- ಲಕ್ಷ್ಮಣನ ನವೋನ್ಮೇಷ - ಜನವರಿ 24, 2021
ಕನ್ನಡದ ಅತ್ಯಂತ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಶ್ರೀ. ಬಿ.ಆರ್.ಲಕ್ಷ್ಮಣರಾವ್ ನನಗಿಂತ ಹತ್ತು ವರ್ಷ ಹಿರಿಯ. ಆದರೂ ನಾವು ಏಕವಚನದ ಗೆಳೆಯರು . ಇದು ನಾನು ಹೆಮ್ಮೆ ಪಡುವ ಸಂಗತಿಯಲ್ಲ. ಏಕೆಂದರೆ ಲಕ್ಷ್ಮಣನ ಏಕವಚನದ ಗೆಳೆಯರ ಪಟ್ಟಿ ಬಹಳ ದೊಡ್ಡದಿದೆ. ಅದರಲ್ಲಿ ಅವನಿಗಿಂತ ಹಿರಿಯರಾದ ಚೊಕ್ಕಾಡಿ, ತಿರುಮಲೇಶ್, ಎಚ್ಚೆಸ್ವಿ ಮುಂತಾದವರೂ ಇದ್ದಾರೆ. ಎಲ್ಲರನ್ನೂ ಸಂಕೋಚವಿಲ್ಲದೆ ಅಪ್ಪಿಕೊಂಡು ಹೆಗಲಮೇಲೆ ಕೈಹಾಕಿ ಪ್ರೀತಿಯಿಂದ ಮಾತಾಡುವುದು ಅವನ ಬದುಕಿನ ರೀತಿ. ಅವನ ಕಾವ್ಯದಲ್ಲಿ ನಾವು ಕಾಣುವುದೂ ಇದನ್ನೇ. ಅವನ ಕವಿತೆ ಅವನ ಹಾಗೆ. ಲಕ್ಷ್ಮಣನನ್ನು ನೋಡಿದರೆ ಈತನಿಗೆ ಎಪ್ಪತ್ನಾಲ್ಕಾಯಿತು ಅನ್ನಿಸುವುದಿಲ್ಲ. ಅವನ ಹಾಗೆ ಅವನ ಕವಿತೆಯೂ ಕಳೆದ ಐವತ್ತು ವರ್ಷಗಳಲ್ಲಿ ತನ್ನ ಲವಲವಿಕೆ, ಉತ್ಕಟತೆ, ಜೀವನ ಪ್ರೀತಿ ಹಾಗೂ ಚೆಲುವನ್ನು ಉಳಿಸಿಕೊಂಡಿದೆ. ಮೊದಲ ಸಂಕಲನದ ಗಾಂಡಲೀನಳಿಂದ ಹಿಡಿದು ಇತ್ತೀಚಿನ ನವೋನ್ಮೇಷದ ಶ್ರೀಕೃಷ್ಣನವರೆಗೆ ಅವನ ಕವನಗಳ ತಾಜಾತನ ಹಾಗೇ ಇದೆ. ಎಲ್ಲರನ್ನೂ ಎಲ್ಲವನ್ನೂ ಬೆರಗಿನಿಂದ ಕಾಣುವ ಕಂಡದ್ದನ್ನು ಕವಿತೆಯ ಲಕ್ಷ್ಮಣ ಝೂಲಾದ ಮೂಲಕ ಸಹೃದಯರಿಗೆ ತಲುಪಿಸುವ ಕೆಲಸವನ್ನು ಈ ಕವಿ ಅನಾಯಾಸವಾಗಿ ನಗುನಗುತ್ತ ಮಾಡುತ್ತಿದ್ದಾನೆ.
ಇದು ಲಕ್ಷ್ಮಣನ ಒಂಬತ್ತನೆಯ ಕವನ ಸಂಕಲನವಾದ್ದರಿಂದ ಇದರ ಹೆಸರು ನವೋನ್ಮೇಷ. ಕವಿಯ ಪ್ರತಿಭೆ ಸದಾ ನವನವೋನ್ಮೇಷಶಾಲಿನಿ ಎಂಬುದನ್ನೂ ಅದು ಸೂಚಿಸುತ್ತದೆ. ಸಂಕಲನದಲ್ಲಿ ಒಟ್ಟು ೫೬ ಕವನಗಳಿವೆ. ಇವುಗಳಲ್ಲಿ ೭ ಗೀತೆಗಳು, ೬ ಅನುವಾದಗಳು ಮತ್ತು ಪ್ರೀತಿಯನ್ನು ಕುರಿತ ೧೧ ಪುಟ್ಟಕವನಗಳು ಸೇರಿವೆ. ಇಲ್ಲಿನ ಬಹಳಷ್ಟು ಕವನಗಳನ್ನು ಪ್ರಕಟಣೆಗೆ ಮುನ್ನವೇ ಓದುವ ಭಾಗ್ಯ ನನಗೆ ದೊರಕಿತ್ತು. ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದ ಮತ್ತು ಮುಖ್ಯ ಅನ್ನಿಸುವ ಕವನಗಳು:
ದ್ವಂದ್ವಗಳು ಕಾಡುವಾಗ ಹೃದಯದ ಮಾತು ಕೇಳಬೇಕೆನ್ನುವ ಕವನ ‘ನವೋನ್ಮೇಷ‘
ಹಲವು ಬಗೆಯ ಹುಳಗಳ ಬಗ್ಗೆ ಹಗುರವಾಗಿ ಹೇಳುತ್ತ ಕೊನೆಯಲ್ಲಿ ನಮ್ಮಚಿತ್ರಪಟಗಳ ಅಂದಗೆಡಿಸುವ ಕಾಲನೆಂಬ ನಿಷ್ಕರುಣಿ ಹುಳವನ್ನು ತೋರಿಸಿ ಬೆಚ್ಚಿಬೀಳಿಸುವ ‘ಹುಳ‘
ಪ್ರೀತಿಯ ವಿವಿಧ ಮುಖಗಳನ್ನು ಕಲಾತ್ಮಕವಾಗಿ ಚಿತ್ರಿಸುವ ‘ಪ್ರೀತಿ ಎಂದರೇನು?’
ಮ್ಯಾಜಿಕಲ್ ರಿಯಲಿಸಂ ಅಂಶವಿರುವ ‘ಮತ್ತೆ ಲೋಲೀಟ’
ಹೊಸ ದೃಷ್ಟಿಗೆ ಹಣೆಗಣ್ಣು ಪಡೆಯಲು ಹಂಬಲಿಸುವ ‘ಸಹಜಾತನಿಗೆ’
ತಮಾಷೆಯಿಂದ ಆರಂಭವಾಗಿ ತೀವ್ರ ವಿಷಾದದಲ್ಲಿ ಕೊನೆಗೊಳ್ಳುವ , ಕವಿ ನಾಡಿಗರನ್ನು ನೆನಪಿಸುವ ‘ಹೀಗೊಬ್ಬ ಕವಿಯು’
ಬೇಡದವರ ಒತ್ತರಿಸಿದ/ನಿಗುರಿದವರ ಕತ್ತರಿಸಿದ/ಎಲ್ಲರಲ್ಲೂ ಕೊಂಚ ಉಳ್ಳ ನರೋತ್ತಮನನ್ನು ಬಣ್ಣಿಸುವ ‘ನಮಸ್ಕಾರ ಶ್ರೀಕೃಷ್ಣನಿಗೆ‘
ಮನೆಯೋ? ಮನಸೋ? ಎಂಬ ಆಧುನಿಕ ಸ್ತ್ರೀಯರ ತಬ್ಬಿಬ್ಬನ್ನು ತೋರಿಸುವ ‘ಗೊಂದಲ’
ಇವುಗಳಲ್ಲದೆ ಓದಿ ಸಂತೋಷ ಪಡಬಹುದಾದ ಇನ್ನೂ ಅನೇಕ ಕವನಗಳು ಸಂಕಲನದಲ್ಲಿವೆ. ಅವುಗಳ ವೈಶಿಷ್ಟ್ಯವನ್ನು ಕವಿ ಚಿಂತಾಮಣಿ ಕೊಡ್ಲೆಕೆರೆ ಮುನ್ನುಡಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ.
ಈ ಸಂಕಲನದಲ್ಲಿ ಲಕ್ಷ್ಮಣ ತಾನು ವಯೋವೃದ್ಧ ಎಂದು ಅಧಿಕೃತವಾಗಿ ಘೋಷಿಸಿದ್ದಾನೆ. ಅವನ ಕವಿತೆಗಳೂ ಮಾಗಿವೆ. ಆದರೆ ಅವುಗಳ ಕಲಾತ್ಮಕತೆ, ಕುಂದಿಲ್ಲ. ತುಂಟತನವೂ ಎಂದಿನಂತೆಯೇ ಇದೆ. ಹೀಗಾಗಿ ಕಾವ್ಯ ಪ್ರಿಯರೆಲ್ಲರೂ ಓದಿ ಆನಂದಿಸಬಹುದಾದ ಕವನ ಸಂಕಲನ ‘ನವೋನ್ಮೇಷ’
ಪ್ರ: ಅಂಕಿತ ಪುಸ್ತಕ, ೦೮೦-೨೬೬೧ ೭೧೦೦ (080-2661 7100)
ಬೆಲೆ: ರೂ.೧೩೦/-
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ