- ರೋಆಲ್ಡ್ಡಾಲ್ ನ “ಸ್ಕಿನ್” ಮತ್ತು ಶೈಮ್ ಸೂಚಿನ್ - ಸೆಪ್ಟೆಂಬರ್ 27, 2022
- ರಿಕ್ಷಾ ಪುರಾಣ - ಫೆಬ್ರುವರಿ 5, 2022
- ವಾಘಾ ಗಡಿಯಲ್ಲಿ ಒಂದು ಮಧ್ಯಾಹ್ನ - ನವೆಂಬರ್ 28, 2021
ದೇಶದ ವಿಭಜನೆಯ ಕಾಲದಲ್ಲಿ ಪಂಜಾಬದ ಜನರು ಅನುಭವಿಸಿದ ಕಹಿಗಳ ಉಲ್ಲೇಖವಿರುವ ಕಥೆಗಳನ್ನು ಪುಸ್ತಕಗಳನ್ನು ಓದಿದಾಗಲೆಲ್ಲಾ ವಾಘಾ ಗಡಿಯನ್ನು ನೋಡಬೇಕೆಂದು ಅನಿಸಿದ್ದು ಅದೆಷ್ಟೋ ಸಲ. ಬೊಳುವಾರು ಅವರು ಬರೆದ “ಸ್ವಾತಂತ್ರದ ಓಟ” ಪುಸ್ತಕದಲ್ಲಿ ಕಥೆ ಶುರುವಾಗುವುದೇ ವಾಘಾ ಗಡಿಯಲ್ಲಿ. ಈ ಕಥೆಯ ಮುಖ್ಯಪಾತ್ರವಾದ ಚಾಂದ್ ಅಲೀ ಅವರು ಇಬ್ಬರು ಸಿಖ್ ಮಹಿಳೆಯರನ್ನು ಸುರಕ್ಷಿತವಾಗಿರಿಸಲು ಗಡಿದಾಟಿ ಹಿಂದೂಸ್ತಾನಕ್ಕೆ ಬಂದವರು ನಮ್ಮ ದಕ್ಷಿಣ ಕನ್ನಡದ ಮುತ್ತುಪ್ಪಾಡಿ (ಕಾಲ್ಪನಿಕ) ಯಲ್ಲಿ ಜೀವನ ಕಳೆಯುತ್ತಾರೆ. ಈ ಕಥೆ ಕೊನೆಯಾಗುವುದೂ ಅಮೃತಸರದ ಸ್ವರ್ಣ ಮಂದಿರದಲ್ಲಿಯೇ . ಅದೇನೇ ಇರಲಿ, ೨೦೨೧ ನವೆಂಬರ್ ನಲ್ಲಿ ನಾನು ಎರಡು ದಿನಗಳ ಮಟ್ಟಿಗೆ ಅಮೃತಸರ ನೋಡಲು ಹೋದಾಗ ವಾಘಾ ಗಡಿಯನ್ನು ಕಣ್ಣಾರೆ ನೋಡುವ ಸದವಕಾಶ ಸಿಕ್ಕಿತ್ತು.
ಕೋವಿಡ್ ಎಂದು ಕಳೆದ ಹದಿನೆಂಟು ತಿಂಗಳ ಕಾಲದಿಂದ ನಿಲ್ಲಿಸಲ್ಪಟ್ಟಿದ್ದ “ ಬೀಟಿಂಗ್ ದಿ ರಿಟ್ರೀಟ್” ಕಾರ್ಯಕ್ರಮವು ಇತ್ತೀಚೆಗಷ್ಟೇ ಪ್ರೇಕ್ಷಕರಿಗಾಗಿ ಮತ್ತೆ ತೆರೆಯಲ್ಪಟ್ಟಿದೆ. ನಮ್ಮ ದೇಶದ ಹೆಮ್ಮೆಯ ಬಿ ಎಸ್ ಎಫ್ ಯೋಧರು ವಾಘಾ ಗಡಿಯಲ್ಲಿ ನಡೆಸಿಕೊಡುವ ಈ ಕಾರ್ಯಕ್ರಮವು ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಶುರುವಾಗುತ್ತದೆ. ಕ್ಯೂನಲ್ಲಿ ಸಾಕಷ್ಟು ತಪಾಸಣೆ ನಡೆದ ಬಳಿಕ ಒಳಗೆ ಹೋದ ಕೂಡಲೇ ಮೊದಲು ಕಾಣಸಿಗುವುದು ನಡು ಮಧ್ಯದಲ್ಲಿರುವ ಸುಮಾರು ಐವತ್ತಡಿ ಅಗಲದ ರಾಜರಸ್ತೆ . ಇಕ್ಕೆಲಗಳಲ್ಲಿಯೂ ಸಾವಿರಾರು ಪ್ರೇಕ್ಷಕರು ಕುಳಿತುಕೊಂಡು ನೋಡಲು ಅನುಕೂಲವಾಗುವಂತಹ ಕ್ರಿಕೆಟ್ ಕ್ರೀಡಾಂಗಣದಲ್ಲಿರುವಂತಹ ಆಸನಗಳು. ಸುಮಾರು ನೂರು ಮೀಟರ್ ಉದ್ದದ ಈ ರಸ್ತೆಯ ಇನ್ನೊಂದು ಕೊನೆಯಲ್ಲಿ ಇಪ್ಪತ್ತಡಿ ಎತ್ತರದ ಕಬ್ಬಿಣದ ಸಲಾಕೆಗಳಿರುವ ಎರಡು ದೊಡ್ಡ ಗೇಟುಗಳಿವೆ. ಒಂದು ನಮ್ಮ ದೇಶದ್ದು, ಇನ್ನೊಂದು ಪಾಕಿಸ್ತಾನದ್ದು. ಈ ಎರಡು ಗೇಟುಗಳ ಮಧ್ಯೆ ಸುಮಾರು ಹತ್ತು ಹನ್ನೆರಡು ಅಡಿಗಳ ಅಂತರವಿದಯೇನೋ. ನಮ್ಮ ಗೇಟಿನ ಎಡಬದಿಯ ತುತ್ತತುದಿಯಲ್ಲಿ ನಮ್ಮ ದೇಶದ ಬಾವುಟವಿದ್ದರೆ ಅವರ ಗೇಟಿನ ಮೇಲೆ ಅವರ ಎಡ ಬದಿಯಲ್ಲಿ ಅವರ ಧ್ವಜ. ನಮ್ಮ ಕ್ರೀಡಾಂಗಣದಲ್ಲಿ ಇದ್ದಂತೆಯೇ ಸಾವಿರಾರು ಮಂದಿ ಪ್ರೇಕ್ಷಕರು ಆ ಕಡೆಯಲ್ಲಿಯೂ.
ಒಳಗೆ ಕಾಲಿಟ್ಟೊಡನೆ ಕಿವಿಗಡಚಿಕ್ಕುವಂತಹ ಬಾಲಿವುಡ್ ನ ಶಂಕರ್ ಮಹಾದೇವನ್ ಅವರ ಸುನೋ ಗೌರ್ ಸೇ ದುನಿಯಾ ವಾಲೋ ಮತ್ತಿತರ ದೇಶಭಕ್ತಿಗೀತೆಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದವು . ಕೇಳುಗರಲ್ಲಿ ದೇಶಭಕ್ತಿಯನ್ನುಕ್ಕಿಸುವಂತಹ ಹಾಡುಗಳು . ಎಲ್ಲೆಡೆ , ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡವರು , ಗಲ್ಲಗಳ ಮೇಲೆ ಬಾವುಟದ ಬಣ್ಣಗಳನ್ನು ಹಚ್ಚಿಕೊಂಡವರು. ಬಿಎಸ್ ಎಫ್ ನ ಯೋಧರೊಬ್ಬರು ರಸ್ತೆಯ ಮೇಲೆ ಅತ್ಯುತ್ಸಾಹದಿಂದ ನೋಡುಗರೊಂದಿಗೆ ಸಂವಹಿಸುತ್ತಲೇ ವಂದೇ ಮಾತರಂ, ಭಾರತ್ ಮಾತಾಕಿ ಜೈ, ಹಿಂದೂಸ್ತಾನ್ ಜಿಂದಾಬಾದ್ ಮುಂತಾದ ಘೋಷಣೆಗಳನ್ನು ಕೂಗಿಸುತ್ತಾ ವಾತಾವರಣದಲ್ಲಿ ಲವಲವಿಕೆಯನ್ನು ,ಉತ್ಸಾಹವನ್ನು ತುಂಬುತ್ತಾ ಚಟುವಟಿಕೆಯಿಂದ ಓಡಾಡುತ್ತಿದ್ದರು. ಇಡೀ ಕಾರ್ಯಕ್ರಮ ಮುಗಿಯುವ ತನಕವೂ ಅವರು ಇದೇ ಉತ್ಸಾಹವನ್ನು ಕಾಪಿಟ್ಟುಕೊಂಡು ಎಲ್ಲರನ್ನು ಹುರಿದುಂಬಿಸುತ್ತಾ ಇದ್ದುದು ವಿಶೇಷವಾಗಿ ಕಾಣಿಸಿತು, ಅವರು, ನೋಡುಗರ ಮಧ್ಯದಿಂದ ಯಾರು ಬೇಕಾದರೂ ಬಂದು ರಸ್ತೆಯ ಮೇಲೆ ಬಾವುಟವನ್ನು ಹಾರಿಸಬಹುದೆಂದು ಆಹ್ವಾನಿಸಿದ ಕೂಡಲೇ ನೂರರಷ್ಟು ಹೆಂಗಳೆಯರು ಕೈಯಲ್ಲಿ ನಮ್ಮ ಬಾವುಟವನ್ನು ಹಿಡಿದು ರಸ್ತೆಯ ಮೇಲೆ ಓಡಿದರು, ನ್ರತ್ಯ ಮಾಡಿದರು. ಆದರೆ ಇದೆಲ್ಲಾ ಮುಖ್ಯ ಕಾರ್ಯಕ್ರಮ ಶುರುವಾಗುವ ಮೊದಲು ಮಾತ್ರ . ಈ ಎಲ್ಲಾ ತಯಾರಿಗಳು ಪ್ರೇಕ್ಷಕರ ಕುತೂಹಲವನ್ನು ಉತ್ಸಾಹವನ್ನು ಹೆಚ್ಚಿಸಲು ಯೋಜಿಸಲ್ಪಟ್ಟಿವೆ .
ಎರಡೂ ಗೇಟುಗಳ ಮೇಲೆ ಆಗಸದಲ್ಲಿ ಸಂಜೆಯ ಸೂರ್ಯ ಪ್ರಕಾಶಮಾನವಾಗಿ ಕಂಗೊಳಿಸುತ್ತಿದ್ದ.
ನಿಗದಿತ ಸಮಯದಲ್ಲಿ “ಬೀಟಿಂಗ್ ದಿ ರಿಟ್ರೀಟ್” ಪೆರೇಡ್ ಶುರುವಾಯಿತು. ತಲೆಗೆ ಕೆಂಪುಬಣ್ಣದ, ಒಂದಡಿ ಎತ್ತರದ ನವಿಲಿನ ತಲೆಯ ಮೇಲಣ ಕಿರೀಟದಂತಹ ಕಿರೀಟವನ್ನು ಇಟ್ಟುಕೊಂಡ ಬಿ ಎಸ್ ಎಫ್ ಯೋಧರು ಬ್ಯಾಂಡುಗಳ ಸದ್ದಿನ ಸಮೇತ ಪ್ರವೇಶಿಸಿದರು. ಮುಖ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಸುಮಾರು ಹತ್ತು-ಹನ್ನೆರಡು ಜನ ಯೋಧರು . ಇವರನ್ನು ಪ್ರತ್ಯೇಕವಾಗಿ ಈ ಪೆರೇಡ್ ಗಾಗಿಯೇ ತರಬೇತಿ ಕೊಟ್ಟು ತಯಾರು ಮಾಡಲಾಗುತ್ತದೆ. ಒಬ್ಬೊಬ್ಬರಾಗಿ ಬಂದು ಬಲಗಾಲನ್ನು ನೆಲಕ್ಕೆ ಸಮಾನಾಂತರವಾಗಿ ಎತ್ತರಕ್ಕೆ ಎತ್ತಿ ಕ್ರಮಬದ್ಧವಾಗಿ ಗೇಟಿನ ಬಳಿ ಕವಾಯತು ಮಾಡುತ್ತಾ ಹೋಗುವುದು, ಸೆಲ್ಯೂಟ್ ಮಾಡುವುದು, ಶಿಸ್ತಿನ ಸಿಪಾಯಿಗಳಂತೆ ಮತ್ತೆ ತಮ್ಮ ಜಾಗದಲ್ಲಿ ನಿಲ್ಲುವುದು. ಪ್ರೇಕ್ಷಕರಿಂದ ಘೋಷಣೆಗಳನ್ನು ಕೂಗಿಸುವುದು ಅವ್ಯಾಹತವಾಗಿ ಸಾಗುತ್ತಲೇ ಇತ್ತು . ಈ ಕಡೆಯಿಂದ ನಾವು ಕಿರುಚಿದಷ್ಟೇ ಉಚ್ಚ ಸ್ವರದಲ್ಲಿ ಆ ಕಡೆಯ ಪ್ರೇಕ್ಷಕ ವರ್ಗವೂ ಸದ್ದು ಮಾಡುತ್ತಲಿತ್ತು. ನಿಗದಿತ ಸಮಯದಲ್ಲಿ ಎರಡೂ ಗೇಟುಗಳು ಏಕಕಾಲದಲ್ಲಿ ತೆರೆಯಲ್ಪಟ್ಟವು. ಒಂದು ಘಳಿಗೆ ಮನಸ್ಸು ಸ್ಥಬ್ದವಾದಂತೆ . ಈಗ ಆ ಕಡೆಯ ಯೋಧರೂ ನಿಚ್ಚಳವಾಗಿ ಕಾಣಿಸುತ್ತಿದ್ದರು. ನಮ್ಮ ಯೋಧರ ಸಮವಸ್ತ್ರ ತಿಳಿ ಖಾಕಿ ಬಣ್ಣವಾದರೆ, ಅವರದ್ದು ಕಡು ಹಸಿರು ಬಣ್ಣದ್ದು . ಏಕಕಾಲದಲ್ಲಿ ಎರಡೂ ಬಾವುಟಗಳನ್ನು ಜಾಗರೂಕತೆಯಿಂದ ಒಂದು ಚೂರೂ ತಾಳಮೇಳ ತಪ್ಪದಂತೆ ಕೆಳಗಿಳಿಸಲಾಗುತ್ತದೆ. ಮಡಚಿ ಇಡಲಾಗುತ್ತದೆ . ಯೋಧರು ಒಬ್ಬರೊಡನ್ನೊಬ್ಬರು ಹಸ್ತಲಾಘವ ಮಾಡುತ್ತಾರೆ . ಕೆಲವು ನಿಮಿಷಗಳ ಕಾಲ ಅಷ್ಟೇ. ಗೇಟುಗಳು ಮುಚ್ಚಲ್ಪಡುತ್ತವೆ. ಸೂರ್ಯ ಇನ್ನೂ ಕೆಳಗಿಳಿಯುತ್ತಾನೆ .
ಕಳೆದ ಅರುವತ್ತೆರಡು ವರ್ಷಗಳಿಂದ ಪ್ರತಿನಿತ್ಯ ನಡೆದು ಬಂದಿರುವ ಈ ಪ್ರಕ್ರಿಯೆ ಎರಡು ದೇಶಗಳ ನಡುವಣ ಸೌಹಾರ್ದತೆಯ ಸಂಕೇತವಾಗಿದೆ, ಸಾವಿರಾರು ಜನ ನೋಡುಗರನ್ನು ದಿನನಿತ್ಯ ಆಕರ್ಷಿಸುತ್ತದೆ. ಎರಡೂ ಗೇಟುಗಳು ತೆರೆದಿದ್ದ ಕ್ಷಣಗಳಲ್ಲಿ ಮಾತ್ರ ಒಂದು ಕಾಲದಲ್ಲಿ ಇದು ಒಂದೇ ಊರು ಆಗಿತ್ತಲ್ಲವೇ ಎಂದೆನಿಸಿತ್ತು. ಕೆಲವೇ ಸಮಯದೊಳಗೆ ನೆರೆದಿದ್ದ ಜನಸ್ತೋಮ ನಿಧಾನಕ್ಕೆ ಕರಗಲಾರಂಭಿಸಿತ್ತು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್