- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
- ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು - ಆಗಸ್ಟ್ 10, 2022
೧
ಉಳಿಗೊಡ್ಡಿ ಉಳಿದಾನ ಕೆತ್ತಿ ತನು ತನ ತಾನ
ತಲೆ ತುಂಬಿದೆ ಕೊಬ್ಬು ಕತ್ತಲೆ
ಕೆತ್ತನೆ ಗುರುಗಳ ಮೊದಲ ಮಾತು
ನೀನೇ ನಿನ್ನ ಕೆತ್ತಬೇಕು!
ಮೆತ್ತಿದ ಸ್ವತ್ತು ಮತ್ತು ಒಳಗೂ ಹೊರಗೂ
ಸೋಪು ಹಾಕಿ ತಿಕ್ಕಿ ತೊಳೆದು
ಕ್ರಾಪು ಮಾಡಿ,
ತಲೆ ಕ್ಲಿಯರ್ ಆದಮೇಲೆ
ಕ್ಯಾಟ್ರಾಕ್ಟು ಕಣ್ಣ ಪೊರೆ
ಕೆರೆ ಕೆರೆದು ನೋಟ ಸ್ಪಷ್ಟವಾಗಿ
ಎದೆಗಿಳಿದೆ!
ಎದೆಯೊಳಗೆ ರಕ್ತನಾಳಗಳ
ಒಳಪದರದಲ್ಲಿ ಕೊಲೆಸ್ಟರಾಲ್
ವರ್ಷ ವರ್ಷಗಳಿಂದ
ಪದರ ಪದರವಾಗಿ ಡೆಪಾಸಿಟ್ಟು
ಭಾವಸಂಚಾರ ರಕ್ತ ತಡೆಗಟ್ಟಿ
ಹೃದಯ ಕಂಪಿಸಿತು
ಎದೆ ತೆರೆದು ಸರ್ಜರಿ
ಬೈಪಾಸು ಕಸಿ ಕಟ್ಟಿ
ಎದೆಗದೇನೋ ಸಮ ಸಮ
ಹೀಗೇ ಇದ್ದರೆ! ನಡುಸೊಂಟ
ಚಂದ ಬೇಡವೇ ಏನಿದು ಕರ್ಮ!
ಕೆತ್ತುತ್ತಲೇ ಇರುವೆ
ಜನುಮಜನುಮದಿಂದ
ಮೆತ್ತಿದ್ದನ್ನು ಸಂಗ್ರಹಿಸಿ ಹಿಗ್ಗಿದ
ನನ್ನದೆಲ್ಲವನ್ನೂ..
ನನ್ನದೇ ಕೋಶಗಳು, ಕೋಶವೇ ನಾನಾಗಿ,
ನನ್ನದೇ ಗುರುತಾಗಿ
ಶ್ರೀಮಂತಿಕೆಯಾಗಿ ಬಿರಿದ ಬಿರುದಾಗಿ
ನೋವಾಗುತ್ತೆ, ಕೆತ್ತಿ ಕಳೆಯುವುದು
ಕಷ್ಟ
ಕಷ್ಟ ಪಟ್ಟು ತಿಂದುಂಡು ಬೆಳೆಸಿ
ತಾನಾದ ತನ್ನನ್ನೇ..
೨
ಗಂಡ ಬ್ಲಾಕ್ ಅಂಡ್ ವೈಟ್ ಹೆಣ್ತಿ ಬಣ್ಣ ಬಣ್ಣನೇ
ಗಂಡ ಎತ್ತರದ ಕಾಲೂರಿ
ನಿಂತವ್ನೆ
ನಡು- ವಯಸ್ಸು
ಉದರ ಗಂಭೀರ ಪೀನ ಮಸೂರ!
“ರೀ ಸ್ವಲ್ಪ ಮೆಲ್ಲ ಮಾತಾಡ್ರೀ”
ಅವಳು ಕಿವಿ ಹಿಡಿದು ತಿರುವುತ್ತಾಳೆ!
ಒಳಗೊಳಗೇ ಪಿಸುಗುಟ್ಟುವ
ರಸನಿಮಿಷಗಳ ನೆನಪು ಪೆಟ್ಟಿಗೆಯೊಳಗೆ
ಮಕ್ಕಳಿಗೆ ಪಂಚತಂತ್ರವೂ!
ಆಕೆಗಿಷ್ಟದ ಹಾಡು ಅವನು
ಹಾಡುತ್ತಾನೆ! ರಂಗೋಲಿಯಾಗಿ
ಅರಳುತ್ತಾನೆ!
ಎಲ್ಲೋ ದೂರದಾಕೆಯ
ಮೇಘ ಸಂದೇಶಕ್ಕಾಗಿ ಕಿವಿಯರಳಿಸಿ
ಕೋಡೆತ್ತರ ಏರಿಸಿ ಆಲಿಸುತ್ತಾನೆ
ಕೇಳಿದಂತೆ ಹೇಳುತ್ತಾನೆ!
ಹೇಳಿದಂತೆ ಕೇಳುತ್ತಾನೆ!!
ಅರ್ರೇ ಅವಳದ್ದು ಬಣ್ಣ ಬಣ್ಣನೆ
ಫಳ ಫಲ ಪರ್ಪಂಚ!
ವಯಸ್ಸಾದರೇನಂತೆ! ಗಗನ ಚುಂಬನದ ಚಿಂತೆ!
ಕನಸು ಹಕ್ಕಿಗಳು ಅವಳಾಗಸದಲ್ಲಿ
ಮೋಡ ಹಾಸಿಗೆಯಲ್ಲಿ
ಹಸಿರು ಹಸಿರು ನೆಲ
ತಳದಲ್ಲಿ,
ಹದಿನೆಂಟು ಮೊಳದ ಸೀರೆ
ಚಿತ್ರ ಚಿತ್ತ ಎಳೆ ಎಳೆ
ಕಪ್ಪು ಬಾರ್ಡರ್ರು ಈಗಿನ ಸ್ಟೈಲು
ರೀ!..ಚಂದ ಕಾಣ್ಬೇಕ್ರೀ!
ಕತೆ,ಕವಿತೆ, ಧಾರಾವಾಹಿ
ಜಾಹೀರಾತು ಬಿಟ್ಟಿರಾ!
ಬಣ್ಣ, ಸಂಯೋಜನೆ, ಕಾಂಟ್ರಾಸ್ಟು
ಕಾಮನ ಬಿಲ್ಲೂರೀ
ಕವಿತೆ ಓದ್ತಾ, ಇದೇನು
ಗಂಡ ಹೆಣ್ತಿ ಅನ್ಕೊಂಡ್ರಾ!
ಅಲ್ಲ ಓದುಗರೇ!
ಇವುಗಳು ಬರೇ ಡಬ್ಬ!
ಕರೆಂಟಿದ್ದರೆ ಮಾತ್ರ ಕೆಲಸ
ಕೊನೆಗೊಂದು ದಿನ
ಫ್ಯೂಸು ಉಡೀಸು ಆದಾಗ
ಕೆಲವರು ಹೂಳುತ್ತಾರೆ ಮಣ್ಣಲ್ಲಿ
ಕೆಲವರು ಉರಿಸಿ ಬೂದಿಯಾಗಿಸುತ್ತಾರೆ!
ಇನ್ನೂ ಕೆಲವರು ಗುಜರಿಗೆ ಮಾರುತ್ತಾರೆ ಸ್ಪೇರ್ ಪಾರ್ಟು
ಉಪಯೋಗಕ್ಕೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ