- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
“ಶಬ್ದ..
ಅದರ ಬಗ್ಗೆ ಏನು ಹೇಳುವುದು;
ಶಬ್ದ ಯಾವತ್ತಿಗೂ ಗರ್ಭಾವಸ್ಥೆಯಂತೆ!
ಯಾವುದಕ್ಕೆಲ್ಲ ಜನ್ಮ ನೀಡುತ್ತದೆ..”
ಹೀಗೆ ಹೇಳುತ್ತಲೇ ಕತೆ ತೆರೆದುಕೊಳ್ಳುತ್ತದೆ. ಅಂಚೆಯಣ್ಣ ಅಂದರೆ ಖಾಕಿ ವಸ್ತ್ರ, ಒಂದು ಸೈಕಲ್ಲು ಹಾಗೂ ಪತ್ರದ ಚೀಲ ಇದು ನಮ್ಮ ಅಂಚೆ ವ್ಯವಸ್ಥೆಯ ಚಿತ್ರಣ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವ್ಯವಸ್ಥೆಗಳಿರಬಹುದು. ನಮ್ಮಲ್ಲಿ ಅಂಚೆಯಣ್ಣನ ಸೈಕಲ್ಲಿನ ‘ಟ್ರಿಣ್ ಟ್ರಿಣ್’, ಜಾಗೃತ ಜಗತ್ತಿನ ಕರೆಗಂಟೆಯಾಗಿತ್ತು. ಆ ಹೊತ್ತಿನ ಸಾವಿರ ನಿರೀಕ್ಷೆಗಳು, ವರ್ತಮಾನದ ತಲ್ಲಣಗಳು, ನಾಳೆಗಳಿಗಾಗಿನ ತವಕಗಳು, ಬಾಂಧವ್ಯದ ಹಾಗೂ ಸಾಮರಸ್ಯದ ಕೊಂಡಿಗಳೆಲ್ಲವೂ ಪತ್ರವೆನ್ನುವ ಕಾಗದದ ಚೂರಿನಲ್ಲಿ ಅಡಕವಾಗಿರುತ್ತಿತ್ತು.
ಸಂವಹನ ಸಾಧ್ಯತೆಗಳನ್ನು ಹಾಗೂ ಮಾಧ್ಯಮಗಳನ್ನು ವಿಸ್ತರಿಸಿಕೊಂಡ ಮನುಷ್ಯ ಇಂದು ಮಾತುಗಳಿಗಾಗಿ ತಡಕಾಡುತ್ತಿದ್ದಾನೆ. ಬರೀ ದೇಹವಿದ್ದು, ಮೂಲಧಾತುವೇ ಇಲ್ಲದಿದ್ದಲ್ಲಿ, ದೇಹ ಬಳಲುತ್ತದೆ. ಮಾತು ಸೊರಗಿರುವ ನಮ್ಮಲ್ಲೀಗ ಕಾಯುವಿಕೆಯ ಸುಖದ ಅರಿವಾಗುವ ಸಾಧ್ಯತೆಗಳೇ ಕಡಿಮೆ, ಅದಕ್ಕೆಂದೇ ಬೇಕಾದ ತಾಳ್ಮೆಯೂ ಕಡಿಮೆಯೇ! ‘ಇದಲ್ಲದಿದ್ದರೆ ಇನ್ನೊಂದು’ ಅನ್ನುವ ಆಯ್ಕೆಗಳ ಯಾದಿಯಲ್ಲಿ ಒಂದಕ್ಕೇ ಅಂಟಿಕೊಳ್ಳುವ ಕೆಲವರಿಗಷ್ಟೇ ಈ ಎಲ್ಲ ಸಂಗತಿಗಳ ಕುರಿತಾಗಿ ಖೇದವಿದೆ, ಶೋಕವಿದೆ. ಕಹಿಘಟನೆಗಳ ಮಾಹಿತಿ ತಲುಪುವುದೂ ಅದೆಷ್ಟೋ ದಿನಗಳ ಬಳಿಕವಾಗಿತ್ತು, ಅಷ್ಟರಲ್ಲಾಗಲೇ ಎಲ್ಲ ಮುಗಿದಿರುತ್ತಿತ್ತು.
ದೂರ ದೂರದ ಪತ್ರಗಳು ಬಂದಿತೆಂದರೆ ಅದೊಂದು ಹಬ್ಬದ ವಾತಾವರಣ; ಇವತ್ತು ‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ’ ( ಶ್ರೀ ಜಿ ಎಸ್ ಶಿವರುದ್ರಪ್ಪ ) ಅಂಚೆಯಣ್ಣ ಖುದ್ದಾಗಿ ಪತ್ರದೊಂದಿಗೆ ಸಂಬಂಧ ಹೊಂದದೇ ಇದ್ದರೂ, ಮೊದಲೆಲ್ಲ ಅವನೇ ಪತ್ರ ಓದಿ ಹೇಳಬೇಕಾಗಿತ್ತು, ಹಲವು ಮನೆಗಳ ಹಲವು ವಿಷಯಗಳು ಅವನಿಗೆ ತಿಳಿದಿರುತ್ತಿದ್ದವು. ಖುಷಿ ದುಃಖ ಎರಡಕ್ಕೂ ಅಘೋಷಿತ ಸಂಬಂಧಿಕನಾಗಿರುತ್ತಿದ್ದ ಅಂಚೆಯಣ್ಣ. ಕೇವಲ ಪತ್ರ ತಲುಪಿಸುವುದಷ್ಟೇ ತನ್ನ ಕೆಲಸವಾಗಿದ್ದರೂ ಅದನ್ನು ಓದಿ ಹೇಳುವುದೂ ಅದರ ಭಾಗವೇ ಎಂಬಂತೆ ಅಂಚೆಯಣ್ಣ ಇರುತ್ತಿದ್ದ. ಆ ಮನೆಯಲ್ಲಿ ಕೊಡುವ ತಿಂಡಿ ತಿಂದೋ, ಚಹಾವೋ, ನೀರೋ ಕುಡಿದು ಬೇರೆ ಬೇರೆ ಮನೆಗೆ ಹೋಗುತ್ತಿದ್ದ. ಒಂದರ್ಥದಲ್ಲಿ ಭಾವನಾತ್ಮಕವಾಗಿ ಇಡೀ ಊರನ್ನು ಒಂದೇ ದಾರದಲ್ಲಿ ಪೋಣಿಸುತ್ತಿದ್ದುದು ಇದೇ ಅಂಚೆಯಣ್ಣ. ಇಂಥ ಒಂದು ಅಂಚೆಯವನ ಮತ್ತು ಅವನ ಬದುಕಿನ ಮೂರು ಮುಖ್ಯ ಪತ್ರಗಳ ಕತೆಯೇ ಮರಾಠಿ ಚಿತ್ರ ‘ಪೋಸ್ಟ್ ಕಾರ್ಡ್’.
ಇಷ್ಟೇ ಇಷ್ಟು ಇರುವ ಆ ಪೋಸ್ಟ್ ಕಾರ್ಡಿನಲ್ಲಿ ಅದೆಷ್ಟು ಬರೆದು ತುಂಬಿಸಬಹುದೋ ಅಷ್ಟನ್ನೂ ತುಂಬಿಸುವ ಸಕಲ ಪ್ರಯತ್ನಗಳೂ ನಡೆಯುತ್ತಿದ್ದವು. ಅದೆಷ್ಟೋ ಪತ್ರದ ವಿನಿಮಯಗಳು ಇವತ್ತು ಪುಸ್ತಕಗಳಾಗಿ ಪ್ರಸಿದ್ಧವಾಗಿವೆ. ನೈಜ ಇತಿಹಾಸವನ್ನು ತೆರೆದಿಟ್ಟಿವೆ. ರಾಜತಾಂತ್ರಿಕತೆಗಳ ಕುರಿತಾಗಿ ಹೇಳಿವೆ. ಮನುಷ್ಯರು ಹೇಗೆ ಅಕ್ಷರಗಳ ಮುಖೇನ ಒಬ್ಬರಿಗೊಬ್ಬರು ಆಸರೆಯಾಗಬಹುದು ಅನ್ನುವುದನ್ನೂ ಹೇಳಿವೆ. ಬಹುಶಃ ಹೀಗೆ ಬರೆಯುತ್ತಾ ಬರೆಯುತ್ತಾ ಬರೆವಣಿಗೆಯ ರೀತಿಯೂ, ಅದರ ಸತ್ವವೂ ಇನ್ನಷ್ಟು ಪಕ್ವವಾಗುತ್ತಿತ್ತು ಅನಿಸುತ್ತದೆ. ತಿಂಡಿ ಆಯ್ತಾ, ಊಟ ಆಯ್ತಾ ಅಂತ ಕೇಳುವುದರಲ್ಲಿ ಮುಗಿಯುತ್ತಿರಲಿಲ್ಲ. ಯಾಕೆ ಸಂಬಳದ ಕೊರತೆಯಿದೆ, ಊರಲ್ಲಿ ಆಕಳು ಕರು ಹಾಕಿದೆ, ಅಮ್ಮ ಪದೇ ಪದೇ ನೆನಪಿಸಿಕೊಳ್ಳುತ್ತಾಳೆ, ನೀನು ಬಾಲ್ಯದಲ್ಲಿ ಅದೆಷ್ಟು ತುಂಟನಾಗಿದ್ದವ ಈಗ ಜವಾಬ್ದಾರನಾಗಿದ್ದೀಯಾ, ಊರಲ್ಲಿನ ಅಂಗಳದ ಮುಂದಿನ ಹೂಗಿಡಗಳು ಹೇಗಿವೆ, ಈ ಮಳೆಗಾಲ ಬರುವುದರೊಳಗಾಗಿ ಸಂಕ ಹಾಕಿ, ಚಪ್ಪರ ತೆಗೆದು, ಸೋಗೆ ಹೊದೆಸಿ, ಮಾಡಿಗೆಲ್ಲಾ ನೀರು ಸೀರದ ಹಾಗೆ ಕಟ್ಟಬೇಕು, ಈ ಸಲ ಬೇಸಿಗೆ ರಜೆಗೆ ಪೇಟೆಯಿಂದ ಮನೆಗೆ ಬರುವಾಗ ಏನೇನು ತರಲಿ ಇತ್ಯಾದಿ ಇತ್ಯಾದಿ ನಿತ್ಯ ಬದುಕಿನ ಸಂಗತಿಗಳಿಂದ ಹಿಡಿದು, ಸಾಹಿತ್ಯದ ಕುರಿತಾದ ಮಹಾ ಮಹಾ ಚರ್ಚೆಗಳೂ ನಡೆಯುತ್ತಿದ್ದವು.
ಸಂಕ್ರಾಂತಿ ಹಬ್ಬ ಬಂತೆಂದರೆ ಗ್ರೀಟಿಂಗುಗಳನ್ನು ಕಳುಹಿಸುವ ತಯಾರಿ ಸುಮಾರು ಒಂದೆರಡು ತಿಂಗಳಿನದ್ದಾಗಿರುತ್ತಿತ್ತು. ಒಂದಷ್ಟು ಪ್ರಾಸಗಳು, ನೆನಪುಗಳು, ಹಾರೈಕೆಗಳು, ಕಾಲೆಳೆಯಲು ಒಂದಷ್ಟು ಕೀಟಲೆಗಳು, ಕೊನೆಗೆ ಪ್ರೀತಿಯನ್ನೇ ಬಸಿದು, ಇಡೀ ಜಗತ್ತಿನಲ್ಲಿ ಎಲ್ಲವೂ ಒಳ್ಳೆಯದಾಗಲಿ, ಸಮೃದ್ಧಿಯೇ ತುಂಬಿ ತುಳುಕಲಿ ಅನ್ನುವ ಧನಾತ್ಮಕ ಭಾವದೊಂದಿಗೇ ಪ್ರತೀ ಗ್ರೀಟಿಂಗುಗಳ ಬರೆಹಗಳು ಮುಕ್ತಾಯವಾಗುತ್ತಿದ್ದವು. ಇದು ಪೂರಾ ಪತ್ರದಂತಲ್ಲದಿದ್ದರೂ, ಇನ್ನಷ್ಟು ಕಾಳಜಿಯಿಂದ ಅಷ್ಟೇ ಕ್ರಿಯಾತ್ಮಕವಾಗಿಯೂ ಅದನ್ನು ಬರೆಯಲಾಗುತ್ತಿತ್ತು. ಇನ್ನೂ ಕೆಲವರು ತಾವೇ ಈ ಗ್ರೀಟಿಂಗುಗಳನ್ನು ತಯಾರಿಸಿ ತಮ್ಮ ಆಪ್ತರನ್ನು ಇನ್ನಷ್ಟು ಆಪ್ತರನ್ನಾಗಿಸಿಕೊಳ್ಳುತ್ತಿದ್ದರು. ಇಂಥ ಒಂದೇ ಒಂದು ಕಾರ್ಡಿನಿಂದ ಎಷ್ಟೋ ಗೆಳೆಯ ಗೆಳತಿಯರು ಕೆಲವು ವರ್ಷಗಳ ಬಳಿಕ ಮತ್ತೆ ಒಂದಾದ ಕತೆಗಳಿವೆ, ಅಲ್ಲಿಂದ ಹೊಸ ಅಧ್ಯಾಯ ತೆರೆದ ಉದಾಹರಣೆಗಳಿವೆ. ಹೀಗೆ ಈ ಪತ್ರ ಅನ್ನುವುದು ಒಂದು ಇಡೀ ಸಮುದಾಯದ, ಜನಾಂಗದ ಬದುಕಿನ ಹರಿವಿನಂತೆ ಇತ್ತು. ಇಂಥ ಹಲವು ಕತೆಗಳ ನಡುವಿನ ಮೂರು ಮುಖ್ಯ ಕತೆಗಳನ್ನು ಈ ಸಿನೆಮಾ ಹೇಳುತ್ತದೆ.
ಇಡೀ ಜಗತ್ತನ್ನು ಒಂದು ಶಕ್ತಿ ನಿಯಂತ್ರಿಸುತ್ತಿದೆಯೆಂತಲೂ, ಅದನ್ನು ದೇವರೆಂತಲೂ, ಚೈತನ್ಯವೆಂತಲೂ ಬಹುತೇಕರು ನಂಬುತ್ತಾರೆ. ಮನುಷ್ಯ ಸೋತು ಬಸವಳಿದಾಗ ತನಗಿಂತ ಶಕ್ತಿಶಾಲಿಯಾದವನೊಬ್ಬ ತನ್ನನ್ನು ಕಾಪಾಡುವುದಕ್ಕಾಗಿಯೇ ಇದ್ದಾನೆ, ನಾನು ಸಂಕಷ್ಟದಲ್ಲಿ ಬಳಲುತ್ತಿರುವಾಗ ಅನ್ನ ಹಾಕುವುದಕ್ಕಾಗಿಯೇ ನನಗಿಂತ ಬಲಶಾಲಿಯಾದವಳೂ, ಕರುಣಾಮಯಿಯಾದವಳೂ, ನೆನೆದಾಗಲೆಲ್ಲಾ ಮಡಿಲು ಕೊಟ್ಟು ಪೊರೆವವಳೂ ಒಬ್ಬಳಿದ್ದಾಳೆ ಅನ್ನುವ ಆ ಭಾವ ತಂದುಕೊಡಬಹುದಾದ ಬದುಕಿನ ಉತ್ಸಾಹವೇ ದೇವರೆನ್ನುವ ಸಂಗತಿಯ ಉದ್ದೀಪಕ. ನಾವು ತಪ್ಪು ಮಾಡಿದರೂ ದೇವರು ತಪ್ಪು ಮಾಡಲಾರ ಅನ್ನುವುದು ಒಂದು ಅಖಂಡ ನಂಬಿಕೆ.
ಬೇರೆಯವರ ಪತ್ರಗಳನ್ನು ಓದಬೇಡ ಅಂದರೂ ಕೇಳದೇ ಕುತೂಹಲದಿಂದ ಓದುವ ಚಾಳಿಯಿರುವ ಅಂಚೆಯವನ ಹೆಂಡತಿಯಿಂದಲೇ ಮೊದಲನೇ ಕತೆಯ ಮುಖ್ಯಭಾಗ ತೆರೆದುಕೊಳ್ಳುತ್ತದೆ. ಅವಳು ಆ ಪತ್ರಗಳನ್ನು ಓದುತ್ತಿದ್ದುದು ಇನ್ನ್ಯಾರಿಗೋ ಅಲ್ಲಿನ ಸುದ್ದಿಗಳನ್ನು ಹೇಳುವುದಕ್ಕಾಗಿರಲಿಲ್ಲ; ಬದಲಾಗಿ ಅದೂ ಒಂದು ಪುಸ್ತಕದಂತೆ ಅನ್ನುವ ಶ್ರದ್ಧೆ ಇತ್ತು. ಅಲ್ಲಿ ಸಾಹಿತ್ಯವನ್ನು, ಅದರ ಸೌಂದರ್ಯವನ್ನು ಮನಸಾರೆ ಅನುಭವಿಸಿ ಸಂಭ್ರಮಿಸುವುದು ಅವಳ ರೂಢಿ. ಇಂಥದ್ದೇ ಒಂದು ಪತ್ರಕ್ಕೆ ಸ್ಪಂದಿಸುವ ಕತೆಯೇ ಮೊದಲನೆಯದು.
ಇನ್ನು ಎರಡನೆಯ ಕತೆ ತಂದೆ ಮಗಳ ಕುರಿತಾದದ್ದು. ಹೆಣ್ಣುಮಕ್ಕಳ ಶಾಲೆಯೊಳಗೆ ಅಪ್ಪಣೆಯಿಲ್ಲದೇ ಪ್ರವೇಶಿಸಬಾರದು ಅನ್ನುವ ಶಿಸ್ತಿನ ಸೈನಿಕ ಮತ್ತವನ ಮಗಳ ಭೇಟಿಯ ಕುರಿತಾದ ಕತೆ. ಅವೆರಡರ ಮಧ್ಯ ಅಂಚೆಯವ ಸುದ್ದಿವಾಹಕ. ಇಲ್ಲಿಂದ ಇಡೀ ಸಿನೆಮಾದಲ್ಲೊಂದು ವಿಲಕ್ಷಣ ನಿಗೂಢತೆಯೊಂದು ಹುಟ್ಟಿಕೊಳ್ಳುತ್ತದೆ, ಚೂರು ಅವಾಸ್ತವವೂ ಅನಿಸಬಹುದು.
ಆದರೆ, ಕತೆಯ ಕೊನೆ ಒಂದು ಕ್ಷಣ ತಲ್ಲಣ ಹುಟ್ಟಿಸುತ್ತದೆ. ನೆನಪಿರಲಿ, ಅಂಚೆಯವ ಸುದ್ದಿವಾಹಕ ಮಾತ್ರ! ಮೂರನೆಯ ಕತೆ ಇನ್ನಷ್ಟು ನಿಗೂಢವೂ ಜೊತೆಗೆ ಕಲಾತ್ಮಕವೂ ಆಗಿರುವಂಥದ್ದು. ನೃತ್ಯಗಾರ್ತಿ ವೇಶ್ಯೆಯೊಬ್ಬಳು ತನ್ನ ಪ್ರಿಯತಮನ ಪತ್ರಕ್ಕಾಗಿ ಕಾಯುವಿಕೆಯನ್ನು ಖಾಲಿ ಬಯಲಿನಲ್ಲಿ ಏಳುವ ಧೂಳು ಸಮರ್ಥವಾಗಿ ಹೇಳುತ್ತದೆ. ಈ ಕತೆ ಚೂರು ಕ್ಷುದ್ರ ಅಥವಾ ಅಗೋಚರ ಶಕ್ತಿಗಳ ಕುರಿತಾಗಿಯೂ ಹೇಳುವುದಕ್ಕೆ ಪ್ರಯತ್ನಿಸಿದೆ. ಹಾಗಾಗಿ ಒಂದೆರಡು ಕಡೆ ಅತಾರ್ಕಿಕ ಅಂತಲೂ ಕಾಣಬಹುದು. ಅದರ ಜೊತೆಗೆ ಕೆಲವು ಪ್ರಶ್ನೆಗಳು ಇಲ್ಲಿ ಹಾಗೆಯೇ ಉಳಿದುಹೋಗುತ್ತವೆ.
ಈ ಸಿನೆಮಾದಲ್ಲಿ ಸಾಹಿತ್ಯ ಪ್ರೀತಿ ಎದ್ದು ಕಾಣುವುದು ಬಹುಮುಖ್ಯವಾದ ಅಂಶ. ರೂಪಕ ಕಥೆಗಳೆಂದರೇನು ಅನ್ನುವ ಪ್ರಶ್ನೆಯಾಗಲೀ, ಪತ್ರಗಳನ್ನು ಓದುವ ಹವ್ಯಾಸವಾಗಲೀ, ಕೊನೆಗೆ ಬರೆಯುವ ಅಭ್ಯಾಸವೇ ಗಟ್ಟಿಯಾಗುವ ಬಗೆಯಾಗಲಿ ಈ ಎಲ್ಲವೂ ಸಾಹಿತ್ಯಕ್ಕೆ ತೀರಾ ಹತ್ತಿರವಾದವುಗಳು. ಜೋರು ಬಿಸಿಲಿದೆ, ಭೋರ್ಗರೆವ ಮಳೆ ಇದೆ. ಸೂರ್ಯಾಸ್ತ, ಇಳಿಜಾರು ಹಾದಿ, ಸೈಕಲ್ಲು ಸವಾರಿ, ಸಂಗೀತ, ನೃತ್ಯ, ಕಾತರ, ಆಸೆ, ನಂಬಿಕೆ ಹೀಗೆ ಹೊರ ಪ್ರಪಂಚದಿಂದ ನಿಧಾನಕ್ಕೆ ಒಳ ಪ್ರಪಂಚಕ್ಕೆ ಕರೆದೊಯ್ದು ಕೂರಿಸುವ ಚಿತ್ರ ಇದು.
“ನೀಲಿ ಶಾಯಿ ಕಂದು ಕಾಗದ” ದಿಂದ ಶುರುವಾಗುವ ಕತೆ ಮುಗಿಯುವುದು ಹೀಗೆ:
“ಅಪ್ಪಿಕೋ ನನ್ನನು
ತಪ್ತ ಸ್ಪರ್ಶಕೆ ನಾನು ಸಾಯುವ ಹಾಗೆ
ಹಗಲು ರಾತ್ರಿಗಳೆಲ್ಲ ಈಗ ಅಸಹಾಯಕ”
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್