- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ಮನಸ್ಸು’ ಎಂದರೆ ‘ಪ್ರಜ್ಞೆ’, ‘ಗ್ರಹಿಕೆ’, ‘ಯೋಚನೆ’, ‘ವಿವೇಚನೆ ಮತ್ತು ನೆನಪು’ ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಮನಸ್ಸು ಸಂವೇದನಾಶೀಲವಾದದ್ದು , ಬಹಳ ಸೂಕ್ಷ್ಮವಾದದ್ದು ಇದನ್ನು ಸ್ಪರ್ಶಿಸಲಾಗದು ಆದರೆ ಅನುಭವಿಸಬಹುದು. ಮನುಷ್ಯನ ಮನಸ್ಸು ನಿರ್ಮಲವಾಗಿದ್ದರೆ ದೇಹವೂ ನಿರ್ಮಲವಾಗಿರುತ್ತದೆ. ಮನಸ್ಸು ಎಂದರೆ ಸಿಟ್ಟು, ದ್ವೇ಼ಷ, ಹೊಟ್ಟಕಿಚ್ಚುಗಳು, ಅಸಹನೆ, ಸೋಗಲಾಡಿತನಗಳು ತುಂಬಿದ ಡಬ್ಬಿಯಲ್ಲ. ಪ್ರೀತಿ, ದಯೆ, ಕಾರುಣ್ಯ, ಕ್ಷಮಾ, ಶಾಂತಿ, ಸೌಧರ್ಮಿಕೆ, ಆತ್ಮೀಯತೆ, ಸ್ಪಂದನಾಶೀಲತ್ವ , ಸೌಂದರ್ಯ ಮುಂತಾದ ಆಮೂಲ್ಯ ಆಭರಣಗಳನ್ನು ತುಂಬಿಸಿಕೊಂಡಿರುವ ಆಭರಣ ಪೆಟ್ಟಿಗೆ ಎನ್ನಬಹುದು. ಮನಸ್ಸಿನ ದಯೆ ಹಾಗು ಕರುಣೆಗಳೇ ಅದನ್ನು ಪೋಷಿಸುವುದು. ಋಣಾತ್ಮಕ ಭಾವನೆಗಳು ಮನಸ್ಸನ್ನು ಹಾಳು ಮಾಡಿಬಿಡುತ್ತವೆ.
ಮನಸ್ಸು ಯಾವಾಗಲೂ ಒತ್ತಡ ರಹಿತವಾಗಿರಬೇಕು ಇಲ್ಲವಾದರೆ ದೈಹಿಕ ರೋಗಗಳ ಆವಾಸ ಸ್ಥಾನವಾಗುತ್ತದೆ. ಮನಸ್ಸಿನಲ್ಲಿ ಕೆಡುಕನ್ನೇ ತುಂಬಿಸಿಕೊಂಡರೆ ಉಸಿರಾಟದ ಸಮಸ್ಯೆ ಭಾದಿಸುತ್ತದೆ. ಮನಸ್ಸಿನಲ್ಲಿ ಅತೀ ಮಹತ್ವಾಕಾಂಕ್ಷೆಗಳನ್ನು ತುಂಬಿಸಿಕೊಂಡರೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ. ಯಾವ ಬಯಕೆಯೂ ಈಡೇರದೆ ಒತ್ತಡ ಹೆಚ್ಚಾದಾಗ ಹೃದಯ ಸ್ತಂಭನ, ಪಾರ್ಶ್ವವಾಯುವಿನಂತಹ ಸಮಸ್ಯೆಗಳು ಭಾದಿಸುತ್ತವೆ ಎನ್ನತ್ತದೆ ವೈಜ್ಞಾನಿಕ ಅಧ್ಯಯನ. ಇವೆಲ್ಲವುಗಳಿಂದ ದೂರವಿರಬೇಕೆಂದರೆ ಆತ್ಮಸಂತೋಷಿಯಾಗಬೇಕು ಅದು ಎಲ್ಲಿಯೂ ಕ್ರಯಕ್ಕೆ ಸಿಗುವುದಿಲ್ಲ. ಹಾಗಿರಲು ನಾವು ಬದ್ಧರಾಗಬೇಕು ಅದನ್ನೇ “ಮನಸ್ಸು ಮಾಡುವುದು” ಎನ್ನುವುದು. ಅಂದರೆ ಒಳ್ಳೆ ಮನಸ್ಥಿತಿಯೂ ಮನಸ್ಸಿನ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಅದಕ್ಕೆ “ಮನೆ ಚಿಕ್ಕದಾದರೂ ಮನಸ್ಸು ದೊಡ್ಡದಾಗಿರಬೇಕು”, “ಓ ಮನಸೆ ರಿಲ್ಯಾಕ್ಸ್” ಎನ್ನುವುದು. ಅಂದರೆ ಮನಸ್ಸು ಮೆಣಸಾಗಬಾರದು ಮಕರಂದದಂತೆ ಸವಿಯಾಗಿರಬೇಕು, ನವನೀತದಂತೆ ಮೃದುವಾಗಿರಬೇಕು.
ಮನಸ್ಸುಗಳು ಹೀಗೆ ಎಂದು ಹೇಳಲು ಸಾಧ್ಯವಿಲ್ಲ ಕೆಲವೊಮ್ಮೆ ಸಂದರ್ಭಾನುಸಾರಿ, ಕೆಲವೊಮ್ಮೆ ಭಾವಾನುಸಾರಿ ಘಟನೆಯ ತೀವ್ರತೆಯ ಮೇಲೆ ಆ ಮನಸ್ಸು ಸ್ಪಂದಿಸುತ್ತದೆ. ಆ ಸಹಿಷ್ಣುತೆ ಇಲ್ಲವಾದರೆ ಅದೇ ಆಘಾತ. ಮನಸ್ಸು ಮತ್ತು ಹೃದಯ, ಮನಸ್ಸು ಮತ್ತು ಮನೋಭಾವ ಇವೆಲ್ಲಾ ಜೊತೆಜೊತೆಯಾಗಿ ಬಂದರೂ ಅದರ ಸಂಚಯದಲ್ಲಿ ಅಂತರ ಇದ್ದೇ ಇರುತ್ತದೆ. ಎಲ್ಲರ ಜೊತೆ ಬೆರೆಯಬೇಕು, ಎಲ್ಲವನ್ನೂ ಸಂಭಾಳಿಸಬಲ್ಲೆ! ಸರಿ ನಾನು ಎಲ್ಲದಕ್ಕೂ ಸಿದ್ಧ !ಎಂದುಕೊಂಡರೂ ಪೂರ್ವಾಗೃಹ ಪೀಡಿತ ಮನಸ್ಸುಗಳು ಪರಿವರ್ತನೆಗೆ ಸ್ಪಂದಿಸುವುದಿಲ್ಲ. ಅದೇ ‘ಕುಹಕ’ ಅದೇ ‘ಕುತಂತ್ರ’.
“ಮನಸ್ಸು ಬಾಡಿದರೆ ಮನೆ ಬಾಡಿದಂತೆ ಮನಸ್ಸು ಮುರಿಯುವುದೂ ಒಂದೇ ಮನೆಯನ್ನು ಮುರಿಯುವುದೂ ಒಂದೇ” ಎಂದು ಹೇಳಬಹುದು. “ಮನಸ್ಸು ಹುಚ್ಚು ಕುದುರೆ”, “ಮನಸ್ಸಿಟ್ಟು ಕೆಲಸ ಮಾಡಿ”, “ಮನಸ್ಸು ಕಲ್ಲಾಗಿದೆ”, “ಮನಸ್ಸು ಕುಗ್ಗಿದೆ”, “ದೊಡ್ಡ ಮನಸ್ಸುಮಾಡಿ”, “ಮನಸ್ಸು ಸುಳಿದಾಡುತ್ತಿದೆ”. ಅಂದರೆ ಈ ಎಲ್ಲಾ ನುಡಿಗಳು ಮನಸ್ಸಿನ ಏರಿಳಿತವನ್ನು ಹಾಗು ಅದರ ಲಕ್ಷಣವನ್ನು ತಿಳಿಸುತ್ತವೆ. ಮನುಷ್ಯನ ಮನಸ್ಸಿನ ಭಾವನೆಗಳು ಮುಖದಲ್ಲಿ ಪ್ರಜ್ವಲಿತವಾಗುತ್ತವೆ ಅದಕ್ಕೆ ತಿಳಿದವರು “ ಮುಖಮನಸ್ಸಿನ ಕನ್ನಡಿ” ಎಂದಿರುವುದು. ಮನುಷ್ಯನ ದೌರ್ಬಲ್ಯ ಮತ್ತು ಪ್ರಾಬಲ್ಯ ಎರಡೂ ಮನಸ್ಸೇ. ದೌರ್ಬಲ್ಯ ಭಯ, ಆತಂಕ ಸೂಚಿಸಿದರೆ, ಪ್ರಾಬಲ್ಯ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತದೆ.
ಮನಸ್ಸಿನ ಸಂತೋಷಕ್ಕೆ ತೊಡರುಗಾಲು ಎಂದರೆ “ಸಂಕುಚಿತ ಮನೋಭಾವ” ಅದನ್ನು ಬಿಟ್ಟು ಎಲ್ಲದರಲ್ಲಯೂ ಸಂತೋಷವನ್ನು ಹುಡುಕುತ್ತಾ ಹೋದರೆ ಅಗತ್ಯವಾಗಿ ದೊರಕುತ್ತದೆ. ಅಂದರೆ ಮತ್ಸರ, ದ್ವೇಷ, ಜಿಗುಪ್ಸೆ, ಅಸೂಯೆ, ಈರ್ಷೆಗಳಿಂದ ಮುಕ್ತಿ ಹೊಂದಬೇಕು ಹಾಗಾದಾಗ ನಾವು ಸ್ವಸ್ತರಾಗಿರಬಹುದು ಅದನ್ನೇ ಮನಸ್ಸು ಸಮಾಧಾನವಾಗಿರಬೇಕು, ಸಮಾಧಿಯಾಗಿರಬಾರದು ಎನುವುದು. ಮನಸ್ಸಿಗೆ ಬೇಕಾಗಿರುವುದು ವೈಚಾರಿಕತೆಯ ಆತ್ಮಪ್ರತ್ಯಯದ ಸಖ್ಯ. ಒಂದು ವೇಳೆ ಮನಸ್ಸು ಸಮಾಧಿ ಸ್ಥಿತಿಯಲ್ಲೇ ಇದ್ದು ಬಿಟ್ಟರೆ ಚೈತನ್ಯ, ನೆಮ್ಮದಿ, ನೆಲೆಸಲು ಸಾಧ್ಯವಿಲ್ಲ. ಮನಸ್ಸು ಕ್ಷೇಮವಾಗಿರಬೇಕೆಂದರೆ ಹೃದಯ ವೈಶಾಲ್ಯತೆ ಗೈರಾಗಬಾರದು. ಹಾಗಾದರೆ ಸತ್ವ ಕಳೆದುಕೊಂಡ ಬೇತಾಳದಂತಾಗುತ್ತದೆಷ್ಟೆ. ಚಿತ್ತ ಚಾಪಲ್ಯ, ಚಿತ್ತ ಚಾಂಚಲ್ಯಗಳು ಸುಳಿಯಬಾರದು ಅಷ್ಟೆ. ಹಾಗಾದರೆ ಮನಸ್ಸು ಮರ್ಕಟದಂತೆ ಎಂಬ ಮಾತಿಗೆ ಅನ್ವರ್ಥ ಅಲ್ಲವೆ!
ಮನಸ್ಸು ನಿತ್ಯ, ನಿರಂತರ ಸಂಚಾರಿ ಅದಕ್ಕೆ ಅದನ್ನು ಭ್ರಮರಿಗೆ ಮಾಯಾಮೃಗಕ್ಕೆ ಹೋಲಿಸುವುದು.ಕ್ಷಣಮಾತ್ರದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ವಿಭ್ರಮಿಸಿ ಬರಬಹುದು. ಅದಕ್ಕೆ ನಿಗದಿತ ದಾರಿಯಿಲ್ಲ, ನಿಗದಿತ ಸಮಯವಿಲ್ಲ. ಅಂತಹ ಮನಸ್ಸನ್ನು ಹರಿದಲ್ಲೇ ಹರಿಯಬಿಡಬಾರದು ಅದನ್ನು ನಿಯಂತ್ರಿಸುವ ಸಮಯಪ್ರಜ್ಞೆ ಎಂಬ ಸನ್ನೆಗೋಲು ನಮ್ಮಲ್ಲಿರಬೇಕು.
ಎಲ್ಲವೂ ಮನಸ್ಸಿನಲ್ಲಿಯೇ ಇರುತ್ತದೆ. ಅದಕ್ಕೆ “ಮನಸ್ಸಿದ್ದರೆ ಮಾರ್ಗ,” “ಮನಸ್ಸಿನಂತೆ ಮಹಾದೇವ” ಎನ್ನುವುದು. ಆದರೆ ವೈರುಧ್ಯ ಇನ್ನೊಂದಿದೆ ಅದೇನೆಂದರೆ ಮನಸ್ಸಿನ ಮೇಲೆ ಸವಾರಿ ಮಾಡುವುದು. ಹೊಟ್ಟೆಕಿಚ್ಚಿನಿಂದ, ಉನ್ನತಿಯನ್ನು ಸಹಿಸಲಾರದೆ, ¸ಸಂಬಂಧಗಳನ್ನು ಮುರಿದು ಲಾಭ ಮಾಡಿಕೊಳ್ಳಲು ತಮಗಿಲ್ಲದ ಸಂತೋಷ ಅವರಿಗೂ ಇರಬಾರದೆಂಬ ವಿಕೃತ ಮನಸ್ಸಿನಿಂದ ಅಂತಹ ಸೂಕ್ಷ್ಮಮನಸ್ಸನ್ನು ಕೊಂದುಬಿಡುತ್ತಾರೆ. ಇದಕ್ಕೆ ಪರಿಹಾರವಿಲ್ಲ. ದೈಹಿಕವಾಗಿ ಪ್ರಾಣ ತೆಗೆದರೆ ಶಿಕ್ಷೆ ಇದೆ ಆದರೆ ಮನಸ್ಸನ್ನು ಕೊಂದರೆ ಅದಕ್ಕೆ ಕ್ಷಮೆಯೂ ಇಲ್ಲ ಅದನ್ನು ಸರಿ ಮಾಡಲು ಸಾಧ್ಯವೂ ಇಲ್ಲ. ದೈಹಿಕವಾಗಿ ನೋವಾದರೆ ಅದನ್ನು ಸಹಿಸಬಹುದು ಹಾಗೆ ಅದು ಮಾಗುತ್ತದೆ ಕೂಡ ಆದರೆ ಮನಸ್ಸಿಗೆ ಆದ ಗಾಯ ಉಲ್ಬಣಗೊಂಡು ಖಿನ್ನತೆ, ಜಿಗುಪ್ಸೆಗಳಂಥ ಕೀವು ತುಂಬಿಸಿಕೊಳ್ಳುತ್ತದೆ. ಅದರಿಂದ ಆಚೆ ಬರುವುದು ಕಷ್ಟ. ಅಂಥ ಧೈರ್ಯ ತಂದುಕೊಡುವ ನಿಷ್ಕಲ್ಮಷ ಮನಸ್ಸಿನ ಸುಧಾರಕರು ಬರಬೇಕಷ್ಟೆ. ಮನಸ್ಸು ತೊಟ್ಟು ಕಳಚಿದ ಹೂವು ಬಾಡುವಂತೆ ಬಹು ಬೇಗ ಬಾಡುತ್ತದೆ ಅದಷ್ಟೇ ವೇಗವಾಗಿ ಶರೀರದ ಚಲನೆಯನ್ನು ಕುಗ್ಗಿಸಿಬಿಡುತ್ತದೆ. ಆದರೆ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವವರು ತೀರಾ ಕಡಿಮೆ ಅದನ್ನು ಪರಚಿ ಗಾಯ ಮಾಡುವವರೆ ಹೆಚ್ಚು. “ಮರ್ಯಾದೆ ಎಂಬ ಮಾಯೆಗೆ ಮನಸ್ಸು ಎಂಬ ಪಕ್ಷಿಯನ್ನು” ಬಲಿಕೊಡುವುದು ಪಾಪದ ಕೆಲಸವೆ ಸರಿ
ಮನಸ್ಸು ಅಗೋಚರ, ಅದನ್ನು ಅರ್ಥ ಮಾಡಿಕೊಳ್ಳುವುದೂ ಕಷ್ಟವೆ. ಜೀವವನ್ನು ಕೊಲ್ಲುವ ಹಕ್ಕು ಯಾರಿಗೂ ಹೇಗೆ ಇರುವುದಿಲ್ಲವೋ ಅಂತೆಯೆ ಮನಸ್ಸನ್ನು ಕುತ್ಸಿತ ಗೊಳಿಸುವ ಹಕ್ಕೂ ಯಾರಿಗೂ ಇಲ್ಲ. ಮನಸ್ಸು ಅಂತರ್ಯಾಮಿ. ಸ್ವಗತಗಳು, ನಿರೀಕ್ಷೆಗಳು, ಯಾರಿಗೂ ಹೇಳಲಾಗದ ಕಲ್ಪನೆಗಳು ಗುಪ್ತಗಾಮಿನಿಯಾಗಿ ಸಂಚರಿಸುತ್ತ ಇರುತ್ತವೆ ಅದಕ್ಕೆ ದ್ವೇ಼ಷ ಅಸೂಯೆಗಳೆಂಬ ಕೊಳಚೆ ನೀರನ್ನು ಹರಿಸಿದರೆ ಒಳ್ಳೆಯ ಭಾವನೆಗಳು ಅಲ್ಲೇ ಅದೃಶವಾಗುತ್ತವೆ. ದೇಹಗಳನ್ನು ಯಾರು ಬೇಕಾದರೂ ಆಳಬಹುದು ಆದರೆ ಮನಸ್ಸನ್ನು ಸಹೃದಯರು ಮಾತ್ರ ಆಳಲು ಸಾಧ್ಯ. ಹಾಗಂತ ನಮ್ಮ ಮನಸ್ಥಿತಿಯ ಕೀಲಿ ಕೈ ಅಪಾತ್ರರಿಗೆ ದೊರೆತರಂತೂ ಅಪಾಯವೇ. “ಮನಸ್ಸಿನ ಗಾಯಕ್ಕೆ ಮದ್ದಿಲ್ಲ”. ಮನಸ್ಸೆಂದರೆ ಭಾವನೆಗಳ ಗೂಡು ನಾಗರೀಕತೆಯ ಸಂಚನೆಗೊಳಗಾಗಿ ಆ ಭಾವನೆಗಳು ಎಂಬ ಮುದ್ದು ಪಕ್ಷಿಗಳನ್ನು ಓಡಿಸಬಾರದಷ್ಟೆ. ಮನಸ್ಸಿಗೆ “ಚಿತ್ತ” ಎಂದೂ ಕರೆಯುವುದಿದೆ ಅದು ಅರಳೆಯಂತೆ ಸೂಕ್ಷ್ಮ , ಹಾಗು ಹಗುರ ಅದಕ್ಕೆ ಆಘಾತವೆನ್ನುವ ಕಿಡಿ ಬಿದ್ದು ಚಿತ್ತಾಗದಂತೆ ನೋಡಿಕೊಳ್ಳಬೇಕಷ್ಟೆ. ಮನಸ್ಸು ಪರಿವರ್ತನಾಶೀಲವಾದದ್ದು . ಮನಸ್ಸು ಮುನಿಯದೆ, ಮರುಗದೆ ಸದಾ ಉಲ್ಲಾಸದಿಂದ ಇರಬೇಕು ಅಂತಹ ಮನೋಲ್ಲಾಸ ಬದುಕಿಗೆ ಚೇತೋಹಾರಿಯಾಗಿರುತ್ತದೆ.
ಮಾಸ್ಕ್ ಎಂಬ ಮುಖವಾಡ
ಇನ್ನು ಹಿರಿಯರ ವಿಚಾರಕ್ಕೆ ಬಂದರೆ ಮಾಸ್ಕ್ ಧರಿಸುವುದು ಎದುರಿಗಿರುವವರ ಸ್ವಾಸ್ಥ್ಯಕ್ಕೆ ಅನುಕೂಲವೆಂದು ಆದರೆ ಧರಿಸಿಧರವರಿಗೆ ಹೆಚ್ಚು ಲಾಭವಿಲ್ಲ ನಾವುಸಿರಾಡುವ ವಾಯು ನಮ್ಮ ದೇಹಕ್ಕೆ ಸೇರುತ್ತದೆ ಇತ್ಯಾದಿ… ಇತ್ಯಾದಿ… ವಾದಗಳಿವೆ ಇವುಗಳನ್ನು ಒತ್ತಟ್ಟಿಗೆ ಇಟ್ಟು ನಡಿಯಿಲ್ಲದ ನುಡಿ. ಆಂತರ್ಯದಲ್ಲಿ ಇನ್ನೇನೋ ಇಟ್ಟುಕೊಂಡು ಬಾಹ್ಯವಾಗಿ ಎಲ್ಲವೂ ಸರಿ ಎನ್ನುವ ಮಾಸ್ಕ್ ಹಾಕಿಕೊಂಡರಂತೂ ಕೋಪ ಹೇಗೆ ಹುಟ್ಟಿದ ಮನೆಯನ್ನೇ ಸುಡುತ್ತದೆಯೋ ಹಾಗೆ ಅನಗತ್ಯ, ಅಗೋಚರ ಮುಖಗವುಸುಗಳು ನಮ್ಮನ್ನು ಸುಡುತ್ತಿವೆ. ಅವುಗಳ ಕಪಿಮುಷ್ಟಿಯಿಂದ ಹೊರಬರಲಾರದೆ ಒಂದು ರೀತಿಯಲ್ಲಿ ತಹತಹವನ್ನು ಅನುಭವಿಸಬೇಕಾಗುತ್ತದೆ. “ಕೀಳರಿಮೆ ಅನ್ನುವ ಮಾಸ್ಕ್” ಹಾಕಿಬಿಟ್ಟರಂಥೂ ನಮ್ಮ ಸುತ್ತಲೂ ನಾವೇ ಬಂಧನದ ಬೇಲಿಯನ್ನು ಹಾಕಿಕೊಂಡಂತೆ . ಇನ್ನೊಂದಿದೆ ಅದೇ “ಈರ್ಷ್ಯೇ ಅನ್ನುವ ಮಾಸ್ಕ್”, ಇದು ಕೆಟ್ಟ ಆಲೋಚನೆಗಳನ್ನೇ ತರಿಸುವ ಮಾಸ್ಕ್. “ಸ್ವಪ್ರತಿಷ್ಟೆ ಅನ್ನುವ ಮಾಸ್ಕ್,” “ಸ್ವಹಂಅನ್ನುವ ಮಾಸ್ಕ್” ಇವುಗಳಂತೂ ಹೊಸದೇನನ್ನೂ ಕಲಿಯಲು ಬಿಡದವು, ತಪ್ಪುಗಳನ್ನೇ ಸಮರ್ಥನೆ ಮಾಡಿಕೊಳ್ಳುವ ಉದ್ಧಟತನ ಕಲಿಸುತ್ತವೆ. “ಸೋಗಲಾಡಿತನದ ಮಾಸ್ಕ್” ಕೂಡ ಇದೆ ಇದಂತೂ ತುಂಬಾ ಅಪಾಯಕಾರಿ ವ್ಯಕ್ತಿತ್ವಕ್ಕೆ ಕುಂದು ತರುತ್ತದೆ.
ಒಳ್ಳೆಯವರು ಎಂದು ಮೇಲ್ನೋಟಕ್ಕೆ ಧರಿಸಿರುವ ಅಪಾಯಕಾರಿ ಮಾಸ್ಕ್ಗಳನ್ನು ಕಳಚಿ ಮೆಲುನೋಟದ ಸಜ್ಜನಿಕೆಯ ಸೌಧರ್ಮಿಕೆಯೆಂಬ ಆರೋಗ್ಯಕರ ಮಾಸ್ಕ್ ಧರಿಸಬೇಕು.ನಮ್ಮಂಥರ್ಗತವಾಗಿರುವ ಈ ಕ್ಷುದ್ರ ವೈರಸ್ಗಳನ್ನು ಓಡಿಸಲು ಎಂತಹ ಮಾಸ್ಕ್ ಧರಿಸಬೇಕೆಂದರೆ ಏನೂ ತಿಳಿಯದೆ ಎಲ್ಲ ತಿಳಿದಂತೆ ಇರುವ ಮಾಸ್ಕ್ ಅಲ್ಲ! ಎಲ್ಲ ತಿಳಿದೂ ಏನೂ ತಿಳಿಯದಂತೆ ಇರುವ ಹೆಚ್ಚು ಅಧ್ಯಯನಶೀಲರಾಗುವ ಮಾಸ್ಕನ್ನು, ನಮ್ಮಂತರಂಗವನ್ನು ಲಾಕ್ ಮಾಡಿಕೊಳ್ಳುವುದರ ಬದಲಿಗೆ ಅನ್ಲಾಕ್ ಆಗಿರುವಂತೆ ನೋಡಿಕೊಳ್ಳಬೇಕಾದ ಮಾಸ್ಕ್. ವೈಜ್ಞಾನಿಕವಾಗಿ ಮಾಸ್ಕ್ ಬಳಸುವುದು ರಾಮಬಾಣ ಎಂಬಂತೆ ಸರಳತೆ, ಅನ್ಯರನ್ನು ನೋಯಿಸದ ಸ್ವಯಂ ಮಾರ್ಗದ ಮಾಸ್ಕ್ ಹಾಕಿದರೆ ಅದುವೇ ಕ್ಷೇಮ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್