- ನೀಲಿ ಅಗಾಧತೆ… - ಏಪ್ರಿಲ್ 11, 2021
- ಸಜೀವ ಹಿನ್ನೆಲೆಯೊಂದು… - ಏಪ್ರಿಲ್ 4, 2021
- ದೀಪಕ್ ಬಗೈರ್ ಕೈಸೇ, ಪರವಾನೆ ಜಲ್ ರಹೀ ಹೈ… - ಮಾರ್ಚ್ 21, 2021
ಭೇಟಿಯಾಗದ ಭೇಟಿಗಳು…
೩. ಸಜೀವ ಹಿನ್ನೆಲೆಯೊಂದು…
ಕಾಲೇಜು ಕ್ಯಾಂಪಸಿನ ವಿಶಾಲ ಹೂದೋಟದ ಒಂದು ಬೆಂಚಿನ ಮೇಲೆ ಆಗಷ್ಟೇ ತುಸು ನಿದ್ದಗೆ ಜಾರಿದ ಅಪ್ಪನಿಗೆ ಶಾಲೊದಿಸಿ ಕಾಲೇಜ್ ಕಾರಿಡಾರ್ ಕಡೆ ಹೆಜ್ಜೆ ಹಾಕಿದೆ. ದೂರದ ಟೀ ಅಂಗಡಿಯ ಹತ್ತಿರ ಕೆಂಚಜ್ಜ ಟೀ ಕಪ್ಪಿನೊಳಗೆ ಬ್ರೆಡ್ ಅದ್ದುತ್ತಿದ್ದಾನೆ. ಎರಡು ದಿನಗಳಿಂದ ಊಟ ಇತ್ಯಾದಿ ಅಪ್ಪನಿಗೆ ತೊಂದರೆಯಾದೀತೆಂದು, ಮಧ್ಯಾನದ ಊಟ ಹೆಚ್ಚಾದ ನೆಪ ಮಾಡಿ ರಾತ್ರಿ ಹೀಗೆ ಕೆಂಚಜ್ಜ ಟೀ ಬ್ರೆಡ್ಡಿನಲ್ಲಿ ಸವೆಸುತ್ತಿದ್ದಾನೆ.
ಕೆಂಚಜ್ಜನ ಕಣ್ಣು ತಪ್ಪಿಸಿ ಅಲಂಕರಣಕ್ಕಾಗಿ ಕ್ಯಾಂಪಸಿನಲ್ಲಿ ಮಾಡಿದ ಕಿರು ತೊರೆಯ ಹತ್ತಿರ ನಡೆದೆ.
ತುಸು ಮಟ್ಟದ ನೀರಿನಲ್ಲಿ ಚಿಕ್ಕ ಅಲೆಗಳು -ತರಂಗಗಳೊಂದಿಗೆ ಬೆಳದಿಂಗಳು ಮಿಳಿತಗೊಂಡ ಚಿತ್ರಣ ತುಸು ಹಿತವೆನಿಸಿತು.
ಇಡೀ ಊರಿಗೆ ಆದರ್ಶ , ಕಠೋರತೆ, ಶಿಸ್ತು , ಕೋಪದ ತೀವ್ರತೆಗೆ ಅನ್ವರ್ಥವಾಗಿದ್ದ ಅಪ್ಪ ನಮಗೆಂದೂ ಅಪ್ಪನಾಗಿ ದಕ್ಕಲಿಲ್ಲ. ಅಪ್ಪನ ಕಠೋರತೆ ಎಷ್ಟಿತ್ತೆಂದರೆ ಅಣ್ಣ ನಾಟಕದವರ ಪಾಲದ , ತುಸು ಆರೋಗ್ಯ ತೊಂದರೆಯಿದ್ದ ಅಮ್ಮ ಅಸುನೀಗಿದಳು.
ಉಳಿದದ್ದು ನಾನು. ಅಪ್ಪನ ಕಠೋರತೆಯ ಪ್ರದರ್ಶನದ ಸಲಕರಣೆಯಾಗಿ. ಆದರೆ ಕಾಲೇಜು ತಲುಪಿದಂತೆ ಅಪ್ಪನ ಆರೈಕೆ ಹೆಚ್ಚಿತು ಮೃದು ವಾಗತೊಡಗಿದ. ಆದರೆ ಅಪ್ಪನ ಆದರ್ಶ ಮೃದತ್ವದ ಹಾದಿ ಹತ್ತಿದ್ದು ನನಗೇ ವಿಪರೀತ ಅಸಹನೀಯವಾಗತೊಡಗಿತ್ತು. ಕಾಲೇಜು ಮುಗಿಯುತ್ತಿದ್ದಂತೆ ಆತನನ್ನು ಬಿಟ್ಟು ಶೆಹರ ಸೇರಿದೆ. ತುಸುವೇ ದಿನಗಳಲ್ಲಿ ಇಲ್ಲಿನ ಕೊಡು ಕೊಳ್ಳುವ ವ್ಯವಹಾರದ ಬದುಕು ಅಪ್ಪನ ಮೃದತ್ವದೆಡೆಗೆ ಮನಸ್ಸು ಕಣ್ಣೊಡೆಯತೊಡಗಿತು.
ಶಹರದ ನಿರ್ವಿಕಾರ ನಿರಾಕರ ಗಣಿತದ ಬದುಕಿಗೆ ಮಾಸ್ತರಾದ ಅಪ್ಪನ ಆದರ್ಶಗಳು ಕಠೋರತೆ ಸಜೀವ ಹಿನ್ನೆಲೆಯಂತೆ ಕಾಣತೊಡಗಿತು.
ಅಪ್ಪ ಕರಿಯನಂತ ಎಷ್ಟು ಹುಡುಗರ ಬದುಕು ಬದಲಿಸಿದ್ದಾನೆ. ಹಾಕಲು ಬಟ್ಟಯಿಲ್ಲದೇ, ಶುಚಿತ್ವ , ನಿತ್ಯ ಸ್ನಾನ ಎಂಬ ಪದಗಳಿಂದ ಮೈಲು ದೂರದ ವಾತಾವರಣದಲ್ಲಿ ಎದ್ದ ಇಂಥ ಸಸಿಗಳನ್ನು ತನ್ನ ಕಠೋರತೆ ಶಿಸ್ತು ಆದರ್ಶಗಳಡಿಯಲ್ಲಿ ಇಲ್ಲಿಯವರೆಗೂ ಎಳೆದು ತಂದ. ಕೆಂಚಜ್ಜ, ಕರಿಯನಂತವರಿಗೆ ಬೆಂಗಳೂರಿನ ಇಂಥ ತಾಂತ್ರಿಕ ವಿದ್ಯಾಲಯದ ಊಹೆಯಾದರೂ ಸಾಧ್ಯವಿತ್ತಾ.?
ಓಟಗಳಲ್ಲಿ ಮರೆತ ತಾರೀಖುಗಳ, ರಕ್ತ ಸಂಬಂಧಗಳ ಕಾರ್ಯಕಾರಣದ ಹಂಗುಗಳ , ಬರೀ ಕೊಡುವ ಕೊಳ್ಳುವ , ವ್ಯವಹಾರಿಕ ಸಂಬಂಧಗಳ ನೆಲಯಲ್ಲಿ ಕರ್ತವ್ಯ ನಿಷ್ಠೆ ಕಾಣುವ ನನ್ನ ಸರಣಿಗಿಂತ ಅಪ್ಪ ಬದುಕಿಡೀ ಧಾರಣೆ ಮಾಡಿಕೊಂಡ ವ್ಯಕ್ತಿತ್ವ, ಹೋರಾಟ, ಜಿದ್ದು ತನ್ನ ಒಳಗೆಲ್ಲೋ ಮಿಸುಕುವಂತಿತ್ತು.
ಅಣ್ಣ ನಾಟಕದವರ ಪಾಲಾಗದೇ, ತಾನು ಹೈಸ್ಕೂಲಿನಲ್ಲೇ ಆರ್ಕೆಸ್ಟ್ರಾದವರ ಹಿಂದೆ ಓಡಿ ಹೋಗಿದ್ದರೆ ಏನು ಮಹಾ ಬದಲಾಗಿರುತ್ತಿತ್ತು. ಕರಿಯನಂತ ಎಷ್ಟೋ ಹುಡುಗರ ಬದುಕಿನ ದಿಕ್ಕು ಬದಲಿಸಿದ ಅಪ್ಪ, ಅಪ್ಪನಿಗೆ ಹೊರೆಯಾಗಬಾರದೆಂದು ಟೀ ಬ್ರೆಡ್ ಹಿಡಿದು ನಿಂತ ಕೆಂಚಜ್ಜ, ಎಲ್ಲಾ ಸಮೀಕರಣಗಳಲ್ಲೂ ನನ್ನ ನಿರ್ಗುಣ ನಿರ್ವಿಕಾರ ಗಣಿತದ ಬದುಕಿಗಿಂತ ಕಾರ್ಯಕಾರಣದ ಹಂಗಿನಾಚೆಗಿನ ಬದುಕು ನನಗಾಗಲಿ ಅಣ್ಣನಿಗಾಗಲಿ ಯಾಕೆ ಗೋಚರಿಸಲಿಲ್ಲ. ?
ನಿಜವಾದ ಅಪ್ಪನನ್ನು ನಾವು ಭೇಟಿಯಾಗಲೇ ಇಲ್ಲವೇ…!? ಇದೇ ಪ್ರಶ್ನೆ ಅನುರಣಿಸಿತು.
ಮರುದಿನ ಬೆಳಿಗ್ಗೆ ಅಪ್ಪ ಕೆಂಚಜ್ಜ ಕರಿಯ ಬಸ್ಸಿನಲ್ಲಿ ದ್ದರು. ನಾನು ಕಿಟಕಿಯ ಹತ್ತಿರ ನಿಂತು ಮುಂದಿನ ಬಾರಿ ಮೊದಲೇ ತಿಳಿಸಿ, ಎಲ್ಲಾ ವ್ಯವಸ್ಥೆ ನಾನೇ ಮಾಡುತ್ತೇನೆ ಎಂದೆ. ಅಪ್ಪ ಎಂದಿನಂತೆ ಆರೋಗ್ಯ ಸರಿ ನೋಡಿಕೋ ಇತ್ಯಾದಿ ಯಾವವೂ ಹೇಳಲಿಲ್ಲ.
ಬಸ್ ಮರೆಯಾಯಿತು. ಇಷ್ಟು ವರ್ಷ ಭೇಟಿಯಾಗದ ಅಪ್ಪನನ್ನು ನಾನು ಭೇಟಿಯಾದಂತೆನಿಸಿತು. ದೊಡ್ಡ ಕಂಬಂದ ಹಿಂದೆ ನಿಂತು ಒಳಗಿನ ಕುದಿ.. ಒಮ್ಮೆಲೇ ಸಂಕಟವಾಗಿ ಅತ್ತುಬಿಟ್ಟೆ.
ನನಗೆ ಸ್ಪಷ್ಟವಿತ್ತು. ಈ ಅಳು ತನ್ನನ್ನು ನೋಯಿಸಿ ದುರ್ಬಲವಾಗಿಸುವ ಅಳುವಲ್ಲ, ಅದು ಹುರಿಗೊಳಿಸುವ ಅಳು…
೨. ಸಪ್ಪಳ ಮತ್ತು ನೀರವತೆ…
ಕಳೆದ ಐದಾರು ದಿನಗಳಿಂದ ನಸು ಮುಂಜಾವಿನವರೆಗೂ ನಿದ್ರೆಯ ಸುಳಿವೇ ಇರದ ಎಚ್ಚರ…ರಾತ್ರಿಗಳು ಮುಗಿಯದ ಸುರಂಗದಂತೆ..
ದಟ್ಟ ರಾತ್ರಿಯ ನೀರವತೆ, ಗಡಿಯಾರ , ದೂರದ ಸಂಪಿಗೆ ಮರದ ಅಲರು, ಆಗಾಗ ಊಳಿಡುವ ನಾಯಿಗಳ ಸಪ್ಪಳಗಳೊಂದೊಗೆ ಕಲೆತ ನಿನ್ನ ಬಗೆಗಿನ ಲಯಗಳು ಮುಗಿಲ ಭಾನಗಲ ಒಬ್ಬನೇ ತೇಲುತ್ತಿರುವ ಚಂದ್ರಮನ ಬೆಳದಿಂಗಳಲ್ಲಿ ತೊಯ್ದ ಚುಕ್ಕಿಗಳು..
ನೀ ಸಿಕ್ಕ ನಂತರವೇ ಆಗಾಗ ಇಂಥ ಅನುಭವ ಉಂಡದ್ದು..
ನಿನ್ನ ಮನಸು ಬಾಧೆಯಲ್ಲಿ ಮುಳುಗಿದ್ದರೆ ನನಗಿಲ್ಲಿ ನಿದ್ರೆಯಿರದ ರಾತ್ರಿಗಳು, ನಿನಗೆ ನಿದ್ರೆಯಿರದಿದ್ದರೆ ನಾನಿಲ್ಲಿ ಎಚ್ಚರ..
ನೀ ದಿಂಬಿಗೆ ತಲೆಯಿಡುವ ಮುನ್ನದ ಕೂಗು ಮಾತು ನನ್ನ ತಲುಪದಿರೆ ನಿದ್ರೆಯಾದರೂ ಎಲ್ಲಿ..
ಹೀಗೆ ಅಲ್ಲಿ ನೀ ಇಲ್ಲಿ ನಾ ನಿದ್ರೆಯಿರದೇ ಎಚ್ಚರಿಕೆಯಿಂದ ಕಲೆತ ನಿರಾಕರ ಗಳಿಗೆಗಳ ಈ ಚೂರುಗಳು , ಒಳ ಅಂಚಿನಲ್ಲಿ ಮೂಡಿದ ಭಾವಗಳ ಸದ್ದು ಇನಿತೂ ಹೊರಜಾರದಂತೆ ಪದಗಳಲ್ಲಿ ಮೂಡಿದ ಮಾತಿಲ್ಲದ ಗಂಧ..
ನಿನ್ನನ್ನು ಎದುರುಗೊಳ್ಳಬೇಕಾದರೆ ಕಾಯಬೇಕಾಗಿರುವ ಸೂರ್ಯೋದಯಗಳ ಲೆಕ್ಕಾಚಾರದಲ್ಲೇ ಆವರಿಸಿದ ನಿದ್ದೆ ಅಲ್ಲಿ ನಿನಗಾದರೂ ಭೇಟಿಯ ಲೆಕ್ಕ ಸಿಕ್ಕಿರಬೇಕು ನನಗೂ ಇಲ್ಲಿ ತುಸು ನಿದ್ದೆ…
೧. ದೃಶ್ಯಕ್ಕೂ ಆಚೆ ನಿಂತ ಸಂಜೆಯ ಮಾತು…
ಆತ; ಯಾಕೆ ಅಳುತ್ತಿದ್ದೀಯಾ…
ಈಕೆ; ನಿನ್ನ ಮನಸ್ಸೇ ಭಾರವಾಗಿದೆ, ನಿನ್ನನ್ನು ಬಾದಿಸುತ್ತಿರುವುದು ನನ್ನ ಕಣ್ಣಲ್ಲಿ ಅಶ್ರುವಾಗಿದೆ.
ಆತ; ಇಲ್ಲ, ಇದು ಅಸತ್ಯ..
ಗೋಡೆಯ ಮೇಲೆ ಮಳೆ ನೀರು ಇಳಿದ ಗುರುತನ್ನೇ ದಿಟ್ಟಿಸುತ್ತಾ ಕೇಳಿದಳು…
ಹೌದೇ…ಹಾಗಾದರೆ ಒಮ್ಮೆ ನನ್ನೆಡೆಗೆ ನೋಡಿ ಹೇಳು..
ಶಿಥಿಲ ಮೌನ…
ಎದುರಿಗಿದ್ದ ದೇಗುಲದ ಗೋಡೆ, ಸಾವಿರಾರು ಚಿಕ್ಕ ಕನ್ನಡಿಗಳ ಜೋಡಣೆಯ ಅಲಂಕರಣ. ಅದರಲ್ಲಿ ಛಿದ್ರಗೊಂಡ ತನ್ನ ಮನದಂತಿದ್ದ ಆತನ ಸಾವಿರಾರು ಚಿತ್ರಗಳನ್ನು ದಿಟ್ಟಿಸುತ್ತಾ..
ನಿನ್ನನ್ನು ಬಾಧಿಸುತ್ತಿರುವುದಾದರೂ ಏನು…
ಆತ; ಸರಿ…ಈಗ ಏನು ಮಾಡಬೇಕು..
ಈಕೆ; ಇಲ್ಲಿ ಜ್ಯೋತಿಯಿದೆ, ಹಣತೆ ಉರಿಯುತ್ತಿಲ್ಲ..
ಆತ; ಮುಂದಿನ ದಾರಿ..
ಈಕೆ; ಸಿಡಿ ಮದ್ದುಗಳಿಮ.ದ ಚೂರಾದ ಬುದ್ದನ ಪ್ರತಿಮೆಗೂ ಈಗ ಅಪಾರ ಬೇಡಿಕೆ..
ಆತನ ನೋವು ಬೆರೆತ ಗಾಢ ಮೌನ…
ಅದೋ ದೂರದಿ ಕಾಣುತ್ತಿರುವ ಬಾವಿಯ ನೀರೇ ಅಲ್ಲವೇ ಬಿದಿಗೆಯ ಗಣಪನ ನೆನಸಿದ್ದು. ಆ ನೀರಿನ ಪ್ರತಿ ಅಣುವಿನಲ್ಲೂ ಆತನೇ ಕರಗಿದ್ದಾನೆ…
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್