- ಯುಗ ಯುಗಾದಿ… - ಏಪ್ರಿಲ್ 13, 2021
ಯುಗಾದಿ- ಬೇವು ಬೆಲ್ಲ,ಎಣ್ಣೆ ಸ್ನಾನ, ಪೂಜೆ, ಹೋಳಿಗೆ ಊಟ, ಹೊಸ ಬಟ್ಟೆ ಇತ್ಯಾದಿಗಳ ಜೊತೆಗೆ ನಮ್ಮ ಬಾಲ್ಯದ ಬಹು ಯುಗಾದಿಗಳು, ಅದು ಯುಗಾದಿಯೋ ಉಗಾದಿಯೋ ಎಂಬ ಗೊಂದಲದಲ್ಲೇ ಮುಗಿದುಹೋದವು.
ಯುಗದ ಆದಿ – ಯುಗಾದಿ ಅಂತ ಕನ್ನಡದಲ್ಲಿ, ಉಗಾದಿ ಅಂತ ಇಂಗ್ಲಿಷಿನಲ್ಲಿ ಎಂದು ನಮಗೆ ನಾವೇ ಒಂದೆಳೆಯ ಅರ್ಥದ ಮುಖೇನ ಸಮಾಧಾನ ಮಾಡಿಕೊಂಡಿದ್ವಿ.
ಹ್ಞೂ…. ಅದೆಷ್ಟು ಚೆಂದಿತ್ತು ನಮ್ಮ ಅಂದಿನ ಯುಗಾದಿ.


ಬೇಸಿಗೆಯ ರಜೆಗೆ ಅಜ್ಜಿ ಮನೆ ಸೇರಿರುತ್ತಿದ್ದ ಮೊಮ್ಮಕ್ಕಳ ದಂಡೆಲ್ಲ ಅತ್ತೆ, ಮಾವ, ಅಜ್ಜಿ, ಕೆಲಸದ ಮಂಜಮ್ಮನ ಜೊತೆಗೂಡಿ ವಾರದಿಂದ್ಲೇ ಹಬ್ಬದ ಸಲುವಾಗಿ ಇಡೀ ಮನೆ, ವಸ್ತು, ಪಾತ್ರೆಪಗಡೆಗಳೆಲ್ಲವನ್ನು ತೊಳೆದಿದ್ದೇ ತೊಳೆದದ್ದು, ಚೊಕ್ಕಟ ಮಾಡಿದ್ದೇ ಮಾಡಿದ್ದು.
ಉದ್ದ ಕೋಲಿಗೆ ಎಂತದೋ ಚಿಂದಿ ಬಟ್ಟೆ ಸಿಕ್ಕಿಸಿ ಎಟುಕಿಸದ ಗೋಡೆ ಮೂಲೆಯಲ್ಲಿದ್ದ ಎರಡೆಳೆ ಜೇಡರಬಲೆಯನ್ನ ಎಗರಿ ಎಗರಿ ತಿವಿದು ಕೆಳಗೆ ಬೀಳಿಸಿ ಇಡೀ ಮನೆಯನ್ನ ತಾನೇ ನೀಟು ಮಾಡಿದೆ ಅಂತ ಬೀಗುತ್ತಿದ್ದ ಮೊದಲನೇ ದೊಡ್ಡಮ್ಮನ ಎರಡನೇ ಮಗ, ಅಣ್ಣ. ಹಿಂದಿನ ದಿನವೇ ಹೊಲದಲ್ಲಿ ಬಿಸಿಲು ಕಾಯುತ್ತಿದ್ದ ಕಾಯಿಸಿಪ್ಪೆ, ತರಗೆಲೆ ರಾಶಿ, ಗೊದ್ದ್ಮೊಟ್ಟೆ ಎಲ್ಲವನ್ನೂ ಚೀಲಕ್ಕೆ ತುಂಬಿ ಹಿತ್ತಲಲ್ಲಿ ಪೇರಿಸಿಟ್ಟರೆ ಅಲ್ಲಿಗೆ ಹಬ್ಬದ ಹಿಂದಿನ ತಯಾರಿ ಕೆಲಸಗಳು ಸಮಾಪ್ತಿ.
ಬೆಳ್ಳಂಬೆಳಿಗ್ಗೆ ಅಮ್ಮ, ದೊಡ್ಡಮ್ಮ, ಅಜ್ಜಿ, ಅತ್ತೆ, ಚಿಕ್ಕಿ ಎಲ್ಲರೂ ಸೂರ್ಯನಿಗೆ ಗುಡ್ ಮಾರ್ನಿಂಗ್ ಹೇಳುವ ಮುನ್ನ ಒಂದೊಂದು ಕೆಲಸ ಅಂತ ಹಂಚಿ ಹರಿದು ಮತ್ತೆ ಒಗ್ಗಟ್ಟಾಗುತ್ತಿದ್ದುದು ಅಡುಗೆಮನೆಯಲ್ಲೇ….
ರಂಗೋಲಿ ಹಾಕುವ ಸಲುವಾಗಿ ಎಂದಿಗಿಂತ ತುಸು ಮುಂಚೆ ಎದ್ದ ಹೆಣ್ಣೈಕಳೆಲ್ಲ ಮನೆ ತುಂಬಾ ಓಡಾಡ್ತಾ, ನೀರಿಗೆ ಸಗಣಿ ಬೆರೆಸಿ ಹದ ಮಾಡಿ ನೆಲ ಸಾರಿಸೋಳು ಒಬ್ಳು, ಅದು ಮಾಗುವಂತೆ ಆರಿದ ನಂತರ ಅದರ ಮೇಲೆ ಬಿಳಿ ಚುಕ್ಕಿ ಇಡೋಳು ಮತ್ತೊಬ್ಳು, ರೇಖೆ ಎಳೆದು ಚುಕ್ಕಿ ಕೂಡಿಸೋಳು ಇನ್ನೊಬ್ಳು, ಕಡೆಗೆ ಕೊನೆ ತಂಗಿಯಾದ ನನ್ನ ಪಾಲಿಗೆ ಉಳಿಯುತ್ತಿದ್ದುದು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯ ಅಂತ ಬರೆಯೋ ಸಾಲು , ಕನ್ನಡ ಜೋಡ್ಗೆರೆ ಪಟ್ಟಿಯ ಕಾಪಿರೈಟಿಂಗ್ ಬರೆದಂತೆ ಬಹಳ ನಾಜೂಕಾಗಿ ಕಾಲು ಗಂಟೆ ನನ್ನದು ಅದೇ ಕೆಲಸ…


ಇತ್ತ ಅಜ್ಜಿ, ಮಾವ ತಂದಿಟ್ಟ ಕಾಯಿಸಿಪ್ಪೆ ಸೌದೆ ಎಲ್ಲವನ್ನು ಅಚ್ಚುಕಟ್ಟಾಗಿ ಹಂಡೆಒಲೆಯಡಿಗಿಟ್ಟು ಹಸನಾಗಿ ಕಿಡಿತಾಕಿಸಿ ಗಳಗಳ ಎಂದು ನೀರು ಸುಡಲಿ ಅಂತ ಕಾಯುತ್ತಿದ್ದಳು. ಅತ್ತ, ಅಡುಗೆಮನೆಯಲ್ಲಿ ಹೆಂಗಸರ ಪಾಳೆಯವೊಂದು ರುಬ್ಬುಗಲ್ಲಿಗೆ ಕೈ ತಾಕಿಸುತ್ತಾ, ಬೆಳ್ಳುಳ್ಳಿಗೆ ಗಿಲ್ಲುತ್ತಾ, ಬೇಳೆ ಕಾಯಿ ಬೆಲ್ಲ ಏಲಕ್ಕಿಗಳನೆಲ್ಲ ಕಲಸುತ್ತಾ ಹೊತ್ತಾಯ್ತು ಅಂತ ಸೀರೆಯಂಚಿಂದ ಗಾಬರಿಗೆ ಬಂದ ಬೆವರ ಸೋಕಿಸುತ್ತಿದ್ದರು.
ಇನ್ನು ಮೊಮ್ಮಕ್ಕಳ ಸರದಿ , ರೇಷನ್ ಅಂಗಡಿ ಕ್ಯೂನಂತಿದ್ದ ಹದಿನೇಳು ಬಾಲಬಾಲೆಯರನ್ನ ಅಜ್ಜಿ ಲೈನಿನಲ್ಲಿ ಕುಳ್ಳಿರಿಸಿ ಹದವಾಗಿ ಬಿಸಿ ಮಾಡಿಟ್ಟ ಹರಳೆಣ್ಣೆಯನ್ನ ಬೊಗಸೆ ತುಂಬಾ ಬಗ್ಗಿಸಿಕೊಂಡು, ಕೂದಲು ಬಗೆ ಮಾಡಿ ನೆತ್ತಿಗೆ ಸರಿಯಾಗಿ ಒತ್ತುತ್ತಾ “ಈ ಹರಳೆಣ್ಣೆಯಂತೇ ನನ್ ಮೊಮ್ಮಕ್ಳ ಬಾಳೂ ತಂಪಾಗಿರ್ಲಿ ದೇವ್ರೆ ಅಂತಿದ್ಲು“.
ಹೀಗೆ, ಹದಿನೇಳು ನೆತ್ತಿ, ಹದಿನೇಳು ಬೊಗಸೆ ಮತ್ತದೇ ಹದಿನೇಳು ಸೇಮ್ ಬೇಡಿಕೆ.
ನಂತರ ದೊಡ್ಡಮಕ್ಕಳದೆಲ್ಲ ಸರತಿ ಸಾಲಲ್ಲಿ ಬಿಸಿ ಮಜ್ಜನ. ಚಿಕ್ಕ ಚಿಲ್ಟಾಣಿಗಳೆಲ್ಲ, ನೆತ್ತಿಯಲ್ಲಿದ್ದ ಎಣ್ಣೆ ಹಣೆಗೆಲ್ಲ ಸವರಿ ಕಿವಿಯಿಂದ ಜಾರಿ ಕತ್ತಿಗೆ ಮುತ್ತಿಡುವ ತನಕ ಬಿಸಿಲಲ್ಲಿ ಕುಣಿದು ಸಾಮೂಹಿಕ ಜಳಕಕ್ಕಾಗಿ ಅತ್ತೆಯನ್ನ ಕಾಯುತ್ತಿದ್ದರು.
ತಲೆಸ್ನಾನ ಹೊಸಬಟ್ಟೆ ಅಂತ ನಾವೆಲ್ಲ ಕೇಕೆ ಹಾಕುವಾಗ ಅಪ್ಪ ದೊಡ್ಡಪ್ಪ ಮಾವಂದಿರೆಲ್ಲ ರೇಷ್ಮೆ ಪಂಚೆ ಷರ್ಟು ಧರಿಸಿ ಬಂದಾಗ ಹೆಂಗಳೆಯರ ಕೆನ್ನೆ ಹರಿಶಿಣ ಕೊಂಚ ಬೆಚ್ಚಗಾಗುತ್ತಿದ್ದವು. ಇವರಿಗೇ ಸೆಡ್ಡು ಹೊಡೆಯುವಂತಿತ್ತು ಅವನ ಗತ್ತು, ಹಿಂದಿನ ದಿನವೇ ಶುಭ್ರವಾಗಿ ಹೊಳೆದಂಡೆಯಲ್ಲಿ ಒಗೆದ ಕಾಟನ್ ಬಿಳಿ ಪಂಚೆಗೆ ಅರವತ್ತರ ಆಸುಪಾಸು, ಉಜಾಲಾದಲ್ಲಿ ಅದ್ದಿ ತೆಗೆದ ಮೇಲಂತೂ ಅದರ ವಯಸು ಇಪ್ಪತ್ತೆರಡಕ್ಕೆ ಇಳಿದಿತ್ತು. ನೀಟಾಗಿ ಮಡಿಸಿ ದಿಂಬಿನ ಕೆಳಗೆ ರಾತ್ರಿಯಿಡೀ ಇಟ್ಟು ಇಸ್ತ್ರಿ ಮಾಡಿದ್ದ ಆ ಕಾಟನ್ ಷರ್ಟು ಪಂಚೆಯಲ್ಲಿ ತಾತಯ್ಯ ಹದಿನೇಳರ ಹರೆಯದ ಕುಡಿಮೀಸೆಗೆ ಬಿಳಿ ಬಣ್ಣ ಬಳಿದಿದ್ದ. ಪೂಜೆ ಸಾಂಗವಾಗಿ ನೆರವೇರುವಾಗ ಅಜ್ಜಿ ಬೇವು ಯಾಕೆ ಬೆಲ್ಲ ಯಾಕೆ ಅಂತ ಪಾಠ ಹೇಳ್ತಿದ್ಲು, ಜೀವನದ್ದು. ಆರಿಸಿ ಆರಿಸಿ ಸ್ವಲ್ಪ ಹೆಚ್ಚಿಗೇ ಬೆಲ್ಲ ತಗೊಳ್ತಿದ್ದ ನಮಗೆಲ್ಲ ಸುಖ ದುಃಖ ಸಮಾನಾಗಿರ್ಲಿ ಅಂತ್ಹೇಳಿ ಎರಡೆಸಳು ಬೇವನ್ನೂ ಕೊಡ್ತಿದ್ರು. ಅತ್ತ ಆಂಟೆನಾ ವಯರಿಗೆ ಬುಡ ಭದ್ರವಿಲ್ಲದ ರೇಡಿಯೋ ಗೊರ ಗೊರ ಎನ್ನುತ್ತಲೇ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಅಂತ ಹಾಡ್ತಿತ್ತು. ಆ ಹಾಡಲ್ಲಿ ಲೀಲಾವತಿ ಅದೆಷ್ಟು ಚೆಂದ ಕಾಣ್ತಾಳೆ, ನಮ್ಮೂರಿನ್ ಟೆಂಟಲ್ಲಿ ನೋಡಿದ್ದೆ ಆ ಸಿನಿಮಾನ ಅಂತ ತಾತಯ್ಯ ಹೇಳ್ವಾಗ ಅಜ್ಜಿ ಮೊಗದಲ್ಲಿ ಹುಸಿಮುನಿಸು. ಹೊಟ್ಟೆತುಂಬಾ ಹೋಳಿಗೆ ಮಿಳ್ಳೆ ತುಪ್ಪ, ಕೋಸಂಬ್ರಿ ಹುಳಿದವ್ವೆ ಚಿತ್ರಾನ್ನ ಜಡಿದು , ಅಂಗಳದಲ್ಲಿ ಜೋಕಾಲಿ ಆಡಿ ಇಡೀ ದಿನ ಮನೆಯವ್ರೆಲ್ಲ ಮನೆಲಿರ್ತಿದ್ವಿ.


ಈಗಲೂ ಅಜ್ಜಿ ಅದೇ ಹಳ್ಳಿಮನೆಯಲ್ಲಿ ಅದೇ ಬೇಸಿಗೆಯ ಯುಗಾದಿಯಲ್ಲಿ ಕಾಯ್ತಿದಾಳೆ, ಬಟ್ಟಲು ತುಂಬಾ ಬೇಯಿಸಿದ ಹರಳೆಣ್ಣೆ ಹಿಡಿದು. ನಗರದ ಏರಿಯಾಗಳ ವೋಟರ್ ಕಾರ್ಡಿನಲಿ ಹಂಚಿಹೋಗಿರುವ ಮೊಮ್ಮಕ್ಕಳ ನೆತ್ತಿಗಾಗಿ…
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות