- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಕಲೆ ಮತ್ತು ಸಾಹಿತ್ಯ ಎರಡೂ ಇರುವುದು ಮನುಷ್ಯನ ನೋವಿನ ಅಭಿವ್ಯಕ್ತಿಯಾಗಿ, ತಕ್ಕಮಟ್ಟಿಗೆ ಅದನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುವುದಕ್ಕಾಗಿ ಅನ್ನುವುದು ಜನಜನಿತ ಸಂಗತಿ. ಹೇಗೆ ಹೇಳಿದರೂ, ಎಷ್ಟು ಹೇಳಿದರೂ ಇನ್ನೂ ಉಳಿದುಕೊಳ್ಳುವುದು ಮನುಷ್ಯಲೋಕದ ತೊಳಲಾಟಗಳ, ಭಾವದ ಹೊಯ್ದಾಟಗಳ ಪಾಡು. ಇವತ್ತಿಗೆ ಎಲ್ಲಾ ಮುಗಿಯಿತಪ್ಪಾ, ಇನ್ನ್ಯಾವತ್ತೂ ನೋವು ಕಾಡುವುದೇ ಇಲ್ಲ ಅನ್ನುವ ಹಾಗಿಲ್ಲ; ಒಂದಾದ ಮೇಲೊಂದರಂತೆ ಅವರವರ ಬದುಕನ್ನು ಅವಲಂಬಿಸಿ ಅದು ಬರುತ್ತಲೇ ಇರುತ್ತದೆ. ಬಂದಾಗ ಅದು ಆ ಕ್ಷಣಕ್ಕೆ ಅಪರಿಚಿತವಾಗೇ ಇರುತ್ತದೆ ಹಾಗೂ ತೀವ್ರವಾಗಿಯೂ.. ಪ್ರತಿ ಸಲವೂ ಪ್ರತೀ ಸಂದಿಗ್ಧತೆಗೂ ಮನುಷ್ಯ ಹೇಗೆ ಪ್ರತಿಕ್ರಿಯಿಸುತ್ತಾನೆ ಅನ್ನುವುದರ ಮೂಲಕ ಅದರ ಮುಂದಿನ ಘಟನೆಗಳು ಜರುಗುತ್ತವೆ ಬಹುತೇಕವಾಗಿ. ಪ್ರತಿಕ್ರಿಯೆ ಅಥವಾ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಿದ್ದವು ಅಥವಾ ತಪ್ಪಾಗಿದ್ದವು ಇತ್ಯಾದಿಗಳ ವಿಶ್ಲೇಷಣೆ ಕೂಡಾ ಅದರ ಪರಿಣಾಮಗಳನ್ನು ಅವಲಂಬಿಸಿ ವ್ಯಾಖ್ಯಾನಿಸಲ್ಪಡುತ್ತವೆ. ಲೋಕದಲ್ಲಿ ಸರಿ ತಪ್ಪುಗಳ ವ್ಯಾಖ್ಯಾನವೂ ವೈಯಕ್ತಿಕವೇ ಬಹುಶಃ! ಸರಿ ತಪ್ಪು ಛಾಯೆಗಳ ಜೊತೆಜೊತೆಗೆ ಇಳಿವಯಸ್ಸಿನ ತಲ್ಲಣಗಳನ್ನು ಹೇಳುತ್ತಾ ಪ್ರೀತಿಯ ಇನ್ನೊಂದು ಮುಖವನ್ನೂ ತೆರೆದಿಡುತ್ತಾ ಕೊನೆಗೆ ಮನೋಲೋಕದ ವಿಚಿತ್ರ ತಿರುವುಗಳನ್ನು ತೋರಿಸುವ ಚಿತ್ರವೇ ‘ಆಮೋರ್’ ( Amour ).
ಕಪ್ಪು ಅಥವಾ ಬಿಳಿ ಅಂತ ಯಾವುದನ್ನಾದರೂ ನೇರವಾಗಿ, ಎಲ್ಲಕ್ಕಿಂತ ಮೊದಲು ಹೇಳಿಬಿಡುವ ಬದಲಾಗಿ ನಾವು ಅಭಿಪ್ರಾಯರಹಿತ ವೀಕ್ಷಕರಾಗಬೇಕು. ಅಲ್ಲಿನ ಪರಿಸರದೊಂದಿಗೆ ಮೊದಲು ಸೇರಬೇಕು. ಆದರೆ, ಅದು ಸಾಧ್ಯವಾ ಅನ್ನುವುದು ಮತ್ತೊಂದು ನೆಲೆಯ ಸಂಗತಿ. ಯಾವುದೇ ಕೃತಿ ಅಥವಾ ಕಲಾಕೃತಿಯ ಕೆಲಸ ತನ್ನ ಅಭಿಪ್ರಾಯವನ್ನು ಹೇರುವುದರ ಬದಲಾಗಿ ಕೆಲವು ವಿಷಯಗಳಲ್ಲಿ ವೀಕ್ಷಕನೆದುರು ಆ ಪರಿಸರವನ್ನು, ಅಲ್ಲಿನ ವಿಷಯಗಳನ್ನು ತೆರೆದಿಡುವುದಷ್ಟೇ ಆದಲ್ಲಿ ಆ ಕೃತಿ ಅಥವಾ ಕಲಾಕೃತಿಯ ವ್ಯಾಪ್ತಿ ಹಿರಿದಾಗುತ್ತದೆ. ಈ ಸಿನೆಮಾ ಕೂಡಾ ಹಾಗೆಯೇ. ಈ ಸಿನೆಮಾದ ಆರಂಭದಲ್ಲಿಯೇ ಈ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ತೋರಿಸುತ್ತಾರೆ. ಸಿನೆಮಾ ಶುರುವಾದಾಗ ಒಂದು ಸಭಾಂಗಣದಲ್ಲಿ ಅಲ್ಲಿನ ವೇದಿಕೆಯನ್ನು ತೋರಿಸದೇ ಕೇವಲ ಪ್ರೇಕ್ಷಕರನ್ನು ಮಾತ್ರವೇ ತೋರಿಸುತ್ತಾರೆ. ಅಲ್ಲಿ ಯಾರ ಹಾಗೂ ಯಾವುದರ ಪ್ರದರ್ಶನವಿತ್ತು ಅಂತೆಲ್ಲಾ ತಿಳಿಯುವುದು ನಂತರದ ಭಾಗಗಳಲ್ಲಿ. ಬರಿಯ ವೀಕ್ಷಕ ಅಷ್ಟೇ ಆಗುವುದು ಮನುಷ್ಯನಿಗೆ ದುಸ್ತರವೇ, ತನ್ನ ಅಭಿಪ್ರಾಯಗಳನ್ನು ಹೇರದೇ, ತನ್ನ ಹಸ್ತಕ್ಷೇಪ ತೋರದೆಯೇ ಇದ್ದರೆ ಮನುಷ್ಯ ಆಗುವುದಾದರೂ ಹೇಗೆ ಅಲ್ಲವಾ! ಆದರೆ, ಈ ಸಿನೆಮಾ ನೋಡುವಾಗ ಕೇವಲ ವೀಕ್ಷಕನಷ್ಟೇ ಆಗದೇ ಸಿನೆಮಾ ನೋಡಿದರೆ ಇಲ್ಲಿನ ಪಾತ್ರಗಳನ್ನು ಹಾಗೂ ಅವುಗಳ ವರ್ತನೆಯನ್ನು ಅರ್ಥೈಸಿಕೊಳ್ಳುವಲ್ಲಿ ನಾವು ನ್ಯಾಯ ಒದಗಿಸದೇ ಹೋಗಬಹುದು.
ಪ್ರೀತಿ ಎಂದರೇನು ಅಂತ ಇಡೀ ಸಿನೆಮಾದಲ್ಲಿ ಹುಡುಕಾಡಿದ ಹಾಗೆ ಕಾಣುತ್ತದೆ. ತನ್ನವರು ಸುಖವಾಗಿರಲಿ ಎಂಬುದೇ, ತನ್ನವರ ಆಸೆಗಳನ್ನು ಈಡೇರಿಸಲು ಇತರರ ಕಣ್ಣಲ್ಲಿ ಹಠವಾದಿ, ಮೊಂಡನಾಗುವುದೇ, ಅಥವಾ ತನ್ನವರ ನೋವನ್ನು ಕಡಿಮೆಗೊಳಿಸಲು ಯತ್ನಿಸುವುದೇ? ಜಗತ್ತಿನ ಕಣ್ಣಲ್ಲಿ ಕ್ರೌರ್ಯವಾಗಿ ಕಂಡಿದ್ದು, ಅವರವರ ಖಾಸಗಿ ಬದುಕಿನಲ್ಲಿ ಪ್ರೀತಿಯ ಇನ್ನೊಂದು ಮುಖವೇ ಆಗಬಹುದೇ! ಇಂಥ ಪ್ರಶ್ನೆಗಳಿಗೆ ಎಲ್ಲರೂ ಒಂದೊಂದು ಥರದ ಉತ್ತರ ಕೊಡುತ್ತಾರೆ. ಬದುಕನ್ನು ಬಹಳ ವರ್ಷಗಳ ಕಾಲ ಕಂಡವರು ಗಟ್ಟಿಗರೇ ಆಗಿಹೋಗುತ್ತಾರೆ, ಕಾಲದ ತರಬೇತಿಯಲ್ಲಿ ಮಾಗುತ್ತಾರೆ ಅನ್ನುವುದು ಸಹಜವಾದ ನಂಬಿಕೆ. ಈ ಸಿನೆಮಾ ಕೂಡಾ ವೃದ್ಧ ದಂಪತಿಗಳ ಕತೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಂಬಂಧಗಳ ಕುರಿತಾಗಿ ಬೇರೆಯದೇ ಪದ್ಧತಿಯಿದೆ. ಯೌವನಕ್ಕೆ ಬಂದ ಕೂಡಲೇ ಸ್ವತಂತ್ರವಾಗಿ ಬದುಕುವ ಅಥವಾ ಬದುಕು ಕಂಡುಕೊಳ್ಳುವ ಮಕ್ಕಳು ಒಂದು ಕಡೆಯಾದರೆ, ವಯೋಸಹಜ ಒದ್ದಾಟಗಳ ನಡುವೆ ಬದುಕುವ ವೃದ್ಧರು ಇನ್ನೊಂದು ಕಡೆ. ವಯಸ್ಸು ಹೆಚ್ಚಾದಂತೆ ಕೆಲವರಿಗೆ ಮಾತುಕತೆಯ ಬಯಕೆ ಜಾಸ್ತಿ, ಇನ್ನು ಕೆಲವರು ಮೌನಕ್ಕೆ ಶರಣಾಗುತ್ತಾರೆ. ಬಹುಶಃ ಇಳಿವಯಸ್ಸು ವ್ಯಾಮೋಹವನ್ನೂ, ವೈರಾಗ್ಯವನ್ನೂ ಒಟ್ಟಿಗೇ ತರಬಹುದು ಹಲವರಲ್ಲಿ. ಕೆಲವರು ಇನ್ನಷ್ಟು ಜಿಡ್ಡಾಗುತ್ತಾರೆ, ಕೆಲವರು ಮೃದು, ಕೆಲವರು ಸಂತೃಪ್ತ ಭಾವದೊಂದಿಗೆ ಸಾವನ್ನು ಎದುರು ನೋಡಿದರೆ, ಇನ್ನು ಕೆಲವರು ಹಲವು ಬಯಕೆಗಳೊಂದಿಗೆ ಚಿಂತಿತರಾಗುತ್ತಾರೆ. ಸುಖದ ಭಾಷೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹಾಗಾಗಿ ಸುಖವೆಂಬುದು ಯಾವತ್ತೂ ಮಲೆನಾಡಿನ ಪಕ್ಕಾ ಮಳೆಗಾಲದಲ್ಲಿ ಆಗಾಗ ಇಣುಕಿದಂತೆ ಭಾಸವಾಗುವ ಸೂರ್ಯನಷ್ಟೇ!
ಬಹುಶಃ ನೀವು ಆಸ್ಪತ್ರೆಗಳನ್ನು ಹಾಗೂ ಅಲ್ಲಿನ ಸಿಬ್ಬಂದಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಒಂದು ಸಂಗತಿ ಖಂಡಿತವಾಗಿ ತಿಳಿಯುತ್ತದೆ; ನಮ್ಮವರ ನೋವಿಗೆ ನಾವು ಪ್ರತಿಕ್ರಿಯಿಸುವ ರೀತಿಗೂ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಕ್ರಿಯಿಸುವ ರೀತಿಗೂ ಬಹಳ ವ್ಯತ್ಯಾಸವಿರುತ್ತದೆ. ಅದು ಅವರಿಗೆ ನಿತ್ಯದ ಸಂಗತಿ, ನೋಡಿ ನೋಡಿ ಅಭ್ಯಾಸವಾದ ಸಂಗತಿ. ಹಾಗಾಗಿ ಅವರಲ್ಲಿ ಅದರ ತೀವ್ರತೆ ಕಡಿಮೆ. ಈ ಚಿತ್ರದಲ್ಲಿ ಇಂಥ ಕೆಲವೊಂದು ಸೂಕ್ಷ್ಮಗಳನ್ನೂ ಸೂಚ್ಯವಾಗಿ ಹೇಳಲಾಗಿದೆ.
ಮಿಕೆಲ್ ಹನೆಕೆ ( Michael Haneke ) ನಿರ್ದೇಶನದ ಈ ಸಿನೆಮಾ, ೨೦೧೨ರ ಕ್ಯಾನ್ ಚಲನಚಿತ್ರೋತ್ಸವದಲ್ಲಿ ( Cannes Film Festival ) ಅತ್ಯುನ್ನುತ ಪ್ರಶಸ್ತಿಯಾದ ‘ಪಾಮ್ ಡೋರ್’ ( Palme D’or) ಅನ್ನು ಪಡೆದುಕೊಂಡಿರುವುದರ ಜೊತೆಗೆ, ೮೫ನೇ ಅಕ್ಯಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿಗೂ ಭಾಜನವಾಗಿದೆ. ನಿರ್ದೇಶಕರ ಕುಟುಂಬದ ಒಬ್ಬರು ಸಾವು ಬದುಕಿನ ಮಧ್ಯ ಹೋರಾಡುವಾಗ ನಿರ್ದೇಶಕರೊಂದಿಗೆ ನಡೆದ ಘಟನಾವಳಿಗಳು ಹಾಗೂ ಅದರ ನಿಷ್ಕರ್ಷವೇ ಹೀಗೆ ಈ ಸಿನೆಮಾದ ಕೊನೆಯ ದೃಶ್ಯಕ್ಕೆ ( Climax ) ದಾರಿ ಮಾಡಿಕೊಟ್ಟಿತು ಅಂತ ಹೇಳಲಾಗುತ್ತದೆ. ಅದರ ಜೊತೆಗೆ ಇಡೀ ಚಿತ್ರದುದ್ದಕ್ಕೂ ವೃದ್ಧ ದಂಪತಿಗಳಲ್ಲಿ ಒಂದು ಪಾತ್ರ ‘ಹಾಗೆ ಮಾಡದೇ ಹೀಗೆ ಮಾಡಿದ್ದರೆ’ ಅನ್ನುವ ಪ್ರಶ್ನೆ ಕಾಡಬಹುದು, ಆದರೆ ಹಾಗೆ ಕಾಡುವುದು ಮತ್ತು ನಮ್ಮನಮ್ಮಲ್ಲೇ ಬೇರೆ ಬೇರೆ ಸಂದರ್ಭಗಳಲ್ಲಿ ನಮ್ಮ ನಮ್ಮ ಅಭಿಪ್ರಾಯಗಳಲ್ಲೇ ವೈರುಧ್ಯ ಕಾಣುವುದು ಇಡೀ ಬದುಕಿನ ಸ್ಥೂಲ ನೋಟವಲ್ಲದೇ ಮತ್ತೇನೂ ಅಲ್ಲ!
ಎಲ್ಲ ಸಿನೆಮಾಗಳೂ ಸುಖಾಂತ್ಯವೇ ಆಗಬೇಕಿಲ್ಲ ಹಾಗೂ ಗಾಢ ದುರಂತಗಳೂ ನಮ್ಮದೇ ಕತೆಗಳು ಮತ್ತು ಅಂಥವನ್ನು ನಾವು ನೋಡಬಲ್ಲೆವು ಅನ್ನುವ ವಿಶ್ವಾಸವಿದ್ದಲ್ಲಿ ಈ ಸಿನೆಮಾ ನೋಡಬಹುದು ಹಾಗೂ ಇಳಿ ವಯಸ್ಸಿನ ಮತ್ತು ಒಂಟಿತನದ ಧ್ವನಿಯನ್ನು ಆಲಿಸಬಹುದು!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್