- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
“ಮದ್ದ ಮೆದ್ದವನು ಪ್ರಬುದ್ಧನೆಂದೆನಬೇಡ ಮದ್ದು ಸಂಕಟವನೆಬ್ಬಿಸಲು ಹೆಡೆಕತ್ತ ಗುದ್ದಿಕೊಳುತಿಹುದು ಸರ್ವಜ್ಞ”
ಎಂದು ಮಾದಕವಸ್ತುವಿನ ಅಪಾಯವನ್ನು ಶತಮಾನಗಳ ಹಿಂದೆಯೇ ಸರ್ವಜ್ಞ ಹೇಳಿದ್ದಾನೆ. ಬಾಲಿವುಡ್ ನಟ ಸುಶಾಂತ್ ಆತ್ಮಹತ್ಯೆ ಪ್ರಕರಣ, ಅದಕ್ಕೆ ತಳುಕು ಹಾಕಿಕೊಂಡಿರುವ ಮಾದಕದ್ರವ್ಯ ಮಾರಾಟ, ಸೇವನೆಯ ಸುದ್ದಿ ಈಗ ಅತೀ ಹೆಚ್ಚು ಪ್ರಚಲಿತವಾಗಿದೆ. ಸಮೂಹಮಾದ್ಯಮಗಳು ಜನರಿಗೆ ಮಾದಕ ವ್ಯಸನಿಗಳು ಯಾರು? ಅದು ಹೇಗೆ ದೊರೆಯುತ್ತದೆ? ಎಲ್ಲಿಂದ ತರಿಸುತ್ತಾರೆ? … ಈ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಕೊಡುವ ಸಲುವಾಗಿ ತೋರಿಸುತ್ತಿರುವ ಅಸ್ಥೆಯನ್ನು ಮಾದಕ ದ್ರವ್ಯ ಸೇವನೆಯಿಂದ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತಿಲ್ಲ. ಕೆಟ್ಟದ್ದು ಎನ್ನುತ್ತಿದ್ದಾರೆ ಆದರೆ ಏಕೆ ಕೆಟ್ಟದ್ದು? ಎಂದು ಹೇಳುತ್ತಿಲ್ಲ. ಕುತೂಹಲ,ಅತೀ ಕುತೂಹಲ, ಕೆಟ್ಟ ಕುತೂಹಲ ಮನುಷ್ಯನ ಸಹಜ ಗುಣ ! ಹೀಗಿರುವಾಗ ಭಾವೀ ನಾಗರೀಕರ ಸ್ವಸ್ಥ ಸಮಾಜದ ಬಗ್ಗೆ ನಾವು ಯೋಚನೆ ಮಾಡಲೇಬೇಕು. ಕುತೂಹಲಗಳು ಮನುಷ್ಯನನ್ನು ವ್ಯಸನಿಯನ್ನಾಗಿಸಬಹುದು.
ಹೇಳಿ ಕೇಳಿ ಹೆಚ್ಚಿನ ಯುವ ಜನತೆ ಬಿಂದಾಸ್ ಬದುಕನ್ನು ಬದುಕಲು ಬಯಸುವವರು. ಅದಕ್ಕೆ ಏನು ಬೇಕೋ ಅಂದರೆ ಮೋಜು, ಮಸ್ತಿ, ಪಾರ್ಟಿಗಳು, ಅದರಲ್ಲೂ ಬೇರೆ ಬೇರೆ ವಿಧಾನದ ಪಾರ್ಟಿಗಳನಮ್ನು ಆಯೋಜಿಸಿಕೊಳ್ಳುತ್ತಾರೆ. ಕ್ಷಣಿಕ ಸಂತೋಷಕ್ಕೆ ಈ ಡ್ರಗ್ಸ್ ಸೇವನೆ ಅಪಾಯಕಾರಿಯೇ ಸರಿ.. ಮೊದಮೊದಲು ಕುತೂಹಲಕ್ಕೆ, ನಂತರ ಒತ್ತಡ ನಿವಾರಣೆಗೆ, ನಂತರ ಚಟಕ್ಕೆ ಸೇವಿಸುವುದು ಪ್ರಾರಂಭವಾಗುತ್ತದೆ.
“ಮಾದಕ ದ್ರವ್ಯಗಳು” ಹೆಸರೇ ಹೇಳುವಂತೆ ಇವುಗಳು ಹೆಚ್ಚು ದ್ರವ್ಯ ಅರ್ಥಾತ್ ಬೆಲೆಯುಳ್ಳದ್ದು, ಮತ್ತಿನಲ್ಲಿ, ಅಮಲಿನಲ್ಲಿ ನಶೆಯಲ್ಲಿ , ಉನ್ಮಾದದಲ್ಲಿ ಸೇವಿಸಿದವರನ್ನು ಇದು ಇರಿಸುತ್ತದೆ. ಇದನ್ನು ಮನಸ್ಸಿಗೆ ಬೇಕಾದ ಅನುಕೂಲವಾದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿಕೊಳ್ಳುವುದು ಎನ್ನಬಹದು. ಮಾದಕದ್ರವ್ಯಗಳಲ್ಲಿ ಕೆಫೇನ್ನ ಅಂಶ ಹೆಚ್ಚಿರುವುದರಿಂದ ಪುನಃ ಪುನಃ ಬೇಕು ಅನ್ನಿಸುತ್ತದೆ. ಆ ಬೇಕುಗಳ ಒತ್ತಾಯದ ಆಸೆಯಿಂದ ತೆಗೆದುಕೊಂಡು ಮನೋಸಾಮರ್ಥ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.
ಇದು ಮಿದುಳಿಗೆ ಸಂಬಂಧಿಸಿದ್ದು. ಡೊಪೊಮೈನ್ ಮನುಷ್ಯನಿಗೆ ಸಹಜವಾಗಿ ಸಂತೋಷ ಕೊಡುವ ಹಾರ್ಮೋನ್ ಇದನ್ನು ಹ್ಯಾಪಿ ಹಾರ್ಮೋನ್ ಎಂದು ಕರೆಯುತ್ತಾರೆ. ಡ್ರಗ್ಸ್ ಸೇವನೆಯಿಂದ ಕೃತಕವಾಗಿ ಮಿದುಳಿನಲ್ಲಿ ಡೊಪೊಮೈನ್ ಬಲವಂತದಿಂದ ಬಿಡುಗಡೆಯಾಗುತ್ತದೆ. . ಇದು ಕೃತಕವಾದ್ದರಿಂದ ಮಿದುಳು ತನ್ನ ಸ್ವಂತ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ವ್ಯಸನಿಗಳು ಸಹಜವಾಗಿ ಲವಲವಿಕೆಯಿಂದ, ಉತ್ಸಾಹದಿಂದ ಇರಲು ಸಾಧ್ಯವಾಗದಾಗ ಮಾದಕ ವಸ್ತುವನ್ನು ಹೇಗಾದರೂ ಸರಿ ಪಡೆದು ಬಳಸುತ್ತಾರೆ. ಇದರಿಂದ ಕೃತಕವಾಗಿ ಉದ್ದೀಪನಗೊಂಡ ಮಿದುಳು ತನ್ನ ಸಹಜ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ. ತತ್ಪರಿಣಾಮವಾಗಿ ಕೌಟುಂಬಿಕ, ಸಾಮಾಜಿಕ ವರ್ತನೆಗಳು. ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ, ಇತ್ಯಾದಿಗಳಲ್ಲಿ ಬದಲಾವಣೆಗಳಾಗುತ್ತವೆ. ಮೆದುಳಿನ ಬುದ್ಧಿ, ಹೃದಯದ ಬುದ್ಧಿಗಳು ಕೆಡುತ್ತವೆ ಅಸಹಜ ಬದುಕು ಪ್ರಾರಂಭವಾಗುತ್ತದೆ ಇದನ್ನು ಮನೋವಿಕಲ್ಪ ಎನ್ನಬಹುದು. ಇದನ್ನೆ ಸರ್ವಜ್ಞ” ಭಂಗಿಯನು ಸೇದುವನ ಭಂಗವನು ಏನೆಂಬೆ ಭಂಗಿಯಾಂಗು ತಲೆಗೇರ ಕಾಡುವಾ ಮಂಗನಂತಿಹನು ಸರ್ವಜ್ಞ” ಎಂದಿದ್ದಾನೆ.
ಶ್ವಾಸಕೋಶ, ಯಕೃತ್ ಮುಂತಾದ ಸಾಂಕ್ರಾಮಿಕವಲ್ಲದ ಹಾಗು ಸಾಂಕ್ರಾಮಿಕ ರೋಗಗಳಾದ ಏಡ್ಸ್ ಮತ್ತು ಇತರೆ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಇರುತ್ತವೆ. ಈ ಎಲ್ಲಾ ಕಾರಣಗಳು ಮಾದಕದ್ರವ್ಯ ವ್ಯಸನಿಯನ್ನು ಒಂಟಿಯಾಗಿರಿಸಲು ಪ್ರೇರೇಪಿಸುತ್ತವೆ ಇದೊಂದು ಅಪಸವ್ಯ. ಮಾದಕ ದ್ರವ್ಯಗಳು ಮುಖ್ಯವಾಗಿ ಮಿದುಳಿನ ಮೇಲೆ ಪ್ರಭಾವ ಭೀರುವುದರಿಂದ ವೈದ್ಯರು ನೀಡುವ ಚಿಕಿತ್ಸೆಗಳಿಗೆ ಸರಿಯಾಗಿ ವ್ಯಸನಿಗಳು ಸ್ಪಂದಿಸದೆ ಇರಬಹುದು. ಇದು ಅತಿರೇಖಕ್ಕೆ ಹೋದಾಗ ಕುಟುಂಬಸ್ಥರಿಗೆ ವ್ಯಸನಿಗಳು ಸಹಜವಾಗಿ ಹೊರೆಯಾಗುತ್ತಾರೆ. ಇಳಿ ವಯಸ್ಸಿನ ತಂದೆ ತಾಯಿಗಳನ್ನು ನೋಡಿಕೊಳ್ಳುವುದರ ಬದಲು ವ್ಯಸನಕ್ಕೆ ಒಳಗಾದ ಮಕ್ಕಳನ್ನು ಹಿರಿಯರೆ ನೋಡಿಕೊಳ್ಳಬಾಕಾಗುತ್ತದೆ . ವ್ಯಸನಿಗಳಿಗೆ ಬೇಕಾದ ಚಿಕಿತ್ಸೆ, ಉಪಚಾರ, ಅವರನ್ನು ನೋಡಿಕೊಳ್ಳುವ ಬಗೆ ಇತ್ಯಾದಿಗಳಿಂದ ಮತ್ತೆ ಪೋಷಕರಿಗೆ ಆರ್ಥಿಕ ಹೊರೆ ಸಂಭವಿಸುತ್ತದೆ. ಒತ್ತಡ! ಒತ್ತಡದಿಂದ ಮಾದಕದ್ರವ್ಯ ಸೇವನೆ, ಇದರಿಂದ ಅಮಲು. ಪರಿಣಾಮ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು, ಆರ್ಥಿಕ ಅಪರಾಧಗಳು ಸಂಭವಿಸುತ್ತವೆ. ತತ್ಪರಿಣಾಮವಾಗಿ ಕೌಟುಂಬಿಕ ಹಾಗು ಸಾಮಜಿಕ ಸೌಖ್ಯ ಎರಡೂ ಹಾಳಾಗುತ್ತದೆ. ಇದನ್ನೆ ಸರ್ವಜ್ಞ ತನ್ನ ತ್ರಿಪದಿಯಲ್ಲಿ ಅಂಗಿ ಅರಿವೆಯ ಮಾರಿ ಭಂಗಿಯನು ತಾ ಸೇದಿ ಮಂಗನಂದದಲಿ ಕುಣಿವಾತ ಭವ ಭವದಿ ಭಂಗಗೊಳುತಿಹನು ಸರ್ವಜ್ಞ ಎಂದಿದ್ದಾನೆ.
‘ಅಕಾಲದಲ್ಲಿ ಮಳೆ ಬಂದರೆ ಹೇಗೆ ಬೆಳೆಯಾಗುವುದಿಲ್ಲವೋ” ಹಾಗೆ, ‘ಹದ ಬಂದಾಗ ಬಿತ್ತಬೇಕು’ ಅನ್ನುತ್ತಾರಲ್ಲ ಹಾಗೆ ಯುವಜನರಿಗೆ ಮಾದಕ ದ್ರವ್ಯದ ತಂದೊಡ್ಡುವ ಆಪತ್ತುಗಳ ಕುರಿತು ಜಾಗೃತಿಯನ್ನು ಹಿರಿಯರು, ಮನೋವಿಜ್ಞಾನಿಗಳು, ವೈದ್ಯರು, ಬರಹಗಾರರು, ಸಮೂಹ ಮಾಧ್ಯಮಗಳು ಮೂಡಿಸಬೇಕು. ಮಾದಕದ್ರವ್ಯದಿಂದ ಆಗುವ ಸಂಚನೆಗಳನ್ನು ಅಭಿಯಾನದ ಮಾದರಿಯಲ್ಲಿ ಅರ್ಥಮಾಡಿಸಬೇಕಾಗಿದೆ. ಇಂಥ ಬಹುದೊಡ್ಡ ಸಮಾಜಮುಖಿ ಕೆಲಸಕ್ಕೆ ಇದು ಸಕಾಲವಾಗಿದೆ. ಕಬ್ಬಿಣ ಬಿಸಿಯಾಗಿರುವಾಗಲೇ ಬಡಿದು ಸಮಮಾಡಿ ನಮಗೆ ಬೇಕಾದ ಹಾಗೆ ಸರಿಪಡಿಸಿಕೊಳ್ಳಬೇಕಲ್ಲವೇ…!
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ