- ಚಾಚಾ ನೆಹರು ಮತ್ತು ನಮ್ಮ ಮಕ್ಕಳು - ನವೆಂಬರ್ 14, 2023
- ಮಾನವತಾವಾದಿಯ ಹೆಜ್ಜೆಗಳು……. - ಏಪ್ರಿಲ್ 14, 2021
- ಯುಗಾದಿ – ಎರಡು ಹಾದಿ… - ಏಪ್ರಿಲ್ 13, 2021
ಡ್ರಗ್ಸ್, ಸೆಕ್ಸ್ ಸ್ಕ್ಯಾಂಡಲ್, ದೋಖಾ, ಮರ್ಡರ್, ಫ್ರಾಡ್, ಕರಪ್ಷನ್, ಸ್ಯೂಸೈಡ್ ಏನು ಹೊಸ ವಿಷಯವೇ ಗಾಬರಿಯಾಗಲು.
ಮಾಧ್ಯಮಗಳು ಈ ಡ್ರಗ್ ದಾಳಿಯನ್ನು ಏನೋ ಮಹಾ ಸಂಶೋಧನೆ ಎಂದು ತಿಳಿದು ಚಿಕ್ಕ ಮಕ್ಕಳು ಮೃಗಾಲಯದಲ್ಲಿ ಹುಲಿ ಕಂಡಂತೆ ಆಡುತ್ತಿವೆ.
ಡ್ರಗ್ ಮಾಫಿಯಾ ಹೊಸ ವಿಷಯವೇ ಅಲ್ಲ. ಬಹಳ ಹಿಂದಿನಿಂದಲೂ ಇದೆ. ಅತ್ಯಂತ ಶ್ರೀಮಂತರ ಶೋಕಿ ಮತ್ತು ಕಡು ಬಡವರ ಆಕರ್ಷಣೆಯ ಈ ಡ್ರಗ್ ಚಟಗಳು ಸಮಾಜದ ಒಂದು ಸೀಮಿತ ವರ್ಗದ ಅವಿಭಾಜ್ಯ ಅಂಗ. ಈ ಪೋಲಿಸ್ ದಾಳಿಗಳು, ವಶಪಡಿಸಿಕೊಳ್ಳುವಿಕೆ, ಬಂಧನ, ಪ್ರತಿಷ್ಠಿತರ ಹೆಸರುಗಳು ಎಲ್ಲವೂ ಹಳಸಲು ಸುದ್ದಿಗಳೇ.
ಯಾರು ಏನೇ ಹೇಳಲಿ, ಈ ಡ್ರಗ್ ಎಂಬುದು ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗು ಭಾರತ ದೇಶದಲ್ಲಿ ನಿಷೇಧಿಸಲೇ ಬೇಕಾದ ಮಾದಕ ದ್ರವ್ಯ. ( ಒಂದು ವೇಳೆ ವೈದ್ಯಕೀಯ ಕಾರಣಗಳಿಗಾಗಿ ಇದನ್ನು ಸಮರ್ಥಿಸಿದರೆ ಒಪ್ಪಿಕೊಳ್ಳಬೇಕಾಗುತ್ತದೆ. )
ನೆಹರು ಅವರಿಂದ ಮೋದಿಯವರೆಗೆ, ಕರ್ನಾಟಕದಲ್ಲಿ ಕೆ.ಸಿ. ರೆಡ್ಡಿಯವರಿಂದ ಯಡಿಯೂರಪ್ಪನವರೆಗೆ ಏನು ಕಡಲೆ ಪುರಿ ತಿನ್ನುತ್ತಿದ್ದಾರೆಯೇ ? ಒಬ್ಬ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ಮತ್ತು ಅದರ ಬಗ್ಗೆ ಗಂಭೀರ ಆಕ್ರೋಶ ವ್ಯಕ್ತಪಡಿಸುವ ವಿಷಯವಿದು. ಆಡಳಿತ ವ್ಯವಸ್ಥೆಗೆ ಏನಾಗಿದೆ. ಉತ್ಪಾದನೆ ಮೂಲಗಳನ್ನು, ವಿದೇಶಿ ಮೂಲಗಳನ್ನು ನಿಯಂತ್ರಿಸುವ ಬದಲು ಅದರ ವ್ಯಾಪಾರ ಮತ್ತು ಗ್ರಾಹಕರನ್ನು ನಿಯಂತ್ರಿಸಲು ತಮ್ಮ ಶ್ರಮವನ್ನು ವ್ಯರ್ಥ ಮಾಡುತ್ತಿದ್ದಾರೆ.
ಸಮಾಜದ ಕೆಲವೇ ಜನರು ಇದಕ್ಕೆ ದಾಸರಾಗಿದ್ದರೂ ಅದರ ಪರಿಣಾಮ ಮಾತ್ರ ಗಂಭೀರವಾದುದು. ಅದನ್ನು ನಿಯಂತ್ರಿಸಲು ಈ ಟಿವಿ ಮಾಧ್ಯಮಗಳು ಯಾರೋ ಕೆಲವು ನಟ ನಟಿಯರು ನಿವೃತ್ತ ಪೋಲೀಸ್ ಅಧಿಕಾರಿಗಳ ಅಭಿಪ್ರಾಯ ಕೇಳಿದರೆ ಅದು ಮಕ್ಕಳಾಟವಾಗುತ್ತದೆ. ನನ್ನ ಪ್ರಕಾರ ದೇಶದ ಸಂಸತ್ತು ಮತ್ತು ರಾಜ್ಯದ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಇದರ ಬಗ್ಗೆ ಚರ್ಚಿಸಿ ತಜ್ಞರ ಸಮಿತಿ ರಚಿಸಿ ಹೊಸ ರೀತಿಯ ಕಾರ್ಯಯೋಜನೆ ರೂಪಿಸಬೇಕಿದೆ. ಬಹುಶಃ ಇದನ್ನು ಮೂಲೋತ್ಪಾದನೆ ಮಾಡಲು ಭಯೋತ್ಪಾದನೆ ನಿಗ್ರಹದಂತ ಗಂಭೀರ ಇಲಾಖೆಯ ಅವಶ್ಯಕತೆ ಇದೆ. ಬಹುತೇಕ ಕ್ರಿಮಿನಲ್ ಅಪರಾಧಗಳು ಇದರಿಂದಾಗಿಯೇ ನಡೆಯುತ್ತಿದೆ. ಯುವಕರು ತಮ್ಮ ಬದುಕನ್ನೇ ನಾಶಮಾಡಿಕೊಳ್ಳುತ್ತಿದ್ದಾರೆ.
ಈ ಟಿವಿ ಮಾಧ್ಯಮದವರಿಗೆ ಸ್ವಲ್ಪವೂ ವಿವೇಚನೆ ಇಲ್ಲ. ಸಮಸ್ಯೆಯ ಆಳ ಮತ್ತು ಪರಿಹಾರದ ಬಗ್ಗೆ ಮಾತನಾಡುವುದು ಬಿಟ್ಟು ಅದನ್ನು ಜನಪ್ರಿಯ ಮತ್ತು ಗ್ಲಾಮರಸ್ ಮಾಡಲು ಪ್ರಯತ್ನಿಸುತ್ತಿವೆ. ಭಾಗವಹಿಸುವ ಪ್ರತಿಯೊಬ್ಬರು ಅವರ ದೃಷ್ಟಿಕೋನದಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಮಗ್ರ ಚಿಂತನೆ ಇರುವುದೇ ಇಲ್ಲ. ಅವರ ಹೆಸರು, ಇವರ ಹೆಸರು ಎಂಬ ಕುತೂಹಲ ಮೂಡಿಸುವುದೇ ಅವರ ಕೆಲಸ. ಯಾರ ಹೆಸರಾದರೇನು ಸಮಸ್ಯೆಗಳನ್ನು ಪರಿಹರಿಸುವುದೇ ಮುಖ್ಯ. ನಟನಾಗಲಿ, ನಟಿಯಾಗಲಿ, ರಾಜಕಾರಣಿಯಾಗಲಿ ನಮಗೇನು. ಇದು ವೈಯಕ್ತಿಕ ಸಮಸ್ಯೆಯಲ್ಲ. ಮಾದಕ ದ್ರವ್ಯ ಮುಕ್ತ ರಾಷ್ಟ್ರ ಮಾಡಲು ಉಪಾಯ ಹುಡುಕಬೇಕಿದೆ.
ಇದು ವಿವಿಧ ಹಂತಗಳ ಕಾರ್ಯಕ್ರಮವಾಗಿರಬೇಕು. ಕೇವಲ ಕಾನೂನಿನಿಂದ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಸಮಾಜದ ನೈತಿಕ ಮೌಲ್ಯಗಳನ್ನು ಹೆಚ್ಚಿಸುವುದು, ಯುವ ಜನಾಂಗ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅತ್ಯುತ್ತಮ ಕ್ರೀಡಾ ಸಂಕೀರ್ಣ ಮತ್ತು ಸಾಂಸ್ಕೃತಿಕ ಭವನಗಳನ್ನು ನಿರ್ಮಿಸುವುದು, ಮಾದಕ ವ್ಯವಸನಿಗಳು ಯಾರೇ ಆಗಿದ್ದರು ಯಾರ ಅನುಮತಿಯ ಅವಶ್ಯಕತೆ ಇಲ್ಲದೆ ಕೊರೋನಾ ವೈರಸ್ ಪೀಡಿತರಂತೆ ನೇರವಾಗಿ ಸರ್ಕಾರವೇ ಅವರನ್ನು ಅರೆ ಜೈಲಿನಂತ ಸುಧಾರಣಾ ಕೇಂದಕ್ಕೆ ಸೇರಿಸಿ ಸಂಪೂರ್ಣ ಗುಣಮುಕ್ತ ಎಂದು ವೈದ್ಯರು ಹೇಳಿದ ನಂತರವೇ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಖ್ಯವಾಗಿ ಆ ಮಾದಕ ವಸ್ತುಗಳು ಉತ್ಪಾದಕರನ್ನು ಭಯೋತ್ಪಾದಕರೆಂದೇ ಪರಿಗಣಿಸಬೇಕು.
ಈ ಇಚ್ಛಾಶಕ್ತಿ ಇಲ್ಲದೆ, ಸುಮ್ಮನೆ ದಾಳಿಗಳು, ತನಿಖೆ ಬಂಧನ ಎಲ್ಲವೂ ಕೇವಲ ಕಣ್ಣೊರೆಸುವ ತಂತ್ರ ಮಾತ್ರ.
ಎಷ್ಟೋ ಸಾಮಾನ್ಯ ಜನರಿಗೆ ಮಾದಕವಸ್ತುಗಳ ಸಿಗುವ ಜಾಗವಿರಲಿ, ಹೆಸರೇ ಗೊತ್ತಿಲ್ಲ. ಈಗ ಮಾಧ್ಯಮಗಳು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸುದ್ದಿಗಳ ದುಷ್ಪರಿಣಾಮ ಬೀರಲು ಕಾರಣವಾಗುತ್ತಿವೆ.
ದಕ್ಷ ಮತ್ತು ಪ್ರಾಮಾಣಿಕ ಸರ್ಕಾರ ಮಾತ್ರ ಈ ಸಮಸ್ಯೆ ನಿಯಂತ್ರಿಸಲು ಸಾಧ್ಯ. ಉಳಿದ ಎಲ್ಲಾ ಕ್ರಮಗಳು ಕೇವಲ ತಾತ್ಕಾಲಿಕ ಕ್ರಮಗಳು ಮತ್ತು ಬ್ರೇಕಿಂಗ್ ನ್ಯೂಸ್ ಗಳು ಮಾತ್ರ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ವಿವೇಕಾನಂದ. ಹೆಚ್.ಕೆ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್