- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಮನುಷ್ಯ ಭಾವನೆಗಳೊಂದಿಗೆ ಬದುಕುವ ಭರಾಟೆಯಲ್ಲಿ ಅನೇಕ ಗೊಂದಲಗಳನ್ನು ಎದುರಿಸುತ್ತಾನೆ.
ವೈಯಕ್ತಿಕ ಸಂಬಂಧಗಳು ಮಧುರವಾಗುವುದು ನಮ್ಮ ಕೈಯಲ್ಲಿ ಇದೆ ಎಂದು ಅಂದುಕೊಳ್ಳುತ್ತಲೇ ಹೊಸ ಗೊಂದಲಕ್ಕೆ ಬೀಳುತ್ತೇವೆ.
ಗಂಡು ಹೆಣ್ಣಿನ ಸಂಬಂಧ ಮೊದಲಿನ ಹಾಗೆ ಈಗ ಗೋಜಲು ಗೋಜಲಾಗಿ ಉಳಿದಿಲ್ಲ.
ಇಂದಿನ ಯುವಕರು ಭಾವನಾ ಲೋಕದಿಂದ ದೂರ ಸರಿದಿದ್ದಾರೆ.
ಪ್ರೀತಿ ಪ್ರೇಮದ ಗೊಂದಲಗಳಿಂದ ಮುಕ್ತರಾಗಿದ್ದಾರೆ.
ಜೀವನ ಶೈಲಿಯ ಖಯಾಲಿಯ ಸ್ವರೂಪಗಳೇ ಬದಲಾಗಿವೆ.
ನಾನು ಯುವಕನಾಗಿದ್ದಾಗ ನನ್ನನ್ನು ಕಾಡುತ್ತಿದ್ದ ಪ್ರಶ್ನೆಗಳು ಈಗಿನ ಯುವಕರನ್ನು ಕಾಡುವುದಿಲ್ಲ.
ಹೊಸದಾಗಿ ಪ್ರೇಮಿಸುವಾಗ ಅದೆಷ್ಟು ಪ್ರಶ್ನೆಗಳು ಹುಟ್ಟುತ್ತಿದ್ದವಲ್ಲ?
ವಿಳಂಬವಾಗಿ ಲಭಿಸಿದ ಶಿಕ್ಷಣ, ಮುಕ್ತ ಆಲೋಚನೆಗಳ ಕೊರತೆ, conservative ಮನಸ್ಥಿತಿ, ಅನಗತ್ಯ ಓವರ್ ಥಿಂಕಿಂಗ್ ಹೀಗೆ ಏನೇನೋ ಕಲಸು ಮೇಲೋಗರ. ವೈಯಕ್ತಿಕ ಬದುಕಿನ ದಿಲ್ಲಗಿನೇ ಹೀಗೆ ಇರಬಹುದು.
ಸಂಗಾತಿಯೊಂದಿಗೆ ತುಂಬಾ ಸಲಿಗೆ ಪ್ರೀತಿ ಇದ್ದರೂ ಸಂಶಯದ ಪ್ರಶ್ನೆಗಳು ಏಕೆ ಹುಟ್ಟುತ್ತಿದ್ದವು ಎಂದು ಇಂದಿಗೂ ಅರ್ಥವಾಗುತ್ತಿಲ್ಲ. ಬದಲಾವಣೆ ಆಗಬೇಕೆಂದರೂ ಯಾಕೋ ಅವಕಾಶಗಳು ಸಿಗದ ಗೊಂದಲ. ಎಲ್ಲಿಗೆ? ಏಕೆ? ಯಾರೊಂದಿಗೆ? ಯಾವಾಗ? ‘ಅಯ್ಯೋ ಇದೇನಿದು ಮೈ ಮೇಲೆ ದೆವ್ವ ಬಂದವರ ಹಾಗೆ ಪ್ರಶ್ನೆಗಳು’ ಎಂಬ ಪ್ರಶ್ನೆಗೆ ಉತ್ತರ ಹೇಳುವ ಶಕ್ತಿ ಇರುತ್ತಿರಲಿಲ್ಲ. ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ.
ಅವರಿಗೆ ಸಂಗಾತಿಗೆ ಕೇಳಿದ ಪ್ರಶ್ನೆಗಳನ್ನು ಕೇಳಲು ಮನಸ್ಸು ಬರುವುದೇ ಇಲ್ಲ. ಅಯ್ಯೋ ಅವರ ಪಾಡಿಗೆ ಅವರು ಎಲ್ಲಿಗಾದರೂ ಹೋಗಿ ಬರಲಿ ಎಂಬ ನಂಬಿಗೆ. ಆದರೆ ಅದೇ ನಂಬಿಗೆ ಆಗ ಎಲ್ಲಿ ಹೋಗಿತ್ತು? ಇಂತಹ ಅರ್ಥವಾಗದ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಲು ಈಗಿನ ತಲೆಮಾರಿನ ಯುವಕರೇ ಕಾರಣ ಆಗಿರಬಹುದು.
‘ನೀನು ನನಗೆ ಕೇಳುತ್ತಿದ್ದ ಬಗೆ ಬಗೆಯ ಪ್ರಶ್ನೆಗಳನ್ನು ಮಕ್ಕಳಿಗೆ ಏಕೆ ಕೇಳುತ್ತಿಲ್ಲ? ಎಂದಾಗ ನಕ್ಕು ಸುಮ್ಮನಾಗಿ ಬಿಡುತ್ತೇನೆ. ನಮ್ಮ ಹಿರಿಯರ ಹಾಗೆ ‘ಅಯ್ಯೋ ಕಾಲ ಕೆಟ್ಟು ಹೋಯಿತು’ ಎಂದು ಗೊಣಗುವುದಿಲ್ಲ ಎಂಬುದು ದೊಡ್ಡ ಸಮಾಧಾನ. ಮಕ್ಕಳು ಬಿಂದಾಸಾಗಿ ಚೋಟುದ್ದ ಬಟ್ಟೆ ಹಾಕಿ ತಿರುಗಿದರೆ ಮನಸು ರೇಗುವುದಿಲ್ಲ, ಅದೇ ಸಂಗಾತಿ ಉಡುಗೆ ಒಂಚೂರು ಅಸ್ತವ್ಯಸ್ತವಾದರೆ ವಿನಾಕಾರಣ ಮನಸಿಗೆ ಕಿರಿಕಿರಿ.
ಜನರೇಶನ್ ಗ್ಯಾಪ್ ಸಂಕಷ್ಟದಿಂದ ನಾವು ಹೊರಗೆ ಬಂದರೆ ಸಾಲದು ನಮ್ಮವರಿಗೂ ಹೊರಗೆ ಬರುವ ಅವಕಾಶ ಕಲ್ಪಿಸಬೇಕು.
ನಾನು ನಾಳೆ ಕಾರ್ಯಕ್ರಮ ಒಪ್ಪಿಕೊಂಡು ಹೊರಟಿದ್ದೇನೆ ಎಂದಾಗ ಯಾಕೋ ಪ್ರಶ್ನೆಗಳೇ ಏಳಲಿಲ್ಲ. ಅರೇ ಇದೇನಿದು ಎಂದು ನನ್ನ ನಾ ಚೂಟಿಕೊಂಡು ನೋಡಿದೆ. ಹೌದು ನಾನು ನಾನಾಗಿದ್ದೇನೆ ಆದರೆ ಮನಸು ಬಲಿತು ಬದಲಾಗಿದೆ. ‘ಐವತ್ತರ ಗಡಿ ದಾಟಿದ ಮೇಲಾದರೂ ಬುದ್ಧಿ ಬಂತಲ್ಲ ನಿನಗೆ’
ಹೌದಪ್ಪ ಬಂತಲ್ಲ ಅದೇ ಸಮಾಧಾನ.
‘ನೀನು ಏನು ಪ್ರಶ್ನೆ ಕೇಳದೇ ಹೋಗಿ ಬಾ ಅಂದಾಗ ನಿಜವಾಗಿಯೂ ಪುಳಕವಾಯಿತು’ ಎಂಬ ಅವಳ ಮಾತು ಕೇಳಿದಾಗ ನನಗೂ ಅಷ್ಟೇ ಖುಷಿಯಾಯಿತು. ‘ಈ ಖುಷಿಯಲಿ ಒಮ್ಮೆ ಬಿಗಿದಪ್ಪಿ ಮುದ್ದಾಡು ನೋಡೋಣ’ ಎಂದು ಹೇಳಿದಾಗ ಏನೋ ಖುಷಿ, ಸ್ಪೇಸ್ ದಕ್ಕಿಸಿಕೊಂಡ ಅಪ್ಪಟ ಆಂತರಿಕ ಸ್ವಾತಂತ್ರ್ಯ. ‘ನಾನು ಪಡೆದುಕೊಂಡ ಸ್ಪೇಸ್ ನಿನಗೂ ಕೊಟ್ಟಾಗ ಇಷ್ಟೊಂದು ನೆಮ್ಮದಿ ಇರುತ್ತದೆ ಎಂದು ಗೊತ್ತಿರಲಿಲ್ಲ ನೋಡು’ ಎಂದಾಗ ಇಬ್ಬರಲೂ ದಿವ್ಯ ಮೌನ. ಹೀಗೆ ಬದಲಾದ ದಿನದ ಮಾತಿನಲ್ಲಿ ಅದೇನೋ ಒಂಥರಾ ಮಾದಕ ಹುರುಪು. ಸಾವಿರ ಕಚಗುಳಿ ಇಟ್ಟ ಪುಳಕ.
ಪುಳಕ ದೇಹದಲ್ಲಿ ಇರುವುದಿಲ್ಲ, ಎಲ್ಲಾ ಪುಳಕಗಳ ಸಮಾಗಮ ಅಡಗಿರುವ ಸುಂದರ ತಾಣವೇ ಈ ವಿಚಿತ್ರ ಮನಸು. ‘ಮನಸು ಮಾಡಿ ಮನಸ ಕಟ್ಟೋಣ, ಮತ್ತೆ ಮತ್ತೆ ಮನಸ ಮತ್ತಲಿ ಮೈ ಮರೆಯೋಣ ಬಾ’ ಎಂದು ಅಂದುಕೊಂಡಾಗ ಬಾನಲಿ ಚಂದ್ರ ನಸು ನಕ್ಕು ಮೋಡದಲಿ ಮರೆಯಾಗಿ ಶುಭ ರಾತ್ರಿ, ಗುಡ್ ನೈಟ್ ಹೇಳಿದಂತೆ ಭಾಸವಾಯಿತು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್