- ಚಾಚಾ ನೆಹರು ಮತ್ತು ನಮ್ಮ ಮಕ್ಕಳು - ನವೆಂಬರ್ 14, 2023
- ಮಾನವತಾವಾದಿಯ ಹೆಜ್ಜೆಗಳು……. - ಏಪ್ರಿಲ್ 14, 2021
- ಯುಗಾದಿ – ಎರಡು ಹಾದಿ… - ಏಪ್ರಿಲ್ 13, 2021
ತಲೆಗೆ ಎಣ್ಣೆ ಹಚ್ಚುವವರು,
ಮೈಗೆ ಎಣ್ಣೆ ತೀಡುವವರು,
ಹೊಟ್ಟೆಗೆ ಎಣ್ಣೆ ಹಾಕುವವರು,
ಹೋಳಿಗೆ ತುಪ್ಪ ಸವಿಯುವವರು,
ಕೋಳಿ ಕುರಿ ಮಾಂಸ ಭಕ್ಷಿಸುವವರು,
ಇಸ್ಪೀಟ್ ಆಟ ಆಡುವವರು,
ಹೊಸ ಬಟ್ಟೆ ಹಾಕಿ ನಲಿಯುವವರು,
ಹೊಸ ವರ್ಷ ಸಂಭ್ರಮಿಸುವವರು,
ನವ ಜೋಡಿಗಳು,
ಹಳೆ ಬೇರುಗಳು,
ಬಡತನದ ನೋವುಗಳು,
ಸಿರಿತನದ ಖುಷಿಗಳು,
ಅಗಲಿದವರ ನೆನಪುಗಳು,
ಹುಟ್ಟಿದವರ ನಲಿವುಗಳು,
ಯುಗಾದಿ ಎಂದರೆ ಅದೊಂದು ನೆನಪಿನಾ ಹಬ್ಬ.
ಸಿಹಿಯೂ ಇದೆ – ಕಹಿಯೂ ಇದೆ.
ಕಾಲನ ಪಯಣದಲಿ ಸಿಹಿ ಕಹಿಯಾಗಿ – ಕಹಿ ಸಿಹಿಯಾದ ಅನುಭವ ಒಂದು ವಿಸ್ಮಯ.
ಆಗ ಮಾವಂದಿರು ತಮ್ಮ ಒರಟು ಕೈಗಳಲ್ಲಿ ಪುಟ್ಟ ಬೆತ್ತಲೆ ಮೈಗೆ ಸುಡುವ ಎಣ್ಣೆ ತಿಕ್ಕುತ್ತಿದ್ದರೆ ಅಲ್ಲೇ ನರಕ ದರ್ಶನ.
ಈಗ Massage parlor ನಲ್ಲಿ ಬಾಡಿ ಮಸಾಜ್ ಮಾಡುತ್ತಾ ಎಷ್ಟೇ ಒತ್ತಿದರೂ ಅದೊಂದು ಸ್ವರ್ಗ ಸುಖ.
ಆಗ ಕಲ್ಲಿನಲಿ ಮೈ ಉಜ್ಜಿ ಬೀದಿಯ ಸುಡು ಬಿಸಿಲಿನಲ್ಲಿ ಬಿಸಿ ನೀರಿನಲ್ಲಿ ಅಮ್ಮ ಸ್ನಾನ ಮಾಡಿಸುತ್ತಿದ್ದರೆ ಅದೊಂದು ಯಾತನಾಮಯ ಸಮಯ.
ಈಗ ಹದ ಬೆರೆತ ಬಿಸಿ ನೀರಿನ ಬಾತ್ ಟಬ್ಬಿನಲಿ ಕುಳಿತು shower ನಲ್ಲಿ ಸ್ನಾನ ಮಾಡುತ್ತಿದ್ದರೆ ಸಮಯದ ಪರಿವೇ ಇರುವುದಿಲ್ಲ.
ಅಂದು ಹೊಸ ಬಟ್ಟೆಗಾಗಿ ತಿಂಗಳ ಮೊದಲೇ ರೋಮಾಂಚನದ ಕನಸಿನ ಅನುಭವವಾಗುತಿತ್ತು.
ಇಂದು ಈ ಸುಡು ಬೇಸಿಗೆಯಲಿ ಬಟ್ಟೆ ತೊಡಲೇ ಉತ್ಸಾಹವಿಲ್ಲ. ಕಪಾಟಿನೊಳಗಿಂದ ಇನ್ನೂ ಧರಿಸದ ಹೊಸ ಬಟ್ಟೆಗಳು ಗಹಗಹಿಸಿ ನಗುತ್ತಿವೆ.
ಅಂದು ಹೋಳಿಗೆಯ ಹೂರಣ ಕದ್ದು ತಿನ್ನಲು ನಾನಾ ಯೋಚನೆ – ನಾನಾ ಯೋಜನೆ.
ಇಂದು ತಟ್ಟೆಯ ಮುಂದೆ ಭಕ್ಷ್ಯಭೋಜನ. ತಿನ್ನಲು ಮಾತ್ರ ನಾನಾ ಭಯ.
ಅಂದು ನೆಂಟರು ಬಂದರೆ ಸಂಭ್ರಮವೋ ಸಂಭ್ರಮ. ಜನ ಹೆಚ್ಚಾದಷ್ಟೂ ಖುಷಿಯೋ ಖುಷಿ.
ಇಂದು ಅತಿಥಿಗಳು ಬಂದರೆ ಏನೋ ಕಸಿವಿಸಿ. ಅದಕ್ಕಿಂತ ಟಿವಿಯೇ ವಾಸಿ ಎನಿಸುತ್ತದೆ.
ಅಂದು ಶಿಸ್ತಿನ ಅಪ್ಪ ದೆವ್ವದಂತೆ ಕಾಣುತ್ತಿದ್ದರು.
ಇಂದು ಫೋಟೋ ಆಗಿರುವ ಅಪ್ಪನೇ ದೇವರು.
ಅಂದು ಬಸವ ಗಾಂಧಿ ಸುಭಾಷ್ ಅಂಬೇಡ್ಕರ್ ಆಜಾದ್ ಗಳೇ ಆದರ್ಶ.
ಇಂದು ಬಿಲ್ ಗೇಟ್ಸ್ ಅಂಭಾನಿ ಮಿತ್ತಲ್ ಹಿಂದೂಜಾಗಳೇ ಆದರ್ಶ.
ಅಂದು ಸತ್ಯ ಸರಳತೆ ಸ್ವಾಭಿಮಾನ ಮಾನವೀಯ ಮೌಲ್ಯಗಳೇ ಜೀವನ ಧ್ಯೇಯ.
ಇಂದು ಕಾರು ಬಂಗಲೇ ಒಡವೆ ಶ್ರೀಮಂತಿಕೆಗಳೇ ಬದುಕಿನ ಧ್ಯೇಯ.
ಆದರೂ,
ನಿರಾಸೆ ಏನಿಲ್ಲ.
ಅಂದಿಲ್ಲದ ಎಷ್ಟೋ ಸೌಲಭ್ಯಗಳು ಇಂದಿವೆ.
ಅಂದಿಲ್ಲದ ಅರಿವು ಜ್ಞಾನ ಇಂದಿದೆ. ಅಂದಿಲ್ಲದ ಅನುಭವ ಇಂದಿದೆ.
ಅರಿತು ಬಾಳಿದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲ…….
ಏನೂ ಇಲ್ಲದಿದ್ದಾಗ ಎಲ್ಲವನ್ನೂ ಗಳಿಸಿದೆ.
ಎಲ್ಲವೂ ಇರುವಾಗ ಏನನ್ನಾದರೂ ಸಾಧಿಸುವಾಸೆ.
ಕಾಲಾಯ ತಸ್ಮೈ ನಮ:.
***
ಬಡವರ ಗೋಳು – ಕೊರೋನಾ ಮಾರಿ….
ಹೂವಿನ ಬೆಳೆಗಾರರೊಬ್ಬರು ಕರೆ ಮಾಡಿದ್ದರು. ಯುಗಾದಿ ಹಬ್ಬದ ಈ ಸಮಯದಲ್ಲಿ ದಿನಕ್ಕೆ 40/50 ಕೆಜಿಯಷ್ಟು ಹೂ ಮಾರುವ ಆಸೆಯಿಂದ ಗಿಡ ಬೆಳೆಸಿ ಉತ್ತಮ ಫಸಲು ನಿರೀಕ್ಷಿಸಿದ್ದರು. ಅದೃಷ್ಟವಶಾತ್ ನಿರೀಕ್ಷೆಗಿಂತ ಉತ್ತಮ ಬೆಳೆ ಬಂದಿದೆ. ಆದರೆ ಈಗ ಕೊರೋನಾ ವೈರಸ್ ಕಾರಣದಿಂದಾಗಿ ಸರ್ಕಾರ ಭಾಗಶಃ ಬಂದ್ ಮಾಡಿರುವ ಕಾರಣಕ್ಕೆ ತಮ್ಮ ಫಸಲಿಗೆ ಒಳ್ಳೆಯ ಮಾರುಕಟ್ಟೆಯಾಗಿದ್ದ ಬೆಂಗಳೂರಿನಲ್ಲಿ ಹೂವು ಮಾರಾಟವಾಗುತ್ತಿಲ್ಲ. ಈಗಾಗಲೇ ದಿನಕ್ಕೆ 25/30 ಕೆಜಿ ನಷ್ಟವಾಗುತ್ತಿದೆ. ಹೀಗೆ ಆದರೆ ನಾವು ಬದುಕುಳಿಯುವುದೇ ಕಷ್ಟ. ತುಂಬಾ ನಷ್ಟವಾಗುತ್ತದೆ. ಅದನ್ನು ತಡೆಯುವ ಶಕ್ತಿ ಇಲ್ಲ ಎಂದರು…..
ಬಹುಶಃ ಬಹಳಷ್ಟು ಸಣ್ಣ ರೈತರು, ಬೀದಿ ಬದಿಯ ಚಿಲ್ಲರೆ ವ್ಯಾಪಾರಿಗಳು, ಹೋಟೆಲ್ಗಳು, ಕೋಳಿ ಮೀನು ವ್ಯಾಪಾರಿಗಳು, ಕೂಲಿ ಕಾರ್ಮಿಕರು ಟ್ರಾವೆಲ್ಸ್ ನವರು ಇನ್ನೂ ಇನ್ನೂ ಸಾಕಷ್ಟು ಜನ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಇದು ಇನ್ನೂ ಸ್ವಲ್ಪ ಕಾಲ ಮುಂದುವರಿಯುತ್ತದೆ.
ಇದೊಂದು ಚೈನ್ ಲಿಂಕ್. ಹಾಲು ವಿದ್ಯುತ್ ನೀರು ಮನೆ ಬಾಡಿಗೆ ಬಡ್ಡಿ ಸಾಲದ ಕಂತು ಔಷಧಿ ಹೀಗೆ ನಾನಾ ಸಮಸ್ಯೆಗಳು ಒಂದೊದಾಗಿ ಭುಗಿಲೇಳುತ್ತದೆ.
ಕಷ್ಟಗಳು ಬಂದರೆ ಒಟ್ಟೊಟ್ಟಿಗೆ ಬರುತ್ತವೆ ಎಂಬಂತೆ ಈಗಾಗಲೇ ಆರ್ಥಿಕ ಕುಸಿತದಿಂದ ಬಸವಳಿದಿದ್ದ ಕೆಳ ಮಧ್ಯಮ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ.
ಯಾರೋ ಸ್ವಂತ ಮನೆ ಇದ್ದು ಒಂದಷ್ಟು ಬಾಡಿಗೆ ಪಡೆಯುವವರು, ಎಲ್ಲಾ ರೀತಿಯ ಸರ್ಕಾರಿ ಅಧಿಕಾರಿಗಳು, ಸ್ವಲ್ಪ ಉಳಿತಾಯ ಮಾಡಿರುವವರು ಮಾತ್ರ ಹೇಗೋ ಈ ಒತ್ತಡ ನಿಭಾಯಿಸಬಲ್ಲರು.
ಈಗ ಇರುವ ಧ್ವಂದ್ವ….
ಸರ್ಕಾರದ ನಿರ್ಧಾರಗಳು ತುಂಬಾ ಕಠಿಣವಾದವು, ಕೊರೋನಾಗಿಂತ ಈ ನಿರ್ಧಾರಗಳೇ ಹೆಚ್ಚು ತ್ರಾಸದಾಯಕ ಎಂದರೆ,…
ಮುಂದೆ ಕೊರೋನಾ ಸಮಸ್ಯೆ ತುಂಬಾ ಗಂಭೀರವಾದರೆ ಸರ್ಕಾರವನ್ನೇ ಹೊಣೆ ಮಾಡಬೇಕಾಗುತ್ತದೆ ಅಥವಾ ಸಾಮಾನ್ಯ ಹಂತದಲ್ಲೇ ಇದು ನಿವಾರಣೆಯಾದರೆ ಸರ್ಕಾರದ ಆತುರದ ಕ್ರಮ ಎಂದು ಟೀಕಿಸಲಾಗುತ್ತದೆ. ಎಲ್ಲರ ಒಳಿತಿಗಾಗಿಯೇ ಈ ಕ್ರಮ ಎಂದು ಸರ್ಕಾರ ಹೇಳುತ್ತಿದೆ.
ಯಾವಾಗಲೂ ಫಲಿತಾಂಶ ನೋಡಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ನಾವೆಲ್ಲ ನಿಸ್ಸೀಮರು…..
ಕ್ರಿಕೆಟ್ ಇರಲಿ, ಚುನಾವಣೆ ಇರಲಿ, ವಿದ್ಯಾರ್ಥಿಗಳ ಅಂಕಗಳಿರಲಿ ಎಲ್ಲವನ್ನೂ ಫಲಿತಾಂಶ ಆಧರಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತೇವೆ.
ಆದರೆ ನಿರ್ಧಾರ ಮಾಡುವ ಸಮಯದಲ್ಲಿ…… !!!!
ಈಗ ಖಚಿತವಾಗಿ ಒಂದು ಉತ್ತರ ಹೇಳುವುದು ಕಷ್ಟ.
ಆದರೆ ಕೊರೋನಾ ಮಾರಿಯ ಜೊತೆ ಬಡತನ ಜೊತೆಯಾಗಿರುವ ವಾಸ್ತವ ಪರಿಸ್ಥಿತಿಯಲ್ಲಿ……..
ಬಡವರಿಗಾಗಿ ಸಹಾಯ ಮಾಡಲು ಈಗಲೂ ಅನೇಕ ಜನ ಸಿದ್ದರಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿ ಮಾಡಿದಂತೆ. ಆದರೆ ಸಮಸ್ಯೆ ಇರುವುದು ನಿಜವಾದ ಬಡವರನ್ನು ಗುರುತಿಸುವುದು.
ಬಡವರು ಎಚ್ಚರವಾಗಿರುವುದಿಲ್ಲ, ಎಚ್ಚರವಾಗಿರುವವರು ಬಡವರಾಗಿರುವುದಿಲ್ಲ ಮತ್ತು ಎಚ್ಚರವಾಗಿರುವವರೇ ಎಲ್ಲಾ ಸೌಲಭ್ಯ ಬಾಚುತ್ತಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರೆಲ್ಲಾ ಬಡವರಲ್ಲ, ಇಲ್ಲದಿರುವವರು ಶ್ರೀಮಂತರಲ್ಲ.
ನಾಗರಿಕ ಸಮಾಜ ಅನಾಗರಿಕತೆಯತ್ತಾ ಸಾಗುತ್ತಿರುವ ಅನೇಕ ಗುಣಲಕ್ಷಣಗಳು ಕಾಣುತ್ತಿವೆ. ಕರೋನ ವೈರಸ್ ಬದುಕಿನ ಕ್ಷಣಿಕತೆ ಬಗ್ಗೆ ನಮ್ಮ ಗಮನ ಸೆಳೆದು ಆತ್ಮಾವಲೋಕನಕ್ಕೆ ಕಾರಣವಾಗಲಿ ಎಂದು ಆಶಿಸುತ್ತಾ……
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್