- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಕಾಲಕ್ಕೆ ಒಂದು ಲಕ್ಷಣವಿದೆ; ಒಮ್ಮೆ ಸರಿದರೆ ಮತ್ತೆ ಅಂಥದ್ದೇ ಕ್ಷಣ ಬರಬಹುದೇ ಹೊರತೂ ‘ಅದೇ ಕ್ಷಣ’ ತಿರುಗಿ ಬರುವುದಿಲ್ಲ. ಕಾಲವನ್ನು ಹಿಂದಕ್ಕೋಡಿಸುವ, ಮುಂದಕ್ಕೋಡಿಸುವ, ನಿಲ್ಲಿಸುವ ಇತ್ಯಾದಿ ರೋಮಾಂಚಕ ಸಂಗತಿಗಳೆಲ್ಲವೂ ಸದ್ಯದ ಮಟ್ಟಿಗೆ ಪರಿಕಲ್ಪನೆಗಳಾಗಿಯೇ ಇವೆ. ಅಲ್ಲಲ್ಲಿ ಎಲ್ಲೋ ಚೂರು “ನಂಗೊತ್ತು”, “ಹಾಗೆ ಮಾಡಬಹುದು”, “ಅದು ಸಾಧ್ಯವಿದೆ”, ” ನಾವು ಯಂತ್ರ ತಯಾರಿಸಿದ್ದೇವೆ” ಇತ್ಯಾದಿ ಮಾತುಗಳು ಕೇಳಿಬಂದರೂ ಅದರ ಬಗೆಗಿನ ಸಾರ್ವಜನಿಕ ದಾಖಲೆಯಂತೂ ಇಲ್ಲ. ಹೀಗೆ ಜಾರಿಹೋಗುವ ಕ್ಷಣಗಳನ್ನು ನೆನಪುಗಳಾಗಿ ಪರಿವರ್ತಿಸಿ ಮನುಷ್ಯ ಶೇಖರಿಸಿಕೊಳ್ಳುವುದು ಬಹುಶಃ ಮಾನವ ಜನಾಂಗಕ್ಕೆ ಸಿಕ್ಕಂಥ ಬಹುದೊಡ್ಡ ವರ ಮತ್ತು ಶಾಪ. ಭೇಟಿ ನೀಡಿದ ಯಾವುದೋ ಜಾಗ, ಅಲ್ಲಿ ಸಿಕ್ಕ ಜನ, ಅಲ್ಲಿನ ಭಾಷೆ, ಕೂದಲ ಬಣ್ಣ, ಆಕಸ್ಮಿಕವಾಗಿ ಯಾರೋ ಅಪರಿಚಿತರು ನಕ್ಕಿದ್ದು, ಹೆಸರುಗಳೇ ಗೊತ್ತಿಲ್ಲದೇ ಕೇವಲ ಕಣ್ಣಲ್ಲಿ ಕಣ್ಣಿಟ್ಟು ಇಬ್ಬರೂ ನೋಡಿಕೊಂಡಿದ್ದು, ಯಾವತ್ತೋ ಯಾರೋ ಬೈದಿದ್ದು, ಅವಮಾನಿಸಿದ್ದು, ಹೀಯಾಳಿಸಿದ್ದು, ಮತ್ತೆ ಇನ್ನ್ಯಾರೋ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದು, ಹೆಗಲು ಕೊಟ್ಟು ಸಾಂತ್ವನಿಸಿದ್ದು, ಮಧ್ಯರಾತ್ರಿಯಲ್ಲಿ ಒಬ್ಬೊಬ್ಬರೇ ರಸ್ತೆಯುದ್ದಕ್ಕೂ ನಡೆದುಹೋಗಿದ್ದು, ಕತ್ತಲೆ ಕೋಣೆಯಲ್ಲಿ ಒಂಟಿಯಾಗಿ ಹಲವು ರಾತ್ರಿಗಳನ್ನು ಕಳೆದಿದ್ದು, ಬಿದ್ದು ಗಾಯ ಮಾಡಿಕೊಂಡಿದ್ದು, ಓಡುವ ಭರದಲ್ಲೋ, ತಿರುಗುವ ಭರದಲ್ಲೋ ಗೋಡೆಗೆ, ಕಿಟಕಿಗೆ, ಬಾಗಿಲಿಗೆ ತಲೆ, ಕಾಲು, ಕೈ ಬಡಿದುಕೊಂಡಿದ್ದು, ಏದುಸಿರು ಬಿಡುತ್ತಾ, ಕಿತ್ತುಹೋದ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಅದ್ಯಾವುದೋ ಬೆಟ್ಟವನ್ನು ಏರಿದ್ದು, ಸಮುದ್ರದ ಉಸುಕಿನಲ್ಲಿ ಅರೆಬರೆ ಬಟ್ಟೆಯೊಂದಿಗೆ ಅಲೆಗಳಿಗೆ ಮೈಯೊಡ್ಡಿ ಮಲಗಿದ್ದು, ಜಲಪಾತದ ನೀರಿನ ರಭಸಕ್ಕೆ ತಲೆ ಕೊಟ್ಟಿದ್ದು, ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಗೆರೆ ಎಳೆದಂತೆ ಕಲ್ಪಿಸಿಕೊಂಡು ನಕ್ಕಿದ್ದು, ಸಿನೆಮಾ ನೋಡಿ, ಪುಸ್ತಕ ಓದಿ ಭಾವುಕರಾಗಿದ್ದು ಹೀಗೆ ನೆನಪುಗಳು ಕೋಟಿ ಕೋಟಿ.. ಬದುಕಿನ ಈ ಎಲ್ಲಾ ವಿವರಗಳು ನಮ್ಮಲ್ಲಿ ನೆನಪುಗಳಾಗಿ ಜಮಾ ಆಗುವ ಆ ಪ್ರಕ್ರಿಯೆಯೇ ಅದೆಷ್ಟು ಮೋಹಕ. ಅಂಥ ಮೋಹಕತೆಯನ್ನು ಮತ್ತೆ ಮತ್ತೆ ಉದ್ದೀಪಿಸಲು ಮನುಷ್ಯ ಕಂಡುಕೊಂಡ ಮತ್ತೊಂದು ದಾರಿ ಛಾಯಾಗ್ರಹಣ. ಕಾಲವನ್ನೇ ನಿಲ್ಲಿಸಿದಂತೆ ಭಾಸವಾಗುವ, ಮತ್ತೆ ಮತ್ತೆ ಆ ಕ್ಷಣಕ್ಕೆ ಭೇಟಿ ಕೊಟ್ಟು ಅಲ್ಲಿನ ಎಲ್ಲವನ್ನೂ ಆರ್ದ್ರವಾಗಿ ಸ್ಪರ್ಶಿಸಿದಂತೆ ಭ್ರಮಿಸುವ ನಮ್ಮ ಮುಗ್ಧತೆಯ ಸಾಕ್ಷಿ ಪ್ರಜ್ಞೆ ಇದು. ಇಂಥದ್ದೇ ಒಬ್ಬ ಛಾಯಾಗ್ರಾಹಕಿ ಮತ್ತು ಅವಳ ನೆನಪುಗಳ ನಡುವಣ ಮುಖಾಮುಖಿಯೇ ಮರಾಠಿ ಚಿತ್ರ ‘ಸ್ಮೈಲ್ ಪ್ಲೀಸ್’
ಛಾಯಾಗ್ರಾಹಕರೆಂದರೆ ತಮ್ಮ ಸಮಯವನ್ನು ನಮ್ಮ ನೆನಪುಗಳಿಗಾಗಿ ಮೀಸಲಿಡುವವರು. ಹಲವು ಸಲ ಇನ್ನ್ಯಾರದ್ದೋ ಖುಷಿಯ ಗಳಿಗೆಗಳಲ್ಲಿ ತಾವು ಖುಷಿಪಡುತ್ತಾ, ಆಮೇಲೆ ಸಂಬಂಧವೇ ಇರದಂತೆ ಇದ್ದುಬಿಡುವವರು. ಹೊಟ್ಟೆಪಾಡಿಗಾಗಿ ಮಾಡಿದರೂ, ಅದೊಂದು ಕ್ಷಣವಿರುತ್ತದಲ್ಲಾ, ಅಲ್ಲಿ ಅದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಕ್ಯಾಮೆರಾವನ್ನು ಕೈಯಲ್ಲಿ ಹಿಡಿದ ತಕ್ಷಣ ಅದೊಂದು ವಿಶೇಷ ಅನುಭೂತಿ. ಹೊರಗೆ ಅದೆಷ್ಟೇ ಗದ್ದಲವಿದ್ದರೂ ನಮ್ಮೊಳಗಿನ ಮಾತು ನಮಗೆ ಕೇಳಿಸುವಂಥ ಒಂದು ವಾತಾವರಣ ಸೃಷ್ಟಿಯಾಗುತ್ತದೆ. ಚೌಕಟ್ಟಿನಲ್ಲಿ ನೋಡಿ ಕ್ಲಿಕ್ ಅಂತ ಬಟನ್ ಒತ್ತುವಾಗ ಅದೊಂದು ಪುಳಕ ಸಣ್ಣಗೆ ನಗುತ್ತದೆ. ಛಾಯಾಗ್ರಾಹಕರಿಗೆ ಬಹುಶಃ ಸ್ವಂತದ್ದೆನ್ನುವುದು ಏನಾದರೂ ಇದ್ದರೆ ಅದು ಈ ‘ಒಂದು ಕ್ಷಣ’ವೇ ಇರಬಹುದೇನೋ. ಊಟ ತಿಂಡಿ ನಿದ್ರೆ ಇವೆಲ್ಲಕ್ಕೂ ಆಮೇಲಿನ ಪ್ರಾಮುಖ್ಯತೆ. ಬಹುಶಃ ಇಷ್ಟಪಡುವ ಯಾವ ಕೆಲಸವಾದರೂ ಹೀಗೆಯೇ ಮನುಷ್ಯನಿಗೆ. ಅದೆಷ್ಟೋ ಸಲ ಜನರ ಸಾವಿರ ಸಾವಿರ ಛಾಯಾಚಿತ್ರಗಳನ್ನು ನಿರ್ಮಿಸಿದ ಛಾಯಾಗ್ರಾಹಕರ ಸ್ವಂತದ ಚಿತ್ರಗಳು ಸಿಕ್ಕುವುದು ಕೆಲವೇ ಕೆಲವು ಮಾತ್ರ. ಅದ್ಯಾರದ್ದೋ ಮನೆಯ ಸಮಾರಂಭ, ಅದ್ಯಾರದ್ದೋ ಹೊಸ ಉಡುಪು, ಅದೆಲ್ಲಿಯದೋ ಜಾಗ ಹೀಗೆ ಬೇರೆ ಬೇರೆ ಅನುಭವಗಳನ್ನು ತಮ್ಮ ಪುಟ್ಟ ಪೆಟ್ಟಿಗೆಯಲ್ಲಿ ಹಿಡಿದಿಟ್ಟುಕೊಳ್ಳುತ್ತಾ ಎಲ್ಲರ ಬದುಕಿನ, ನೆನಪಿನ ಭಾಗವಾಗುವ ಛಾಯಾಗ್ರಾಹಕರ ನೆನಪೇ ಕ್ಷೀಣಿಸತೊಡಗುತ್ತದೆ ಅಂತಾದರೆ ಅದೆಂಥ ಆಘಾತವಾಗಬಹುದು? ಈ ಚಲನಚಿತ್ರದ ಕತೆಯೂ ಅದೇ. ಪ್ರಖ್ಯಾತ ಫ್ಯಾಶನ್ ಫೋಟೋಗ್ರಾಫರ್ ಇದ್ದಕ್ಕಿದ್ದಂತೆಯೇ ನೆನಪುಗಳನ್ನು ಕಳೆದುಕೊಳ್ಳುತ್ತೇನೆ ಅನ್ನುವ ಸಂಗತಿಯ ಇದಿರು ಹೇಗೆ ವರ್ತಿಸಬಹುದು? ಅತ್ಯಮೂಲ್ಯವಾದ ನೆನಪುಗಳೇ ಕ್ಷೀಣಿಸುತ್ತಾ ಕ್ಷೀಣಿಸುತ್ತಾ ಕೊನೆ ಕೊನೆಗೆ ತನ್ನ ಅಸ್ತಿತ್ವವನ್ನೇ ಮರೆತುಬಿಡುವ ಮರೆವಿನ ರೋಗ ಅಥವಾ ಬುದ್ಧಿಮಾಂದ್ಯತೆಯೊಂದು ( dementia ) ಆವರಿಸಿಕೊಂಡರೆ ಏನಾಗಬಹುದು ಅನ್ನುವ ಕತೆಯೇ ಈ ಚಿತ್ರದ ವಸ್ತು.
ನೆನಪುಗಳು ಬರೀ ಚಿತ್ರಗಳಲ್ಲ; ಅವು ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರದೊಂದಿಗೆ ಹೊಂದಿರುವ ಬಾಂಧವ್ಯ. ನೆನಪುಗಳು ಕ್ಷೀಣಿಸಿದರೆ ಸಂಬಂಧದ ಭಾವತೀವ್ರತೆಯೇ ಮಂದವಾದಂತೆ; ಕ್ರಮೇಣ ಆ ಬಾಂಧವ್ಯವೇ ಅಗೋಚರವಾಗುತ್ತದೆ. ಸಂಬಂಧಗಳು ಗಟ್ಟಿಯಾಗೋದೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಒಬ್ಬರಿಗೊಬ್ಬರು ಹಂಚಿಕೊಂಡ ಕ್ಷಣಗಳಿಂದ, ಆಪ್ತವಾಗೋದೇ ಈ ನೆನಪುಗಳು ಕಟ್ಟಿಕೊಡುವ ಭಾವಪರವಶತೆಯಿಂದ. ಇಷ್ಟೂ ವರ್ಷ ಜೋಪಾನವಾಗಿಟ್ಟುಕೊಂಡ ಈ ಎಲ್ಲಾ ನೆನಪುಗಳು ಇಲ್ಲವಾಗುತ್ತವೆ ಎನ್ನುವ ಸತ್ಯ ನಮಗೆ ಮುಂಚಿತವಾಗಿಯೇ ಗೊತ್ತಾಗಿಬಿಟ್ಟರೆ ಅದು ಎಬ್ಬಿಸಬಹುದಾದ ಕೋಲಾಹಲವಾದರೂ ಎಂಥದ್ದಿರಬಹುದು? ಈ ಚಿತ್ರದಲ್ಲಿ ಒಂದು ದೃಶ್ಯವಿದೆ; ಯಾವಾಗ ತನಗೆ ಹೀಗೊಂದು ಕಾಯಿಲೆಯಿದೆ ಅಂತ ಆ ಛಾಯಾಗ್ರಾಹಕಿಗೆ ತಿಳಿಯುತ್ತದೆಯೋ ಆಗ ಆಕೆ ಎದ್ದುಹೋಗಿ ದೊಡ್ಡ ಗಾಜಿನ ಆಚೆ ನೋಡುತ್ತಾಳೆ. ಇಂಥ ಒಂದು ಮಹಾನಗರದಲ್ಲಿ ಎಲ್ಲವೂ ಇದ್ದು ನೆನಪುಗಳು ಅಸ್ಪಷ್ಟವಾಗುತ್ತಾ ಹೋಗುವುದನ್ನು ಆ ಮಸುಕು ಗಾಜಿನ ಆಚೆಗಿನ ನಗರದ ಕಟ್ಟಡಗಳ ಚಿತ್ರ ಅದೆಷ್ಟು ಅರ್ಥವತ್ತಾಗಿ ಹೇಳುತ್ತದೆ ! ನಾವು ಯಾವತ್ತೂ ಯಾರನ್ನಾದರೂ, ಯಾವುದನ್ನಾದರೂ ದ್ವೇಷಿಸಲು ತೊಡಗಿದರೆ ಅವರ ಕುರಿತಾಗಿನ, ಅದರ ಕುರಿತಾಗಿನ ಎಲ್ಲವನ್ನೂ ದ್ವೇಷಿಸುತ್ತೇವೆ ಅದು ದ್ವೇಷಿಸುವಂಥದ್ದು ಅಲ್ಲದೇ ಇದ್ದರೂ.. ಆಗ ಸರಿ ತಪ್ಪುಗಳ ನಡುವಿನ ವಿಶ್ಲೇಷಣೆ ಯಾವುದೇ ರೀತಿಯಲ್ಲೂ ನಮ್ಮ ಗಮನದಲ್ಲಿ ಇರುವುದಿಲ್ಲ; ಅಂತಿಮ ಸರಿ ತಪ್ಪುಗಳು ಅಂತ ಇದ್ದರೂ ಕೊನೆಯಲ್ಲಿ ಸರಿ ತಪ್ಪುಗಳು ವ್ಯಕ್ತಿಗತ ಅಲ್ಲವಾ?
ಕೆಲವೊಮ್ಮೆ ಯಾವ ಅದೃಷ್ಟವೋ ಅಥವಾ ಭಾಗ್ಯವೋ ಅನ್ನುವಂತೆ ಯಾವುದೋ ವ್ಯಕ್ತಿಯ ಪ್ರವೇಶ ನಮ್ಮೆಲ್ಲರ ಬದುಕಿನಲ್ಲಿ ಆಗಬಹುದು. ಆ ವ್ಯಕ್ತಿ ಇಷ್ಟೂ ದಿನದ ನಮ್ಮ ಬದುಕಿನ ಅರ್ಥವನ್ನೇ ಬದಲಾಯಿಸಬಹುದು. ಧೈರ್ಯ ತುಂಬಬಹುದು, ಹೊಸ ಸಾಧ್ಯತೆಗಳ ಬಾಗಿಲನ್ನು ತೆರೆದು ತೋರಿಸಬಹುದು, ನಾವೇ ನೋಡಿರದ ನಮ್ಮದೇ ವ್ಯಕ್ತಿತ್ವದ ಭಾಗಗಳೆಡೆಗೆ ಬೆಳಕು ಚೆಲ್ಲಬಹುದು, ಇನ್ನಷ್ಟು ಪ್ರೀತಿಸಲು ಹೇಳಿಕೊಡಬಹುದು, ಇನ್ನಷ್ಟು ನೆಮ್ಮದಿಯ ಹುಡುಕಲು ಕಲಿಸಬಹುದು, ಕನಸುಗಳಿಗೆ ರೆಕ್ಕೆ ಕಟ್ಟುವುದನ್ನು ಹೇಳಿಕೊಡಬಹುದು, ಯಾವುದೇ ಅಪೇಕ್ಷೆ ಇಲ್ಲದೆಯೇ ನಮ್ಮ ಸಂತೋಷವನ್ನು ಮರಳಿ ತರುವ ಪ್ರಾಮಾಣಿಕ ಪ್ರಯತ್ನ ಮಾಡಬಹುದು; ಅಂಥವರು ಬರಬೇಕು ಒಮ್ಮೆಯಾದರೂ! ‘ದೇವರು ಬಂದ ಹಾಗೆ ಬಂದರು’ ಅನ್ನುತ್ತೇವಲ್ಲಾ ಹಾಗೆ.. ಇಡೀ ಜಗತ್ತು ‘ಅದು ಅಷ್ಟು ಸುಲಭ ಅಲ್ಲ’ ಅಂತನ್ನುವಾಗ ಯಾರಾದರೂ ಒಬ್ಬರು ‘ಅದು ಅಷ್ಟು ಕಠಿಣವಲ್ಲ’ ಅಂತಂದರೆ ಆ ಇಡೀ ಚಿತ್ರಣಕ್ಕೆ ಸಿಗುವ ದೃಷ್ಟಿಕೋನವೇ ಬೇರೆ. ಛಾಯಾಗ್ರಹಣ ಇರಬೇಕಾದುದೂ ಹಾಗೇ ಅಲ್ಲವಾ; ಬೇರೆ ದೃಷ್ಟಿಕೋನ!
ದೊಡ್ಡವರಾಗುತ್ತಾ ಆಗುತ್ತಾ ಸಣ್ಣ ಸಣ್ಣ ಸಂಗತಿಗಳನ್ನು ಮರೆಯುತ್ತಾ ಅಥವಾ ಮರೆತಂತೆ ನಟಿಸುತ್ತಾ ದಿನದೂಡುವ ನಮ್ಮ ಮಧ್ಯೆ ಫೋಟೋ ತೆಗೆಯುವ ಮುಂಚೆ ಫೋಟೋ ತೆಗೆಸಿಕೊಳ್ಳುವವರ ತುಟಿಗಳ ಮೇಲೆ ಇರಬೇಕಾದ ಒಂದು ಸಣ್ಣ ಸಂಗತಿಯ ನೆನಪಿಸುವ ಪ್ರಕ್ರಿಯೆಯೇ ‘ಸ್ಮೈಲ್ ಪ್ಲೀಸ್’
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್