಮ ರಂಗ ಸತತ ನಾವೀನ್ಯೀಕರಣ, ಅವಿಷ್ಕಾರ ಹಾಗೂ ಸೃಜನಶೀಲತೆಗೆ ಒಗ್ಗಿಕೊಳ್ಳುತ್ತಿದ್ದು ಅದಕ್ಕೆ ತಕ್ಕ ನಿರೀಕ್ಷೆಗಳು ಈ ಮೇಲಿನ ಎರಡು ಪ್ರವೃತ್ತಿಗಳಿಗಿಂತ ಭಿನ್ನವಾಗಿವೆ. ಇದನ್ನು Innovation Based  ಕಾಲ ಎಂದು ಕರೆಯಬಹುದು. ಇದಕ್ಕೆ ಬೇಕಿರುವ  ಕೌಶಲ್ಯಗಳ   ಕಾನ್ವಾಸ್ ಆಳಕ್ಕಿಂತ ಅಗಲ ಜಾಸ್ತಿ. (Cross  Skilled)

ನಮ್ಮ ಜನ  ಉದ್ಯಮರಂಗದಲ್ಲಿ ಗಣನೀಯ  ಯಶಸ್ಸು ಸಾಧಿಸಲು ಅನುಗುಣವಾಗಿ  ಯೋಜನೆ ರೂಪಿಸುವಾಗ ಕೇವಲ  ಭವಿಷ್ಯದ ಕೆಲವು ಕ್ಷೇತ್ರಗಳನ್ನು, ತಂತ್ರ ಜ್ಞಾನಗಳನ್ನೂ ಪಟ್ಟಿ ಮಾಡುವುದಕ್ಕೆ  ಹಾಗೂ  ಆ ಕೌಶಲ್ಯವನ್ನು ತರಬೇತಿ ಕೊಟ್ಟು ಶೀಘ್ರ  ತಯಾರು ಮಾಡುವುದಕ್ಕೆ  ಮಾತ್ರ ಸೀಮಿತಗೊಳಿಸುವ ಪ್ರಮಾದವನ್ನು ಮಾಡಬಾರದು.  ಈ ಚರ್ಚೆಯ ಕೊನೆಗೆ  ಭವಿಷ್ಯದ ಕ್ಷೇತ್ರಗಳನ್ನು ಹೆಸರಿಸಿ  ಚರ್ಚೆ ಮಾಡುತ್ತೇನಾದರೂ ಅದಕ್ಕಿಂತ ಮೂಲ ಭೂತವಾದ, ಮುಖ್ಯ ವಿಷಯವನ್ನು ಮಂಡಿಸುವ ಪ್ರಯತ್ನ ಈ ವಿಚಾರ ಸಂಕಿರಣದಲ್ಲಿ ಮಾಡ ಬಯಸುತ್ತೇನೆ

ಚಾಪ್ಟರ್ ೧ : ಭದ್ರ ಬುನಾದಿ   

ಇದಕ್ಕೆ ಪೂರಕವಾಗಿ  ಎರಡು ನಿದರ್ಶನವನ್ನು ಕೊಡಬಯಸುವೆ. ಮೊದಲನೆಯದಾಗಿ ಇಂದಿನ ಮಾಹಿತಿ ತಂತ್ರಜ್ಞಾನದ ಶೇಕಡಾ 60 ಕ್ಕೂ ಹೆಚ್ಚಿನ ಉದ್ಯೋಗಳಿಗೆ  ಸಾಫ್ಟ್ ವೇರ್ ಪ್ರೋಗ್ರಾಮ್ ಬರೆಯುವ ತಜ್ಞ ಇಂಜಿನಿಯರ್ ಗಳ ಅವಶ್ಯಕತೆ ಇಲ್ಲ ಎಂದರೆ ನಿಮಗೆ ಅಚ್ಚರಿಯಾದೀತು? ಯಾವುದೇ ಪದವಿ ಬಿ.ಎಸ್ಸಿ., ಬಿ ಕಾಂ, ಡಿಪ್ಲೊಮಾ ಇದ್ದರೂ ತಕ್ಕ ಮಟ್ಟಿಗೆ  ಬೌದ್ಧಿಕ ಸಾಮರ್ಥ್ಯ ಇದ್ದರೆ  ಸಾಕು  ಬಹುರಾಷ್ಟ್ರೀಯ ಕಂಪನಿಗಳಲ್ಲಿ  ಕೆಲಸ ಮಾಡಬಹುದು. ಹೀಗೆ ಹೇಳುವಾಗ ಲಕ್ಷ ಗಟ್ಟಲೆ ನಿರುದ್ಯೋಗಿ ಪದವೀಧರರನ್ನು ಕಲ್ಪಿಸಿಕೊಳ್ಳಿ. 

   ಇವತ್ತು ಕಂಪನಿಗಳು ಎದುರಿಸುತ್ತಿರುವ ಬಹು ದೊಡ್ಡ ಕೊರತೆ ಎಂದರೆ ಬೌದ್ಧಿಕ ವಿಶ್ಲೇಷಣಾ ಸಾಮರ್ಥ್ಯ (Analytical Ability) ಇಲ್ಲದಿರುವುದು.  ಆಂಗ್ಲ ಮಾಧ್ಯಮದಲ್ಲಿಯೇ ಬಹುತೇಕ  ಅಭ್ಯಾಸ ಮಾಡಿದ  ನಮ್ಮ ಇಂದಿನ ಇಂಜಿನೀಯರ್, ವಿಜ್ಞಾನ, ವಾಣಿಜ್ಯ  ಸೇರಿದಂತೆ ಬಹುತೇಕ  ಪದವೀಧರರಲ್ಲಿ ಈ ಸಮಸ್ಯೆ ಹೇರಳವಾಗಿದೆ. ಇದು ಅವರ ದುರ್ಬಲ್ಯ, ಕೊರತೆ ಖಂಡಿತ ಅಲ್ಲ. ಹಾಗಾದರೆ ಈ ವ್ಯವಹಾರ ಕುಶಲತೆ, ಆಲೋಚನಾ ಶಕ್ತಿ ಹೇಗೆ ಬರುತ್ತದೆ? ಇದು ಕೇವಲ ಸಾಧ್ಯವಾಗುವುದು  ಮಾತೃ ಭಾಷೆಯಲ್ಲಿ ವಿಷಯವನ್ನು ತಿಳಿದು ಅರ್ಥೈಸಿ , ಸಂವಹನ ನಡೆಸಿದಾಗ  ಮಾತ್ರ. ಇಂಗ್ಲಿಷಿಗೂ ಬುದ್ದಿ ಮತ್ತೆಗೂ ಕಿಂಚಿತ್ತೂ ಸಂಬಂಧ ವಿಲ್ಲ ಎಂಬುದನ್ನು  ಕನ್ನಡಿಗರು ಅರಿಯಬೇಕು. 

ಸ್ವಂತ ಆಲೋಚನೆ, ವಿಮರ್ಶಾತ್ಮಕ ದೃಷ್ಟಿ ಕೋನ , ವಸ್ತು ನಿಷ್ಠ ವಿಶ್ಲೇಷಣೆ ಹಾಗೂ ಅರ್ಥ ಮಾಡಿ ಕೊಂಡು ಮಾತಾಡುವ ಕಲೆ  ಕೌಶಲ್ಯ ನಮಗೆ ಕನ್ನಡದಲ್ಲಿ ಮಾತ್ರ ಸಾಧ್ಯವಾಗುತ್ತದೆ. ನಾವು ನಮ್ಮ ಇಂದಿನ ಪೀಳಿಗೆಗಳಲ್ಲಿ ಇದನ್ನು ಸಾಧ್ಯವಾಗಿಸಿದಾಗ, ನಿಮಗೆ ಅಚ್ಚರಿ ಯಾಗುವಂತೆ ಸುಲಭ, ಎಷ್ಟು ಬೇಕೋ ಅಷ್ಟು , ಸ್ಪಷ್ಟವಾಗಿ ಆಂಗ್ಲ ಭಾಷೆ ಕೂಡ ಅವರಲ್ಲಿ ಸುಲಭ  ಸಾಧ್ಯ ವಾಗುತ್ತದೆ. 

ಆಗ ನಮ್ಮ ಪಧವೀದರರು ಏನೇ ಮಾತಾಡಿದರೂ ಅದು ತಕ್ಕ ವೇಗದಲ್ಲಿ (ನಿಧಾನವಾಗಿ) ಆದರೆ ಸ್ಪಷ್ಟವಾಗಿ, ಆತ್ಮ ವಿಶ್ವಾಸದಿಂದ ತಮ್ಮ ವಿಚಾರಗಳನ್ನು ಮುಂದಿಟ್ಟರೆ, ಸಂವಹನ ಕುಶಲತೆ ಗುಣಮಟ್ಟ ಉತ್ತಮವಾಗಿರುತ್ತದೆ. ಇದು ಕನ್ನಡಿಗರನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಮಂಚೂಣಿಯಲ್ಲಿವುದು ಖಂಡಿತ.

ಈ ಸ್ವಭಾವ (attitude) ಮತ್ತು ಬೌದ್ಧಿಕ  ಸಾಮರ್ಥ್ಯ (Thinking Ability) ಗಳಿಂದ ಉಂಟಾಗುವ ಒಂದು ಪ್ರಯೋಜನ ಎಂದರೆ, ಈ ಸಾಮರ್ಥ್ಯದಿಂದ ಬದಲಾಗುವ ಉದ್ಯಮದ ಟ್ರೆಂಡ್ ಗಳಿಗೆ, ಬೇಡಿಕೆಗೆ ತಕ್ಕಂತೆ ಕನ್ನಡಿಗರು ತಮ್ಮನ್ನು ತಾವು  ಅಣಿಗೊಳಿಸಿಕೊಳ್ಳುತ್ತಾರೆ.

   ಉತ್ತಮ  ಇಂಗ್ಲಿಷ್ ಇಲ್ಲದೇ ಉದ್ಯೋಗ ವಂಚಿತರಾಗುತ್ತಾರೆ ಎಂಬ ಕೂಗು ನೀವು ಕೇಳಿರಬೇಕು. ಆದರೆ  ಇಂಗ್ಲಿಷ್ ಭಾಷಾ ಸಮೃದ್ಧಿ  ಬೇಡುವ ಎಲ್ಲ ಉದ್ಯೋಗಗಳನ್ನೂ  ಡಿಜಿಟೀಕರಣ ಹಾಗೂ RPA (ರೋಬೋಟಿಕ್ ಪ್ರಾಸೆಸ್ ಆಟೋಮೇಶನ್)   ಬಾಟ್ ಗಳು (Bots) ತಿಂದು ಹಾಕಲಿವೆ. ಕಾಲ್ ಸೆಂಟರ್ ಗಳು ನೇಪಥ್ಯಕ್ಕೆ ಸೇರಲಿವೆ ಎಂಬುದು ಗಮನದಲ್ಲಿರಲಿ.

ನಾವು ಮುಖ್ಯವಾಗಿ ಕನ್ನಡಿಗರು ಅಭಿವೃದ್ಧಿಸಿಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಭಾಗ ವ್ಯವಹಾರ  ಕುಶಲತೆ (Business Accumen). ಕಲೆ, ಪುಸ್ತಕ, ಸಿನೆಮಾ, ಸಂಗೀತದಿಂದ ಹಿಡಿದು ಯಾವುದೇ ಕ್ಷೇತ್ರವನ್ನೇ ತೆಗೆದುಕೊಳ್ಳಿ ಮೂಲ ಭೂತವಾಗಿ ಅನ್ವಯವಾಗುವುದು ಬಳಕೆದಾರರನ್ನು ತಲುಪುವ, ಮಾರುಕಟ್ಟೆ ಸೃಷ್ಟಿಸುವ ಒಂದು ಕಲೆ ಮತ್ತು ಪ್ರಕ್ರಿಯೆ. ಒಂದು ಉತ್ಪನ್ನ, ಒಂದು ಸೇವೆ ಅಥವಾ ಯಾವುದೇ ಒಂದು ಮೌಲ್ಯವನ್ನು ಹೇಗೆ ಸೃಷ್ಟಿಸಬಹುದು ಹಾಗೂ ಅದರ ಮಾರುಕಟ್ಟೆ, ವ್ಯಾಪ್ತಿ, ವ್ಯವಹಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ಕಲಿಸಿಕೊಡುವುದು ಮುಖ್ಯವಾಗುತ್ತದೆ.

ಮೂರನೆಯದು, ಸೃಜನ ಶೀಲತೆ ಮತ್ತು ತಂತ್ರಜ್ಞಾನಗಳ ಸದ್ಬಳಕೆ(Innovation and Digitization) . ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಇವತ್ತು ಮಂಗಳೂರಿನಲ್ಲಿ ವಿಚಾರ ಸಂಕೀರ್ಣ ನಡೆಯುತ್ತಿದೆ. ಮಂಗಳೂರು ರುಚಿಕಟ್ಟಾದ ಬಾಣಸಿಗರಿಗೆ ಹೆಸರುವಾಸಿಯಾದ ಪ್ರದೇಶ. ಹಿಂದೆಲ್ಲ ಅಡುಗೆ ಬಲ್ಲವರು ವ್ಯವಹಾರಕ್ಕಾಗಿ ದೂರದ ಮಹಾ  ನಗರಗಳಿಗೆ    ಹೋಗಬೇಕೆಂದರೂ ಅದು ಅಷ್ಟು ಸುಲಭ ಸಾಧ್ಯವಿರಲಿಲ್ಲ. ಮೊದಲು ದೊಡ್ಡ ಬಂಡವಾಳ ಬೇಕು. ನಗರದ ಆಯಕಟ್ಟಿನ  ಜಾಗ  ಹುಡುಕಬೇಕು. ದುಬಾರಿ ಬೆಲೆಗೆ  ಭಾಡಿಗೆಗೆ ಪಡೆದು ಹೋಟೆಲ್ ಹಾಕಿಸಬೇಕು, ಅದಕ್ಕೆ ಬೇಕಾದ ಸಲಕರಣೆಗಳಿಗೆ ವ್ಯಯಿಸಬೇಕು, ಸಹಾಯಕರನ್ನು ಸಂಬಳ ಕೊಟ್ಟು  ನೇಮಿಸಬೇಕು,  ಗ್ರಾಹಕರನ್ನೂ ಸೆಳೆಯಬೇಕು . ಹೊಸದಾಗಿ ಉದ್ಯಮ ನಡೆಸುವವರಿಗಂತೂ ಇದು ಕಷ್ಟ ಸಾಧ್ಯವೇ ಸರಿ. 

  ಆದರೆ ಇತ್ತೀಚಿಗೆ ಕ್ಲೌಡ್ ಕಿಚನ್ ಎಂಬ ಪರಿಕಲ್ಪನೆ ಬಂದಿದೆ. ಎಲ್ಲಿಯೋ ಇರುವ ಕಿಚನ್ ವ್ಯವಸ್ಥೆ  ನಿಮಗೆ ಸನ್ನದ್ಧ ಸ್ಥಿತಿಯಲ್ಲಿ ಭಾಡಿಗೆಗೆ ದೊರಕುತ್ತದೆ. ನೀವು ನಿಮ್ಮ ಸಾಂಬಾರು, ರಸಂ ಅಥವಾ ಮೃದುವಾದ ಇಡ್ಲಿ ಮಾಡುವ ಕೌಶಲ್ಯದೊಂದಿಗೆ ಕೈ ಬೀಸುತ್ತಾ  ಬಂದರೆ ಸಾಕು. ನಿಮ್ಮ ಉತ್ಪನ್ನವನ್ನು ತಯಾರಿಸಿ  ಗ್ರಾಹಕರಿಗೆ ತಲುಪಿಸಲು ಫುಡ್ ಡೆಲಿವರಿ ವ್ಯವಸ್ಥೆ ಜೊತೆಯಾಗುತ್ತದೆ..

ಹೀಗೆ  ಇನ್ನೆಲ್ಲೋ  ಇರುವ ಕಿಚನ್ ನ ಬಾಣೆಲೆಯಿಂದ ಬೆಂದು ಬಂದ , ನಿಮ್ಮ ಕೈ ಚಳಕದ  ಕೇಸರಿ ಬಾತ್  ಎಲ್ಲೋ ಕೂತು ಇಲ್ಲವೇ ಯಾವುದೋ  ಐಶಾರಾಮಿ ಹೋಟೆಲ್ ನ, ಗ್ರಾಹಕರ ಪ್ಲೇಟಿನ ಮೇಲೆ, ಹಬೆಯಾಡಲು  ಸಾಧ್ಯವಿದೆ.

           ಈ ಮೇಲಿನ  ಉದಾಹರಣೆ ಅಡುಗೆ  ವ್ಯವಹಾರಕ್ಕೆ (Business) ಸಂಬಂಧಿಸಿದ್ದು. ಅದು ಇಲ್ಲಿ ಮುಖ್ಯವಾದ ಉತ್ಪನ್ನ (ಪ್ರಾಡಕ್ಟ್).  ಅಡುಗೆಗಳಲ್ಲಿ  ವಿಭಿನ್ನತೆ, ವಿಶಿಷ್ಟತೆ ಬೇಕು (Differentiators). ಅದಾದ ಮೇಲೆ, ಸಾಮಾನ್ಯವಾಗಿ  ಹೋಟೆಲ್, ದರ್ಶಿನಿಗೆ ಹೊರತಾದ ಈ  ಕ್ಲೌಡ್ ಕಿಚನ್ ಇದೆಯಲ್ಲ ಅದು ನವೀನ ವ್ಯವಹಾರ ಮಾದರಿಗೆ ಉದಾಹರಣೆ (Business Model) . ಅದರ ಮೇಲೆ ಫುಡ್ ಡೆಲಿವರಿ ಮತ್ತು ಆಪ್ ಇದೆಯಲ್ಲ ಅದು ತಂತ್ರಜ್ಞಾನ (Digitalization). ಈ ಮೂರು ಮೇಳೈಸಿ ಉಂಟಾದದ್ದೇ ವ್ಯವಹಾರದ ಸೃಜನ ಶೀಲತೆ. (Business Innovation). 

ನವೋದ್ಯಮವೇ ಆಗಿರಲಿ, ಕಂಪನಿ ಉದ್ಯೋಗವೇ ಇರಲಿ..  ಇಂದಿನ ಒಟ್ಟಾರೆ  ಉದ್ಯೋಗ ರಂಗಕ್ಕೆ ಬೇಕಿರುವುದು ಇಂಥ ಹೊಸ ಉಪಾಯಗಳನ್ನು, ಮಾದರಿಗಳನ್ನು ಹುಟ್ಟಿ ಹಾಕುವ ಸಾಮರ್ಥ್ಯ. 

ಹಾಗಾಗಿಯೇ ಉದ್ಯೋಗ ಎಂದಕೂಡಲೇ ಕೇವಲ ತಂತ್ರಜ್ಞಾನ ಮಾತ್ರ ಎನ್ನುವ ವಾದವನ್ನೂ ನಾವು ಎಚ್ಚರಿಕೆಯಿಂದ ನೋಡಬೇಕು. ನಾವು ಮುಖ್ಯವಾಗಿ ಕನ್ನಡಿಗರಿಗೆ ವ್ಯವಹಾರದ ಸಾಧ್ಯತೆಗಳ ಬಗ್ಗೆ ಜಾಗತಿಕ ಮಾಹಿತಿ ಜ್ಞಾನವನ್ನು ಹಂಚುವ ಕೆಲಸ ಮಾಡಬೇಕು.(Success Stories). ಗುಣವಂತೆಯ ಬೀಚ್ ಗಳಲ್ಲಿ ಜಾಗತಿಕ ಮಟ್ಟದ ಬೀಚ್ ವಾಲಿಬಾಲ್ , ಚಿಕ್ಕ ಮಂಗಳೂರಿನಲ್ಲಿ ಕ್ರಾಸ್ ಕಂಟ್ರಿ ಮ್ಯಾರಥಾನ್,  ಬಿಜಾಪುರದಲ್ಲಿ ಸೈಕ್ಲಾಥಾನ್ ಇತ್ಯಾದಿಗಳ ಕಲ್ಪನೆಗಳ ಜೊತೆಗೆ , ಆಧುನಿಕತೆ ಇಲ್ಲದಿರುವಿಕೆಯನ್ನೇ ಬಂಡವಾಳ ಮಾಡಿಕೊಳ್ಳುವ ಸಾಧ್ಯತೆಗಳನ್ನೂ ಸಹ  ಪರಿಚಯಿಸಬೇಕು. 

ಪ್ರವಾಸೋದ್ಯಮ, ಏರ್ ಬಿ ಎನ್ ಬಿ ತರದ ಡಿಜಿಟಲ್ ವೇದಿಕೆಗಳು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅರ್ಥವ್ಯವಸ್ಥೆಯನ್ನು, ಉದ್ಯೋಗಗಳನ್ನು ಸೃಷ್ಟಿಸಬಲ್ಲುದು.   ನಮ್ಮ ಕರ್ನಾಟಕದ ವಿಭಿನ್ನ ಪ್ರದೇಶಗಳು, ಅಲ್ಲಿ ಸಿಗುವ, ತಯಾರಾಗುವ ವಿಭಿನ್ನ ವಸ್ತುಗಳಿಗೆ ಸ್ವಲ್ಪ ನಾವೀನ್ಯತೆ, ಸೃಜನಶೀಲತೆ ಹಾಗೂ ತಾಂತ್ರಿಕತೆಯ ಸ್ಪರ್ಶ, ಹಾಗೂ ಗುಣಮಟ್ಟದ ಮಾಪನಗಳನ್ನು ಅಳವಡಿಸುವ ಹಾಗೆ ಆ ಮೂಲಕ ಗಣನೀಯ ಮಾರುಕಟ್ಟೆ , ರಫ್ತು ಹೆಚ್ಚಿಸುವ  ಅಗತ್ಯ ಕೂಡ ಇದೆ. ಇಲ್ಲಿ ಸಾಗಾಣಿಕಾ ಕ್ಷೇತ್ರದಲ್ಲಿ ಮಹತ್ತರ ಉದ್ಯೋಗ ಸಾಧ್ಯವಿದೆ.  

  ಇದಕ್ಕಾಗಿ ಸ್ಥಳೀಯ ಕೈಗಾರಿಕಾ ಅಭಿವೃದ್ಧಿ ಹಾಗೂ ತರಬೇತಿ  ಕೇಂದ್ರಗಳು, ಕನ್ನಡ ವಿಭಾಗಗಳೊಂದಿಗೆ  ಜಂಟಿಯಾಗಿ ಕೆಲಸ ಮಾಡಬೇಕು. ಇಲ್ಲಿ ಮುಖ್ಯವಾಗಿ ಬೇಕಿರುವುದು ಸ್ಥಳೀಯ ಕನ್ನಡದಲ್ಲಿ ಸಂವಹನ. ಇದಕ್ಕೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕೂಡ ಜೊತೆಯಾದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.  ಅಲ್ಪ ಸ್ವಲ್ಪ ಬದಲಾವಣೆಗಳಿಂದ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲೂ ಅಪಾರ ಉದ್ಯೋಗಾವಕಾಶವನ್ನು ಪವಾಡ ಸದೃಷವಾಗಿ ಹೆಚ್ಚಿಸುವ ಅವಕಾಶ ನಮ್ಮ ಕರ್ನಾಟಕದಲ್ಲಂತೂ ಅಪಾರವಾಗಿದೆ. ಇವೆಲ್ಲ ಸಾಧ್ಯವಾಗಿಸಲು ನಮ್ಮ ದೇಶದ ಉಳಿದ ರಾಜ್ಯಗಳಿಗಿಂತ ನಾವು ತಳ ಮಟ್ಟದಲ್ಲಿ ದಿಟ್ಟ ಹೆಜ್ಜೆ ತೆಗೆದುಕೊಳ್ಳಬೇಕು. ಆಗ ಮಾತ್ರ   ಸುವರ್ಣ ಕರ್ನಾಟಕ ಸಾಧ್ಯವಾಗುವುದು. 

ಭಾರತ ಸರಕಾರದ  ಡಿಜಿಟೀಕರಣ ನೀತಿ, ರಾಷ್ಟ್ರೀಯ ಶಿಕ್ಷಣ ನೀತಿ  ಕೂಡ   ಇಂತಹ ಸಾಧ್ಯತೆಗಳಿಗೆ ಪೂರಕವಾಗಿವೆ.

ಇವೆಲ್ಲವೂ ಗಳು ಕನ್ನಡಿಗರ  ಒಟ್ಟಾರೆ ಔದ್ಯೋಗಿಕ ಸಾಮರ್ಥ್ಯ ವನ್ನು ಪ್ರಾದೇಶಿಕವಾಗಿ ತನ್ಮೂಲಕ ಜಾಗತಿಕವಾಗಿಯೂ ಹೆಚ್ಚಿಸುತ್ತದೆ. ಇದೆ ವೇಳೆಗೆ ಭಾರತದಲ್ಲಿದ್ದು ಜಗತ್ತಿನ ಇತೆರೆಡೆಯ ಬೇಡಿಕೆಗಳನ್ನೂ ಕೂಡ ಪೂರೈಸುವ ಯಶೋಗಾಥೆಯನ್ನೂ  ಕನ್ನಡಿಗರು ರಚಿಸಬಹುದು. 

ಚಾಪ್ಟರ್ ೨: ನೀಲಾಕಾಶ  (ಸಾಧ್ಯತೆಗಳು) 

 ಸಾಮಾನ್ಯವಾದ ಪುನಾವರ್ತಿಸುವ ಎಲ್ಲ ಕೆಲಸಗಳೂ ಯಾಂತ್ರೀಕರಣ ಗೊಂಡು ಮುಂಬರುವ ಹತ್ತಿಪ್ಪತ್ತು ವರ್ಷಗಳಲ್ಲಿ ಇಂದಿನ  ೩೦% ಉದ್ಯೋಗಗಳು ಯಾಂತ್ರೀಕರಣ ತೆಕ್ಕೆಗೆ ಬರಲಿವೆ ಎಂಬ ಅಂದಾಜು ಇದೆ.  ಒಟ್ಟಾರೆ ಮುಂಬರುವ ದಶಕಗಳಲ್ಲಿ ಸದ್ಯದ ಬಹುತೇಕ  ಉದ್ಯೋಗಗಳು ಮಾಯವಾಗಿ , ಬದಲಿಗೆ ಹೊಸ ಉದ್ಯೋಗಗಳ ಸುರಿಮಳೆ ಆಗಲಿವೆ. 

ಇನ್ನೂ ಕೆಲವು ಹೊಸ ಉದ್ಯಮ ಕ್ಷೇತ್ರಗಳ ಬಗ್ಗೆ ಗಮನ ಹರಿಸೋಣ.

೧. ಎಲ್ಲಾ ಕ್ಷೇತ್ರಗಳಲ್ಲೂ ಸ್ವಯಂ ಚಾಲಿತ ವ್ಯವಸ್ಥೆ ಅಥವಾ  ಯಾಂತ್ರೀಕರಣ ಅಥವಾ ಆಟೋಮೇಶನ್ ಹೆಚ್ಚುತ್ತಿದೆ. ಇದಕ್ಕಾಗಿ ಅನೇಕ ಸಾಫ್ಟ್ವೇರ್ ಉತ್ಪನ್ನಗಳು ಚಾಲ್ತಿಗೆ ಬರಲಿವೆ. ಅದನ್ನು ಬಳಸಿ ನಿರ್ವಹಿಸುವ ಮ್ಯಾನೇಜರ್ ಗಳು ಬೇಕಾಗುತ್ತಾರೆ. ಇದಕ್ಕೆ ಖಂಡಿತ ಇಂಜಿನೀರ್ ಗಳು  ಬೇಕಿಲ್ಲ. ಬಳಸುವ ತರಬೇತಿ ಇದ್ದಾರೆ ಸಾಕು.  ಇಂದು ಪ್ರತಿಯೊಂದು ಡಿಜಿಟೀಕರಣ ಗೊಂಡಿರುವುದರಿಂದ ಅವುಗಳ ನಿರ್ವಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕು. ಮಾಹಿತಿ ತಂತ್ರಜ್ಞಾನ ಪದವು ಇವತ್ತು ಹಳೆಯದಾಗಿ ಡಿಜಿಟಲ್ ತಂತ್ರಜ್ಞಾನ ಎಂಬುದಾಗಿ ಬದಲಾಗಿದೆ.

೨. ಇಂದು ಸೈಬರ್ ಅಪರಾಧ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತೆಯೇ ಸೈಬರ್ ಸೆಕ್ಯುರಿಟಿ ಕ್ಷೇತ್ರದ ಸಾಫ್ಟ್ವೇರ್ ತಂತ್ರಜ್ಞಾನದ ಉತ್ನನ್ನಗಳನ್ನು ಬಳಸಲು ಕೂಡ ತಜ್ಞರು ಬೇಕಿದ್ದಾರೆ. ಹಾಗೆಯೇ ಅಂಕಿ ಸಂಖೆ ದತ್ತಂಶಗಳ ನಿರ್ವಹಣೆ ಗಳ ಸಾಫ್ಟ್ ವೇರ್  ಪ್ರಾಡಕ್ಟ್ ಬಳಸಲು ಬರುವ ನಿರ್ವಾಹಕರುಗಳು ಬೇಕು.  

೩. ಇದೇ ಹಿನ್ನೆಲೆಯಲ್ಲಿ ಬ್ಲಾಕ್ ಚೈನ್ (Block Chain)  ತಂತ್ರಜ್ಞಾನ ಹೆಚ್ಚಿನ ಮಟ್ಟದಲ್ಲಿ ಉಪಯೋಗಿಸಲ್ಪಡುವ ಸಾಧ್ಯತೆಗಳು ನಿಚ್ಚಳವಾಗಿದೆ.

೪. ಕೃತಕ ಬುದ್ದಿ ಮತ್ತೆ, ಡೇಟಾ ವಿಜ್ಞಾನ  (Artificial Intelligence and Data science). ಹಾಗೆಯೇ ಕಂಪನಿ ಹಾಗೂ  ವಯಕ್ತಿಕ ನೆಲೆಗಳಲ್ಲಿ  ಡಿಜಿಟಲ್ ತಜ್ಞರು (digital consultant) ಹಾಗೂ ಡಿಜಿಟಲ್ ಹಾಗೂ ಸಾಮಾಜಿಕ ತಾಣ ಕ್ಷೇತ್ರದ ವಕೀಲರು (Cyber Lawyers ) ಮಂಚೂಣಿಗೆ ಬರಲಿದ್ದಾರೆ.

೫. ಎಲೆಕ್ಟ್ರಿಕಲ್ ವೆಹಿಕಲ್ ಅಥವಾ ವಿದ್ಯುಚ್ಚಾಲಿತ ವಾಹನಗಳು, ಸ್ವ ಚಾಲಿತ ಕಾರುಗಳು (Driverless car) , ಡ್ರೋನ್ ನಿರ್ವಹಣೆ ಸಂಬಂಧಿತ ಕೌಶಲ್ಯಗಳಿಗೆ ಬೇಡಿಕೆ ಬರಲಿದೆ.  

೬. ವರ್ದಿತ ಹಾಗೂ ಮಿಶ್ರ  ವಾಸ್ತವ ತಂತ್ರಜ್ಞಾನ (augmented and virtual reality) ಮೂಲಕ ನಾವು ಕರ್ನಾಟಕದಲ್ಲಿದ್ದುಕೊಂಡೆ  ಜಗತ್ತಿನ ಇತರ ಭಾಗದ ಯಂತ್ರಗಳ ಮೇಲೆ ಕೆಲಸ ಮಾಡಬಹುದು.  ದೂರದಿಂದಲೇ ಕಲಿಸುವ ತರಬೇತಿದಾರರು, ಶಿಕ್ಷಕರ ಬೇಡಿಕೆಗಳು ಹೆಚ್ಚಲಿವೆ. ಅಷ್ಟೇ ಅಲ್ಲದೇ ಮೊದಲ ಹಂತದ ರಿಮೊಟ್  ಆರೋಗ್ಯ ತಪಾಸಣಾ  ಸಾಧ್ಯತೆಗಳು ಹೊರ ಗುತ್ತಿಗೆ ಮಾದರಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಉದ್ಯೋಗ ಸೃಷ್ಟಿಗೆ ಕಾರಣವಾಗಬಲ್ಲವು.

೭. 5G/6G ತಂತ್ರಜ್ಞಾನವು ಉಹಿಸಲಾಗದ ಅಗಾಧ ಸಾಧ್ಯತೆಯನ್ನು ತೆರೆಯಲಿದ್ದು ಜಗತ್ತು ಇನ್ನಷ್ಟು  ಕಿರಿದಾಗಲಿದೆ. ಇದು ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸಬಲ್ಲುದು. Augmented and virtual reality ಕ್ಷೇತ್ರದ ತ್ವರಿತ ಬೆಳವಣಿಗೆಗೆ 5G ಕಾರಣವಾಗಲಿದೆ.

. ವಾಹನಗಳ ತಯಾರಿಕೆ ಸೇರಿದಂತೆ  ಅನೇಕ ತಂತ್ರಜ್ನಾನಗಳಲ್ಲಿ ಉಪಯೋಗಿಸುವ ಸೆಮಿ ಕಂಡಕ್ಟರ್ ತಯಾರಿಕಾ ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿ ಕಾಣಲಿದ್ದು ಉದ್ಯೋಗಗಳ ಸುರಿಮಳೆಯಾಗಲಿವೆ. 

. ಆಹಾರದ ಅಭಾವದಿಂದಾಗಿ, ವೈಜ್ಞಾನಿಕವಾಗಿ ನಗರಗಳಲ್ಲಿ ಬಹು ಪದರುಗಳಲ್ಲಿ ( Vertical farming) ಬೆಳೆ ಬೆಳೆಯುವ ಉದ್ಯಮ ಸೃಷ್ಟಿಯಾಗಲಿವೆ. 

೧೦. ಭೂಮಿಯ ಸಂರಕ್ಷಣೆ,  ಒಳಿತಿಗಾಗಿ ಶುದ್ಧ ಇಂಧನ ಕ್ಷೇತ್ರ, ಪರಿಸರ ಸಂರಕ್ಷಣೆ ಹಾಗೂ ನೈಸರ್ಗಿಕ ಶಕ್ತಿ ಉತ್ಪಾದನೆ, ಕ್ಲೈಮೆಟ್ ಕಂಟ್ರೋಲ್ ಕನ್ಸಲ್ಟಂಟ್  ಬೇಕಾಗಲಿದ್ದಾರೆ. 

೧೧.ಇವೆಲ್ಲದರ ಹೊರತಾಗಿ ತಯಾರಿಕಾ ಕ್ಷೇತ್ರದಲ್ಲಿ  ಇಂಡಸ್ಟ್ರಿ ೪.o ಕ್ಕೆ ಅನುಗುಣವಾಗಿ ರೋಬೋಟ್ ಹಾಗೂ ಸ್ಮಾರ್ಟ್ ಫ್ಯಾಕ್ಟರಿ ಶುರುವಾಗಿ ಹೊಸ ತಂತ್ರಜ್ಞಾನದ ಬಳಕೆ ಹಾಗೂ ನಿರ್ವಹಣೆ ಯಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ. 

ಚಾಪ್ಟರ್ ೩ : ರೆಕ್ಕೆ-ಪುಕ್ಕ (ಸಿದ್ಧತೆಗಳು)

ಈ ವಿಷಯದಲ್ಲಿ ನಾವು ಕನ್ನಡಿಗರು ಹೊಸದಾದ ಟ್ರೆಂಡ್ ದೇಶದಲ್ಲಿ ಸೃಷ್ಟಿ ಮಾಡಬೇಕು.

ಮೊದಲನೆಯದಾಗಿ,  ಈ ಮೇಲೆ ಹೇಳಿದ ಸರ್ವತೋಮುಖ ಕೌಶಲ್ಯತೆಯನ್ನು ಹಾಗೂ ಇಂದಿನ ಡಿಜಿಟಲ್ ತಂತ್ರಜ್ಞಾನದ ಉತ್ಪನ್ನಗಳನ್ನು ಒಳಗೊಂಡಂತೆ ಒಂದು ವಿನೂತನ ವಿಭಾಗವನ್ನು(  ಎಂಟನೆ ತರಗತಿಯಿಂದಲೇ ಆರಂಭಿಸಿ ಪದವಿ ಹಾಗೂ ಮಾಸ್ಟರ್ಸ್ ಗೆ ಪರಿಚಯಿಸಬೇಕು. (ವಿಜ್ಞಾನ,ವಾಣಿಜ್ಯ, ಕಲೆಗೆ ಹೊರತಾಗಿ ) ಇಲ್ಲಿ ಮಕ್ಕಳು, ಬೌದ್ಧಿಕ ಸಾಮರ್ಥ್ಯ,ಬಳಕೆಗೆ ಲಭ್ಯವಿರುವ ವಿನೂತನ  ತಂತ್ರ ಜ್ಞಾನ ಉತ್ಪನ್ನಗಳ ಬಗ್ಗೆ   ಮಾಹಿತಿ , ವ್ಯವಹಾರ ಕುಶಲತೆಯ ಜೊತೆಗೆ ಜಾಗತಿಕ ಮಟ್ಟದಲ್ಲಿ ಒಂದು ಎಲ್ಲ ಕಡೆಗೂ ಸಲ್ಲುವ ವೃತ್ತಿ ಪರರನ್ನು ಸೃಷ್ಟಿ ಮಾಡಬೇಕು.

ಎರಡನೆಯದಾಗಿ ,  ತಂತ್ರಜ್ಞಾನ ಶಿಕ್ಷಣದ  ವಿಷಯಕ್ಕೆ ಬಂದರೆ, ಒಂದು ಪ್ರಯೋಗ ಖಂಡಿತ ಆಗಬೇಕಿದೆ. ಇಂದಿನ ಅನೇಕ ರಾಜ್ಯದ  ಯಾವುದೇ ನಾಲ್ಕು ಕಾಲೇಜು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ  ಒಂದು ಬ್ಯಾಚ್ ಕನ್ನಡ ಆಂಗ್ಲ ಬೈಲಿಂಗುವಲ್  ಮಾಧ್ಯಮ  ಶುರು ಮಾಡಬೇಕು. ಇದರ ಕಲ್ಪನೆ ಕೂಡ  ಸ್ಪಷ್ಟವಾಗಿರಲಿ.  ಇಂಜಿನೀರಿಂಗ್ ಪುಸ್ತಕಗಳು ಇಂಗ್ಲಿಷ್ ನಲ್ಲಿಯೇ ಇರಲಿ. ಪಾಠ ಮಾಡುವ ,ಚರ್ಚಿಸುವ, ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಆಡು ಭಾಷೆಯ ಕನ್ನಡದಲ್ಲಿ ಇರಬೇಕು. ಮಧ್ಯ   ಇಂಗ್ಲಿಷ್  ಸ್ವಾಭಾವಿಕವಾಗಿ  ನುಸುಳಲಿ ಹಾಗೂ ಪಾರಿಭಾಷಿಕ ಪದಗಳು (terminologies ಹಾಗೂ technical words)    ಇಂಗ್ಲಿಷ್  ನಲ್ಲಿ ಇದ್ದ ಹಾಗೆ ಇರಲಿ.   ಉತ್ತರ ಬರೆವಾಗ ಕೂಡ ಅದು ಮಿಶ್ರ  ಭಾಷೆಯಲ್ಲಿ ಇದ್ದರೂ ವಿಧ್ದ್ಯಾರ್ಥಿಗಳು  ಅರ್ಥೈಸಿ ಬರೆದಿದ್ದಾರೆಯೇ ಎಂಬುದರ ಮೇಲೆ ಮೌಲ್ಯ ಮಾಪನ ಮಾಡಬಹುದು. ಇಂತಹ  ಕೆಲವೇ  ಬ್ಯಾಚ್ ಗಳನ್ನು   ಸೃಸ್ಥಿಸಿ ನೋಡಿ. ಅವರ ವೃತ್ತಿ ಜ್ಞಾನ, ದಕ್ಷತೆ ಆಂಗ್ಲ ಮಾಧ್ಯಮದಲ್ಲಿ ಓದಿದ  ಇಂಜಿನಿಯರ್ ಗಳಿ ಗಿಂತಲೂ ಉತ್ತಮವಾಗಿರುತ್ತದೆ.     

     ಮೂರನೆಯದಾಗಿ  ಪ್ರೌಢ ಶಾಲಾ ಹಂತದಿಂದಲೇ ಕನಿಷ್ಠ ೧೦ ರಿಂದ ಮುಂದೆ ಪದವಿಯಲ್ಲಿ ಕನಿಷ್ಠ 50 ಪ್ರತಿಶತ ಶಿಕ್ಷಣ ಪ್ರೊಜೆಕ್ಟರ್ ಉಪಯೋಗಿಸಿದ ಪಾವರ್ ಪಾಯಿಂಟ್ ಹಾಗೂ ರೆಕಾರ್ಡೆಡ್  ವಿಡಿಯೋ ಮೂಲಕ ಸಾಗಬೇಕು. ಇದರಿಂದ ಆಧುನಿಕ, ಗುಣಮಟ್ಟದ  ಶಿಕ್ಷಕ ವರ್ಗದ ಕೊರತೆಯನ್ನು ಗರಿಷ್ಟ ಮಟ್ಟದಲ್ಲಿ ಹೋಗಲಾಡಿಸಬಹುದು.  ಪದವಿಯಲ್ಲಿ ಕನಿಷ್ಠ ೩೦%  ಪಠ್ಯ  ಪ್ರಸ್ತುತ ತಾಂತ್ರಿಕ ಹಾಗೂ ವ್ಯವಹಾರಗಳ ಮೇಲಿನ ಕೇಸ್ ಸ್ಟಡಿ ಅಧ್ಯಯನಗಳಿಂದ ಬಂದಿರಬೇಕು. ಒಂದು  ಕಂಪ್ಯೂಟರ್ ಹಾಗೂ ಪ್ರಾಜೆಕ್ಟರ್  ಶಾಲೆ, ಕಾಲೇಜಿನಲ್ಲಿ ವ್ಯವಸ್ಥೆಗೊಳಿಸುವುದು ಇಂದಿನ ಕಾಲದಲ್ಲಿ ಬಲು ಸುಲಭ. ಶಿಕ್ಷಕರನ್ನು ಕೂಡ ಆಗಾಗ ತರಬೇತಿಗೊಳಿಸಿ ಒಂದು ಪದ್ಧತಿ ಅಥವಾ template ತಯಾರಿಸಿ ನೀಡಬೇಕು. (train the trainer)

ನಾಲ್ಕನೆಯದಾಗಿ , ಜಿಲ್ಲಾ ಮಟ್ಟದ ಕೌಶಲ್ಯ ಕೇಂದ್ರಗಳಲ್ಲಿ ಕಲಿಕೆಗೆ ಅನುಕೂಲವಾಗು ವಂತೆ   ಮಾದರಿಗಾಗಿ ಪ್ರಾಯೋಗಿಕ ಶಿಕ್ಷಣ ನೀಡಲು ಬೇಕಾಗುವ ಆಧುನಿಕ ಯಂತ್ರ, ಸಾಧನಗಳನ್ನು ತರಿಸುವ ಕೆಲಸ ಮಾಡಬೇಕು. ಉದಾಹರಣೆಗೆ ಜಿಲ್ಲಾಮಟ್ಟದಲ್ಲಿ ಟೆಸ್ಲಾ ಕಾರು ಮಾದರಿ ಇದ್ದರೆ ಮೆಕ್ಯಾನಿಕ್ ತರಬೇತಿ ಸುಲಭವಾಗುತ್ತದೆ.

ಐದನೆಯದಾಗಿ, ಎಲ್ಲಕ್ಕಿಂತ ಮಹತ್ವದ್ದು, ದೇಹದಲ್ಲಿ ಚೈತನ್ಯ, ಶಕ್ತಿ. ಮಾನಸಿಕ, ದೈಹಿಕ ಆರೋಗ್ಯ. ಇದು ಎಲ್ಲಕ್ಕಿಂತ ಮುಖ್ಯ.  ಇದು ಸಾಧ್ಯವಾಗಬೇಕಾದರೆ   ಕನ್ನಡಿಗರಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಸತತ  ದೈಹಿಕ ಕಸರತ್ತು , ವ್ಯಾಯಾಮ ಪ್ರೇರೇಪಿಸಬೇಕು. ಇಂದಿನ  ಯುವಕರು ಕೊನೆ ಪಕ್ಷ ಐದರಿಂದ ಹತ್ತು ಕಿ.ಮಿ. ಜಾಗ್ ಅಥವಾ ರನ್  ಮಾಡುವ ಇಲ್ಲವೇ ಕನಿಷ್ಠ  ೧೫ -೩೦ ಕಿ.ಮಿ. ಸೈಕ್ಲಿಂಗ್ ಮಾಡುವ ಸಾಮರ್ಥ್ಯ (Stamina) ಹೊಂದಿರುವಂತೆ ನೋಡಿಕೊಳ್ಳಬೇಕು. ಅಭ್ಯಾಸದಿಂದ ಇದು ಸಾಧ್ಯ ಆಗುತ್ತದೆ. ಆಗ ಮಾತ್ರ ಎಲ್ಲ ನಮ್ಮ ಜನರು ಎಲ್ಲ ಕ್ಷೇತ್ರಗಳಲ್ಲೂ ಹುರುಪಿನಿಂದ, ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿ ಯಶಸ್ವಿಯಾಗಲು ಸಾಧ್ಯ. ಪ್ರಾಧಿಕಾರ ಒಂದು ಮಿನಿ ಮ್ಯಾರಥಾನ್, ಸೈಕ್ಲಾತೋನ್ ಕಾರ್ಯಕ್ರಮಗಳನ್ನೂ  ಎಲ್ಲ ಜಿಲ್ಲಾ ಮಟ್ಟದಲ್ಲೂ ಏರ್ಪಡಿಸಿ ಕನ್ನಡ ಭಾಷೆ ಹಾಗೂ ಉತ್ತಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. 

ಕೊನೆಯದಾಗಿ , ನಿಜವಾಗಿಯೂ ಕರ್ನಾಟಕ ಒಂದು ರಾಜ್ಯವಾಗಿ ದೇಶಕ್ಕೆ ಮಾದರಿ ಆಗಬೇಕಿದ್ದರೆ ನಮ್ಮ ನೀತಿ, ಯೋಜನೆಗಳು ಕ್ರಾಂತಿಕಾರಕವಾಗಿ ವಿಭಿನ್ನವಾಗಿರಬೇಕಿದೆ.  ಇದನ್ನು ಸಾಧ್ಯವಾಗಿಸಿದ ಜಗತ್ತಿನ  ಅನೇಕ  ರಾಷ್ಟ್ರಗಳಿವೆ. ಕರ್ನಾಟಕದ ಕಾಲು  ಭಾಗಕ್ಕಿಂತಲೂ ಪುಟ್ಟ ದೇಶ ಎಸ್ಟೋನಿಯಾ ಕೇವಲ ಮೂರು ದಶಕದ ಹಿಂದೆ ಅಷ್ಟೆ ರಷ್ಯಾದ ಕಪಿಮುಷ್ಟಿಯಿಂದ  ಸ್ವತಂತ್ರ ಆದಾಗ ಅಂಬುಲೆನ್ಸ್ ಗೆ ಬೇಕು ಅಂದರೂ ಸ್ವಲ್ಪ ಪೆಟ್ರೋಲ್ ಗೆ ಗತಿ ಇರಲಿಲ್ಲ.  ಈಗ ನೋಡಿ , ಅದು ಜಗತ್ತಿನ ಹೆಚ್ಚಿನ ಗಳಿಕೆ (income) ಹೊಂದಿರುವ ದೇಶವಾಗಿದೆ. ಪೂರ್ಣ ಡಿಜಿಟಿಕರಣದ ಬಳಿಕ ಅದರ ಜಿಡಿಪಿ ಹಿಮಾಲಯದೆತ್ತರಕ್ಕೆ ಏರಿದೆ.   ಇಂಗ್ಲಿಶ್ ನ  ಲವಲೇಶವೂ  ಇಲ್ಲದೆಯೇ ಹೇಗೆ ಅಷ್ಟೊಂದು ತಂತ್ರಜ್ಞಾನ, ಅರ್ಥಿಕ ಅಭಿವೃದ್ದಿಗಳು  ಸಾಧ್ಯವಾಯಿತು ಎಂಬುದನ್ನು ಪ್ರಾಯೋಗಿಕವಾಗಿ ಅರಿಯಬಹುದು. ಈ ವಿಷಯವಾಗಿ,ಅಧ್ಯಯನ, ವರದಿ ಸಂಗ್ರಹ  ಆರಂಭಿಸಬೇಕು.

 ಈ ನಿಟ್ಟಿನಲ್ಲಿ ಈಗ ನಡೆಸಿದಂಥ  ವಿಚಾರ ಸಂಕಿರಣಗಳು  ಮಹತ್ವದ ಪಾತ್ರ ವಹಿಸುತ್ತವೆ..  ವಿಶ್ವ ಕನ್ನಡಿಗರನ್ನು ತೆಕ್ಕೆಗೆ ತೆಗೆದುಕೊಂಡು ಮುನ್ನುಗ್ಗಬೇಕು. ಅಮೇರಿಕ, ಯುರೋಪ್ ಇತ್ಯಾದಿ ಪ್ರದೇಶಗಳಲ್ಲಿ  ಕ.ಅ.ಪ್ರಾಧಿಕಾರದ ಪ್ರತಿನಿಧಿತ್ವ ಸೃಷ್ಟಿಸಿ ಸಮಾವೇಶವನ್ನು ಅಲ್ಲಿಯೂ ಆಗಾಗ ನಡೆಸಬೇಕು. ಹೀಗೆ ಮಾಡುವುದರಿಂದ  ಕನ್ನಡ ನಾಡು ಭೌಗೋಳಿಕವಾಗಿ  ಸೀಮಿತಕ್ಕೆ ಒಳಪಡದೆ ಇಂದಿನ  ಡಿಜಿಟಲ್ ಯುಗದಲ್ಲಿ ಜಾಗತಿಕವಾಗಿ ಆವರಿಸಿದ ಕನ್ನಡ  ನಾಡು ಎಂದು ತಿಳಿಯಬೇಕು.  ಆನ್ಲೈನ್ ಸಂಕಿರಣಗಳನ್ನು ಏರ್ಪಡಿಸಬೇಕು ಅಲ್ಲದೇ ವಿಶ್ವದ ಎಲ್ಲ ಕನ್ನಡಿಗರಿಂದಲೂ ಹೆಚ್ಚಿನ ಸಲಹೆ, ಐಡಿಯಾಗಳನ್ನು ಆಹ್ವಾನಿಸಬಹುದು. 

  ಅವಕಾಶ  ಕೊಟ್ಟ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರೂ, ನಾಡಿನ ಹೆಮ್ಮೆಯ ಕಲಾವಿದ, ಕನ್ನಡಕ್ಕೆ ವಿಶೇಷ, ಮರೆಯಲಾರದ ಅನೇಕ ಪ್ರಸ್ತುತಿ, ಚಿತ್ರಗಳನ್ನು ಕೊಟ್ಟ,  ಡಾ. ಟಿ. ಎಸ್.  ನಾಗಾಭರಣ ಅವರಿಗೆ ಹಾಗೂ ಪ್ರಾಧಿಕಾರಕ್ಕೆ ಆನಂತ  ಧನ್ಯವಾದಗಳು. ಕ. ಅ.ಪ್ರಾ ದ   ಎಲ್ಲ ಕನಸುಗಳು ಚಿಗುರಿ ಹೆಮ್ಮರವಾಗಲಿ ಎಂದು ಪ್ರಾರ್ಥಿಸುವೆ..

  •   (ವಿಜಯ್ ದಾರಿಹೋಕ )

      Business Engagement Manager/ Consultant for Digital Technologies & Solutions

      Stockholm, Sweden

      viijay.daarihoka@gmail.com